Tuesday, March 18, 2025

ಗೊಂಚಲು - ನಾಕ್ನೂರಾ ಐವತ್ತು ಮತ್ತೆ ಎಂಟು.....

ಮೋಹಾಲಾಪದ ಸಿಹಿ ಕಂಪನಗಳು.....

ಅಲ್ವೇ -
ಡಾಕ್ಟ್ರು ಜಾಸ್ತಿ ಸಿಹಿ ತಿನ್ಬೇಡ, ವಯಸ್ಸಾಯ್ತು ಅಂದಿದಾರ್ಕಣೇ - ಹಿಂಗೆ ಕಾಡ್ಬೇಡ್ವೇ...
ಹೊಟ್ಟೆಗೆ ಕಣೋ ಸಿಹಿ ನಿಷೇಧ, ಮನ್ಸಿಗೆ ಕನ್ಸಿಗೆ ಅಲ್ಲಾ...
ಏನೂ, ಕನ್ಸೀಗ್ ಬರ್ತೇನೆ ಅಂದ್ಯಾ... ಹುರ್ರೇ.... 🥰

ಓಯ್ -
ಸಾಕ್ ಸಾಕು ನಿನ್ನ ರಸಿಕ ಹಗ್ಣ, ಸುಮ್ನಿರೋ ಮಾತ್ರ...
ನೇರವಾಗಿ ಸಿಹಿ ರಕ್ತಕ್ಕೆ ಸೇರ್ಬಾರ್ದಂತೆ ಅಷ್ಟೇ ಕಣೇ ಮತ್ತು ರಕುತ ಕುದ್ದು ಬೆವರಾಗಿ ಹರಿದು ಹೆಚ್ಚಾದ ಸಿಹಿ ಹೊರಹೋಗುತಿರಲೂಬೇಕಂತೆ... 
ನೀನು ಮತ್ತು ನಿನ್ನ ನೆನಪು, ಕನಸುಗಳೇ ನನ್ನ ಸಿಹಿಯಡುಗೆ ಮತ್ತು ಸಿಹಿ ರೋಗಕೆ ಮದ್ದು ಕೇಳೇ ಇನ್ನೂ...
___ ಮೋಹಾಲಾಪದ ಸಿಹಿ ಕಂಪನಗಳು...
&&&

ಕೇಳೇ -
"ನಿನ್ನ ಭುಜದ ತಿರುವಿಂದ ಬೆನ್ನಿಗೆ ಜಾರಿದ ಸುಖದ ಸ್ವೇದ ಬಿಂದುವಿಗೂ ಹಿತಾಘಾತಗಳ ಓಘಕ್ಕೆ ಚದುರಿಬಿದ್ದ ನಿನ್ನ ಮುಡಿಯ ಮಲ್ಲಿಗೆಯ ಘಮದ ಪಾಕವಂಟುವಾಗ ಸಜ್ಜೆಮನೆಯ ಸಂಭ್ರಮವನು ಇರುಳು ತೇಲುಗಣ್ಣಲ್ಲಿ ಹಾಡಾಗಿ ಗುನುಗುತ್ತದೆ...
ಬೆಳಕೂ ನಾಚುವ ಬೆತ್ತಲೆ ಉತ್ಸವದಲ್ಲಿ ನಿದ್ದೆಗೇನು ಕೆಲಸ...." 🫢

ಈ ಪೋಲಿ ಪ್ರಾಣಿಯ ಇರುಳ ಕಾಡೋ ಮೋಹದ ಕೂಸಿಂಗೆ ಹಿಂಗೆಲ್ಲಾ ಸಂದೇಶ ಕಳಿಸಿ ಅವಳ ಪುಟ್ ಪುಟಾಣಿ ಎದೆ ಗೊಂಚಲ ಬಿಗ್ಗ ಬಿಗಿ ಬಡಿತವ ಕನಸಿ ಪ್ರತಿಕ್ರಿಯೆಗೆ ಕಾಯುವ ನನ್ನಾ ಸುಖ ಸಂಕಟವ ಯಾರಿಂಗೆ ಹೇಳೂದು, ಹೆಂಗೆ ವಿವರ್ಸೂದು... 🙈
&&&

ಕೇಳೇ ಇಲ್ಲೀ - 
ನೀನುಟ್ಟ ಕನಕಾಂಬರ ಸೀರೆ ಎನ್ನ ಕಣ್ಣಲ್ಲಿ ನೆರಿಗೆ ಒದೆಯುತ್ತಿದೆ...
ಚಂಚಲ ಸೆರಗು ಕುಪ್ಪಸ ಗೂಡಿನ ಪಹರೆಯ ಮರೆತು ಮುದ್ದಿನ ಯುದ್ಧಕೆ ಕರೆವಂತಿದೆ...
ಬೊಗಸೆ ಬೊಗಸೆ ಬಿಡಿ ಮಲ್ಲಿಗೆ ತರುವೆ - ತುಸು ಬಿಡುವಾಗಿರು ಚೆಲುವೇ...
ಛಳಿಯ ಋತುವಿನ ಈ ಕೊನೆ ಕೊನೆಯ ದಿನಗಳಿಗಿಷ್ಟು ಪ್ರೇಮದ ಬಿಸಿ ಬಿಸಿಯ ಕಿಡಿ ಸೋಕಲಿ...
(?)ಪ್ರೇಮಿಗಳಿಗಿಷ್ಟು ಪ್ರೇಮ ಒಲಿಯಲಿ...
&&&

ಅಷ್ಟೇ.... ಉಳಿದಂತೆ ಕನಸು ಮತ್ತು ಮನಸಿಗೆ ವಯಸ್ಸಪ್ಪದು ಅನ್ನೋ ಪ್ರಮೇಯವೇ ಇಲ್ಲೆ ಎನ್ ಪ್ರಕಾರ.... ಮತ್ತೆ ಎಲ್ಲಾ ಕನಸೂ ನನಸಾಗಿನೇ ಪೂರ್ಣ ಅಪ್ಪದು ಅನ್ನೋ ಭಾವವೂ ಇಲ್ಲೆ... ಕೆಲವು ಕನಸನ್ನ ಕನಸು ಕಾಣೋ ಸುಖಕ್ಕೆ ಅಂತಷ್ಟೇ ಆದ್ರೂ ಕಾಣ್ತಾ ಇರವು... ಬದುಕು ಸಹನೀಯ ಅನ್ನಸ್ಲೆ...
ನೀ ನನ್ನ ಕನಸು - ಯಾವತ್ತಿಗೂ.......
____ ಕಪ್ಪು ಹುಡುಗೀ...
&&&

ನಿನ್ನೆಡೆಗಿನ ಉನ್ಮಾದ 
ಎನ್ನೊಳಗಿನ ಧ್ಯಾನ.......
___ ಪ್ರಣಯ ಹಡೆದ ಪ್ರೇಮ ಕಾವ್ಯ...
&&&

ಕಾಯುತ್ತಾ ಕಾಯುತ್ತಾ 
ಕಾಯುವ ಎದೆ ಕಾವು ಕರಗದಂತೆ ಕಾಯ್ದುಕೊಳ್ಳುತ್ತಾ
ಕಾಯುವುದೇ ತ್ರಿಕಾಲ ಕಾಯಕವಾಗಿ
ಕಾಯುತ್ತಾ ಕೂತಲ್ಲೇ ಕಾವ ಕಾಯ ಹಣ್ಣಾಗಿ 
ಕರೆದೊಯ್ಯಲು ಸಾವು ಬಂದಂತಿದೆ ನಿನ್ನ ಪರವಾಗಿ...
___ ಮೃತ ಭಾವ ಸಂಜೆ...
&&&

ನಿನ್ನೆದೆಯ ಮೊನೆಯಿಂದ ಎನ್ನೆದೆಯ ಬಯಲಲ್ಲಿ ನೀ ಗೀಚಿದ ಪ್ರಣಯ ಬೀಜಾಕ್ಷರಗಳ ಮರ್ಮರಕೆ ಸೋಲುತ್ತಾ, ಲೆಕ್ಕ ತಪ್ಪುವ ನರ ನಾಡೀ ಮಿಡಿತಗಳೊಡನೆ ನೆನಹುಗಳ ಮೆಲ್ಲುತ್ತಾ, ಉಗ್ಗುವ ಉಸಿರೊಂದಿಗೆ ತೇಕುತ್ತ ಸರಿಯುತಿದೆ ಈ ಛಳಿಯ ಸಂಜೆ...
___ ಪುಟ್ಟ ಪುಟಾಣಿ ಎದೆ ಗೊಂಚಲ ಬಿರು ಬಿರುಸು ಆಸೆ ಮೊನೆಗಳ ಬಳಪ ಬರೆವ ಪ್ರಣಯ ಕವಿತೆಗೆ ಎದೆ ಕೊಟ್ಟು ಸೋತವನು...
&&&

ನಿನ್ನ -
ಗುಟ್ಟಿನಲಿದ್ದ ಹಮ್ಮಿನ ಮಾತನೂ ಸುಮ್ಮನಿರಲಾರದೇ ಮನೆತುಂಬ ಹರಡುವ ಎಂದೋ ನಾ ತೊಡಿಸಿದ ಕಾಲಂದುಗೆ,
ಉನ್ಮಾದ ಇಳಿದ ಮೇಲಿನ ಸಮ್ಮಾನದ ನೂರು ಮುದ್ದು,
ಸಣ್ಣ ವಿದಾಯಕ್ಕೂ ಕಣ್ಣು ತೋಯುವ ಗಟ್ಟಿ ತಬ್ಬುಗೆ,
ಕಣ್ಣ ಮುದ್ದಿಸುವಾಗ ಉಸಿರಿಗಂಟಿದ ಕಾಡಿಗೆಯ ತಿಳಿಗಂಪು...
ಆಹಾ!!! ಎಷ್ಟೊಂದಿವೆ ಗೊತ್ತಾ,
ನನ್ನ - 
ನಿತ್ಯ ನೈಮಿತ್ಯಕೆ ವಿಲಾಸದ ನವಿರು ನಗೆ ತುಂಬುವ ಭಾವಾನುರಾಗದ ತಿಲ್ಲಾನಗಳು...
___ ರಸರಾಜಿ ಬೆಳಗು - ಬೈಗು... 🫂🫂
&&&

ಅವಳೆದೆಯ ಪ್ರೀತಿ ಬಣ್ಣವ ಎನ್ನ ಕರುಳ ಕನಸ ಕೊನರಿಗಿಷ್ಟು ಬಳಿದು ತನ್ನ ಕುಂಚ ಕಾವ್ಯಕೆ ತಾನೇ ಬೆರಗಾಗುತಾಳೆ ಕನಸಿನೂರ ಪುಟ್ಟ ದೇವತೆ... 
ಬದುಕು ಬಣ್ಣಾ ಬಣ್ಣದ ನಗೆ ಹಬ್ಬದ ಹಾಡಿ...🌈
___ ಮೈಮನಸು ಮಗುವಾಗಿ ಹಬ್ಬವಾಗುವುದು... 🥰

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಐವತ್ತು ಮತ್ತೇಳು.....

ಸ್ಮಶಾನ ಭಸ್ಮ ಲಲಾಟದ ಅಲಂಕಾರವಾಗಿ.....

'ಅಳು' ಅಗಾಧ ಶರಧಿಯೇ ಯಾವತ್ತೂ -
'ನಗು' ಅದರ ವಿಸ್ತಾರದ ನಡುವೆ ಎಲ್ಲೋ ನಾಕು ಹನಿಗಳ ಮೇಲೆ ತೇಲೋ ಹಾಯಿ ದೋಣಿ ಅಷ್ಟೇ...
ಕ್ಷಣಕಾದರೂ ಸಾಗರದ ಎದೆಯನೇ ಸೀಳಿ ಹಾಯಬಲ್ಲೆ ಎಂಬುದೇ ನಗೆ ಹಾಯಿಯ ಸ್ವಂತದೊಂದು ಸಣ್ಣ ಹುಚ್ಚು ಹೆಮ್ಮೆ... 
____ ಬದುಕಿನ ಋಣ ತೀರುವ ತನಕ...
&&&

ಬಂದೇ ಬರುವ ಬೆಳಕಿ(ಗಿ)ಗೆ ತನ್ನೆದೆ ಒಲಿದಂತೆ ಉಲಿಯುವ ಕಾಕ, ಪಿಕ, ಗುಬ್ಬಿ, ಗೋಪಿ ಹಕ್ಕಿಗೊರಳಿನ ಕೂಜನ...
ಅಂಗಳದಂಚಿನ ದೇವ ಕಣಗಿಲೆ, ಅಮ್ಮನ ಕೈಸಾರಣೆಯ ಡೇರೆ, ಸೋಣೆ ಹೂ ಸಂಸಾರ, ತೋಟ, ತೊರೆ ಏರಿಯಲ್ಲಿ ಬಿರಿದ ತೆಂಗು, ಅಡಿಕೆಯ ಸಿಂಗಾರ - ಮನೆ ಬಾಗಿಲಿಗೇ ಬರುವ ಕಂಪಿನುತ್ಸವ...
ಮಳೆ ಕಾಡಿನ ಊರು ಕೇರಿಯಲಿ ತಾನು ಹಬ್ಬಿಸಿದ ನಿತ್ಯ ವಸಂತದ ಬಳ್ಳಿಯ ಸೊಕ್ಕು ಸೊಬಗನು  ನೋಡಿ ನಲಿಯಲು ಮೋಡದ ರಥವೇರಿ ನಿತ್ಯವೂ ತಾನೇ ಬರುವ ನೀಲಿ ಬಾನಿನ ಸಂತ...
___ ಸಾಹಿತ್ಯದ ಹಂಗಿಲ್ಲದ ಹಾಡು ಹಸೆ - ನನ್ನೂರ ಭಾವ ಪಸೆ...
&&&

ಇಲ್ಕೇಳು -
ನಿರೀಕ್ಷಿಸುವುದಾದರೆ ಪ್ರೀತಿಯನ್ನು,
ಘನವಾಗಿ, ಗೌರವದಿಂದ ಪ್ರೀತಿಸಬಲ್ಲವರಿಂದ ನೇಹದ ನೆತ್ತಿಯ ನೇವರಿಕೆಯ ಅಪೇಕ್ಷಿಸಬೇಕು...
ಕಾರಣ -
ಪ್ರೀತಿ ಅಂದ್ರೆ ಅಂಗಡಿಯವ ಚಿಲ್ಲರೆಯ ಬದಲಿಗೆ ಕೊಡುವ ನಾಲ್ಕಾಣೆ ಚಾಕ್ಲೇಟಲ್ಲ ಅಲ್ವಾ...
ಏನ್ಗೊತ್ತಾ -
ಪ್ರೀತಿಯ ಆಳ, ಅಗಲ, ಎತ್ತರ, ಘನತೆ ಗೊತ್ತಿಲ್ಲದ ನಾನೆಂಬ/ನನ್ನಂಥ ಕಾಂಜಿಪೀಂಜಿಗಳಿಂದ ಪ್ರೀತೀನ ಬಯಸಿದ್ರೆ ಅವ್ರು ಅಕ್ಕರೆಯನ್ನೂ ಹೆಣದ ಮೆರವಣಿಗೇಲಿ ಎಸೆವ  ಚಿಲ್ಲರೆಯಾಗಿಸ್ಬಿಡ್ತಾರೆ...
____ ಕಥೆಯಲ್ಲದ ಕಥೆಯ ಮುಖ್ಯ ಪಾತ್ರದ ಹೆಸರು "...ನಾನು..."
&&&

ಸ್ವಾತಂತ್ರ್ಯ - ಸಾಧ್ಯತೆಗಳ ಎದುರು ಆಯ್ಕೆಯ ಸ್ವಾತಂತ್ರ್ಯ ನಿನ್ನದೇ ಆಗಿರಲಿ...
ಸ್ವಾತಂತ್ರ್ಯ - ನಿನ್ನ ನಗುವ ನೀನೇ ಆಳುವ ಸ್ವಾತಂತ್ರ್ಯ ನಿನಗಿರಲಿ...
ಸ್ವಾತಂತ್ರ್ಯ - ಸಹಬಾಳ್ವೆ, ಸಹಚಾರಗಳ ಚಂದ ಸ್ವಾದವನುಂಡು ಬಾಳ್ಮೆ ಮಾಡುವ ಸ್ವಾತಂತ್ರ್ಯ ನಿನ್ನದಾಗಿರಲಿ...
ಗೆಳತೀ - ನಿನ್ನ ದಿನವಂತೆ, ನಿನ್ನಂತೆ ನೀ ನಿನ್ನ ಪ್ರೀತಿಸಿಕೊಳ್ಳುವಂತಾಗಿ, ನಿನಗೆ ನಿನ್ನದೇ ಶುಭ ಸಾಂಗತ್ಯವಿರಲಿ....
ಶುಭಾಶಯವು... 🧚
___08.03.2025
&&&

ಹೆಣ ಭಾರವಾ...?
ಅಥವಾ 
ಹೆಣ ಹೊತ್ತ ಹೆಗಲಿನ ಉರಿ ಉರಿ ನೆನಪು ಹೆಚ್ಚು ಭಾರವಾ...?
ಸುಟ್ಟ ಜಾಗದಲ್ಲಿ ನೆಟ್ಟ ಕಲ್ಲುಗಳು ಉತ್ತರಿಸಬಹುದಾ... 
ಮಸಣದ ಬೆಂಕಿಯೆದುರು ಮೈ ಸುಟ್ಟುಕೊಂಡ ಪ್ರಶ್ನೆಗಳು ಹೆಗಲಿಂದ ಇಳಿಯುವುದೆಂತು / ಎಂದು...?!
ಕಥೆ ಮುಗಿಯುವುದಿಲ್ಲ ಸಾವಿನಲ್ಲೂ ಅಥವಾ ಅಲ್ಲಿಂದಲೇ ಶುರುವಾಗುತ್ತದೆ...!!
____ ಉಸಿರ ಮೈತುಂಬಾ ಎದೆಯ ಚುಚ್ಚುವ ಖಾಲಿತನದ ಮುಳ್ಳುಗಳು...
&&&


ಬದುಕು ತನ್ನ ಕ್ರಿಯೆಗಳ ಮೂಲಕ ಮತ್ತೆ ಮತ್ತೆ ನನ್ನ ನಶ್ವರತೆಯ ಪಾಠ ಹೇಳುತ್ತೆ...
ನಾನೋ ಪ್ರತೀ ಬಾರಿಯೂ ನನ್ನ ಪ್ರತಿಕ್ರಿಯೆಗಳ ಮೂಲಕ ನಗೆಯಾಗಿ ಬದುಕ ಜೀವಿಸುವ ಹಾಡಾಗುತ್ತೇನೆ...
ಸಾವನ್ನೂ ನೆಪಗಳ ಜೊತೆಗೆ ಸಮೀಕರಿಸಿ ಸಮಾಧಾನಗೊಂಡು ಬದುಕ ಸಂಯೋಜಿಸಿ ಸಂಭ್ರಮಿಸುವುದು...
___ ಸ್ಮಶಾನ ಭಸ್ಮ ಲಲಾಟದ ಅಲಂಕಾರವಾಗಿ...
&&&

ವತ್ಸಾ -
ವಿಷಯ ಚಿಕ್ಕದೇ ಇರತ್ತೆ - ಆದ್ರೆ, ಬದುಕು ತುಂಬಾ ದೊಡ್ಡದಿರತ್ತೆ...
ಮತ್ತು 
ಚಿಕ್ಕ ಚಿಕ್ಕ ಸಂಗತಿಗಳನು ಚೊಕ್ಕದಾಗಿ ಹರಿಬಿಡಿಸುವುದರಲ್ಲೇ ಬಾಳಿನ ದೊಡ್ಡತನವೂ ಇರತ್ತೆ...
____ ಸಣ್ಣ ಕಾಳಜಿ - ರೂಢಿಗತ ನಿರ್ಲಕ್ಷ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Saturday, March 1, 2025

ಗೊಂಚಲು - ನಾಕ್ನೂರಾ ಐವತ್ತು ಮತ್ತಾರು.....

ನೇಹದೋಂಕಾರ ಝೇಂಕಾರ ಹಗಲು.....
ಬೆಳಕು ನಗೆಯ ಭಾವ ಭಾಷ್ಯವಾಗಲಿ...
ನೇಹಮಯೀ ಬೆಳಗು... 🤝🍬🫂
ಹಲಸಿನ ಹಸಿ ಹಪ್ಪಳಕೆ ಕಾಯ್ಕೊಬ್ರಿಯ ಜೊತೆ ಮಾಡಿ ಮೆಲ್ಲ ಮೆಲ್ಲುವ ರುಚಿ ಮುಂಬೆಳಗಿನ ನಿನ್ನ ಕನಸು...
ಕಚಗುಳಿಗಳ ಕಾವ್ಯ ಬೆಳಗು... 
ಶುಭದಿನವೇ ಸೈ... 🤝🫂
ಗುಡಿಯ ಅಲಂಕರಿಸಿದ ಘಂಟೆ ಒಂದೇ ಹೊತ್ತಿನಲ್ಲಿ ದೇವನನೂ ಭಕ್ತನನೂ ಕೂಗಿ ಮಾತಿಗೆ ಕೂರಿಸಿದಂತೆ ಈ ಬೆಳಕಿನುದಯ ರಾಗ...
ಪ್ರಾರ್ಥನೆಗೆ ಬಾಗಿದ ಭಕ್ತ, ಹಾರೈಸಲು ಬಾಗಿದ ದೇವ ಇಬ್ಬರೆದೆಯಲೂ ನಾದದೆಚ್ಚರ... ದರ್ಶನ ಬೆಳಗು... ಶುಭದಿನ... 🤝🫂 ಅಜ್ಞಾತ ಹಕ್ಕಿಯ ಹಾಡು, ಹೆಸರಿಲ್ಲದ ಹೂವಿನ ಅಂದ, ಬಯಲನೆಲ್ಲ ತಬ್ಬಿದ ಮಂಜು ಮಣಿಗಳ ಸಾಲು, ಪ್ರಕೃತಿಯ ಪರಿವೇಷದಲಿ ಇನ್ನೂ ಏನೇನೆಲ್ಲಾ ಗಡಿಬಿಡಿಯ ಉದ್ಗಾರಗಳು - ಅಣು ರೇಣು ತೃಣ ಕಾಷ್ಠಗಳೆಲ್ಲಾ ಮೈಮುರಿದೆದ್ದು ಸಂಭ್ರಮದ ಸುಪ್ರಭಾತಕ್ಕೆ ಎಷ್ಟೆಲ್ಲಾ ಬಣ್ಣಗಳು... ಪರಮ ಆಳಸಿ ನನ್ನ ಕಿವಿಯಲ್ಲಿ ಮಾತ್ರ ಕೀಲಿಯ ಗೊಂಬೆಯ ಅದೇ ಶಬ್ದ ಸಂಸಾರ... ಶುಭವಾಳಲಿ ದಿನವನೆಲ್ಲ... 🤝 ನಿದ್ದೆ ಮತ್ತು ಎಚ್ಚರದ ಶಕ್ತಿ ಸಂವಹನವನ್ನು ಚಂದ ನಿಭಾಯಿಸುವ ಕತ್ತಲು ಮತ್ತು ಬೆಳಕಿನ ಅಘೋಷಿತ ಮೈತ್ರಿ - ಚರಾಚರಗಳ ಚಾರಣವ ಕಾಯುವ ಪ್ರಕೃತಿಯ ಪ್ರೀತಿಯ ಅಸೀಮ ದಿವ್ಯತೆ... ಶುಭದಿನ... 🤝🪻 ಇರುಳು ಎದೆ ಮೇಲೆ ಬರೆದ ಕವಿತೆಗಳನು ಹೊಂಬೆಳಗ ಮೊದಲ ಕಿರಣಗಳು ತೊಳೆದ ಕನ್ನಡಿಯಲಿ ಓದಿಕೊಂಡು ಉಲ್ಲಾಸದ ಹೂ ನಗೆಯೊಂದನು ಎತ್ತಿಕೊಂಡೆ... ಹಗಲ ಹಾಡಿ(ದಿ)ಗೀಗ ನಿನ್ನ ಹೆಸರು... ನೇಹದುತ್ಥಾನವೀ ಬೆಳಗು...🤝🫂 ಮಂಜು ಮಳೆ ತೊಳೆದಿಟ್ಟ ಊರ ದಾರಿಯಲಿ ಎಷ್ಟೆಲ್ಲಾ ಏನೆಲ್ಲಾ ನೆನಪುಗಳ ಹೆ(ಗೆ)ಜ್ಜೆ ಗುರುತು.... ಬಯಲ ಮಂಜಿನ ಹನಿ ಕಣ್ಣಲೂ ಇಳಿದಂಗಾಗಿ ಎದೆಯ ಬಟ್ವೆ ಭರ್ತಿಯಾದ ಭಾವ.... ಪ್ರೀತಿ ದ(ಧು)ನಿಯ ತಳಿರ ಬೆಳಗು... ಶುಭದಿನ...‌🤝🫂 ಬೆಳಕಿನ ಬೆನ್ನಿಗಾತು ಕೂತ ಕತ್ತಲು ಈ ಮನುಜ ಜಗದ ದೊಂಬರಾಟ, ನಟನಾ ಚಾತುರ್ಯವ ನೋಡಿ ನಗುವಾಗ ಒಳಗೇ ಕಂಪಿಸುವ ಬಿಡಿ ಬೆಳಗು...🤝 ಬೆಳಕೆಂಬ ಗುರುವಿನ ಶುಭಾಶೀರ್ವಚನದಂತ ಧನ್ಯ ಬೆಳಗು... 🤝 ಒಂದು ಮರುಹುಟ್ಟಿನಂತೆ ತಾಜಾ ತಾಜಾ ಅರಳಿದ ಬೆಳಗು... ಶುಭದಿನ...🪻🫂 ಅಲ್ಲೆಲ್ಲೋ ಊರ ಹೊರಗೆ ಕಾಡು ಕೋಳಿಯ ಸುಪ್ರಭಾತಕ್ಕೆ, ಚಿಟ್ಗುಬ್ಬಿಗಳ ಉಭಯಕುಶಲೋಪರಿ ಬೆರೆತು ಹಿತವಾದ ಗದ್ದಲವಾಗಿ, ಹೂ ಮೊಗ್ಗು ಮೈಮುರಿದು, ಇರುವೆಗಳು ಮನೆವಾರ್ತೆಗೆ ಹೊರಡಲನುವಾಗುವಾಗ, ವಸುಧೆಯ ವಕ್ಷಗಳಿಗೆ ಮೂಗುಜ್ಜುತ್ತಾ ಮಲಗಿದ್ದ ಕೆಂಪು ಮೂತಿಯವನು ಅವಳ ಪ್ರೀತಿಯ ಅವಳಿಗೂ ಇಷ್ಟು ಕೊಡಲೆಂಬಂತೆ ಅವಳ ಕಣ್ಣಲ್ಲಿ ಬೆಳಕ ತುಂಬಿ ಅವಳೊಡಗೂಡಿ ನಕ್ಕಾಗ ಜಗದ ಜ್ಞಾತರೆಲ್ಲಾ ಬೆಳಗಾಯಿತೂ ಅಂದು ಕೈಮುಗಿದರು... ಶುಭದಿನ... ⛅ ನಿನ್ನೆಡೆಗೆ ಹಾಯುವ ನನ್ನ ಕನಸು ಕಂಗಳಿಗೆ ಬೇಷರತ್ತಾಗಿ ಬೆಳಕ ಸುರಿದು ಒಂದು ನೇಹದ ಹಾದಿಗೆ ಇನ್ನೊಂದು ನೇಹದ ಹೆಗಲೀಯುವ ಬಲು ಸೊಬಗ ಬೆಳಗು... ಪ್ರೀತಿ ಪರಿಪಾಕ... ಶುಭದಿನ... 🤝🫂 ಶುಭ ನುಡಿವ ಕೊರವಂಜಿಯ ಹಾದಿಯಲೂ ಇಷ್ಟು ಶುಭವ ಸುರಿಯಲಿ ಹೊಸ ಬೆಳಗು... ನಗೆಯ ಹಾಡಾಗಲಿ ಮಡಿಲು... ಶುಭದಿನ... 🤝🫂 ಮನಸು ಬಯಸುವ ಪ್ರಶಾಂತಿಗೂ, ಬುದ್ಧಿಯ ಅವಿರತ ದೊಂಬರಾಟಕೂ, ನಿದ್ದೆ ಎಚ್ಚರಗಳ ಮೋಹಾ ಮಾಯೆಯ ಕಡೆದು ಒಡೆದು ತೋರುವ ಜಾದೂಗಾರ ಬೆಳಗು... ಶುಭದಿನವೇ ಇರಬಹುದು... 🤝🫂 'ಶುಭಂ' ಎಂದು ಬರೆದಲ್ಲಿಂದ ಇನ್ನೆಲ್ಲಾ ಶುಭವೇ ಎಂಬ ಆವಾಹಿತ ಮುಗ್ಧತೆಯಲ್ಲಿ ನಿರಾಳವಾಗುವ ಪ್ರೇಕ್ಷಕನ ಎದೆಯಲ್ಲಿ ಸಿನ್ಮಾ ಒಂದು ಮುಗಿದ ಕೆಟ್ಟ ಕನಸಿನಂತೆ ಅಥವಾ ಮಧುರ ಪ್ರೇಮ ಕಾವ್ಯದಂತೆ ಕದಲುತ್ತಲೇ ಇರುತ್ತಲ್ಲ ಅಂಥ ವಿಚಿತ್ರ ವಿಸ್ಮಯ ಬೆಳಗು... ಶುಭದಿನ... 🤝🫂 ಒಂದು ಸಣ್ಣ ನಗೆಯ ಹಂಬಲ ಮತ್ತು ಭರವಸೆಯಲಿ ಬಿರಿವ ಎದೆಯ ನೂರು ಕನಸುಗಳ ಕಂಗಳನು ಸಾಂತ್ವನಿಸೋ ಹೊಸ ಹೂ ಬೆಳಕ ಕುಡಿ ಈ ಬೆಳಗು... ಶುಭದಿನ... 🤝🫂 ಬೆಳಗೆಂದರೆ ಸಾವಿರಾರು ಕಲರವಗಳ ಮಾಯಾ ಬಜಾರು... ಪ್ರೀತಿಯ ಪಾನಕ ಹಂಚುತ್ತಾರಲ್ಲಿ ಪುಟಾಣಿ ನಗೆಯ ಅರವಟಿಗೆಯ ತೆರೆದು ಕೂತೋರು... ನೇಹಮಯೀ ಹಗಲು... 🤝🫂 ಅದೇ ಹಳೇಯ ಭಾವಾನುಭಾವಗಳ ಕಿಲುಬುಗಳನೆಲ್ಲ ಹೊಸ ಬೆಳಗ ಬೆಳಕಲ್ಲಿ ತೊಳೆದು ಹೊಳಪಾಗಿಸಿ ಮತ್ತೆ ನಗೆಯ ಲಕೋಟೆಯಲಿಟ್ಟು ನಿನ್ನೆದೆಗೆ ದಾಟಿಸಲೆಳಸುತ್ತೇನೆ... ಪಡೆದ ಪ್ರೀತಿಯ ಸಾಲದ ಮಾಧುರ್ಯ ಕೆಲವು ಕಾಲದ ಮಟ್ಟಿಗೆ ನವೀಕರಣವಾದಂತೆ ಭಾಸ... ಮನಸು ಮನಸುಗಳ ನೇಹದ ಚಂದ ಒಡಂಬಡಿಕೆಗೆ ಸಾಕ್ಷಿಯ ರುಜು ಹಾಕಲು ಅನುಗಾಲವೂ ತಾನು ಜೊತೆಯಿರಬಲ್ಲೆನೆನುವ ಅಂತಃಕರುಣೀ ಬೆಳಗು... ಶುಭದಿನ... 🤝🫂 ದಿನದ ಮೊದಮೊದಲ ಬೆಳಕ ಕಿಡಿಯಿಂದ ನಗೆಯ ಕುಡಿಯೊಂದ ಹಕ್ಕಿನಿಂದೆಂಬಂತೆ ಕಡ ಪಡೆದು ನಾನೇ ಬರೆದುಕೊಂಡ ನನ್ನ ಸುನೀತ ದಿನ ಭವಿಷ್ಯಕೆ ಸಾಕ್ಷಿ ಕನ್ನಡಿಯೊಳಗಿನ ಅರಳು ಕಂಗಳ ಸಂಭ್ರಮದ ಋಜು... ನೊಸಲ ಮೇಲೆ ನಿನ್ನ ಹೆಸರು - ಶುಭವೇ ಒಳಹೊರಗಾಡುವ ಉಸಿರು... ಶುಭದಿನ... 🤝🫂 ನಿಷ್ಕಾರಣ ಪ್ರೀತಿ ಹಂಚಿಕೆಯ/ಸಂಚಿಕೆಯ ಬಗೆಗೆ ಒಂದು ಸಾಲು ಬರೆಯುವ ಹವಣಿಕೆಯಲಿ ಕಣ್ತೆರೆದೆ - ತನ್ನ ಜೊತೆ ನಿನ್ನ ತೋರಿ ನಸು ನಕ್ಕಿತು ಬೆಳಗು... ನೇಹದೋಂಕಾರ ಝೇಂಕಾರ ಹಗಲು... ಶುಭದಿನ... 🤝🫂 ವಸುಧೆಯ ಎದೆ ಮೇಲೆ ಭಾನು ಬರೆವ ಹೊಸ ಪ್ರೇಮ ಗೀತೆ - ಬೆಳಗು... ಪ್ರೀತಿಗೆ ಪ್ರೀತಿಯ(ಯೇ) ಉಡುಗೊರೆ - ದಿನಾಂತಕೆ ಈರ್ವರ ಯೆದೆ ಜೋಳಿಗೆ ತುಂಬಾ ನಗೆಯೇ ನಗೆ... ಶುಭದಿನ... 🤝🫂 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಐವತ್ತು ಮತ್ತೈದು.....

ಊರ ಗಾಂಪರಿಗೆಲ್ಲ ಉಂಡಷ್ಟು ಪ್ರೀತಿ ಫಲ.....

ಬಿರಿದ ಕಂಗಳಲಿ ಬೆಳಗು ಪ್ರೀತಿಯ ತುಂಬಲಿ...
ಸುಡು ಸುಡು ಅಗ್ನಿ ಹಣೆ ಬರಹ... 

ಚಿತಾ ಭಸ್ಮವೇ ಬೋಳೆ ರುದಯದ ಅಲಂಕಾರ... 
ನೂರು ಅಹಂಕಾರಗಳ ತಲೆ ತುಳಿದು ಮಸಣವೇ ಮನೆಯಾಗಿ ಪ್ರೀತಿ ತಾಂಡವ...
ಕೂಡಿ ಹರಿವ ಪ್ರೇಮದ ನಗೆ ಬೆಳದಿಂಗಳಲಿ ಕುಡಿದ ವಿಷವೂ ಅಮೃತ...
ಸೃಷ್ಟಿ ಸಂಭ್ರಮ ದರ್ಶನ ಬೆಳಗು...
ಶುಭಾಶಯ - ಶುಭದಿನ... 📿
&&&

ಇಲ್ಯಾವುದೋ ಬೇಲಿ ಗಿಡದ ಹೂವು - ಗಿಡದಿಂದ ಬೇರ್ಪಡದೇ
ಅದ್ಯಾವುದೋ ಗೋಡೆ ಗೂಡಿನ ದುಂಬಿ - ಗೂಡು ತೊರೆಯದೇ
ಹೀಗೆ ಬಂದು ಹಾಗೆ ಹೋಗಿ ಆಡಿ ಹಾಡಿ ತೂಗಿ ತಬ್ಬಿ
ಹಂಚಿದ್ದು ಹರವಿದ್ದು - 
ಊರ ಗಾಂಪರಿಗೆಲ್ಲ ಉಂಡಷ್ಟು ಪ್ರೀತಿ ಫಲ...
ಹೂ ಅರಳುವ ಸದ್ದನು ದುಂಬಿಯೆದೆ ಬಾಗಿಲಲಿ ಕೂಗಿ ಹೆಳುವ ಶೃಂಗಾರ ಸಿಂಗಾರ ಬೆಳಗು...
ಶುಭದಿನ... 🪻🦋🫂
&&&

ಬೆಳಗು ಹೊಸಿಲ ತುಳಿಯುವ ಹೊತ್ತಲ್ಲಿ ಅವಳೆನ್ನ ಕನಸಿಂದ ಎದ್ದು ಹೋಗುತ್ತಾಳೆ...
ಇರುಳಿಡೀ ಅವಳನೇ ಹೊದ್ದು ಮಲಗಿದ್ದೆನೆಂಬ ಭಾವ ವಿಲಾಸದಲಿ ಮೈಮುರಿಯುತ್ತೇನೆ...
ಬೆಳಕ ಕನ್ನಡಿಯಲೀಗ ಪೋಲಿ ಎದೆಯ ಅವಭೃತ ಸ್ನಾನದ ಕಮ್ಮನೆಯ ನಗು ಮಿನುಗು...
ಶುಭ ಸಾನಿಧ್ಯ - ಶುಭದಿನ... 🧚
&&&

ದ್ಯುತಿಯ ಸಣ್ಣ ಕಿಡಿಯೆದುರೂ ಕರಗಿ ಹೋಗುವ ಕತ್ತಲ ಎದೆಯಲೂ ಬೆಳಕ ಹುಡುಕಾಟವಿದ್ದಂತಿದೆ...
ಅಂತೇ,
ಬೆಳಕು ಸುಡುವಲ್ಲಿ ನೆರಳಾಗುವ ಎತ್ತರ - ಕತ್ತಲಿನೆದೆಯ ಪ್ರೀತಿ ಔದಾರ್ಯವೇ ಆಗಿದೆ...
ಕತ್ತಲ ಲಾಲಿಯಲಿ ತೊಳೆದ ಕಂಗಳಲಿ ಶಾಂತ ಬೆಳಗು...
ಶುಭದಿನ... 🧘🫂
&&&

ಹುಡುಕುವ ಎದೆಗಣ್ಣಿಗೆ ಅಣು ಕಣದಲೆಲ್ಲಾ ಪ್ರೀತಿಯೇ ಕಾಣಲಿ,
ಪ್ರೀತಿಯ ಹಂಚುವ ಪಾಪಚ್ಚಿ ಎದೆಗಳು ಹಾಯುವ ಹಾದೀಲಿ ಬೆಳಕು ಶುಭವನೇ ಸುರಿಯಲಿ...
ವಸಂತ ಸಂಭ್ರಮದ ಆ ಹಾದಿಯಲೊಮ್ಮೆ ನಮ್ಮ ಪ್ರೀತಿಯ ಭೇಟಿಯಾಗಲಿ...
ಶುಭದಿನ... 💞🫂 
&&&

ಥರಾವರಿ ಹೂಗಳ ಮಧ್ಯೆ ತುಳಸೀ ಕುಡಿಯ ಸೇರಿಸಿದಂಗೇ ತುಂಡು ತುಂಡು ಕ್ಷಣ ಕ್ಷಣಗಳ ನಗೆ ಮುಗುಳನೆಲ್ಲ ನಡುನಡುವೆ ಜೊತೆ ಮಾಡಿ ಮಾಲೆ ಕಟ್ಟಿ ದಿನವಿಡೀ ಎಷ್ಟು ಚಂದವಾಯ್ತೂ ಎಂದು ಮತ್ತೆ ವಿಲಾಸದಿ ನಕ್ಕು ಬೀಗುವಾ ನಗೆ ಮೋಹವೇ ಶುಭವು...
ಶುಭದಿನ... 🤝🫂
&&&

ಸುವರ್ಣ ತೇಜದ ಬೆಳಕ ಸಿರಿ ಬಾನು ಭುವಿಯ ಉಡಿ ತುಂಬಿ 
ಹೂವು ದುಂಬಿ ಅನನ್ಯ ಅನ್ಯೋನ್ಯತೆಯಲಿ ಅನುರಾಗವ ಪರಿಚಯಿಸಿಕೊಳ್ಳುವಾಗ
ಅಂದ, ಗಂಧ, ಗಾನವೆಲ್ಲ ಸಾನುರಾಗದಿ ಬಯಲ ಹಾದಿಯ ಗುಂಟ ಊರು ಕೇರಿಗಳಿಗೆ ಪ್ರಣಯಾನುರಾಗ ಪೂಜೆಯ ಸಿಹಿಯ ಹಂಚುತ್ತವೆ...
ಪ್ರೇಮಮಯೀ ಬೆಳಗು... 🤝🫂
&&&

ಕೊಟ್ಟಿಗೆಯ ಮಕ್ಕಳ ಮೈಸವರಿ ಎದೆಯ ಗುಟ್ಟುಗಳ ಹೇಳಿಕೊಳ್ಳುವ ಆಯಂದಿರ ಸೆರಗಿಗಂಟಿದ ಸಗಣಿ ವಾಸನೆ - ಪ್ರೀತಿಯ ನಿಜ ಘಮವಿದ್ದೀತು...
ತಂಬಿಗೆ ಕತ್ತಿನಿಂದ ಏರಿ ಬರುವ ನೊರೆ ಹಾಲಿನ ಸಾವಧಾನದಂತೆ ಬೆಳಕು ಗುಡ್ಡದ ಹೆಗಲೇರುತ್ತದೆ - ಅವಸರದ ಆವೇಷ ಇಲ್ಲದ ಪ್ರೀತಿ ಸಂರಚನೆ...
ಹಳ್ಳಿಗಾಡಿನ ಬೆಳಕಿನ ಬೇರು, ಪ್ರೀತಿಯ ಹೋರು - ಮಣ್ಣ ಮಡಿಲಲ್ಲಿ...
ಬೆಳಗೆಂದರೆ ಪ್ರೀತಿ...
ಶುಭದಿನ... 🤝💞🫂
&&&

ಹುಡುಕುವ ಕಣ್ಣಿಗೆ ಬಣ್ಣವಾಗಿ ಬೆಳಗುವ ಬೆರಗು ಬೆಳಕು...
ಬೆರಗಿನ ಸೌರಭ ಈ ಬೆಳಗು...
ಶುಭದಿನ... 🤝
&&&

ಶುಭವನೇ ಧ್ಯಾನಿಸುತ್ತಾ 
ಧ್ಯಾನಿಸಿದ್ದರ ಸಿದ್ಧಿಯ ನಂಬುತ್ತಾ
ಸಿದ್ಧಿಸಿದ್ದೇ ಶುಭವೆನ್ನುತ್ತಾ
ನಗುವ ಕಾಯ್ದುಕೊಂಡು ಬದುಕಿ ಬಿಡುವ 
ನಿತ್ಯ ಶುಭಾಕಾಂಕ್ಷಿ ಭಾವಲೋಕ...
ಶುಭದಿನ... 🤝
&&&

ಶುಭದ ಕೊಟ್ಟ ಕೊನೆಯ ಹನಿಯಲ್ಲೂ ಇರುವ ನಗೆಯ ಸಾರಕ್ಕೆ ನಮ್ಮದೇ ಹೆಸರಿರಲಿ...
ಶುಭದಿನ... 🫂🤝
&&&

"ನೂರು ನಂಬಿಕೆಗಳ ಹಾಡಿ ನಾನು ನಾನು ಎಂಬ ನಾನು ನೀನು...
ಬೆಳಕಿನ ಎದೆ ಬಗೆದರೆ ಒಂದೇ ಕಿಡಿಯ ನಾನಾ ರೂಪ (ಶಾಪ) ನಾನು ನೀನು..."
ಹೊಸಾ ತೇದಿಯ ಶುಭಾಶಯ - ಶುಭದಿನ... 🤝🫂🍫
&&&

ಮೂಟೆ ಮೂಟೆ ನಗೆ ಚಟಾಕಿಯೂ ಮುಟಿಗೆ ಮೌನದ ಒಗಟ ಒಡೆಯಲು ಹೆಣಗಾಡಬೇಕು...
ಬಯಲ ಬೆಳಗಿದಂತಲ್ಲ ಬೆಳಕಿಗೂ ಗವಿಯೊಳಗೆ ನೇರ ಪ್ರವೇಶವಿಲ್ಲ...
ಮುಚ್ಚಿಟ್ಟ ಭಾವದ ಹುಳಿಯಿಂದ ಎದೆಯೊಳಗೆ ಸಣ್ಣ ಕರೆ, ಅಡಗಿ ಕೂರೋ ಜೀವಕೆಂದೇ ಗುಹೆಯೊಳಗೆ ಚೂರು ಕತ್ತಲು - ಉಳಿದೇ ಬಿಡುತ್ತದೆ...
ಪುಟಾಣಿ ಅರಿವಿನ ಕಿರು ಹಾದಿ ಬೆಳಗು...
ಶುಭದಿನ... 🤝🫂
&&&

ಬೆಳಕು ಸುರಿಯುವ ಸದ್ದಿಗೆ
ಕಂಗಳರಳುವ ಕಾವ್ಯವು
ಭವದ ಭಾವದ ಭೃಂಗಕೆ
ಬೆಳಗು 
ಪ್ರೀತಿ ಹೇಳುವ ಚಂದವು... 
ಶುಭದಿನ... 🤝🫂🪻
&&&

ನನ್ನೊಳಗಿನ ಬೆಳಕಿಗೆ ನಾ ನಿನ್ನ ಹೆಸರಿಟ್ಟು ಕೂಗಿದರೆ ಬೆಳಕು ಪ್ರೀತಿಯಾಗಿ ರೂಪಾಂತರವಾದ ಭಾವ...
ಅಥವಾ 
ಇರಬಹುದು ಪ್ರೀತಿಯೇ ಬೆಳಕಿನ ನಿಜ ರೂಪ...
ಪ್ರೀತಿ ತುಂಬಿದ ಶುಭದಿನ... 🤝🫂
&&&

ಹೊಸತೆಂದರೆ ಹೊಸ ಬೆಳಕು...
ಎಷ್ಟು ಬೆರಗೋ ಅಷ್ಟು ಪ್ರಶ್ನೆಗಳು...
ಉತ್ತರ ಹುಡುಕುವ ಹುಕಿ ಇಲ್ಲದವನೆದೆಯಲೂ ಹುಟ್ಟಿ ಸಾಯುತ್ತವೆ ಹೊಸತೆಂದರೆ ಹೊಸ ಸಾಲು ಸಾಲು ಸವಾಲುಗಳು...
ಪರಿ ಪರಿ ಪ್ರಶ್ನೆಗಳ(ಳೇ) ಹೊಸ ಬೆಳಗು...
ಶುಭದಿನ... 🤝🫂
&&&

ಹೊಸ ಪರಿಚಯಗಳ ಮುನ್ನುಡಿಯಾಗೋ ಸಣ್ಣ ಸಣ್ಣ ವಿದಾಯಗಳು...
ದೇಶ, ಭಾಷೆ, ಭಾವ, ಬೆಳಕು - ಎಲ್ಲ ಎಲ್ಲಾ ಹೊಸ ಪರಿಚಯಗಳೂ ಒಳಿತನೇ ತರಲಿ...
ಶುಭದಿನ... 🤝🫂
&&&

ಇರುಳ ತಬ್ಬಿ ಇಬ್ಬನಿಯ ಮಿಂದ ಇಳೆಯ ತಬ್ಬುವ ಬೆಳಕು
ಅದೇ ಸಮಾ ಆವರ್ತನದಲಿ ಪ್ರೀತಿ ನಿತ್ಯೋತ್ಸವ...
ಪಿಸುನುಡಿಯಲಿ ಹೇಳಿದ ಬಯಲಾಗುವ ಪಾಠ ಬೆಳಗು...
ಶುಭದಿನ... 🤝🫂
&&&

ಬೆಳಕು ಅದೇ ಔದಾರ್ಯದಲಿ ಧಾರೆ ಸುರಿಯುತಿದೆ...
ಅಲ್ಲಿಗೆ -
"ಬದಲಾದದ್ದು ಪಥವಷ್ಟೇ, ಪ್ರೀತಿಯಲ್ಲ..."
ನೇಹದಾ ನಗೆ ಸುಗ್ಗಿ ಸಂಗೀತ ಬೆಳಗು...
ಶುಭಾಶಯ - ಶುಭದಿನ... 🫂🤝💞
&&&

ಬೆಳಕೀವ ಒಳಿತಿನ ದಾರಿ ಕಾಯುತ್ತಾ ಬಿರಿದ ಕಂಗಳಲಿ ಬೆಳಗು ಪ್ರೀತಿಯ ತುಂಬಲಿ...
ಶುಭದಿನ... 🫂🤝
&&&

ಎದೆಯ ತಾಕಿ ನಗೆಯ ನಾಡಿಯ ಮೀಟಲಿ ಬೆಳಗೆಂಬ ಭಾವಗೀತೆ...
ಶುಭದಿನ... 🤝🫂

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Friday, February 7, 2025

ಗೊಂಚಲು - ನಾಕ್ನೂರಾ ಐವತ್ತು ಮತ್ನಾಕು.....

ಇರಬೇಕಿತ್ತು ನೀನು.....



ಕರೆ ಮಾಡಿ ಶುಭವನುಲಿಯಲು ಅವಳ ಜಂಗಮವಾಣಿ ನನ್ನ ಬಳಿಯೇ ಇದೆ...
ವಿಳಾಸವಿಲ್ಲದ ಪತ್ರ ಅವಳ ತಲುಪಬಹುದಾ...!?
ಇಂದು ನಿನ್ನ ಹುಟ್ದಬ್ಬಾನೇ ಅಂದ್ರೆ,
ಬೆಳ್ಬೆಳಗ್ಗೆ ಫೋನ್ ಬಂದದ್ ನೋಡಿ ಎಂತಾ ಆತನಾ ಹೇಳಿ ಹೆದ್ರಕಂಡತ್ತು ಅಂತ ಗೊಣಗ್ತಿದ್ದೋಳು ತನಗೇ ಅಂತ ಸಂಭ್ರಮವ ಬಯಸಿದ್ದೇ ಕಂಡಿಲ್ಲ; ನಿನ್ ಬಳ್ಗಕ್ಕೆಲ್ಲಾ ಎನ್ ಲೆಕ್ದಲ್ಲಿ ಒಂದ್ ಸಣ್ಣ ಚೊಕ್ಲೇಟಾರೂ ಕೊಡ್ಸು ಅಂತಿದ್ದೋಳ ಲೆಕ್ಕದ ಪಟ್ಟಿಯೂ ಅನಾಥ ಈಗ...
ಮಗನ ಹೆಸರ್ಹೇಳಿ ಕರೆ ಮಾಡಿ ಶುಭ ಕೋರುವ ಹುಡ್ಗೀರೆಲ್ಲ ಅವಳ ಭಾವದಲ್ಲಿ ಪಾಪದ ಕೂಸ್ಗೊ - ಸಂಜೆ ಹೊತ್ತಿಗೆ, 'ನಿನ್ನ ಗೆಳತೀರ ಫೋನ್ ಕಾಲ್ದಲ್ಲಿ ಇಂದು ಊಟ ಮಾಡ್ಲೂ ಪುರ್ಸೊತ್ತಿಲ್ಲೆ' ಅನ್ನೋ ಖುಷಿಯ ಆರೋಪ ಬೇರೆ...
ನನ್ನ ಬೈದಷ್ಟೇ ಪ್ರೀತಿಯಲಿ ನನಗಾಗಿ ಅವಳ ದೇವರನೂ ಬೈಯ್ಯಬಲ್ಲವಳು ಬದುಕ ತಲಬಾಗಿಲಲಿ ಹಚ್ಚಿಟ್ಟು ಹೋದ ದೀಪದ ಬೆಳಕಲೇ ಬಾಳ ಬಟ್ಟೆ ನೇಯ್ದುಕೊಳ್ಳುತಿರುವ ನಾನು...
***

ಶಣ್ಣೀ -
ನಿನ್ನ ಹುಟ್ಟನ್ನು ಸಂಭ್ರಮಿಸಲು ನನ್ನಲ್ಲಿ ನೂರು ನೆಪಗಳಿದ್ದರೂ;
ನೀನಿಲ್ಲ -
ನನ್ನೊಡನೆ ನೀನಿಲ್ಲ ಈಗ ಎಂಬ ಒಂದು ಕಾರಣವೇ ಸಾಕು, ನಿನ್ನ ಹುಟ್ಟಿನ ಮೆರವಣಿಗೆಗೆ ನನ್ನಲಿರುವ ನೂರು ಕಾರಣಗಳನೂ ನುಂಗಿ ನೊಣೆಯುತ್ತದೆ - ಸರ್ವ ಬಣ್ಣ ಮಸಿ ನುಂಗಿದಂಗೆ...
ಸಾವು ನೆನಪಾಗದ ಹಾಗೆ ಹುಟ್ಟನು ಹಬ್ಬವಾಗಿಸುವುದು ಹೇಗೆ ಹೇಳೂ - ಸಾವೇ ಎದೆಗೂಡಿನ ಪರಿಚಾರಿಕೆಯಾದಲ್ಲಿ...
ನೀ ಬಿಟ್ಟು ಹೋದ ಖಾಲಿಯನ್ನು ನಿನ್ನ ನೆನಕೆಗಳೂ ತುಂಬಿಕೊಡುತಿಲ್ಲ; ಗಾಯಕ್ಕೆ ಉಪ್ಪು ಸವರಿದ ಹಾಂಗೆ ಖಾಲಿಗೆ ಉರಿ ಹಚ್ಚುತ್ತದೆ ನಿನ್ನ ನೆನಪುಗಳ ಕೇಕೆ...

ಏನ್ಗೊತ್ತಾ -
ಯಾವುದೇ ಹುಟ್ಟಿಗೂ ನಗುವೊಂದನೇ ಹರಸುವುದು ಯಾವತ್ತಿನ ರೂಢಿ ರಾಗ ನಂದು...
ಬರೀ ನಗೆಯ ಚಿತ್ರವಾಗಿ ಗೋಡೆಯನಲಂಕರಿಸಿದ ನಿನಗೆ ಹೇಗೆ ನಗೆಯನು ಶುಭನುಡಿವುದು ಹೇಳು ಇಂದು...

ಆದಾಗ್ಯೂ -
ನಿನ್ನ ನೆನಹುಗಳ ಕನ್ನಡಿಯ ಮುಖ ಒರೆಸಿ ಹೊಸತಾಗಿಸಿಕೊಳ್ಳುವ ಹಂಬಲಕೆ ಈ ತೇದಿ ಒಂದು ಚಂದ ನೆಪ ನೋಡು...
ನಿನ್ನ ಹುಟ್ಟಿನ ದಿನದ ನೆನಪಲ್ಲಿ ನನ್ನ ಹುಟ್ಟಿನ ಅಳುವೊಂದಿದೆ - ನಿನಗೆ ಶುಭಕೋರುವುದೆಂದರೆ ನನಗಾಗಿ ನಾ ಪ್ರಾರ್ಥನೆ ಗೈದಂಗೆ...
***

ಇರಬೇಕಿತ್ತು ನೀನು -
ಪ್ರೀತಿಯಿಂದ ಜಗಳಾಡಲು, ಜಗಳ ಆಡಿ ಪ್ರೀತಿ ಕೇಳಲು...
ನಿಸೂರಾಗಿ ಜಗಳ ಮಾಡಬಹುದಾದ, ಶರಂಪರ ಜಗಳದ ನಂತರವೂ ನಿಸೂರಾಗಿರಬಹುದಾದ ಮಡಿಲು ನಿನ್ನ ಹೊರತು ಬೇರೊಂದಿದ್ದೀತಾ...
ಇರಬೇಕಿತ್ತು ನೀನು -
ಶುಭಕೋರುವ ಖುಷಿಗಾದರೂ...
ಲವ್ಯೂ ಕಣೇ ಸುಂದ್ರೀ... 😘😘
***

ನಕ್ಷತ್ರ ದೀಪವೇ,
ಶುಭವೇ ನೀನು - ನಿನಗೇ ಶುಭ ಕೋರುವ ಹುಂಬ ಪಾಮರನು ನಾನು...
ಇಂತೆಯೇ ನಗೆಯಾಗಿ ಎದೆಯಲುಲಿಯುತ ಉಳಿದುಬಿಡೇ ಹುಡುಗೀ...
ಉಸಿರು ನೀಡಿದ, ಬಾಳನಾಳಿದ ಕರುಳ ಬೇರಿಗೆ ಪ್ರೀತಿ ಪ್ರೀತಿ ಪ್ರೀತಿ......... 🥰😘😘
ಆಯಿ ಅಂಬೋ ಮುದ್ಮುದ್ದು ಪ್ರೀತಿ ಉತ್ಸವ... 💞😘😘
&&&

ಊರ ಗದ್ದೆ ಬಯಲಿನ ಕಳೆಗಳ ನಡುವೆ ಸಡಗರದಿ ಕಾಳು ಹೆಕ್ಕುವ ಹಕ್ಕಿಯ ಸರಬರದಲಿ ಕಿವಿ ಕವಿತೆಯನರಸುವಾಗ ನಿನ್ನ ನೆನಪುಗಳ ಮಂಜು ಹನಿಯಲಿ ಮೋರೆ ತೊಳೆಯುತ್ತೇನೆ...
ಅಕ್ಕ ಹೊಸಿಲ ತೊಳೆದ ಗೋಮಯ ನೀರ ತೇವ ಪಾದಕಂಟುವಾಗ ಮೂರೆಳೆಯ ರಂಗೋಲಿ ನಿನ್ನ ಹಾಡು ಗುನುಗುತ್ತದೆ...
ಅಮ್ಮನೆಂದರೆ ಮಗುವ ಎದೆಯ ಧ್ಯಾನ ಎಂದಂತೆ ಅರಳುವ ತಂಪು ತಂಪು ಮಡಿಲ ಕಾವ್ಯ ಕಂಪಿನ ಬೆಳಗು...
___ ನಿನ್ನ ನೆನಪು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

Saturday, January 25, 2025

ಗೊಂಚಲು - ನಾಕ್ನೂರಾ ಐವತ್ತು ಮತ್ಮೂರು.....

ನೆನಪುಗಳ ಹೊತ್ತು ಊರೆಲ್ಲ ತಿರುಗುತ್ತಿದ್ದೇನೆ.....
(ಭರ್ತಿ ಹದಿನಾಲ್ಕು ತುಂಬಿದ ಭಾವಾಕ್ಷರ ಗುಚ್ಛ.....)  

ಮುಟ್ಟಿದ್ದೆಲ್ಲಾ ಮಣ್ಣಾಗೋದೊಂದು ಕಾಲ
ಮೆಟ್ಟಿದ ಮಣ್ಣೂ ಚಿನ್ನವಾಗೋದೊಂದು ಕಾಲ...

ಭಾವ ಕೋಶ ಖಾಲಿಯಾಗಿದೆ ಅಂದ್ರೆ ಹೊಸತು ತುಂಬಿಕೊಳ್ಳೋಕೆ ಅನುವಾಯ್ತಲ್ಲಾ ಅಂತಾರೆ...
ಆದ್ರೆ,
ನಿದ್ದಂಡಿ ಮುದುಕ ಶೂನ್ಯವ ದಿಟ್ಟಿಸಿ ನಿದ್ದೆಯ ತುಂಬಿಕೊಳ್ಳಬಹುದಷ್ಟೇ...
ಬಣ್ಣದ ಸಾಮ್ಯತೆಯ ಮೇಲೆ ಗುಣವ ಆರೋಪಿಸಿ
ಗದ್ದಲವನೇ ನಾದ ಎಂದು ನಂಬಿಸಲು ಹೆಣಗುತ್ತಾ ನನ್ನ ಬೆನ್ನು ನಾನೇ ತಟ್ಟಿಕೊಂಡು ಬೀಗಬೇಕಷ್ಟೇ...

ಎಷ್ಟೆಲ್ಲಾ ಗೀಚಿಬಿಟ್ಟೆ 
ಒಳಗೆಲ್ಲಾ ಬಣಗುಡುವಾಗ,

ಒಳಹೊರಗು ತುಂಬಿ ತುಳುಕುವಾಗ,
ನುಡಿದದ್ದೆಷ್ಟು, ನುಂಗಿದ್ದೆಷ್ಟು,
ಇರುವುದೆಷ್ಟು, ವೈಭವೀಕರಿಸಿದ್ದೆಷ್ಟು,
ಬರೆದದ್ದೆಲ್ಲಾ ಬರೀ ಭಾವಗಳೇ ಆಗಿರುವಾಗ
ಹಿಂಗೂ ಸತ್ಯ, ಹಂಗೂ ಸತ್ಯ,
ಬರೆವಾಗ ಇದ್ದ ಭಾವ ಓದುವಷ್ಟೊತ್ತಿಗೆ ಇನ್ನೇನೋ ಆಗಿ
ಹೆಂಗೆಂಗೋ ಅನ್ನಿಸುವಾಗ ಯೆಲ್ಲಾನೂ ಮಿಥ್ಯ...
ಸುಳ್ಳು ಪಳ್ಳೆಂದು ಏನನೂ ಗಾಳಿಸದೇ ಬರೆ(ರಿ)ದೇ ಬರ್ದದ್ದು...
ಅಂತಿದ್ದೂ ಓದಿ ಒಲವಿತ್ತವರ ಈ ತಂಪು ಹೊತ್ತಲ್ಲಿ ನೆನೆಯಬೇಕು ನಾನು...

ಮೊಗವ ತೋರುವ ಕನ್ನಡಿ ಅಂತರಂಗವ ಬಿಂಬಿಸುವುದಿಲ್ಲ...
ಎದೆಯ ಓದಲು ಬರೀ ಬೆಳಕು ಸಾಲುವುದಿಲ್ಲ...
ಕನ್ನಡಿಗೂ ಬೇಲಿಯುಂಟು, ಬೆಳಕಿಗೂ ಸೋಲುಂಟು - ನಾ ತೂರಿದ್ದಷ್ಟನ್ನೇ ಅವು ತೋರುವುದು...
ಅಲ್ಲಿಗೆ,
ಎದೆಯ ಒಗಟು ಒಡೆಯಲು ಎದೆ ಎದೆಗಳ ಭಾವ ಬಿಳಲು ಬೆಸೆಯಬೇಕು...
ಈ ಹೊತ್ತು 
ಇಲ್ಲಿಯ ಈ ಅಕ್ಷರ ಆರಾಧನೆಯಿಂದ ಬೆಸೆದ ಭಾವ ಬಂಧಗಳ ಮನಸಾ ನೆನೆಯುತ್ತೇನೆ...
ಅಂಥ ನೀವುಗಳೇ,
ಈ ಎದೆಯ ಸಂದೂಕದ ಕರಗಲಾರದ ಆಸ್ತಿ - 
ಗಳಿಕೆ, ಉಳಿಕೆಯ ನಿಧಿಗಳಲ್ಲಿ ಹೊಳಪು ಮಾಸದ ಪ್ರೀತಿ ಸ್ನೇಹದ ನಗೆಯು...

ಇಬ್ಬರೂ ಒಬ್ಬರ ಒಳಿತಿಗೊಬ್ಬರು ಮನಸಾರೆ ಕಾಯುವ, ಬೇಯುವ ಆಪ್ತ ಒಡನಾಟದ ಬಂಧಗಳೆಲ್ಲವೂ ಗೆಳೆತನವೇ...
___ ಇನ್ನಷ್ಟು ಮತ್ತಷ್ಟು ಹಬ್ಬಿ ತಬ್ಬಲಿ ರುದಯ ರುದಯಗಳ ಭಾವಾನುಬಂಧ - ಅಕ್ಷರ ದಾಸೋಹದ ನುಡಿ ಬಂಧದಿಂದ........ 🤝

&&&

ಮೂರು ವರುಷದ ಹಿಂದೆ 
ಆ ಸಂಕ್ರಾಂತಿಯ ಸಂಜೆ
ಅವಳು ಕೊಡಿಸಿ ಹೋದ ಬಂಡಿ... "🛵"
___ ನೆನಪುಗಳ ಹೊತ್ತು ಊರೆಲ್ಲ ತಿರುಗುತ್ತಿದ್ದೇನೆ...


&&&

ತುಂಬಾ ಸಭ್ಯನಾದ ದೇವರ ಸಂಘ ರುಚಿಸದೂ ಎಂದೆ
ಆ ಮಾತ್ರಕ್ಕೆ 
ದೆವ್ವದ ಸಾಂಗತ್ಯಕೆ ಮೀಸಲಾದವನೂ ಅಂತೇನಲ್ಲ...
"ಮನುಷ್ಯನಾಗುವ ಹಂಬಲವಿದೆ - ಆ ಹಾದಿಯ ಹುಡುಕಾಟವೂ ಇದೆ..."
___ ಜೊತೆಗಿರು...
&&&

ನಿನ್ನೆದುರು, ನನಗೆ ನಾನೇ ಚಂದ ಕಾಣುವಷ್ಟು / ಕಾಣುವಂತೆ ನಗಬಲ್ಲೆನಾದರೆ / ನಗಬಲ್ಲಷ್ಟು ಕಾಲ ಎಂಥಾ ಚಂದ ನಿನ್ನಾss ನೇಹಾನುಬಂಧ...

ಕೊಡುವ ಕೈಯ್ಯ ಔದಾರ್ಯದಲ್ಲಿಯಷ್ಟೇ ಅಥವಾ ಚೂರು ಮಿಗಿಲೇ ಇರಬಹುದು ಕೊಟ್ಟಂತೆಯೇ ಪಡೆವ, ಪಡೆದು ಸಲಹುವ ಯೆದೆ ಪಾತ್ರೆಯ ಸಂಯಮದಲ್ಲಿ ಪ್ರೀತಿ ಜೀವಂತ...
&&&

ವತ್ಸಾ -
ಎಲ್ಲವೂ ನೀನೇ ಅಂದವರದ್ದೂ ಎಲ್ಲವನ್ನೂ ಆವರಿಸುವ ಹಠಕ್ಕೆ/ಚಟಕ್ಕೆ ಬೀಳಬಾರದು...
ಅವರೆಂದಾದರೂ ಲೋಕಾಭಿರಾಮದಲಿ "ಎಲ್ಲ ಸಾಕಾಗಿದೆ" ಅಂದರೂ "ನಾನೂನಾ" ಅನ್ನೋ ಪ್ರಶ್ನೆ ನಮ್ಮೊಳಗೆ ಹುಟ್ಟಿಬಿಡುತ್ತೆ...
___ ಅಲ್ಲಿಗಾಕಥೆ ಮುಗಿಯಿತು...
&&&

ಕರುಳ ಪ್ರೀತಿ ಕಾರುಣ್ಯವೇ -
ಜೀವ ಅನಾಥವಾದರೆ ಉಸಿರೇನೋ ಉಳಿದೀತು - ಭಾವ ನಿಸ್ತಂತುವಾದರೆ ರುದಯ ಹೇಗೆ ತಡೆದೀತು...
ಸುಡು ಸುಡುವ ಶಾಪದಂತಾ ಕತ್ತಲನ್ನಾದರೂ ಕಣ್ಣ ಹನಿಯ ಬಸಿದಾದರೂ ದಾಟಿಬಿಟ್ಟೇನು - ಕಾರಣವಿಲ್ಲದೆಯೂ ಕಾರಣ ಕೇಳುವ, ತುಂಬಿದ ಕಂಗಳಿಗೂ ನಗೆಯ ಒಡ್ಡು ಕಟ್ಟಬೇಕಾದ ಅಚ್ಚ ಬೆಳಕಲ್ಲಿ ನೀ ಕೈಕೊಡವಿಬಿಟ್ಟರೆ ಉಳಿದೆನಾದರೂ ಹೇಗೆ ನಾನು...
___ ಅರಿವೆಲ್ಲ ಮರುಳೂ ಅನ್ನಿಸುವಾಗ...
&&&

ವತ್ಸಾ -
ಎಲ್ಲೆಡೆಯೂ ಕೈಲಾದಷ್ಟು ಒಳಿತನ್ನೇ ಮಾಡು / ಆಡು...
ಆದ್ರೆ,
ಒಳ್ಳೆಯವನಾಗೋ ಹಪಹಪಿ ಬೇಡ ಕಣೋ - ಅವರಿವರ ಕಣ್ಣಲ್ಲಿ...
ಯಾಕೇಂದ್ರೆ,
ಚಂದವ ಕಾಣುವ ಕಂಗಳಲಿ ನಿನ್ನೆದೆಯ ಪ್ರೀತಿ, ಕಾಳಜಿಯ ಮಾಧುರ್ಯವಷ್ಟೇ ಹೊಳೆಯುತ್ತೆ - ಹುಳುಕನ್ನು ಹುಡುಕುವ ಕಣ್ಣಿಗೆ ನೀನೆಂದಿಗೂ ಹಾದಿಗೆದುರಾದ ಅಪಶಕುನವೇ...
ಹಾಗೆಂದೇ,
ನಿನ್ನಂತರಂಗದ ಕನ್ನಡಿಗಷ್ಟೇ ನೀ ಉತ್ತರದಾಯಿಯಾದರೆ ಸಾಕು ನೋಡು...
ಕೊಟ್ಟ, ಕೊಡುವ ಪ್ರೀತಿಯಿಂದ ನಿರೀಕ್ಷೆ ಸಲ್ಲದು - ಪಡೆದ, ಸಿಗುವ ಪ್ರೀತಿಯೆಡೆಗೆ ನಿರ್ಲಕ್ಷ್ಯ ಕೂಡದು...
___ ನಿನ್ನಿಂದ ನಿನ್ನ ಒಳಿತೆಂದರೆ ಅಷ್ಟೇ...
&&&

ಅದೆಲ್ಲಾ ಗೊತ್ತಿಲ್ಲ ನಂಗೆ........
ಕಳೆದು ಹೋದ ಅವಳು, ಹುಟ್ಟನೇ ಅಣಕಿಸುವ ಎದೆಯ ಬಾವು, ಇಷ್ಟು ದೂರ ನಡೆದು ಬಂದ ಅದರ ಕಾವು, ಜೊತೆಯಾಗಿ ಜೊತೆಗುಳಿವ ನೆನಪುಗಳು, ಹಿತವಾದ ಕನಸುಗಳ ರುದಯ ಸ್ಪರ್ಷ, ಇರುವಿಕೆಯೊಂದರಿಂದಲೇ ಇಹದೆಲ್ಲ ಆಗುಹೋಗುಗಳಿಗೆ ಹೆಗಲ ಸಾಂತ್ವನವಾಗೋ ಜೀವ-ಭಾವಗಳ ಜೀವಂತ ರೂಹುಗಳಾದ ನೀವುಗಳು...
ಆಹ್...!!! 
ಈ ಬದುಕಿನ ಕಾರುಣ್ಯ ಬಲು ದೊಡ್ಡದು ಹಾಗೂ ಎಷ್ಟು ವಿಚಿತ್ರ...!! 
ಅಂಗಳದ ಚರಮಗೀತೆಗೆ ಒಳಮನೆಯ ತೊಟ್ಟಿಲ ಲಾಲಿ ಉತ್ತರವಾಗುತ್ತದೆ ಅಥವಾ ಸಮಾ ಉಲ್ಟಾ...
ವೈರುಧ್ಯಗಳನುಂಡು ಅನುಭವಗಳ ಗೊರಸು ತುಳಿದು ತುಳಿದೇ ಕರುಳೀಗ ಹೂಡಿಟ್ಟ ಹಸಿ ನೆಲ - ಎಂತ ಬಿತ್ತಿದರೂ ಫಲವಾಗಿ ಪ್ರೀತಿ ಪೈರು - ನಗೆ ಕಾಳು ತುಂಬಿ ತುಳುಕೋ ಯೆದೆಯ ಹಗೇವು...
ಹಾಗೆಂದೇ, 
ಈ ಹುಟ್ಟು-ಸಾವಿನ ಹಾದಿ ನಂಗೇಂತ ಎತ್ತಿ ಕೊಟ್ಟ ಎಲ್ಲವನ್ನೂ ಅಪಾರ ಪ್ರೀತಿಯಿಂದ ಎದೆಯ ಬಗಲ ಚೀಲದಲಿ ತುಂಬಿಕೊಂಬುದ ಕಲಿತಿದ್ದೇನೆ ಮತ್ತು ಅದಾಗಿ ಹಾದಿ ಹಾಯುವಾಗಿನ ಎಲ್ಲಾ ಸುಂಕಗಳನೂ ಕಟ್ಟಿಯೂ ಈ ತೊಗಲ ಘಟದಲಿನ್ನೂ ಉಸಿರ ಘಟ್ಟಿ ಬಾಕಿಯಿದೆ...
ಅಡಿಗಡಿಗೆ ಮತ್ತದೇ ಮಾತು ಪಕ್ಕಾ ಆಗುತ್ತದೆ - ಇರುವಿಕೆಯೊಂದರಿಂದಲೇ ಇಹದೆಲ್ಲ ಆಗುಹೋಗುಗಳಿಗೆ ಹೆಗಲ ಸಾಂತ್ವನವಾಗೋ ಜೀವ-ಭಾವಗಳ ಜೀವಂತ ರೂಹುಗಳಾದ ನೀವುಗಳು; ಮೂರುತಿಯ ಪೂಜಿಸಿ ದೇವರ ಕಂಡಂತೆ - ನೇಹಿ ಮಡಿಲುಗಳಿಗೆ ಧನ್ಯವಾದವ ಹೇಳಿದರೆ ಇಡೀ ಬದುಕಿಗೇ ಹೇಳಿದಂಗೆ ಲೆಕ್ಕ...
___ ಪ್ರೀತಿಯಿರಲಿ ಬದುಕೇ - ವಿಶ್ವಾಸ ವೃದ್ಧಿಸಲಿ.....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)