Saturday, October 5, 2019

ಗೊಂಚಲು - ಮೂರು ನೂರಾ ಹನ್ನೊಂದು.....

ನಿಸ್ತಂತು ಬದುಕು.....  

ನಿನ್ನೆಡೆಗಿನ ಚೂರು ಮೋಹಕ್ಕಾಗಿ ನಾನಲ್ಲದ ನನ್ನನ್ನು ಬದುಕಿ ಸುಸ್ತಾಗುತ್ತೇನೆ - ಪ್ರತಿ ನಿತ್ಯದ ಪ್ರತಿ ಘಳಿಗೆ ಒಳಗೊಳಗೇ ಮತ್ತೆ ಮತ್ತೆ ಸಾಯುತ್ತೇನೆ - ನಂಗ್‌ನಂಗೇ ಅಂತ ಒಂಚೂರೂ ಜಾಗಕ್ಕಾಗಿ ಮಂಚದ ಮನೆಯಲ್ಲೂ ತಡಕಾಡುತ್ತೇನೆ...
"ಪ್ರೀತಿಯಿಂದ ಪಡೀಬೇಕಿತ್ತು ಇಲ್ಲಾ ಪ್ರೀತಿಯಿಂದ ಬಿಟ್ಕೊಡಬೇಕಿತ್ತು" - ಒಂದೂ ಬಗೆಹರಿಯದೇ ಸಾಕಿಕೊಂಡದ್ದು ಹಳಹಳಿಕೆಯನ್ನಾಯಿತು...
ರೂಢಿಗತ ಈಗ - ಜೀವಂತ ತಲ್ಲಣಗಳನು ಹೊದ್ದು ಸಾವಿನಂತ ನಿದ್ದೆಗೆ ಕಾಯುತ್ತಾ ಇರುಳ ಮಡಿಲಿಗೆ ಜಾರುತ್ತೇನೆ...
ಹಾಂ... ಹೌದು... ನಿನ್ನ ಬೆನ್ನಿಗೆ ಕಣ್ಣಿಟ್ಟು ಊಳಿಡುತಿರುವುದು; ಅದು ನನ್ನದೇ ಕಳೇಬರ...
#ಘೋರಿ_ಮೇಲಿನ_ನೆರಳು...
↰↲➤➤➤↲↱

ಕೇಳಿಲ್ಲಿ -
ಹೊಸ ಹೊಸ ರೂಪದಲ್ಲಿ ಗೋಳುಗಳಷ್ಟೇ ಎಡತಾಕುವ ನಿಸ್ಸಾರದ ಈ ಹಾದಿಯಲ್ಲಿ ನೀನಾದರೂ ಒಂದು ಘಳಿಗೆ ಕಾಲಾಡಿಸಬಾರದೇ - ನೋವ ಗೆದ್ದು ಕೊಡುವುದಕ್ಕಲ್ಲ, ನಗೆಯ ಮಿಂಚೊಂದ ನನ್ನಲೇ ಹುಡುಕುವ ಹುಕಿ ಹುಟ್ಟಿಸಲಾದರೂ...
ನಿನ್ನದೊಂದು ಘಮದ ಋಣಭಾರವಾದರೂ ಜೊತೆಗಿದ್ದಿದ್ದರೆ ಈ ಪಯಣಕೆ ಹೇಳಿಕೊಳ್ಳಲೊಂದು ಉದ್ದೇಶವಾದರೂ ಕಾಣುತ್ತಿತ್ತಲ್ಲ...
#ಬೇವರ್ಸಿಯ_ಖಾಲಿ_ಜೋಳಿಗೇನ_ಬಿಟ್ಟಿಕನಸು_ಕೂಡಾ_ಮೂಸುವುದಿಲ್ಲ....
↰↲➤➤➤↲↱

ಹೊಸತೊಂದು ನೋವಾದರೂ ಬೇಕು ಹೆಣಗಾಡಿ ನಗುವುದಕ್ಕೆ - ಈ ಹಾಳು ಸುರಿವ ಖಾಲಿಗಿಂತ..‌.
#ನಿಸ್ತಂತು_ಬದುಕು...
↰↲➤➤➤↲↱

ಸಂತೆಯ ಅಟಾಟೋಪಕ್ಕೆ, ಜಂಗುಳಿಯ ಆಡಂಬರಕೆ ಒಳಗೊಳಗೇ ಬೆಚ್ಚುತ್ತಾ ಅಲ್ಲೇ ಅಲೆಯುತ್ತಿರುತ್ತೇನೆ ಗುಂಪಿಗೆ ಸೇರದ ಪದವೊಂದು ಗುಂಪಿನಲ್ಲಿ ಎದ್ದು ಕಾಣುವಂತೆ...
#ಮೌನದ_ಭಯಕ್ಕೆ_ಬಿದ್ದ_ಜಂಗಮ...
↰↲➤➤➤↲↱

ಸಂತೆಯನ್ನೇ ಮನೆ ಮಾಡಿಕೊಂಡರೂ ಖಾಲಿತನಕ್ಕೆ ಮದ್ದು ಸಿಗುತ್ತಿಲ್ಲ - ಒಳಮನೆಯ ವಾಸ್ತುವೇ ಸರಿಯಿಲ್ಲವೇನೋ...
#ಒಣಕಲು_ಎದೆ...
↰↲➤➤➤↲↱

ಕನಸಿದಂತದ್ದೇ ಅಂತ್ಯವ ತಲುಪಲಾರದ ಅನುಮಾನದ ಭರದಲ್ಲಿ ಆರಂಭವನ್ನೂ ಪ್ರೀತಿಸದೇ ಹೋದರೆ ನಡಿಗೆಯೇ ಇಲ್ಲ, ಸೋಲಿನ ಅನುಭವವೂ ಇಲ್ಲ...
#ಹೊರಟು_ನೋಡು_ಸಿಕ್ಕೀತು_ನಗೆಯ_ಜಾಡು...
↰↲➤➤➤↲↱

ಅವಳ ಹಾಡಿ ಹೊಗಳಿ ಮಣಗಟ್ಟಲೆ ಬರೆದೇ ಬರೆದೆ..‌.
ಅಬ್ಬಾ, 'ಎಷ್ಟೊಂದು ಪ್ರೀತಿಸ್ತೀಯಲ್ಲೋ ಅವಳನ್ನ!!' ಅಂತ ದೈವೀಕವೆಂದರು ಓದಿದ, ಕೇಳಿದ ಎಲ್ಲ...
ಉಹುಂ, ಪ್ರೀತಿಸಿದ್ದಲ್ಲ ನಾ ಅವಳನ್ನ - ಎದೆಯ ಸತ್ಯ ಬೇರೆಯೇ ಇದೆ ನನ್ನದು...
ಕೊಡಬೇಕಿದ್ದ ಹೊತ್ತಲ್ಲಿ, ಕೊಡಬೇಕಿದ್ದ ಪ್ರೀತಿಯನ್ನ, ಕೊಡಬೇಕಾದ ರೀತಿಯಲ್ಲಿ, ಕೊಡಲಾಗದ ಸೋಲನ್ನು ಬರೆದದ್ದು; ಶಬ್ದಗಳ ಸುಳಿಯಲ್ಲಿ ಒಳಗಿನ ಅಸಹಾಯಕತೆಯ ನೀಗಿಕೊಂಡಂತೆ ನಿಡುಸುಯ್ದದ್ದು ಅಷ್ಟೇ, ಅದಷ್ಟೇ...
ಆದರೆ,
ಓದು ಬಾರದ ಅವಳ ಕಣ್ಣ ಬಟ್ಟಲಲ್ಲಿ ನಿಜ ಪ್ರೀತಿ ಗಂಗೆ ತುಳುಕಿ ನಗುವಾಗಲೆಲ್ಲ ನಾನು ಮುಕ್ಕಾಗುತ್ತೇನೆ - ಒಳಗೇ ಸಾಯುತ್ತೇನೆ...
ಸುಳ್ಳು ಸಮಾಧಾನಕ್ಕೆ ಕಥೆ, ಕವಿತೆಯ ಬಣ್ಣ - ಕತ್ತಲನ್ನು ಹೇಗೂ ಬಣ್ಣಿಸಬಹುದಲ್ಲ...
ದಾಟಬಹುದಾದರೆ ಅದು ಬದುಕನ್ನಷ್ಟೇ - ಸಾವನ್ನು ಹಾಯಲಾದೀತೆ..‌.
"ನಾನು ಹುಟ್ಟಿದೆ - ಅವಳು ಸತ್ತೋದಳು‌‌‌..."
#ಅವಳು...
↰↲➤➤➤↲↱

ಕುಂಚ: ಅಮನ್.
ಈ ಜಗತ್ತಿನಾಚೆಯ ಒಂದು ಅತಿರೇಕದ ಬದುಕನ್ನು ಒಂದ್ಹತ್ತು ವರ್ಷವಾದ್ರೂ ಬದುಕಬೇಕು...
ಹಡಬೆ ದನದ ಹುಚ್ಚು ಬದುಕೊಂದು ನಂದ್‌ನಂದೇ ಆಗಿ ನಂಗಿರಬೇಕು...
ಬೆಳಕ ಬಟ್ಟೆಯನುಟ್ಟ ಬಯಲ ಬೆತ್ತಲೆಯಲ್ಲಿ ನನ್ನೊಳಿಲ್ಲದ ನನ್ನ ನಿನ್ನೊಳು ಬೆದಕಬೇಕು...
ಚಿತ್ರದೊಳಗಣ ನಗುವ ಚೂರುಪಾರು ಚಿತ್ತಕಿಳಿಸಿಕೋಬೇಕು...
#ಬೇವರ್ಸಿ_ಕನಸು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ನೂರಾ ಹತ್ತು.....

ಅಳಿದುಳಿದ ನಾನು..... 

ಇಳೆ, ಬೆಳಗು ಜೋಡಿ ಜಳಕ ಮಳೆಯ ಮಾಯಕದಲ್ಲಿ...
ಇಲ್ಲಿ ಮಳೆ...
ಬೆಳ್ಳಾನ ಬೆಳಗ್ಗೆ ಚೂರು ನೆಂದು ಬಂದೆ - ನೆತ್ತಿಯಿಂದ ಜಾರುತಿವೆ ತಂಪು ತಂಪು ಹನಿ ಬಳಗ...
ಎದ್ದೇಳೋ ಬೆಳಗಾಯ್ತೂ ಅಂತಂದು ನೀನೆನ್ನ ಮುಂದಲೆಯ ತೀಡಿ ಹಣೆಯ ಮುದ್ದಿಸಿದಂತೆ ಸವಿಭಾಸ...
ಕರಗೋ ಮೋಡದ ಸೆರಗ ಮರೆಯಲಿ ಸೂರ್ಯ ಕಣ್ಮುಚ್ಚಿ ಕೂತಿರುವಂತಿದೆ ಬೆಳಗು - ಥೇಟು ನಿನ್ನ ತುಂಬೆದೆಯ ನೆರಳಲ್ಲಿ ನಾ ಹಗಲ ಕಳ್ಳ ನಿದ್ದೆಯ ಸವಿವಂತೆ..‌.
#ತುಂತುರು_ಬೆಳಗು..‌.🌦
⇛⇖↢↣⇗⇚

ಹುರಿಗಟ್ಟಿಯೂ ಸುರಿಯಲೊಲ್ಲದೇ ಗಾಳಿಯ ರೆಕ್ಕೆ ಕಟ್ಟಿಕೊಂಡು ಎಲ್ಲಿಂದೆಲ್ಲಿಗೋ ಹಾರುವ ಒಂದಿಷ್ಟು ಮತ್ತು ಹಳೆಯ ಹುಸಿ ಮುನಿಸೊಂದು ಮತ್ತೆ ನೆನಪಾಗಿ ಸುಳ್ಳೇ ಸೆಟೆದು ನಿಂತಂತೆ ನಿಂತ ಮತ್ತಿಷ್ಟು ಕರಿ ಕರಿ ಮೋಡದ ಹಕ್ಕಿಗಳು...
ನಾವ್ಯಾರೂ ಈ ಲೋಕಕ್ಕೆ ಸಂಬಂಧಿಸಿದವರೇ ಅಲ್ಲ ಅನ್ನೋ ಭ್ರಮೆಯಲ್ಲಿ ಹುಳ್ಳಹುಳ್ಳಗೆ ಮುಖ ಮಾಡಿಕೊಂಡು ಶಾಪಗ್ರಸ್ಥ ಗಂಧರ್ವರಂತೆ ಗಡಿಬಿಡಿಯಲ್ಲಿ ಓಡಾಡೋ ನಗರ ಜೀವಿಗಳು ಮತ್ತು ಮುಖ ಮುಖಗಳ ಮಿಕಮಿಕ ನೋಡುತ್ತಾ ಗುಂಪಿನ ಮೂಲೇಲಿ ಬೆರ್ಚಪ್ಪನಂತೆ ನಿಲ್ಲೋ ಅವರೊಲ್ಲೊಬ್ಬ ನಾನು...
ಎಲ್ಲಿಗೂ ತಲುಪದ, ಗಾಳಿಗೆಗರಿ ಬಿದ್ದ ಹರಿದ ಉತ್ತರೀಯದಂತ ತುಂಡು ತುಂಡು ಹಾದಿಗಳು - ಅವುಗಳೆಡೆಯಲ್ಲೇ ಅಲ್ಲಲ್ಲಿ ಬಣ್ಣ ಬಳಕೊಂಡ ಕಾಂಕ್ರೀಟಿನ ಅಟಾಟೋಪಕ್ಕೆ ಹೆದರುತ್ತಲೇ ತನ್ನ ಅಸ್ತಿತ್ವಕ್ಕೆ ಹೆಣಗಾಡಿ ಹುಯ್ದಾಡೋ ಹೊಗೆ ಮೆತ್ತಿದ ಹಸಿರು - ಎಲ್ಲಿಗೋ ತಲುಪುವ ವಿಚಿತ್ರ ಹುಕಿಯಲ್ಲಿ ಬುರ್ರಬುರ್ರನೆ ಎಗರೆಗರಿ ಓಡೋ ತರಹೇವಾರಿ ಗಾಡಿಗಳು...
ಹುಸಿ ಮಳೆಯ ಮುಂಜಾವೊಂದು ಹಿಂಗೆ ಬಿಚ್ಚಿಕೊಳ್ಳುತ್ತೆ...
ಬೆದರು ಬೊಂಬೆ ಬೆಚ್ಚುವಾಗ ಕಾಗೆಯೊಂದು ಅದರ ಭುಜದ ಮೇಲೆ ಹಿಕ್ಕೆ ಹಾಕಿ ಸಮಾಧಾನಿಸಿತು...
#ಮಾಯಾಬಜಾರಿನ_ಬೆಳಗು...
⇛⇖↢↣⇗⇚

ನಿನ್ನೊಡಲ ಹಿಡಿ ಮೌನವ ಭಿಕ್ಷೆಯನಿಕ್ಕು ಮಳೆಯ ಮಿಂದ ಇಳೆಯೇ - ಈ ಬಡಕಲು ಬದುಕಿಂಗೆ ಚಿಟಿಕೆ ಪ್ರೀತಿ ನಗೆಯ ಮಾತನೂಡಬೇಕಿದೆ...
#ಪ್ರಾರ್ಥನೆ...
⇛⇖↢↣⇗⇚

"ಎತ್ತರ ಭಯ, ಎತ್ತರ ಬಲ ಮತ್ತು ಎತ್ತರ ನನ್ನೊಳಗಿಂದ ನಾ ಕೂಗಿ ಕೂಗಿ ಕರೆವ ನಿನ್ನ ಹೆಸರು..."
ಗಾಳಿ ಕಾಲಿಗೆ ಗೆಜ್ಜೆ ಕಟ್ಟಿ ಬಿಟ್ಟದ್ದು ನೀನೇ ಇರಬೇಕು - ಕಿವಿಯ ಶಂಖದ ತುಂಬಾ ನಿನ್ನದೇ ಗುನುಗು ದನಿಯ ಇಂಪು...
ಇಲ್ಲೆಲ್ಲೋ ಕಳೆದೋದವನು ಅಲ್ಲೆಲ್ಲೋ ಸಿಗಬಹುದಾ - ಆ ಅಂಚಲಿ - ಗಾಳಿಯಲ್ಲಿ ನೀ ತುಂಬಿಕೊಟ್ಟ ಉಸಿರು ನನ್ನೆದೆಯಲ್ಲಿ ಭಾವೋತ್ಸವ ರಾಗವ ತಾರಕದಿ ಮಿಡಿವಾಗ...
ಹೆಗಲು ಹರಿದರೂ ಕಣ್ಣು ತುಳುಕಿಸದೆ ಎಳೆದೇ ಎಳೆವ ಹುಚ್ಚು ಹಸಿವಿನ ತೇರು - ಕತ್ತಲನು ಸಿಂಗರಿಸಿ ಬೆಳಕನ್ನು ಎದುರ್ಗೊಂಬುವ ಬಿಚ್ಚುಗೈಯ್ಯ ಪಯಣ...
ಇಷ್ಟೆಲ್ಲಾ ಆಗುವಾಗಲೂ "ನಿನ್ನ ಅರಸುತ್ತಿಲ್ಲ ನಾನು - ನನ್ನ ಉಳಿಸಿಕೊಳ್ಳುತ್ತಿದ್ದೇನಷ್ಟೇ..."
#ಪ್ರತೀಕ್ಷೆ...
⇛⇖↢↣⇗⇚

ನನ್ನ ಸಾವಿರ ಮಾತು ಕೊಲ್ಲಲಾಗದ್ದನ್ನು ನಿನ್ನದೊಂದೇ ಒಂದು ಜಾಣ ಮೌನ ಸೀಳಿಹಾಕಿತು...
ನಾಕು ದಿನ ಗಟ್ಟಿಯಾಗಿ ಬಾಯಿ ಹೊದ್ಕೊಂಬಿಟ್ರೆ ಜಗಳವೂ ಉಳಿಯುವುದಿಲ್ಲ - ಸಂವಹನ ಸತ್ತರೆ ಪ್ರೀತಿಯ ಸ್ವಚ್ಛಂದ ಹರಿವಿಗೆ ಕಡ್ಡಾಯ ಸೂತಕ...
"ಮುಚ್ಚಿದ ಬಾಗಿಲು ಯುದ್ಧವ ತಡೆಯುತ್ತೋ ಇಲ್ಲವೋ ಗೊತ್ತಿಲ್ಲವಾಗಲೀ, ಒಳಬರುವ ಪ್ರೀತಿ ಬೆಳಕನ್ನಂತೂ ಸಮರ್ಥವಾಗಿ ತಡೆಯುತ್ತೆ..."
#ಮೌನ...
#ಮೃತ್ಯುಗಂಧ...
⇛⇖↢↣⇗⇚

ನೀ ತೇಲಿ ಬಿಟ್ಟ ಕಾಗದದ ನಾವೆಯ ಒಳಪದರದ ಚಿತ್ತುಕಾಟಿನಲಿ ಸಣ್ಣ ಕನವರಿಕೆಯಂತೆ ನನ್ನ ಹೆಸರಿದ್ದಿತ್ತಾ...?!
ದಾರಿ ಕವಲಿನಲಿ ನಿನ್ನ ಕಣ್ಣು ಉದುರಿಸಿ ಹೋದ ಹನಿಯೊಂದು ಜಟಾಯುವಿನ ಮುರಿದ ರೆಕ್ಕೆಯಂತೆ ಕಾಡುತ್ತಿದೆ...
ಬಯಲಲ್ಲಿ ತೇಲುವಂಥ ಖುಷಿಯಲ್ಲಿರುವಾಗ ಛಕ್ಕನೆ ನಿನ್ನ ನೆನಪಾಗಿಬಿಡುತ್ತೆ ಮತ್ತು ನಗುವಿನೊಡನೆ ಬಿಕ್ಕಳಿಕೆ ಜೊತೆಯಾಗುತ್ತೆ...
ನನ್ನ ನಾ ಹುಡುಕುತ್ತಿದ್ದೇನೆ ಈಗ - ಹನಿ ಮಳೆಯಲ್ಲಿ, ಹರಿವ ಹೊಳೆಯಲ್ಲಿ, ಧಿಮಿಗುಡುವ ಜಲಪಾತದಡಿಯಲ್ಲಿ, ನಾವೆ ತೇಲಬಹುದಾದ, ಉರುಳಬಹುದಾದ ಎಲ್ಲೆಂದರಲ್ಲಿ, ಮುರಿದು ಬಿದ್ದಿರಬಹುದಾದ ದಡಗಳಲ್ಲಿ...
#ನಾನಿಲ್ಲಿ_ಬರೀ_ಸುಳ್ಳು_ನಗೆಯು...
⇛⇖↢↣⇗⇚

ಮೂಲೇಲಿ ಕಾದಿಟ್ಟ ಅದೇ ತುಂಡು ಗಂಧದ ಕೊರಡನು ತೇಯ್ದು ತೇಯ್ದು ಹೊಸತು ಹೊಸತೇ ಘಮವೆಂದು ಮೂಗರಳಿಸಿ ನಿನ್ನೆಯ ಮುಕ್ತಗೊಳಿಸುವ ಈ ಇಂದು...
ನನ್ನೊಡನೆ ನನ್ನ ಅದದೇ ಹಳೆಯ ಯುದ್ಧಕೆ ಹೊಸದಾಗಿ ಕತ್ತಿಯ ಮಸೆಯುವ ಬಿಕರಿಯಾಗದ ಸರಕಿನಂತ ಸುಳ್ಳು ಕನಸು...
ಇರುಳ ಕಣ್ಣಿನ ತೇವ - ಹಗಲ ಕೊರಳಿನ ಹಾಡು...
#ಅಳಿದುಳಿದ_ನಾನು...
⇛⇖↢↣⇗⇚

ಒತ್ತಾಯದಿಂದ ತುಂಬಿದ್ದೆಲ್ಲ ವಾಂತಿಯಾಗೋದೇ ಹೆಚ್ಚು - ಪ್ರೀತಿಯಾದರೂ ಅಷ್ಟೇ...
#ಗೆರೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, October 4, 2019

ಗೊಂಚಲು - ಮೂರು ಸೊನ್ನೆ ಒಂಭತ್ತು.....

ಕೃಷ್ಣ ಸಖ್ಯ..... 

ಹರಿದ ಸೀರೆ ತೊಟ್ಟಿಲಲ್ಲೂ ಕೃಷ್ಣ ನಗುತಾನೆ - ಅಮ್ಮನ ಕಣ್ಣ ಜಿನುಗನು ನವಿಲುಗರಿ ಒರೆಸುತ್ತೆ - ಅವನು ಮಡಿಲಲಾಡಿದರೆ ಹರಳುಗಟ್ಟಿದ ಹಾಲಾಹಲವೂ ಎದೆಯ ಹಾಲಾಗುವುದಂತೆ...
ಹೆಣ್ಣಾದರೂ, ಗಂಡಾದರೂ ಒಡಲ ಕೂಸು ಅಮ್ಮನಿಗೆ ಕೃಷ್ಣನೇ - ಅಮ್ಮನ ಕೈಯ್ಯ ಹದ ಮೊಸರ ಕಡೆಯದೇ ಪ್ರೀತಿ ಬೆಣ್ಣೆ ತೇಲೀತು ಹೇಗೆ...
ಮಡಿಲ ಜೋಲಿಯಲಿ ಕೃಷ್ಣನ ತೂಗಿದ ಎಲ್ಲ ಅಮ್ಮಂದಿರಿಗೂ ಅವನ ದಿನದ ಶುಭಾಶಯವು...
           _______ 23.08.2019
↹↯↹↺↻↹↯↹

ಮರಳ ಗೂಡು, ಸಾಗರದಲೆ ಮತ್ತು ಕೃಷ್ಣ ಸಖ್ಯ:

ಆಪ್ತತೆಯ ಅಪ್ಪುಗೆ ಎಂಬೋ ಆತ್ಮದ ವೈಭವದ ಕಿಡಿಗೆ ಗಂಟಲಲಿ ಗಂಟು ಬಿದ್ದ ಉಸಿರು ಕರಗಿ ಕಣ್ಣಿಂದ ಇಳಿದು ಹೋಗಲಿ...
#ನವಿಲ್ಗರಿ...

ಆಡಿ ಸುಖವಿಲ್ಲದ ಫಾಲ್ತು ಫಾಲ್ತು ಮಾತುಗಳೇ ತುಂಬಿರೋ ಈ ಎದೆಯಲ್ಲಿ ನಿನ್ನದಿಷ್ಟು ನಾದದ ಮೌನವ ತುಂಬಿಕೊಡಬಾರದೇ...
#ಮುರಳೀ...

ಎದೆ ಬಾಗಿಲನು ಸಣ್ಣಗೆ ತಟ್ಟುವಾಗ ನೀನು - ಸತ್ಯದ ನೋವೂ, ಸುಳ್ಳಿನ ಸುಖವೂ ಜಿದ್ದಿಗೆ ಬೀಳುತ್ತವೆ - ನಾನು ಆಯ್ದುಕೊಳ್ಳುವ ಗೊಂದಲದಲಿ ಹೈರಾಣಾಗುತ್ತೇನೆ...
#ಪಾಂಚಜನ್ಯ...
↹↯↹↺↻↹↯↹

ಕರಿಯನ ನಿದ್ದೆಯಲಿ ರಾಧೆ ಕೊಳಲ ಸಿಂಗರಿಸುತಾಳೆ...
ರಾಧೆಯುಸಿರಲಿ ಕೃಷ್ಣ ಬೆರಳಾಡಿ ಮಿಡಿವಾಗ ಕೊಳಲಿಂದ ಪ್ರೇಮ ನಾದ...
ಯಮುನೆಯಲಿ ಮಿಂದ ತಂಪು ತಿಳಿ ಗಾಳಿಯಲಿ, ಕಡಗೋಲಿಗಂಟಿದ ಬೆಣ್ಣೆಯಲ್ಲಿ, ಕಪಿಲೆ ಕರುವಿನ ಜೊಲ್ಲಿನಲ್ಲಿ ರಾಧೆಯ ಗೊಲ್ಲ ನುಡಿಯುತ್ತಾನೆ - "ಕಾಯುವ" ಸುಖ ಮತ್ತು ದುಃಖಕ್ಕೆ ರಾಧೆ ಮೌನದ ಗೆಜ್ಜೆ ತೊಡಿಸುತ್ತಾಳೆ...
ಅಲ್ಲಿ ಮಥುರೆಯ ಸಂಜೆಗಳಲ್ಲಿ ಶರಧಿಗೆ ವಿಪರೀತ ಉಬ್ಬರ, ಮನಸು ಬಿಕ್ಕಿದ್ದನ್ನು ಶ್ಯಾಮ ಕಣ್ಣಿಗೂ ಅರುಹಲಾರ, ಬೆಳದಿಂಗಳು ಕಣ್ಣನಿರಿಯುವಾಗ ಬೆರಳು ಬರೆದರೆ ಅವಳ ಹೆಸರನು ಅಲೆಗಳು ಆ ಗುರುತನುಳಿಸುವುದಿಲ್ಲ - ಎದೆಯ ಗಾಯವ ಮರೆಯಲು ಕೃಷ್ಣ ನಾಭಿಯಿಂದ ಉಸಿರನೆಳೆದು ಪಾಂಚಜನ್ಯವನೂದುತ್ತಾನೆ...
ಹಾದಿ ಕವಲಿನ ಕೊನೇಯ ನೋಟದಲಿ ಬಂಧಿಯಾದ ಖಾಲಿ ಬೆನ್ನು ಆಡಿದ ಮಾತುಗಳಿಗೆಲ್ಲ ಭಾಷ್ಯ ಬರೆಯಬಹುದೇ...
#ವಿರಾಗ...
↹↯↹↺↻↹↯↹

"ನನ್ನ ಪಡೆವುದೆಂದರೆ ಅನಾಮತ್ತು ನಿನ್ನ ಕಳಕೊಳ್ಳುವುದಲ್ಲವೇ ಹುಚ್ಚೀ; ನಿನ್ನಲ್ಲಿ ನೀನಾಗಿ ಬೆಳೆಯುತ್ತಾ ನನ್ನಲ್ಲಿ ಬೆರೆವ ಸ್ವಾತಂತ್ರ್ಯ, ನನ್ನಾಚೆಯೂ ಉಳಿವ ನಿನ್ನ ನಗೆಯ ಸೌಂದರ್ಯ ಪ್ರೇಮ" ಅಂದವನು ನನ್ನ ಮಾಧವ...
ರಣ ಹಕ್ಕಿನಿಂದೆಂಬಂತೆ ಓಡೋಡಿ ಕೂಡುವ ಸಾಗರ ಸಂಗಮವಷ್ಟೇ ಅಲ್ಲ ಪ್ರೇಮ; ಹರಿವ ಹಾದಿಯ ಹಸಿರು, ಜೀವ ಜಂತುಗಳ ಉಸಿರೂ ನಿಜ ಪ್ರೇಮ ಎಂಬುದನು ತಬ್ಬಿ ತಿಳಿಹೇಳಿದವನು, ಮೋಡದ ಬಸಿರಿಗೆ ನವಿಲಾಗುವುದ ಕಲಿಸಿದವನು...
ಯಮುನೆ ಮಡುವಿಗೆ ಬಿದ್ದ ಚಂದಿರ ತಿಳಿ ಅಲೆಯಲ್ಲಿ ಕಲಸಿ ಹೋಗುವುದನು ಕಳೆದೋದ ಮನಸಲ್ಲಿ ಕಣ್ಣಿಟ್ಟು ನೋಡುವಾಗ ಆತುಕೊಂಡ ಬಿದಿರ ಮೆಳೆಯ ಚಿಗುರು ಮುಂಗುರುಳ ಸವರುವಲ್ಲಿ ಕೊಳಲಾಗಿ ನಗುವ ನನ್ನ ಶ್ಯಾಮ - ಸುಳಿ ಗಾಳಿ ಹೊರಳಿಗೆ ಹಗಲ ಸುಸ್ತು ಒಣಗುವಲ್ಲಿ, ಗಂಗೆ ಕರು ನೊಸಲ ನಡುವಿಗುಜ್ಜುವಲ್ಲಿ ಅವನ ಧ್ಯಾನ...
ಅವನೆಂದರೆ - ಸೆರಗ ಚುಂಗಿಗಂಟಿದ ನನ್ನದೇ ಹಣೆಯ ಬೆವರು...
ಅದಕೆಂದೇ -
"ಯಮುನೆಯಷ್ಟು ಹತ್ತಿರ ಹಾಗೂ ಮಥುರೆಯಷ್ಟೇ ದೂರ ನನ್ನ ಪ್ರೇಮ..."
#ರಾಧೆ...
↹↯↹↺↻↹↯↹

ಕಂಗಳು ಚೆಲುವನು ಓದಲು ಕಲಿತಾಗಿನಿಂದ ಎದೆ ಪಟ್ಟಿಯ ಕೊನೇ ಪುಟದಲ್ಲಿ ಗೀಚಿ ಗೀಚಿಟ್ಟ ಕಿಶೋರಿಯರ ಹೆಸರುಗಳನೆಲ್ಲ ಸೇರಿಸಿ ಕವನಸಂಕಲನವೊಂದನು ಮಾಡಬಹುದಾ ಅಂತ...
#ಸಂಸ್ಕಾರ...
↹↯↹↺↻↹↯↹

ನಗೆಯ ಮುಗುಳೊಂದು ಹೆಗಲೇರಿ ನೆತ್ತಿ ಕಾಯಲಿ - ಒಡೆದ ಹೃದಯ ಗೂಡಿನ ಬಿರುಕಿನಿಂದಲೂ ಪ್ರೀತಿ ಸೊನೆಯೇ ಜಿನುಗಲಿ - ಸಣ್ಣದೊಂದು ಹಸಿರು ಹರಿವು ಬದುಕಿನೆಡೆಗೆ...
'ಹಿಗ್ಗಿದ' ಹೃದಯದ ಪುಟಾಣಿ ಆಶಯ - ಜೀವಂತ ನಗೆ ಬೆಳಕಿನ ಪ್ರಾರ್ಥನೆ...
#ಹೃದಯದ_ದಿನವಂತೆ...
           ___ 29.09.2019
↹↯↹↺↻↹↯↹

ಅವಳ ಹಾದಿಯ ತುಂಬ ಬೆಳಕು ಆಳಾಗಲಿ - ಮಳೆಯು ಹಾಲೂಡಲಿ - ಹಸಿರು ನೆಳಲೀಯಲಿ...
ಎಲ್ಲ ತುಳಿಯುವ ಓಣಿಯಲ್ಲೂ ನಗೆಯ ಹೂವ ಬಿತ್ತಿ ಬೆಳೆಯುವ ಅವಳ ಹಾದಿಯ ತುಂಬಾ ಅವಳೇ ಅವಳಾಗಲಿ...
#ಪ್ರೀತಿ_ಪ್ರಾರ್ಥನೆ...
↹↯↹↺↻↹↯↹

ಕರಿ ಮೋಡ ಕರಗಿ ತಿಳಿ ನೀಲ ಹರಿವಾಗಿ ನೆಲವ ತೊಳೆದಂತ ಶುದ್ಧ ನಿರಾಳ ನಿರಾಳ ಹಗಲಂತೆ ನಾನೇ ಖುದ್ದು ಒಡನಾಡಿ, ವ್ಯಕ್ತವಾಗಿಸಿ, ಕೊಟ್ಟು, ಕೇಳಿ ಪಡೆಯದೇ ಹೋದರೆ ಯಾವುದೂ ನಂದ್‌ನಂದು ಅನ್ನಿಸುವುದಿಲ್ಲ - ನಂದೂ ಅನ್ನೋ ಮುಕ್ತ ಆಪ್ತತೆ 'ನಾ ಹೇಳದೇ ನೀನೆನ್ನ(ಲ್ಲ) ಅರಿಯಬೇಕೆಂಬೋ ಖೊಟ್ಟಿ ಕನಸುಗಳ ಜಾತ್ರೆಯಲಿ ಮೌನದ ಬೆನ್ನಿಗಂಟಿ ಕಳೆದು ಹೋದರೆ' ಜೊತೆಗೂಡಿ ಬಹು ದೂರ ಹೆಗಲಿಗಾತು ನಡೆವುದು ಹ್ಯಾಂಗೆ, ನಗುವುದು ಹ್ಯಾಂಗೆ...!?
#ಪ್ರೀತಿ_ನೇಹ_ನೆಂಟಸ್ತಿಕೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)