Tuesday, June 1, 2021

ಗೊಂಚಲು - ಮುನ್ನೂರೆಪ್ಪತ್ಮೂರು.....

ಸರ್ವಂ ಶೃಂಗಾರ‌ಮಯಂ...

ಕೃತಕ ಪ್ರಖರತೆಯ ಬೀದಿ ದೀಪದ ಬೆಳಕಿನ ಅಬ್ಬರದಲಿ ಕಲೆಸಿ ಒಣಗಿ ಕಳೆದು ಹೋದ ಬೆಳುದಿಂಗಳ ಹಾಲು...
ಕಣ್ಣೆತ್ತಿದರೆ ಚಂದಿರನ ಮುಖದ ಕಲೆಯೇ ಎದ್ದೆದ್ದು ಕಾಣುತ್ತದೆ - ಅಷ್ಟಾಗಿಯೂ ಅವ ಪಾರಿಜಾತ‌ದ ಮೈಯ್ಯರಳಿಸಿ ನನ್ನೊಳಗಿನ ವಿರಹದುರಿಗೆ ತುಪ್ಪ ಹೊಯ್ತಾನೆ...
ಬೀದಿ ಕಾಯೋ ನಾಯಿಗಳ ನಿತ್ಯದ ನಡುರಾತ್ರಿ‌ಯ ಸಾಮಾನ್ಯ ಸಾಮೂಹಿಕ ಸಭೆಯೂ ರದ್ದಾದಂತಿದೆ...
ಕತ್ತಲಲ್ಲಿ ಕಂಗಳ ಕೆರಳಿಸೋ ಮೌನವೊಂದು ಹಂಗಂಗೇ ಹೆಂಗೆಂಗೋ ಮುಂದುವರಿಯುತ್ತದೆ...
ಅಂದೆಂದೋ ನಿನ್ನ ಕಣ್ಣ ಚುಂಬಿಸಿದ ಈ ತುಟಿಗಳಿಗೆ ಅಂಟಿದ ಕಾಡಿಗೆ ಹೇಳಿದ ಕರುಳ ಕಥೆಗಳೆಲ್ಲ ನೆನಪಾಗುತ್ತವೆ...
ಮತ್ತು
ನಾನು ಆ ನಿಶ್ಯಬ್ದ‌ದ ಒಡಲೊಳಗೆಲ್ಲಿಂದಲೋ ನಿನ್ನ ಉಸಿರ ಸಂಗೀತ ಹೊಮ್ಮಿ ಬಂದೀತೆಂದು ಕಾಯುತ್ತಾ ಕಮನೀಯ ಕಳವಳದಲಿ ಇರುಳ ದಾಟಲು ಅಣಿಯಾಗಿ ಅಂಡಲೆಯುತ್ತೇನೆ...
____ ತಾರೆಯೊಂದ ಕಣ್ಣಲ್ಲೇ ಮಾತಾಡಿಸಿ ಸಣ್ಣ ಸುದ್ದಿ ಕೊಡು, ನಿನ್ನೊಳಗೂ ಹಿಂಗೇನಾ...?!
💨💨💨

ಅರೆಗಣ್ಣಲ್ಲಿ ಓದುತ್ತಾ ಓದುತ್ತಾ ಹಂಗೇನೇ ನಿದ್ದೆ ಹೋದೆ - ಎದೆಯ ಮೇಲೆ ಮಹಾಗ್ರಂಥದಂತೆ ಅವಳು ಒರಗಿದ್ದಳೂ... 😍

ಎದ್ದು ಕೂತ ಅವಳ ನಿದ್ದೆಗಣ್ಣಲಿನ್ನೂ ನಂದೇ ಬಿಸಿ ಕನಸಿನ ಹಸಿ ನೆರಳು ಹೊರಳುತಿದೆ... 😉🙈

ನಿನ್ನ ಕೋಪದೆದುರೂ ಗಟ್ಟಿಯಾಗಿ ಹೊಡ್ಪಡೆಗೆ ನಿಲ್ಲಬಲ್ಲ ನಾನು ನಿನ್ನ ಕಿರು ಲಜ್ಜೆ‌ಯ ಸುಳಿ ಮಾಟದೆದುರು ಬೇಶರತ್ತಾಗಿ ಸೋಲುತ್ತೇನೆ...

ಸೆರಗಿನ ಮೋಡ ಸರಿದು ಅವಳ ಮೆದು ಎದೆಯ ಗುಂಡು ಚಂದ್ರ ಮೆಲುವಾಗಿ ನಕ್ಕರೆ... 
ಆಹ್!! 
ಆ ಬೆಳುದಿಂಗಳ ಮೊಗೆಮೊಗೆದು ಕುಡಿವ ಕನಸಲಿ ನನ್ನ ಬೊಗಸೆಯಲಿನ ಕತ್ತಲು ಅಸುನೀಗಲಿ...
💨💨💨

ಒಂದೇ ಎರಕದಲ್ಲಿ ಎರಡು ವಿರುದ್ಧ ಅನ್ನುವಂಥಾ ಜೀವಾತ್ಮಗಳ ಸೃಷ್ಟಿಸಿ, ಎರಡರಲ್ಲೂ ಅಂತರ್ಲೀನವಾಗಿ ಹರಿವಂತೆ ಅವೆರಡೂ ಮತ್ತೆ ಒಂದಾಗುವ, ಒಂದೇ ಆಗುತ್ತಾ ಬಾಗುವ, ಸಾಗುವ ಆಕರ್ಷಣ ಭಾವೋತ್ಕರ್ಷದ ಕಿಡಿಯನ್ನು ಇಟ್ಟು ತನ್ನ ತಾನು ವಿಸ್ತರಿಸಿ ಕಾದುಕೊಳ್ಳುವ ಪ್ರಕೃತಿಯ ಲೀಲಾ ವಿನೋದವ ನೋಡಾ...
ನಾನೋ,
ಅದರದೇ ಅಂಶವಾಗಿಯೂ ಅದರ ಮೀರುತ್ತೇನೆಂದು ಹೊರಟು ಅದು ಇಟ್ಟ ಸವಿಯ ಇಟ್ಟಂತೆ ಸವಿಯಲರಿಯದ, ಮೀರಲಾಗದೇ ತೇಲುವಲ್ಲೂ ಅದರಾಳವ ಹೇಗೆಲ್ಲಾ ಹಾಡಬಹುದೋ ಹಾಗೆಲ್ಲಾ ಹಾಡಲೂ ತಿಣುಕುವ ಅತಿದಡ್ಡ ರಸಿಕ ಧೂಳ ಕಣ...
____ಸರ್ವಂ ಶೃಂಗಾರ‌ಮಯಂ...
💨💨💨

"ನನ್ನ ಹೆಗಲಾಗೆ ನಿನ್ನ ಕನಸುಗಳ ತೇರೆಳೆಯುತೇನೆ..."
ಹಾಗಂದದ್ದು ನೀನು...
ಅಯೋಮಯದಲಿ ಕಬೋಜಿಯಾಗಿ ನಿಂದವನ ಬೊಗಸೆಯಲಿ ಮೊಗೆದು ನಿನ್ನುಸಿರೇ ತಾಳಿ ನನ ಕೊರಳಿಗೆ ಅಂದು ತುಂಟ ಕಣ್ಮಿಟುಕಿಸಿ ನಗಿಸೋ ಗೆಳತೀ - 
ಪ್ರೀತಿ ಕೇಳುವವರು ಸಿಗುತಾರೆ - ಪ್ರೀತಿ ಹೇಳುವವರೂ ಸಿಕ್ಕಾರು - ನೀನು ನೀನಾಗಿ, ನಾನು ನಾನಾಗಿ, ಜೊತೆಯಾಗಿ ಸಂಭಾಳಿಸುವ ಬಾರೋ ಎದೆಗೆ ಬಿದ್ದ ಈ ಪ್ರೀತಿಯಾ ಅಂಬೋರು ಮತ್ತೆಲ್ಲಿ ಸಿಕ್ಕಾರೆಯೇ...
ಸೋತೆ ಮತ್ತು ಈ ಸೋಲು ಹಿತವಾಗಿದೆ...
ಹಿಂಗೆಲ್ಲಾ ಆಗಿ,
ಪುಟ್ಟ ಪುಟಾಣಿ ಸೂಜಿ ಮೆಣಸಿನಂತ ಒಲವಿನಂಥದ್ದೊಂದು ತನ್ನ ಎಳೇ ಉಗುರಿನಿಂದ ಎದೆ ಬಾಗಿಲ ಕೆರೆಯಿತು - ಆ ಸಂಜ್ಞೆಯನೇ ಉಸಿರಾಡಿ ಸಣ್ಣ ಕರುಳಿನಾಳದಲ್ಲಿ ಕವಿತೆಯೊಂದು ಗರ್ಭಕಟ್ಟಿ ಮಿಸುಕಾಡಿತು...
______ ಎದೆಗೂಡಲಿ ವೀಣೆ ಅನುರಣನ...
💨💨💨

ನುಡಿಸಿ ಎತ್ತಿಟ್ಟ ವೀಣೆ ದನಿಯ ಧುನಿ ನಿದ್ದೆಯಲೂ ವೈಣಿಕನ ಕಿವಿಯ ಲಾಲಿಯಾದಂತೆ...
ಅಲ್ಲೆಲ್ಲೋ ಆಡ್ತಾ ಇದ್ದ ಮಗುವೊಂದು ಸುಮ್ನೆ ಬಂದು ಎದೆ ಏರಿ ಮಲಗಿ ಗಲಬರಿಸಿ ನಿದ್ದೆ ಹೋದಂತೆ...
ಕೆಲವೊಮ್ಮೆ ಎಲ್ಲೆಲ್ಲಿಂದಲೋ ನಡೆದು ಬಂದು ಬೇಕಂತಲೇ ಎದೆಯ ಕಪಾಟಿನಲಿ ಅವಿತು ಕೂರೋ ಭಾವಗಳಿಗೆ ಹೆಸರೇ ಇರಲ್ಲ ನೋಡು...
ಚಂದ ಕಾರುಣ್ಯ ಅದು ಬದುಕಿನ‌ದು - ಬೆಚ್ಚಗೆ ಮುಚ್ಚಟೆ ಮಾಡಬೇಕಷ್ಟೇ ಅಂಥ ಅನುಭಾವವ...
ನೀನೂ ಹೀಗೇ ಅಲ್ಲವಾ - ಬಂದದ್ದು, ನೆಲೆ ನಿಂತದ್ದು... 
____ ಕವಿಯ ಪದಮಾಲೆ, ನಿನ್ನ ಕಣ್ಣ 'ವೀಣೆ...'
💨💨💨

ಹಂಗೆಲ್ಲಾ ಹನಿಗೂಡಿ ಗೊತ್ತೇ ಇಲ್ಲ ನಂಗೆ...
ಸುಖಾಸುಮ್ನೆ ಹಾಯ್ ಅಂದಷ್ಟೇ ಸರಾಗ ಬಾಯ್ ಅನ್ನಲೂಬೇಕು ಅಂತಿದ್ದೆ...
ಅದೇ ಸರೀ ಅಂತಲೂ ನಂಬಿದ್ದು ಕೂಡಾ ಹೌದು...
ಜಗದ ದಿಟ್ಟಿಯಲಂತೂ ನಾನು ತುಂಬಾನೇ ಭಾವಶೂನ್ಯ ಹುಳ...
ಬಲು ಹುಂಬ ಲೆಕ್ಕಾಚಾರಗಳ ಪ್ರಾಣಿ...
ಅದಕೆ ತಕ್ಕ ಹಾಗೆ,
ಎಂತೆಂಥವನೆಲ್ಲಾ ಬದಿಗೆ ಸರಿಸಿ ನಕ್ಕಿದ್ದೇನೆ ಗೊತ್ತಾ...
ಸಾವಿನ ಮನೆಯಲ್ಲೂ ನಗುವಿಗಾಗಿ ಮಗುವ ಹುಡುಕುವವನು...
ಮನದ ಭಾವಬೀಜಗಳ ಪ್ರಜ್ಞೆ‌ಯ ಸಾರಣಿಗೆಯಲಿ ಗಾಳಿಸಿ ಗಾಳಿಸಿ ಎಲ್ಲಾ ಜೊಳ್ಳು ಅಂತ ಸಾಧಿಸುವವನು...
ಅಂಥದ್ದರಲ್ಲಿ ಎಲ್ಲಿತ್ತು ಈ ಉಮ್ಮಳಿಕೆ...!!!
ನೋಟ ಮಸುಕು ಮಸುಕಾಗಿ ಹೊರಳೋ ಆ ತಿರುವಿನಲ್ಲಿ ನಿಂಗೆ ಟಾಟಾ ಮಾಡಿ ಬೆನ್ನಾಗಿದ್ದಷ್ಟೇ ಗೊತ್ತು ನೋಡು...
ಸದ್ದಿಲ್ಲದೇ, ಅರಿವೂ ಇಲ್ಲದೇ, ಎಂದಿನಂಗೆ ಬುದ್ಧಿ‌ಯ ಅನುಮತಿಗೂ ಕಾಯದೇ ನಿನ್ನ ಹೆಸರಿನ ಹನಿ ಕಣ್ಣಿಂದ ಕೆನ್ನೆಗಿಳಿದದ್ದು ಹೇಗೆ...!!
ಸಹಜ ಸಾಮಾನ್ಯ ಅಂದುಕೊಂಡ ಒಂದು ಬೀಳ್ಕೊಡುಗೆ ಇಷ್ಟು ಭಾರ ಹೇಗಾಯ್ತು...!!
ನೀನು ನಂಗೆ ಅಷ್ಟೊಂದು ಭಾವುಕ ಪರಿಚಯವಾ...
ಈ ಆಪ್ತತೆ ಎಲ್ಲಿಂದ, ಹೇಗೆ ಇದೆಲ್ಲಾ...?!
ನನ್ನಿಂದ ನನ್ನೇ ಯಾರೋ ಹೊತ್ತೊಯ್ದು ಈಗ ಇಲ್ಲೆಲ್ಲಾ ಅಪರಿಚಿತ ಅನ್ಸೋ ಹಾಗೆ...!!
ಕಣ್ಣ ಕಕ್ಷೆ‌ಯ ದೂರಾಭಾರಗಳೇನೂ ಕರುಳಿಗಂಟಲ್ಲ ಗೊತ್ತು...
ಜನ್ಮಾಂತರದ ಹಾಯಿ/ಯೀ ಭಾವದಲ್ಲೂ ಒಂದು ತೆಳುವಾದ ಕೂಗಳತೆಯ ಅಂತರವಾದರೂ ಇದ್ದೇ ಇದೆ ಅಂತಲೂ ಬಲ್ಲೆ...
ಆದರೂ, 
ವೈಣಿಕನೊಂದಿಗೆ ವೀಣೆ ಮುನಿದಂತ ವಿಭ್ರಾಂತ ತಳಮಳ...
ಜೀವದ್ದೋ ಭಾವದ್ದೋ ಕೊನರು ತೀವ್ರ ತಿವಿಯದೇ ಕಣ್ಣೇನೂ ಅಳ್ಳಕದಲಿ ತೇವವಾಗದಲ್ಲ...
ಅಲ್ಲಿಗೆ,
ನೀ ನನ್ನೊಳೇನನ್ನೋ ವಿಹಿತವಾದುದನು ತುಂಬಿದ್ದು ಮತ್ತು ಅಷ್ಟನ್ನೇ ನನ್ನಿಂದ ಸೆಳೆದೊಯ್ದದ್ದಂತೂ ವಿದಿತವಾಯ್ತಲ್ಲ...
ಹೇಯ್ ಕೇಳಿಲ್ಲಿ,
ನಂಗೆ ನಾ ಮತ್ತೆ ಸಿಕ್ಕಲು ನಿನ್ನ ಕರವಸ್ತ್ರವನೊಮ್ಮೆ ಎನ್ನೆದೆಗೊತ್ತಿಕೊಂಡು ನೋಡಲಾ...?
ಸಣ್ಣ ಸುಳಿವು ಸಿಗಬೇಕಿದೆಯಷ್ಟೇ...
ಈ ವಿದಾಯ ನಿನ್ನಲ್ಲೂ ಸಂಕಟವೇನಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೆರಡು.....

ಮಣ್ಣ ವಾಸನೆ.....

ಸಾವಿನೆದುರು ಅತ್ತದ್ದೂ ಸುಳ್ಳಲ್ಲ...
ಬದುಕು ಮುನ್ಸಾಗಿದ್ದೂ ತಪ್ಪಲ್ಲ...

ಗ್ರೀಷ್ಮನ ಎದೆಯಲ್ಲೂ ವಸಂತನ ಕಾವಿದೆ...
ಹರಿದ್ವರ್ಣದ ಹಾದಿಯಲ್ಲೂ ಯಾರದೋ ಅಸ್ಥಿ ಬೆರಳ ಒಡೆದೀತು...

ಬೇಲಿಯಾಚೆಯ ಬಯಲ ತುಂಬಾ ಬೇಲಿ ಹೂವಿನ ಘಮ...
ಕಳಚಿ ಬಿದ್ದ ಕಾಡು ಹೂವಿಗೆ ದರಕು, ಗರಿಕೆಗಳೇ ದೇವ ಮುಡಿ...

ಸಾವು ಎಷ್ಟು ಹಗೂರ - ಹೆಣವಷ್ಟೇ ಮಣ ಭಾರ...
ಬೇಲಿ ಕಟ್ಟಿಕೊಂಡು ತಪ್ಪಲಲಿ ನಿಂತು ನಿಟ್ಟುಸಿರಿಟ್ಟರೆ ಬೇಲಿ ಬಳಸಿ ಬಯಲ ಸುಳಿವ ಗಾಳಿಗೆ ಸೂತಕವೇ...!?

ಎದೆಗಂಟಿದ ಒಂದು/ಒಂದೊಂದು ಉಸಿರಿನ ಪ್ರಾರ್ಥನೆ - ಕಾಡಿನಂದದಿ ಕಾಡುವ ನೀನು..‌.

ಮೌನವೊಂದು ಮಧುರ ಭಾಷೆ ಕಾಡೊಂದು ಎದೆಯಲಿದ್ದರೆ...
ಮೌನವೇ ಮರಣಗತ್ತಿ ಎದೆ ಉರಿ ಉರಿಯುತಿರೋ ಮಸಣವಾಗಿದ್ದರೆ...

ಕಾಯುತ್ತೇನೆ -
ಮಳೆ ಕಾಡು ಮಣ್ಣ ವಾಸನೆಗೆ,
ಮಣ್ಣು ಮಾಗುವ ವಾಸನೆಗೆ,
ಮತ್ತು
ಮಣ್ಣೇ ಆಗುವ ವಾಸನೆಗೆ...

ಎದೆಗೆ ಆನಿಕೊಂಡವರ ಹೆಗಲ ತಬ್ಬಿ ಆ ರುದಯದ ಹಸಿ ಗಾಯಕ್ಕೆ ಒಂದು ಚಿಟಿಕೆ ಪ್ರೀತಿ ಸ್ಪರ್ಶ‌ದ ಮುಲಾಮು ಸವರುವಷ್ಟಾದರೂ ಅಂತಃಕರುಣಿಯಾಗಿಸು ಎನ್ನ ಮತ್ತು ಎನ್ನವರಿಗೆ ಅಷ್ಟು ಮಾಡುವಷ್ಟಾದರೂ ಅವಕಾಶ‌ವ ಕರುಣಿಸು ಎನಗೆ ಬದುಕೇ...
ನೊಂದ ಆತ್ಮಗಳೆದುರು ಯೆನ್ನ ಕಣ್ಣು, ಕಿವಿ, ನಾಲಿಗೆ ಎಲ್ಲಾ ಚೂರು ಮಿದುವಾಗಲಿ...
_____ ಕಾಡು ಹುಡುಗನ ಪ್ರಾರ್ಥನೆ...
😐😑😐

ಅನಾಯಾಸೇನ ಮರಣಂ ಅನ್ನೋದು ಒಂದು ಕನಸೇ ಆಗಬಹುದು - ಆದ್ರೆ ಹೆಂಗೇ ದಕ್ಕಿದ್ರೂ ಅಕಾಲ ಸಾವು ಕಾಲನ ಕಾಟಕ್ಕೆ ಪರಿಹಾರ ಆಗಲಾರದು...
ಬದುಕನ್ನು ಯಥಾವತ್ ಸ್ವೀಕರಿಸಿದಾಗಲಷ್ಟೇ ಸಾವಿಗೊಂದು ಘನತೆ ತುಂಬಬಹುದು ಅನ್ನಿಸಿದರೂ ಮೃತ್ಯು ಬೋಧಿಸೋ ನಶ್ವರತೆಯ ಎದುರು ಎದೆ ಎತ್ತಿ ನಿಂತು ನಡೆವ ತ್ರಾಣವನು ಆ ನಶ್ವರತೆಯೇ ನೀಡಬೇಕೇನೋ ಈ ಬದುಕಿಗೆ...
ಸಾಯಲು ಸಾವಿರ ಕಾರಣಗಳಿದ್ದರೂ ಬದುಕಲಿರುವ ಒಂದೇ ಒಂದು ಕಾರಣಕ್ಕೆ ಜೋತು ಬೀಳಬೇಕೆಂದರೆ ಮಗ್ಗುಲಿನವರ ಸಾವು ತುಂಬಿ ಹೋಗುವ ಖಾಲಿತನವ ತುಂಬಿಕೊಳಲು ಸಾವೇ ಶಕ್ತಿ ಕೊಡಬೇಕು...
ಅಂತಕನ ಕ್ರೌರ್ಯ‌ವ ಪ್ರಶ್ನಿಸೋ ಶಕ್ತಿಯಿಲ್ಲದ ಅಸಹಾಯ ಬದುಕು ನಮ್ಮದಾದರೂ, ಬದುಕನ್ನು ಖುದ್ದು ಕೊಡವಿಕೊಂಡು ಸಾವನ್ನು ಅವಮಾನಿಸದೇ ಮರುದಿನವ ಹಾಯಲೇಬೇಕು...
_____ಜವನ ಮೋಸದಾಟಕೊಂದು ಕ್ರುದ್ಧ ಧಿಕ್ಕಾರವಿರಲಿ ಮತ್ತು ಇದ್ದ ಬದುಕು ಮೊದಲಿಂದ ಮತ್ತೆ ಮುನ್ಸಾಗಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೊಂದು.....

ಸನ್ನಿಧಿ..... 

ಬೆಳದಿಂಗಳು ಸುಡದಂತೆ ನೆತ್ತಿ ಕಾಯೋ ನೆರಳಿನಂಥಾ ಕೂಸೇ -
ಸಾವಿರ ಪ್ರೀತಿಗಳ ಧಿಕ್ಕರಿಸಿ ನಡೆದವನನೂ ಒಂದ್ಯಾವುದೋ ಮಡಿಲು ಕಿರುಬೆರಳ ಜಗ್ಗಿ ನಿಲ್ಲಿಸುತ್ತದೆ - ಕೊರಳ ಬಳಸಿದ ಒಲವ ಕಡಲು ನೀನು...
ಓಡಿ ಓಡಿ ಬೆವರಿಳಿದು ದಣಿದ‌ವನನು ತಂಬೆಳಲ ಕಿರು ಅಲೆ ಮೈದಡವಿ ನಿಲ್ಲಿಸಿದಂಗೆ ಎನ್ನೀ ಬರಡು ಬಂಡೆಯೆದೆಗೆ ನಿನ್ನಾ ಹಸಿ ಕನಸಿನೆದೆಯಾನಿಸಿ ತಡೆದು ನಿಲ್ಲಿಸಿಕೊಂಡವಳು...
ನನ್ನನೇ ನನ್ನಿಂದ ಕದ್ದು ನಿನ್ನ ರೂಪದಲಿ ನನಗೇ ನೀಡ ಹೊರಟವಳು...
ವೈತರಣಿಯ ಆಚೆ ದಡದಲ್ಲಿ ಸ್ವರ್ಗ‌ವಿದೆಯಂತೆ, ನೀನಿರುವ ಈಚೆ ದಡ ವೈಪರೀತ್ಯ‌ಗಳ ಸಂತೆ‌ಯಂತೆ ಮತ್ತು ನಾನು ನನ್ನ ಮುಕ್ತಿಗೂ ನಿನ್ನೂರನೇ ಆಯ್ದುಕೊಳ್ತೇನೆ...
 ____ಮುಂದುವರಿದು ಅಲ್ಲಿಂದ ನಗುವೊಂದು ಬಿಳಲು ಬಿಳಲಾಗಿ ತನ್ನ ಬಾಹುಗಳ ನಮ್ಮ ಹಾದಿತುಂಬಾ ಹರಡಿಕೊಳ್ಳುತ್ತದೆ...
💑💑💑

ಉಸಿರ ನಾಭೀ ನಾಳಕಂಟಿದ ಗಾಢ ಗಂಧವೊಂದು ಮೈಯ್ಯ ಬೇಲಿಗಳಲಿ ಹಿತ ನಡುಕವ ಹುಟ್ಟಿಸುತ್ತಲ್ಲ, ಏನಂತಾರೋ ಅದಕ್ಕೆ...
ನಿನ್ನ ತೋಳ್ಬಂಧಿಯ ಕನಸಲ್ಲಿ ಮನ ಮಲ್ಲಿಗೆ ಮೆಲ್ಲಗೆ ಅರಳುವಾಗ ಮನೆಯ ಮೂಲ್ಮೂಲೆಯೂ ಸರ್ವಾಲಂಕೃತ ಅಂತಃಪುರವೇ ನೋಡು...
ಮುಡಿಯಿಂದ ಅಡಿಗಿಳಿವ ಹನಿ ಹನಿ ನೀರ ಹವಳಗಳ ಎಣಿಸಲೇ ನನ್ನಾ ತುಂಟ ತುಟಿಯಿಂದ - ತಣ್ಣೀರ ಜೊತೆ ಬಿಂದಿಗೆ ತುಂಬಾ ನಿನ್ನ ಆ ರಸಿಕ ನುಡಿಗಳ ಬಿಸಿ ನೆನಪ ಬೆರೆಸಿ ಸುರಿದುಕೊಂಡೆ; ಎಂಥಾ ಚಂದ ಸಂಯೋಜನೆ ಮಾರಾಯ...
ಅಬ್ಬಿಕೋಣೆಯ ಆವರಿಸಿದ ಹಬೆಯ ತುಂಬಾ ನೀನೇ ನೀನು - ಈ ಮೈಯ್ಯ ವೀಣೆ ಬಿಗಿದು ಹೊನಲಿಡುವ ರಾಗಗಳಿಗೆಲ್ಲ ನಿನ್ನದೇ ಹೆಸರು...
ನನ್ನೆಲ್ಲಾ ಬೆಳಗೆಷ್ಟು ನಚ್ಚಗೆ, ಬೆಚ್ಚಗಿದೆ ನಿನ್ನಿಂದ...
____ ಸಾಗರನೂರಿಗೆ ಬೆಳುದಿಂಗಳು ನಡೆದು ಬಂದಂಗೆ...
💑💑💑

ನಿನಗಾಗಿ ಜೀವ ಕೊಡ್ತೀನಿ/ಬಿಡ್ತೀನಿ ಅನ್ನುವುದಂತೆ ಪ್ರೇಮ - ಜೀವನ್ಮುಕ್ತಿ(?)...
ನಿನ್ನಲ್ಲಿ ಜೀವ ತುಂಬುತ್ತೇನೆನ್ನೋ ಭಾವ ಚೈತನ್ಯ ಸ್ನೇಹ - ಜೀವನ್ಮುಖಿ...
ಪ್ರೇಮದ ನಶಾ ಸುಖವ ಧಿಕ್ಕರಿಸಬಲ್ಲ ನಾನು ನೇಹದ ಸಹಜ ಸಾಮಾನ್ಯ ಸಾಹಚರ್ಯವನೂ ದೂರ ಇಡಲಾರೆ...
#ಸನ್ನಿಧಿ...
💑💑💑

ಅವಳ ಸೆರಗಿಗಂಟಿ,
ಮಹಾ ತುಂಟನಂತೆ... ಚಿಕ್ಕವನಿದ್ದೆ... ಹೊರ ಬಯಲಿಗೋಡಿ ದಾಂಧಲೆ ಎಬ್ಬಿಸದಿರಲೀ ಅಂತ ಆಯಿ ಮಂಚದ ಕಾಲಿಗೂ ನನ್ನ ಕಾಲಿಗೂ ಸೇರಿಸಿ ಸಣಬೆ ದಾರ ಕಟ್ಟಿ ಜಗಲಿಯಲ್ಲಿ ಬಿಡ್ತಾ ಇದ್ಲು... ಅಡಿಗೆ ಮನೆಯಲ್ಲೋ ನನಗೆಂದೇ ಲಾಲಿ ಹಾಡು... ಸುಳ್ಳೇ ಅತ್ತರೂ ಎದೆಗವುಚಿಕೊಂಡು ಹಾಲೂಡಿ ಕೃಷ್ಣಾ ಅನ್ನುತಿದ್ದಳು... ಆಡಾಡಿ ತೂಕಡಿಸುವವನ ಅಂಗಾಲಿಗೆ ಎಣ್ಣೆ ಸವರಿ ಕೆನ್ನೆ ಕೆನ್ನೆ ಬಡಿದುಕೊಂಡು ಮುದ್ದೀಯುತಿದ್ದಳು...

ಇವಳ ಸೆರಗನೆಳೆದು,
ಬಲು ಪೋಲಿಯಂತೆ... ಬೆಳೆದ ಕಲಿ ಹೈದ... ಇವಳಿದ್ದಾಳೆ... ಬಲು ಜಾಣೆ... ನಂಗಿಂತ ಚೂರು ಚಿಕ್ಕವಳೇನೋ... ನಾ ಹತ್ತಿರ ಸುಳಿದು ಮೈಸೋಕದಂಗೆ ಕಣ್ಣಲೇ ದಿಗ್ಬಂಧನ ಬರೀತಾಳೆ... ಮತ್ತು ಎದೆ ತುಂಬಿ ನನ್ನದೇ ಹೆಸರು ಸೇರಿಸಿಕೊಂಡು ಸೋಬಾನೆ ಗುನುಗುತಾಳೆ... ಮೀಸೆ ಕುಡಿ ಅಡಿಯ ಸಿಡುಕಿಗೆ ನನ್ನ ಕೃಷ್ಣಾ ಎಂದು ಬೆನ್ನು ತಬ್ಬಿ ಮುದ್ದಾಗಿ ಮದ್ದರೆಯುತಾಳೆ... ಹುಸಿ ಮುನಿಸಿನ ತೂಕಡಿಕೆಗೆ ಮೃದು ತೋಳಿನ ಬಿಸಿ ಎರೆದು ಸುಖದ ನಿದ್ದೆಗೆ ಮೆತ್ತೆಯಾಗುತ್ತಾಳೆ...

ಕಾಲು ಕಟ್ಟಿ ಎದೆಯಲಿಟ್ಟುಕೊಂಡು ಕಣ್ಣಾಗಿ ಕಾಯುವ ಯಮುನೆಯಂಗಳದ ಗೊಲ್ಲಿತಿಯರು - ಅವಳು ಯಶೋಧೆ, ಇವಳು ರಾಧೆ...
💑💑💑

ಹೇ ಸ್ವಪ್ನಗಂಧೀ -
ಊರಾಚೆ ಹಳ್ಳದ ಕರಿಹಸಿರು ಏರಿಯಲಿ ನೀನೇನೋ ಸವಿ ಲಹರಿಯಲಿ ನನ್ನೆದೆಯ ತಣಿಸುವಂತೆ ಮಾತಾಗಿ ಗುಣುಗುಣಿಸುವಾಗ ಆ ಕಮನೀಯತೆಯಲಿ ಕಮ್ಮಗೆ ನಿನ್ನ ಕಣ್ಣಾಳದಲಿ ಕರಗಿ ಹೋಗುವ ಆಸೆಬುರುಕ ಕಬೋಜಿ ನಾನು...
ಸದಾ ಮುಸ್ಸಂಜೆಗಳ ಓಕುಳಿ ಬೆರಗಲ್ಲಿ ನನ್ನ ನೂರು ಫಾಲ್ತೂ ಫಾಲ್ತು ಮಾತುಗಳ ನಡುವೆ ಹಾಯಾಗಿ ಘಲಘಲನೆ ನಗುವ ಮತ್ತು ಛಕ್ಕನೇ ನನ್ನುಸಿರು ತೇಕುವ ತೆರದಿ ಮುದ್ದಿಸಿ ಸುಳ್ಳೇನಾಚಿ ಎದೆಯಲಡಗುವ ನೀನು...
ಈ ಉರಿ ಬೇಸಗೆಯಲಿ ತುಟಿ ಒಡೆದದ್ದು ಹೇಗೆಂದು ಅಮ್ಮ ಕೇಳಿದರೆ ಏನೆನ್ನಲೀ ಎನ್ನುತ್ತ ಕಣ್ಮಿಟುಕಿಸಿದರೆ ಮತ್ತೆ ಹೊರಳಿ ತುಟಿ ಕಚ್ಚುವ ಕಳ್ಳ ಕೊಂಡಾಟಗಳ ಈ ಮುದ್ಮುದ್ದು ಬಣ್ಣಾಚಾರಗಳಿಂದ ಬದುಕಿಂಗೋ ಇನ್ನೂ ಒಡೆಯದ ಮುಗ್ಧತೆ‌ಯಂತ ಸ್ನಿಗ್ಧ ಹೊಳಲು...
ಬೆಳಗುಂಜಾವದಲಿ ಇಂಥ ಕಾವ್ಯ ಕನಸಾಗಿ ಕಣ್ಣೊಡೆದರೆ ಸೂರ್ಯ ಎದ್ದಾಗಿನಿಂದ ಆರಂಭವಾಗಿ ರಾತ್ರಿ ಚಂದಮಾಮನೆದುರು ತೂಕಡಿಸುವವರೆಗೆ ಎದೆಯ ಅಂಗಳದಿ ಮನೋಹರವಾಗಿ ನರ್ತಿಸುವ ನಿನ್ನ ಬಂಗಾರ ನಗೆಯ ಹೆಜ್ಜೆ ಗೆಜ್ಜೆ ಲಜ್ಜೆ...
ಹೌದು,
ಬಡಪಾಯಿ ರಸಿಕ ಪ್ರಾಣಿ‌ಯ ಬದುಕಿಷ್ಟು ಸಹನೀಯವಾಗಲು ನಿನ್ನಂಥದೊಂದು ಸಿಕ್ಕೂಸಿಗದ ಮಧುರ ಕನಸಾದರೂ ಜೊತೆ ಬೇಡವೇ...
ಮುಂದುವರಿಯಲಿ ಇದು ಹಿಂಗೇ ಮನವು ಮಂದವಾಗದಂಗೆ...
___ ಈ ಪೋಲಿ ಗೆಳೆಯನ ಪ್ರಾರ್ಥನೆ‌ಗಳೆಲ್ಲ ಇಂಥವೇ...
💑💑💑

ಇಲ್ಕೇಳು -
ಜಗಳವಾಡಬೇಕು ನಿನ್ನಲ್ಲಿ ಪ್ರೀತಿ ಉಕ್ಕುವ ಹಾಗೆ...
ಚಕಮಕಿಗಳಾಚೆಯ ಗಾಢ ಮೋಹ ಜಗದ ಕಣ್ಣು ಕುಕ್ಕುವ ಹಾಗೆ...
ಹಾಂ,
ಜಗಳವಾಡಬೇಕು ನಿನ್ನಲ್ಲಿ ಜನ್ಮಕೂ ಈ ಹೆಗಲಿಗೆ ನಿನ್ನುಸಿರು ಅಂಟಿಕೊಳ್ಳುವ ಹಾಗೆ...
____ಹುಸಿಮುನಿಸಿಗೊಂದು ಕುಂಟು ನೆಪವ ನೀನೇ ಹುಡುಕಿಕೊಡು...
💑💑💑

ಪ್ರತಿಪದೆಯ ಚಂದ್ರ - ನೆಲವ ತುಳಿದ ಬೆಳುದಿಂಗಳ ಚಿಗುರು ಪಾದ - ಮಣ್ಣ ಮೂಸಿದ ಹೂವೆದೆಯಲಿ ಬೀಜ ಬಿರಿವ ಸಂಭ್ರಮ - ಸಂಜೆ ರಂಗಿನ ಗಲ್ಲ ತೀಡೋ ಗಾಳಿ ಗೊರವನ ಗಂಧರ್ವ ಸಲ್ಲಾಪ - ನನ್ನ ಕಿನ್ನರಿಯ ಬೆಳ್ಳಿ ಕಾಲಂದುಗೆಯಲಿ ಮೆಲ್ಲನುಲಿವ ಕಿನ್ನುರಿ ದನಿ...
ಮುಚ್ಚಂಜೆ ಓಕುಳಿಯ ನಡುವಿಗೇರಿಸಿಕೊಂಡು ಮುಂದೆ ಮುಂದೆ ನಡೆವ ಅವಳ ಭವ್ಯ ರೂಪ - ಅವಳ ಬೆನ್ನ ನಾಚಿಕೆಗಂಟಿದ ನನ್ನ ಕಣ್ಣ ದೀಪ...
ಅಲ್ಲಿಂದ,
ಇರುಳ ಸ್ವಪ್ನ‌ದಲಿ ಗುಮಿಗೂಡುವ ಸೌಂದರ್ಯ ಅವಳೇ ಅವಳು...
ಕನಸು - 
ಕಣ್ಚಮೆಯ ಕುಂಚವ ಮಾಡಿ, ಖಾಲಿ ಖಾಲಿ ಮೈಹಾಳೆಯ ತುಂಬಾ ನವಿಲುಗರಿಯ ಬರೆದು ಮುದಗೊಳ್ಳುವ, ಶೃಂಗಾರ ಗಾಣಕೆ ಜೀವ ಜೀವ ನೊಗ ಹೂಡಿ ಮದ ಅರೆದು ಸವಿರಸ ಹೀರುವ ಯುವ ಮಾಧುರ್ಯ ಮೇನೆ...
ಬೇಸಿಗೆಗೂ ಬೆಂಕಿ‌ಗೂ ಅವಿನಾಭಾವ‌ವಂತೆ - ನಾನೋ ನಿನ್ನ ಹಂಬಲದಿ ನನ್ನೇ ನಾ ಸುಟ್ಟುಕೊಳ್ಳುವ ಮಿಡತೆ...
ಪೋಲಿಯೊಬ್ಬನ ಎದೆಯಲ್ಲಿ ಪಲ್ಲಂಗವೊಂದು ಸದಾ ಸಿಂಗರಿಸಿಕೊಂಡು ಪ್ರಣಯ ಪೂಜೆಯ ಮುಹೂರ್ತ‌ಕೆ ಕಾಯುತ್ತಿರುತ್ತೆ...
_____ಮತ್ತು ನಾನೊಬ್ಬ ಹುಟ್ಟಾ ಪರಮ ಪೋಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)