Thursday, October 25, 2012

ಗೊಂಚಲು - ನಲ್ವತ್ತೆಂಟು.....

ಮಾತಿಲ್ಲ ನನ್ನಲ್ಲಿ.....


ನನ್ನೆದೆಯಾಳದಲಿ ಒಸರುವ ಮಧುರ ಭಾವಗಳ
ಒರತೆಯ ಮೂಲ ಸೆಲೆ ನೀನೇ...

ಹಾಗಂತ ನಾ ಮಾತಲ್ಲಿ ಹೇಳಲಾರೆ...

ನಿನ್ನೆಡೆಗೆ ಬರುವಾಗಿನ ನನ್ನ ಕಾಲ್ಗಳ ವೇಗ
ಜೊತೆ ನಡೆವಾಗ ಹಿಡಿದ ಕೈಗಳ ಬಿಸುಪು
ನನ್ನ ಕಣ್ಗಳಲಿ ಹೊಳೆವ ನಿನ್ನ ಚಿತ್ರ
ನಿನ್ನೆದುರು ದೈನ್ಯವಾಗುವ ನಾನೆಂಬ ನನ್ನ ಅಹಂಕಾರ
ಒಮ್ಮೆಲೇ ಜಾಗೃತವಾಗುವ ನನ್ನ ಸಾಚಾತನ
ಇವೆಲ್ಲ ಸೇರಿಯೂ ಅರ್ಥಮಾಡಿಸಲಾಗದೇ ಹೋದ 
ನಿನ್ನೆಡೆಗಿನ ನನ್ನ ಒಲವ...

ನಿನಗೆ ನಾನು
ಬರೀ ಶಬ್ದಾಡಂಬರದ ಒಣ ಮಾತುಗಳಲ್ಲಿ ಅರುಹಿದರೆ
ಅರ್ಥವಾದೀತಾ...???

ಮೌನದಲೂ ಸಂಭಾಷಿಸಬೇಕಾದ ಪ್ರೇಮಕ್ಕೆ
ಶಬ್ದಗಳ ಅಲಂಕಾರ ಮಾಡಲಾ...

ಇಷ್ಟಕ್ಕೂ ಶಬ್ದಗಳಾದರೂ ಎಲ್ಲಿವೆ ನನ್ನಲ್ಲಿ
ಒಲವ ವರ್ಣಿಸಲು...

ಹಾಗೇ ಅಜ್ಞಾತವಾಗಿ ಇದ್ದು ಬಿಡಲಿ ಬಿಡು
ಇದೊಂದು ಪ್ರೇಮ
ನನ್ನೆದೆಯ ಗರ್ಭಗುಡಿಯಲ್ಲಿ...

ಮೌನವಾಗಿ...

ಗಂಧ ತೇಯ್ದಾದ ಮೇಲಿನ ಕೊರಡಿನಂತೆ...

ಹೊಳೆವ ದೇವರುಗಳ ನಡುವೆ ಸುಮ್ಮನೆ ಕೂತ
ಕಪ್ಪು ಸಾಲಿಗ್ರಾಮದಂತೆ...

ಮನದೇ ಆಶಿಸುವೆ...

ನನಗಿಂತ ಹಿರಿಮೆ ಇರುವ
ನನಗಿಂತ ಒಲುಮೆ ಹರಿಸಬಲ್ಲ ಜೀವ
ನಿನ್ನ ಜೀವನ ಸಾಥಿಯಾಗಲಿ...

ನಿನ್ನ ಬದುಕು ಹಸನಾಗಲಿ...

ಸೊಗಸಾದ ನಾಳೆಗಳು ಎದುರ್ಗೊಳ್ಳಲಿ...

ನಂಗೇನಿದ್ರೂ -
ಈ ಕ್ಷಣಗಳವರೆಗೆ ಖುಷಿ ನೀಡಿದ ನಿನ್ನ
ಗೆಳೆತನದ ಒಡನಾಟವೇ ಸಾಕು...

ಈ ಬದುಕಿಗೆ ಅದಕಿಂತ ದೊಡ್ಡ ನಿರೀಕ್ಷೆಗಳುಳಿದಿಲ್ಲ
ಯಾರಿಂದಲೂ...

ಎನ್ನೆದೆಯ ಹಸಿ ನೆಲದಲ್ಲಿ
ಅಚ್ಚೊತ್ತಿದ ನಿನ್ನ ಹೆಜ್ಜೆಯ ಗುರುತ
ಹಾಗೆಯೇ ಕಾಪಿಟ್ಟುಕೊಂಡು
ಬದುಕಿ ಬಿಡುತ್ತೇನೆ ಒಂದಿಡೀ ಜನ್ಮವ
ಸಾಯದ ನಿನ್ನ ನೆನಪುಗಳೊಂದಿಗೆ...

ಹಾಗೇ ಸುಮ್ಮನೆ...

Monday, October 15, 2012

ಗೊಂಚಲು - ನಲವತ್ತು ಮೇಲೇಳು.....

ಪ್ರಕೃತಿ ಮಡಿಲಲ್ಲಿ ಮಗುವಾಗಿ.....

ಕೆಲವು ಕ್ಷಣಗಳ ಹಿಂದೆ ತಂಗಿ ದನಿತುಂಬಿ ಹಾಡುತ್ತಿದ್ದ ನನ್ನ ಪ್ರೀತಿಯ ಹಾಡು ಮನದಲಿನ್ನೂ ರಿಂಗಣಿಸುತಿತ್ತು...
"ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹಚ್ಚಿದ ದೀಪ..
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ..."
ಆ ಹಾಡಿನ ಗುಂಗು,
ಅಮಾವಾಸ್ಯೆಯ ಹಿಂದಿನ ಕಪ್ಪು ಸುರಿಯುವ ಇರುಳು,
ಕತ್ತಲೆಯ ಚಾದರ ಹೊದ್ದ ಹಸಿರು ವನರಾಜಿ,
ಕಿವಿಯ ತುಂಬ ಪ್ರಕೃತಿ ನುಡಿಸುವ ಜಲತರಂಗಿಣಿ,
ಬಾನಿಂದ ನೇರ ಪಾತಾಳಕ್ಕೆ ಧುಮುಕುತಿರುವ ಹಾಲಹೊಳೆಯಂಥ ಜಲಧಾರೆ,
ಜಲಪಾತದೆಡೆಯಿಂದ ಬೀಸಿಬಹ ಗಾಳಿ ಹೊತ್ತು ತರುವ ತುಂತುರುವಿಗೆ ಮೈಯೊಡ್ಡಿ ನಿಂತಿದ್ದೆ ಕೆಲವು ಕ್ಷಣ ಒಬ್ಬಂಟಿಯಾಗಿ,
ಕಾಲ ಬುಡದಲ್ಲಿ ಸತ್ತುಬಿದ್ದ ಹಾವಿನಂಥ ರೈಲುಕಂಬಿ,
ಮನದಲ್ಲಿ ಹೆಪ್ಪುಗಟ್ಟಿದ್ದ 'ನಾನೆಂಬ' ನನ್ನಹಂಮ್ಮಿನ ಭಾವಗಳೆಲ್ಲ ಆಚೆಬಂದು ಇಂಚಿಂಚಾಗಿ ಬೆತ್ತಲಾಗುತ್ತ - ಇಷ್ಟಿಷ್ಟಾಗಿ ಮೌನದಲ್ಲಿ ಲೀನವಾಗುತ್ತ ಹೋಗಿ ನನ್ನ ನಾ ಕಳೆದುಕೊಂಡು ಎಲ್ಲಾ ಇರುವಲ್ಲೇ ಎಲ್ಲವನೂ ಮರೆತ ಆ ಘಳಿಗೆ ನಾನು ಧ್ಯಾನಸ್ತ...
ಕೆಲವು ಅನುಭೂತಿಗಳಿಗೆ ವ್ಯಕ್ತರೂಪ ಕೊಡಲು ಶಬ್ದಗಳಿಲ್ಲ ನನ್ನಲ್ಲಿ.
ಒಂದಂತೂ ಸತ್ಯ -
ಒಂದು ಕ್ಷಣ ನಿರ್ಭಾವ, ಮರುಕ್ಷಣ ಭಾವಾವೇಶ,
ನಿನ್ನೆ ನಾಳೆಗಳೆಲ್ಲ ಮರೆತು ಹೋಗಿ, ಜೀವಭಾವಗಳೆಲ್ಲ ಅನುಭಾವದ ಭಾವಶೂನ್ಯತೆಯಲಿ ತೇಲಿ ಹೋಗಿದ್ದ ಆ ಕ್ಷಣ ಹೀಗೇ ಇದ್ದು ಬಿಡಲಿ ಅನ್ನಿಸಿತ್ತು.
ಇರಲಾರದು ಎಂಬುದೂ ಗೊತ್ತಿದ್ದ ಕಾರಣ ಆ ಭಾವಗಳನೆಲ್ಲ ನೆನಪಾಗಿ ಕಾದಿಟ್ಟುಕೊಂಡು ಬಂದಿದ್ದೇನೆ. ಮೆಲ್ಲುತಿರಲು ಸವಿಬೆಲ್ಲದಂತೆ ಬದುಕ ಕೊನೆವರೆಗೆ...

*****

ಬೆಳಿಗ್ಗೆಯಿಂದ ಕ್ಯೂ ನಿಂತದ್ದೆ ಬಂತು ಕೊನೆಗೂ ರೈಲು ಟಿಕೇಟ್ ಸಿಕ್ಕಿದ್ಲೆ.
ಇರ್ಲಿ ಬಿಡು ಹುಬ್ಳಿತಂಕಾ ಬಸ್ಸಿಗೆ ಹೋದರೆ ಆತು.
ಸರಿ ರಾತ್ರಿ ಹುಬ್ಳಿ ಕಡೆ ಪಯಣ. ದಂಡು ದೊಡ್ಡದೇ ಇತ್ತು. ಗಲಾಟೆ ಇರಲೇ ಬೇಕುತಾನೆ. ಇದು ಸರ್ಕಾರಿ ಬಸ್ಸು ಸುಮ್ನೆ ಕೂತ್ಕೋಳ್ರೋ ಅಂತ ಹಿರಿಯರಾರೋ ರೇಗಿದ ಮೇಲೇನೇ ನಮ್ಮ ಗಲಾಟೆ ಚಿಕ್ಕದಾಗಿದ್ದು. 
ಬೆಳಿಗ್ಗೆ ಟೈಮ್ ಆಗ್ತಾ ಬಂತು ಹುಬ್ಳಿ ಇನ್ನೂ ಬಂದಿಲ್ಲ ರೈಲು ಸಿಗುತ್ತೋ ಇಲ್ವೋ ಅಂತ ಗಡಿಬಿಡಿ ಶುರು. ಹುಬ್ಬಳ್ಳಿಯಲ್ಲಿ ನಮ್ಮ ಗುಂಪಿಗೆ ಸೇರೋರ ಹತ್ರ ಟಿಕೇಟ್ ತಕೋ ಬರ್ತಾ ಇದೀವಿ ಅಂದ್ರೆ, ನಿಧಾನ ಬನ್ನಿ ಟ್ರೈನು ಲೇಟಂತೆ ಅಂದ್ಲು. ಅಂತೂ ಇಂತೂ ಹುಬ್ಳಿ ತಲುಪಿದ್ರೆ 6.45ಕ್ಕೆ ಬರೋ ರೈಲು ಬರೋಬ್ಬರಿ 4 ತಾಸು ಕಾಯಿಸಿ ಆಮೇಲೆ ಬಂತು. ಅಂತ ಬೇಸರವೇನೂ ಆಗಿಲ್ಲ. ಯಾಕೇಂದ್ರೆ ನಮ್ಮಲ್ಲಿ ಮಾತಿಗೆ ಮತ್ತು ನಗುವಿಗೆ ಬರವಿಲ್ಲ. ಅವು ಭರಪೂರ.
ಶ್ರೀಕಾಂತನ ಮಾತು ಅರ್ಧದಲ್ಲೇ ತಡೆದು ಭಾಸ್ಕರ ಪೂರ್ಣ ಮಾಡ್ತಾನೆ. ಅದಕ್ಕಿನ್ನೊಂದಿಷ್ಟು ಸ್ವಾನಂದನ ಒಗ್ಗರಣೆ. ತಂಗ್ಯಮ್ಮಗಳ ಸ್ವಚ್ಛ ನಗು.  ಯಾವುದೇ ನಿರ್ಣಯ ಪೆಂಡಿಂಗ್ ಆದ್ರೆ ರಘು ಫೈಸಲು ಮಾಡ್ತಾನೆ. ಅದಕ್ಕೆ ನನ್ನ ಕೊನೆಯ ಅಂಕಿತ. ಮೂರು ತಿಂಗಳ ಹಿರಿಯ ನಾನು ಗುಂಪಿನಲ್ಲಿ ಹಿರಿಯ ನಾಗರಿಕ (ರಾಷ್ಟ್ರಪತಿ ಹುದ್ದೆ)...

ಅಂತೂ ಇಂತೂ ರೈಲು ಬಂತು. ಜನರಲ್ ಬೋಗಿಯ ಟಿಕೇಟ್ ತಕೊಂಡು ಅಲ್ಲಿ ಹತ್ತಲು ಜಾಗವಿಲ್ಲದೇ ಶಯನಯಾನದಲ್ಲಿ ನಾವು ಆಸೀನ. ಅರೆ ಬರಲ್ಲ ಅಂದ್ಕೊಂಡ ಟಿಟಿ ಬಂದೇ ಬಿಟ್ಟ. ದಂಡಾನೇ ಕಟ್ಟೋಹಂಗಿದ್ರೆ ಎಲ್ಲಾರ ಕಿಸೇನೂ ಖಾಲಿಯಾಗ್ಬಿಡುತ್ತೆ. ಟಿಟಿಯ ಹೊಟ್ಟೆಗೊಂದಿಷ್ಟು ಕೊಟ್ಟು ಅಬ್ಬ ಬಚಾವು ಅಂದ್ಕೋತಾ, ದೇಶದಲ್ಲಿರೋ ಲಂಚಗುಳಿತನದ ಬಗ್ಗೆ ವಿಶಾದ ವ್ಯಕ್ತಪಡಿಸಿ ನಿಸೂರಾದದ್ದು..:):)

ಹೋಓಓಓಓಓಓ...
ಸೇರಿಕೊಂಡ ಹೊಸಬರಿಗೆ ಭವ್ಯ ಸ್ವಾಗತ. ಕ್ಯಾಸಲ್ ರಾಕ್ ನಲ್ಲಿ ಸೇರಿಕೊಂಡ ನಾಲ್ವರನ್ನೂ ಸೇರಿ ನಮ್ಮ ಟೀಮಿನ ಸಂಖ್ಯೆ ಹದಿನಾಲ್ಕರಲ್ಲಿ ಸಮಾಪ್ತಿ...

ರೈಲು ಸುರಂಗದಲ್ಲಿ ಹೊಕ್ಕ ತಕ್ಷಣ ಒಂದೇ ಸಮನೆ ಶೀಟಿ ಬಜಾನಾ...
ಕೊನೆಗೂ ಇಳಿಯೋಕಾಯ್ತು. ಆಗ ಮಟಮಟ ಮಧ್ಯಾಹ್ನದ 2 ಘಂಟೆ.
ಗೂಡಂಗಡಿಯಂಥ ಕಛೇರೀಲಿ ಕೂತಿದ್ದ ರೈಲ್ವೆ ಅಧಿಕಾರೀನ ಮಾತಾಡ್ಸಿ ಒಂದು ಕಿ.ಮೀ. ನಡೆದು ನಮ್ಮ ಗಮ್ಯ ತಲುಪಿದ್ದಾಯ್ತು.
ಅಬ್ಬಾ ತೆರೆದ ಬಾಯಿ ಮುಚ್ಚಲು ಒಂದರೆ ಕ್ಷಣ ಬೇಕಾಯ್ತು. ಒಂದು ಸುತ್ತು ಅಲ್ಲಿ ಹಾರಿ - ಇಲ್ಲಿ ನೋಡಿ, ಅವನ್ಜೊತೆ - ಇವನ್ಜೊತೆ ಒಂದೊಂದು, ಎಲ್ರೂ ಸೇರಿರೋದು ಇನ್ನೊಂದು ಅಂತ ಹೇಳ್ತಾ ಪೋಟೋ ಕ್ಲಿಕ್ಕಿಸಿದ್ದಾಯ್ತು.


ಅರೇ ಇಷ್ಟೊತ್ತೂ ಹೊರಟದ್ದೆಲ್ಲಿಗೆ ಅಂತಾನೇ ಹೇಳಿಲ್ಲ ಅಲ್ವಾ. ನಾವುಗಳು ನೋಡೋಕೆ ಹೋಗಿದ್ದು ಗೋವಾದ ಗಡೀಲಿರೋ "ದೂದ್ ಸಾಗರ" ಎಂಬ ಜಲಪಾತಕ್ಕೆ. ಅದೊಂದು ಪ್ರಕೃತಿ ನಿರ್ಮಿತ ಅದ್ಭುತ ವೈಭವ.

ಯಾರೋ ಕೂಗಿದ್ರು ಹೊಟ್ಟೆ ತಾಳ ಹಾಕ್ತಾ ಇದೆ ಅಂತ. ಆಗ ಎಲ್ರಿಗೂ ಊಟದ ನೆನಪಾಯ್ತು. ಇನ್ನೊಂದು ಸುತ್ತು ಆಮೇಲೆ ನೋಡೋಣ. ಸಂಜೆತನಕ ಸಮಯ ಇದೆ ಅಂತ ಎಲ್ರೂ ಕಟ್ಟಿಕೊಂಡು ಹೋದ ಬುತ್ತಿ ಬಿಚ್ಚಿ ಕೂತ್ವಿ. ಹೊಟ್ಟೆಪರಮಾತ್ಮ ತಣ್ಣಗಾದ ಮೇಲೆ ಮತ್ತೆ ಶುರು. ಸಣ್ಣ ಪುಟ್ಟ ಸಾಹಸಗಳು, ನೀರಿನ ಚೆಲ್ಲಾಟ...ಬೇಡದ ಸಾಹಸಕ್ಕೆ ಹೋಗ್ಬೇಡ್ರೋ ಅನ್ನೋ ತಂಗಿಯರು, ಅಲ್ಲಿಗೆ ಹೇಗೆ ಹೋಗೋದು ನೋಡೋ ಅನ್ನೋ ಗೆಳೆಯ...
ರೈಲುಹಳಿಯ ಮೇಲೆ ಅಷ್ಟುದೂರದ ವಾಕಿಂಗು..ಸಂಜೆಗೆ ಒಂದೇ ಇರೋ ಪ್ಯಾಸೆಂಜರ್ ರೈಲಿನ ಪ್ರಯಾಣಿಕರಿಗೊಂದು ಟಾಟಾ...ಮಾತು, ನಗು, ಕಾಡಿನ ಸಂಗೀತ...ಅರೇ ಸಂಜೆ ಇಳಿದದ್ದೇ ಗೊತ್ತಾಗಿಲ್ಲ. ಆಗಲೇ ಸಣ್ಣ ಕತ್ತಲು...


ಚುಕುಬುಕು ರೈಲು...

ನೀರ ಓಕುಳಿಯಾಟ...
ಬಿದ್ದೀರಿ ಜೋಕೆ...

ರಾತ್ರಿ ಕೂತಿರೋಕೆ ಇರುವ ಎರಡು ಅರಣ್ಯಇಲಾಖೆ ಕುಟೀರಗಳಲ್ಲಿ ಒಂದನ್ನು ಚೊಕ್ಕ ಮಾಡ್ಕೊಂಡು, ಮತ್ತೊಂದು ಸುತ್ತು ಜಲಪಾತದೆದುರು ಹೋಗಿ ಕೂತು ಸಂಜೆಯ ಸೊಬಗನ್ನು ಸವಿದು ಬರುವುದರೊಳಗೆ ನಾವಿರಬೇಕೆಂದುಕೊಂಡ ಸ್ಥಳ ಮತ್ತೊಂದು ಪ್ರವಾಸೀ ತಂಡದ ಪಾಲಾಗಿತ್ತು. ಇರ್ಲಿ ಬಿಡಿ ಅಲ್ಲೇ ಕೆಳಗಡೆ ಇದ್ರಾಯ್ತು ಅಂತ ನಮ್ಮ ಲಗೇಜನ್ನೆಲ್ಲ ಇಳುಕಿ ಒಂದು ಚಾದರಾನ ಹಾಸಿಕೊಂಡು ಕೂತದ್ದು. ಕುಟೀರದಿಂದಾಚೆ ಸಣ್ಣ ಹೊಡತ್ಲು (ಬೆಂಕಿ) ಹಾಕ್ಕೊಂಡು ಕೂತು ರಾತ್ರಿಯ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರ ನೆನಪು, ಕನಸುಗಳ ಬುತ್ತೀನ ಹರವಿಕೊಂಡು ಕೂತರೆ ರಾತ್ರಿ ಚಿಕ್ಕದಾಯ್ತು ಅಂತನ್ನಿಸ್ತು.
ಮಧ್ಯೆ ಮಧ್ಯೆ ಕೆಲವರು ಅಲ್ಲೇ ಮಲಗಿ, ಇನ್ಕೆಲವರು ಕೂತಲ್ಲೇ ತೂಕಡಿಸಿ ನಿದ್ದೇನ ತಣಿಸಿಕೊಂಡರು. ನಾನೊಂದಷ್ಟು ಹೊತ್ತು ಒಂಟಿಯಾಗಿ ಜಲಧಾರೆಯೆದುರು ನಿಂತು ಬಂದೆ. ಆಮೇಲೊಂದಷ್ಟು ಹೊತ್ತು ನಾನು, ಶ್ರೀಕಾಂತ, ರಘು, ಸ್ವಾನಂದ ಜಲಧಾರೆಯೆದುರು ಭಾವಗಳ ವಿನಿಮಯ ಮಾಡಿಕೊಂಡ್ವಿ.


ಮತ್ತೆ ಬೆಂಕಿಯೆದುರು ಎಲ್ಲ ಸೇರಿ ದೊಂಬರಾಟ...
ಯಾರದು ಸಿಗರೇಟು ಹಚ್ಚಿದ್ದು..?
ನಾನಂತೂ ಒಳ್ಳೇ ಹುಡ್ಗ ಹಾಗೆ ಎಲ್ಲಾರೆದ್ರೂ ಸೇದಲ್ಲಾ ಎಂಬ ಉತ್ತರ...

ಅರೇ ಆಗಲೇ ನಾಲ್ಕು ಘಂಟೆ. ಎದ್ದೇಳಿ ಹೊರಡಬೇಕು ಅಂತ ಎಲ್ರನ್ನೂ ಎಬ್ಬಿಸ್ಕೊಂಡು ಹೊರಟದ್ದು ರೈಲು ಹಳಿಯಗುಂಟ ಕ್ಯಾಸಲ್ ರಾಕ್ ಕಡೆಗೆ...
14 ಕಿಲೋಮೀಟರುಗಳ ನಿರಂತರ ನಡಿಗೆಗೆ ನಾಂದಿ...ಒಂದಷ್ಟು ದೂರ ಬ್ಯಾಟರಿ ಬೆಳಕಲ್ಲಿ ಬಂದರೆ ಮಧ್ಯ ಮಧ್ಯ ಗೂಡ್ಸ್ ರೈಲಿನ ಬೆಳಕು.. ಸುರಂಗ ಮುಗಿದಿಲ್ಲ ಆಗಲೇ ರೈಲು ಬಂತು. ತುಂಬ ಜಾಗವಿಲ್ಲ. ಎಲ್ಲಾ ಕಿವಿಮುಚ್ಕೊಂಡು  ಸುರಂಗದ ಗೋಡೆಗೆ ಹಲ್ಲಿಗಳಂತೆ...


ಈ ಸೇತುವೆ ಹತ್ತಿರ ಸೂರ್ಯನುದಯ...
ನಡಿಗೆಗೆ ಸಣ್ಣ ವಿಶ್ರಾಂತಿ...
ಅದ್ಯಾವುದೋ ಕಣಿವೆಯ ನಡುವಿನ ಸೇತುವೆಯೆದುರು ಸೂರ್ಯೋದಯವಾಯ್ತು.
ಇನ್ಯಾವುದೋ ಪುಟ್ಟ ತೊರೆಯ ದಡದಲ್ಲಿ ಕೆಲವರ ನಿತ್ಯವಿಧಿ..
ದಾರಿ ನಡುವಿನ ಸಣ್ಣ ಬಳುಕು ಜಲಧಾರೆಯ ಸಮ್ಮುಖದಲ್ಲಿ ಬಿಸ್ಕತ್ತು, ಬ್ರೆಡ್ಡು, ಜಾಮು...ಸ್ವಲ್ಪ ಎನರ್ಜಿ...
ಆಗಲೇ ಸಮಯ ಆಯ್ತು. ಇನ್ನೂ ಅರ್ಧದಾರಿ 
ಬಾಕಿ ಇದೆ. ಸಣ್ಣ ವೇಗ. ಸ್ವಲ್ಪ ಸಮಯ ಮಾತ್ರ. ಮತ್ತೇನೋ ಹೊಸತು ಕಂಡ ತಕ್ಷಣ ಎಲ್ಲರ ನಡಿಗೆಯೂ ನಿಂತೇ ಹೋಗುತ್ತೆ. ನಮ್ಮ ಮಾತು, ಮೌನಗಳಿಂದ ನಿರ್ಜೀವ ರೈಲು ಕಂಬಿಗಳಿಗೂ ಮುಂಜಾನೆಯಲಿ ಜೀವ ಬಂದಂತೆ ಭಾಸ...
ಮುಕ್ತಾಯದ ಹಂತದಲ್ಲಿ ನಮ್ಮ ಪ್ರವಾಸ...


ರೈಲು ದಾರಿಯ ಗುಂಟ...
ಅದೋ ಕ್ಯಾಸಲ್ ರಾಕ್ ಸ್ಟೇಷನ್ ಯಾರೋ ಕಿರುಚಿದ್ರು..
ಎಲ್ಲರ ಮೊಗದಲ್ಲೂ ಬಂದೇ ಹೋಯ್ತಾ ಎಂಬ ಬೇಸರ ಮತ್ತು ರೈಲು ಹೋಗುವ ಮುಂಚೆಯೇ ತಲುಪಿದೆವಲ್ಲಾ ಎಂಬ ಖುಷಿ ಎರಡೂ ಮನೆ ಮಾಡಿತ್ತು...
ಒಬ್ಬೊಬ್ಬರಾಗಿ ವಿದಾಯ ಹೇಳ್ತಾ ಹೇಳ್ತಾ ಕೊನೇಲಿ ಎಲ್ಲರ ಮನಗಳಲ್ಲೂ ನೆನಪುಗಳು ಮನೆಮಾಡಿಕೊಂಡವು...
ನನ್ನವರು
ವಿದ್ಯಾ, ರಘು, ವಿನಾಯಕ, ಶ್ರೀಕಾಂತ, ರಾಘು, ಸ್ವಾನು, ವಿಶು, ರಂಜನ್, ಶಕು, ಪವಿ, ರಾಜಮಾತಾ, ಬಾಚು, ಸತೀಶ
ಒಂದಷ್ಟು ಛಾಯಾ ಚಿತ್ರಗಳು - ನನ್ನ ಕ್ಯಾಮರಾ ಕಣ್ಣಲ್ಲಿ...

ಗಮ್ಯದ ಜಲಪಾತವ ಸೇರುವ ದಾರೀಲಿ ಸಿಗುವ ಸಣ್ಣ ಪುಟ್ಟ ಝರಿ, ತೊರೆಗಳ ಚೆಲುವನ್ನೂ ಸವಿದರೆ ಪ್ರಯಾಣ ಎಷ್ಟು ಸೊಬಗೇರುತ್ತೆ ಅಲ್ಲವಾ...
ಪ್ರವಾಸದ್ದೂ ಮತ್ತು ಬದುಕಿನದ್ದೂ.....

Monday, October 8, 2012

ಗೊಂಚಲು - ನಲವತ್ತಾರು.....

ನನ್ನ ಸ್ವಾರ್ಥ.....

ಎಂಥ ದುರಾಸೆ
ಬಯಸುತ್ತೇನೆ -
ಎನ್ನೆಲ್ಲ ದೌರ್ಬಲ್ಯಗಳ ಸಹಿಸಿ
ಎನ್ನ ನೋವುಗಳನೆಲ್ಲ ಹೀರಿ
ಎನ್ನ ಹಿಂದೆ ನೆರಳಂತೆ ಉಳಿದು
ಖುಷಿಯ ಮೇರೆ ಮೀರುವಂತೆ ಮಾಡಿ
ಜೀವಿಸಲು ಸ್ಫೂರ್ತಿ ಮೂಡುವಂತೆ
ಅವಳೆನ್ನ ಪ್ರೀತಿಸಲೆಂದು...

ಆದರೆ 
ಒಂದು ಕ್ಷಣ ಕೂಡ ಯೋಚಿಸಲೊಲ್ಲೆ
ಹಾಗೆಲ್ಲ ನಾನೂ ಅವಳ ಪ್ರೀತಿಸಬಹುದೆಂದು...

ಪ್ರೀತಿಸಬಲ್ಲ ಮನಸಿಲ್ಲ
ಪ್ರೀತಿಸಲ್ಪಡುವ ಬಯಕೆ ಬೆಟ್ಟದಷ್ಟು...

ಎಂಥ ಕ್ರೌರ್ಯ
ಬಯಕೆ ದೇಹಕೆ -
ಬಿಗಿದ ತೆಕ್ಕೆ ಸಡಿಲದಂತೆ
ಅವಳಂಗಾಂಗಗಳ ಅಂದವನೆಲ್ಲ ಒಂದೇಟಿಗೇ ಹೀರಬೇಕೆಂದು
ಹೀರುತ್ತಲೇ ಇರಬೇಕೆಂದು...

ಆದರೆ
ಚಿಂತಿಸಲೊಲ್ಲೆ ಒಮ್ಮೆಯೂ
ಅವಳ ಕಣ್ತಣಿಸಲು ನನ್ನಲೇನಿದೆ ಅಂದವೆಂದು...
ಕೇಳಲೊಲ್ಲೆ
ಅವಳ ಸುಖದ ಕಲ್ಪನೆ ಏನೆಂದು...

ಸುಖ ಕೊಡುವ ತೋಳ ಬಲ
ವೀರ್ಯವಂತ ಸ್ಖಲನ ಶಕ್ತಿ
ಮೈಯಲ್ಲಿದೆಯಾ ಎಂಬ ಅರಿವಿಲ್ಲ...
ನಾಭಿಯಾಳದಲ್ಲಿ ಮಾತ್ರ
ಎಂದೂ ಹಿಂಗದ ಸದಾ ವ್ಯಗ್ರ ನಿರ್ಲಜ್ಜ ಕಾಮ...

Monday, October 1, 2012

ಗೊಂಚಲು - ನಲವತ್ತು ಮತ್ತೈದು.....

ಸಮಾಧಾನ.....

ಅಂದು -
ಆಗಷ್ಟೇ ರುದ್ರಭೂಮಿಯಿಂದ ಹಿಂತಿರುಗಿದ್ದೆ. ನನ್ನ ಮಗ ಅಳುತ್ತಳುತ್ತಲೇ ಕೇಳಿದ್ದ, ಅಮ್ಮಾ ತಾತ ಎಲ್ಲಿ ಹೋದ್ರು.?
ಆಗಿನ್ನೂ ಮಗನಿಗೆ ನಾಲ್ಕು ವರ್ಷ. 
ದೇವರ ಹತ್ರ ಪುಟ್ಟಾ ಅಂದಿದ್ದೆ. 
ಮತ್ತೆ ಪ್ರಶ್ನೆ - ಯಾಕೆ.?
ದೇವರಿಗೆ ತಾತ ಅಂದ್ರೆ ತುಂಬಾ ಪ್ರೀತಿಯಂತೆ. ಅದಕ್ಕೇ ತಾತನ್ನ ತನ್ನಹತ್ರ ಕರೆಸಿಕೊಂಡಿದಾನೆ, ಇನ್ನು ಮೇಲೆ ತಾತ ಆಕಾಶದಲ್ಲಿನ ನಕ್ಷತ್ರವಾಗಿ ನಮ್ಮ ನೋಡ್ತಿರ್ತಾರೆ ಅಂತೆಲ್ಲ ಏನೇನೋ ಹೇಳಿ ಸಮಾಧಾನಿಸಿದ್ದೆ. ಅಂದಿನಿಂದ ನನ್ನಷ್ಟೇ ತಾರೆಗಳನ್ನೂ ಪ್ರೀತಿಸಹತ್ತಿದ್ದ.

ಈಗ ಅದೇ ಮಗನಿಗೆ ಕನಸು ಬಿಚ್ಚಿಕೊಳ್ಳುವ ಹದಿನಾರರ ವಯಸು.
ನನ್ನನ್ನೇ ಸಮಾಧಾನಿಸುತ್ತಿದ್ದಾನೆ.
ಅಮ್ಮಾ - ಉಹುಂ ಅಮ್ಮ ಅಲ್ಲ ನೀನು. ಈ ಬದುಕು ನೀಡಿದ ಮೊದಲ ಜೀವದ ಗೆಳತಿ. ನೀ ನೊಂದು ಕಣ್ಣೀರಾದರೆ ನಾ ಕಂಗೆಡುತ್ತೇನೆ. ಮತ್ತೇನಿಲ್ಲ ಆ ನಿನ್ನ ದೇವರಿಗೆ ನಾನೆಂದರೆ ತುಸು ಹೆಚ್ಚೇ ಪ್ರೀತಿಯಂತೆ. ಅದಕೇ ಸ್ವಲ್ಪ ಮುಂಚಿತವಾಗಿ ಬಾ ಅಂತಿದಾನೆ. ನಂಗೊತ್ತು - ನಿನ್ನ ಮಡಿಲ ಬಿಸುಪು ಮತ್ತು ಕಂಪು ಅಲ್ಲೆಲ್ಲೂ ಇಲ್ಲ. ಆದರೂ ನೀನಿಲ್ಲಿ ನಗುತಿದ್ದರೆ ಅಲ್ಲೂ ನಾನು ನಚ್ಚಗಿದ್ದೇನು. ನಿನ್ನ ಈ ಪುಟ್ಟ ತಾರೆ ಮನೆಯಂಗಳದಿಂದ ಆಗಸಕೆ ಹಾರಿ ಕೋಟಿತಾರೆಗಳ ನಡುವೆ ಮಿನುಗುವದಂತೆ. ಇಲ್ಲಿ ಜಿನುಗುವ ನಿನ್ನ ಪ್ರೀತಿಯ ಅಲ್ಲಿಂದಲೇ ಸವಿದೇನು...

ಆದರೂ ಅಮ್ಮಾ -
ಎಲ್ಲ ನೀಡುವವ ಅವನೇ ಆದರೆ, ನೋವ ನುಂಗಿ ನಗೆಯ ಹಂಚು ಎಂಬ ನಿನ್ನ ಎಂದಿನ ಮಾತು ಅವನಿಗೇಕೆ ಅನ್ವಯಿಸುವುದಿಲ್ಲ.?
ಈ ಜಗದಿ ಯಾಕಿಷ್ಟು ನೋವಿದೆ.??
ಅವನೇ ಬಿಡಿಸಿದ ಅವನದೇ ಚಿತ್ರಕೆ ಬಣ್ಣ ತುಂಬುವ ವೇಳೆ ಹರಿದೆಸೆವ ಹಂಬಲವೇಕೆ.???
ತಾನೇ ಬಿಡಿಸಿದ್ದು ಎಂಬ ಅಹಮಿಕೆಯಾ...????


ನಗೆಯ ಹರಡಬೇಕಿದ್ದವನು ನಿನ್ನ ಕಣ್ಣಲ್ಲಿ ಹನಿಯನಿಳಿಸಿ ಹೋಗುತಿರುವ ನನ್ನ ಕ್ರೌರ್ಯವ ಕ್ಷಮಿಸಿಬಿಡಮ್ಮಾ....


ಇಂದು - 
ವೈದ್ಯರುಗಳೆಲ್ಲ ಸೋಲೊಪ್ಪಿಕೊಂಡು ನನ್ನ ಕರುಳಿನ ಸಾವಿಗೆ ಮಾರುದ್ದದ ಖಾಯಿಲೆಯ ಹೆಸರಿಟ್ಟು ಬದುಕಿಗೆ ಗಡುವು ನೀಡಿದ ದಿನ...