Saturday, August 1, 2020

ಗೊಂಚಲು - ಮುನ್ನೂರಾ ನಲವತ್ತು ಮೇಲೆರಡು.....

ನನ್ನ ಹುಟ್ಟು.....
(ಹಾರುವ ಕನಸಿಗೆ ಗಾಳಿಯೇ ರೆಕ್ಕೆಯ ಸೆರಗು...)

ಕರುಳ ಬಳ್ಳಿಯ ಕತ್ತರಿಸಿದರು...
ಬಯಲಿಗೆ ಬಿದ್ದ ಭಯಕೆ ಕಣ್ಮುಚ್ಚಿಯೇ ಚೀರಿದೆ...
ಫಕ್ಕನೆ ಎತ್ತಿಕೊಂಡು ಎದೆ ಹಾಲು ಬಳ್ಳಿಯ ಬಾಯಿಗಿಟ್ಟು ಬೆಳಕಿಗೆದೆಗೊಡಲು ಶಕ್ತಿ ಹರಿಸಿದಳು...
ಅಷ್ಟೇ,
ಕಣ್ಕುಕ್ಕುವಂತೆ ಜಗವನೇನೂ ಗೆದ್ದಿಲ್ಲ; ಆದರೆ ನನ್ನೊಳು ನಾ ಎಂದೂ ಸೋತಿಲ್ಲ...
ಅವಳ ಎದೆ ಹಾಲು ಅಮೃತವಿರಲಿಕ್ಕಿಲ್ಲ - ಆದರೆ, ಆತ್ಮ ಸ್ಥೈರ್ಯಕಿಂತ ಅಮೃತ ಎಳ್ಳಷ್ಟೂ ಮೇಲಲ್ಲ...
ನೆತ್ತಿ ನೇವರಿಸಿ ಅಂಗಳಕೆ ಬಿಟ್ಟ ಅವಳ ಹಸ್ತದಲಿ ಬದುಕನು ಪ್ರೀತಿಯಿಂದ ಆವರಿಸೋ ಪ್ರೀತಿ ತುಂಬೋ ಜಾದೂ ಇದೆ...
ಅವಳ ಮಮತೆ ಮಡಿಲಲಿ ಕುಂತೇ ಗ್ರೀಷ್ಮಗಳ ದಾಟಿದ್ದು ವಸಂತಗಳ ಮಿಂದದ್ದು...
#ಆಯೀ_ಅಂದರೆ_ಆತ್ಮಕೆ_ಸಾಮು_ಹಿಡಿದವಳು...

ಎದೆಯ ಇರಿವ ನೋವ ಹನಿಯೂ ಶಾಪವಾಗದ ಸೂತ್ರವು...
ಕರುಳ ಕೊರೆವ ನಿಟ್ಟುಸಿರಲೂ ಪ್ರೀತಿಯೊಂದೇ ಪಾತ್ರವು...
ಎಂದೂ ಬರಿದಾಗದ ಅವಳ ಸೆರಗ ಗಂಟಿನ ಹರಕೆ, ಹಾರೈಕೆಗಳ ಹಮ್ಮಿಣಿಯದು ಎನ್ನ ಜಗವ ಆರೈಯ್ಯುವ ಸತ್ರವು...
ಅವಳೆಂಬ ಅವಳ ಅಖಂಡ ಕಾರುಣ್ಯವೇ ಎನ್ನ ಕಾಯ್ವ ದೈವವು...
#ಹೆಗ್ಗಣ_ಮುದ್ದು...

ದೇವನೆಂಬುವನಿದ್ದು ಅವ ಮುನಿದು ನಿಂತರೂ ಎದುರು ಸೆಟೆದು ನಿಂತೇನು ಚೂರೂ ಭಯವಿಲ್ಲದೆ...
ಆದರೆ,
ಅವಳ ಕಣ್ಣಂಚು ತುಂಬಿಕೊಂಡ ಎಲ್ಲ ಘಳಿಗೆಯಲೂ ದೊಡ್ಡ ನಗೆಯ ಮಗ್ಗುಲಲ್ಲೇ ಇಂಚಿಂಚು ಸತ್ತಿದ್ದೇನೆ ಒಳಗೊಳಗೇ...
#ನನ್ನ_ಕಣ್ಣಲ್ಲಿ_ನಾ_ಸಾಯೋ_ಸಂಜೆಗಳು...

ಆಜನ್ಮ ಅವಿವಾಹಿತರಾಗಿರೋ ಲಾಭ ಅಂದ್ರೆ, ಹುಟ್ದಬ್ಬದ್ ದಿನದ ಹೊರತು ಬೇರ್ಯಾವಾಗ್ಲೂ ವಯಸ್ಸಾಗೋತೂ ಹೇಳು ಚಿಂತೆ ಕಾಡದೇ ಇಪ್ಪುದು.‌‌..
#ಮಜವಾದ_ಸತ್ಯ...
#ಜ್ಞಾನೋದಯ...

ಎದೆಬಿರಿಯೆ ನಕ್ಕ ಮರುಘಳಿಗೆ ಅದೇ ಹಳೆಯ ನೋವು ಹೊಸದಾಗಿ ಪರಿಚಯಿಸಿಕೊಳ್ಳುತ್ತೆ ಎದೆಯ - ಗಂಟಿಗೊಂದು ಗೆಲ್ಲುಗಳಾಗಿ ಟಿಸಿಲೊಡೆದು...
ಕಾರಣ,
ನಗೆಯ ಬೆಳಕಲ್ಲಿ ವಿಷಾದದ ಎಲ್ಲಾ ಮಗ್ಗುಲುಗಳೂ ಇನ್ನಷ್ಟು ಸ್ಪಷ್ಟಗೋಚರವಾಗಿ ಎದ್ದು ನಿಲ್ಲುತ್ತವೆ - ರಕ್ತಬೀಜಾಸುರ ಬಲಪಡೆದು...
#ಜನುಮಕ್ಕಂಟಿದ_ರಾಗ...

ಯಾವ ಋತು ರಾಗವೂ ಜೀವತುಂಬದ, ಸಾವೂ ಮೂಸಿ ನೋಡದ ಹಪ್ಪು ಸ್ತಬ್ಧತೆಯ ಒಂಟೊಂಟಿ ಹಾದಿ...
ಎದೆಯ ಹಾಡಿಯ ತುಂಬಾ ಅಂಡಲೆಯುವ ಅತೃಪ್ತ ಆಸೆಗಳ ಕೊಳ್ಳಿ ದೆವ್ವಗಳು...
ಗೊಬ್ಬು ಮಣ್ಣು, ಅಬ್ಬೆ ಮಳೆಗೂ ಜೊಳ್ಳು ಕಾಳು ಚಿಗುರುವುದಿಲ್ಲ... 
ಕೆಲ ಬದುಕುಗಳೂ ಹಾಗೇನೇ...
ಮುಫತ್ತು ಹಳವಂಡಗಳ ಗಾಯಗಳು ಉಳಿಸಿ ಹೋದ ಗೀರು ಗೀರು ಗುರುತುಗಳಷ್ಟೇ ಸ್ವಂತ ಸ್ವಂತ ಅಲ್ಲಿ...
#ನಾ_ಯಾರಿಗಾದೆನೋ...

ಜೋರು ಉರಿವ ದೀಪದಲ್ಲಿ ಫಟ್ಟನೆ ನಂದುವ ದೊಡ್ಡ ಆಸೆ ಮತ್ತು ಸಣ್ಣ ಭೀತಿ...
#ನನ್ನ_ನಗು_ಮತ್ತು_ನಾನು...

ಬಂದದ್ದು ನನ್ನ ಆಯ್ಕೆಯಲ್ಲ - ಹೋಗೋ ದಾರಿ ಗೊತ್ತೇ ಇಲ್ಲ - ಇದ್ದಲ್ಲೇ ಇದ್ದಂತೇ ಇದ್ದು ಕೊಳೆಯೋ ಜಂತು ಜೀವ...
#ನಾನು...

ಆಯ್ಕೆಗಳ ಕೊಡಲೀ ಎಂಬ ಆಶೆಬುರುಕ ಹಂಬಲದಲ್ಲಿ ಕೈಚಾಚ್ತೇನೆ...
ಆಯ್ಕೊಂಡ್ ತಿನ್ನೋಲೇ ತಿರಬೋಕಿ ನನ್ಮಗನೇ ಅಂತಂದು ಗಹಗಹಿಸುತ್ತೆ ಬದುಕು...
#ಕಿಲುಬ್ಹಿಡಿದ_ಹಾದಿ...

ಇಲ್ಲಿ ಆನೆಂಬ ಸುಳ್ಳಿಗೆ ಮಿಗಿಲಿಲ್ಲ.‌..
ನಗುನಗುತ್ತಾ ಅಳುತ್ತಳುತ್ತಾ ಮಿಡಿಯುವ ಗುಡುಗುವ ಆನೆಂಬ ಸುಳ್ಳಿಗೆ ಮಿಗಿಲೇನಿಲ್ಲ.‌..
#ನಡಿಗೆ...

ಬದುಕು ತುಂಬಿಕೊಂಡಿರುವಾಗ ಉದ್ದೇಶ ರಹಿತ ನಡಿಗೆ ಒಂದು ಚಂದ ಕನಸು...
ಬದುಕಿಗೇ ಒಂದು ಉದ್ದೇಶವಿಲ್ಲದಾದಾಗ ನಗೆಯ ಮುಖಮುರಿಯೋ ಖಾಲಿತನದಲ್ಲಿ ಕುದಿಯುತ್ತಾ ನಡಿಗೆಯನೇ ನಿರಾಕರಿಸುವ ಸೂಕ್ಷ್ಮ ಮನಸು...
ಹಳೆಯ ನೋವುಗಳೆಲ್ಲಾ ಹಪ್ಪು ಹಿಡಿದಿವೆ...
ಜೊತೆ ನಡೆಯೋಕೆ ಹೊಸತೊಂದು ನೋವಾದರೂ ಬೇಡವಾ...
ಸಂಜೆಗಳು ಖಾಲಿಖಾಲಿಯಾದರೆ ಇರುಳಿಗೆ ಹೊಚ್ಚಿಕೊಳ್ಳಲು ಬರೀ ಕತ್ತಲಷ್ಟೇ ಉಳಿದುಬಿಡುತ್ತೆ...
ಹಾಗೆಂದೇ -
ಖಾಲಿಯನ್ನು ತುಂಬಿಕೊಳ್ಳುತ್ತೇನೆಂದೇ ಹೊರಡುತ್ತೇನೆ ಪ್ರತಿ ಬಾರಿಯೂ ಹೊಸತೇ ಅನ್ನಿಸೋ ಹುಚ್ಚಾಟದ ಹಾದಿಯಲ್ಲಿ...
ಪ್ರಾರಬ್ಧ ನೋಡಿ, ಮತ್ತದೇ ಖಾಲಿಯೆಡೆಗೇ ನಡೆದಿರುತ್ತೇನೆ ನೆನಪಿಂದ ಹಿಂತಿರುಗಲರಿಯದ ದಾರಿಯಲ್ಲಿ...
#ಬರೀ_ಸುಸ್ತೊಂದೇ_ಗಳಿಕೆ...

ತುಂಬಿಕೊಳ್ಳಲೇನೂ ಇಲ್ಲ ಇಲ್ಲಿ...
ಖಾಲಿಯಾಗುತ್ತಾ ಖಾಲಿಯೆಡೆಗೇ ನಡೆಯುವುದು...
ಖಾಲೀ ಕೈಯ್ಯ ಕೋಲೆ ಬಸವ ನಾನು...
ಒಂದೊಂದೇ ಒಂದೊಂದೇ ನಿನ್ನೆಗಳನು ಕಳಚಿಕೊಳ್ಳುತ್ತಾ, ಅಳಿಸಿ ಹಾಕುತ್ತಾ ಇಷ್ಟಿಷ್ಟಾಗಿ ನಾನೂ ಅಳಿದು ಹೋಗುವ, ಸಾಲದ ನಾಳೆಗಳಿಗಾಗಿ ಚಡಪಡಿಸೋ ಉದ್ರಿಕ್ತ ಪ್ರಕ್ರಿಯೆ - ಬದುಕೂ ಸುರತದಂತೆಯೇ ಅಥವಾ ನಿರಂತರ ಸುರತವೇ...
ಹುಣ್ಣಿಮೆಗೆ ಬೆಳುದಿಂಗಳಾಗಿ ಅರಳಿ ಅಮಾವಾಸ್ಯೆಯ ಹೊತ್ತಿಗೆ ಕತ್ತಲೇ ಆಗುವ ಚಂದಿರ - ಅಂತೆಯೇ ಅದೇ ಕತ್ತಲ ಕುಹರದಲೇ ಶಕ್ತಿಯ ತುಂಬಿಕೊಂಡು ಮತ್ತೆ ಆವರ್ತನ...
ಆದರೂ,
ಬದುಕು ಎಷ್ಟೊಳ್ಳೆ ತಾಯ್ಮನದ ಮೇಷ್ಟ್ರು...
ನಿರಂತರ ಸೊನ್ನೆ ಸುತ್ತೋ ನನ್ನಂಥ ಖಡ್ಡ ಮತ್ತು ದಡ್ಡ ಖುಮಾಂಡುವಿಗೂ ತನ್ನಂಗಳದಿ ಆಡಲು ಬಿಡುತ್ತೆ...!!!

ಅವಳು ಅಳು ನುಂಗಿ ಬದುಕ ಊಳುತ್ತಾಳೆ - ಆ ಹೋಳಿಯಲ್ಲಿ ನಾನು ನಗೆಯ ಬಿತ್ತಿಕೊಳ್ಳುತ್ತೇನೆ...
ನೆಲದ ಎದೆ ಬಿರಿಯದೇ ಹಸಿರಿಗೆ ಉಸಿರೆಲ್ಲಿಂದ...
ನಿತ್ಯ ಬಸಿರ ಧರಿಸಿ, ನೋವ ಭರಿಸುವ ಮಣ್ಣಾಳದ ಬೇರಿನ ಶಕ್ತಿಯಲ್ಲಲ್ಲವಾ ಎಲೆಯ ಅಸ್ತಿತ್ವ...
#ಅವಳ_ಗರ್ಭದ_ನಾಡಿ_ನನ್ನ_ಉಸಿರ_ನೆಲೆ...

ಏನೋ ಬೇಕಿದೆ - ಏನೆಂದು ಹುಡುಕಬೇಕಿದೆ...
ಹುದುಗಿರುವ ಒಳ ಹುಯಿಲಿನ ಹೊರೆ ಇಳಿಸಲು...
ನೋವಿನ ಹಾದಿಯ ಕಾಯುವ ಸಾವು - ಸಾವಿನ ಬೇಲಿಗೆ ಹಬ್ಬಿದ ಬಾಳ ಬೀಳು...
ನಿನ್ನಲ್ಲಿ ಅಲೆಯಬೇಕು - ನನ್ನನ್ನು ಕಡೆಯಬೇಕು...
ಇನ್ನೂ ಏನೋ ಪಡೆಯಬೇಕಿದೆ ಮತ್ತದು ಏನೆಂದು ಹುಡುಕಬೇಕಿದೆ...
#ಎಲ್ಲಿಂದ_ಹೇಗೆ_ಯಾವ_ಹಾದಿ...

ಉಮ್ಮಳಿಸುವ ಎದೆಯಿಂದ ನಗೆಯ ಹಿಕ್ಕೆಯ ಹೆಕ್ಕಿ ಹೆಕ್ಕಿ ತಂದು ಜಗಕೆ ಮಾರುವ ಅಜೀಬು ದರ್ದಿನ ದಿನ ಸಂಜೆಗಳು...
ಇರುಳ ಗೂಡಿನಲ್ಲಾದರೂ ಕಣ್ಣ ನೆಲಕೆ ತಾ ಹಸಿಯಾಗಿ ನಿಸೂರಾಗಲು ಬಿಡದ ಗಂಡು ಬಂಡೆತನ...!!
ಕಣ್ಣ ಬೆಳಕಿನಾಚೆಯ ದಾಟು ಬಳ್ಳಿಯ ದಾಟಿ ಬದುಕ ಹಾದಿಯನೇ ಮರೆತವನು...
ಹಂಗಂಗೇ ಫಾಲ್ತು ಫಾಲ್ತು ಮೂರೂ ಮುಕ್ಕಾಲು ದಶಕ...
ಸೋತ ಕಥೆಗಳನೇ ಗೆದ್ದ ಧಾಟಿಯಲಿ ಹಾಡುತ್ತ ನಿನ್ನೆಗಳ ತೆವಳಿದ್ದು...
ಕನಸೇ - ನೀನಿಲ್ಲದೇ, ನಿನ್ನ ಕನಸೂ ಇಲ್ಲದೇ ಇನ್ನೆಷ್ಟು ಹಾದಿಯೋ...
ಕರೆಯಬೇಕಾದವನು ಹೆಸರ ಮರೆತಂತಿದೆ......
#ಆಯಸ್ಸು...

ಉಪಸಂಹಾರ:

ಬೆಳಕಲ್ಲಿ ಎಡಗೈಯ್ಯಲಿ ಎಲ್ಲೋ ಎಡ್ಡಕ್ಕೆತ್ತಿಟ್ಟು ಮರೆತ ಬೆಂಕಿಪೊಟ್ಣವ ಕತ್ತಲಲಿ ಹುಡುಕುತ್ತಾ ಹುಡುಕುತ್ತಾ ಕಳೆದೇ ಹೋಗಿದ್ದೇನೆ - ನನ್ನ(ನ್ನೆ)ದೇ ಮನೆಯಲ್ಲಿ...
ಸರಬರನೆ ಒಳ ಹೊರಗಾಡುವ ಎದೆ ನೋವ ನಿಟ್ಟುಸಿರ ಭೋರು ಗಾಳಿಗೆ ಆರಿ ಹೋದ ನಗೆಯ ನಂದಾದೀಪವ ಮತ್ತೆ ಹಚ್ಚಬೇಕು - ನನಗೆ ನನ್ನ ಮತ್ತೆ ಪರಿಚಯಿಸಿಕೊಳ್ಳಬೇಕು...
#ಈ_ಹೊತ್ತಿನ_ಜರೂರತ್ತು...

ಕಣ್ಣ ಪರಿಧಿಯಾಚೆ ಎಲ್ಲಾ ಹಾದಿಗೂ ಕತ್ತಲೇ ಅಂಟಿಕೊಂಡಿರತ್ತೆ...
ಎದೆಯಲಿಷ್ಟು ಬೆಳಕಿದ್ದು ಅದರ ಕಣ್ಣಿ ಕಳಚಿದ್ದರೆ ಕಣ್ಣ ಹರಹಿನಾಚೆಯೂ ಬೆಳಕ ಕಾಣಬಹುದು ಅಥವಾ ಕಲ್ಪಿಸಬಹುದು...
ಮಣ್ಣ ಹೀರಿ ಬೇರು ಬಲಿತಾಗಲೇ ಹಸಿರಿಗೆ ಬೆಳಕ ಸೀಳಿ ಆಗಸಕೆ ಬೆಳೆವ ಶಕ್ತಿ...
ಹುಟ್ಟು ಹಬ್ಬವಾಗಬೇಕೆಂಬ ಬದುಕಿನ ಮಧ್ಯ ಯುಗದ ಗುಟ್ಟಾದ ಆಸೆಯೊಂದಿದೆ - ನಿನ್ನೆ ನಾಳೆಗಳೆಲ್ಲ ಸಂಭ್ರಮಗಳಾಗಿ, ಬಾಳ ತೇರಿನ ಉತ್ಸವವಾಗಲಿ ಎಂಬ ಕಳ್ಳ ಒಳ ಬಯಕೆ...
ಅದಕೆಂದೇ -
ಎನ್ನಂತರಾತ್ಮನ ಬೇರು ಗಟ್ಟಿಯಾಗಲಿ ಎಂದು ಬಯಸುತ್ತೇನೆ...
ನೋವ ಸೊಲ್ಲನು ಮೀರಿ ಬದುಕ ಬೆಳಕ ಕೊನೇಯ ಹನಿಯನೂ ಮೀಯಬೇಕು - ಜವನೂರ ಬಾಜಾರಿನಲ್ಲಿ ನಗೆಯ ಮುತ್ತು ರತ್ನಗಳ ಮಾರಬೇಕು...
ಹೀಗೇ, ಹಿಂಗಿಂಗೇ ಏನೇನೋ ಆಗಿ ನಾನು ನಾನಾಗಬೇಕು...
ಈ ಹುಟ್ಟು ಬದುಕಿನ ಪಾತಳಿಯಲ್ಲಿ ಹರಡಿ ಹಬ್ಬವಾಗಬೇಕು...
ಬದುಕ ಹಾಡು ಮುಗಿಯಬಾರದು ಬದುಕೇ ಮುಗಿದರೂ...

ವರ್ಷಗಳುರುಳುತ್ತವೆ - ವರ್ಷಗಳಷ್ಟೇ ಉರುಳುತ್ತವೆ...
ಹುಟ್ಟಿನ ತೇದಿಯ ಎಣಿಸಿದರೆ ಎದೆಯಲೊಂದು ವಿಚಿತ್ರ ಆಂದೋಲನ...
ನಿದ್ದೆ ತಿಳಿದೆದ್ದ ಮರು ಘಳಿಗೆ ಚಿರನಿದ್ರೆಯೇ ಇರಬಹುದು ಅನ್ನಿಸಿದರೆ ಬದುಕು ಸೋತಂತೆ ಲೆಕ್ಕವಾ...?
ಗೊತ್ತಿಲ್ಲ...
ನಿದ್ದೆಯ ನಶೆಯ ತಬ್ಬಿಯೇ ಈ ಉಸಿರ ಬಳ್ಳಿಗೆ ಭರ್ತಿ ಮೂವತ್ತರ ಮೇಲೆಂಟು ವಸಂತ...!!!
ಆ ಸಂಜೆಗಳ ಏರಿಗುಂಟ ಹಾಯ್ದು ಬರುವ ನೆನಪ ನೇವರಿಕೆಗಳೆಲ್ಲ ನಾ ಸಾಕಿಕೊಂಡ ಭಂಡ ನಗೆಯ ಭಂಟರೇ...
ನಾಳೆಗಳಲೂ ಉಳಿಯಲಿ, ಉಲಿಯುತಿರಲಿ ಆ ನಗೆಯ ಭಡವರೇ...
ನನಗೆ ನನ್ನದೇ ಶುಭ ಆಶಯವು...
ಶುಭಾಶಯವು...

ಪ್ರತೀಕ್ಷಾ - ಕಪ್ಪು ನೆಲ ನನಗಿತ್ತ ಹಸಿರು ಕನಸು...
ಕಪ್ಪು ಹುಡುಗಿ - ನನ್ನ ಕನಸಿನ ಕಪ್ಪು ನೆಲ...
#ನನ್ನದೆನಿಸದ_ನಾಳೆಗಳಿಗೂ_ನನ್ನ_ಕರೆಯುವ_ಕಳ್ಳ_ಕೊಂಡಿಗಳು...

ಎದೆ ಗುಡಿಯ ನಗೆಯ ನಂದಾದೀಪವ ಮತ್ತೆ ಹಚ್ಚಬೇಕು - ಹಚ್ಚಿಟ್ಟು ಕಾಯ್ದುಕೊಳ್ಳಬೇಕು...
ಅಷ್ಟೇ.......