Tuesday, February 7, 2023

ಗೊಂಚಲು - ನಾಕು ನೂರಾ ಮೂರು.....

ಮಡಿಲು.....

ಮಗುವಂಥ ನಗೆಯಲೇ ಎನ್ನ ಬದುಕ ತೂಗಿದ ತೊಟ್ಟಿಲೇ -
ಹುಡುಗೀ ಇಂದು ನಿನ್ನ ಹುಟ್ಟಿದ ದಿನ...
ನೀನು ಇಹ ತೊರೆದ ಮೇಲೆ ನಾ ಎದುರ್ಗೊಳ್ಳುತಿರೋ ನಿನ್ನ ಹುಟ್ಟನು ಹೇಳುವ ಮೊದಲ ದಿನ...
ಈಗಿಲ್ಲಿ ನಿನ್ನ ನೆನೆನೆನೆದು ನನಗೇ ನಾನು ಶುಭಕೋರಿಕೊಳ್ಳಬೇಕು...
ಉಂಡು ತೇಗುವ ಮುನ್ನ ಕಣ್ಣ ತೀರ್ಥ ಕದಡಿದರೆ ಮಗುವಾಗಿರು ಎನ್ನೆದೆಯಲ್ಲೀ ಎಂದು ನಿನ್ನ ನಾ ಪ್ರಾರ್ಥಿಸಬೇಕು...
ನಿನ್ನದಲ್ಲಿ ಎಂದಿನಂತೆ ಗೋಡೆಯ ಚಿತ್ರದ ತುಂಬಾ ಬದಲಾಗದ ಬೆಚ್ಚನೆ ನಗೆಯ ಹಾರೈಕೆ...
ತುಂಬಾನೇ ಹಿಂಡುವ ಬಲು ಬೆರಕಿ ಹಿಡಿ ಮೌನ...
___ ಇದ್ದಾಗ ನೆನೆಯಲಿಲ್ಲ, ಈಗ ಮರೆಯುವ ದಾರಿ ಹುಡುಕಿ ಹುಡುಕಿ ಸೋಲುತ್ತೇನೆ...
ಲವ್ಯೂ ಶಣ್ಣೀ... 😘

ಅವಳೊಳಗಿನ ಮಗು ನಕ್ಕಾಗ...

"ಅವಳ ಇರುವಿಕೆಯೇ ಒಂದು ದಿವ್ಯ ಸಾಂತ್ವನವಾಗಿತ್ತು..."
ಅವಳ ಅಗಲಿಕೆಯ ಅಸೀಮ ಖಾಲಿಯನ್ನು, ಅಜೀಬು ಮೌನವನ್ನು ತುಂಬಿಕೊಡಬಲ್ಲ ಒಂದಾದರೂ ನಶೆಯನ್ನು ಸೃಷ್ಟಿಸಲಾಗದೇ ಹೋದದ್ದು ಅವಳ ಭಗವಂತನ ಯಾವತ್ತಿನ ಸೋಲು...
____ ಮಡಿಲು...
←↑→

ಅವಳಿಗೇನೋ ಹೇಳಬೇಕು, ಅವಳ ನೆನಪೊಂದನು ಎದೆಗೊತ್ತಿಕೊಳ್ಳಬೇಕು ಅಂತನಿಸಿದಾಗಲೆಲ್ಲ ಪದಗಳ ಪ್ರೀತಿಯ ನಾನು ನಾಕು ಸಾಲು ಅವಳ ಬರೆದು ನಿಸೂರಾಗುತ್ತೇನೆ...
ಅವಳು ಓದುವುದಿಲ್ಲ, ಆದರೆ ಓದದೆಯೂ ನನ್ನನು ನಾನಾಗಿ ಅಣು ಅಣುವನೂ ಬಲ್ಲವಳು, ಅಂತೆಯೇ ಆದರಿಸಿದವಳು ಅವಳೇ ಅಥವಾ ಅವಳೊಬ್ಬಳೇ...
ಜಗ ನನ್ನ ಹಳಿಯುವಾಗಲೆಲ್ಲ ಅವಳು ನನ್ನ ಇನ್ನಷ್ಟು ಮಡಿಲಿಗೆಳೆದುಕೊಳ್ತಾಳೆ ಮತ್ತು ನಾನು ನಾನಾಗಿ ಉಳಿಯುತ್ತೇನೆ...
____ ಲವ್ಯೂ ಕಣೇ ಸುಂದ್ರೀ...😘
←↑→

ಹುಟ್ಟಾ ಪರಿಚಿತ ಊರು ಮತ್ತು ಪರಿಚಯಗಳ ನಡುವೆಯೇ ಸುಳಿವ ಒಂದು ಅಪರಿಚಿತ ಭಾವ...
ಕತ್ತಲು ಭಯವಾಗದಂತೆ, ಬೆಳಕು ಬಾಧೆಯಾಗದಂಗೆ ಕಾಯಲೀ ನನ್ನ ಮೈತ್ರಿ ನನ್ನನೂ - ಮೊರೆವ ಕಡಲಿನಂತೆ, ಪೊರೆವ ಕಾಡಿನಂತೆ...
___ ನಾ ಅಳಿಯಬೇಕು, ಅಳಿದಮೇಲೂ ನನಗೆ ನಾನುಳಿಯಬೇಕು...
←↑→

ಕೇಳಿಲ್ಲಿ,
ಆ ಎಲ್ಲಾ ಮನೆಯೆಂಬ ಮನುಷ್ಯರ ಗೂಡಿನ ಮುಂಬಾಗಿಲ ಮೂಲೆಗಳಲಿ ನೇತಾಡುವ ಅಂದೆಂದೋ ಕಟ್ಟಿದ ತೋರಣದ ಒಣಗಿದ ಮಾವಿನ ಸುಳಿ - ಸುಮ್ಮನೆ ಸವರಿದರೆ ಒಳಮನೆಯ ನಿಟ್ಟುಸಿರ ತೇವ ಅಂಗೈಗೆ ಅಂಟೀತೆನಿಸುತ್ತೆ...
ಕಾರಣ,
ಪ್ರತಿ ಮನೆಯಲೂ ಸೂರು ಸೋರುವ ಒಂದಾದರೂ ವ್ಯಥೆಯಿದೆ - ಕರುಳ ಕಡೆಯುವ ಕಳ್ಳ ನೋವಿನದ್ದು, ಕಣ್ಣ ತೀರ್ಥದಲಿ ತೊಳೆದು ಒಣ ಹಾಕಿದ ದೊಡ್ಡ ನಗೆಯದ್ದೂ ನಾಲ್ಕಾರಾದರೂ ಕಥೆಯಿದೆ...
___ ಜಂಗಮ ತಾ ತುಳಿದ ಸ್ಥಾವರಗಳ ಧೂಳಿನಲಿ ದೇವರ ಸೋಲಿನ ನಗೆಯಿರಬಹುದಾ...!!
←↑→

ನೆಲದ ಒಳಗೆ ಮಲಗುವವರೆಗೂ ಕನಸ ಕಾಣುತಲೇ ಇರಬೇಕು...
ಇರುಳು ಬೆಚ್ಚಗಿರುವುದಾದರೆ ಹಗಲುಗನಸನೂ ಪ್ರೀತಿಸಬೇಕು...
____ ಅಂತಿಮ 'ದರ್ಶನ'ವೆಂದರೆ ನಾನಿಲ್ಲಿ ನಗುತಿರಬೇಕು, ನಗುನಗುತ ಉರಿಯಬೇಕು...

←↑→

ಆಯೀ -
ಆ ನೀಲಿ ಬಯಲ ತುಂಬಾ ಮಿರಿ ಮಿರಿ ಮಿನುಗುತ್ತಾ ನನ್ನೊಡನಾಡುವ ಆ ಕೋಟಿ ಕೋಟಿ ತಾರೆಗಳಲಿ ನಿನ್ನಾತ್ಮ ನಗುವ ನಕ್ಷತ್ರ ಯಾವುದೇ...
ಸತ್ತವರೆಲ್ಲ ನಕ್ಷತ್ರವಾಗುತ್ತಾರೆ ಎಂದು ನಂಬಿಸಿದ ಹಿರಿಯರು ಎಷ್ಟೊಂದು ಒಳ್ಳೆಯವರು ಅಲ್ವಾ...!!
ಈಗೀಗ ನೆಲ ನೋಡಿ ನಡೆಯುವುದನು ಬೇಕೆಂದೇ ಮರೆಯುತ್ತೇನೆ...
ಹಾಗೆಂದೇ ಇರುಳ ಹಾದಿಯ ಕಣ್ಣ ತುಂಬಾ ನಿನ್ನದೇ ಬೆಳಕು...
____ ನನ್ನ ಆಗಸದ ತುಂಬಾ ನೀನೇ ನೀನು...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)