Monday, August 1, 2016

ಗೊಂಚಲು - ನೂರಾ ತೊಂಬತ್ತರ ಮೇಲೆ ನಾಕು.....

ಅರೆ ಹೊಟ್ಟೆಯ ಬದುಕುಗಳು.....
(ಅರ್ಥವಾಗದ ಅಪೂರ್ಣ ಸಾಲುಗಳು...)

ಸುಡು ನೋಟ, ತುದಿ ಮೂಗಿನ ಬಿಗುಮಾನ, ಬೈತಲೆಯ ಬಿರು ಮೌನ; ಕನಸಲೂ ಅದದೇ ಮುಖ - ಆದರೂ ಕಾಯುವಂತೆ ಕಾಡುತ್ತಾಳೆ ಅವಳು...

ಹಸಿ ಹಸಿ ನೋವಿನ ಬಸಿರಿಗೆ ಹುಟ್ಟಿದ ಉಪದ್ವ್ಯಾಪಿ ಕನಸುಗಳು...
ನಗೆಯ ತುತ್ತನಿತ್ತು ತೂಗಿ ಸಲಹಿಕೊಂಬ ಬಲವಿಲ್ಲದವನಿಗೆ ಪ್ರೀತಿ ಕೂಸಿನ ಹಂಬಲದ ಹಕ್ಕೆಲ್ಲಿಯದು...

ಮನಸು ಕಲ್ಲಾಗಿದ್ದೂ, ಮತ್ತೆ ಮತ್ತೆ ಒದ್ದೆಯಾಗೋ ಸೂಳೆಯ ದೇಹದ ವೃತ್ತಿ ನಿಷ್ಠೆ...

ಶುೃತಿ ಮಾಡಿದ ಕೊಳಲು, ಭಾವದುಂಬಿಯ ಕೊರಳು - ಸುತ್ತ ನರ್ತಿಸೋ ಕಿವುಡು ಸಂತೆ...

ಮಾತಿಗಾದರೋ ಸಾವಿರ ಬಣ್ಣ - ಎಲ್ಲ ನುಂಗಿದ ಮೌನ ಕಪ್ಪೇ ಇದ್ದೀತು...!!

ಹಾದಿಯ ನಡುಮಧ್ಯೆ ಫಕ್ಕನೆ ನಿರ್ವಾತವೊಂದು ಹುಟ್ಟಿಕೊಂಡು ಕಂಗಾಲಾಗಿ ನಿಲ್ಲುತ್ತೇನೆ - ಅದೇ ಹೊತ್ತಿಗೆ ಪಕ್ಕದ ಕವಲಿನಿಂದ ನೇಹದ ಕಾಳಜಿಯ ನಗುವೊಂದು ಹೆಗಲು ತಬ್ಬುತ್ತೆ - ಅಲ್ಲಿಗೆ ಮೌನ ಮನೆ ಕಳಕೊಂಡು ನಡೆವ ಕಾಲ್ಗಳಿಗೆ ಮತ್ತೆ ಹೊಸ ಹುರುಪು...

ಹಸಿವು ಎದೆಯ ಸುಡುವಾಗಲೆಲ್ಲ ಆಯಿ ನೆನಪಾಗುತ್ತಾಳೆ - ತುಟಿ ಕಚ್ಚಿದ ಬಿಕ್ಕುಗಳನೆಲ್ಲ ಸೆರಗ ಅಂಚಲ್ಲೆ ಕರಗಿಸಿ, ನಗೆಯ ತೊಟ್ಟಿಲಲ್ಲಿ ನನ್ನ ಬದುಕ ತೂಗಿದವಳು...

ಮೊನ್ನೆ ಮೊನ್ನೆಯಷ್ಟೇ ಹುಟ್ಟಿದಂತಿದೆ - ಆಗಲೇ ತಲೆಯಲ್ಲಿ ಬೆಳ್ಳಿ ಕೂದಲು...

ಅಮ್ಮನ ಹಳೆ ಸೀರೆಯ ಘಮಲು, ಒಡಹುಟ್ಟಿನ ನಗೆಯ ಅಮಲು ಒಟ್ಟು ಸೇರಿದ ಮಮತೆ - ಬಿಟ್ಟೂ ಬಿಡದ ಸೋನೆ, ಅಂಗಳದ ಕಿಚಡಿ ಮಣ್ಣು, ಹಸಿರ ವಾತ್ಸಲ್ಯದ ಜೋಕಾಲಿ - ಹುಟ್ಟಿದ್ದು ಬಿರು ಮಳೆಯ ನಾಡಿನ ಜೋರು ಮಳೆಯಲ್ಲಿ - ಆದರೇನು ಬದುಕ ಬಯಲು ಶುದ್ಧ ಬಂಜರು...!!!

ಪಡೆಯಲಾಗದ ಹೆಣ್ಮನದ ಒಲವ ಘಮಲು - ತೊರೆಯಲಾಗದ ಹೆಣ್ಣ ದೇಹದೆಡೆಗಿನ ಅಮಲು - ಎದೆಯಿದು ಯಾವುದ ಮೀರಿ, ಯಾವುದ ಪಡೆದು, ಎಲ್ಲಿಗೆ ಸೇರಬೇಕೆಂಬ ಗೊಂದಲದ ಗೂಡು...

ಸುಸ್ತಿನ ಘಳಿಗೆಯಲ್ಲಿ ಬರುವುದಾದರೆ ಸುಖದ ಸುಸ್ತಿನಲ್ಲಿಯೇ ಬರಲಿ - ನಗುವಿನ ಸಾಕ್ಷಿಯಾಗಿ; ಉಳಿಯದಿರಲಿ ಹೆಜ್ಜೆ ಗುರುತು ಸಾವಿನಲ್ಲೂ ನೋವಿನದ್ದು...

ಕನಸೇ -
ಹಸಿದೆದೆಯ ಬಿಸಿ ಕರುಳ ಹಾಡಾಗು ಬಾ... 
ಶ್ರಾವಣದ ಮಲೆನಾಡ ಕಾಡಾಗು ಬಾ... 
ಉಕ್ಕುಕ್ಕಿ ಮುತ್ತಿಕ್ಕೊ ದಡದ ದಾಹದ ಸೊಕ್ಕಿದಲೆಗಳ ಕಡಲಾಗು ಬಾ... 
ಮೌನದ ಬಿಕ್ಕುಗಳ ಕಲೆ ಅಳಿಸೋ ನೇಹದಾ ಭರವಸೆಯ ಮಾತಾಗು ಬಾ... 
ಕರುಳ ಹುಣ್ಣಾಗಿ ಕೊರಳ ಸೆರೆಯುಬ್ಬಿಸಿ ಕಾಡೋ ನೆನಪುಗಳ ಕಿತ್ತೆಸೆವ ಅರಿವಿನ ಬೆಳಕಾಗು ಬಾ... 
ಸಾವಿನ ಹಾದಿಯ ಭಯವಳಿಸಿ ಬೆವರಿಳಿಸೊ ಹುಚ್ಚು ಮೋಹದ ಬದುಕಾಗು ಬಾ...

ಮೂವತ್ನಾಕು ವಸಂತಗಳ ಹಿಂದೆ ನಾ ಅಳುವಾಗ ಅವಳ ಮೊಲೆಗಳಲಿ ಹಾಲುಕ್ಕಿ, ಅವಳ ಕಂಗಳಂಗಳದಿ ತೃಪ್ತ ನಗುವರಳಿದ್ದು ಇಂಥದ್ದೇ ನಡು ಮಳೆಗಾಲದ ಒಂದು ದಿನ - ನಾ ಹೇಳಿಕೊಂಡು ಬೀಗಬಹುದಾದ ನನ್ನ ಕಾರಣಕ್ಕೆ ಅವಳು ಮನದುಂಬಿ ನಕ್ಕ ಮೊದಲ ಮತ್ತು ಕೊನೆಯ (?) ದಿನ... 
ಇಂದು ಆ ದಿನದ ನೆನಪಲ್ಲಿ ಅಂಥದ್ದೇ ಇನ್ನಷ್ಟು ದಿನಗಳೆಡೆಗೆ ಬಯಕೆ...

ಆಗೀಗ ಮನದ ಮುಡಿಗೆ ಕನಸಿನ ಬಿಡಿ ಹೂಗಳ ಮುಡಿಸೋ ನಲಿವಿನ ಹಸಿ ಘಳಿಗೆಗಳು – ನಡೆವ ಹಾದಿಯ ನಡುವಿನ ನಗೆಯ ಅರವಟಿಗೆಗಳು - ಮತ್ತೆ ಮತ್ತೆ ನೆನಪಾಗುವ ಆ ನೀಲಿ ನೀಲಿ ಕಲೆಗಳೇ ತುಂಬಿದ್ದ ಅಂಗಿ ತೊಟ್ಟು ಕುಣಿಯುತಿದ್ದ ದಿನಗಳು...
ತುಸು ನಿಲ್ಲು ಕಾಲವೇ ಇಲ್ಲೇ – ಹೀರಿಕೊಳ್ಳುವೆ ದಣಿವಿಗಿಷ್ಟು ಪ್ರೀತಿಯ ನೀರು ಬೆಲ್ಲ – ಸವೆಸಬೇಕಾದ ಉಳಿದ ಹಾದಿಯ ದೂರ ಇನಿತೂ ಗೊತ್ತಿಲ್ಲ...