Friday, March 13, 2020

ಗೊಂಚಲು - ಮುನ್ನೂರಿಪ್ಪತ್ತೇಳು.....

ನೀಲಿ ನೀಲಿ ಕನಸು..... 

ಬಿಸಿ ಉಸಿರಿನೊಡಗೂಡಿ ತಂಪು ಬೆಳದಿಂಗಳೂ ಬರಿಮೈ ಬೆಂಕಿಯಲಿ ಹಾಯುವ ನಟ್ಟಿರುಳ ಸೊಬಗು - ಬಿಸಿಲ ಮಚ್ಚಿನ ಏಕಾಂತದಲಿ ಕಾಂತಾಕಾಂತೆ ಉತ್ಕಂಠ ಪ್ರಣಯ ಸಂಹಿತೆ...
ಮೈಯ್ಯ ಯಾವ ತಿರುವಲ್ಲೂ ಚೂರೇ ಚೂರೂ ಹಸಿವು ಬಾಕಿ ಉಳಿಯದ ಹಾಗೆ ಅಡಿ ಮುಡಿ ಹಿಡಿ ಹಿಡಿ ಆವರಿಸಿ ಜೀವತಂತುಗಳ ಮೀಟಿ ಚೆಲುವನುಂಡು ಸುಖವನುಣಿಸಿ ನುಲಿಸಿ ನಲಿವ ಕಾಂಕ್ಷೆಯ ಕುದಿಯಲ್ಲಿ ಕರಗಿ ವಿವಶವಾಗುವ ಜೀವಭಾವೋತ್ಸವ ರಾಗ ಸಂಯೋಗ...
ಸುಖದ ಸವಿ ಸುಸ್ತಿನಲಿ ತೂಗುವ ಮತ್ತ ಮುಂಜಾವಿನ ಕಣ್ಣ ಸರಸಿಯಲಿ ತೇಲುವ ಪ್ರೇಮ ದೀಪ...
#ನೀಲಿ_ನೀಲಿ_ಕನಸಿನಂತಃಪುರದ_ಬೆಚ್ಚಾನೆ_ಬೆಳಕು...
⇍↹⇏

ಹೆಸರಿಡದ ಭಾವ ದಿವ್ಯವೇ - ಕುದಿ ಉಸಿರ ಕಾವ್ಯವೇ...
ಚಕೋರ ಕಣ್ಣಿನಾಳದ ಪಿಳಿಪಿಳಿ ಒಗಟು - ಆಸೆ ಪಾದದ ಬೆರಳ ಸಂಧಿಯ ಹಸಿಮಣ್ಣ ಜಿಗುಟು...
ಹೆಡ್ಡ ನಾನು - ಅರಿವಾಗದೆನಗೆ ಅಡ್ಡಡ್ಡ ಮಾತು...
ನೇರಾನೆ ಹೇಳು - ಒಳಗಿಳಿವಂಗೆ ಕಣ್ಣಲ್ಲಿ ಕೂತು...
ನನಗಲ್ಲ ಎಂಬಂತೆ ಹೇಳಿ - ಹೇಳಿಯೂ ಹೇಳದಂತ ಚಾಳಿ...
ಕದಡಿದ್ದು ಸಾಕು ಈ ಭಾವದೊಡಲ ಕೇಳಿ - ನಿನ್ನೀ ವರಸೆಯ ಧಾಳಿ...
#ಎದೆಗುದಿ...
⇍↹⇏

ಬೇಲಿಸಾಲಿನ ಹೂವಂತೆ ಅರಳೋ ಕಾಲ್ಹಾದಿ ಬದಿಯ ಅಜ್ಞಾತ ನಗುವೊಂದು ನನ್ನ ಇಡೀ ದಿನದ ನಲಿವು - ಕಣ್ಣ ಕಾಣ್ಕೆಯ ಅಯಾಚಿತ ನಗುವೊಂದರ ಪರಿಚಯವೇ ಜಗದ ಜಾಡಿನ ಗೆಲುವು...
ನಾಕಾಣಿ ನಗು ಬೆಸೆದು ಬಿಗಿದ ಹಸ್ತರೇಖೆಗಳಲೀಗ ನೇಹಾಮೃತ ಅಭಯದ ಬಲವು...
ಚಾಚಿದ್ಯಾರೋ... ಹಿಡಿದದ್ಯಾರೋ... ಬೆಸೆದದ್ದು ನೇಹದ ನಂಟು... ಅದಷ್ಟೇ ಸತ್ಯ...
ಅಲ್ಲಿಂದಾಚೆ ವಿನಾಕಾರಣದ ಅಕ್ಕರೆಯಲ್ಲಿ ತೇಲಿ ನಲಿವ ಬದುಕಿನ ಹಾಯಿ..‌.
ಈ ಫಕೀರನ ಊಟದೆಲೆ ತುಂಬಾ ಮಂದಹಾಸದ ಹಾಲುಬಾಯಿ...
ಎಷ್ಟು ಹಗೂರ ಈಗ ಹೆಗಲು ಹೆಗಲನಾತು ಹಾಯುವ ಈ ಬೆಳಕ ಹಾದಿ...
#ಬಡವನ_ಸಿರಿಬೆಡಗು...
⇍↹⇏

ಒದ್ದೆ ಕೂದಲು ಕೂಡಾ ಒದ್ದೆ ತುಟಿಯಷ್ಟೇ ಕೆಣಕಿ ಕಾಡುತ್ತೆ ಅಂತ ಹಸಿ ಮೈಯ್ಯಲ್ಲಿ ನಿನ್ನ ಕಾಣೋ ತಂಕಾ ಖಬರೇ ಇರಲಿಲ್ಲ...
ಕಿವಿಯ ಮರೆಯಿಂದ ಮೆಲ್ಲನಿಳಿವ ಹಬೆಯ ಹನಿ - ಕಣ್ಣಾದ ಉಸಿರು ಉರಿದು ಮಹಾಪ್ರಾಣ ದೀಪ...
ನೆಚ್ಚಿನಾ ಹರೆಯದ ಪ್ರಣಯ ಪೇಯದ ಖಾಸಾಖಾಸಾ ನಶೆಗೆ ಆಸೆ ಕರುಳು ಭಗ್ಗೆಂದು ಕಣ್ಣ ಮೊನೆಯೂ ತೇವ ತೇವ...
ಹಸಿಯೆಂದರೆ ಜೀವಂತಿಕೆ - ಚಿಗುರೆಲೆಯಂಥ ಒದ್ದೊದ್ದೆ ಭಾವ - ನಿಸರ್ಗದ ಸಂಸರ್ಗ ನಾದ ಪರವಶತೆಯಲಿ ಮೈನೆರೆದು ಹಿತವೇರಿ ಮಿಡುಕುವಾ ಜೀವ...
#ಹೊಂಬಾಳೆ...
⇍↹⇏

ಎಲುಬು ಸೀಳುವ ಛಳಿಯೂ ಬೆಚ್ಚಿ ಕಣ್ಮುಚ್ಚೋ ಹಾಂಗೆ ಉರಿವ ನಿನ್ನ ಹೊಕ್ಕುಳ ದೀಪದುರಿ.‌‌..
ನಖಶಿಖಾಂತ ರತಿ ಮನ್ಮಥ ನರ್ತನ - ಉಸಿರ ಉನ್ಮತ್ತ ಗುಂಜನ...
ರತಿ ರಂಗಿಗೆ ಅರೆಬೆತ್ತಲೆ ಬೆಳಕೇ ದಿವ್ಯಾಭರಣ...
#ಜೀವಂತ_ಮದನಿಕೆ...
⇍↹⇏

ಕ್ಷಣದಲ್ಲಿ ಒಂದು ಭಾಗ ನೀ ಕಣ್ಣಲ್ಲಿ ಕಣ್ಣ ಬೆರೆಸಿ ಏನೋ ಮಧುರವಾದುದನು ಕದ್ದು ಸಿಕ್ಕಿಬಿದ್ದವಳಂತೆ ತುಟಿಯಂಚ ಕಚ್ಚಿಕೊಳ್ಳುವಾಗ ನನ್ನ ತುಟಿಗಳಲಿ ತುಂಬಿಬರೋ ದುಂಬಿ ಹಸಿವಿನ ಜೀವ ತಂತು...
ಕಣ್ಮುಚ್ಚಿ ಸವಿದರೆ ಆಸೆ ಕನಸುಗಳ ಲಕ್ಷ ದೀಪೋತ್ಸವ - ನಾಭಿ ಕುಂಡದಲಿ ಕಮಲ ಅರಳೋ ಪುಳಕ...
#ಮಾಗಿಯ_ಅರೆಬಿರಿದ_ನಡುಹಗಲು...
⇍↹⇏

ಇವಳೇ -
ನೀ ಸನಿಹ ಸುಳಿವಾಗ ಸೋಕೋ ಅಂಗರಾಗದ ಬೆಚ್ಚಾನೆ ಬಿಸಿ ಗಾಳಿಯಲಿ ತೋಯೋ ನನ್ನೆದೆಯ ಬಿಸಿ ಬಿಸಿ ಕನಸುಗಳು ಮೀಸೆಯಡಿಯ ಕಳ್ಳ ನಗುವಲ್ಲಿ ನಿನ್ನ ಸೇರಿದರೆ ಬಿರಿದ ಕುಪ್ಪಸಗೂಡಿನ ಕತ್ತಲ ಕಮರಿಯಲಿ ಕದ್ದು ಕಾಪಿಟ್ಟುಕೋ...
ಮಂದಿ ನೋಡದ ಊರಲ್ಲಿ ಮುಂದಿನ ಮಾತಾಡುವ - ಹಿತ್ಲ ಬಾಗಿಲಲಿ ಕತ್ಲು ಕಂತುವ ಮುನ್ನ ಮುತ್ತಾಗಿ ಮತ್ತೇರುವ...
ಪ್ರಣಯ ನೆಬ್ಬಿದ ತೋಳ ಬಳ್ಳಿಯಲಿ ಕದ್ದ ರೋಮಾಂಚದ ನವಿರು ಘಮವೇಳಲಿ...
#ಮಧು_ಮಧುರ_ಕಳ್ಳತನ...
⇍↹⇏

ನಿನ ಕಣ್ಣ ಮೊನೆಯಲ್ಲಿನ ಗುಂಜನವ ಆಲಿಸಿದೆ - ಸಮಾಹ ಸಂಗೀತ ಒಳಗೂ ಹೊರಗೂ...
#ಕವಳ...
⇍↹⇏

ಕಣ್ಣು ತೂಗುವಾಗಲೊಮ್ಮೆ ನಿನ್ನ ನೋಡಿದೆ - ಎವೆ ಮುಚ್ಚದ ಎಚ್ಚರಕೀಗ ನೀ ತುಳಿದಾಡಿದ ಹಾದಿಯ ಧೂಳಾಗುವ ಖಯಾಲಿ ಮತ್ತು ಸಂಕಟ...
#ಇವಳೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಿಪ್ಪತ್ತಾರು.....

ಮೂಕ ಮುಖವಾಡಗಳು.....  

ವಾಸ್ತವ ಎಷ್ಟು ನಿಚ್ಚಳ ಗೊತ್ತಾ...
ಆದ್ರೂ ಕನಸಿಗೆ ಬಣ್ಣದ್ ಬಟ್ಟೆ ತೊಡಿಸಿಯೇ ಕಣ್ಣಂಗಳಕ್ ಆಡಕ್ಕೆ ಬಿಡತ್ತಲ್ಲಾ ಬೋಳೆ ಮನ್ಸೂ...
ಬೆತ್ಲು ಅಂದ್ರೆ ಪ್ರಾಣ ಪ್ರೀತಿ ಜೀವಕ್ಕೆ - ಆದ್ರೆ ಭಯ ನೋಡು; ತೋಳು ತೋಳು ತಳುಕಿನಲ್ಲೇ ಕಾಲ ನಿಂತೋಗ್ಬಿಟ್ರೆ...
ಹೆಗಲ ಮೇಲಿನ ಸ್ವಯಂಕೃತ ಪ್ರಭಾವಳಿಗಳ ಹೆಣ ಕೊಳೀಬಾರ್ದು; ಹಂಗಾಗೇ ಕತ್ತಲಿಗೂ ಶಾಲು ಹೊದೆಸ್ತೀನಿ ಮಹಾ ಮಾನವಂತ (?) - ಸತ್ರೂ ಆರೋಪಿಸಿಕೊಂಡ ಸುಳ್ಳು ಸಭ್ಯತೆಗೆ ಧಕ್ಕೆ ಬರ್ಬಾರ್ದು ಅಲ್ವಾ...
#ಬಟ್ಟೆಯೆಂಬ_ಹೆಣಗಾಟ...
#ಮೂಕ_ಮುಖವಾಡಗಳು...
↜↺↻↜

"ಕಾವಿಲ್ಲದೇ ಕಾವ್ಯವಾ...."
↜↺↻↜

ಚಂದದ ಭಾಷೆಯ ಕಲಿಯಬೇಕಿದೆ - ಸತ್ಯವನ್ನೂ ಬಣ್ಣ ಬಣ್ಣವಾಗಿ ಹೇಳುವಂತ ಭಾಷೆ, ಕಿವಿ ಸುಡದ ಹಾಗೆ ನುಡಿಯುವಂತ ಭಾಷೆ...
ಗದ್ದಲವಾಗಬಾರದು - ತಣ್ಣಗೆ ಕೊರೆಯಬೇಕು...
ಹುಟ್ಟಿಯೇ ತೀರುವ ಹಡಾಹುಡಿಯ ಭಾವಗಳ ಬಚ್ಚಿಡಲೋಸುಗ ಎದೆಯಲ್ಲಿ ಕತ್ತಲ ಕೋಲಿಯೊಂದು ಇರಲೇಬೇಕು - ಜಗದ ಬಯಲಲ್ಲಿ ಅದಕೆ ಸಿಹಿಯಾಗುವುದಷ್ಟನ್ನೇ ಹರವಬೇಕು ಅಥವಾ ಸಿಹಿಯಾಗುವಂತೆ ಕಲೆಸಿ ಹರವಬೇಕು...
ಜಾಣನಾಗಬೇಕು - "ಮಾತು ಬಲ್ಲ" ಜಾಣನಾಗಬೇಕು...
ನಂಗೆ ಜಗದ ಜಂಗುಳಿಯಲಿ ಜಾಗ ಬೇಕೆಂದರೆ ಜಗದ ಅಭಿರುಚಿಯಂತೆ ನನ್ನೊಳಗೆ ನಾನಲ್ಲದ ನನ್ನ ಕಟ್ಟಿ ಬೆಳೆಸಬೇಕು...
ಮೀರಲಾದೀತು ಹೇಗೆ ಸುತ್ತಿ ಬರುವ ಎಲ್ಲ ವೃತ್ತಗಳ ಪೂರಾ ಪೂರಾ.‌..
ಹೆಂಗಾರಾ ಆಗ್ಲಿ ಚೆಂದದ ಭಾಷೆ ಕಲೀಲೇಬೇಕು...
#ನಾನು...
↜↺↻↜

ಯಾವ ರೋಗವೋ ಕಾಣೆ - ತೀವ್ರವಲ್ಲದ್ದ್ಯಾವುದೂ ರುಚಿಸುತ್ತಲೇ ಇಲ್ಲ ಈಗೀಗ ಈ ಎದೆಗೆ...
ಒಂದು ಸಣ್ಣ ಭೇಟಿ ಸಾಧ್ಯವಾ ಹೇಳು...?
ಸುಮ್ಮನೆ ಬೆರಳುಗಳ ನಡುವಿನ ಖಾಲಿಯಲಿ ನುಸುಳಿ ಕಚಗುಳಿಯಿಟ್ಟು ಜಾರಿ ಹೋಗುವ ಅಲೆಗಳ ಸನ್ನಿಧಿಯಲಿ - ಎದೆಯ ಮೌನವ ಮೌನದಲೆ ಒಡೆವ ಗಾಢ ಹಸಿರಿನಡಿಯ ಕತ್ತಲ ಸೀಮೆಯಲಿ...
#ಉಸಿರೇ...
↜↺↻↜

ಎಳೆಯ ನಗುವೊಂದು ಬಿಸಿಲ ಹಾದಿಯಲಿ ಕನಸ ನೆಡಬಹುದು...
ಕನಸು ಗೂಡು ಕಟ್ಟಿದ್ದು ಕಣ್ಣಲ್ಲಿ - ಬೇರು ಅದರದ್ದು ಎದೆಯಲ್ಲಿ...
ಕಾಣೋ ಕಣ್ಣಲ್ಲಿ ಸಾಸಿರ ಬಣ್ಣ - ಮಿಡಿವ ರುದಯದಲದರ ಜೀವಕಣ...
ಎದೆಯ ಸಗ್ಗದ ಹಾಡು ನೀನು - ಆ ಕನಸ ಬಣ್ಣ ಜೇನು...
ನಗೆಯ ಹರಸಿ ನಿನ್ನ ಹಾದಿಗೆ - ಬೆಳಕ ತುಂಬಿಕೊಂಡೆ ನನ್ನೆದೆ ಬೀದಿಗೆ...
ಚಿಗುರು ಪಾದ - ನೆರಳ ಬೆರಗು - ಬಾಳಂತಿ ಬೆಳಕು - ಕನಸು ಕಂದ...
#ಸುಗ್ಗಿ_ಬಾಗಿಲ_ಹೋಳಿ...
↜↺↻↜

ಬೊಗಸೆಯಷ್ಟು ಕೊಟ್ಟೆನಾ (?) - ಸಾಗರವಾಗಿ ತುಂಬಿ ತೊನೆದು ತೋಯಿಸಿತು...
#ಹೆಣ್ಮನದ_ಪ್ರೀತಿ...
↜↺↻↜

ಇಲ್ಲಿ ಯಾರೂ, ಯಾವುದೂ ಇಡಿ ಇಡಿಯಾಗಿ ದಕ್ಕುವುದಿಲ್ಲ...
ಆಪಸ್ನಾತೀಲಿ ಸಿಕ್ಕ ಹಿಡಿಹಿಡಿ ತುತ್ತುಗಳಲಿ ರಕ್ಕಸ ಹಸಿವು ನೀಗುವುದಿಲ್ಲ...
#ಜಗ_ಬಯಸೋ_ನಾನು_ನನ್ನೊಳಗೇ_ಇಲ್ಲ...
↜↺↻↜

ಬೆಳುದಿಂಗಳನೇ ಮೆದ್ದು, ಹಾಸಿ, ಹೊದ್ದು ಮಲಗಿದ ಮಲೆ ಸಾಲಿನ ಅನಿರ್ವಚನೀಯ ಪ್ರಶಾಂತಿ - ತೋಟದಂಚಿನ ಕೊಳದ ದಡದಲಿ ಏನೋ ವಟಗುಡುವ ಏಡಿ - ಹಿಂಡು ಮೋಹಿನಿಯರ ಕಾಲ್ಗೆಜ್ಜೆ ದನಿಯ ಅನುಕರಿಸೋ ಜೇಡ - ಶರಂಪರ ಜಗಳವೇನೋ ಎಂಬಂತೆ ಅರಚಾಡೋ ಮಿಲನಾಕಾಂಕ್ಷೀ ಜೋಡಿ ಬೆಕ್ಕುಗಳು - ಸುಳ್ಳೇ ಗುರ್ರ್ ಅಂದು, ಕತ್ತು ಕುಣಿಸಿ ಪಟಪಟ ಸದ್ದಿನಿಂದ ತನ್ನ ಎಚ್ರವನು ಘೋಷಿಸೋ ಕಾವಲು ಬಂಟ ಪಾಂಡು ಕುನ್ನಿ - ನಾಚಿಕೆಯ ಗೂಡಿಂದ ಕಣ್ತೆರೆದು ಅರಳುವ ಪಾರಿಜಾತದ ಯೌವನ - ಕಿವಿಯ ಚಾಮರ ಬೀಸಿಕೊಳ್ಳುತ್ತಾ ಹಗಲು ಉಂಡ ಹುಲ್ಲನ್ನು ಮಲಗಿ ಮೆಲುಕು ಮಾಡೋ ಕೊಟ್ಟಿಗೆಯ ಕೂಸುಗಳು - ಛಳಿ ಸುರಿದು ತಬ್ಬುವ ಹನಿ ಹನಿ ಇಬ್ಬನಿ - ಅಮ್ಮನ ರೆಕ್ಕೆ ಅಡಿಯಲ್ಲೇ ಕನಸ ಹೆಕ್ಕಿ ಮೈಮುರಿಯೋ ಅಜ್ಞಾತ ಹಕ್ಕಿ ಮರಿ - ರಾತ್ರಿ ರಾಣಿಗೂ, ಸೂಜಿ ಮಲ್ಲಿಗೆಗೂ ಗಾಳಿಗೆ ಗಂಧ ಸವರುವ ಜಿದ್ದಾಜಿದ್ದಿ - ಅಂಗಳದಂಚಲಿ ದಿವ್ಯ ಮೌನವೊಂದು ಅಪ್ಪಟ ನೈಸರ್ಗಿಕವಾಗಿ ಆವರಿಸಿ ಅಪಾದಮಸ್ತಕ ನಶೆ ತುಂಬುವ ತುರೀಯ ಕ್ಷಣ, ಆ ನಿಶಾಂತ ಘಳಿಗೆ ಕವಿ ಪ್ರೇಮಿಯಾಗುವ ಹಾದಿಯ ಶುರುವಾತು...
#ತುಂಡು_ಸ್ವರ್ಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಿಪ್ಪತ್ತೈದು.....

 ಬದುಕು ಎಷ್ಟು ಚಂದದ ಭ್ರಮೆ.....

ಆಗಿದ್ದ ನಾನು ಈಗಿಲ್ಲಿ ಸಿಗುವುದಿಲ್ಲ - ಇಲ್ಲಿ ನಾನೂ ಪೂರ್ಣ ನನ್ನವನಲ್ಲ...
#ಬದುಕೇ_ಒಡೆದ_ಕನ್ನಡಿ...

ಇಲ್ಲಿ ಎಲ್ಲವೂ ನಶ್ವರ ಎಂಬ ವೇದಾಂತದ ಹೆಗಲು ಜೋತು ಕಾಲುಬಡಿಯುತ್ತಾ ನೋವುಗಳ ದಾಟಿ, ನಂಗೆ ಸಾವೇ ಇಲ್ಲ ಎಂಬಂತೆ ರಣ ಮೋಹದಲ್ಲಿ ಓಲಾಡುತ್ತಾ ಬದುಕಿಬಿಡುವುದು...
#ಬದುಕು_ಎಷ್ಟು_ಚಂದದ_ಭ್ರಮೆ...

"ಅಳುತ್ತಾ ಬಂದಿದ್ದೇನೆ - ನಗುತ್ತಾ ಹೊರಡಬೇಕು.‌‌.."
ಇದಿಷ್ಟೇ ನಿರೀಕ್ಷೆ ಇಲ್ಲಿಂದ...
#ಬಾಳ್ಮೆ..‌.
↜↟↡↝

ಮನೆಯ ಕಿಬ್ಳಿಗೆ ಹಕ್ಕಿ ಗೂಡು ಕಟ್ಟಲು ಅನುವು ಮಾಡಿಕೊಡುವುದಕ್ಕೂ, ಮಾಡಿಗೆ ಪಂಜರವ ನೇತಾಕಿ ಅದರಲ್ಲಿ ಹಕ್ಕಿಯ ಸಾಕುವುದಕ್ಕೂ ರೆಕ್ಕೆಯ ಸ್ವಾತಂತ್ರ್ಯದ ಸಾಮರ್ಥ್ಯ ಹಾಗೂ ಸೌಂದರ್ಯಗಳ ಹುಟ್ಟು ಸಾವಿನಷ್ಟು ಅಂತರವಿದೆ...
ಏನಿಲ್ಲ -
"ಹಕ್ಕಿಯನ್ನು ಹಕ್ಕಿಯಾಗಲು ಬಿಡುವಾ - ಹಾದಿಗೆ ನೆರಳಾಗಲಾಗದಿದ್ದರೂ ಅಡ್ಡಿಲ್ಲ, ಕನಿಷ್ಟ ಬೇಲಿಯಾದರೂ ಆಗದೇ ಇರುವಾ..."
ಒಂದು ಹೆಜ್ಜೆ ಪ್ರೀತಿಯೆಡೆಗೆ... ಅಷ್ಟೇ...
#ಭಾವ_ಬಂಧ_ಸಂಬಂಧ_ಇತ್ಯಾದಿ_ಇತ್ಯಾದಿ...
↜↟↡↝

ಮಳೆ ಸುರಿಸೋದು ಕಪ್ಪು ಮೋಡವೇ ಆದರೂ ಕಣ್ಣು ಸೋಲುವುದು ಕಾಮನಬಿಲ್ಲಿಗೇ...
ಕತ್ತಲ ಸೌಂದರ್ಯಕ್ಕೆ ಬೆಳಕಿನ ಸಾಕ್ಷಿ ಕೇಳುತ್ತಾರೆ...
ಸತ್ಯವನ್ನೂ ಬಣ್ಣದಲ್ಲದ್ದಿ ಹಂಚುವುದ ಕಲಿಯಬೇಕಿದೆ...
#ಬಣ್ಣ_ಬೆಡಗಿನ_ಸೋಗಲಾಡಿ_ಬದುಕು...
↜↟↡↝

ಬದುಕು ಭಾರ - ಸಾವು ದೂರ - ಎದೆ ಬತ್ತಿದರೆ ಕಣ್ಣ ದೂರಬಹುದೇ...
ಅವಳ ಕರುಳ ಧುನಿಯ ಕೂಗಿಗೆ ಉತ್ತರಿಸೋ ಶಕ್ತಿ ನಂಗೆಲ್ಲಿಂದ ಬರ್ಬೇಕು...
ನಾ ತೊರೆದ ಹಾದಿಯಾ ಊರಿಗೇನ ತೋರಲೆಂತು...
ದೂರುವುದಾದರೆ ಕಾಲನ ದೂರಬೇಕು - ಅದೂ ಗಟ್ಟಿ ಸಾಕ್ಷಿಗಳಿಲ್ಲದೆ...
ಉಳಿದ ಚೂರು ಉಸಿರನ್ನು ನಿದ್ದೆಯ ಉಡಿಗೆ ಹಾಕಿ - ಜಾರಿಕೊಳ್ಳಲಾಸೆ ತೀರಿತೆಂದು ಪಡೆದೆಲ್ಲ ಬಾಕಿ....
.......ನದಿ ಬತ್ತುವ ಕಾಲ...
#ಬೆಕ್ಕಿನ_ಮರಣದಂತಾ_ಸಾವು_ಬರಬೇಕು...
↜↟↡↝

ಪ್ರತಿ ಸರ್ತಿಯೂ ಹೊರಡೋ ಸಮಯಕ್ಕೆ ಸರಿಯಾಗಿ ನೀನು ಕರೆದಂಗಾಗುತ್ತೆ ಬಾಗಿಲ ಕಿಬ್ಳಿಯಿಂದ - ಮತ್ತೆ ಉಳಿದುಬಿಡುತ್ತೇನೆ ಇದೇ ನರಕದಲ್ಲಿ...
#ನೆಪ...
↜↟↡↝

ನಿನ್ನ ಅಬೋಧ ಕಂಗಳಲ್ಲಿ ನಿನ್ನೆದೆಯ ತಲ್ಲಣಗಳು, ಬೆಸೆದ ಬೆರಳುಗಳ ಬಿಸುಪಿನ ಬಿಗಿಯಲ್ಲಿನ ಹಂಬಲಗಳು, ಕಿಬ್ಬೊಟ್ಟೆಯಾಳದ ಕಂಪನಗಳೆಲ್ಲ ಬಿಳಿ ಗೋಳದ ಕಪ್ಪು ಚಿತ್ರಗಳಾಗಿ ತುಯ್ಯುವಾಗ ನನ್ನ ನಿಸ್ತೇಜ ನೋಟ ಬೇಕೆಂದೇ ಚುಕ್ಕಿಗಳ ಎಣಿಸುತ್ತವೆ...
ಹೃದಯ ಸೋತದ್ದನ್ನು ರೆಪ್ಪೆಗಳಲಿ ಮುಚ್ಚಿಟ್ಟು ಏನೂ ಅರಿಯದವನಂತಿರುವುದು ಅಲಿಖಿತ ಒಪ್ಪಂದದಂತ ನಿನ್ನ ಆಸೆ ಮತ್ತು ನಂಗಂಟಿದ ಶಾಪ...
ದೋಷ ತಟ್ಟದಂಗೆ ಮನಸಿನ ಆಣೆಗಳ ಮೀರುವ ದಾರಿಯಿದ್ದರೆ ಹೇಳಬಾರದೇ...
#ಬೇಲಿಗಳು...
↜↟↡↝

ಹುಟ್ಟು ಒಂಟಿ, ಸಾವು ಒಂಟಿ, "ಮಾತು ಕೊಂದುಕೊಂಡು" ತುಂಡು ಬದುಕನ್ನೂ ಹುಚ್ಚು ಬೇವರ್ಸಿಯಾಗಿಸಿಕೊಳ್ಳುವುದರಲ್ಲಿ ಯಾವ ಸಾರ್ಥಕತೆ ಇದೆ ಹೇಳು...
#ಪ್ರೀತಿ...
↜↟↡↝

ಎದುರಿನ ನಗುವನ್ನು ಬಗೆಯುವ ಸಾಹಸ ಮಾಡಲಾರೆ - ಆ ಒಡಲೊಳಗಣ ಬೆಂಕಿ ಎದೆಯ ಸುಟ್ಟೀತೆಂಬ ಭಯವಿದೆ...
#ಹೊಟ್ಟೆಯೊಳಗಣ_ಗುಟ್ಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)