Monday, February 15, 2016

ಗೊಂಚಲು - ನೂರಾ ಎಂಬತ್ನಾಕು.....

ಏನೇನೋ ಹೇಳಬೇಕನ್ನಿಸಿ.....

ಆರು ವೈರಿಗಳಂತೆ,
ಒಂಭತ್ತು ರಸಗಳಂತೆ,
ನಾಲ್ಕು ಪುರುಷಾರ್ಥಗಳಂತೆ,
ಮತ್ತೆ ನಾಲಕ್ಕು ಆಶ್ರಮಗಳಂತೆ...
ಇರುವ ಐದೇ ಇಂದ್ರಿಯಗಳಲಿ ಈ ಕೆಲವನ್ನು ನಿಗ್ರಹಿಸಬೇಕಂತೆ, ಇನ್ಕೆಲವನ್ನು ನಿರ್ವಹಿಸಬೇಕಂತೆ...
ಇವುಗಳಿಂದೆಲ್ಲ ನಾಕ, ನರಕಗಳಂತೆ...
ಇವಕೆಲ್ಲ ಜನ್ಮಗಳು ಏಳಂತೆ...!!!
ಇಷ್ಟೇ -
ತೀರದ ತೀವ್ರ ಹಸಿವಿನ ಬದುಕ ಮಹಾ ಯಜ್ಞಕ್ಕೆ ಸಾವಿನ ಪ್ರಶ್ನಾತೀತ ಪೌರೋಹಿತ್ಯ...
^^^<>^^^
ಅವನು:
ಶತ ಶತಮಾನಗಳ ಮೌನ ಹೊದ್ದ ದಂಡೆ - ಅಬ್ಬರದ ಮಾತಿನ ಶರಧಿ - ಇಬ್ಬರನೂ ತಬ್ಬುವ ಬೆಳುದಿಂಗಳು ಎಲ್ಲ ಹಾಗೇ ಇವೆ...
ನಾನೋ ಬೆಳದಿಂಗಳಲ್ಲೂ ಅಡಗಲು ನೆರಳ ಮರೆಯ ಹುಡುಕುತ್ತೇನೆ ಈಗೀಗ...
ನಿನ್ನ ಕಣ್ಣ ಮೊನೆಯಲ್ಲಿನ ನನ್ನೆಡೆಗಿನ ಕರುಣೆಯ ರಂಗೋಲಿಯ ಅಳಿಸಲು ಹೇಳಿದ್ದು ನಾನೇ ನಿಜ...
ನನ್ನ ಹಸಿ ಹಸಿ ವಾಸ್ತವದ ಬಿರು ನುಡಿಗಳಿಗೆ ನೀ ನಿನ್ನ ಮೌನವ ಕಲಿಸಿದ್ದೂ ಸೂಕ್ತವೇ ಅನ್ನಿಸುತ್ತೆ ಒಮ್ಮೊಮ್ಮೆ...
ಆದರೆ ಇವೆಲ್ಲದರ ನಡುವೆ ಸ್ನೇಹದ ಒಳಮನೆಯಲ್ಲಿ ನಗು ಅಸ್ತಿತ್ವ ಕಳಕೊಂಡದ್ದು ಯಾವಾಗ ಅಥವಾ ನಗು ಇದ್ದಿದ್ದೇ ಭ್ರಮೆಯಾ...!?
ಸ್ನೇಹಗಳ ಮುಖಾ ಮುಖಿ ಮಿಲನದಲ್ಲಿ ಮಾತು ಗೈರಾದರೆ ಒಪ್ಪಬಹುದು, ಒಪ್ಪವಾದ ಮೌನವ ಅಪ್ಪಬಹುದು; ಆದರೆ ನಗುವಿನ ಹರಿವಿದು  ನಿಂತುದಾದಲ್ಲಿ ಭಾವ ಬಾಂಧವ್ಯದ ಉಸಿರು ಕಟ್ಟೀತು...
ಕಾಲವೂ ಕಾಯುತಿದೆ ನನ್ನೊಡನೆ - ಆ ನಗೆಯ ಪಾರಿಜಾತವಿಲ್ಲಿ ಮತ್ತೆ ಅರಳೀತಾ...?

ಅವಳು:
ಹೆಜ್ಜೆ ಹೆಜ್ಜೆಗೂ ಕವಲೊಡೆವ ದಾರಿ...
ಜಾಲಿಯ ಬನದಲ್ಲಿ ನೆರಳ ಹುಡುಕುವ ಪರಿ...
ನಿನ್ನ ಅಕ್ಕರೆಯ ತಂಗಾಳಿಯ ಇದಿರು ನಿಂತು ಎದೆಯ ಮೌನದ ಮೋಡವ ಕರಗಲು ಬಿಟ್ಟರೆ ಕಣ್ಣು ಜೋಗಿಯ ಎದುರು ಧುಮ್ಮಿಕ್ಕೋ ಜೋಗವಾಗುತ್ತೆ ಮತ್ತು ನಾನೇ ಸಲಹಿಕೊಂಡ ಸ್ನೇಹದೆದುರಲ್ಲೇ ಆದರೂ ಅಳುವುದೆಂದರೆ ಅಭಿಮಾನದ ಸಾವು ಎಂಬೆನ್ನ ಭ್ರಮೆಯ ಮೀರಲಾರದ ಭಯ...
ಅದಕೇ ಎನ್ನೆದೆ ತೊಟ್ಟಿಲ ಕನಸ ಕೂಸಿನ ಬಿಕ್ಕಳಿಕೆಯ ಕಥೆಯ ಎನ್ನ ಕಿವಿಯೂ ಕೇಳದಿರಲೆಂದು ಅವುಡುಗಚ್ಚಿ ಹೆಣಗುತ್ತೇನೆ...
ಹಾಗಂತ ಕರುಳ ಹಸಿ ಹುಣ್ಣನು ಮುಚ್ಚಿಟ್ಟು ಸುಳ್ಳು ನಗೆಯ ಬಣ್ಣದ ಅರಿವೆಯ ಹೊದೆಯಲಿ ಹೇಗೆ ಆತ್ಮೀಕವೆಂದು ನಾನೇ ನಂಬುವ ಸ್ನೇಹದೆದುರಲ್ಲಿ - ಅಲ್ಲದೇ ಬದುಕಿಗೆ ಮುಖವಾಡವ ತೊಡಿಸಲಾರೆ ಕಣೋ...
ನೆನಪ ಚಿತ್ತಾರಗಳ ಹೊತ್ತು ದೂರವಿದ್ದೇ ಹತ್ತಿರವೆನಿಸೋ ಬಂಧಕಿಲ್ಲಿ ಮೌನವೊಂದೆ ಆಶ್ರಯವೀಗ...
ಕಣ್ಣಲ್ಲಿ ಕಣ್ಣಿಟ್ಟು, ನೆತ್ತಿಗೆ ಕೈಯಿಟ್ಟು ಬಯಸಬೇಡ ನಗೆಹೊನಲ ಒಡನಾಟದೂಟ...
ಇದ್ದುಬಿಡಲಿ ಬಿಡು ಈ ನೇಹ ಹೀಗೇ - ಅರೆಬಿರಿದ ಹೂವಿನ ಹಾಗೆ...
 --- (ಮುಂದುವರಿದೀತು...)
^^^<>^^^
ಕೊಳಲನೂದುವ ಕರಿಯನ ಕೈಯ ಮುದ್ರೆಯುಂಗುರದ ಕಡುಗೆಂಪು ಹರಳಲ್ಲೂ ರಾಧೆಯ ಹೂವೆದೆಯ ನೀರಜ ಒಲವ ಹೊಳಪು...
^^^<>^^^
ಮನದ ಮನೆಯ ದೇವಭಾವದೊಡವೆಗಳ ಕಾವಲಿಗೆ 'ಕ್ಷಮೆ' ನಿಂತಿರುವ ತನಕ ಯಾವ ನೇಹಕೂ ಸಾವಿಲ್ಲ...
ಅಹಮಿಕೆಯ ಮೀರಿ ಕೇಳದೆಯೆ ಕೊಡುವ, ಅದೇ ಅಹಮಿಕೆಯ ಕಳಕೊಂಡು ಕೇಳಿ ಪಡೆವ ಹಿರಿದು ಭಾವವದು ಕ್ಷಮೆ...
ಎದೆಯ ಕಲ್ಯಾಣಿಯಲ್ಲಿ ಕ್ಷಮೆಯ ಒರತೆ ಬತ್ತಿದ ಮರು ಘಳಿಗೆ ಸ್ನೇಹ, ಪ್ರೀತಿ, ಪ್ರೇಮ, ಒಲುಮೆ, ಕಾಮ ಎಂಬಿತ್ಯಾದಿ ಯಾವ ಭಾವಗಳಿಗೂ ಜೀವ ಇರುವುದಿಲ್ಲ - ನನ್ನಲ್ಲೂ, ನಿನ್ನಲ್ಲೂ - ಯಾರಲ್ಲೂ...
ಕ್ಷಮೆಯ ಕಾವಲಿದ್ದಾಗ ಒಳಗುಡಿಯ ಯಾಜಮಾನ್ಯ ಪ್ರೀತಿಯದ್ದಿರುತ್ತೆ - ಕ್ಷಮೆ ಎದೆಬಾಗಿಲಿಂದಾಚೆ ಕಾಲಿಟ್ಟ ಘಳಿಗೆಯಿಂದ ಒಳಮನೆಯ ತುಂಬ ಕ್ರುದ್ಧ ಮೌನದ್ದೇ ಪಾರುಪತ್ಯ...
ಪ್ರೀತಿಯ ಕತ್ತು ಹಿಸುಕಲಾಗಿ ಕ್ಷಮೆ ಪಥ ಬದಲಾಯಿಸುತ್ತೆ - ಕ್ಷಮೆ ಕಳೆದು ಹೋಗಲಾಗಿ ಪ್ರೀತಿ ಮರುಹುಟ್ಟಿನ ಸಣ್ಣ ಶಕ್ತಿಯನ್ನೂ ಕಳೆದುಕೊಂಡು ಮರಣದೆಡೆಗೆ ಸಾಗುತ್ತೆ... 
ಇದಕಿಂತ ದೊಡ್ಡ ದುರಂತ ಇನ್ನೇನಿದೆ ಭಾವ ಬಾಂಧವ್ಯಕ್ಕೆ...
ಎಲ್ಲರೆದೆಯಲೂ ಒಂಚೂರು ಪ್ರೀತಿ ಹಸಿವು, ಒಂದಿನಿತಾದರೂ ಕ್ಷಮೆ ನಿರುದ್ದಿಶ್ಯವಾಗಿ ನಿರಂತರ ಉಸಿರಾಡಿಕೊಂಡಿರಲಿ ತಮ್ಮ ಭಾವ ಬಂಧಗಳೆಡೆಗೆ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, February 7, 2016

ಗೊಂಚಲು - ನೂರಾ ಎಂಬತ್ಮೂರು.....

ಎದೆಯ ಹಾಲಿನ ಋಣ...
- ಹೌದು ಇದು ನಿನ್ನದೇ ಕನವರಿಕೆಯಲ್ಲಿ.....

...ಕರುಳ ಗಂಟಿನ ಗೆಳತೀ -
ಎದೆಯ ಕಳವಳವನೆಲ್ಲ ಕಣ್ಣು ಕಥೆಯಾಗಿ ಹೇಳುವಾಗ ನಿನ್ನ ಹೆಗಲ ದೃಢತೆಯ ನೆನಪಾಗುತ್ತೆ...

ಬೆಳದಿಂಗಳ ದಾರಿಯಲೂ ಆನೇ ಎನ್ನ ನೆರಳಿಗಂಜಿ ಹೆಜ್ಜೆ ನಡುಗುವಾಗ ನಿನ್ನ ಮಡಿಲ ತಂಪಿನ ನೆನಪಾಗುತ್ತೆ...

ಬೆಳಕ ಪ್ರಖರತೆಯಲ್ಲಿ ಹಾದಿ ತಪ್ಪಿ ಎಡವಿದ ಭಾವಗಳ ಗಾಯ ಚುರ್ರೆನ್ನುವಾಗ ನೀ ಒಳಮನೆಯಲಿ ಗುಣುಗುತಿದ್ದ ಮಾತಿನ ಸತ್ಯ ಅರಿವಾಗುತ್ತೆ...

ಮೌನದೆತ್ತರದ ಅರಿವಿದ್ದೂ ಮಾತಿನ ಮೋಹದಲಿ ಬಿದ್ದು ಹೊರಳುವಾಗ ನೀನಲ್ಲಿ ಸದಾ ಸವೆಸುವ ಒಂಟಿ ದಾರಿಯ ನೆನಪಾಗಿ ದಿಗಿಲಾಗುತ್ತೆ...

ಇರುಳ ಹೊದಿಕೆಯೊಳಗೆ ಸುಖದ ಹಸಿವಿನಿಂದ ನಾಭಿಯಾಳದ ನಾಡಿ ಸಿಡಿದು ಚಡಪಡಿಸುವಾಗ ನಿನ್ನ ಪರಿತ್ಯಕ್ತ ಬದುಕಿನ ಶುಭ್ರತೆ ನನ್ನೊಳಗಿನ ಅಲ್ಪತೆಯನ್ನ ಎತ್ತಿ ತೋರುತ್ತೆ...

ನೆನಪುಗಳ ಮೆಟ್ಟಿ ಕೇವಲ ನನ್ನ ಇಂದಿನ ನಗುವಿಗಷ್ಟೇ ನಾ ತುಡಿಯುವಾಗ ಎಲ್ಲ ಇದ್ದೂ ಅನಾಥವಾದ ನಿನ್ನ ಕನಸುಗಳ ನಿಟ್ಟುಸಿರ ಬಿಸಿ ಕಿವಿಯ ಸುಡುತ್ತೆ...

ಒಂದೇ ಒಂದು ನೇರ ನುಡಿಗೆ ಭಾವ ಭಿನ್ನತೆಯ ಹೆಸರಲ್ಲಿ ಸದ್ದೇ ಇಲ್ಲದೆ ಎದ್ದು ಹೋಪುವರ ನಡುವೆ ನಿನ್ನೆಲ್ಲ ನಿಲುವುಗಳ ಜೊತೆ ಕಿತ್ತಾಡಿ ಹೊರಟು ಸೋತು ಮರಳಿದಾಗಲೂ ಮತ್ತದೇ ಮೆಲುನಗೆಯಿಂದ ಮುದ್ದಿಸೋ ನಿನ್ನ ಬೇಶರತ್ತಾದ ಮಮತೆಯ ನೆನಪಾಗುತ್ತೆ...

ಕೊನೆಯ ಮಾತೊಂದ ಹೇಳಲಾ -
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...

ಲವ್ ಯೂ ಕಣೇ ಹುಡುಗೀ...
ಜಗದ ಚೆಲುವೆಲ್ಲ ಇವಳ ಕಣ್ಣಲ್ಲೇ...

ಹ್ಯಾಪಿ ಹುಟ್ದಬ್ಬ ಆಯೀ...

Monday, February 1, 2016

ಗೊಂಚಲು - ನೂರೆಂಬತ್ತೆರಡು.....

ಮತ್ಕೆಲವು ಬಿಡಿ ಭಾವಗಳು.....

ಬಿಟ್ಟು ಬಂದೂರ ಕನವರಿಕೆಯಲಿ.....
ಸಾವು ಕೂಡಾ ಒಂದು ನಿಲ್ದಾಣ ಅಷ್ಟೇ ಎಂದು ನಂಬುವ ಹೊತ್ತಲ್ಲಿ ಬದುಕಿಗೆ ನಿರಂತರ ಚಲನೆ ಒಂದೇ ಅಂತಿಮ - ನಿಲ್ಲಬಾರದು ನಡಿಗೆ...
ಈ ಕ್ಷಣ ನಾ ಭಾವಿಸಿಕೊಂಡದ್ದು ಅಲ್ಲಲ್ಲ ಭಾವಿಸಿಕೊಂಡದ್ದಷ್ಟೇ ನನ್ನ ಬದುಕು - ಅಳುವೆಂದರೆ ಅಳು, ನಗುವೆಂದರೆ ನಗು...
ಮನದ ಭಾವ ಮತ್ತು ಪರಿಸ್ಥಿತಿಯ ಚಿತ್ರ ವಿಚಿತ್ರ ಗತಿಗೆ ತಕ್ಕಂತೆ ನಡಿಗೆ ನಿರ್ಧಾರ...
ಭಾವ ಮತ್ತು ಪರಿಸ್ಥಿತಿಯ ನಿಭಾವಣೆಯಷ್ಟೇ ವ್ಯಕ್ತಿ ವಿಶೇಷಣ...
ಹಾಗಿದ್ದಾಗ ಶ್ರೇಷ್ಠ ಅಥವಾ ನಿಕೃಷ್ಠ ಎಂಬ ಸಾಮಾನ್ಯ ವಿಭಜನೆ ಮತ್ತು ಸಾಧನೆಯ ಮಾನದಂಡವೇ ಗೊಂದಲಮಯ ಎನ್ನಿಸುತ್ತದೆ - ಹೆಚ್ಚಿನ ಸಲ ಅರ್ಥ ಕಳಕೊಳ್ಳುತ್ತದೆ...
ಚಿಗುರಿನ ಮುಖ ಆಗಸಕಿದ್ದರೂ ಮರ ಬೇರು ತಬ್ಬಿದ ನೆಲಕ್ಕೆ ಸ್ವಂತ...
ಅಷ್ಟಾಗಿಯೂ ನನ್ನ ಅನ್ನವಿದ್ದಲ್ಲೇ ನನ್ನ ನೆಲೆ; ಇಲ್ಲಿದ್ದು ಅಲ್ಲಿಗಾಗಿ ಬಿಕ್ಕಳಿಸೋದು, ಅಲ್ಲಿದ್ದು ಇಲ್ಲಿಗಾಗಿ ಹಂಬಲಿಸುವುದಕಿಂತ ಇದ್ದಲ್ಲೇ ನಗುವರಳಿಸಿಕೊಂಬುದು ಬದುಕಿನ ಜಟಿಲ ಆದರೆ ಅಷ್ಟೇ ಅನುಪಮ ಕಲೆ...
ಮೈಮುರಿದೇಳುವ ಕನಸಿನೆದುರು ಬಿಕ್ಕಳಿಸೋ ನೆನಪುಗಳು ಆಕಳಿಸಿದರೆ ಇದ್ದಲ್ಲೇ ಸಿದ್ಧ ಸಮೃದ್ಧ ನಗೆಯ ಹೋಳಿಗೆ - ಕ್ಷಣ ಕ್ಷಣದ ಹಸಿ ನಗುವೇ ಬದುಕ ಏಳಿಗೆ - ಅಂತರಂಗದ ಕಸುವಿನ ನಗು ಒಲಿಯಲಿ ಪ್ರತಿ ಬದುಕ ಪಾಲಿಗೆ...
***
ಕೊಬ್ಬಿದ ಹೋರೀನ ಹಿಡಿದು ಪಳಗಿಸ ಹೋದರೆ ಪ್ರಾಣಿ ಹಿಂಸೆ - ಅದನ್ನೇ ಕಡಿದು ತಿಂದರೆ ಆಹಾರ ಸಂಹಿತೆ...
"ಹೊಡೆದರೆ ಹಿಂಸೆ - ಕಡಿದರೆ ಹಸಿವು" ಇದ್ಯಾವ ನ್ಯಾಯವೋ ಕಾಣೆ...
ಎತ್ತಿನ ಗಾಡೀನ ಓಡಿಸಿ ಗೆದ್ದರೆ ಪ್ರಾಣಿ ದಯೆಗೆ ಮಾರಕ - ಕುದುರೆ ಬಾಲಕ್ಕೆ ಕೋಟಿಗಳ ಸುರಿದು ಚಪ್ಪಾಳೆ ಹೊಡೆದರೆ ಮನರಂಜನೆ...
"ಗ್ರಾಮೀಣವಾದರೆ (ಬಹುತೇಕ ಬಡವರದ್ದು) ಹಿಂಸೆ - ನಗರದವರದ್ದು (ಬರೀ ಸಿರಿವಂತರದ್ದು) ಮನರಂಜನೆ" ಇದ್ಯಾವ ನೀತಿಯೊ ಅರಿಯೆ...
ಎಲ್ಲಾ ಪ್ರಾಣಿಗಳ ಜೀವಾನೂ ಒಂದೇ ಅಲ್ವಾ..??!!
ಈ ಬುದ್ಧಿಜೀವಿಗಳ ಬುದ್ಧಿಯ ಮರ್ಮ ಅರ್ಥವೇ ಆಗಲ್ಲಪ್ಪ...:(
(*** ಕ್ಷಮಿಸಿ ಬುದ್ಧಿಜೀವಿಗಳೇ ಹಿಂಗೆಲ್ಲಾ ಅಂದೆ ಅಂತ ಮನಸು ನೋಯಿಸಿದ ಕೇಸು ಝಡಿದು ಕೊಲ್ಬೇಡಿ ಆಯ್ತಾ...)
***
ಮನದೊಳಮನೆಯ ಪ್ರಶಾಂತಿಯಿಂದ ಬದುಕ ನಗೆಯ ಸಮೃದ್ಧಿಯಾ ಅಥವಾ ನಗೆಯ ಸಮೃದ್ಧಿಯಿಂದ ಶಾಂತಿಯಾ..? ಗೊಂದಲವಾಗುತ್ತೆ ಕಣೋ...
ಆದರೆ ಒಂದನೊಂದು ತಬ್ಬಿದ ಒಲವ ಕೂಸುಗಳಾದ ಶಾಂತಿ ಮತ್ತು ನಗುವಿಗಾಗಿ ಒಂದಿನಿತು ಕನಸುಗಳ ಬಿಟ್ಟು ಕೊಟ್ಟುದಾದರೆ ಅದಕೆ ತ್ಯಾಗದ ಗಾಢ ಬಣ್ಣ ಬಳಿಯಲಾರೆ...
ಒಲವ ಮಂದಾಕಿನಿಯಂತೆ ಬದುಕ ಬಿಂದಿಗೆಯ ತುಂಬಿದವ ನೀನು - ನಿನ್ನಿಂದಲೇ ಅಲ್ಲವಾ ಈ ಶಾಂತಿ, ಈ ನಗೆಯ ಸಮೃದ್ಧಿ ಈ ಬದುಕಿಗೆ...
ನಿನ್ನೊಲವ ಋಣಕೆ ನಿನ್ನ ನಾಳೆಯ ಖುಷಿಗೆ ನಿನ್ನನೇ ಬಿಟ್ಟು ಕೊಡುವ ನೋವಿಗೂ ತ್ಯಾಗದ ಹೆಸರಿಡಲಾರೆ...
ಆದರೆ ನನ್ನ ಬದುಕಿನ ಲಭ್ಯತೆ ಇಷ್ಟೇ ಎಂಬುದ ನೆನೆವಾಗ ಹನಿಯೆರಡು ಜಾರಿದರೆ ನೀ ನೋಯದಿರು ಅಷ್ಟೇ...
ಪ್ರೀತಿಯಿಂದ - ನಿನ್ನವಳು...
***
ಹಿಮ ಮೌನ:
ಹಿಮ ಕರಗಿದರೆ ಜೀವ ನದಿ - ನಾಗರಿಕತೆಗಳೇ ಬೆಳೆದಾವು...
ಮೌನ ಕರಗಿದರೆ ಭಾವ ಹುಚ್ಚು ಹೊಳೆ - ಬದುಕ ಕೈತೋಟದ ತುಂಬಾ ನೇಹದ ಹೂಗಳ ಸಮೃದ್ಧ ಬೆಳೆ...
ಕರಗದೆ ನಿಂತರೆ.........
ಮೌನದ ಭಾರಕ್ಕೆ ಮಾತು ಹರಳುಗಟ್ಟುವಲ್ಲಿ, ಒಳಗಿನಳಲಿಗೆ ಸ್ವಚ್ಛ ಹೊರ ಹರಿವಿನ ಸೆಳವಿಲ್ಲದಲ್ಲಿ ಕರುಳ ಜೋಗುಳವೂ ತಪ್ತ ಗುಪ್ತ ಗಾಮಿನಿ...
***
ಅಲ್ಲಿ ನಿನ್ನ ಕಾಲ್ಗೆಜ್ಜೆಗಳೊಂದಿಗೆ ಅಲೆಗಳು ಮಾತಿಗಿಳಿದಿವೆಯಂತೆ...
ನಿನ್ನೆದೆಯ ಬಿರು ಮೌನವ ನಿನ್ನ ಆ ಗೆಜ್ಜೆಗಳಿಗೂ ಕಲಿಸುವಲ್ಲಿ ನೀ ಸೋತ ಸುದ್ದಿಯ ಚಂದಮ ನನಗೆ ಕೇಳುವಂತೆ ತಾರೆಗಳಿಗೆ ಹೇಳಿ ಪುಳಕಗೊಳ್ಳುತಿದ್ದ...
ನಿತ್ಯವೂ ಒಂಟಿ ಅಲೆಯುವ ಬೀದಿ ಕೊನೆಯ ತಿರುವಿನ ಪಾರಿಜಾತದ ಕೊಂಬೆ ತುದಿಯಲ್ಲಿ ಈಗಷ್ಟೇ ಅರಳಿದ ಮೊಗ್ಗೊಂದ ಹಿತವಾಗಿ ಚುಂಬಿಸಿದೆ ನಾನಿಲ್ಲಿ...
ಇದಕೆಲ್ಲ ಪ್ರತ್ಯಕ್ಷ ಸಾಕ್ಷಿಯಾದ ಗಾಳಿಯ ರೋಮಾಂಚಿತ ಮೃದು ಮೊರೆತಕ್ಕೆ ನಿನ್ನೆದೆ ನಸುಗಂಪಿಸುವಾಗ ನನ್ನ ನೆನಪಾಗಿಲ್ಲವೆಂದು ಹುಸಿನುಡಿಯಬೇಡ...
ಕಪ್ಪು ಹುಡುಗೀ -
ಮುಚ್ಚಿಡಲು ಒಲವು ಕಳ್ಳ ಬಸಿರಲ್ಲ - ಒಲವೆಂದರದು ತಾಯ್ಗರುಳ ತೊಟ್ಟಿಲ ಸಂಗೀತ - ನೀ ಹೇಳದೆಯೂ ನಾ ಕಾಣಬಲ್ಲ ಆರ್ದ್ರ ಭಾವದ ಕಣ್ಣಿನ ಆರದ ದೀಪ...
ಏಳು ಏಳೇಳು ಎಂಬೆಲ್ಲ ಲೆಕ್ಕಗಳು ತಪ್ಪುವಷ್ಟು ಜನ್ಮಗಳ ಮರು ಹುಟ್ಟಿನ ಅತಿ ಹುಚ್ಚು ಅಭಿಲಾಶೆ ಈಗ; "ನಿನ್ನೆದೆಯ ಒಲವ ಅನುಭಾವದ ಸನ್ನಿಧಿಯೆಡೆಗಿನ ನನ್ನೊಳಗಿನ ಹಸಿವಿಗೆ..."

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)