Thursday, October 9, 2014

ಗೊಂಚಲು - ಒಂದು ನೂರಾ ಮೂವತ್ಮೂರು.....

ಅರ್ಥವಿದ್ದೀತೆನಿಸದ ಅಪೂರ್ಣ ಭಾವಗಳು.....
(ಭಾವಕ್ಕೆ ಬದ್ಧನಾಗಿರಲಾಗದವನ ಅಡ್ನಾಡಿ ಭಾವಗಳು...)

ಬಿಡಿ ಬಿಡಿಯಾದ ಥರ ಥರದ ಹೂವುಗಳನು ಆಯ್ದು ಒಂದೆ ದಾರದಲಿ ಚಕಚಕನೆ ಕಟ್ಟಿ ಮಾಲೆ ಮಾಡುವ ಆ ಹೂವು ಮಾರುವ ಹೂವಂಥ ಹುಡುಗಿಯ ಅತ್ತಿತ್ತ ಓಲಾಡುವ ಕಪ್ಪು ಕಂಗಳಲಿ ಬಣ್ಣ ಬಣ್ಣದ ಕನಸುಗಳ ಮಾಲೆ ಇರುವಂತಿದೆ...
ಸುರಿವ ಬಿಸಿಲಿಗೆ ತನ್ನ ಮುಖ ಬಾಡಿದರೂ ಹೂ ಬಾಡದಿರುವಂತೆ ನೀರ ಸಿಂಪಡಿಸೋ ಅವಳ ಕೈಗಳಲ್ಲಿ ನಂಗೆ ಬದುಕಿನೆಡೆಗಿನ ಅವಳ ಪ್ರೀತಿಯ ತೀವ್ರತೆ ಕಾಣುತ್ತದೆ...
ಹೂವ ಕಟ್ಟುತ್ತ ಕಟ್ಟುತ್ತಲೇ ಒರಟಾದ ಅವಳ ಬೆರಳುಗಳಲ್ಲಿ ಬದುಕ ಮಧುರವಾಗಿ ಕಟ್ಟಿಕೊಳ್ಳೊ ಮುಚ್ಚಟೆಯ ಹಂಬಲದ ಹಾಡಿರುವಂತಿದೆ...
ಹೂವ ಮಾರಿ ಕನಸುಗಳ ಕೊಂಡು ಜೋಪಾನ ಮಾಡೋ ಆ ಹುಡುಗಿ ನನ್ನಲ್ಲಿ ನನ್ನ ಕಪ್ಪು ಹುಡುಗಿಯಷ್ಟೇ ಅಕ್ಕರೆಯ ಉಕ್ಕಿಸುತ್ತಾಳೆ...
ಅವಳ ಕಂಗಳಲ್ಲಿನ ಕನಸುಗಳಿಗೆ ಬೆಳೆದು ಬಾಳಲು, ಬೆಳೆಯುವಲ್ಲಿ ಮತ್ತು ಬಾಳುವಲ್ಲಿನ ಕಾಡಿನ ಸ್ವಾತಂತ್ರ‍್ಯ ಹಾಗೂ ಉದ್ಯಾನವನಕೆ ಸಿಗುವ ಆರೈಕೆ ಎರಡೂ ಸಿಗಲಿ ಎಂಬುವುದೆನ್ನ ಹಾರೈಕೆ...

***

ಸ್ನೇಹವೇ -
ಮನದ ಸುತ್ತ ಅಷ್ಟು ಭದ್ರವಾಗಿ ಕಟ್ಟಿಕೊಂಡ ನಾನೆಂಬ ನನ್ನಹಮ್ಮಿನ ಕೋಟೆ ನಿನ್ನ ಒಂದೇ ಒಂದು ಮುಗುಳ್ನಗೆಯ ನೆನಪಿನ ದಾಳಿಗೆ ಕುರುಹೂ ಇಲ್ಲದಂತೆ ಮುರಿದು ಬೀಳುತ್ತೆ ಪ್ರತಿ ಬಾರಿಯೂ...
ಅರಿವಾಗುತಿದೆ ಈಗೀಗ ಒಳಗಿನ ದಂಗೆಯ ಮೆಟ್ಟುವುದಷ್ಟು ಸುಲಭವಲ್ಲ...
ಕತ್ತಿ ಹಿಡಿದ ಕೈಯ ಕತ್ತರಿಸಿ ಗೆದ್ದಷ್ಟು ಸುಲಭವಲ್ಲ, ಹೂವ ಹಿಡಿದು ಎದುರು ನಿಂತ ಕೈಯ ಕಿರುಬೆರಳನೂ ಸೋಕದೇ ನಿಲ್ಲುವುದು ಅಥವಾ ಆ ಕೈಯ ಕುಲುಕಿ ಸಲಹುವುದು...
ಪ್ರೀತಿಯ ಹೂಗಿಡವ ನೆಡುವಾಸೆಯ ಪಡಬೇಡಿ ಭಾವಜೀವಗಳೇ ನೀರುಣಿಸಿ ಸಲಹಲಾರದ ಬರಡು ನೆಲ ನನ್ನೀ ಮನಸು...
ಹೊರಕಾಂಬುದೆಲ್ಲ ಒಳಗಿರುವುದಿಲ್ಲ...
ಒಳಗಿರಿವುದನೇ ಹೊರಗೂ ತೋರಿಯೂ ಪ್ರೀತಿಯ ಗೆಲ್ಲುವುದು ನನ್ನಂಥವರಿಗಲ್ಲ...
ಎಷ್ಟು ಹೂಗಿಡಗಳು ಬಾಡಿದವೋ ನನ್ನ ನಿಷ್ಠುರ ಭಾವಹೀನತೆಯ ಮನದ ಬಯಲಲಿ ಉಸಿರಾಡೋ ಆಸೆಗೆ ಬಿದ್ದು...
ಅರಳಿ ನಗುವಾಸೆಯ ಸ್ನೇಹಗಳೇ ದೂರವೇ ಇದ್ದುಬಿಡಿ ಮರಳುಗಾಡಿದು ನನ್ನ ಮನಸು - ಹಬ್ಬಿ ಹರಡಲು ದಕ್ಕಲಿ ನಿಮಗೆಲ್ಲ ಮಲೆನಾಡ ಕಾಡಲೊಂದು ತಾವು...

***

ಕೂಸೇ -
ಕೊಳೆತ ಕನಸುಗಳ ಗಬ್ಬು ನಾರುವ ಮನದ ಬೀದಿಯಲಿ ಅರೆ ಹುಚ್ಚ ಕುನ್ನಿಯಂತೆ ಅಂಡಲೆಯುವ ಅಳಿದುಳಿದ ಅತೃಪ್ತ ಭಾವಗಳನೆಲ್ಲ ನಿರ್ಭಾವದ ಮಬ್ಬುಗಣ್ಣಲ್ಲಿ ದಿಟ್ಟಿಸುತ್ತ ಕೂತವನು ನಾನು...
ನೀನೋ ಅಂದ ಗಂಧಗಳ ಆಯಸ್ಸು ಮುಗಿಯುತಿರೋ ಅದೇ ಭಾವಗಳನು ನನಗೆ ಕೊಡು; ಯಾರೋ ಭಗವಂತನ ಪ್ರಸಾದವೆಂಬಂತೆ ದಂಡೆಯಾಗಿಸಿ ಮುಡಿಗೆ ಮುಡಿದು ನಗುತ್ತೇನೆನ್ನುತ್ತೀಯ...
ಗೊತ್ತು ನಿನಗೂ ಹೂವೆಂದೂ ಎರಡನೇ ಹಗಲನ್ನು ಕಂಡದ್ದಿಲ್ಲ...
ಅಂತೆಯೇ ನನ್ನೊಳಗೆ ಜೀವ ತಳೆದ ಒಂದೇ ಒಂದು ಕನಸು ಕೂಡ ಹಗಲಲ್ಲಿ ನಗದೇ ದಶಕಗಳೇ ಕಳೆಯುತ್ತ ಬಂದವು...
ಹುರಿದು ಮುಕ್ಕುವ ವಾಸ್ತವಗಳು ಹಗಲಿಗೆ ಎದೆಕೊಟ್ಟು ನಿಲ್ಲದಂತೆ ಬಡಿದು ಮಲಗಿಸಿರುವಾಗ ಯುದ್ಧಕ್ಕೆ ಹುರಿಗೊಳಿಸೋ ಮಾತಾಡುತ್ತೀಯ...
ಕತ್ತಲನೇ ಉಸಿರಾಡುವವಗೆ ಹೊಸ ಹಗಲ ತೋರುವೆನೆಂಬ ನಿನ್ನ ಹುಂಬ ಧೈರ್ಯಕೆ ಏನೆನ್ನಲಿ...
ಹೋಗಲಿ ಭಾವಗಳಾದರೂ ಏಕೀಭವಿಸುತ್ತಾವಾ ಅಂದರೆ ಅದೂ ಇಲ್ಲ...
ನೀನು ಮನಸನ್ನು ಮುದ್ದಿಸು ಅನ್ನುತ್ತೀಯ - ನಾನೋ ದೇಹದ ಮೇಲೆ ಕಣ್ಣು ನೆಟ್ಟು ಕೂತ ಮೃಗ...
ಭಾವಗಳೇ ನೋವ ಕಳೆವ ನಲಿವ ಬೆಳೆವ ಜೀವ ಸೆಲೆ ಎನ್ನುವ ನೀನು - ನಿರ್ಭಾವವೇ ಬದುಕಿನೋಘದ ಮೂಲ ಸೆಲೆ ಎಂಬುವ ನಾನು...
ನಾನೋ ಮಿತಿಗಳ ಹಂಗಿಲ್ಲದೆ ಸುಖಗಳ ಸವಿಯನರಸಿ ಹೊಂಟ ಪುಂಡು ಮನಸಿನ ಮಹಾ ವ್ಯಾಮೋಹಿ - ನೀನಾದರೋ ನಿನ್ನ ಮತ್ತು ನೀನಿರೋ ಸಮಾಜದ ಮಿತಿಗಳೊಳಗೇ ಆನಂದವ ತುಂಬಿಕೊಳ್ಳ ಬಯಸೋ ಮುಚ್ಚಟೆಯ ಮೃದು ಮನಸಿನ ನಿರ್ಮೋಹಿ...  
ಇಷ್ಟಾಗಿಯೂ ಮುದಿ ಸೂಳೆಯೊಬ್ಬಳು ಮಗುವ ಹಡೆದಂತೆ ಕನಸಾದದ್ದನ್ನು ಊರಿಗೆಲ್ಲ ಹೇಳಿಕೊಂಡು ಸಂಭ್ರಮಿಸಿದಂತೆ ನಿನ್ನ ಪ್ರೇಮವ ಕೂಗಿ ಕೂಗಿ ಸಂಭ್ರಮಿಸುತ್ತೇನೆ...
ಕೊಡಲು ನನ್ನಲಿ ಒಂದಿನಿತು ಪ್ರೇಮವಿಲ್ಲ - ನಿನ್ನ ಭಾವವ ಸಲಹಿ ಕಾಯಲು ಮನದಿ ತಾವೂ ಇಲ್ಲ...
ಪ್ರೇಮ ಹುಟ್ಟದ, ಕಾಮ ಸಾಯದ ಹುಚ್ಚಾಟದ ಗಂಡು ಕರಡಿ ನಾನು...
ಆದರೂ ನಿನ್ನ ಮಡಿಲಿಂದ ದೂರನಿಲ್ಲಲಾರದ ಸ್ವಾರ್ಥ ನನ್ನದು - ಪ್ರೇಮವಿಲ್ಲದ, ಮಿತಿಗಳೂ ಇಲ್ಲದ ಸ್ನೇಹವ ಬೇಡುತ್ತ ನಿಲ್ಲುತ್ತೇನೆ ...
ನನ್ನ ನಾಲಿಗೆಯ ಸ್ವಾರ್ಥದ ಜೊಲ್ಲಿನ ಒಣ ಅಕ್ಕರೆಯ ಮಾತುಗಳು ನಿನ್ನ ಬದುಕ ಬಲಿ ತೆಗೆದುಕೊಳ್ಳದಂತೆ ನಿನ್ನನು ನೀನೇ ಕಾಯ್ದುಕೊಳ್ಳಬೇಕೀಗ...
ಪುಟ್ಟಾ - ಪ್ರೇಮಕ್ಕೆ ಭಾವಗಳ ಸಮರ್ಪಿಸಬಹುದೇನೋ ಆದರೆ ಬದುಕನ್ನಲ್ಲ ಕಣೋ...
ಬದುಕ ನಾವೆ ತೇಲುತ್ತಲೇ ಇರಬೇಕು ಪ್ರೇಮಜಲದ ಮಂದಾಕಿನಿಯ ಮೇಲೆ...
ದಕ್ಕದ ಪ್ರೇಮಿಯ ತೊರೆದುಬಿಡು - ಪ್ರೇಮಭಾವವ ಸಾಯಗೊಡದೆ ಬಚ್ಚಿಟ್ಟುಕೊಂಡು...
ಬದುಕ ಅದಿರುವಂತೆಯೇ ತಬ್ಬಿಕೋ - ನೀ ಬಯಸುವಂತೆ ಬದುಕು ಬಗ್ಗಲ್ಲವೆಂದಾದಾಗ...
ಸಮರ್ಪಣೆ ಬದುಕಿನೆಡೆಗಿರಲಿ - ಪ್ರೇಮಿ ಬದುಕಿನೊಂದು ಮಧುರ ಯಾತನೆಯಾಗಿ ನೆನಪಿನ ಕಣಜದ ಒಳಮನೆಗೆ ಸೇರಲಿ...
ಹೊಸ ಪ್ರೇಮ ಆಡಿ ನಗಲಿ ಮನದರಮನೆಯ ಅಂಗಳದಲಿ...
ಶುಭಾಶಯವು ನಿನಗೆ...

***

ಉರಿವ ಕಾರಿರುಳ ಗರ್ಭದಲಿ ನೆನಪುಗಳನೆಲ್ಲಾ ಸುಟ್ಟು ಅಂತ್ಯಕ್ರಿಯೆ ಮಾಡಬೇಕಿದೆ - ಮತ್ತೆಂದಿಗೂ ಎದ್ದು ಬಂದು ಕಾಡದಂತೆ...
ಜತೆಗೊಂದಿಷ್ಟು ಕೈಗೂಡದೇ ಕರುಳ ಕೊರೆಯುವ, ಸದಾ ಅಶಾಂತ ಅಲೆಗಳನೆಬ್ಬಿಸಿ ಕಣ್ಣ ಕೊಳವ ಬಗ್ಗಡವಾಗಿಸುವ ಕನಸುಗಳದೂ ದಹನವಾಗಬೇಕಿದೆ ಅದೇ ಚಿತೆಯಲ್ಲಿ...
ಕಾಯುತಿದೆ ಮನಸ ಕಣ್ಣು - ನೆನಪು ಕನಸುಗಳ ಹಂಗಿಲ್ಲದ ಪ್ರಶಾಂತ ಇರುಳ ಸಾಂಗತ್ಯಕ್ಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)