Thursday, September 20, 2012

ಗೊಂಚಲು - ನಲವತ್ನಾಕು.....

ಸಾಗರದ ಸಾವಿರ ಪ್ರಶ್ನೆಗಳಿಗೆ
ದಂಡೆಯ ನಸುನಗೆಯ
ಮೌನವೇ ಉತ್ತರ.....

ಆಯೀ -
ಇದೊಂದು ಪ್ರಶ್ನೆ ಕೇಳಬೇಡ. 
ಉತ್ತರ ಖಂಡಿತಾ ಗೊತ್ತಿಲ್ಲ. 
ಉತ್ತರ ಹುಡುಕುವ ಮನಸೂ ಈಗ ನಂಗಿಲ್ಲ. 
ಅವನನ್ನು ಯಾಕೆ ಪ್ರೀತಿಸಿದೆ.? 
ಅವನನ್ನೇ ಯಾಕೆ ಪ್ರೀತಿಸಿದೆ.??
ಈವರೆಗೆ ನನ್ನನ್ನೇ ನಾನು ಕೇಳೀಕೊಂಡದ್ದು ಅದೆಷ್ಟು ಬಾರಿಯೋ...
ಉತ್ತರ ದಕ್ಕಿಲ್ಲವಾಗಲೀ ಪ್ರೀತಿಸದೇ ಇರಲು ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಮತ್ತೆ ಮತ್ತೆ ಋಜುವಾಗಿದೆ.

ಸಾಗರದಲೆಗಳ ಕೇಳಿದೆ ಒಮ್ಮೆ - ಒಂದಿನಿತೂ ಪ್ರತಿಸ್ಪಂದಿಸದಿರುವ ದಂಡೆಯನೇಕೆ ಅಷ್ಟೊಂದು ಪ್ರೀತಿಸುವಿರಿ.?
ದಂಡೆಯನು ಪ್ರೀತಿಸಲು ಒಲ್ಲೆನೆನುವ ಅಲೆ ಮರಳ ಒರಟನ್ನು ತಾಕುವ, ದಡದಲಾಡುವ ಕಂದನ ಅಂಬೆಗಾಲ ಮುದ್ದಿಸುವ ಸುಖಗಳ ಕಳಕೊಂಡು ಮಧ್ಯದಲೇ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ನಕ್ಕಿತು ಸಾಗರ.
ಅವನ ಎದೆ ರೋಮಕೆ ಮೂಗನುಜ್ಜುವ ಸುಖವ, ಅವನ ಮಗುವಿಗೆ ಒಡಲಾಗುವ ತಾಯ ಸುಖವ ನಾ ಕಳೆದುಕೊಳ್ಳಲಾರೆ ಅಮ್ಮ...

ದಂಡೆಯನೂ ಕೇಳಿ ನೋಡಿದೆ.
ಪ್ರೀತಿಗೆ ನೀನೇಕೆ ಮೌನಿ ಎಂದು.
ನನ್ನ ಮೌನ ಸಮ್ಮತಿಯೇ ಸಾಗರದ ಪ್ರೀತಿಗೆ ಪ್ರೇರಣೆ.
ಸ್ವಚ್ಛ ಮೌನವೂ ಪ್ರೇಮವೇ ಕಣೇ ಎಂದಿತು ದಂಡೆ.
ಅಂದಿನಿಂದ ಅವನ ಮೌನವನೂ ಅದಮ್ಯವಾಗಿ ಪ್ರೀತಿಸಲಾರಂಭಿಸಿಬಿಟ್ಟೆ.

ಒಮ್ಮೆ ಅವನನ್ನೇ ಕೇಳಿಬಿಟ್ಟೆ.
ಯಾಕೆ ನಾನಿನ್ನ ಇಷ್ಟೊಂದು ಪ್ರೀತಿಸ್ತೇನೆ.??
ಒಂದು ಕ್ಷಣ ಭಯದಿಂದ ನನ್ನ ನೋಡಿ, ಅದೇ ಭಯದ ದನಿಯಲ್ಲಿ ಹೇಳಿದ್ದ -
ಪ್ರೀತಿಗೆ ಕಾರಣವ ಹುಡುಕ ಹೋಗ್ಬೇಡ.
ಹುಡುಕ ಹೊರಟರೂ ಉತ್ತರ ಸಿಗದಂತೆ ನೋಡಿಕೋ.
ಯಾಕೇಂದ್ರೆ ಉತ್ತರ ಸಿಕ್ಕ ದಿನ ಪ್ರೀತಿ ಸತ್ತಂತೆಯೇ ಸರಿ.
ಬದುಕನೇ ಕಳಕೊಂಡು ಬದುಕಿರುವ ಶಕ್ತಿ ನಂಗಿಲ್ಲಾ ಕಣೇ.
ಅಲ್ಲಿಂದ ಮುಂದೆ ಆ ಪ್ರಶ್ನೇನ ನನ್ನಲ್ಲಿ ನಾನೂ ಕನಸಲ್ಲಿ ಕೂಡಾ ಕೇಳಿಕೊಂಡಿಲ್ಲ.

ಆಯೀ -
ಅಷ್ಟಕ್ಕೂ ಯಾರನ್ನಾದ್ರೂ ಯಾಕಾದ್ರೂ ಪ್ರೀತಿಸ್ತೇವೆ ಅನ್ನೋದಕ್ಕೆ ನಿಂಗಾದ್ರೂ ಉತ್ತರ ಗೊತ್ತಾ.?
ಅಪ್ಪ ಅಮ್ಮ ತೋರಿಸಿದ, ಆವರೆಗೆ ಸರಿಯಾಗಿ ನೋಡಿಯೂ ಇರದವನೊಂದಿಗೆ ಇಷ್ಟೆಲ್ಲ ವರ್ಷ ಬದುಕ ಹರವಿಕೊಂಡೆಯಲ್ಲ...
ನಿನ್ನದೆಂಬುದೆಲ್ಲವನೂ ನೀಡಿ ಪ್ರೀತಿಸಿದೆಯಲ್ಲ ಯಾಕೆ.??
ಅಂಥ ಸಿಡುಕಿನ ಅಪ್ಪ (ಅಪ್ಪ ನಿನ್ನೊಂದಿಗೆ ಸರಸವಾಗಿದ್ದದ್ದನ್ನ ನಾನಂತೂ ನೋಡಿಲ್ಲ) ಕೂಡ ಪ್ರತಿ ಬಾರಿ ಪೇಟೆಗೆ ಹೋದಾಗಲೂ ಎರಡಾದರೂ ಉತ್ತಪ್ಪವನ್ನು ನಿನಗಿಷ್ಟ ಅಂತ ತರ್ತಾರಲ್ಲ ಯಾಕೆ.?
ಹೂವೆಂದರೆ ನಂಗೆ ಎಷ್ಟಿಷ್ಟ ಎಂದು ನಿಂಗೊತ್ತು. ಚಿನ್ನು ಬೆಕ್ಕು, ಜೂಲಿ ನಾಯಿ, ಕೊಟ್ಟಿಗೆಯ ಚಂದ್ರಿ ಕರು, ರಾಡಿ ಗದ್ದೆ, ಗುಡಿಯ ಗಣಪನೆದುರಿನ ದೊಡ್ಡ ಘಂಟೆಯ ಸದ್ದು ಎಲ್ಲ ನಂಗಿಷ್ಟ. ಅವೆಲ್ಲಕ್ಕಿಂತ ಈಗಲೂ ನಂಗಿಂತ ಸುಂದರಿ ಆಗಿರೋ ನೀನಂದ್ರೆ ಎಷ್ಟೊಂದು ಪ್ರೀತಿ. ಆಗೆಲ್ಲ ಯಾಕೇಂತ ಕೇಳದೇ ನನ್ನ ಇಷ್ಟಗಳಲ್ಲಿ ಖುಷಿಪಟ್ಟ ನೀನು ಈಗ ಮಾತ್ರ ಕಾರಣ ಕೇಳುವ ಹಂಗೇಕೆ.?
ನಂಗರ್ಥವಾಗುತ್ತೆ ಅಮ್ಮಾ ನಿನ್ನ ಧಾವಂತ. ಆದರೆ ನಾನು ನಿನ್ನ ಮಗಳು. ಹಾಗೆಲ್ಲ ಸುಲಭಕ್ಕೆ ಎಡವುವಳಲ್ಲ ಭಯಬೀಳದಿರು.
ನನ್ನ ಹುಡುಗ ನನಗಿಂತ ನನ್ನ ಜಾಸ್ತಿ ಪ್ರೀತಿಸ್ತಾನೆ ಎಂಬ ಖಾತ್ರಿ ನಂಗಿದೆ.
ಅವನದು ಮರಳ ದಂಡೆಯ ಸಹನೆಯಂಥ ಪ್ರೀತಿ...
ಒಂದೇ ಬೇಸರ ಕೆಲವೊಮ್ಮೆ ಸಾಗರದ ಸಾವಿರ ಪ್ರಶ್ನೆಗಳಿಗೆ ದಂಡೆಯ ನಸುನಗೆಯ ಮೌನವೇ ಉತ್ತರ ಅಷ್ಟೇ.
ಆ ಮೌನವೇ ಕಾಯ್ದೀತು ನಮ್ಮಿಬ್ಬರ ಬದುಕುಗಳ.

ಆಯೀ ಯಾಕೆ ಪ್ರೀತಿಸಿದೆ ಅಂತ ಹೇಳಲಾರೆನಾದರೂ ನಮ್ಮಿಬ್ಬರ ನಡುವಿನ ಒಂದಷ್ಟು ಭಾವಗಳ ನಿಂಗೆ ಹೇಳ್ಬೇಕು.
ನನ್ನ ಬಿಟ್ಟೂ ಬಿಡದ ಬಡಬಡಿಕೆಗಳನ್ನೆಲ್ಲ ಮೌನವಾಗಿ ಆಲಿಸುವ ಅವನ ಸಹನೆ ಮುದ್ದು ಬರಿಸುತ್ತೆ ಒಮ್ಮೊಮ್ಮೆ. 
ಅವನ ಕೈಹಿಡಿದು ಬೀದಿಯಲಿ ನಡೆವಾಗ ದಾರಿಯಲ್ಲಿನ ಹುಡುಗೀರೆಲ್ಲಾ ಆಸೆ ಕಣ್ಣಿಂದ ಅವನ ನೋಡುವಾಗ ಹೆಮ್ಮೆ ಅನ್ನಿಸುತ್ತೆ ನಂಗೆ.
ಏಕಾಂತದಲಿ ಅವನ ಮಡಿಲ ಸೇರುವ ನನ್ನ ಮಗುವಂತೆ ದಿಟ್ಟಿಸುವ ಅವನ ಕಂಗಳು ನಂಗೆ ಆಯೀ ನಿನ್ನನ್ನೇ ನೆನಪಿಸುತ್ತೆ.
ಒಮ್ಮೊಮ್ಮೆ - ನಿನ್ನೆ  ಮೊನ್ನೆ ಸತ್ತ, ಇಂದೂ ಸಾಯುತಿರುವ, ಅರ್ಧಕ್ಕೇ ಆತ್ಮಹತ್ಯೆ ಮಾಡ್ಕೊಂಡ, ನಾಳೆಗಳಲ್ಲೂ ಸಾಯಲಿರುವ ಕನಸುಗಳ ಬಗ್ಗೆ ಮಾತಾಡ್ತಾ ಅವನು ಭಾವುಕನಾದಾಗ ನನ್ನಂತೇ ಅವನೂ ಅತ್ತು ಬಿಡಲಿ ಎದೆಗವುಚಿಕೊಂಡು ಸಂತೈಸಿಯೇನು ಅಂತನಿಸುತ್ತೆ.
ಆದರವನು ಮಹಾ ಸ್ವಾಭಿಮಾನಿ ಪ್ರಾಣಿ.
ಎದೆಯ ನೋವನೆಂದೂ ಕಣ್ಣ ಹನಿಯಾಗಲು ಬಿಡಲೊಲ್ಲ.
ಅತ್ತು ಬಿಡು ಮನಸು ಹಗುರಾದೀತು ಅಂದರೆ ಗಂಡಸು ಕಣೇ ಎಂಬ ಉತ್ತರ.
ಆಗೆಲ್ಲ ನಂಗೆ ನಾನು ಹೆಣ್ಣಾಗಿದ್ದರ ಬಗ್ಗೆ ಖುಷಿಯಾಗುತ್ತೆ.
ಯಾಕಮ್ಮ ಗಂಡಸು ಅಳಲೇ ಬಾರದಾ...??
ತನ್ನ ಪ್ರೀತಿಯ ಮುಂದೆಯೂ...???

ಅರಳಿದ ಹುಣ್ಣಿಮೆಯಂದು ಉಕ್ಕುವ ಕಡಲನ್ನು ನೋಡಿ ಮುದಗೊಳ್ಳುತ್ತಿದ್ದರೆ ನಾನು - ನನ್ನನೇ ನೋಡುತ್ತಾ ಮೈಮರೆಯುತ್ತಾನೆ ಅವನು...
ಮಲ್ಲಿಗೆ ಬಿಳುಪಿನ ಹತ್ತಾರು ಚೆಲುವೆಯರ ನಡುವೆಯೂ ಈ ಕಪ್ಪು ಹುಡುಗಿಯನೇ ಹುಡುಕಾಡಿ, ಸುಳ್ಳೇ ನಗುವಾಗ ನಾನು  ಚಡಪಡಿಸುತ್ತಾನೆ ಅವನು...
ಬಚ್ಚಲ ಏಕಾಂತದಲಿ ನನ್ನ ನಾ ಕಾಣುವಾಗ - ಅವನ ನೋಟದ ನೆನಪಾಗಿ ಸಣ್ಣಗೆ ಕಂಪಿಸಿ ನಾಚುತ್ತೇನೆ ನಾನು...

ದೂರ ನಿಂತೇ ನನ್ನಲೇನೋ ಹುಡುಕುವಂತಿರುವ ಆ ಅವನ ಶಾಂತ ಕಂಗಳಲ್ಲಿರುವುದು ಆಸೆಯಾ.? ಸ್ನೇಹಾಭಿಮಾನವಾ.?? ಪ್ರೀತಿಯಾ.??? ಆರಾಧನೆಯಾ.???? ಇವುಗಳೆಲ್ಲದರ ಮಿಶ್ರಣದ ಇನ್ಯಾವುದೋ ಭಾವವಾ.?????
ಏನೊಂದೂ ಅರ್ಥವಾಗದೇ ಒದ್ದಾಡುತ್ತೆ ನನ್ನ ಮನಸು ಒಮ್ಮೊಮ್ಮೆ...
ಆದರೆ ಈ ಕ್ಷಣ -
ಕನಸುಗಳ ಜೋಕಾಲಿಯಲಿ ಜೀಕುವ ರೋಮಾಂಚನವಷ್ಟೇ ನನ್ನದು...

ನನ್ನ ಪ್ರೀತಿ, ನನ್ನ ಭಾವ ನಿನಗರ್ಥವಾಗಲು ಇಷ್ಟು ಸಾಕೆಂದುಕೊಳ್ತೇನೆ.
ಬೇಡದೆಯೂ ಸಿಗುವ ನಿನ್ನ ಹಾರೈಕೆ ನನ್ನ ಕಾಯುತ್ತೆ ಅನವರತ...
ಅಪ್ಪನ್ನ ಒಪ್ಪಿಸುವ ಕೆಲಸವೂ ನಿಂದೇನೆ.
ಆಯೀ - ಪ್ಲೀಸ್ ಪ್ಲೀಸ್ ಪ್ಲೀಸ್...

Thursday, September 13, 2012

ಗೊಂಚಲು - ನಲವತ್ತರ ಮೇಲೆ ಮೂರು.....

ದಾರಿ.....




ಸಾವಿನ ಮನೆ ಕಡೆಗೆ ಮುಖ ಮಾಡಿ
ಉದ್ದಕ್ಕೂ ಬಿದ್ದುಕೊಂಡಿದೆ 
ಬದುಕ ದಾರಿ...

ಅದು ಒಮ್ಮುಖ ಪಥ...

ಒಂದು ಕ್ಷಣಕೂ ತಿರುಗಿ ಬರುವಂತಿಲ್ಲ
ಜೀವನ ರಥ...

ತೋಚಿದಂತೆ ಸಾಗುತಿರುವುದಷ್ಟೇ ಕೆಲಸ...

ಕಷ್ಟಗಳೆಂಬ ಕಲ್ಲು ಮುಳ್ಳುಗಳ
ಭರವಸೆಯ ಚಪ್ಪಲಿ ತೊಟ್ಟು ಹಾಯುತಿರಬೇಕಷ್ಟೇ...

ಅಲ್ಲಲ್ಲಿಯ ತಗ್ಗು - ದಿಣ್ಣೆಗಳ ಏರಿಳಿಯಲು
ಸಹನೆಯೇ ಶಕ್ತಿ ಕವಚ...

ದಾರಿಪಕ್ಕ ಸಿಗುವ ನೋವಿನ ಬಯಲುಸೀಮೆಯ ಬಿಸಿಲು,
ನಲಿವಿನ ಮಲೆನಾಡ ನೆರಳುಗಳ ಕಂಡು
ಮೈಮರೆಯುವಂತಿಲ್ಲ...
ಹಾಗಂತ 
ನೋವು - ನಲಿವುಗಳಿಗೆ ಸ್ಪಂದಿಸದಿದ್ದರೆ
ಬದುಕಿಗೆ ಸೊಬಗೂ ಇಲ್ಲ...

ನಮ್ಮ ದಾಟಿ ಹೋಗುವವರೆಡೆಗೆ ಮತ್ಸರ,
ನಾವು ದಾಟಿದವರೆಡೆಗೆ ಕರುಣೆ
ಉಹುಂ
ಅವಕೆಲ್ಲ ಸಮಯವಿಲ್ಲ...
ಆದರೆ
ಇವೆಲ್ಲ ಕಾಡದೇ ಹೋದರೆ
ನಡೆವ ತುಡಿತ ಮೂಡುವುದಿಲ್ಲ...

ನಾವು ನಿಲ್ಲಬಯಸಿದರೂ
ರಥ ನಿಲ್ಲುವುದಿಲ್ಲ...
ಚಲನೆಯೊಂದೇ ಅದರ ನಿಯಮ...

ಗೊತ್ತಿಲ್ಲ -
ಯಾವ ತಿರುವಿನಲ್ಲಿ
ಯಾರ ಮೈಲಿಗಲ್ಲು...

ತನ್ನ ಪಯಣ ಮುಗಿದ ಕ್ಷಣ
ಆಳಿದವನಿಗೂ - ಆಳಿಸಿಕೊಂಡವಗೂ
ಸಿಗುವುದು
ಮೂರು ಹಿಡಿ ಮಣ್ಣು 
ಮತ್ತು
ಮೂರು - ಆರು ಅಡಿಯ ಅದೇ ಮಸಣದ ಮನೆ...

ಉಳಿದವರ ಮನದಲ್ಲಿ ಉಳಿದದ್ದು ನೆನಪಾಗಿ -
ಮಂದಹಾಸದ ನವಿರು
ಅಥವಾ
ವಿಕಟಾಟ್ಟಹಾಸದ ಕಸರು...

ಹಿಮ್ಮುಖ ಚಲನೆಯಿಲ್ಲದ ಹಾದಿಯಲಿ ನಡಿಗೆ ಜೋಪಾನ...

***@@@***

ದಾರೀಲಿ ಒಂದು ಚಿಟ್ಟೇನ ಕಂಡೆ.
ನಾನಿನ್ನೂ ನೋಡದಿದ್ದಂತ ಚೆಂದದ ಚಿಟ್ಟೆ.
ದೊಡ್ಡ ದೊಡ್ಡ ರೆಕ್ಕೆಗಳ ಬೂದು ಬಣ್ಣದ ಚಿಟ್ಟೆ.
ಒಂದು ಕ್ಷಣ ಬಿಟ್ಟ ಕಂಗಳಿಂದ ನೋಡುತ್ತ ನಿಂತೆ.
ಒಮ್ಮೆ ಮೃದುವಾಗಿ ಮುಟ್ಟಿದೆ.
ಅದರ ರೆಕ್ಕೆಗಳ ಹುಡಿ ಬೆರಳಿಗೆ ಅಂಟಿತು.
ಖುಷಿಯಾಯ್ತು.
ತಕ್ಷಣ ಆ ಚಿಟ್ಟೆ ಉಚ್ಚೆ ಹೊಯ್ದಿತು.
ಎಷ್ಟು ಖುಷಿಯಾಯ್ತು ಗೊತ್ತಾ...
ಪ್ರಕೃತಿಯ ಮಡಿಲ ವೈವಿಧ್ಯವ ಆಸ್ವಾದಿಸ್ತಾ ಅಲೆಯುತಿದ್ದರೆ ಎಂತೆಂಥ ರೋಮಾಂಚನಗಳೋ...
ಬದುಕು ಕರುಣಿಸುವ ಇಂಥ ಪುಟ್ಟ ಪುಟ್ಟ ಖುಷಿಗಳ ಮನಸಾರೆ ಆಸ್ವಾದಿಸಿದಾಗಲೇ ದಾರಿ ಸುಗಮ ಮತ್ತು ಸಹನೀಯ ಅನ್ನಿಸೀತು...
ಕೊನೆಯ ಉಸಿರಲ್ಲಿ ಸಾರ್ಥಕ್ಯದ ನಗು ಅರಳೀತು...

ಚಿತ್ರ : ನನ್ನ ಕ್ಯಾಮರಾ ಕಣ್ಣಲ್ಲಿ ಯಾವುದೋ ದಾರಿಯ ತಿರುವು...

Wednesday, September 5, 2012

ಗೊಂಚಲು - ನಲವತ್ತೆರಡು.....


ಕೇಳಬಾರದ (?) ಕೆಲವು ಪ್ರಶ್ನೆಗಳು.....

ಬದುಕಿನ ಯಾವುದೋ ತಿರುವಿನಲ್ಲಿ ಫಕ್ಕನೆ ಎದುರಾಗಿ ಪಯಣಕ್ಕೆ ಜತೆಯಾದ ಗೆಳೆಯ ನಟರಾಜು (ನಟರಾಜು ಸೀಗೇಕೋಟೆ ಮರಿಯಪ್ಪ) ತಮ್ಮ ಫೇಸ್ ಬುಕ್ ಗೋಡೆ ಬರಹದಲ್ಲಿ ಹೀಗಂತ ನಾಲ್ಕು ಸಾಲು ಬರೆದಿದ್ದರು.
ನೀನು ನಿನ್ನ ಎಲ್ಲ ಭಾವನೆಗಳ
ನನ್ನೊಡನೆ ಹಂಚಿಕೊಳ್ಳುವೆಯಾ.?
ಹಾಗಾದರೆ ಬಾ ಮೊದಲು 
ಊಟವನ್ನು ಹಂಚಿ ತಿನ್ನೋಣ...

ಅವರ್ಯಾವ ಭಾವದಲ್ಲಿ ಬರೆದರೋ ನಾನ್ಯಾವರೀತಿ ಅರ್ಥೈಸಿಕೊಂಡೆನೋ ಒಟ್ಟಿನಲ್ಲಿ ಎಲ್ಲ ಹೇಳಿಕೊಳ್ಳುವುದು ಎಂಬ ಮಾತು ನನ್ನಲೇನೋ ಗೊಂದಲ ಸೃಷ್ಟಿಸಿಬಿಟ್ಟಿತು.
ಅವರನ್ನೇ ಕೇಳಿದೆ.
ಅಲ್ಲಾ ಕಣಣ್ಣೋ ಊಟವನ್ನು ಹಂಚಿಕೊಂಡಷ್ಟು ಸುಲಭವಾ ಮನದೆಲ್ಲ ಭಾವಗಳನು ಹಂಚಿಕೊಳ್ಳುವುದು.?
ನಮ್ಮೊಡನೆ ಅನ್ನವನ್ನು ಹಂಚಿಕೊಳ್ಳಲಾರದವರು ಭಾವನೆಗಳನ್ನು ಹಂಚಿಕೊಳ್ಳಲಾರರು ಗುರುಗಳೇ [:):):)] ಅಂತಂದರು.
ಉಹುಂ ನಂಗೆ ಸಮಾಧಾನವಾಗಲಿಲ್ಲ.

ಶತ್ರುವಿನೊಂದಿಗೂ ಒಂದೊಮ್ಮೆ ಊಟ ಹಂಚಿಕೊಳ್ಳಬೇಕಾದೀತು ಹಾಗೂ ಹಂಚಿಕೊಂಡೇವು...ಆದರೆ ನಮ್ಮೊಳಗಣ ಎಲ್ಲ ಭಾವಗಳನ್ನು...??
ನಮ್ಮೊಳಗಣ ಎಲ್ಲ ಭಾವಗಳನ್ನೂ ಇನ್ನೊಬ್ಬರೊಂದಿಗೆ ಪೂರಾ ಪೂರಾ ಹಂಚಿಕೊಳ್ಳುವುದು ಎಂಬ ಮಾತಲ್ಲೇ ನಂಗೇನೋ ಕಸರು ಕಾಣಿಸುತ್ತೆ.
ಅವರು ಎಷ್ಟೇ ಆಪ್ತರು ಎಂದಾದರೂ.
ನಮ್ಮ ಮನದ ಭಾವಗಳನ್ನು ನಮ್ಮದೇ ಬುದ್ಧಿಯೊಂದಿಗೆ ಹಂಚಿಕೊಳ್ಳುವುದೂ ಕಷ್ಟ ಎಂದೆನಿಸುವ ಹೊತ್ತಲ್ಲಿ...ಬೇರೊಬ್ಬರೊಂದಿಗೆ...!!!
ಹೆಚ್ಚಿನ ಸಲ ಆಗೋದು ಹಾಗೇ - ಆಡಬೇಕಿಲ್ಲದ ನೂರೆಂಟು ಮಾತುಗಳನ್ನು ಗಂಟೆಗಳ ಕಾಲ ಆಡುತ್ತಿರುತ್ತೇವೆ. ಆಡಲೇಬೇಕಿದ್ದ ಒಂದು ಮಾತು ಅಲ್ಲೆಲ್ಲೋ ಮನದ ಮೂಲೆಯಲ್ಲೇ ಕಚ್ಚಿಕೊಂಡುಬಿಟ್ಟಿರುತ್ತದೆ. ಆಡಲು ಶಬ್ದಗಳ ಕೊರತೆಯಿಂದೇನಲ್ಲ. ಹೆಚ್ಚಾದ ಶಬ್ದಗಳ ಆಡಂಬರದ ಕಾರಣ ಸತ್ತ ಮಧುರ ಮೌನದಿಂದ...(ಹೇಳದೆಯೂ ಎಲ್ಲ ಕೇಳಿಸುವ ಮೌನ ಸಾಧಿಸಲಾದೀತಾ..?)

ಒಂದಿಡೀ ಬದುಕು ಗಂಡನ ಎಂಜಲು ತಾಟಿನಲ್ಲೇ ಊಟ ಮಾಡುತ್ತಾ ಕಳೆದ ಹಳ್ಳಿ ಹೆಣ್ಣ ಮನದಲ್ಲೂ ಅದೆಷ್ಟು ಭಾವಗಳು ನರಳುತ್ತಲಿದ್ದಾವೋ ಗಂಡನೆದುರು ಅರುಹಲಾಗದೇ ಬಚ್ಚಿಟ್ಟುಕೊಂಡಂತವು...
ಯಾವುದೋ ಮುನಿಸು, ಸಣ್ಣ ಬೇಸರ, ತೋರಲಾಗದ ಅಸಮಾಧಾನ, ಅಷ್ಟೇಕೆ ಒಂದು ಪ್ರೀತಿ ಕೂಡ ಹೇಳದೇ ಒಳಗೇ ಉಳಿದಿದ್ದೀತು...

ಕಾಲು ಶತಮಾನ ಒಂದೇ ಹಾಸಿಗೆ ಹಂಚಿಕೊಂಡ ಹೆಂಡತಿಗೂ ಹೇಳದೇ ಉಳಿದ ಅದೆಷ್ಟು ಸತ್ಯಗಳಿದ್ದಾವೋ ಗಂಡನೆಂಬುವನ ಎದೆಯಾಳದಲ್ಲಿ...
ಸುಖ ಕಳೆದ ಮೇಲೆ ಈಗಲೂ ನಿತ್ಯ ನೆನಪಾಗುವ ಅದೇ ಹಳೆ ಗೆಳತಿಯ ಒನಪು...

ಹತ್ತಾರು ವರ್ಷ ಜೊತೆ ಬಾಳಿದ ಮೇಲೂ ಒಂದಷ್ಟು ಸತ್ಯಗಳು ಆಚೆಯೇ ಉಳಿಯುತ್ತವಲ್ಲವಾ..?
ನಾವದಕ್ಕಿಟ್ಟುಕೊಂಡ ಸುಂದರ ಹೆಸರು ಪ್ರೈವೇಟ್ ಲೈಫು, ಒಂಚೂರು ಪ್ರೈವೆಸಿ ಇತ್ಯಾದಿ ಇತ್ಯಾದಿ...

ಭಾವಗಳೆಂದರೆ ಅಂತರಂಗದ ಮಾತುಗಳಲ್ಲವಾ.?
ಎಲ್ಲ ಅರುಹುವುದೆಂದರೆ ಅಂತರಂಗದ ಬೆತ್ತಲೆಯಲ್ಲವಾ..??
ಅಂತರಂಗದಿಂದ ಬೆತ್ತಲಾಗುವುದೆಂದರೆ ಗಂಡ ಉಂಡ ಅದೇ ತಾಟಿನಲ್ಲಿ ಉಂಡು ಕೈತೊಳೆದಷ್ಟು ಅಥವಾ ಒಂದೇ ಹಾಸಿಗೆಯಲ್ಲಿ ಮಗ್ಗಲು ಬದಲಿಸಿದಷ್ಟು ಸುಲಭವಾ...???
ಪ್ರಾಮಾಣಿಕವಾಗಿ ಅಂತರಂಗದಿಂದಲೂ ಬೆತ್ತಲಾಗಬಲ್ಲವಳಾದರೆ ಸೂಳೆ ಕೂಡ ನಿಜದ ಸನ್ಯಾಸಿಯೆನಿಸಿ ಸ್ವರ್ಗ ಸೇರಿಯಾಳೇನೋ...
ಮನದ ಭಾವವೊಂದು ಮಾತಾಗಿ ಹೊರಬರುವ ಹೊತ್ತಿಗೆ ಅದು ಬರೀ ಅರ್ಧಸತ್ಯ ಮಾತ್ರವಾಗಿರುತ್ತೆ ಅಂತನಿಸುತ್ತೆ ನಂಗೆ.
ಕಾರಣ - ಮನಸು ಮತ್ತು ಮಾತುಗಳ ನಡುವೆ ಬುದ್ಧಿಯೆಂಬ ಅಗೋಚರ ಸೆನ್ಸಾರ್ ಮಂಡಳಿ ಕೆಲಸ ಮಾಡುತ್ತಿರುತ್ತೆ.
ಹಾಗಾಗಿ ಆಳದ ಸತ್ಯ ಅಲ್ಲೇ ಸಮಾಧಿಯಾಗಿರುತ್ತೆ ಮನದಾಳದಲ್ಲಿ...

ಕೊನೆ ಮಾತು: ಪ್ರೇಮದ (?) ವಂಚನೆಯಿಂದ ನೊಂದು ಬದುಕಿನಿಂದಲೇ ವಿಮುಖನಾಗಿ, ಹೆಣ್ಣು ಮಾಯೆ ಅವಳ ಪ್ರಭಾವಲಯದಲ್ಲಿರುವ ಈ ಲೌಕಿಕದಾಚೆಯ ಜ್ಞಾನವನರಸಲು ಹಿಮಾಲಯದೆಡೆಗೆ ಬರಿಗಾಲ ಪಯಣವನ್ನಾರಂಭಿಸಿದ ಯುವಕನೋರ್ವ ನಡಿಗೆಯ ಸುಸ್ತು ಕಳೆಯುವ ವಿಶ್ರಾಂತಿ ಕಾಲದಲ್ಲಿ ಸಿಕ್ಕ ಬೀದಿ ಬದಿಯ ವೇಶ್ಯೆಯ ಮಡಿಲಲ್ಲಿ ಜ್ಞಾನೋದಯವಾಗಿ ಮತ್ತೆ ಬದುಕಿಗೆ ಹಿಂದಿರುಗಿ ಸಂಭ್ರಮಿಸಿದನಂತೆ...

ಏನೋ ಬರೆದಿದ್ದೇನೆ. ಸ್ವಲ್ಪ ಗೊಂದಲವಿದೆ. (ಗೊಂದಲದ ಸತ್ಯಗಳು ಅನ್ನಬಹುದಾ..?) ತಪ್ಪೋ ಸರಿಯೋ ಗೊತ್ತಿಲ್ಲ. ನನ್ನಲ್ಲಿ ಹುಟ್ಟಿ ಕಾಡಿದ ಪ್ರಶ್ನೆಗಳ ಕೇಳದಿರಲಾಗದ ನನ್ನ ಚಪಲದಿಂದಾಗಿ ನಿಮ್ಮೆದುರಿಗಿಟ್ಟಿದ್ದೇನೆ. ನಿಮ್ಮೆಲ್ಲ ಅಭಿಪ್ರಾಯಗಳಿಗೂ, ವಿಚಾರ ಮಂಥನಗಳಿಗೂ ನನ್ನಲ್ಲಿ ಸದಾ ಸ್ವಾಗತವಿದೆ...