Friday, November 27, 2015

ಗೊಂಚಲು - ನೂರೆಪ್ಪತ್ತು.....

ಸುಮ್ ಸುಮ್ನೆ.....
(ಅಂಗಳದಲ್ಲಿ ಆಡುತಾಳೆ ‘ಪ್ರತೀಕ್ಷಾ...’)

ಅಪ್ಪನ ತೋಳೇರಿ ಕೂಸುಮರಿಯಾಟದಲಿ
ಅಮ್ಮನ ಅಣಕಿಸುತ್ತಾ
ಮನೆ ಮನಸ ಬೆಳಗುತಿದೆ
ನಗೆಯ ಮರಿ ಮಿಂಚು...
ಕೂಸಿನ ಕಣ್ಣ ಬಯಲಲ್ಲಿ
ಚಂದಿರ - ಚುಕ್ಕಿಯರು ಹೊಳೆವ,
ಮಿಂದ ಮೈಯಲಿ ಪಾರಿಜಾತವು ಘಮಿಸುವ ಕಥೆಯ ಹೇಳಲೇನು ಕೇಳ...

ಅಂದು -
ಮಾತು ಒಗ್ಗದ ಕಪ್ಪು ಹುಡುಗಿ
ಅಧರಕೆ ಸ್ವೇಚ್ಛೆಯನಿತ್ತು
ಮುತ್ತಲ್ಲಿ ಕೆತ್ತಿದ ಕವಿತೆ
ಎನ್ನೆದೆಯ ಬಯಲ ಮಾಸದ ಮಚ್ಚೆಯಾಗಿ ಉಳಿದ, 
ಒಲವ ಉಡುಗೊರೆಯ ಹಸಿ ನೆನಪ ಒಡವೆಯಾಗಿ ಮೆರೆಯುತಿರುವ 
ಮಧುರ ಪಾಪದ ಕಥೆಯ ಹೇಳಲೇನು ಕೇಳ...

ಅವಳು - ಎನ್ನ ಆ ಕಪ್ಪು ಹುಡುಗಿ
ಎನ್ನ ಕೊರಳ ಹಾರವಾಗಿ
ನಾಚಿಕೆಯ ತೆರೆಯ ಮೀರಿ
ಎನ್ನೀ ಕೈಗಳ ವೀಣೆಯಾಗಿ
ಚಂದ್ರ - ತಾರೆ ಸಾಕ್ಷಿಯಾಗಿ
ಸೀಮಂತದ ಕನಸಿನಲ್ಲಿ ತವರೂರ ದಾರಿಯ ನೆನೆದ 
ಸಿರಿವಂತ ಇರುಳ ಕಥೆಯ ಹೇಳಲೇನು ಕೇಳ...

ಅಂಗಳದಂಚಿನ ಪಾರಿಜಾತ ಚೆಲ್ಲಿದ ಕಟ್ಟೆಯ ಮಧು ಮಂಚವಾಗಿಸಿ
ತೊಡೆಯ ಸಿಂಹಾಸನವನೇರಿ
ಬೆಳುದಿಂಗಳ ಮಿಂದು
ಹುಚ್ಚು ಹಸಿವಲ್ಲಿ ಹಿತವೇರಿ ಬೆಂದು
ಅರಳಿ ಉದುರುವ ಪಾರಿಜಾತದಂತೆಯೇ ಅವಳೂ ಅರಳಿ
ಬೆವರ ಖೋಡಿಯಾದ ಬೆತ್ತಲಿಂದು
ಬೆಳದಿಂಗಳನೇ ಹೆತ್ತ ಕಥೆಯ ಹೇಳಲೇನು ಕೇಳ...

ಅಪ್ಪನ ತೋಳೇರಿ ಕೂಸುಮರಿಯಾಟದಲಿ
ಅಮ್ಮನ ಅಣಕಿಸುತ್ತಾ
ಮನೆ ಮನಸ ಬೆಳಗುತಿದೆ
ನಗೆಯ ಮರಿ ಮಿಂಚು...
ಕೂಸಿನ ಕಣ್ಣ ಬಯಲಲ್ಲಿ
ಚಂದಿರ, ತಾರೆಯರು ಹೊಳೆವ
ಮಿಂದ ಮೈಯಲಿ ಪಾರಿಜಾತವು ಘಮಿಸುವ ಕಥೆಯ ಮತ್ತೆ ಹೇಳಲೇನು ಕೇಳ...

Saturday, November 21, 2015

ಗೊಂಚಲು - ನೂರು + ಅರವತ್ತು + ಒಂಬತ್ತು.....

ಹಂಗೇ ಸುಮ್ಮನೆ ಹಿಂಗೆಲ್ಲ ಅನ್ನಿಸ್ತದೆ.....

ಹೆಜ್ಜೆ ಎತ್ತಿಡದಂತೆ ಎದೆಯ ಹಿಂಡುವ ಛಳಿ (!) - ನಿನ್ನೆಡೆಗಿನ ಹಸಿವು ಹಾಗೇ ಉಳಿದು ಹೋದ ನೆನಪಿನ ಸುಳಿ - ಕನಸು ಕಳೆದು ಹೋದ ದಾರಿಯ ತುಂಬಾ ಇತಿಹಾಸದ ವೈಭವದ ಅಸ್ಥಿಯ ತುಂಡುಗಳು - ಕರೆಯೋಲೆಯ ದಕ್ಷಿಣ ಮೂಲೆಯಲ್ಲಿ ವಿಳಾಸ ಬರೆದು ಚಿತ್ರಗುಪ್ತ ನಟಿಗೆ ಮುರಿದ ಸದ್ದು - ಸಾವೆಂಬೋ ಅರೆಹುಚ್ಚು ಕುಂಬಾರನ ಒರಟು ಕೈಗಳಲ್ಲಿ ಅರ್ಧಂಬರ್ದ ಅರಳಿದ ಬದುಕೆಂಬೀ ಒಗಟೊಗಟು ಚಿತ್ತಾರದ ಮಡಕೆ...
@@@
ಕನಸುಗಳ ಹೊತ್ತಗೆಯ ಎದೆಗವುಚಿಕೊಂಡು, ಧಮನಿಯೊಳಗೇಳುವ ಹೊಸ ಭಾವ ಪುಳಕಗಳ ಹಿತದಮಲಿನಲ್ಲಿ ನಾಳೆಯೊಂದಿಗೆ ಪಿಸುನುಡಿಯನಾಡುತ್ತ ಜಿಗಿ ಜಿಗಿದು ನಡೆವಾಗ, ಜೀರ್ಣವಾಗದೇ ಉಳಿದ ಒಂದ್ಯಾವುದೋ ಹಳೆಯ ಬಿಕ್ಕಿನ ಹಾಡು ಸಣ್ಣ ಕರುಳಿಂದೆದ್ದು  ಗೋನಾಳಕೆ ಚುಚ್ಚಿ ಕಣ್ಣ ಮೊನೆಯ ಹನಿಯಾಗಿ ಇಳಿದು ಕನಸುಗಳೆಲ್ಲ ಬಣ್ಣ ಕಳಕೊಂಡು ಸಂಜೆಯೊಂದು ಇರುಳಿಗೆ ಜಾರುತ್ತದೆ...
ಇಂದು ನಾಳೆಗೆ ದಾಟುವಾಗ ನಿನ್ನೆ ಜೀರ್ಣವಾಗಬೇಕೇನೋ ಮರೆವು ವರವಾಗಿ ನಾಳೆ ಹೊಸತಾಗಿ ನಗಲು...
ಕನಸಿಗೆ ಬಲ ತುಂಬೋ ಅಲ್ಲಲ್ಲಿ ಉಲಿದಿದ್ದ ಸವಿ ನೆನಪುಗಳೂ ಅಳಿಸಿಹೋದಾವು - ಅವನಷ್ಟೇ ಉಳಿಸಿಕೊಂಬ ಆಸೆಯಾಚೆಯೂ ಮರೆವೆಯೇ ಹಿತವೇನೋ ಕೆಲ ಬದುಕುಗಳಿಗೆ...
@@@
...ನೋವಿನ ತಂಟೆ, ತಕರಾರುಗಳ್ಯಾವುದೂ ಇಲ್ಲದ ಸಂತೃಪ್ತ ಸಾವು - ಈ ಬದುಕಿನ ಅತಿ ದೊಡ್ಡ ಹಸಿವು ಮತ್ತು ಅಷ್ಟೇ ದೊಡ್ಡ ಭ್ರಮೆ ಕೂಡಾ...
@@@
ನಿನ್ನೆಗಳೇ ನಿಮ್ಮ ಕರುಳ ತಿಜೂರಿಯಲಿ ಕರಗದೇ ಉಳಿದ ನೆನಪುಗಳ ಖಾತೆಯಿಂದ ಹೇಗಾದರೂ ಹೊಂಚಿ ಒಂದಿನಿತು ನಗೆಯ ಸಾಲ ಕೊಡಿ...
ಅದರ ಕಿಡಿಯಿಂದ ಸೂಡಿ ಹಚ್ಚಿಕೊಂಡು ಈ ನಿಶೀತವ ದಾಟಿ ಆ ನಾಳೆಯ ಸೇರಿಕೊಳ್ಳುತ್ತೇನೆ...
ನೆನಪುಗಳಲಿ ನಗೆಯ ಹುಡುಕೋ ಯತ್ನದಲಿ ಕಿಂಚಿತ್ ಯಶ ಸಿಕ್ಕರೂ ಅಲ್ಲೆಲ್ಲೋ ಹೊಂಚಿ ಕೂತ ಅಂತಕನ ಕೈಗೂ ಒಂದು ಹಿಡಿಯಷ್ಟು ನಗೆಯನೇ ಸುರಿದು ಬದುಕ ಕರುಣೆಯ ಋಣ ಇನಿತಾದರೂ ಹರಿದುಕೊಳ್ಳುವಾಸೆಯಿದೆ...
@@@
ಯಾವ ಮಡಿಲಲ್ಲಿ ಕರುಣೆ ಕೆಡುಕೆನಿಸದೇ ಕರುಳ ವೇದನೆ ಕಣ್ಣ ಕನಿಯಾಗಿ ಹರಿವುದೂ ಸರಾಗವೋ - ಯಾರ ಎದುರಲ್ಲಿ ಬುದ್ಧಿಯ ಕಟ್ಟಳೆಗಳೆಲ್ಲ ಮುರಿದು, ನಾನೆಂಬೋ ಹುಸಿ ಹಿರಿತನದ ಸೊಕ್ಕೆಲ್ಲ ಅಳಿದು, ಮರುಳ ಪೊರೆಗಳೆಲ್ಲ ಕಳೆದು ನಿಗಿ ನಿಗಿಯಾಗಿ ಮನಸಿದು ಬತ್ತಲಾಗಬಲ್ಲುದೋ - ಆ ತೀರದಾಚೆಯೆಲ್ಲೋ ನನಗೆಂದೇ ಒಲವಿನಂಗಡಿಯ ಕದ ತೆರೆದು ಕೂತ ಯಾವ ಜೀವದ ಒಂದು ಮುಗುಳ್ನಗೆ, ಒಂದೇ ಒಂದು ಅಕ್ಕರೆಯ ಹಾರೈಕೆ ಎನ್ನಲ್ಲಿಯ ಸೋತ ಕನಸೊಂದರ ಹೆಜ್ಜೆಯ ಜಾಡು ಬದಲಿಸಿ ನಡೆಯ ಬಸಿರ ಪೊರೆಯಬಲ್ಲುದೋ - ಅಂಥದೊಂದೇ ಒಂದಾದರೂ ಹೆಗಲಿನ ಸ್ನೇಹ ಸನ್ನಿಧಿ ಎಲ್ಲರಿಗೂ ದಕ್ಕಿ ಪ್ರತಿ ಬದುಕನೂ ಕಾಯಲಿ - ಉಹುಂ, ಅಷ್ಟೇ ಅಲ್ಲ; ಈ ಉಸಿರ ಹಾಡು ನಿಲ್ಲುವ ಮುನ್ನ ಒಂದಾದರೂ ಜೀವಕ್ಕೆ ಒಂದರೆ ಘಳಿಗೆಯಾದರೂ ಆ ಭಾವ ಸನ್ನಿಧಿಯ ತುಂಬಿಕೊಡಬಲ್ಲ ಶಕ್ತಿ ಎನ್ನ ಹೆಗಲಲೂ ಸಂಚಯಿಸಲಿ...
ಹೇಳಬೇಕಿದ್ದದ್ದು ಇಷ್ಟೇ; ಆತ್ಮ ಸಾಂಗತ್ಯದ ಶೃಂಗಾರ ಸಿರಿಯಲ್ಲಿ ಬದುಕ ಬವಣೆಗಳೆಲ್ಲ ಕತ್ತಲ ಕುಹರದಲ್ಲಡಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 18, 2015

ಗೊಂಚಲು - ಒಂದು ನೂರಾ ಅರವತ್ತೆಂಟು.....

ಶಾನೆ ಕಷ್ಟಾ - ಗೆಳೆಯನಾಗೋದೂಂದ್ರೆ.....

ಆದರೂ,
ನೋವಲ್ಲಿ ತಬ್ಬಿ - ನಗೆಯಾಗಿ ಹಬ್ಬಿ - ಕರುಣೆಯ ಕರುಳಿರದ ನಿಗೂಢ ತಿರುವುಗಳ ಹಾದಿಯ ಏದುಸಿರ ನಡಿಗೆಗೆ ಜೊತೆಯಿರಲು ಹವಣಿಸುವ ಒಂದಾದರೂ ನೇಹ ಎಲ್ಲರ ಬದುಕ ಜೋಳಿಗೆಯಲ್ಲಿರಲಿ...

ನನಗಾಗಿ ಬರೀ ಹಿತವನ್ನಷ್ಟೇ ಆಡುವವನು ಹಿತೈಷಿಯಾದಾನು ಆದರೆ ಗೆಳೆಯನಾಗಲಾರ...
ನನ್ನೊಳಗಿನ ಹುಳುಕನ್ನಷ್ಟೇ ಕಾಣುವವನು ವಿರೋಧಿಯಾಗ್ತಾನೆ ಗೆಳೆಯನಾಗಲಾರ...
ನನ್ನೆಲ್ಲ ಭಾವಗಳಲ್ಲಿ ಏಕೀಭವಿಸುವಾಸೆಯಲ್ಲಿ ಪ್ರೇಮಿ ಹುಟ್ಟಿಯಾನು ಗೆಳೆಯನಲ್ಲ..
ಅಂದದ ಆಸೆಯ ಬೆನ್ನತ್ತಿ ಬಂದವನು ಹೆಚ್ಚೆಂದರೆ ಉನ್ಮಾದವನಿಳಿಸಿ ಹೋದಾನು ಕಾಲವೂ ಗೆಳೆಯನಾಗುಳಿಯಲಾರ...
ಕಿವಿಗಿಂಪೆನಿಸೋ ಬಂಧದ ಹೆಸರು ಕೂಗಿ ಜೊತೆ ಬರಲು ಅಣಿಯಾದವ ದಾರಿಯ ದೂರದ ಬೇಸರಕೆ ಒಂದಿನಿತು ಮಾತಿನ ಸರಕಾದಾನು ವಿನಃ ಎದೆಯಲಿಳಿದು ಉಳಿವ ಸ್ನೇಹವಾಗಲಾರ...
ನಗೆಯನಷ್ಟೇ ಅರುಹುವವನು ಎತ್ತರವನುಳಿಸಿಕೊಂಡು ದೇವನಂತಾದಾನು - ದೇವರು ಆದರ್ಶವಷ್ಟೇ ಗೆಳೆಯನಲ್ಲ, ನಗೆಯಲಷ್ಟೇ ಬಳಿ ಬರುವಾತ ಖುಷಿಯಲಷ್ಟೇ ಜೊತೆಯಾಗಿ ವಿದೂಷಕ ಅನ್ನಿಸಿಬಿಟ್ಟಾನು – ಪ್ರತಿಕೂಲಕ್ಕೂ ಜೊತೆ ನಿಲ್ಲಬಲ್ಲ ಆಸ್ಥೆಯ ಒಕ್ಕಲಾದ ಅಕ್ಕರೆಯ ಸ್ನೇಹಿಯಾಗಲಾರ...
ನೋವನಷ್ಟೇ ಮಾರುವಾತ ಅಳುವನಷ್ಟೇ ಉಳಿಸಿ ಕರುಣೆಯ ಪಾತ್ರವಷ್ಟೇ ಆದಾನು – ಕರುಣೆ ಹಿರಿತನವ ಕೊಟ್ಟೀತು ಸ್ನೇಹ ಭಾವವನಲ್ಲ...

ಗೆಳೆಯನಾಗುವುದೆಂದರೆ:
ಏನೂ ಆಗದಂತಿದ್ದು ಎಲ್ಲವನ್ನೂ ಒಳಗೊಳ್ಳುವಾತನಾಗುವುದು - ನೋವನೂ ನಗುವನೂ ಸಹ ಪಂಕ್ತಿಯಲಿ ಕೂತು ಉಣ್ಣುವುದು...

ಹಿತದ ಹಾರೈಕೆಯಲಿ ಕೆನ್ನೆ ತಟ್ಟಿ,
ನನ್ನೆಲ್ಲ ಹುಳುಕುಗಳ ಮೊದಲಾಗಿ ಗುರುತಿಸಿ ಕಿವಿ ಹಿಂಡಿ,
ವಿರೋಧವಿದ್ದೂ ನನ್ನೆಲ್ಲ ಭಾವಗಳ ಒಳಗೆಳಕೊಂಡು ಗೌರವಿಸಿ,
ಅಂದದ ವಿಕಲತೆಗೂ ಭಾವದ ಚಂದನವ ತೇಯ್ದ ಗಂಧ ಬಳಿಯುತ್ತಾ ನನ್ನ ನಾ ಪ್ರೀತಿಸಿಕೊಳ್ಳಲು ಪ್ರೇರಕ ಶಕ್ತಿಯಾಗುತ್ತಾ,
ಎತ್ತರಗಳ ಹಂಗು ತೊರೆದು ಬಳಿ ಕೂತು ನಕ್ಕು ನಲಿದು ನಲಿಸಿ ಅನುಗಾಲ ನಗೆಯ ಉಲಿಯನುಳಿಸಿ -  ಪ್ರತಿಕೂಲದಲಿ ಎಂಥ ದಾಳಿಗೂ ಎನಗಾಗಿ ಎದೆಯೊಡ್ಡಿ ನಿಂತು ಆಸರೆಯ ನೆರಳಾಗುವ ಆಸ್ಥೆಯ ಕರುಳ ಜೋಗುಳವಾಗೋ,
ಇರುವಲ್ಲಿಂದಲೇ ನನ್ನ ನೋವಿಗೆ ಸಾಂತ್ವನದ ಹೆಗಲಾಗುತ್ತಾ – ತನ್ನ ನೋವಿಗೆ ಮಗುವಂತೆ ಎನ್ನದೇ ಮಡಿಲ ಸೇರುವ ಹಸಿ ಮನದ ಜೀವಿಯಾಗುವುದು...
ನೋವಿಗೆ ಅಳುವಿಗೆ ನಂಬಿಕೆಯ ಕಿವಿಯಾಗದೆ - ನಗೆಯ ಹಸಿವಿಗೆ ಬಡಿಸಿದನ್ನವಾಗದೆ - ನೇಹದಾಲಯಕೆ ಧಣಿಯಾಗುವುದೆಂತು...

ಅಹುದು,
ಶಾನೆ ಕಷ್ಟವೇ ಇನ್ನಾರದೋ ನೆನಪು ಕನಸುಗಳ ನಡಿಗೆಗೆ ಪರಿಪೂರಕ ನಗೆಯ ಹೆಜ್ಜೆಯಾಗುವುದು...
ಒಬ್ಬರ ಮಡಿಲಲೊಬ್ಬರು ಭಾವದಿ ಬಯಲಾಗದೆ ಇದು ಸುಲಭವಲ್ಲ...
ಬಯಲು ಗೌಪ್ಯತೆಯನುಳಿಸುವುದಿಲ್ಲ, ಮುಚ್ಚಿಡದೇ ಕುತೂಹಲವಿಲ್ಲ...
ಇರಲಿ ಒಂದಷ್ಟು ಕುತೂಹಲಗಳು, ಕಾದಿಟ್ಟುಕೊಂಡಿರಿ ಒಂಚೂರು ಮೌನವ ಅಂದವರಿದ್ದಾರೆ...
ಆದರೆ ಮೌನ ಮತ್ತು ಗೌಪ್ಯತೆ ಕುತೂಹಲವನುಳಿಸಲು ಬೇಕಷ್ಟೇ ಇದ್ದರೆ ಚಂದ, ಅದಲ್ಲದೇ ನಿಗೂಢವೆನಿಸಿ ಭಯವ ಹುಟ್ಟುಹಾಕಿದರೆ...
ಸ್ನೇಹ ಪ್ರೀತಿಯಲ್ಲರಳಬೇಕಲ್ಲವಾ ಭಯದಲ್ಲಿ ನರಳದೇ...
ಒಬ್ಬರಲ್ಲಿ ಭಯವಿಲ್ಲದೆ, ಭಯವನುಳಿಸದೇ ಬಯಲಾಗುವ ಮಟ್ಟಿಗೆ ನಂಬಿಕೆಯ ತುಂಬಿ ಆಪ್ತತೆಯ ಬೆಳೆಸುಸುದು ಹಾಗೂ ಗಳಿಸುವುದು ಅದು ದೊಡ್ಡ ವ್ಯಕ್ತಿತ್ವದ ಮಾತು...
ಇಲ್ಲ -
ಸುಲಭವೇನಲ್ಲ ಆತ್ಮದ ಗೆಳೆಯನಾಗುವುದು...

ಆದರೂ,
ನೋವಲ್ಲಿ ತಬ್ಬಿ - ನಗೆಯಾಗಿ ಹಬ್ಬಿ - ಕರುಣೆಯ ಕರುಳಿರದ ನಿಗೂಢ ತಿರುವುಗಳ ಹಾದಿಯ ಏದುಸಿರ ನಡಿಗೆಗೆ ಜೊತೆಯಿರಲು ಹವಣಿಸುವ ಒಂದಾದರೂ ನೇಹ ಎಲ್ಲರ ಬದುಕ ಜೋಳಿಗೆಯಲ್ಲಿರಲಿ - ನಿದಿರೆಯಿಲ್ಲದ ಇರುಳಿಗೆ ನೆಲಕುರುಳೋ ತಾರೆಯ ತೋರಿ ಸುಳ್ಳೇ ಭರವಸೆಯ ನಗೆಯ ಜೋಗುಳವಾಗಲು...

Saturday, November 14, 2015

ಗೊಂಚಲು - ನೂರಾ ಅರವತ್ತೇಳು.....

ಏನೋ ಒಂದಿಷ್ಟು.....


ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...
ಮನೆಯಂಗಳದಿ ಕನಸ ಕಂದ 'ಪ್ರತೀಕ್ಷಾ' ಆಡುತಿರುವ ಭಾವದಲ್ಲಿ ಮೆದುವಾಗುತ್ತಾ - ಶುಭಾಶಯಗಳು...❤ ❤
***
ಪ್ರಜ್ಞೆಯ ಎತ್ತರ, ಭಾವದ ಆಳ ಎರಡೂ ಒಟ್ಟಾಗಿ ನಗುವುದು ತೀರಾ ತೀರಾ ವಿರಳ...
ಆತ್ಮದಲ್ಲಿ ಅಖಂಡ ಪ್ರೇಮವಿಲ್ಲದೇ ಕಣ್ಣಲ್ಲಿ ಹನಿ ಹುಟ್ಟಲಾರದೇನೋ - ಹುಟ್ಟಿದಲ್ಲಿ ಅದು ಹೆಣದ ವಾಸನೆಯಂತೆ ಅಸಹನೀಯ...
ಅಲ್ಲಲ್ಲಿ ಕೈಕುಲುಕೋ ಅಪವಾದಗಳಂಥ ಪ್ರಜ್ಞೆಯ ಎತ್ತರವ ನಗುವಲ್ಲೂ, ಭಾವದಾಳವ ಮೌನದಿಂದಲೂ ಮುಚ್ಚಿಡುವ, ಎದೆಯ ಹನಿಗಳನು ಪಾಲ್ತು ಫಾಲ್ತು ಮಾತುಗಳಿಂದ ಒಳಗೇ ಇಂಗಿಸಿಕೊಳ್ಳುವ ಶ್ರೀಮಂತ ಹೃದಯಗಳ ಸ್ನೇಹ ಸನ್ನಿಧಿ ಇನ್ನಷ್ಟು ಮತ್ತಷ್ಟು ದಕ್ಕಲಿ ಎನಗೆ...
***
ಮೊದಲ ಹೆಜ್ಜೆಗೆ ಪ್ರೀತಿ ಶಕ್ತಿಯಾಗಿ ನಡಿಗೆ ಕಲಿಸಿದವಳ ಹೆಜ್ಜೆ ನಡುಗುವ ಹೊತ್ತಲ್ಲಿ ತುಸು ಕೈ ನೀಡಬಲ್ಲೆನಾದರೆ ಬದುಕ ಋಣ ಅಷ್ಟಾದರೂ ಸಂದಂತೆ ಲೆಕ್ಕ...
***
ನೋವು, ನಗುವು - ಒಂದರ ನೆರಳು ಇನ್ನೊಂದು...
ಪರಿಸ್ಥಿತಿಯ ಮೇಲಾಟದಲ್ಲಿ ಈ ಕ್ಷಣ ಮತ್ತು ಈ ಕ್ಷಣದ ಗೆಲುವು ಮಾತ್ರ ನಿರ್ಣಾಯಕ ಎದೆಯ ಹಾಡಿನ ಯಾವ ಭಾವದ ನೆರಳು ಯಾವುದೆಂಬುದಕೆ...
ಸದಾ ಕೂಸುಮರಿಯಾಟ ಬೆನ್ನು ತಬ್ಬಿಯೇ ಹುಟ್ಟಿದ ಭಾವಗಳದ್ದು...
ನೋವು ನಗುವಿನ ಬೆನ್ನಿಗಂಟಿದ ಶಾಪ - ನಗುವು ನೋವಿನ ಮಡಿಲ ಶ್ರೀಮಂತ ಕೂಸು...
***
ಪ್ರಶ್ನೆ:
ಆ ಬಂಧ ನಿಂಗೇನು...?
ತಡಕಾಟವಿಲ್ಲದ ನೇರ ಉತ್ತರ:
ಏನೂ ಅಲ್ಲ ಮತ್ತು ಎಲ್ಲವೂ ಹೌದು...
ಅದು ಬದುಕು ಮತ್ತಾಸಾವಿನ ನಡುವೆಯ ಸಾಮರಸ್ಯದಂಥಾ ಭಾವ ಬಾಂಧವ್ಯ...
ಬದುಕ ವಿಜ್ರಂಭಣೆಯಲ್ಲಿ ಸಾವಿನ ಶ್ರೀಮಂತಿಕೆ - ಸಾವಿನ ಅಸ್ತಿತ್ವದಲ್ಲಿ ಬದುಕಿಗೆ ಫಲವಂತಿಕೆ ಇದ್ದಂತೆ...
ನಿರ್ಬಂಧಗಳ ಮೀರಿದ ನೀರ ಹರಿವಿನಂತೆ ಈ ಮನ ಮನಗಳ ನಡುವೆಯ ಪ್ರೀತಿ...
***
ಅವಳಂತಾಳೆ : ತೀವ್ರ ಆತ್ಮೀಕತೆ ಭಯ ಮೂಡಿಸುತ್ತೆ ಕಣೋ ಈಗೀಗ - ಆದ್ರೂ ಪ್ರತಿ ಜಗಳದ ನಂತ್ರಾನೂ ಪ್ರೀತಿ ತುಸು ಹೆಚ್ಚೇ ಆಗುತ್ತೆ - ಈ ಹೃದಯದ ಜಾದೂ ಅರ್ಥವೇ ಆಗಲ್ಲ...!!!
ನಿಜದ ಆತ್ಮೀಯತೆ ಮನಕೆ ಗೆಲುವ ತುಂಬುತ್ತೆ - ಭಯವೂ ಗೆಲುವಿನ ಆಕರವೇ ಅಲ್ಲವಾ - ಜಗಳವೂ ಆತ್ಮದ ಒಲವಿನ ಮೂಲವೇ ಆದೀತು ಆತ್ಮೀಯತೆ ಮನದ ಪ್ರಾಮಾಣಿಕ ಅಭಿಲಾಷೆಯಾಗಿದ್ದಾಗ - ಮೋಡ ಸೂರ್ಯನನ್ನಲ್ಲ ಚಂದಿರನನ್ನೂ ಮುಚ್ಚಿಡಲಾರದಲ್ಲವಾ ಬಹುಕಾಲ - ಹೃದಯದ ಜಾದುವಿನ ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಪ್ರೀತಿಯೇ ಮತ್ತು ಪ್ರೀತಿಯೊಂದೇ; ಇದು ಎನ್ನೆದೆಯ ಪಿಸುಮಾತು...
ಪ್ರೀತಿಯ ನಮನಗಳು ಹೃದಯವಂತ ಸ್ನೇಹಿಗಳಿಗೆಲ್ಲ...❤ ❤ ❤

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, November 2, 2015

ಗೊಂಚಲು - ನೂರಾ ಅರವತ್ತರ ಮೇಲಾರು.....

ಮನದ ಖಜಾನೆಯಿಂದ.....
(ಹೀಗೆ ಬಂದು ಹಾಗೆ ಹೋಗುವ ಸಂಚಾರಿ ಭಾವಗಳು...)

ಇರುಳು ಮತ್ತು ನೆನಪುಗಳು ಸಂಭಾಷಣೆಗಿಳಿಯುತ್ತವೆ...
ಹನಿಗಳ ಹೀರಿಕೊಳ್ಳುತ್ತಾ ದಿಂಬು ಕಣ್ಣುಗಳ ಸಮಾಧಾನಿಸುತ್ತೆ...
ನೋವ ಕರಗಿಸಿಕೊಂಡು ಅಷ್ಟಿಷ್ಟು ಹಗುರಾದ ಮನಸು ಹಾಗೂ ಕನಸ ಸಲಹಿಕೊಂಡು ಒಂಚೂರು ಉಸಿರೆಳೆದುಕೊಳ್ಳಲು ತಾವು ಸಿಕ್ಕ ಪ್ರಜ್ಞೆ; ಎರಡರ ನಡುವೆಯ ಅನುಸಂಧಾನದಿಂದ ಮುಂಬೆಳಗಿಗೆ ದಕ್ಕಿದ ಕೊಡುಗೆ - ಅರೆಬರೆ ಪ್ರಶಾಂತ ನಗು...
ನಗುವೆಂದರೆ ಕನಸಿನ ಗೆಲುವಿನ ಭರವಸೆ...
ಬದುಕ ಗೆಲುವೆಂದರೆ ಇಷ್ಟೇ ಅಲ್ಲವಾ - ಹಗಲು, ಇರುಳಿನ ಸಮನ್ವಯ...
!!!
ದೇವನಾಗುವ ಬಯಕೆ - 
ಮೈಯ ತುಂಬ ರಕ್ಕಸ ರಕ್ತ - 
ಕೊನೇ ಪಕ್ಷ ಮನುಷ್ಯನೂ ಆಗಲು ಬಿಡದ ವ್ಯಾರ್ಘ ದೌರ್ಬಲ್ಯಗಳು - 
ಎಂಥ ಬಟ್ಟೆ ತೊಟ್ಟಿದ್ದರೂ ವಕೃ ದೃಷ್ಟಿಯ ಕಣ್ಣಲ್ಲಿ ಕಾಂಬುದೆಲ್ಲ ಬೆತ್ತಲೆಯೇ -
ಕೊಚ್ಚೆಯೇ ತೀರ್ಥ ಪ್ರಸಾದ ಹಂದಿ ಬದುಕಿಗೆ...
!!!
ನಗುವನುಳಿಸದ ನೆನಪುಗಳು - 
ಬೇರು ಸತ್ತ ಕನಸುಗಳು - 
ಬತ್ತಿದ ಕಣ್ಣ ಕೊಳ - 
ಭಾವಕ್ಕೆ ವೈಧವ್ಯ - 
ಮನಸಿಗೆ ಮಗು ಸತ್ತ ಸೂತಕ...
!!!
ಈ ಎದೆಯ ಗ್ರಹಿಕೆಯನೇ ಆ ಎದೆಗೂ ದಾಟಿಸಲಾರದ ಮಾತು - 
ನಗೆಹೊನಲ ಬಿತ್ತದ ಮಾತು - 
ಬಂಧ ಬೆಸೆಯದ ಮಾತು - 
ಭಾವ ಸ್ರವಿಸದ ಒಣ ಒಣ ಮಾತು ನನ್ನದು...
ಎದೆ ಎದೆಗಳ ನಡುವ ಬಯಲಿಗೆ ಕೋಟೆ ಕಟ್ಟುವ ಮೌನ - 
ಕರುಳ ಕೊರೆಯುವ ಮೌನ - 
ನಗುವಿಗೂ ಲೆಕ್ಕವಿಡುವ ಮೌನ - 
ಕಣ್ಣ ಹನಿಯನುಳಿದು ಮತ್ತೇನೂ ಬೆಳೆಯದ ಹಸಿ ಮೌನ ನನ್ನದು...
ಮಂತ್ರವಾಗದ ಮಾತು ಎಷ್ಟು ಹುಟ್ಟಿದರೇನು...
ಧ್ಯಾನವಾಗದ ಮೌನವ ಕಾಲವೂ ಧರಿಸಿದರೇನು...
ಫಲವಿಲ್ಲ ಜೀವಿತಕೆ...
ಇಷ್ಟೆಲ್ಲ ತಿಳಿದೂ ಹುಂಬ ದಡ್ಡ ನಾನು -
ಮಾತೆಂದರೆ ಜೀವಂತಿಕೆ, ಮೌನ ಮರಣ ನನಗೆ...
!!!
ಬೀದಿ ಬದಿಯ ಅನಾಥ ಕೂಸಿನಂತೆ ಹಳಸಿದನ್ನದಂಥ ನೆನಪುಗಳು, ಬಿಸಿ ತುಪ್ಪದಂತಹ ಕನಸುಗಳನುಂಡು ಜೀರ್ಣಿಸಿಕೊಂಡು ಹೆಣಗಾಟದ ನಗು ಬೀರುತ್ತಾ ಬೆಳೆದು ನಿಂತ ಬಯಲ ಪೈರು - ಬದುಕು...
ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನುಗ್ಗುವ ಎಂದೂ ಹಿಂಗದ ಹಸಿವಿನ ಪುಂಡು ಪೋಕರಿ ದನ - ಸಾವು...
"ಸಾವಿನ ಅಸ್ತಿತ್ವ ಬದುಕಿನ ಶಕ್ತಿ - ಬದುಕಿನ ನಗು ಸಾವಿನ ಸೌಂದರ್ಯ..."
!!!
ಎಲ್ಲರ ಬದುಕಿಗೂ ಅರಿವಿನ ಬೆಳಕಲ್ಲಿ ಆತ್ಮದ ಹಸಿವು ನೀಗೋ ಕೃಷ್ಣನಂಥ ''ಗುರು''ವು ''ಗೆಳೆಯ''ನಾಗಿ ದಕ್ಕಲಿ... 
!!!
ಮನಸೆಂಬ ತುಂಟಾಟದ ಮಗು ಕಳೆದೋಗಿದೆ ಭಾವದ ಹಸಿವಿಲ್ಲದವರ ಸಂತೆ ಬೀದಿಯ ಯಾವುದೋ ಕಿರು ಮೂಲೆಯಲ್ಲಿ...
ಅದರ ಆರ್ತ ಕೀರಲು ಕೂಗಿಗೆ ದಾರಿಯೂ ಕಿವುಡು...
ಮಾತು ಸತ್ತ ಮನೆಯ ಅಂಗಳದಿಂದಲೇ ಹೊರಟಂತಿದೆ ಕುರುಡು ಮೌನದ ಅಡ್ಡ ಪಲ್ಲಕಿ ಉತ್ಸವ...
ಸಾವಿರ ಗಾವುದ ಹೆಜ್ಜೆ ಸವೆದ ಮೇಲೂ ಸಾವು ಅನಾಥವೇ...
ನಿಂತುದಾದರೆ ಕಣ್ದುಂಬಿ ಘೋರಿಯೆದುರು, ಬಾಕಿ ಉಳಿದ ಕರುಳ ಕುಂಡಲಿಯೊಳಗಣ ಮಾತುಗಳ ಕವಿತೆಗಳು ಕಿವಿ ಸುಟ್ಟಾವು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)