Wednesday, July 19, 2023

ಗೊಂಚಲು - ನಾಕ್ನೂರಾ ಹದ್ನೈದು.....

ಘೋರಿ ಮೇಲಿನ ತುಳಸೀ ಗಿಡ.....

ಈ ಬದುಕೊಂದು ಉತ್ಕಟ ವಿಫಲ ಪ್ರೇಮ...
&&&

ಬೆನ್ನಾದ ನಿನ್ನ ಹಾದಿಯೆಡೆಗೆ ತದೇಕ ಕಣ್ಣ ದೀಪ...
ನೆನಪ ತೈಲ ಧಾರೆ - ಎದೆ ಧಗಧಗಿಸೋ ಅಗ್ನಿ ಕುಂಡ...
___ ಕನಸೇ ಕ್ಷಣವೊಂದಕಾದರೂ ಮಧುರ ಕಾವ್ಯವಾಗು - ಸಾವು ನಗೆಯ ಮೀಯಲೀ...
&&&

ನಾ ಕರೆವ ಹಾದಿಯಲಿ ನೂರು ಕಾರಣ ಕೂ(ನೀ)ಡಿ ನೀ ಸುಳಿಯದೇ ಹೋದರೆ ಸೋಲು ನಂದೇ ಇರಬಹುದು...
ನೀ ಕೂಡುವಷ್ಟು ನಾ ಕಾಡಿಲ್ಲದಿರಬಹುದು ಅಥವಾ ನಾ ಕಾಡಿದ್ದು ನೀ ಕೂಡಲಾಗದಷ್ಟಿರಬಹುದು...
___ ಬಿಡು ನೆನಪಿಡಬೇಕಾದ ಸೋಲು ನಂದೇ ಇರಬಹುದು...
&&&

ನಕ್ಕು ನಕ್ಕು ಸುಸ್ತಾಗಿ ಕಣ್ಣು ನೀರಾಯ್ತು...
ನೋವ ಹುಣ್ಣು ಹಣ್ಣಾಗಿ ಒಳಗೇ ಒಡೆದೋಯ್ತು...
___ ಜೊತೆಗಿರು...
&&&

ಬರೆಸಿಕೊಂಡ ಒಂದು ಕಥೆಯ ಬೆನ್ನಿಗೆ ಬರೆಯಲಾರದ ನೂರು ವ್ಯಥೆಗಳ ಹುರುಳಿದೆ...
___ ನಗು...

ನೆರಳು ಮುನ್ನೆಲೆಗೆ ಬಂದಿದೆ ಎಂದರೆ ಬೆಳಕು ನಿನ್ನ ಹಿಂಬಾಲಿಸುತ್ತಿದೆ  ಅಂತಲೇ ಅರ್ಥ...
____ ಸುಖ - ದುಃಖ....
&&&

ಹಾರಲಾರದ ಎತ್ತರಕೆ
ಹಾಯಲಾಗದ ಆಳಕೆ
ಕಣ್ಣ ಶರದ ಸೇತುವೆ...
___ ಎದೆಗಡಲಲಿ ಭರ್ತಿ ಉಬ್ಬರ...

ಕೇಳಸ್ಕೊಳ್ಳೋನು ಮೂಗ
ಹೇಳ್ತಾ ಹೋಗೋನು ಕಿವುಡ
ನಡುವೆ ನಿರಂತರ ಕುರುಡು ಸಂವಾದ
ಕಣ್ಣೀರಿಂದೂ ಪನ್ನೀರಿಂದೂ ಬಣ್ಣ ಒಂದೇ...
____ (ನನ್ನ) ಬದುಕು - ಪ್ರೇಮ - ಆಧ್ಯಾತ್ಮ...
&&&

ತುಂಬಾ ತುಂಬಾ ಖಯಾಲಿಯಿಂದ ಮಾತಾಡ್ತೇನೆ - ಮೊದಮೊದಲು ಚಂದ ಅನ್ಸಿದ್ರೂ ಬರ್ತಾ ಬರ್ತಾ ಇವನಿಗೆ ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲ ಎಂಬುದು ಅರಿವಿನಂತೆ/ಅರಿವಾಗಿ ಕಾಡುತ್ತೆ ಮತ್ತು ನಿಮ್ಮ ಅರಿವು ನನ್ನ ತಾಕುವಾಗ ಮಾತು ತಡವರಿಸತ್ತೆ ಅಥವಾ ನಿಷ್ಠುರವಾಗತ್ತೆ...
ನಾಲಿಗೆಗಿಂತ ಕಿವಿ ಚುರುಕಿರಬೇಕಿತ್ತು...

ಪ್ರಜ್ಞೆಯ ನಾಡಿ ಹಿಡಿದು ಮನಸಿನ ಮುಖ ನೋಡುತ್ತೇನೆ - ಪ್ರತಿ ಕ್ರಿಯೆ ಪ್ರಕ್ರಿಯೆ ಪ್ರತಿಕ್ರಿಯೆಗಳ ಹಿಂದಿನ ವಾಸ್ತವದ ಬಿಸಿಗೆ ಭಾವಗಳ ಬೇರು ಘಾಸಿಗೊಳ್ಳುತ್ತದೆ ಮತ್ತು ನಿಮ್ಮ ಮನಸು ನೋಯಿಸಿದ ಪಾಪಕ್ಕೆ ನಡುವಿನ ಮಾತು ಇಷ್ಟಿಷ್ಟೇ ಸಾಯುತ್ತದೆ...
ಮಾತು ರುಚಿಸಲು ಮನಸಿಗೇ ಜೈ ಅನ್ನಬೇಕಿರುತ್ತೆ...

ಮೌನದ ಭಯಕ್ಕೆ ಚೂರೂ ಕಸರುಳಿಯದಂತೆ ಬಯಲಾಗುತ್ತೇನೇ - ವಾಚಾಳಿಯ ಪರಿಚಯ 'ಸುಲಭ' ಮತ್ತು ಇದಿಷ್ಟೇ ಅನ್ನುವ ಮಟ್ಟಿಗೆ ಬೆರಗಳಿದ ಮೇಲೆ ಬೆಳಕೂ ರೇಜಿಗೆಯೇ... 
ಬೇಲಿ ಹಾವು ಮತ್ತು ಬಯಲ ಖಾಲಿ...
____ ನಾ ಕಂಡಂತೆ ನನ್ನೆಡೆಗಿನ ನಿಮ್ಮಾ ತೀವ್ರತೆ ಅಳಿಯಲು ನನ್ನೊಳಗಿನ ಇಂಥ ನಾನೇ ಕಾರಣ... 
(ನೀವು ಕಂಡಂತೆ ನನ್ನಲ್ಲಿ ಇಂಥವು ಇನ್ನೆಷ್ಟಿವೆಯೋ)
&&&

ಹೆಣಕ್ಕೆ ಹೊತ್ತಿಸಿದ ಬೆಂಕಿಯನ್ನು ನನ್ನ ಕಣ್ಣೀರು ನಂದಿಸುವುದಿಲ್ಲ...
ಹೆಣದ ಬೆಂಕಿ ನನ್ನ ಕಣ್ಣೀರನ್ನು ನಿಂದಿಸುವುದೂ ಇಲ್ಲ...
ಆದರೂ,
ಆ ಕ್ಷಣ ಎದೆ ಉರಿಬಿದ್ದು ಕಣ್ಣು ಝರಿಯಾದರೆ ಅಷ್ಟು ಮಟ್ಟಿಗೆ ಬದುಕು ಪ್ರೀತಿಯಾಗಿ ಫಲಿಸೀತು - ನನ್ನೊಳಗೆ ನಾ ಸಾಯದೇ ಉಳಿದೇನು...
____ ಘೋರಿ ಮೇಲಿನ ತುಳಸೀ ಗಿಡ...
&&&

ಸಾವು ಗೋಡೆ ಕಟ್ಟಿ 'ಗೆದ್ದೆ' ಅಂದರೆ, 
ಬದುಕಿನ ಚಿತ್ರ ಬರೆದು 'ಅವಕಾಶ' ಅಂದೆ...
'ನಾ ನಂಬಿದ್ದಲ್ಲವಾ ನನ್ನ ಗೆಲುವು...'
ಬಯಲಿಗೆ ಹೂಡಿದ ಬಾಣ ಶೂನ್ಯವ ಸೇರಿ ಮುಕ್ತ...
___ ನನಗೆ ನಾನು ನನ್ನ ಪರಿಚಯಿಸಿಕೊಂಡಂತೆ ನನ್ನ ಬದುಕು...
*** ಅರ್ಥ ಗಿರ್ಥ ಕೇಳಬೇಡಿ...
&&&

ಮಾನವಂತೆ, ಧ್ಯಾನವಂತೆ, ಯಾವುದೋ ಗಳಿಕೆ, ಇನ್ಯಾವುದೋ ಸಾಧನೆ ಎಂತೆಲ್ಲ ಉದ್ಧರಿಸಿ; ಬದುಕಿಗೆ ಒಂದು ಗುರಿ ಇರ್ಬೇಕು, ಗುರಿ ಇರೋದು ಬಾಳಿನ ಬೆಳವಣಿಗೆಗೆ ಬಹಳಾ ಮುಖ್ಯ ಅಂತೆಲ್ಲಾ ಮತ್ತೆ ಮತ್ತೆ ಹೇಳ್ತಿರ್ತೇವೆ...
ಆದರೆ,
ಪ್ರತಿ ಹುಟ್ಟೂ ಸಾವನ್ನೇ ತನ್ನ ಅಂತಿಮ ನೆಲೆಯಾಗಿ ಒಪ್ಪಿಕೊಂಡೇ ಜನ್ಮ ತಳೆದಿರುವಾಗ, ಇವೆಲ್ಲಾ ಉಪಚಾರಗಳ, ಪ್ರಭಾವಳಿಗಳ ಹಡಾಹುಡಿಗಳೆಲ್ಲಾ ಬದುಕಿನ ಹಾದಿಯ ಮಗ್ಗಲುಗಳ ಹೂ ಮುಳ್ಳುಗಳಷ್ಟೇ ಅನ್ನೋದನ್ನ ಗ್ರಹಿಸೋಕೆ ಮರೆತಿರ್ತೇವೆ...
ನಾವಾಡೋ ಈ ಗುರಿಗಳೆಲ್ಲಾ ನಿಜದಲ್ಲಿ ಗುರಿಗಳಲ್ಲ, ನಮಗೆ ನಾವೇ ಒಪ್ಪ ಅಂದುಕೊಂಡು ಬೀಗಲು ನಾವೇ ನಮ್ಮ ಮುಡಿಗೆ ಸಿಕ್ಕಿಸಿಕೊಂಡ ಗರಿಗಳಷ್ಟೇ ಅನ್ನಿಸಲ್ಲವಾ...
ಈ ಗುರಿ ಮತ್ತು ಗರಿಗಳ ನಡುವಿನ ವ್ಯತ್ಯಾಸ ಅರಿವಾದರೆ ಹುಟ್ಟು ಸಾವಿನ ಮಡುವಿನ ಹಾದಿಯಲ್ಲಿ ನಾವೊಂದಿಷ್ಟು ವಿನೀತರಾಗಿರಬಹುದೇನೋಪಾ...
ನಿಲ್ದಾಣಗಳೆಲ್ಲಾ ನಲ್ದಾಣಗಳಾಗಬಹುದೇನೋ ಅಲ್ವಾ...
____ ಬಿಟ್ಟಿ ಬೋಧನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಹದ್ನಾಕು.....

'ನಾನು' ನನಗಾಗಿ.....

ಕಾಯುವುದು ಮತ್ತು ಕಾದು ಕಾದು, ಕಾಯುತ್ತಲೇ ಸಾಯುವುದು...
___ 'ನಾನು' ನನಗಾಗಿ...
&&&

"ಸುತ್ತಣ ಜಗತ್ತು ಏನನ್ನತ್ತೆ ಎಂಬ ಕಿಂಚಿತ್ ಚಿಂತೆಯೂ ಸುಳಿಯದೇ ನಿಸೂರಾಗಿ ಒಡನಾಡಬಲ್ಲ ಸ್ನೇಹ ನೀನೂ, ಅಂಥದೊಂದು ಸುಭದ್ರ ಭಾವ ನೀನನಗೆ" ಅಂತಂದು ಪ್ರಾಮಾಣಿಕವಾಗಿ ಯಾರು ಯಾರಿಗೇ ಹೇಳಿದ್ದು ಕೇಳಿದರೂ ಒಂದು ಖುಷಿ, ಒಂದು ಬೆರಗಿನ ಮಂದಹಾಸ ಅರಳುತ್ತೆ ನನ್ನೊಳಗೆ ಆ ನೇಹಿ ಜೀವಗಳೆಡೆಗೆ...
ಅಂತದೊಂದು ಭಾವ ಬೆಸುಗೆ ಕೂಡಿಕೊಳಲು ಆ ಮನದ ಮೂಸೆಯಲಿ ಅದೆಷ್ಟು ಚಂದ ಕಸುವಿರಬೇಕು...
___ಗೆಳೆತನವೆಂದರೆ ಸುಲಲಿತ ಸಲುಗೆಯ ಸಂವಹನ ಸಾನ್ನಿಧ್ಯ ಎನಗೆ...
&&&

'ನೀನಂದ್ರೆ ನಂಗೆ ಇಷ್ಟ' ಅನ್ನೋದು ಒಂದು ಚೆಂದನೆಯ ನವಿರು ಭಾವ - ಕೊಳಲನ್ನು ನವಿಲ್ಗರಿ ಸಿಂಗರಿಸಿದ ಹಾಂಗೆ...

ಇಷ್ಟ ಅನ್ನೋ ಮಾತು, ಮೌನ ಇನ್ನಷ್ಟು ಮುಚ್ಚಟೆ ಅನ್ಸೋದು ನೀನಿಷ್ಟ ಅಂದವರ ಕಣ್ಣ ಭಾಷೆ ನನ್ನ ಎದೆಯದೇ ಭಾವವಾಗಿದ್ದಾಗ - ನೇಹವೆಂಬೋ ಪ್ರಾಮಾ (ಪ್ರಯಾ)ಣಿಕ ಪಾತ್ರ...

ಈ ಇಷ್ಟ ಅಂಬೋ ಮಧುರ ಭಾವದ ಕಂಪು ಇಷ್ಟವಷ್ಟೇ ಆಗಿ ಆಗೀಗ ಮೃದುವಾಗಿ ಎದೆಯ ತೀಡುತಿರಲಿ - ಪ್ರಾರ್ಥನೆ...
&&&

ಎನ್ನೆದೆಯ ಹೆಗ್ಗಾಲಿಗೆ ತುಂಬಿ ಹರಿಯುವುದು ನೀ ಬಿಡದೆ ಭೋರ್ಗರೆವಲ್ಲಿ, ಒಲವ ಮಳೆ ಕಾಲದಲಿ...
___  ಎದೆಯ ಎದೆ ತಬ್ಬಿ ಹಬ್ಬಲಿ ಹಿಂಗೇ ಇಂಗುತಲಿ ಪ್ರೀತಿ ಗಂಗೆ...

ಪಟ ಸೌಜನ್ಯ: ವಿನಾಯಕ ಭಟ್ಟ ಬೋಳಪಾಲ
ನೀ ಮೈದುಂಬಿ ಧೋss ಸುರಿವಾಗ ನಾ ಎದೆನೆರೆದು ಬಿಗುಮಾನದಲಿ ಬಿಡಿಬಿಡಿಯಾಗಿ ಅರಳಿ ಮತ್ತೆ ಲಜ್ಜೆ ಕಳೆದು ಅಣುರೇಣು ಅರಳರಳಿ ನೆನೆನೆನೆದು - ಹರಿವು ಸಗ್ಗ ಸೊಬಗಿನ ಸವಿ ಸಂಗಮ...
___ ಮಳೆದುಂಬಿ ಮೈತುಂಬಿ ಇಂಗುವೊಲು ಹೂ ಗರಿಕೆ ವಸುಧೆ ಒಡಲಿನ ಕಂಪು...
&&&

ಮಲೆನಾಡ ಮಳೆ ಎದೆ ತುಳಿಯುವಾಗ ಎದೆಗೇರಲು 'ನೀನಿರಬೇಕಿತ್ತು' ಅಂತ ಬರೆದುಕೊಂಡೆ...
ನಾನಾss! ಅಂತ ರೋಮಾಂಚವ ನಟಿಸಿ ಕಣ್ಮಿಟುಕಿಸಿದಳು...
___ ನಿದ್ದೆಗೂ ಮುನ್ನವೇ ಸ್ವಪ್ನ ಸ್ಖಲನ...
&&&

ಮಳೆ ಹಬ್ಬಿ ಹಸಿರೊಡೆದ ಇಳೆ...
ನಡು ತಬ್ಬಿ ಬೆವರೊಡೆಯಲು ನೀನಿರಬೇಕಿತ್ತು...
___ ಆಷಾಢದ ಬಾಗಿಲು...
&&&

ಕನಸಿನ ನವಿಲುಗರಿ ಮರಿ ಹಾಕಲು ಮಡಿಲಾಗಬಹುದು ಬಾನು...
ಹಾದಿ ತಪ್ಪಿಯಾದರೂ ಅದೇ ಹಾದಿಯಲಿ ಮತ್ತೆ ಬರಬಹುದು ನೀನು...
ಪ್ರಣಯದ ಪಯಣಕೆ ಬೆರಳು ಬೆಸೆಯಲು ತುಟಿ ಬಿರಿಯಬಹುದು ನಾನು ನೀನು...
___ ಬತ್ತದಿರಲಿ ಭರವಸೆಯ ಬಣ್ಣದ ಕೊಡೆ ಹಿಡಿದು ಕಾಯುತ್ತ ನಿಂತವನ ಎದೆ ಜೇನು...

ಈ ಮಾಣಿ ಹೇಳುವ ಕಥೆಗಳೆಲ್ಲ ನಿನ್ನ ಕಣ್ಣಿಂದಲೇ ಶುರುವಾಗಿ ನಿನ್ನ ತೋಳಲ್ಲಿ ನೆನೆನೆನೆದು ಮುಗಿಯುತ್ತವೆ...
ಮತ್ತು
ತಾರುಣ್ಯವನ್ನು ಹೀಗೂ ಹಂಚಿಕೊಳ್ಳಬಹುದು; ನಗೆಯ ರುಚಿಯ ಹೀಗೂ ನೆಂಚಿಕೊಳ್ಳಬಹುದು...
&&&

ಆದರೆ,
ಅಂತರಂಗಕೆ ಎಲ್ಲರಲೂ ಕೃಷ್ಣ ಸಖ್ಯವೇ ಕಳ್ಳ ಬಯಕೆ...
ಬಹಿರಂಗಕೆ ಮಾತ್ರ ರಾಮ ಸಂಗವೇ ಸಾಧು ಬಳಕೆ...
___ ಲೋಕಾಚಾರ...
&&&

ನನಗಾಗಿ ನಂಗೆ ಬದುಕಿಡೀ ಬಿದ್ದಿದೆ...
ನಿನಗಾಗಿ ಅದರಲ್ಲಿ ಎಷ್ಟು ಎತ್ತಿ ಕೊಡಬಲ್ಲೆ...? ಅಲ್ಲಲ್ಲ ನಮಗಾಗಿ ಅದರಲ್ಲಿ ಎಷ್ಟು ಎತ್ತಿಡಬಲ್ಲೆ...?
ಪ್ರಶ್ನೆ ಸಣ್ಣ ಕಂಗಾಲಿನ ಗೊಂದಲವನ್ನೆಬ್ಬಿಸತ್ತೆ ನನ್ನಲ್ಲಿ...
ಕಾರಣ,
ನಾನು ಪೂರಾ ಪೂರಾ ನಾನಾಗಿ ನಿನ್ನೊಂದಿಗಿರಬಲ್ಲೆನಾ...? ನಿನಗಾದರೂ ಅದು ಸಾಧ್ಯವಾ...? ಇಂಥವೇ ಸುಮಾರು ಪ್ರಶ್ನೆಗಳಿವೆ ಒಳಗೆ...
'ನನಗೆ' ಸಿಕ್ಕಿದ್ದು 'ನಮಗೆ' ಸಿಗುವುದಷ್ಟು ಸುಲಭವಾ...?! ಸಮಯವಾಗಲೀ, ಭಾವಾವೇಗವಾಗಲೀ, ಬದುಕೇ ಆಗಲೀ...
ಹಾಗೆ ಸಿಗದೇ ಹೋಪಲ್ಲಿ ಆಪ್ತ ಪರಿಚಯದ ಬೆನ್ನಿಗೂ ಅಪರಿಚಿತತೆಯ ನೆರಳೊಂದು ಅಂಟಿಕೊಂಡೇ ಸಾಯುತ್ತದಲ್ಲ...
ಅಲ್ಲಿಗೆ,
ನಾನೂ ನೀನೂ ನಾವಾಗುವ ಕನಸು ಸುಡುಗಾಡು ಸಿದ್ಧನ ಕಳ್ಳು ಕಾವ್ಯ ಅಷ್ಟೇ ಅಲ್ಲವಾ...
ಮತ್ತೆ ಈ ತುಡಿತ ಮಿಡಿತಗಳೆಲ್ಲಾ ಶುದ್ಧ ಸುಳ್ಳಾ ಅಂದರೆ; ಉಹೂ, ಹಾಗೂ ಅನ್ಸಲ್ಲ...
ನಾನು ನನ್ನ ಹುಡುಕುವ, ನೀನು ನಿನ್ನ ಕಂಡುಕೊಳ್ಳುವ ಪಡಿಪಾಟಲಿನ ಆ ಹಾದಿಯಲ್ಲಿ ಪರಸ್ಪರ ಎದೆಗಾತು ಕೆಲ ಘಳಿಗೆಗಳ ಮಾಧುರ್ಯವ ಹೀರುತ್ತೀವಲ್ಲ ಅದಷ್ಟೇ ನೇಹವೆಂದರೂ, ಪ್ರೇಮವೆಂದರೂ, ಪ್ರಣಯಾಗ್ನಿ ಹೋಮವೆಂದರೂ ಅಂತನ್ನಿಸತ್ತೆ...
ಅದರಾಚೆ ಅಂತರಂಗದಲ್ಲಿ ನನ್ನ ಪಾಡು ನನ್ನದು, ನಿನ್ನ ಗೂಡು ನಿನ್ನದು...
'ನಾನು' + 'ನಾನು' = 'ನಾನು' ಮಾತ್ರ... 'ನಾವಲ್ಲ...'
____ ನಗೇಂತ ಚೂರು ಸಮಯ ಕೊಡು, ನಮಗೇ ಅಂತ ಕಾಲನ ಜೋಳಿಗೆಯಲಿಷ್ಟು ಕಾಲವ ಕೂಡಿಡೂ ಅಂದವರೆಲ್ಲಾ ಕಾಯುತ್ತಲೇ ಕಳೆದು ಹೋದರು...
***ಅರ್ಥ ಗಿರ್ಥ ಕೇಳಬೇಡಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಹದಿಮೂರು.....

ಸ್ಮಶಾನ ಭಸ್ಮ.....

07.02.1948 - 07.07.2022
ನೀನಿರಬೇಕಿತ್ತು - ನನಗಾಗಿ...
ನೀನಿರಬೇಕಿತ್ತು - ನನ್ನಂತೆ ನಾ ನಡೆಯಲು ಕಿವಿ ಹಿಂಡುವ ಕಾಳಜಿ ಕಳೆದೋಗಬಾರದಿತ್ತು...
ನೀನಿರಬೇಕಿತ್ತು - ನನ್ನ ನಗೆಯ ನಂಗೆ ಎತ್ತಿ ಕೊಡುವ ಮಡಿಲಿಗೆ ಮುಪ್ಪು ಬರಲೇಬಾರದಿತ್ತು...
ನೀನಿರಬೇಕಿತ್ತು - ನಮ್ಮ ಮುಗಿಯದ ಸಲುಗೆಯ ಜಗಳ ಮುಗಿಯಲೇಬಾರದಿತ್ತು...
ನೀನಿರಬೇಕಿತ್ತು - ನನಗೆ ಅನಾಥ ಭಾವ ಕಾಡದಂತೆ ಕಾಯುವ ನಿನ್ನ ಜವಾಬ್ದಾರಿಯ ನೀ ಮರೆಯಬಾರದಿತ್ತು...
ನೀನಿರಬೇಕಿತ್ತು - ನನ್ನ ಸ್ವಾರ್ಥಗಳಿಗೆ ನಿನ್ನೆದೆಯ/ಕಣ್ಣಂಕೆಯ ಪ್ರೀತಿಯ ನಿಯಂತ್ರಣ ನಿಲ್ಲಬಾರದಿತ್ತು...
ನೀನಿರಬೇಕಿತ್ತು - ನನ್ನ ಬದುಕಿನ ಬಾಕಿಗಳೆಲ್ಲ ಚುಕ್ತಾ ಆಗುವವರೆಗಾದರೂ ಜೊತೆಗಿರುವ ಸಾವಧಾನ ನಿನಗಿರಬೇಕಿತ್ತು...
ಆದರೆ,
ಈ ಬದುಕಿಗಿರುವ ಒಂದೇ ಒಂದು ಉದ್ದೇಶವೂ ಒಂದಾಣೆ ಬೆಲೆಯಿಲ್ಲದಂತೆ ಅಳಿದುಹೋಯಿತು...
ನಿಜಕೆಂದರೆ ಆ ರಾತ್ರಿ ನನ್ನ ಸಾವಾಯಿತು...
___ ಎದೆಗಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...

ದಿನಾಂಕಗಳ ಸಾರಾಸಗಟಾಗಿ ಮರೆವ ನಾನು ಮರೆಯಲಾಗದೇ ಹೆಣಗುತಿರುವ ಈ ತೇದಿ...
ಮುಗಿಲು ಮುರಿದು ಬಿದ್ದ ಆ ರಾತ್ರಿ - ಅಳಲರಿಯದವನ ಕಣ್ಣ ತೊಳೆಯಲು ಭರ್ತಿ ಮಳೆಯಿತ್ತು...
ಮಗನೆಂದು ಕರೆವ ಕೊರಳು ವ್ಯಾಪ್ತಿ ಪ್ರದೇಶದ ಹೊರ ಹೋಗಿಯಾಯಿತು...
____ ಕರುಳ ಕಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...

ಕೆಂಡ ಹಬ್ಬಲಿಗೆ ದಂಡೆಯ ಮೋಟು ಮುಡಿಗೆ ಮುಡಿದು ಮೆಲ್ಲ ನಗುತ್ತಿದ್ದ ನಿನ್ನ ಆ ನಗೆಯ ಹಗುರ ನೆನಪಾಗುವಾಗ, ಪಟಕೆ ಸಿಂಗರಿಸುವ ತುಳಸೀ ಪತ್ರದ ಮಾಲೆಯ ಭಾರಕೆ ನನ್ನ ಮೈ ನಡುಗಿದರೆ ನಿನ್ನ ಯಾವ ದೇವರ ಹಳಿಯಲಿ...
ನಿನ್ನ ಸೌಂದರ್ಯ ಪ್ರಜ್ಞೆಯ ಆಡಿಕೊಂಡು ನಕ್ಕು ನಗಿಸಿದ ನೆನಪೆಲ್ಲ ಈಗ ಕನ್ನಡಿಯ ಮುಂದಿನ ಹಳಹಳಿಕೆಯಾಗಿ ಕಾಡುವಾಗ, ಅಲ್ಲಲ್ಲಿ ಇಣುಕೋ ಬಿಳಿಗೂದಲ ಕಿತ್ತೆಸೆದು ಮಳ್ಳ ನಗೆಯ ಮೆಲ್ಲದಂತೆ ನನ್ನ ನಾ ಹೇಗೆ ತಡೆಯಲಿ...
ಈಗ ನಭದ ನಕ್ಷತ್ರ ಮಾಲೆಯ ನಕ್ಷೆಯಲಿ ನೀನೂ ಒಂದು ನಕ್ಷತ್ರವೇ ಅಂತೆ - ಅಂತೆ, ಎಷ್ಟು ಚಂದ ಸಮಾಧಾನದ ಕಥೆ...
____ ನೆನಪ ಹೊಳೆಯ ರಭಸದಲಿ ಕನಸ ಕಣ್ಣು ಬತ್ತಿದ ಕಾಲಕ್ಕೆ ವರುಷ ಒಂದಾಯಿತು...
&&&

ಅವ್ಳು ಇನ್ನಷ್ಟು ಕಾಲ ಇರಕಾಯ್ತೂ ಅನ್ನೋ ಆಶೆಯ ಜೊತೆ ಜೊತೆಗೆ ಹೋಗಿ ಸುಖಕ್ಕೆ ಬಿತ್ತು ಅನ್ನೋ ಸತ್ಯ ಕಟುವಾಗಿ ಕಾಡ್ತು...
ನಾನಿಲ್ಲಿ ಅಳಿದುಳಿದ ಪ್ರತ್ಯಕ್ಷ ಸಾಕ್ಷಿ - ಅವಳ ಸಾವು ಕಾಡುವ ಹೊತ್ತಿಗೆ, ಅವಳ ಪುಣ್ಯ ಕಾಯುವ ಹೊತ್ತಿಗೆ...
____ ಎದೆ ತುಂಬಾ ಸ್ಮಶಾನ ಭಸ್ಮ...

ಆಯಿ ಎಂಬ ಅಂತಃಕರಣದ ಆಲಂಬನಕೆ ತರ್ಪಣ ಬಿಡುವಾಗ ರಾಕ್ಷಸನ ಎದೆಯಲ್ಲೂ ಸಣ್ಣ ಅಳುವಿನುಮ್ಮಳಿಕೆ...
ನನಗೀಗ ನನ್ನಲ್ಲಿ ಹಿಡಿತವಿಲ್ಲ - ಕಾರಣ ಅವಳೀಗ ಬೆನ್ನಿಗಿಲ್ಲ...
___ ಶ್ರಾದ್ಧ...

ಒಂದು ಸಾವಿನ ಸುತ್ತ ಅದಕಂಟಿದ ಎಷ್ಟೆಲ್ಲಾ ಜೀವ ತಂತುಗಳು ಕಡಿದುಹೋಗುತ್ತವಲ್ಲ...!!!
ಜೊತೆಗೆ ನೆನಪ ಉಪ್ಪು ಸವರಿದ ಗಾಯದ ಉರಿಯೊಂದು ದಿನಗಳನೆಣಿಸುತ್ತಾ ಉಳಿದೇ ಹೋಗುತ್ತದಲ್ಲ...
____ ಭಾವ, ಬಂಧ, ಬದುಕು...
&&&

ಭಯವಾಗುತ್ತದೆ -
ಒಂದೇ ಒಂದು ಫಾಲ್ತು ಉದ್ದೇಶವೂ ಇಲ್ಲದ ಬದುಕು...
ಇಷ್ಟಿಷ್ಟೇ ಕಳೆದು ಹೋಗುತಿರುವ ಜೀವಾಭಾವದ ತೀವ್ರತೆಯ ಸೆಳಕು...
ತುಸು ಹೆಚ್ಚೇ ಭಯ ಕಾಡುತ್ತದೆ -
ಕಸುವಿಲ್ಲದ ಬಿಸಿ ಹಸಿವಿನ ನನ್ನ ನಾನು ನೋಡಿಕೊಂಡಷ್ಟೂ...
ನನ್ನೊಳಗಿನ ಪೊಳ್ಳನು ನಾ ಕಂಡುಕೊಂಡಷ್ಟೂ...
ಭಯವಷ್ಟೇ ಉಳಿಯುತ್ತದೆ - 
ಖಾಲಿ ಖಾಲಿ ಕಣ್ಣ ಗೋಳ ಉರಿಯುವಾಗ... 
ಅನಾಥ ಕೂಸಿನ ಧುನಿಯ ದನಿಯ ಸೋಲಿನ ನಿತ್ರಾಣಕೆ ಪದ ಕುಸಿಯುವಾಗ... 
..........ಭಯವಾಗುತ್ತದೆ........