ಪರಿಕ್ರಮ..... 'ಎನ್ನೆದೆಯ ಒದೆಯುವ ಕನಸಲ್ಲಿ ನೀನೂ ಇರಬಹುದು ನಿನ್ನ ಆಸೆ ಸೆರಗ ನೆರಳಲ್ಲಿ ನಾನೂ ಇರಬಹುದು...' ____ ಪ್ರೀತಿ... 'ಆ ತೀರದಾ ತೀರದ ನಗು ನಂದೇ ಅದರ ಅಧರ ಆಳಿಕೆ ನಿಂದ್‌ನಿಂದೇ...' ____ ನೀನು ದಡವ ತೊಳೆವ ಅಲೆ ಮತ್ತು ಮಳೆ... 'ನಿನ್ನ ನಗೆಯ ಮಿಡಿತದ ಗುರುತೊಂದು ಉಳಿಯಲಿ ನಾ ನಡೆದ/ವ ಎಲ್ಲ ಹಾದಿಯ ಎಡ ಬಲಗಳಲಿ...' ____ ಒಲವೇ... 'ನೆನಪು ಕಾಡು ಮೊಲ್ಲೆಯ ಘಮ ನೆನಕೆಗಳ ರುಚಿಯಲ್ಲಿ ನಿನ್ನೆಗಳ ಗುರುತು...' ___ ನಿನ್ನ ಒಂದೆಳೆ ನಗು... 'ನನ್ನೊಳಿಲ್ಲದ ನಾನು ಸಿಗಬಹುದೇ ಹೊಸ ನಾಳೆಗಳಲಾದರೂ ಸೋತವನ ಎತ್ತಿ ನಡೆಸಬಹುದೇ ನಿನ್ನ ಪ್ರೀತಿ ಮುಗುಳ ಬೆರಳು...' ____ ನೀನು - ಅಶ್ವತ್ಥದ ನೆರಳು... &&& ಅಗೋ - ಊರ ಹೊರಗಿನ ಆಲದ ಬಿಳಲು ನಡುವೆ ಮೈಯ್ಯರಳಿದ್ದು ಗೊಲ್ಲನ ಕೊಳಲು ಪಿಳ್ಳಂಗೋವಿಯ ಸೋಕಿದ ತುಟಿ ಕಳ್ಳ ಗೋಪನದು ರಂಧ್ರಗಳ ಮೀಟಿದ ಉಸಿರು ಒಲವಾಂಬುಧಿ ಗೋಪಿಯದು ಕೇರಿ ಎದೆ ಎದೆ ತುಂಬಾ ಅನುರಾಗದ ಸರಿಗಮಪದನಿ... ___ ರಾಧಾಮಾಧವರಾಗ - ಕೊಳಲು ಮತ್ತು ಕಾವ್ಯ... &&& ಶಂಖದೆದೆಯ ಭೋರ್ಗರೆತ ಮತ್ತು ಒಂದು ಹನಿ ಕಣ್ಣೀರು... ಎಲ್ಲಾ ತೊರೆಗಳೂ ನೇರ ಸಾಗರ ಸೇರಲಿಕ್ಕಿಲ್ಲ... ____ಪ್ರೀತಿ... &&& ವತ್ಸಾ - ತನ್ನ ಒಡಲಿಗೆ ಬಿದ್ದ 'ಜೀವಂತವಿರುವ' ಯಾವುದನ್ನೂ ನದಿ ತೇಲಿಸುವುದಿಲ್ಲ, ಮುಳುಗಿಸಿ ಮುಂಬರಿಯುವುದು ಅದರ ಸಹಜ ಗುಣ ಸ್ವಭಾವ... ಅಷ್ಟಾಗಿಯೂ ತೇಲಬೇಕೆಂದರೆ ನೀರ ಹರಿವಿನ ಮಟ್ಟುಗಳನು ಪಳಗಿಸಿಕೊಂಡು ನಿನ್ನ ಪರಿಶ್ರಮದಿಂದ ನೀನು ಈಜು ಕಲಿಯಬೇಕು ಇಲ್ಲಾ ಕೈಚೆಲ್ಲಿ ಪ್ರಾಣ ತೆರಬೇಕು... ______ 'ಈ ಬದುಕು, ಇಲ್ಲಿ ನೀನು ಅರಸುವ ಪ್ರೀತಿಯ ನಾನಾ ರೂಪಗಳು' ಇವೆಲ್ಲಾ ಆ ನದಿಯ ಉಪಮೆಗಳೇ ಅಲ್ವಾ...!! &&& ಈ ಘಳಿಗೆಯೂ ನನ್ನದೇ, ಈ ಕ್ಷಣದ ಕಣ ಕಣ ಅರಳುವಂಥಾ ನಗುವೂ ನನ್ನದೇ, ಇದು ಇನ್ನಷ್ಟು ಬೇಕೆಂಬ ಮಧುರ ಸ್ವಾರ್ಥವೂ ನನ್ನದೇ... ಆದಾಗ್ಯೂ, ಮನದುಂಬಿ ನಕ್ಕ ಈ ಹೊತ್ತಿನ ಇದ್ಯಾವುದನ್ನೂ ಒಂದೇ ಒಂದು ಪ್ರತಿಯೂ ಯಥಾವತ್ತು ನಕಲು ಮಾಡಿ ಇಲ್ಲಿಂದ ಅಲ್ಲಿಗೂ ಅಂಟಿಸಿ ಹಿಗ್ಗಲಾಗದ ಅಸಹಾಯ ನಾನು... ಅಂತಾಗಿಯೇ, ಇವೆಲ್ಲವನೂ ನೆನಪುಗಳಾಗಿ ಹಿಡಿಹಿಡಿಯಾಗಿ ಕೂಡಿಟ್ಟುಕೊಂಡು ನಿಟ್ಟುಸಿರಾಗುತ್ತೇನೆ... ಮತ್ತೂ, ಇಷ್ಟುದ್ದ ಬದುಕಿನಲಿ ನನ್ನಲ್ಲಿ ನಾ ಮೆಚ್ಚತಕ್ಕ ಅಂಶ ಒಂದೆಂದರೆ ನಕ್ಕು ನಗಿಸಿದ ಘಳಿಗೆಗಳನೂ ಆಗೀಗ ನೆನೆದು ತುಸುವಾದರೂ ಮತ್ತೆ ನಸು ನಗಬಲ್ಲೆ ಎಂಬುದಷ್ಟೇ... ಕಾರ್ಯ ಕಾರಣ ತೀವ್ರತೆಗಳು ಬೇರೆ ಬೇರೆಯಾದರೂ ಎಂದಿಗೂ ಎಲ್ಲ ಮೊಗದ ಚಂದ ಕಳೆ ನಗುವೇ ಅಲ್ಲವೇ... ____ ನಗುವಾಗು - ನಗುವಲ್ಲಿ ಮಗುವಾಗು... &&& ಕೇಳಿಲ್ಲಿ - 'ಐ ಲವ್ ಯೂ' ಅಂತ ಪ್ರೀತಿನ ಹೇಳಿಬಿಡೋದು ಸುಲಭವೇ ಏನೋ; ಮತ್ತದು ಶ್ರುತಿ, ಲಯ, ತಾಳಗಳಾಚೆಯೂ ಎದೆಯಲಿ ಹಿತ ಮಿಡಿವ ಮಹಾ ಮಧುರ ಆಲಾಪವೂ ಹೌದೇನೋ... ಆದರೆ, ಹೇಳಿದ್ದನ್ನ ಬದುಕಿಡೀ ಕಾಲು ಕಾಲಿಗೆ ಸುತ್ತಿ ಸುಳಿದು ಸಾಬೀತು ಮಾಡುತ್ತಲೇ ಇರಬೇಕಾದ ಜರೂರತ್ತಿಗೆ ಕಟ್ಟಿ ಬೀಳುವುದಿದೆಯಲ್ಲ ಅದಷ್ಟು ಸರಾಗ ಸುರಳೀತವಲ್ಲ ಅನ್ಸತ್ತೆ ನೋಡು... ____ ತೋಳಿಗೆ ಬಿದ್ದ ಬೀಜ ಎದೆಯ ಕಾವಲ್ಲಿ ಓಟೆ ಒಡೆದು ಅಂತಃಕರಣದ ಸಸಿಯಾಗಿ ಬಾಳು ಮಾಗುವುದು ಒಂದಿಡೀ ಜನುಮದ ಒತ್ತೆಯ ಬೇಡುವ ಪರಿಕ್ರಮವೇನೋ... &&& ಅಕಾರಣ ಭಯ ಮತ್ತು ಸಕಾರಣ ಪ್ರೀತಿ ಎರಡೂ ನಮ್ಮನ್ನು ಬಗ್ಗಿಸಿಡುವ/ಬಂಧಿಸಿಡುವ ಪ್ರಬಲ ಸಾಧನಗಳು... ___ ಸಂಬಂಧ ಮತ್ತು ಇತ್ಯಾದಿ ವಿಷಯಗಳು... &&& ನೋವನ್ನು ಗೆಲ್ಲಲು ಜಗವ ತೊರೆದು ಕಾಡಿಗೋಡಿದ್ದು - ಮೌನ ಉಸಿರುಗಟ್ಟಿತು...
ಹೋದ ಹಾದಿಯಲೇ ಹೊರಳಿ ಬಂದದ್ದು - ಹಸಿವಿಗೆ ಭಿಕ್ಷಾಂದೇಹಿ - ಜೋಳಿಗೆ ಖಾಲಿ ಬಿದ್ದದ್ದಿಲ್ಲ - ಕಾಯಕ್ಕಿಲ್ಲದ ಬೆಲೆ ಕಾಷಾಯಕ್ಕೆ... ತುಂಬಿದ ಹೊಟ್ಟೆಗೆ ಯುದ್ಧ ಯಾಕೆ ಬೇಕು - 'ಇಲ್ಲೆಲ್ಲ ನಶ್ವರ' ಅಂದದ್ದು... ಅಂತರ್ಯುದ್ಧ ಗೆದ್ದಿದ್ದೇ ಆದರೆ, ನಶ್ವರತೆ ಹೃದ್ಯಸ್ತವಾಗಿದ್ದರೆ ಮರಳಿ ಯಾಕೆ ಬಂದೆ? ಕೇಳಿಲ್ಲ ಯಾರೂ - ಬದಲಿಗೆ ಜ್ಞಾನಿ ಅಂದು ಶರಣೂ ಅಂದರು... ಲೋಕ ಹಿತ - ಅದಕ್ಕೆ ಪೀಠ - ಪೀಠದ ಘನತೆಗೆ (?) ಪಾದ ಪೂಜೆ, ದಕ್ಷಿಣೆ... ಜನಕ್ಕೆ ನೋವು, ಹಸಿವು - ನಂಗೆ ಜ್ಞಾನೋದಯದ ಹಮ್ಮು - ಮಾತಿನ ಮಾರಾಟ... ನಾನು ಬೇಡಿದರೆ ಭಿಕ್ಷೆ - ಅವರೇ ನೀಡಿದರೆ ಗುರು ದಕ್ಷಿಣೆ... ಹಸಿವು, ಕಾಮ ನೀಗಿದ ಮೇಲೆ ಜನಕ್ಕೆ ಅಭಿಮಾನ, ಅಸ್ತಿತ್ವದ ಪ್ರಶ್ನೆ - ನಾನು ಪ್ರವಚನಗಳ ಹೆಣೆಯುತ್ತೇನೆ - ಮತ್ತು ಜಗತ್ತು ತನ್ನಿಷ್ಟದಂತೆ ಚಲಿಸುತ್ತದೆ... ___ಉದರ ನಿಮಿತ್ತಂ... ___ಅರ್ಜುನ ಸನ್ಯಾಸಿ... --- ವಿವರ ಗೊತ್ತಿಲ್ಲದ ಸಾಲುಗಳು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
No comments:
Post a Comment