Saturday, June 8, 2019

ಗೊಂಚಲು - ಮೂರು ಸೊನ್ನೆ ಮೂರು.....

ಸರ್ಪಸರಸ.....  

ಅಹ್...!!!
"ಕಣ್ಮುಚ್ಚೋ ಬೆತ್ತಲೆಗಿಂತ ಅಲಂಕಾರವುಂಟೇ ಇರುಳಿಗೆ..."
ಮೂಗುತಿ ಇಟ್ಟ ಮುತ್ತಿಗೆ ಉಸಿರ ಸದ್ದೇ ಢಮರುಗ...
ಕಣ್ಣ ಕಾಂಕ್ಷೆಗೆ ಅಡಗಲಾರದೆ ಶರಣು ಬಂದ ಮತ್ತ ಮಚ್ಚೆಗಳು...
ಅಣು ರೇಣು ಮೃಗ ವಾಂಛೆ - ಮೇರು ಮಥನಕೆ ದಾರಿ ತೋರೋ ನಾಚಿಕೆಯ ಬೆಳಕು...
ಕಣಿವೆ ಕುಲುಮೆಯಲಿ ಈಸು ಯುದ್ಧ - ಹೆಣಿಗೆ ತೋಳ್ಗಳ ತುಂಬಾ ಸುಖದ ಬಣ್ಣಗಳ ಸುರಿವ ಬಣ್ಣವಿಲ್ಲದ ಬೆವರು...
"ಗೆಲುವುದಲ್ಲದೆ ಇದು ಗೆಲ್ಲಿಸುವ ಆಟ..."
ಉಳಿದರೆ ಉಳಿಯಲಿ ಉತ್ಖನನದ ಗಾಢ ಕಲೆಗಳು ಪ್ರೇಮದ ಮೈಮೇಲೆ - ಹಗಲಿನ ಧ್ಯಾನಕೆ...
#ಜೀವೈಕ್ಯ_ಮಿಥುನರಾಗ...
🔀🔁🔃

ಮಳೆಯ ಭಣಿತಕ್ಕೆ ಖುಷಿಯ ತೋಳ ಕಸುವಿನ ಮತ್ತೇರಿ; ಮಳೆ ಬಿದ್ದ ಮರು ಘಳಿಗೆ ಮೈಮನಸಲರಳೋ ಮಲ್ಲಿಗೆಯ ನಶೆಗೆ ನಿನ್ನ ಹೆಸರು...
#ಕರಡಿ_ಹಸಿವು...
🔀🔁🔃

ನನ್ನ ದಿವ್ಯ ಏಕಾಂತವೆಂದರೆ ನಿನ್ನೊಡನಾಡುವ ಆತ್ಮಬಂಧೀ ಭಾವ ಸಾಂಗತ್ಯ...
#ಭೂಮಿ_ಭಾರ_ಹಕ್ಕಿ_ಹಗೂರ_ಕಣ್ಣ_ಹನಿಗಳು...
🔀🔁🔃

ದುಂಬಿ ಕಾಲಿನ ಹಸಿ ಧೂಳು, ಹೂ ಗರ್ಭದ ಹದ ಬಿಸಿ - ಪ್ರೇಮವೆಂದರೆ ಅಷ್ಟೇ, ಹೂ ಚಿಟ್ಟೆ ಮೌನ...
#ಸೃಷ್ಟಿ_ಸೌಗಂಧ...
🔀🔁🔃

ತುಂಟ ಸೆರಗು ಒಂಟಿ ಕಣ್ಣ ಮುಚ್ಚಿದೆ - ಇಣುಕೋ ಹರೆಯದ ಸಿರಿಯ ಭಾರ ಹೈದನೆದೆಯ ಚುಚ್ಚಿದೆ...
ಬೆಟ್ಟ, ಬಯಲು ಬಳಸಿ ಕಣಿವೆಯಾಳಕೆ ಜಾರೋ ಬಿಸಿ ಉಸಿರ ಉತ್ಸವ...😍😉
#ಕನಸಲ್ಲಿ_ಸರ್ಪಸರಸ...
🔀🔁🔃

ಆ ಬೇಲಿ ಮೂಲೆಯ ಹೂವು ಗಾಳಿರಾಯನ ಪಕ್ಕೆ ತಿವಿದರೆ ಈ ದುಂಬಿ ನಾಭಿಯಲಿ ಆಸೆ ಅರಳುವುದು ಶುದ್ಧ ಧ್ಯಾನ...

ಬೆಳುದಿಂಗಳ ತೋಪಿನಲಿ ಒಳಭಾವ ಉಮ್ಮಳಿಸಿ ಕವಿ ಕವಿತೆಯಾಗುವ ಪರ್ವ ಶುದ್ಧಾನುಶುದ್ಧ ದಿವ್ಯ ಮೌನ...
🔀🔁🔃

ಮುಕ್ಕರಿಸಿ ಮುರಿದು ನೆಲಕೆ ಬೀಳುತಿದೆ ಕರಿ ಮೋಡ ಹನಿಹನಿಯಾಗಿ ಒಡೆದು; ಒಳನಾಡಿಗಳ ಬಿಸಿ ಉಕ್ಕಿಸಿ ಸಡಿಲ ವಸನದಲಿ ತೋಳ್ದೆರೆದು ಕರೆದ ವಸುಧೆಯ ಮೋಹಕ ಮೋಹಕೆ ಸೋತು...
ಋತುಗಾನ ಸೆಳೆತಕೆ, ರತಿರಾಗ ಮಿಡಿತಕೆ, ಗುಡುಗುಡುಗಿ ಸರಸದಲಿ, ಮಿರಿ ಮಿಂಚಿ ಚಂದಾನ ಬೆಳಗಿ, ಮಡಿ ಕಳಚಿ ಮುಡಿ ಬಿಚ್ಚಿ, ಸಹಜ ಪ್ರೇಮವೆ ಪಲ್ಲಂಗವಾಗಿ ಪ್ರಕೃತಿ ತಾ ಮಿಳನ ಮೇಳನದಿ ಸಂಭ್ರಮಿಸುತ್ತದೆ - ಹಸಿದ ಬೀಜ ಸುಖದಿ ಸಿಡಿದು ಹಸಿರ ಚಿಗುರಾಗಿ ಅರಳಿ ಬರುವ ನಾಳೆಗೆ ನವೋದಯ ಸಂಲಗ್ನ ಸಂಭವಿಸುತ್ತದೆ...
ನಾನಿಲ್ಲಿ ಕತ್ತಲ ಕೋಣೆಯ ಗೋಡೆಗೆ ಮೆತ್ತಿಕೊಂಡು ಹಸಿದ ಹಲ್ಲಿಯಂತೆ ಲೊಚಗುಡುತ್ತೇನೆ - ಬೊಗಸೆಯಲಿ ಹನಿಗಳ ಹಿಡಿದು ಸೋಕಿ ಕಣ್ಣೀರ ತೊಳೆಯುತಿದ್ದ ಆ ಕಪ್ಪು ಹುಡುಗಿಯ ನೆನೆನೆನೆದು ಬಿಗಿವ ಕೊರಳ ಸೆರೆ ಬಿಡಿಸಿ ಕವಿಯಾಗಲು(?) ಹೆಣಗುತ್ತೇನೆ...
#ಮತ್ತೆಮಳೆ_ಒಂದುಹನಿಮೌನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಎರ್ಡು.....

ಸೂತಕ..... 

ಬಿಡಿಸಲಾಗದ ಗಂಟು ಅಂದರು - ಎಷ್ಟು ಚಂದದ ಭೇಟಿ, ಎಷ್ಟೊಳ್ಳೆ ನಾಮಕರಣ... ಒಂದೂ ಸುಳ್ಳಲ್ಲ... ಗಂಟೂ ಹಂಗೇ ಇದೆ - ಅಕ್ಕ ಪಕ್ಕ ಹಗ್ಗ ಹರಿದಿದೆ ಅಷ್ಟೇ...
#ನಂಟು...
₹₹₹₹₹

ಸತ್ತಾರೆ ಸಾಯಬೇಕು ಸುಖ ಸುತ್ತಿದ ತೋಳಲ್ಲಿ ಅಂಬೋ ಆಸೆಬುರುಕ ಆಸಾಮಿಯ ಮುಖ ಮುಚ್ಚಿ ಹೊಡೆದ ಹಾಗೆ ಮಾತಿನ ಮಡಿಲಲ್ಲಿ ಕ್ರುದ್ಧ ಮೌನದ ಬೀಜ ಬಿತ್ತಿ ಹೋದ ಕನಸುಗಳನೆಲ್ಲ ರಾಶಿ ಹಾಕಿ ಬೆಳದಿಂಗಳ ಉರಿಯಲ್ಲಿ ಸುಡುತ್ತೇನೆ - ಬೂದಿಗುಡ್ಡೆಗೆ ನನ್ನದೇ ಹೆಸರು... ನನಗೇ ನನ್ನೆದೆ ಶ್ರದ್ಧಾಂಜಲಿ....
#ಆಜನ್ಮ_ಸೂತಕ...
₹₹₹₹₹

ನಿಶೆ - ನಶೆ - ಸಂಗಾತ - ಸೆಳೆತ - ನಿಲ್ಲದ ವಿಕ್ಷಿಪ್ತ ಹರಿವು...
ಹೆಸರಿಟ್ಟರೆ ಬೇಲಿ - ಉಸಿರಿಟ್ಟರೆ ಬಯಲು...
#ಸಮೃದ್ಧ_ಸಾವು...
₹₹₹₹₹

ಇನ್ನೊಂಚೂರು ಮರೆವು ವರವಾಗಿ ದಕ್ಕಿದ್ದರೂ ನಗುವಿಗಿಷ್ಟು ಸ್ವಂತ ಕಸುವಿರುತಿತ್ತು...
#ನಿನ್ನೆಗಳು_ಮತ್ತು_ನೀನು...
₹₹₹₹₹

ನನ್ನ ಕಣ್ಣಿಗಷ್ಟೇ ಗೊತ್ತು ನನ್ನ ಚಿತ್ರ(ತ್ತ)ದ ಹುಳುಕು...
#ಮಸಣದಂತವನು...
₹₹₹₹₹

ಅದೇ ಕಾಲ್ಹಾದಿಯಲ್ಲಿ ಅದಾಗಲೇ ಎಡವಿದ ಕಾಲೇ ಮತ್ತೆ ಮತ್ತೆ ಎಡವುತ್ತೆ - ತಪ್ಪು ಕಾಲಿನದ್ದಾ? ದಾರಿಯದ್ದಾ...?
ಎದೆಯ ಗಾಯಕ್ಕೆ ಬುದ್ಧಿ ಎಷ್ಟು ಮಟ್ಟಿಗೆ ಮದ್ದಾದೀತು...?
ಮುರಿದ ಕೈಯ್ಯಲ್ಲಿ ಕಂಗಳ ಸಾಂತ್ವನಿಸಿಕೊಳ್ಳುವಾಗ ನಗೆಯೊಂದು ದೊಡ್ಡ ಕ್ಲೀಷೆಯಲ್ಲವೇ...?
ಸುಟ್ಟುಬಿಡಲಾದೀತೇ ಸಾಕ್ಷಿಗಳ - ರಕ್ತದ ಕಲೆಗಳು ಸಂಜೆಗಳ ಕೊಲ್ಲದಂತೆ...?
#ಸತ್ತುಹೋಗಿದ್ದೇನೆಮತ್ತೆ...
₹₹₹₹₹

ಬೆರಳ ನಡುವಿನ ಕಿಟಕಿಯಿಂದ ಜಾರಿ ಹೋಗೋ ಮರಳು ಸ್ಪರ್ಶದಿಂದ ಸುದ್ದಿ ಹೇಳಿದರೂ ನಿಲ್ಲಿಸಲಾಗದೆ ಸೋಲುತ್ತೇನೆ ಕೈ ಖಾಲಿಯಾಗುವುದನು...
#ಭಾವಬಂಧ...
₹₹₹₹₹

ಕಳಕೊಂಡಲ್ಲೇ ಆದರೂ ಹುಡುಕುವುದು ಹೇಗೆ - ಕಳಕೊಂಡದ್ದು ಕಣ್ಣೇ ಆದರೆ...
#ನೀವು...
₹₹₹₹₹

ಕಾಲ ಕಾಯುವುದಿಲ್ಲ ಗೆಲುವಿಗೆ - ಕಾಲ ಸರಿಯುವುದಿಲ್ಲ ಸೋತ ಕಾಲಿಗೆ...
₹₹₹₹₹

ಕೆಲವೆಲ್ಲ ಕರುಳ ನೋವುಗಳಿಗೆ ಕಾಲನೂ ಮದ್ದೀಯಲಾರ ಅನ್ಸುತ್ತೆ - ಪಾದದಂಚಲಿ ಮುರಿದ ಕಿರು ಮುಳ್ಳು ಹೆಜ್ಜೆ ಎತ್ತಿಟ್ಟಾಗಲೆಲ್ಲ ಎದೆಯ ಕುಕ್ಕುತ್ತದೆ...
#ನೀನು...
₹₹₹₹₹

ಈ ಅಂಕುಡೊಂಕು ಕೊರಕಲು ಹಾದಿಯ ಯಮ ಸುಸ್ತಿನ ಪಯಣ ಎಷ್ಟೆಲ್ಲ ಮಾತಾಡುತ್ತೆ... ಆದರೆ ಬಲು ಜಾಣ ಕಿವುಡ ನಾನು...
#ಸೋತ_ಕಾಲು...
₹₹₹₹₹

ಮೌನದ ಪರೋಕ್ಷ ಹೇರಿಕೆಗೆ ಸೋತು ಮಾತಿನ ಎಲ್ಲಾ ನೇರಪ್ರಸಾರಗಳನ್ನು ಇಂದು ನಾಳೆಗಳಲ್ಲಿ ಬಲವಂತವಾಗಿ ತಡೆಹಿಡಿಯಲಾಗಿದೆ...
#ರದ್ದಿನೀತಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಒಂದು.....

ಕಣ್ಣಿಗಂಟಿದ  ಕಾವ್ಯ...  

ಚಿಟ್ಟೆ ವಿರಹದುರಿಯಲಿ ಹೂವು ಬಾಡುವಾಗ ಕಾಯಿ ನಕ್ಕಿತು...
#ಪ್ರೇಮ...
÷×=÷=×÷

ಎಲ್ಲೆಲ್ಲೋ ಅಲೆಯುತ್ತೇನೆ - ನಿನ್ನಲ್ಲಿ ಕರಗುತ್ತೇನೆ...
ಕೆಲವು ನೋಟಗಳು ಕಾಡಲಿಕ್ಕೆಂದೇ ಕೂಡುತ್ತವೇನೋ...
ಕೂಡು ಹಾದಿಯಲಿನ ನಿನ್ನ ಗೂಡಿಗೆ ನನ್ನ ಹೆಸರಿದೆಯಂತೆ...
ಗುಬ್ಬಚ್ಚಿ ಎದೆಯಲ್ಲಿ ಸಾಗರನ ತುಂಡು...
ಆ ಸ್ವರ್ಗಕ್ಕೆ ಸಾವೇ ದಾರಿಯಂತೆ - ಆ ದಾರಿ ಆಯಾಸಕ್ಕೆ ನರಕ ಸುಖಗಳೇ ನೆರಳಂತೆ...
#ಕೊಂಡಾಟ...
÷×=÷=×÷

ಕದ್ದು ಇಣುಕೋ ಕಣ್ಣಿನಲ್ಲಿ ರೆಕ್ಕೆ ಕುಣಿಸೋ ಮರುಳ ಮೋಹದ ತುಂಟ ಚಿಟ್ಟೆ ಮರಿ...
ಕಳ್ಳ ಆಸೆಯ ತೇವ ತೇವ ತುಟಿಗಳಲ್ಲಿ ಮಳೆ ಹನಿಯ ಕಚ್ಚಾ ರುಚಿ...
ಮಳೆಯ ಇರುಳಲಿ ಹರೆಯ ಕಣ್ಣಿ ಕಳಚಿದ ಕರು...
#ಬಯಲಿಗೆ_ಬಿದ್ದ_ಎದೆಯ_ಬಿಸಿ...
÷×=÷=×÷

ಸೃಷ್ಟಿ ಕಾವ್ಯವೇ -
ಈ ಶುಭ ಇರುಳಿನಲಿ ಭುವಿಯ ಮೈಯ್ಯಲಿಳಿವ ಮಳೆ ಪ್ರೇಮೋನ್ಮಾದ ಸ್ಫೋಟಿಸಿದ ನನ್ನ ನಿನ್ನ ಆ ಖಾಸಗಿ ಸಂಜೆಯ ಹಗೂರ ಬೆವರ ಸಾಲಿನ ಕಂಪನು ಎಳೆ ತಂದು ಚಾದರದೊಳಗಿನ ಒಂಟಿತನವ ಕೆಣಕಿದರೆ ಯಾರ ದೂರಲಿ...
#ಭಾರಭಾರ_ಈ_ಒಂಟೊಂಟಿ_ಮಳೆ_ರಾತ್ರಿ...
÷×=÷=×÷

ಕಳ್ಳಭಟ್ಟಿ ಏರಿಸಿ ಚಿತ್ತಾದವನ ಕರುಳಿನಲಿ ಕಳ್ಳ ಪ್ರೇಮವೊಂದು ಕತ್ತು ಕುಣಿಸಿದರೆ - ಷರಾಬಿಗೂ ಪ್ರಣಯಾಗ್ನಿಗೂ ನಶೆಯ ಜಿದ್ದಾಜಿದ್ದಿ...
#ಬಡಬಡಿಕೆಗೆ_ಮಳೆಯ_ಸಾಕ್ಷಿ...
÷×=÷=×÷

ಇಲ್ಲಿ, ಕಾಯುವ ಮಾತೇನೂ ಕೊಟ್ಟಿರಲಿಲ್ಲ - ಕಾಯುವಿಕೆ ನಿಂತಿಲ್ಲ... ಅಲ್ಲಿ, ಕಾದು ನಿಲ್ಲುವ ಆಣೆ ಪ್ರಮಾಣಗಳೆಷ್ಟೋ - ಕಾಯಲು ಪುರ್ಸೊತ್ತಿಲ್ಲ...

ಅಗೋ...... ಆ ಹಾದಿ.......‌.... ಕಣ್ಣರಳಿಸಿ ತುಂಬಿಕೊಳ್ಳಲು ಬಯಸಿದ್ದು..... ಅಂಥವೆಷ್ಟೋ ಕಿರು ಕಾಲು ಹಾದಿಗಳು..... ಅದೊಂದು ಸುಂದರ ಕನಸು......... ಮತ್ತದು ಅಷ್ಟೇ.......
÷×=÷=×÷

ಕರಿಮುಗಿಲ ಗೆಳತಿ ಅವಳು ಕರಗಿ ಸುರಿಯುತ್ತಾಳೆ - ಕರಿಬಂಡೆ ಎದೆಯಲ್ಲೂ ಬಣ್ಣದ ಹೂ ಅರಳಿ ನಗುತ್ತದೆ...
#ಕಪ್ಪು_ಹುಡುಗಿ...
÷×=÷=×÷

ಕಾಯುತ್ತಾ ನಿಂತ ಹಾದಿಯ ಕಿಬ್ಬಿಗಳಲಿ ಕಣ್ಸೆಳೆವ ಅಪರಿಚಿತ ಗೆಜ್ಜೆಗಳ ಕಿಂಕಿಣಿ ಘಲಿರು - ಆಹಾ! ಈ ಬೆಳಗಿನೆದೆಯಲಿ ಚಂದಾನೆ ಚೆಲುವು ಚೆಲ್ಲಾಡಿ ಕಣ್ಣಾಲಿ ಚಡಪಡಿಕೆಯಲಿ ಸೋಬಾನೆ ಸೊಬಗು...
#ಕಣ್ಣಿಗಂಟಿದ_ಕಾವ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಸೊನ್ನೆ.....

ಕಾರುಣ್ಯ..... 
(ಗೊಂಚಲು ಮುನ್ನೂರಾಯಿತು, ಇನ್ನೂ ಬರೆಯುತ್ತಲೇ ಇದ್ದೇನೆ...!!! ನಿಮ್ಮ ಪ್ರೀತಿಗೆ ಶರಣು...)

ಅಮ್ಮನ ಮಡಿಲ ಗೂಡಿಗೆ ಗುಮ್ಮ ಬರುವುದಿಲ್ಲ - ನಂಬಿಕೆ...
ಅಮ್ಮನಾಣತಿ ಮೀರಿ ಅಂಗಳಕೂ ಕಾಲಿಡುವ ಶಕ್ತಿಯಿಲ್ಲ ಗುಮ್ಮನಿಗೆ - ಧೈರ್ಯ...
ಹಾದಿಯ ಭಯಗಳ ಅಲ್ಲಲ್ಲೆ ಕೊಲ್ಲುವ ಶಕ್ತಿಸ್ಥಾನ - ಅವಳ ಮಡಿಲು...
#ಆಯಿ... #ನಗೆಯ_ಕೈದೀವಿಗೆ...
===★★★★

"ಅಮ್ಮನೆಂಬ ಹೊಸ ಹುಟ್ಟು...
ಯಾವ ಮಾತು, ಅದಾವ ಗೀತೆ, ಎಲ್ಲೋ ಮರಳುವ ಮೌನ ಅವಳ ಓದಿ ಹೇಳೀತು...
ಅವಳ ಪ್ರೀತಿಗೆ ಅದರ ರೀತಿಗೆ ಅವಳು ತಾನೇ ದೇಶ ಕಾಲ ಭಾಷೆ..."

"ಹಾದಿ ಹರಿವಲಿ ಕರುಳ ಸೋಕುವ ತಾಲೀಮಿಲ್ಲದ ಎಂಥದೇ ಪ್ರೀತಿಗೂ ಅಮ್ಮನೆಂದೇ ಹೆಸರು..."

ಎದೆಯ ಗೂಡಿನ ಬಾಗಿಲಲ್ಲಿ ಕಾರುಣ್ಯದ ದೀಪ ಹಚ್ಚಿಟ್ಟುಕೊಂಡು ಈ ಬದುಕನು ಜೀವಂತವಿಟ್ಟ ಎಲ್ಲ ಅಮ್ಮನಂಥಾ ಜೀವಗಳಿಗೂ ಒಂದು ಪಲ್ಲ ನಗೆಯ ಶುಭಾಶಯ... 💞
^^^^^
ಈ ಜೀವದ ಜನುಮಾನುಬಂಧದ ಪ್ರೀತಿಯ ಹೆಸರು - ಸಾವಿತ್ರಿ... 💞
ಉಸಿರನಿತ್ತ ಕರುಳಿನ ಜೀವ ರಾಗ - ಲವ್ ಯು ಕಣೇ ಸುಂದ್ರೀ... 😘😘
===★★★★

ಹೇ ಬದುಕೆಂಬೋ ಬದುಕೇ -
ಬಳ್ಳ ತುಂಬಿ ಕೊಡುವವರಿಗೆ ಮುಟಿಗೆಯಷ್ಟಾದರೂ ಮರಳಿ ಕೊಡಲು ಎದೆಯ ಬಯಲಲಿಷ್ಟು ಪ್ರೀತಿ ಕಾಳು ಬೆಳೆದು ಕೊಡಬಾರದೇ...
#ಕನಸಲ್ಲಾದರೂ_ಅರಳು...
#ಪ್ರಾರ್ಥನೆ...
===★★★★

ಉಂಡ ನನ್ನ ಮನಸು ಕುರುಡಾದಾಗ ಬಡಿಸಿದ ನಿನ್ನ ಮಡಿಲು ಅಜ್ಞಾತವೇ...
#ಪ್ರೀತಿ...
===★★★★

ಪ್ರೀತಿಯ ಕೈಸಾರಣೆಯಿಲ್ಲದ ಗೌರವ - ಬೋಳು ಮರದ ಎತ್ತರ... ಅಷ್ಟೇ...
#ನಾನು...
===★★★★

ಅಲ್ಲೊಂದು ಬದುಕ ಬರವಸೆಯ ಖುಷಿಯ ಪಸೆ - ನೇಹ ನಕ್ಕಾಗ ಇಲ್ಲೊಂದು ಹಗೂರ ಕಣ್ಹನಿಯ ಮಿಡಿತ...
ಇಷ್ಟೇ - ಬದುಕಿನೆಡೆಗಿನ ಸಾವಿರ ತಕರಾರುಗಳಿಗೆ ಊಫಿ ಮಾಫಿ...
===★★★★

ಮಣ್ಣ ಕನ್ನಡಿಯಲ್ಲಿ ಮುಖವ ನೋಡಿಕೋ ಉಸಿರ ಸೊಕ್ಕು ಅಳಿದೀತು - ಜೀವ ಸುಮ ಅರಳೀತು...
#ನಾನು...
===★★★★

ನನ್ನ ವ್ಯಥೆಯೊಂದು ಯಾರ್ಯಾರದೋ ಎದೆ ಖಜಾನೆಯ ಕಥೆಯಾಗಬಹುದು - ಇಲ್ಲಿನ ನಗುವೊಂದು ಜಗದ ಜಗುಲಿಯ ಕಮ್ಮಗಿನ ನೆನಪಾಗಬಹುದು; ಅಥವಾ ಅದಲೀಬದಲಿ...
#ಗಾಳಿ_ಕಿವಿಯಲಿ_ಮೆಲ್ಲನುಸುರಿದ_ಮಾತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರ್ತೊಂಭತ್ತೊಂಭತ್ತು.....

ಕತ್ತಲು ಹೇಳಿದ ಕಟ್ಟುಕಥೆಗಳು.....  

"ಎಲ್ಲ ಚಂದವಿದೆ ಇಲ್ಲಿ - ನನಗಾದರೋ ಕಳ್ಳ ಕುರುಡು..."
"ಬದುಕು ಬಣ್ಣ ಬಣ್ಣದ ಬಲೂನಿನಾಟ - ಉಸಿರು, ಗಾಳಿ, ಸೂಜಿ ಎಂಬೆಲ್ಲ ಪಾತ್ರಗಳು..."
"ಗೊತ್ತಲ್ಲ, ಕತ್ತಲಿಗೊಗ್ಗಿದ ಕಣ್ಣಿಗೆ ಕಂದೀಲೂ ಬಲು ಹಿಂಸೆ - ಒರೆಸಿಕೊಳ್ಳದಿದ್ದರೆ ಕಣ್ಣೀರೂ ಕಲೆ ಉಳಿಸುತ್ತೆ..."
"ಕೃತಕ ಬೆಳಕಿನ ಊರಲ್ಲಿ ಕಾಡುಗತ್ತಲ ಹುಡುಕುತ್ತೇನೆ - ಆಹಾ ಸಂತೆಯ ಮೌನವೇ..."
"ಅತ್ತು ಅತ್ತು ಬೇಸರಾಗಿ ಎದೆಬಿರಿಯೆ ನಕ್ಕುಬಿಟ್ಟೆ - ಹೆಗಲು ಇನ್ನಷ್ಟು ಭಾರವಾಯಿತು..."
"ನನ್ನ ನಗುವೇ ನನ್ನ ಅಣಕಿಸುತ್ತದೆ ಸುಡುಸುಡುವ ಏಕಾಂತದಲ್ಲಿ - ಒಳಗುಟ್ಟು ಒಳಗಲೆದವರಿಗಷ್ಟೇ ಗೊತ್ತು..."
"ಇರುಳ ಸಾಕ್ಷಾತ್ಕಾರಗಳನೆಲ್ಲ ಸಂಕಲಿಸಿ ಪ್ರಕಟಿಸಿದರೆ ಹಗಲು ದಿಕ್ಕೆಡುತ್ತದೆ - ಮೌನ ಉರಿದಷ್ಟೂ ಮಾತು ಬಣ್ಣಗೆಡುತ್ತದೆ..."
#ಕತ್ತಲು_ಹೇಳಿದ_ಕಟ್ಟುಕಥೆಗಳು...
¶¶¶¶¶¶¶¶

ಅಶುಭದ ಬೆನ್ನ ಮೇಲೆ 'ಶುಭಂ' ಅಂತೇನೋ ಬರೆದು ಸುಳ್ಳೇ ಆದರೂ ಹಗುರಾದೆ...
#ಉಳಿದದ್ದು_ಸಣ್ಣ_ಮೌನ...
¶¶¶¶¶¶¶¶

ಸುಳ್ಳನ್ನು ಚಂದನೆ ಬಣ್ಣದಲ್ಲದ್ದಿ ಸತ್ಯವಾಗಿಸೋ ಸತ್ಯಸಂಧರ ಜಗದಲ್ಲಿ ನಿಸೂರಾಗಿ ಸತ್ಯವನ್ನೇ ಒದರಿಬಿಡೋರು ಅಪಥ್ಯವಾಗೋದೇ‌ ಹೆಚ್ಚು...
#ಕತ್ತಲಿಗೂ_ಬಣ್ಣದ್ದೇ_ಬಿಕ್ಕಳಿಕೆ_ಇಲ್ಲಿ...
¶¶¶¶¶¶¶¶

ಕನಸು ಕಟ್ಟದ ಕಣ್ಣು - ನಗೆಯ ಬಿತ್ತದ ಮಡಿಲು - ಒಳಗೆಲ್ಲ ಬಣ ಬಣ...
ಬೆಳಕಿನ ಬೆತ್ತಲೆಗೆ ಕತ್ತಲು ಬಸಿರಾಗಿ ಕಣ್ಣ ಹನಿಯ ಹಡೆಯುತ್ತದೆ...
ನಾನೆಂದರಿಲ್ಲಿ ಗುಂಪಲ್ಲಿ ಕಲಸಿಟ್ಟ ಗುಂಪಿಗೆ ಸೇರದ ಪದ...
#ಕನ್ನಡಿಯಲಿ_ಕಂಡ_ಹೆಣ...
¶¶¶¶¶¶¶¶

ಗೆದ್ದ ಮೌನಕೂ ದಿವ್ಯ ಸಂಭಾಷಣೆಯ ಕಿರೀಟ - ಕವಿತೆ...
ಸೋತ ಮಾತಿನ ನಗುವಿಗೂ ಸೋಲಿನದೇ ಪಟ್ಟ ಇಲ್ಲಿ - ವ್ಯಥೆಯ ಕಥೆ...
ಸಂತೆಯಲಿ ಕೂಗಿ ಕೂಗಿ ಮಾತು ಮಾರಿ ಸಂಜೆಗೆ ಉಳಿದ ನಿತ್ರಾಣ ಮೌನಕೆ ಸಾವೆಂದು ಹೆಸರಿಡಬಹುದೇ...
ಕನಸು ಕಾಡದ ನಿದ್ದೆಯೇ ಜರೂರು ಕಣ್ತಣಿಸು ಬಾ...
#ಒಂದು_ಮುಟಿಗೆ_ಮೌನ...
***ಯಥಾರ್ಥ ಕೇಳಬೇಡಿ...
¶¶¶¶¶¶¶¶

ಹಸಿವು:
ನಿನ್ನೆಯನ್ನು ಕೊಂದಿತ್ತು
ಇಂದೀಗ ಎಚ್ಚರ ತಂದಿಟ್ಟಿದೆ
ನಾಳೆಯ ಕಾಯಬಹುದು...
#ಗಡಿಯಾರದ_ಮುಳ್ಳು_ತುಸು_ಹೆಚ್ಚೇ_ಚುಚ್ಚುತ್ತದೆ...
¶¶¶¶¶¶¶¶

ನಿಶ್ಯಬ್ದವನ್ನೇ ಮೌನ ಅಂದುಕೊಂಡವರೇ ಹೆಚ್ಚು ಇಲ್ಲಿ...
ಶಬ್ದ ಶಬ್ದದ ನಡುವಿನ ವಿವೇಚನೆಯಲ್ಲವಾ ಮೌನ...
#ಸಾಕ್ಷೀಪ್ರಜ್ಞೆ...
¶¶¶¶¶¶¶¶

ರಣ ಬಿಸಿಲ ಮುಖ ತೊಳೆವ ಎರಡು ಹನಿ ಸಂಜೆಮಳೆ - ಥಾರು ರಸ್ತೆಯ ಮೇಲೆ ಮಿಂದು ಮಲಗಿದ ಧೂಳ ಕಣ - ಹೆಣ ಭಾರದ ಮನಸು - ಮಣ ಭಾರದ ಹೆಜ್ಜೆ - ಇರುಳ ಬಾಗಿಲ ಮುರಿದು ಮುಕ್ಕಿ ಕಣ್ಣ ಕೊಯ್ಯುವ  ಕೃತಕ ಬೆಳಕು - ಚಪ್ಪಲಿಯ ಬೆನ್ನಿಗಂಟಿದ ಗಾಢ ಕಂಪಿನ ಕಾಡು ಸಂಪಿಗೆ ಎಸಳು - ಕಾಲಿನ ಕ್ರೌರ್ಯಕ್ಕೆ ಕಾಲನ ನಿಯಮದ ಹೆಸರು - 'ಆ ಕಾಲ ಒಂದಿತ್ತು' ಎಂದು ನಿನ್ನೆಗಳ ಕಿವುಚುತ್ತಾ ಕಾಲನ ಕಾಲು ತೊಳೆದ ಉದಕವ ಕಣ್ಣಿಂದ ಇಳಿಸುತ್ತಾ ಇಲ್ಲಿಯವರೆಗೆ ನಡೆದಿದ್ದಾಯ್ತು - ಮುಗಿಯಲೊಲ್ಲದು ಈ ಪರಿಚಿತ(?) ಹಾದಿಯ ಅಪರಿಚಿತ ಪಯಣ - "ತುಂಬ ಮಾತಾಡುವ ನನ್ನ ದಾರಿ ಮೌನವನ್ನು ಹುಡುಕುತ್ತದೆ ಮತ್ತು ಬೋಧಿಸುತ್ತದೆ..."
#ಕಾಕಭೋಜನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)