Monday, February 15, 2016

ಗೊಂಚಲು - ನೂರಾ ಎಂಬತ್ನಾಕು.....

ಏನೇನೋ ಹೇಳಬೇಕನ್ನಿಸಿ.....

ಆರು ವೈರಿಗಳಂತೆ,
ಒಂಭತ್ತು ರಸಗಳಂತೆ,
ನಾಲ್ಕು ಪುರುಷಾರ್ಥಗಳಂತೆ,
ಮತ್ತೆ ನಾಲಕ್ಕು ಆಶ್ರಮಗಳಂತೆ...
ಇರುವ ಐದೇ ಇಂದ್ರಿಯಗಳಲಿ ಈ ಕೆಲವನ್ನು ನಿಗ್ರಹಿಸಬೇಕಂತೆ, ಇನ್ಕೆಲವನ್ನು ನಿರ್ವಹಿಸಬೇಕಂತೆ...
ಇವುಗಳಿಂದೆಲ್ಲ ನಾಕ, ನರಕಗಳಂತೆ...
ಇವಕೆಲ್ಲ ಜನ್ಮಗಳು ಏಳಂತೆ...!!!
ಇಷ್ಟೇ -
ತೀರದ ತೀವ್ರ ಹಸಿವಿನ ಬದುಕ ಮಹಾ ಯಜ್ಞಕ್ಕೆ ಸಾವಿನ ಪ್ರಶ್ನಾತೀತ ಪೌರೋಹಿತ್ಯ...
^^^<>^^^
ಅವನು:
ಶತ ಶತಮಾನಗಳ ಮೌನ ಹೊದ್ದ ದಂಡೆ - ಅಬ್ಬರದ ಮಾತಿನ ಶರಧಿ - ಇಬ್ಬರನೂ ತಬ್ಬುವ ಬೆಳುದಿಂಗಳು ಎಲ್ಲ ಹಾಗೇ ಇವೆ...
ನಾನೋ ಬೆಳದಿಂಗಳಲ್ಲೂ ಅಡಗಲು ನೆರಳ ಮರೆಯ ಹುಡುಕುತ್ತೇನೆ ಈಗೀಗ...
ನಿನ್ನ ಕಣ್ಣ ಮೊನೆಯಲ್ಲಿನ ನನ್ನೆಡೆಗಿನ ಕರುಣೆಯ ರಂಗೋಲಿಯ ಅಳಿಸಲು ಹೇಳಿದ್ದು ನಾನೇ ನಿಜ...
ನನ್ನ ಹಸಿ ಹಸಿ ವಾಸ್ತವದ ಬಿರು ನುಡಿಗಳಿಗೆ ನೀ ನಿನ್ನ ಮೌನವ ಕಲಿಸಿದ್ದೂ ಸೂಕ್ತವೇ ಅನ್ನಿಸುತ್ತೆ ಒಮ್ಮೊಮ್ಮೆ...
ಆದರೆ ಇವೆಲ್ಲದರ ನಡುವೆ ಸ್ನೇಹದ ಒಳಮನೆಯಲ್ಲಿ ನಗು ಅಸ್ತಿತ್ವ ಕಳಕೊಂಡದ್ದು ಯಾವಾಗ ಅಥವಾ ನಗು ಇದ್ದಿದ್ದೇ ಭ್ರಮೆಯಾ...!?
ಸ್ನೇಹಗಳ ಮುಖಾ ಮುಖಿ ಮಿಲನದಲ್ಲಿ ಮಾತು ಗೈರಾದರೆ ಒಪ್ಪಬಹುದು, ಒಪ್ಪವಾದ ಮೌನವ ಅಪ್ಪಬಹುದು; ಆದರೆ ನಗುವಿನ ಹರಿವಿದು  ನಿಂತುದಾದಲ್ಲಿ ಭಾವ ಬಾಂಧವ್ಯದ ಉಸಿರು ಕಟ್ಟೀತು...
ಕಾಲವೂ ಕಾಯುತಿದೆ ನನ್ನೊಡನೆ - ಆ ನಗೆಯ ಪಾರಿಜಾತವಿಲ್ಲಿ ಮತ್ತೆ ಅರಳೀತಾ...?

ಅವಳು:
ಹೆಜ್ಜೆ ಹೆಜ್ಜೆಗೂ ಕವಲೊಡೆವ ದಾರಿ...
ಜಾಲಿಯ ಬನದಲ್ಲಿ ನೆರಳ ಹುಡುಕುವ ಪರಿ...
ನಿನ್ನ ಅಕ್ಕರೆಯ ತಂಗಾಳಿಯ ಇದಿರು ನಿಂತು ಎದೆಯ ಮೌನದ ಮೋಡವ ಕರಗಲು ಬಿಟ್ಟರೆ ಕಣ್ಣು ಜೋಗಿಯ ಎದುರು ಧುಮ್ಮಿಕ್ಕೋ ಜೋಗವಾಗುತ್ತೆ ಮತ್ತು ನಾನೇ ಸಲಹಿಕೊಂಡ ಸ್ನೇಹದೆದುರಲ್ಲೇ ಆದರೂ ಅಳುವುದೆಂದರೆ ಅಭಿಮಾನದ ಸಾವು ಎಂಬೆನ್ನ ಭ್ರಮೆಯ ಮೀರಲಾರದ ಭಯ...
ಅದಕೇ ಎನ್ನೆದೆ ತೊಟ್ಟಿಲ ಕನಸ ಕೂಸಿನ ಬಿಕ್ಕಳಿಕೆಯ ಕಥೆಯ ಎನ್ನ ಕಿವಿಯೂ ಕೇಳದಿರಲೆಂದು ಅವುಡುಗಚ್ಚಿ ಹೆಣಗುತ್ತೇನೆ...
ಹಾಗಂತ ಕರುಳ ಹಸಿ ಹುಣ್ಣನು ಮುಚ್ಚಿಟ್ಟು ಸುಳ್ಳು ನಗೆಯ ಬಣ್ಣದ ಅರಿವೆಯ ಹೊದೆಯಲಿ ಹೇಗೆ ಆತ್ಮೀಕವೆಂದು ನಾನೇ ನಂಬುವ ಸ್ನೇಹದೆದುರಲ್ಲಿ - ಅಲ್ಲದೇ ಬದುಕಿಗೆ ಮುಖವಾಡವ ತೊಡಿಸಲಾರೆ ಕಣೋ...
ನೆನಪ ಚಿತ್ತಾರಗಳ ಹೊತ್ತು ದೂರವಿದ್ದೇ ಹತ್ತಿರವೆನಿಸೋ ಬಂಧಕಿಲ್ಲಿ ಮೌನವೊಂದೆ ಆಶ್ರಯವೀಗ...
ಕಣ್ಣಲ್ಲಿ ಕಣ್ಣಿಟ್ಟು, ನೆತ್ತಿಗೆ ಕೈಯಿಟ್ಟು ಬಯಸಬೇಡ ನಗೆಹೊನಲ ಒಡನಾಟದೂಟ...
ಇದ್ದುಬಿಡಲಿ ಬಿಡು ಈ ನೇಹ ಹೀಗೇ - ಅರೆಬಿರಿದ ಹೂವಿನ ಹಾಗೆ...
 --- (ಮುಂದುವರಿದೀತು...)
^^^<>^^^
ಕೊಳಲನೂದುವ ಕರಿಯನ ಕೈಯ ಮುದ್ರೆಯುಂಗುರದ ಕಡುಗೆಂಪು ಹರಳಲ್ಲೂ ರಾಧೆಯ ಹೂವೆದೆಯ ನೀರಜ ಒಲವ ಹೊಳಪು...
^^^<>^^^
ಮನದ ಮನೆಯ ದೇವಭಾವದೊಡವೆಗಳ ಕಾವಲಿಗೆ 'ಕ್ಷಮೆ' ನಿಂತಿರುವ ತನಕ ಯಾವ ನೇಹಕೂ ಸಾವಿಲ್ಲ...
ಅಹಮಿಕೆಯ ಮೀರಿ ಕೇಳದೆಯೆ ಕೊಡುವ, ಅದೇ ಅಹಮಿಕೆಯ ಕಳಕೊಂಡು ಕೇಳಿ ಪಡೆವ ಹಿರಿದು ಭಾವವದು ಕ್ಷಮೆ...
ಎದೆಯ ಕಲ್ಯಾಣಿಯಲ್ಲಿ ಕ್ಷಮೆಯ ಒರತೆ ಬತ್ತಿದ ಮರು ಘಳಿಗೆ ಸ್ನೇಹ, ಪ್ರೀತಿ, ಪ್ರೇಮ, ಒಲುಮೆ, ಕಾಮ ಎಂಬಿತ್ಯಾದಿ ಯಾವ ಭಾವಗಳಿಗೂ ಜೀವ ಇರುವುದಿಲ್ಲ - ನನ್ನಲ್ಲೂ, ನಿನ್ನಲ್ಲೂ - ಯಾರಲ್ಲೂ...
ಕ್ಷಮೆಯ ಕಾವಲಿದ್ದಾಗ ಒಳಗುಡಿಯ ಯಾಜಮಾನ್ಯ ಪ್ರೀತಿಯದ್ದಿರುತ್ತೆ - ಕ್ಷಮೆ ಎದೆಬಾಗಿಲಿಂದಾಚೆ ಕಾಲಿಟ್ಟ ಘಳಿಗೆಯಿಂದ ಒಳಮನೆಯ ತುಂಬ ಕ್ರುದ್ಧ ಮೌನದ್ದೇ ಪಾರುಪತ್ಯ...
ಪ್ರೀತಿಯ ಕತ್ತು ಹಿಸುಕಲಾಗಿ ಕ್ಷಮೆ ಪಥ ಬದಲಾಯಿಸುತ್ತೆ - ಕ್ಷಮೆ ಕಳೆದು ಹೋಗಲಾಗಿ ಪ್ರೀತಿ ಮರುಹುಟ್ಟಿನ ಸಣ್ಣ ಶಕ್ತಿಯನ್ನೂ ಕಳೆದುಕೊಂಡು ಮರಣದೆಡೆಗೆ ಸಾಗುತ್ತೆ... 
ಇದಕಿಂತ ದೊಡ್ಡ ದುರಂತ ಇನ್ನೇನಿದೆ ಭಾವ ಬಾಂಧವ್ಯಕ್ಕೆ...
ಎಲ್ಲರೆದೆಯಲೂ ಒಂಚೂರು ಪ್ರೀತಿ ಹಸಿವು, ಒಂದಿನಿತಾದರೂ ಕ್ಷಮೆ ನಿರುದ್ದಿಶ್ಯವಾಗಿ ನಿರಂತರ ಉಸಿರಾಡಿಕೊಂಡಿರಲಿ ತಮ್ಮ ಭಾವ ಬಂಧಗಳೆಡೆಗೆ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ವ್ಹಾವ್ ಗೆಳೆಯ ವ್ಹಾವ್...
    "ಕೊಳಲನೂದುವ ಕರಿಯನ ಕೈಯ ಮುದ್ರೆಯುಂಗುರದ ಕಡುಗೆಂಪು ಹರಳಲ್ಲೂ ರಾಧೆಯ ಹೂವೆದೆಯ ನೀರಜ ಒಲವ ಹೊಳಪು..."

    ReplyDelete