Tuesday, September 26, 2023

ಗೊಂಚಲು - ನಾಕ್ನೂರಿಪ್ಪತ್ತು.....

ಬದುಕೇ ನಾನು ನದಿಯಂಥವನು.....


ಅವಳ ನುಡಿಯಲ್ಲಿ ಗುಮ್ಮನೂ ಅವಳ ಆಜ್ಞಾವರ್ತಿ ಸೇವಕ...

ಹುಡುಗೀ - ಈಡೇರದೇ ಉಳಿದ ನಿನ್ನ ಆಸೆಗಳು ನನ್ನ ಸೋಲಿನಂತೆ ಕಾಡುತ್ತವೆ... ಶಪಿಸಿಬಿಡು - ನನ್ನಲ್ಲೇ ಹಾಗೇ ಉಳಿದು ಹೋಗುವ ನನ್ನ ಕನಸುಗಳು ನನ್ನ ಚಿತೆಯಲ್ಲೇ ಬೆಂದು ಹೋಗಲಿ... .........ಸಾವಿಗೆ ನಿದ್ದೆ ಸಾಕ್ಷಿಯಾದರೆಷ್ಟು ಚೆನ್ನ... ಬರಗೆಟ್ಟ ಬದುಕಿಗೆ ನಿದ್ದೆಗೂ ಬರವೇ... ಉಫ್.... ಇನ್ನೂ ಎಷ್ಟು ದೂರವೋ.... ಅದೆಷ್ಟು ನಾಳೆಗಳೋ.... ___ ಮೌನ ಸದ್ಗತಿ... &&&

ಸತ್ರೆ - ನಮ್ದೇ ಬೊಜ್ಜಕ್ಕೂ ನಮ್ಗೆ ಊಟ ಅಂದ್ರೆ ಕಾಕೆ ಪಿಂಡ ಅಷ್ಟೇಯಾ... ಬದ್ಕು ದುಡಸ್ಕ್ಯಂಡಂಗೆ ನೆಮ್ದಿಂದ ದುಡ್ದು ಸಾಯವು - ಸುಖ ಅಂದ್ರೆ ಅದಷ್ಟೇಯಾ ವತ್ಸಾ... &&&

ಬದುಕೇ - ಕ್ಷಣ ಕ್ಷಣಗಳ ಕಣ ಕಣವನೂ ಒಡಗೂಡಿ ಒಡನಾಡಿ ಬಾಚಿ ಬಾಚಿ ತುಂಬಿಕೊಂಡ ಮಧುರ ನೆನಪುಗಳೇ ವಿದಾಯದ/ವಿಯೋಗದ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಾರೆಯ ಮುಳ್ಳಂತೆ ಚುಚ್ಚುತ್ತವೆ... ಜೀವಿಸಿದ ಅದಮ್ಯ ಖುಷಿಯೂ ನೆನಪಾಗಿ ಪಲ್ಲಟವಾಗುವ ಹೊತ್ತಲ್ಲಿ ದಟ್ಟ ಕಟ್ಟುಸಿರು - ಅಲ್ಲೂ ತುಟಿಯು ನಗಬಹುದು/ನಗುತ್ತದೆ ಎದೆಯ ಗಟ್ಟಿ ಕಟ್ಟಿಹಾಕಿದ್ದರೆ... ____ ನೆನಪುಗಳ ಹಾಜರಿಯ ಒಂದು ಮುಖ.... &&&

ನಗಲು ಇರುವ ನೂರು ಕಾರಣಗಳನೂ ನಿನ್ನ ಒಂದು ನೆನಪಿನ ಬಿಕ್ಕಳಿಕೆ ಅಲ್ಲಲ್ಲಿಯೇ ಅಳಿಸಿ ಉಸಿರನು ತಲ್ಲಣಿಸುತ್ತದಲ್ಲ... ಏನ ಹೆಸರಿಡಲಿ ಆ ಸೋಲಿಗೆ(?)... ___ ಎದೆಯ ಕಾವು...


ಸಾಕಿನ್ನು .......ಈ ನೋವುಗಳೂ ಹಳತಾಗಿ ಹೋದವು... &&&


ಗುರುವಿನ ಋಣ ದೊಡ್ಡದು... ಕರುಳಿಂದ ಈ ಜೀವಾತ್ಮಗೆ ಉಸಿರ ತುಂಬಿ, ಕರುಳ ದಾರದಲೇ ತೊಟ್ಟಿಲ ಕಟ್ಟಿ ಬದುಕ ತೂಗಿದ ಅಮ್ಮ... ಕಾಲನೆಡವಿ ಬೀಳಿಸಿ, ಕೈನೀಡಿ ಮೇಲೆತ್ತಿ, ಚಂಚಲತೆಯಲಿ ಉಸಿರ ಕಾಡಿ ಕಾಡಿ ಕಡೆದು ರೂಪಿಸಿದ ಬದುಕು... ಅನವರತ ಕಣ್ಣಾಮುಚ್ಚಾಲೆ ಆಡುತ್ತಾ, ಕದ್ದು ಬಳಿ ಬಂದು ಉಸಿರ ಮುಟ್ಟಿ ಬದುಕ ಗೆರೆಯಿಂದ ನಮ್ಮನು ಆಚೆ ಹಾಕುವ ಸಾವು... ಅರಿವೇ ಗುರುವೆಂದರು; ನನ್ನ ಅರಿವೆಂದರೆ - ಅಮ್ಮ, ಬದುಕು ಮತ್ತು ಸಾವು... ____ ಗುರುವೇ ನಮಃ &&&

ಕೇಳಿಲ್ಲಿ - ಅವರಿವರಂತೆ ನಾನು ಸಂಕುಚಿತ ಕುಹಕಗಳ ಕೊಳಕನ್ನು ಯೋಚಿಸಲಾರೆ, ಯೋಜಿಸಲಾರೆ ನಿಜ... ಹಾಗಂತ, ಅಗತ್ಯವಾದಲ್ಲಿ ಅವರ ಮಾತಿಗೆ ಅವರವರ ಯೋಚನೆಯ ಮಟ್ಟದ ಧಾಟಿಯಲ್ಲೇ ಅಲ್ಲಲ್ಲೇ ತಿರುಮಂತ್ರ ಕೊಡಲಾರೆ ಎಂದರ್ಥವಲ್ಲ... ಮಾತಿಗೆ ಮಾತು ಕೊಡಲೇಬೇಕು ಎಂದೇನಲ್ಲ; ಆದರೆ, ನನ್ನ ಮೌನದೊಳಗಣ ಸಾವಧಾನ ಅವರ ಸಣ್ತನದ ಮಾತಿನ ಬುಧ್ಯಾಪೂರ್ವಕ ಇರಿತಕ್ಕೆ 'ನಾನೇ ಸರಿ ಇಲ್ವೇನೋ' ಅನ್ಕೊಂಡು ಕುಗ್ಗಿ ಕದಡಿ ಹೋಗಬಾರದಲ್ಲ... ನನ್ನೊಳಗೇ ನಾ ಇಳಿದು ಹೋಗುವುದಕಿಂತ, ತಿರುಗಿ ಆಡಿ ಸೋಲುವುದಾದರೂ ಸಮಾಧಾನವೇ ನನಗೆ... ____ ಕಚ್ಚುವ ಇರಾದೆಯಿಲ್ಲ; ಹಂಗೇನೇ, ಬುಸುಗುಡದೆಯೂ ಇರುವಷ್ಟು ಒಳ್ಳೆತನವೂ ಇಲ್ಲ... &&&

ನಾ ನಂಬಿದ್ದು ಸತ್ಯವೇ ಇರಬಹುದು, 'ಆದ್ರೆ ನಂಬಿದ ಸತ್ಯದಿಂದ ನಂಗೆ ಸಿಕ್ಕಿದ್ದೇನು, ಸತ್ಯಾನ ನಂಬಿ ಏನು ಸುಖ ಕಂಡೆ' ಎನ್ನುವ ಅಂತರಂಗದ ಆರ್ತನಾದ ಹುಟ್ಟದಂತೆ ಸತ್ಯವನ್ನು ದುಡಿಸಿಕೊಳ್ಳುವುದಿದೆಯಲ್ಲ ಅದು ಮತ್ತು ಸತ್ಯದ ವಾಸ್ತವಿಕ ಕಠೋರತೆಗೆ ಮನಸಿನ ಹಸಿತನವ ಸಾಯಗೊಡದಂತೆ ಕಾಯ್ದುಕೊಳ್ಳುವುದಿದೆಯಲ್ಲ ಅದು ತುಂಬಾನೇ ದಾರ್ಷ್ಟ್ಯವ ಬೇಡುವ ಕೆಲಸ... ____ ಗೆಲುವು ಬೇಡ, ಸೋಲದಂತೆ ನನ್ನ ನಾ ಕಾಯ್ದುಕೊಂಬುವುದು ಎಂದಿನ ಪ್ರಾರ್ಥನೆ... &&&


"ಸಾವು ಕಾಣದೇ ಬದುಕು ಗಟ್ಟಿಯಾಗುವುದೆಂತು..."

"ಸಾವೆಂದರಿಲ್ಲಿ ಬರೀ ದೇಹದ್ದಷ್ಟೇ ಅಲ್ಲವಲ್ಲ..."

___ಉಸಿರು ಬಿಸಿಯಿದೆ - ಬದ್ಕಿದೀನಂತೆ...

&&&


ನಿನ್ನ ಗೆಲ್ಲುವ ಹಠವಿಲ್ಲ... ಹಾಗೇ, ನಿನ್ನ ಒಳಗೊಳ್ಳುವ ಅಸೀಮ ಖುಷಿಯ ತುಡಿತಕ್ಕೇನೂ ಬರವಿಲ್ಲ... ಎದೆಯ ನೋವು ಎಷ್ಟೇ ಎಡಗಣ್ಸಿದ್ರೂ ರಸಿಕ ಕಣ್ಣಿನ ತೇವ ಬತ್ತುವುದಿಲ್ಲ... ___ ಬದುಕೇ ನಾನು ನದಿಯಂಥವನು... &&&

ನಿನ್ನ ನಗೆಯ ನೂಪುರವನೆತ್ತಿ 

ಎದೆಯ ಕಾವ್ಯ ಕರಡಿಗೆಯಲಿಟ್ಟು 

ಕುಣಿ ಕುಣಿಸಿ ನಲಿವ ನನ್ನೀ ಹುಚ್ಚು ನಶೆಗೆ 

ನಿನ್ನ ಅಕಾರಣದ ಅನನ್ಯ ಪ್ರೀತಿಯೇ ಹೊಣೆ...

____ ಭಂಡ ಭರಮನೂಳಿಗದ ಬದುಕೇ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಹತ್ತೊಂಭತ್ತು.....

ಪರಿಕ್ರಮ..... 'ಎನ್ನೆದೆಯ ಒದೆಯುವ ಕನಸಲ್ಲಿ ನೀನೂ ಇರಬಹುದು ನಿನ್ನ ಆಸೆ ಸೆರಗ ನೆರಳಲ್ಲಿ ನಾನೂ ಇರಬಹುದು...' ____ ಪ್ರೀತಿ... 'ಆ ತೀರದಾ ತೀರದ ನಗು ನಂದೇ ಅದರ ಅಧರ ಆಳಿಕೆ ನಿಂದ್‌ನಿಂದೇ...' ____ ನೀನು ದಡವ ತೊಳೆವ ಅಲೆ ಮತ್ತು ಮಳೆ... 'ನಿನ್ನ ನಗೆಯ ಮಿಡಿತದ ಗುರುತೊಂದು ಉಳಿಯಲಿ ನಾ ನಡೆದ/ವ ಎಲ್ಲ ಹಾದಿಯ ಎಡ ಬಲಗಳಲಿ...' ____ ಒಲವೇ... 'ನೆನಪು ಕಾಡು ಮೊಲ್ಲೆಯ ಘಮ ನೆನಕೆಗಳ ರುಚಿಯಲ್ಲಿ ನಿನ್ನೆಗಳ ಗುರುತು...' ___ ನಿನ್ನ ಒಂದೆಳೆ ನಗು... 'ನನ್ನೊಳಿಲ್ಲದ ನಾನು ಸಿಗಬಹುದೇ ಹೊಸ ನಾಳೆಗಳಲಾದರೂ ಸೋತವನ ಎತ್ತಿ ನಡೆಸಬಹುದೇ ನಿನ್ನ ಪ್ರೀತಿ ಮುಗುಳ ಬೆರಳು...' ____ ನೀನು - ಅಶ್ವತ್ಥದ ನೆರಳು... &&& ಅಗೋ - ಊರ ಹೊರಗಿನ ಆಲದ ಬಿಳಲು ನಡುವೆ ಮೈಯ್ಯರಳಿದ್ದು ಗೊಲ್ಲನ ಕೊಳಲು ಪಿಳ್ಳಂಗೋವಿಯ ಸೋಕಿದ ತುಟಿ ಕಳ್ಳ ಗೋಪನದು ರಂಧ್ರಗಳ ಮೀಟಿದ ಉಸಿರು ಒಲವಾಂಬುಧಿ ಗೋಪಿಯದು ಕೇರಿ ಎದೆ ಎದೆ ತುಂಬಾ ಅನುರಾಗದ ಸರಿಗಮಪದನಿ... ___ ರಾಧಾಮಾಧವರಾಗ - ಕೊಳಲು ಮತ್ತು ಕಾವ್ಯ... &&& ಶಂಖದೆದೆಯ ಭೋರ್ಗರೆತ ಮತ್ತು ಒಂದು ಹನಿ ಕಣ್ಣೀರು... ಎಲ್ಲಾ ತೊರೆಗಳೂ ನೇರ ಸಾಗರ ಸೇರಲಿಕ್ಕಿಲ್ಲ... ____ಪ್ರೀತಿ... &&& ವತ್ಸಾ - ತನ್ನ ಒಡಲಿಗೆ ಬಿದ್ದ 'ಜೀವಂತವಿರುವ' ಯಾವುದನ್ನೂ ನದಿ ತೇಲಿಸುವುದಿಲ್ಲ, ಮುಳುಗಿಸಿ ಮುಂಬರಿಯುವುದು ಅದರ ಸಹಜ ಗುಣ ಸ್ವಭಾವ... ಅಷ್ಟಾಗಿಯೂ ತೇಲಬೇಕೆಂದರೆ ನೀರ ಹರಿವಿನ ಮಟ್ಟುಗಳನು ಪಳಗಿಸಿಕೊಂಡು ನಿನ್ನ ಪರಿಶ್ರಮದಿಂದ ನೀನು ಈಜು ಕಲಿಯಬೇಕು ಇಲ್ಲಾ ಕೈಚೆಲ್ಲಿ ಪ್ರಾಣ ತೆರಬೇಕು... ______ 'ಈ ಬದುಕು, ಇಲ್ಲಿ ನೀನು ಅರಸುವ ಪ್ರೀತಿಯ ನಾನಾ ರೂಪಗಳು' ಇವೆಲ್ಲಾ ಆ ನದಿಯ ಉಪಮೆಗಳೇ ಅಲ್ವಾ...!! &&& ಈ ಘಳಿಗೆಯೂ ನನ್ನದೇ, ಈ ಕ್ಷಣದ ಕಣ ಕಣ ಅರಳುವಂಥಾ ನಗುವೂ ನನ್ನದೇ, ಇದು ಇನ್ನಷ್ಟು ಬೇಕೆಂಬ ಮಧುರ ಸ್ವಾರ್ಥವೂ ನನ್ನದೇ... ಆದಾಗ್ಯೂ, ಮನದುಂಬಿ ನಕ್ಕ ಈ ಹೊತ್ತಿನ ಇದ್ಯಾವುದನ್ನೂ ಒಂದೇ ಒಂದು ಪ್ರತಿಯೂ ಯಥಾವತ್ತು ನಕಲು ಮಾಡಿ ಇಲ್ಲಿಂದ ಅಲ್ಲಿಗೂ ಅಂಟಿಸಿ ಹಿಗ್ಗಲಾಗದ ಅಸಹಾಯ ನಾನು... ಅಂತಾಗಿಯೇ, ಇವೆಲ್ಲವನೂ ನೆನಪುಗಳಾಗಿ ಹಿಡಿಹಿಡಿಯಾಗಿ ಕೂಡಿಟ್ಟುಕೊಂಡು ನಿಟ್ಟುಸಿರಾಗುತ್ತೇನೆ... ಮತ್ತೂ, ಇಷ್ಟುದ್ದ ಬದುಕಿನಲಿ ನನ್ನಲ್ಲಿ ನಾ ಮೆಚ್ಚತಕ್ಕ ಅಂಶ ಒಂದೆಂದರೆ ನಕ್ಕು ನಗಿಸಿದ ಘಳಿಗೆಗಳನೂ ಆಗೀಗ ನೆನೆದು ತುಸುವಾದರೂ ಮತ್ತೆ ನಸು ನಗಬಲ್ಲೆ ಎಂಬುದಷ್ಟೇ... ಕಾರ್ಯ ಕಾರಣ ತೀವ್ರತೆಗಳು ಬೇರೆ ಬೇರೆಯಾದರೂ ಎಂದಿಗೂ ಎಲ್ಲ ಮೊಗದ ಚಂದ ಕಳೆ ನಗುವೇ ಅಲ್ಲವೇ... ____ ನಗುವಾಗು - ನಗುವಲ್ಲಿ ಮಗುವಾಗು... &&& ಕೇಳಿಲ್ಲಿ - 'ಐ ಲವ್ ಯೂ' ಅಂತ ಪ್ರೀತಿನ ಹೇಳಿಬಿಡೋದು ಸುಲಭವೇ ಏನೋ; ಮತ್ತದು ಶ್ರುತಿ, ಲಯ, ತಾಳಗಳಾಚೆಯೂ ಎದೆಯಲಿ ಹಿತ ಮಿಡಿವ ಮಹಾ ಮಧುರ ಆಲಾಪವೂ ಹೌದೇನೋ... ಆದರೆ, ಹೇಳಿದ್ದನ್ನ ಬದುಕಿಡೀ ಕಾಲು ಕಾಲಿಗೆ ಸುತ್ತಿ ಸುಳಿದು ಸಾಬೀತು ಮಾಡುತ್ತಲೇ ಇರಬೇಕಾದ ಜರೂರತ್ತಿಗೆ ಕಟ್ಟಿ ಬೀಳುವುದಿದೆಯಲ್ಲ ಅದಷ್ಟು ಸರಾಗ ಸುರಳೀತವಲ್ಲ ಅನ್ಸತ್ತೆ ನೋಡು... ____ ತೋಳಿಗೆ ಬಿದ್ದ ಬೀಜ ಎದೆಯ ಕಾವಲ್ಲಿ ಓಟೆ ಒಡೆದು ಅಂತಃಕರಣದ ಸಸಿಯಾಗಿ ಬಾಳು ಮಾಗುವುದು ಒಂದಿಡೀ ಜನುಮದ ಒತ್ತೆಯ ಬೇಡುವ ಪರಿಕ್ರಮವೇನೋ... &&& ಅಕಾರಣ ಭಯ ಮತ್ತು ಸಕಾರಣ ಪ್ರೀತಿ ಎರಡೂ ನಮ್ಮನ್ನು ಬಗ್ಗಿಸಿಡುವ/ಬಂಧಿಸಿಡುವ ಪ್ರಬಲ ಸಾಧನಗಳು... ___ ಸಂಬಂಧ ಮತ್ತು ಇತ್ಯಾದಿ ವಿಷಯಗಳು... &&& ನೋವನ್ನು ಗೆಲ್ಲಲು ಜಗವ ತೊರೆದು ಕಾಡಿಗೋಡಿದ್ದು - ಮೌನ ಉಸಿರುಗಟ್ಟಿತು...

ಹೋದ ಹಾದಿಯಲೇ ಹೊರಳಿ ಬಂದದ್ದು - ಹಸಿವಿಗೆ ಭಿಕ್ಷಾಂದೇಹಿ - ಜೋಳಿಗೆ ಖಾಲಿ ಬಿದ್ದದ್ದಿಲ್ಲ - ಕಾಯಕ್ಕಿಲ್ಲದ ಬೆಲೆ ಕಾಷಾಯಕ್ಕೆ... ತುಂಬಿದ ಹೊಟ್ಟೆಗೆ ಯುದ್ಧ ಯಾಕೆ ಬೇಕು - 'ಇಲ್ಲೆಲ್ಲ ನಶ್ವರ' ಅಂದದ್ದು... ಅಂತರ್ಯುದ್ಧ ಗೆದ್ದಿದ್ದೇ ಆದರೆ, ನಶ್ವರತೆ ಹೃದ್ಯಸ್ತವಾಗಿದ್ದರೆ ಮರಳಿ ಯಾಕೆ ಬಂದೆ? ಕೇಳಿಲ್ಲ ಯಾರೂ - ಬದಲಿಗೆ ಜ್ಞಾನಿ ಅಂದು ಶರಣೂ ಅಂದರು... ಲೋಕ ಹಿತ - ಅದಕ್ಕೆ ಪೀಠ - ಪೀಠದ ಘನತೆಗೆ (?) ಪಾದ ಪೂಜೆ, ದಕ್ಷಿಣೆ... ಜನಕ್ಕೆ ನೋವು, ಹಸಿವು - ನಂಗೆ ಜ್ಞಾನೋದಯದ ಹಮ್ಮು - ಮಾತಿನ ಮಾರಾಟ... ನಾನು ಬೇಡಿದರೆ ಭಿಕ್ಷೆ - ಅವರೇ ನೀಡಿದರೆ ಗುರು ದಕ್ಷಿಣೆ... ಹಸಿವು, ಕಾಮ ನೀಗಿದ ಮೇಲೆ ಜನಕ್ಕೆ ಅಭಿಮಾನ, ಅಸ್ತಿತ್ವದ ಪ್ರಶ್ನೆ - ನಾನು ಪ್ರವಚನಗಳ ಹೆಣೆಯುತ್ತೇನೆ - ಮತ್ತು ಜಗತ್ತು ತನ್ನಿಷ್ಟದಂತೆ ಚಲಿಸುತ್ತದೆ... ___ಉದರ ನಿಮಿತ್ತಂ... ___ಅರ್ಜುನ ಸನ್ಯಾಸಿ... --- ವಿವರ ಗೊತ್ತಿಲ್ಲದ ಸಾಲುಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಹದ್ನೆಂಟು.....

ಪ್ರೀತಿ ಪರಿಪಾಕ.....

ಹರಿವ ಪ್ರೀತಿಯೇ -

ಬದುಕು ಬೆನ್ನೆಲುಬನ್ನೇ ಮುರಿದು ನಗುವಾಗ, ಮಾತು ಮೌನಗಳೆಲ್ಲ ಸೋತ ಅಸಹಾಯ ಭಾವದಲ್ಲಿ ಬಾಗಿಲು ಹಾಕಿಕೊಂಡು ಕತ್ತಲ ತಬ್ಬಿ ಕೂತು ನಿನಗಾಗಿ ಕಾಯುತ್ತೇನೆ...

ಬೆಳಕೇ -

ಅಂಗಳದ ಕಿಬ್ಳಿಯಲಿ ನಿನಗೆಂದೇ ಒಂದು ಕೀಲಿಕೈ ಇಡುವ ಜಾಗವ ಮರೆಯಬಾರದು ನೀನು ಎಂದು ಒಳಗೇ ಹಂಬಲಿಸುತ್ತೇನೆ...

ಸುರಸಿಂಧುವೇ -

ಎನ್ನೊಡನೆ ಆನೇ ಠೂ ಬಿಟ್ಟು ನಡೆವಾಗಲೆಲ್ಲ ಕರೆದು ಕಣ್ಣ ಹನಿಯ ಕರೆಯ ತೊಳೆದು ಸಂತವಿಸುವ ನಿನ್ನ ಮಡಿಲ ಬಿಸುಪಲ್ಲಿ ಮತ್ತೆ ಗೆಲ್ಲುವ ಬಲವ ತುಂಬಿಕೊಳ್ಳುತ್ತೇನೆ...

___ ಕಪ್ಪು ಹುಡುಗೀ, ನನ್ನ ನೆಮ್ಮದಿಯ ತಂಗುದಾಣ ನಿನ್ನ ಹೆಗಲು...

&&&

ಭವದ ರಗಳೆಗಳ ಸಂತೆಯಲಿ ಕಳೆದು ಹೋದವರನು 

ಮತ್ತೆ ಮರಳಿ ಹುಡುಕಿ ಕರೆದು ಒಳಮನೆಗೆ 

ಇನಿತು ಪ್ರೀತಿಯ ಹಂಚಿಕೊಳ್ಳಬಹುದು...

ಆದರೋ,

ಭಾವದ ಬುರುಡೆಗಳಲಿ ಬಳಗದಿಂದ ಕಳಚಿಕೊಂಡು

ಬುಧ್ಯಾಪೂರ್ವಕ ಹಿತ್ಲಲ್ಲಿ ಅಡಗಿ ಕೂತವರನು 

ತಿರುಗಿ ಒಳ ಕರೆವುದು ಹೇಗೆ...? 

ಕರೆದರೂ ಕೂಡುವರೇ ಹಾಗೇ...?

___ ಕಳೆದೂ ಉಳಿದವರು ಮತ್ತು ಉಳಿದಂತೇ ಅಳಿದವರು...

&&&

.....ನೇಹವೇ -

ನಾನೇ ಅರ್ಥವಾಗದ ನನಗೆ 

ನೀನು ಅರ್ಥವಾಗುವುದಾದರೂ ಹೇಗೆ...?!

ಬದುಕಿದರೆ ಸಾಕಲ್ಲ -

ಸದಾ ಅರ್ಥ, ಅನರ್ಥ, ಅಪಾರಾರ್ಥಗಳ ಆಚೆಯೇ ನಿಂತು ನಗುವ ಪ್ರೀತಿ ಸಾರ್ಥವಾಗುವ ಹಾಗೆ...

ಕೂಡಿಕೊಳಲಿ, ಆಡಿಕೊಂಡಿರಲಿ -

ನಾನು ನೀನೆಂಬ ರಮ್ಯತೆ, 

ನಾನು ನೀನಾಗುವ ರಮ್ಯತೆ, 

ನೀನು ನಾನಾಗುವ ರಮ್ಯತೆ,

ನೀ ನಿನಗೂ ಸಿಗುವ ರಮ್ಯತೆ,

ನಾ ನನ್ನಲ್ಲೂ ಉಳಿವ ರಮ್ಯತೆ...

ಇರಲಿರಲಿ ಬಿಡು,

ಪ್ರೀತಿ ಅಂಬೋ ಮಧುರ ಸ್ವಾರ್ಥದ ಅಮಲು ಕಾಲಕೂ ಇಳಿಯದಂತೆ ಹೀಗೇ...

____ ಕಪ್ಪು ಹುಡುಗೀ...

&&&

ಫೋಟೋದಲ್ಲಿನ ನಗು

ಮತ್ತು

ನಗುವಿನ ಫೋಟೋ

ಎಷ್ಟೊಂದು ಬೇರೆ ಬೇರೆ...

___ ಎದೆಯ ಭಾಷೆಯಲ್ಲಿ ಕಣ್ಣು ಹೇಳುವ ಸತ್ಯ...

&&&

ಹರಿದ ದೋತರ - ಪಟ್ಟೆ ಪೀತಾಂಬರ

ಮುಟಿಗೆ ಅವಲಕ್ಕಿ - ಪ್ರೀತಿ ಫಲಾಹಾರ

ರಾಜ ಬೀದಿಯಲ್ಲಿ ಗೆಳೆತನದ ಮೆರವಣಿಗೆ... 

____ ಸೇವಿಸುವುದಾದರೆ ನೇಹವನೇ ಸೇವಿಸು - ಕರಿಯನ ಜಠರವ ತಂಪಾಗಿಸಿದ ಕುಚೇಲನ ಹೆಗಲ ಚೀಲ ಬರಿದಾಗದಿರಲಿ...

&&&

ನೇಹವೆಂದರೆ, 

ನನ್ನೊಳಗೆ ನನ್ನ ಕಾಯುವ ನಿನ್ನ ಎದೆಯ ಹಾಡು - ಎದೆಯೆದೆಯ ಅಮೂರ್ತ ಭಾವಂಗಳ ಕುಶಲ ಸಂವಾದದ ಜಾಡು...

ಗೆಳೆತನದ ಒಡಲ ಒಸಗೆಯ ನೋಡು - ಅದು, ಆಡಾಡುತ್ತಾ ನಗೆಯು ಬಗೆ ಬಗೆಯಲಿ ಅರಳುವ ಮಳೆಯ ಕಾಡು...

___ ಸ್ನೇಹವದು ಕುಶಾಲಿನ ಕರುಣೆಯಲ್ಲ, ಕಣ್ಣ ಹನಿಯ ಕು(ಕ)ಡಿವ ಗಟ್ಟಿ ಹೆಗಲು...

&&&

ಕೇಳಿಲ್ಲಿ -

ಹೊಸತೇ ಲೋಕಗಳ ಪರಿಚಯಿಸಿದ್ದು ನೀನು ಅಥವಾ ಅದೇ ಲೋಕದೊಳಿದ್ದೂ ನಾ ಅದುವರೆಗೂ ಗಮನಿಸಿಯೇ ಇಲ್ಲದ ಲೋಕ ವ್ಯಾಪಾರಗಳ ಎತ್ತಿ ತೋರಿಸಿದ್ದು ನೀನು...

ಹೌದು, 

ಮನದ ಭೂಮಿಕೆಯಲಿ ಒಂದಷ್ಟು ಭ್ರಮೆಗಳ ಪರದೆ ಹರಿದದ್ದೂ ಹೌದು, ಜೊತೆಗೊಂದಿಷ್ಟು ಹೊಸಾ ಸರ್ಕಸ್ಸಿನ ಅಂಗಡಿ ತೆರೆದದ್ದೂ ಹೌದು...

ನಿನ್ನ ಕೈ ಹಿಡಿದು ನನ್ನ ಕಣ್ತೆರೆದು ಅಷ್ಟು ದೂರ ನಡೆದೆನಲ್ಲ, ಈಗ ಇವೆಲ್ಲ ಅರಿವಿನ ಪರಿಧಿಯೊಳಗೆ ಬಂದೆನಾದ್ದರಿಂದ ನೀನು ಕೂಡಾ ನಂಗೆ ಅದೇ ಲೋಕ ಪಾಕದಲಿ ತೆವಳೋ ಸಾಮಾನ್ಯ ಹುಳದಂಗೇ ಕಂಡರೆ ತಪ್ಪು ಯಾರದ್ದು...!?

ಅಪರಿಚಿತ ಹಾದಿಯಲಿ ಎದುರು ಬದುರು ವಿನಿಮಯಗೊಂಡ ನಗು ಪರಿಚಯದ ಬೀದಿಗೆ ಏಕಮುಖವಾಗಿ ಹೊರಳದೇ, ಅಪರಿಚಿತ ಗಂಧವ ಉಳಿಸಿಕೊಂಡೇ ಹಾಗೇ ದಾಟಿ ಹೋದರೇ ಚಂದವಿತ್ತೇನೋ ಅನ್ಸತ್ತೆ ನೋಡೀಗ ಒಮ್ಮೊಮ್ಮೆ...!!

ಇಷ್ಟೆಲ್ಲಾ ಆಗಿ ಬೆಳೆದೆನಾ ಅಥವಾ ಕಳೆದು ಹೋದೆನಾ ಎಂಬುದೇ ಭಾವಲೋಕದ ಮುಗಿಯದ ಗೊಂದಲ ಆಗಿರುವಾಗ -

"ಈ ಪ್ರೀತಿ ಪರಿಕ್ರಮದ ಧೀಕ್ಷೆಯಲಿ ಮೈಮನದ ವಸನಗಳನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತಾ, ಕಳಚಿದ್ದು ನಾಚಿಕೆ ಅನ್ನಿಸದಂಗೆ, ಬೆತ್ತಲಾದದ್ದು ಪ್ರೀತಿಯಲ್ಲ ಪ್ರೀತಿಯಿಂದ ಬೆತ್ತಲಾದದ್ದು ಎಂಬ ಎತ್ತರವ ತಾಕಿ, ನಾನೂ ಅಳಿದು ನೀನೂ ಅಳಿದು ಉಳಿದದ್ದು ಪ್ರೇಮ ಎಂಬಂತೆ ಬದುಕ ಆಳುವುದು ಹೇಗೆ ಹೇಳು..."

____ ಬಂಧ ಅನುಬಂಧ ಪ್ರೀತಿ ಪರಿಪಾಕ...

&&&

ಕಸದ ಡಬ್ಬಿಯಲ್ಲಿ ಕಸವನ್ನೇ ಹಾಕಬೇಕಲ್ಲ....

___ ರದ್ದಿಸುದ್ದಿ...

ನೂರು ಕಾಲ ಜೊತೆಗಿದ್ದೂ ಸಲಿಗೆಯೇ ಬೆಳೆಯದಿದ್ದರೂ ನೋವಿಲ್ಲ - ಅಲ್ಪ ಕಾಲದಲ್ಲೇ ಎಲ್ಲೋಗ್ತಾನೆ, ಬಿದ್ದಿರ್ತಾನ್ಬಿಡು ಅನ್ನೋ ಸದರ ಹುಟ್ಟಿಬಿಟ್ಟರೆ ಮಾತ್ರ ಬಲು ಹಿಂಸೆ...

____ಬಂಧ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

ಗೊಂಚಲು - ನಾಕ್ನೂರಾ ಹದ್ನೇಳು.....

ಮೋಹಿಯ ಕನಸಿನ ಬುಟ್ಟಿ.....

ಅವಳು : ಇರ್ಲಿ ಬಿಡು, ಕೆಲವಾದರೂ ಗಾಯದ ಕಲೆ ಇರ್ಬೇಕು, ಚಂದ್ರನ ಮೈಯ್ಮೇಲಿನ ಮೊಲದ ಚಿತ್ರದ ಹಾಗೆ; ಆಗ್ಲೇ ಬನದ ಹುಣ್ಮೆ ಚಂದ ಅನ್ಸೋದು...
ಅವನು : ಛಿ ಚೀ!!! ನಾನು ಹಂಗೆಲ್ಲಾ ಯಾರ ಮೈಯ್ಮೇಲೂ ಕಲೆಗಳನ್ನ ಉಳಿಸಿ(ಸೊ)ಲ್ಲಪ್ಪಾ - ಬೆತ್ತಲ ಬೆಳಕಿನ ಮೈಗಂಟಿದ ಕತ್ತಲ ಮಚ್ಚೆಗೂ ತುಟಿಯಷ್ಟನೇ ತೀಡುವ ಮೃದು ಜೀವಿ ನಾನು... 🙈
____ ಮಂಗನ ಕೈಲಿನ ಮಾಣಿಕ್ಯದಂತೆ ಪೋಲಿಯ ನಾಲಿಗೆಗೆ ಸಿಕ್ಕ ಘನ ಗಂಭೀರ ಮಾತೂ... 😜
&&&

ನೆಂದು ಬಂದವನ ವದ್ದೆ ಮೈ ವರೆಸುತ್ತಾ ವರೆಸುತ್ತಾ ಒಳಗಿಂದ ವದ್ದೆಯಾಗುವ ಅವಳ ಹರೆಯದ ನಾಚಿಕೆಯ ನೋಡಾ...
___ ರಸಿಕ ಹರೆಯದಲ್ಲಿ ಮನವೂ ತೊಯ್ಯುವ ಮಳೆ ಎಷ್ಟು ಚಂಽಽದ ಚಂಽಽದ...
~~~
ಮಳೆಯ ಸಂಜೆಗಳಲಿ ಬೀದಿಯ ಆ ತುದಿಯಲ್ಲಿ ಮರೆಯಾಗುವ ಮುನ್ನ ಕೊಡೆಯ ಮರೆಯಿಂದಲೇ ತಿರುಗಿ ನೋಡುವ ಅವಳು ಎಂಥಾ ಬೆಚ್ಚನೆಯ ಬೆರಗು...
____ ಬಿಸಿ ಹರೆಯದ ಚಂಚಲ ಚಂದಕ್ಕೆ ಹರೆಯವೇ ಸಾಟಿ...
~~~
ಕೇಳಿಸ್ತಾ -
ಗುಡ್ಗುಮ್ಮ, ಮಿಂಚುಳ್ಳಿ ಹಿಮ್ಮೇಳ‌ದ ಜೊತೆ ಸೇರಿ ಮಳೆ ನೆಲವ ತಾಕಿ ಹೊಮ್ಮೋ ಗಾನ ಸುಧೆ - ನಿನ್ನ ಘಮದ ನೆನಪಿನ ಗುಣುಗಿಗೆ ಧೋಽಽಧೋಽ ಹಿನ್ನೆಲೆ ಸಂಗೀತ...
ಜಪ್ಪಿ ಹೊಡೀತಿದೆ ಕಣೇ ಮಳೆ; ಗಾಳಿಯೊಂದಿಗೆ ತಂಪಾದ ಗುದ್ದಾಟ ಬೇರೆ...
ಇಲ್ಲಿರಬೇಕಿತ್ತೀಗ ನೀನು - ನಿನ್ನ ಸುಳ್ಳೇ ಭಯ, ನನ್ನ ಕಳ್ಳ ಆಸೆ ಕೂಡಿಯಾಡಿ ಬೆವರುವ ಒದ್ದೊದ್ದೆ ಇರುಳೊಂದು ಅರಳಬಹುದಿತ್ತು...
____ ಬಿರುಸು ಹರೆಯಕ್ಕೆ ಹಸಿ ಹರೆಯವ ಬೆರೆಯುವ ಕಿರು ಕನಸೂ ಎಷ್ಟು ಚಂಽಽದ ಚಂಽಽದ...
~~~
ಎಲ್ಲೇ ಹೋದರೂ ಅಲ್ಲೇ ಬಂದು ನಿಲ್ಲುವ ನನ್ನ ಕಣ್ಣ ಕಚಗುಳಿಯ ಮಾಟ, ಮಾತಿಗೆ ಮಾತಿನ ಮುತ್ತು ಪೋಣಿಸಿ ಆಸೆ ಕೆಣಕುವ ಆಟ...
ಅವಳು ಗುರಾಯಿಸುವುದು 'ಥೂ, ಪೋಲಿ ಬಸವ' ಅನ್ನುವ ಹಾಗೆ ಮತ್ತು ಅವಳು ಪ್ರೀತಿಸುವುದು ಕೂಡಾ ಅದನೇ ಹಾಗೆ ಹಾಗೇ...
____ ಶ್ರಾವಣದ ಮಳೆಯಂಥ ಮನಸಿನ ಈ ತುಂಟ ಆಸೆ ಹೋರಿನ ಹರೆಯ ಎಷ್ಟು ಚಂಽಽದ ಚಂಽಽದ...
&&&

ತಂಗಾಳಿಯ ತೆರೆಯೊಂದು ನಿನ್ನಂತೇ ತಲೆ ಸವರಿ - ಕಳೆದಿರುಳ ಕಚಗುಳಿಯೆಲ್ಲ ಹಂಗೇನೆ ಹಸಿಯಾಗಿ ಬೆಳಗಾನ ಕಣ್ಣಲ್ಲಿ ಹೊಸ ಕನಸ ಕಾಮನಬಿಲ್ಲು...🌱
&&&

ಕಪ್ಪು ಕಮಲಾಕ್ಷೀ,
ಕಣ್ತಣಿಸಿ ಕತ್ತಲ ಮೆರೆಸುವ ಆ ನೂರು ಅಲಂಕಾರಗಳ 'ಸೌಂದರ್ಯ'ದ್ದೊಂದು ದಡೆಯಾದರೆ, ಕಣ್ಣರಳಿಸಿ ಬೆಳಕ ಮೈಮರೆಸುವ ಉದ್ದಾಮ ನಗ್ನತೆಯೇ ಅಲಂಕಾರವಾದ ಹೆಣ್ತನದ 'ಚಂದ'ದ ತೂಕವೇ ಬೇರೆ...
ನೀನೋ ಚಂದ ಚಂದ...
ನಾ ಸೋತಲ್ಲೇ ಮತ್ತೆ ಮತ್ತೆ ಬಯಸೀ ಬಯಸಿ ಸೋಲುತ್ತೇನೆ, ಕಾರಣ - ನಿನ್ನ ನಾಚಿಕೆಯ ವಜನು ಮತ್ತು ಹೆಣ್ತನದ ಗಂಧ...
ನಿನ್ನ ಮುದ್ದು ನನ್ನ ಕಾಯ್ದಿರಿಸಿದ ಹಕ್ಕು ಕಣೋಲೇ ಎಂದು ಹಠ ಹೂಡುವ ಹುಡುಗೀ -
ನಿನ್ನ ಬೆತ್ತಲೆ ಬೆನ್ನ ಎನ್ನೆದೆ ರೋಮಕಂಟಿಸಿ, ಹಕ್ಕಿಗೊರಳಾಗಿ ಉಸಿರಿಗೆ ಉಸಿರ ಬೆಂಕಿ ಸೋಕಿಸಿ, ಕತ್ತಿನ ಇಳಿವಿನಾಳದ ಕತ್ತಲಲಿ ನೆರಳು ಕರಡಿ ಹೋಗಲನುವಾಗುವಂತೆ ಬಳಸಿ ಬೆಳೆಯುವ ನನ್ನ ಬಯಕೆ ಬೆರಳ ಆಟಕೆ ಅರಳಿ, ಕೆರಳಿ, ಹೊರಳಿ ಇರುಳ ಬಾಗಿಲಿಗೆ ತುಸು ಬಿಸಿಯನೂಡಬಾರದೇ...
___ ಹಣತೆ ಉರಿವ ಯಾಮಿನಿ ಮತ್ತು ಸವಿ ಸುಖ ಗೋಷ್ಠಿ...
&&&

ಭಯವಾಗುತ್ತೆ -
ನೀನೇ ಈ ಬದುಕಿನ ಕೊನೇಯ ಮೋಹವಾಗಿಹೋದರೆ...!!!
___ ಹೆಸರಿಲ್ಲದ ಛಾಯೆ...

ಮೋಹಿ ಎದೆಯ ನೂರು ನೂರು ನುರಿ ನುರಿ ದಾಹದ ಕಥೆಯ ಕೇಳಬಲ್ಲೆಯಾ, ಕೇಳಿಯೂ ಕೂಡಬಲ್ಲೆಯಾ...!!
___ ಬೇಲಿ ಅಸಹನೆ - ಬಯಲು ಭಯ...

ಪದ ಪಾದಗಳಲಿ ಮೋಹವ ಗೀಚಿ ಗೀಚಿ
ಹರಿದೆಸೆದ ಹಾಳೆಗಳ ಮೈಯ್ಯ ಗೀರುಗಳಲಿ
ಕಳೆದೋಯಿತೇ ನಿನ್ನೆದೆಯ ತಲುಪೋ ನನ್ನ ಕನಸಿನ ಕಾಲು ಹಾದಿ...
___ ನಿಶಾಚರೀ ಒಲುಮೆ...

ಕೊಲ್ಲುವಂತೆ ಕಾಡುವ ನಿನ್ನೆದೆಯ ಮೋಹದ ಬಿಸಿಗೆ ಷರತ್ತುಬದ್ಧ ಬಂಧಿ ನಾನು...
___ ಮಳೆಯ ಸಂಜೆಯಲಿ ಬೆವರ ಗಂಧ(ಮಿಂದ) ಕಾವ್ಯ...

ತಂಪಾಗಿ ನಿನ್ನ ತಬ್ಬಿ
ತಾಳ ತಪ್ಪಲಿ ಮನಸು
ಅರಳಿ ಬೆರಳಲಿ ಕನಸು...
___ ಅಖಂಡವಾಗಿ ನಿನ್ನ ಮೋಹಿಪ ಮಹಾ ಮಧುರ ಚಟಕ್ಕೆ ಬಿದ್ದವನು...

ನಾರಾದರೂ ಆಗಬೇಕು ನಾನು
ಹೂಗಳ ಗಂಧವಿಷ್ಟು ಅಂಟೀತು ಎದೆಯ ಗೋಡೆಗೆ...
___ ಮೋಹಿಯ ಕನಸಿನ ಬುಟ್ಟಿ...

ಕ್ರುದ್ಧ ನೋವು
ಸ್ಥಬ್ದ ಕಾಲ...
ಮತ್ತೆ ಹರಿವ ನೀಲಿ
ನಿನ್ನ ಮೋಹ ಜಾಲ...
____ ನೀನೆಂಬೋ ನಗೆಯ ಕೀಲಿಕೈ...

"ನೀನೆಂದರೆ ಎದೆಯಾಳದ ಉರಿ ಮೌನವೂ..."
___ ಆತ್ಮಸ್ಥ ಸನ್ನಿಧಿ...
&&&

ಮೈಮುರಿವ ತುಂಬು ಹೆಣ್ಹರೆಯದ ನೂರು ಬಣ್ಣ ಕಲೆಸಿದ ಸ್ವಪ್ನ ಸರಸಿಯಲಿ ಬಿಡುಬೀಸು ಈಸು ಬಿದ್ದು ಬಿಡದೆ ಕಾಡುವ ಜೋಗೀ...
ಒಪ್ಪಿಸಿಕೋ - ನಿನಗಿದೋ ಆಸೆಗಣ್ಣಲಿ ಕರೆವ ಈ ಹೆಣ್ತನದ ನಗೆ ಹೂವ ಮೊಗ್ಗಿನ ಬಾಗಿನ...
ನಿಜದಲೊಮ್ಮೆ ಹೆಣ್ಣೆದೆಯ ಬಿಗಿ ಉಸಿರಲ್ಲಿ ಹಣ್ಣಾಗು ಬಾರೋ...
____ ಹಾದಿ ಮರೆಯದಿರೋ ಮನಸಿಜನೇ...

ನಿನ್ನ ಉಸಿರ ಘಮದ ಎಳೆಯೊಂದನು ಹೆಗಲೇರಿಸಿಕೊಂಡು ಕೆಂಡ ಸಂಪಿಗೆ ಅರಳೋ ಬೀದಿಯಲಿ ಜಂಭದಿಂಧ ಅಲೆಯುವ ಅಮಲಿನೆದೆಯ ಫಕೀರ ನಾನು...
ನಿನ್ನ ಮೈಗಂ(ಅಂ)ಧದ ಜೀವಂತಿಕೆಯಲಿ ಈ ಜೀವ ಹೋಗಲಿ...
____ ಜೇನೆದೆಯ ಸುಖ ಮರಣ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)