Friday, December 22, 2017

ಗೊಂಚಲು - ಎರಡ್ನೂರಾ ನಲ್ವತ್ನಾಕು.....

ಏನಂತ ಹೇಳಲಿ‌.....

ನನ್ನ ಯೋಚನೆ ಎಷ್ಟು ಸರಿಯೋ ನಂಗೆ ಗೊತ್ತಿಲ್ಲ...
ಆದರೆ ಹೀಗನ್ನಿಸುತ್ತೆ - ಇಂದಿನ ಸ್ಥಿತಿಯಲ್ಲಿ ಬೆಳೆದ ಹೆಣ್ಣುಮಗಳಿಗಿಂತ ಹೆಚ್ಚಾಗಿ ಬೆಳೆಯುತ್ತಿರುವ ಗಂಡು ಪ್ರಾಣಿಗಳಿಗೆ ಸ್ವಚ್ಛ ಮತ್ತು ಗೌರವಯುತ ಲೈಂಗಿಕ ಶಿಕ್ಷಣದ ಅಗತ್ಯ ಇದೆ ಅಂತ...
ಹೆಣ್ಣನ್ನು ಗೌರವದಿಂದ ಕಾಣುವ ಮತ್ತು ಲೈಂಗಿಕತೆಯನ್ನೂ ಗೌರವಯುತವಾಗಿ ನಿಭಾಯಿಸುವ ಬಗೆಗಿನ ಶಿಕ್ಷಣ ಎಳವೆಯಲ್ಲೇ (ಅಗತ್ಯವಿದ್ದಾಗಲೇ) ಮನೆಯಲ್ಲೇ ನೀಡುವಂತ ವಾತಾವರಣ ನಿರ್ಮಾಣವಾಗಬೇಕು...
ಹುಡುಗಿಯೊಬ್ಬಳು ಮೈನೆರೆದಾಗ ತಾಯಿ ಹೇಗೆಲ್ಲ ಆಕೆಯ ಜವಾಬ್ದಾರಿಗಳ ಬಗ್ಗೆ ಆಕೆಗೆ ತಿಳಿ ಹೇಳ್ತಾಳೋ ಅಂತೆಯೇ ಬೆಳೆಯುತ್ತಿರುವ ಮಗನಿಗೂ ಹೇಳಬೇಕಾದ್ದು ತಂದೆ ತಾಯರ ಕರ್ತವ್ಯ...
ಆದರೆ ನಮ್ಮ ಕುಟುಂಬಗಳಲ್ಲಿ ಗಂಡು ತಾನೆ ಎಲ್ಲಾ ತಿಳ್ಕೋತಾನೆ ಅಂತ ಸುಮ್ಮನಾಗಿಬಿಡೋದೇ ಜಾಸ್ತಿ...
ಗಂಡು ಮಕ್ಕಳು ಎಲ್ಲೋ ಓದಿ, ಯಾರಿಂದಲೋ ಕೇಳಿ, ಇನ್ನೆಲ್ಲೋ ನೋಡಬಾರದ್ದನ್ನು ನೋಡಬಾರದ ವಯಸ್ಸಲ್ಲಿ ನೋಡಿ, ಸೆಕ್ಸ್ ಬಗ್ಗೆ ಅತಿರಂಜಿತ ಕಲ್ಪನೆ ಬೆಳೆಸಿಕೊಂಡು ಅದನ್ನು ನಿಗ್ರಸಿಕೊಳ್ಳುವಲ್ಲಿ, ತನ್ನನ್ನು ತಾನು ನಿರ್ವಹಿಸಿಕೊಳ್ಳುವಲ್ಲಿ ಗೊಂದಲಕ್ಕೆ ಬೀಳುವುದೇ ಹೆಚ್ಚು...
ಸಭ್ಯ ಕುಟುಂಬದಲ್ಲಾದರೆ ಹೇಗೋ ನಿಭಾಯಿಸಿಕೊಂಡು ಬಿಡ್ತಾರೆ...
ಅದಿಲ್ಲದೇ ಕ್ರೌರ್ಯದ ಸಾಥ್ ಸಿಕ್ಕಿಬಿಟ್ಟರೆ ಎಂದಿಗಿದ್ದರೂ ಹೆಪ್ಪುಗಟ್ಟಿದ ಅತಿರಂಜಿತ ಕಲ್ಪನೆ ಅಪಾಯವೇ...

ಕಾಮ ಕೆಟ್ಟದ್ದು ಅನ್ನುವ ಬದಲು ಯಾಕೆ ಮತ್ತು ಹೇಗಾದಾಗ ಕೆಟ್ಟದ್ದು ಹಾಗೂ ಕಾಡೋ ಕಾಮವನ್ನು ನಿಭಾಯಿಸಿಕೊಳ್ಳಬಲ್ಲ ಸಹಜ ಹಾಗೂ ಸಭ್ಯ ಮಾರ್ಗಗಳೇನು ಎಂಬುದನ್ನು, ಅಲ್ಲದೇ ಹೆಣ್ಣನ್ನು ಗೌರವಿಸು ಅಂತಷ್ಟೇ ಹೇಳುವ ಬದಲು ಹೇಗೆ ಮತ್ತು ಯಾಕೆ ಗೌರವಿಸಬೇಕೆಂಬುದನ್ನು, ಅಂತೆಯೇ ಹೆಣ್ಣುಮಕ್ಕಳಿಗೂ ಅವರ ಜವಾಬ್ದಾರಿ ಮತ್ತು ಬೇಲಿಗಳ ಬಗೆಗಷ್ಟೇ ಅಲ್ಲದೇ ಆತ್ಮ ರಕ್ಷಣಾ ತಂತ್ರೋಪಾಯಗಳನ್ನೂ ಅಗತ್ಯ ವಯೋಮಾನದಲ್ಲೇ ತಮ್ಮ ಬದುಕುಗಳ ಮೂಲಕ, ಆಪ್ತ ಸಮಾಲೋಚನೆಯ ಮೂಲಕ ಮನೆಯಲ್ಲೇ ಪಾಲಕರೇ ತಿಳಿಹೇಳುವಂತ ವಾತಾವರಣ ನಮ್ಮ ಸಮಾಜದಲ್ಲಿ ರೂಪುಗೊಂಡಾಗ ಇಂಥ ಹೇಯ ಅತ್ಯಾಚಾರಗಳು ನಡೆಯುವುದು ಕಡಿಮೆ ಆಗಬಹುದೇನೋ...

ಆದರೆ ಪ್ರೀತಿಯನ್ನೂ ಕದ್ದು ಮುಚ್ಚಿ ವ್ಯಕ್ತಪಡಿಸೋ - ಅತ್ಯಾಚಾರದಲ್ಲಿ ನಲುಗಿದ ಹೆಣ್ಣು ಜೀವವನ್ನೂ ದಲಿತ ಮಹಿಳೆ, ಬಲಿತ ಹುಡುಗಿ ಅಂತೆಲ್ಲ ವಿಂಗಡಿಸಿ ಮಾತಾಡೋ ಸುಸಂಸ್ಕೃತ (?) ಜನರಿಂದ ಯಾವ ಅರಿವಿನ ಬೆಳಕನ್ನು ನಿರೀಕ್ಷಿಸಲಾದೀತು...
ಇನ್ನು ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಯಾರೇನು ಪ್ರತಿಕ್ರಿಯಿಸಿದರು, ಯಾರ ಪ್ರತಿಕ್ರಿಯೆಗೆ ಎಷ್ಟು ಲೈಕು - ಎಷ್ಟು ಕಮೆಂಟು ಎಂದು ಲೆಕ್ಕ ಹಾಕುವ, ಯಾರು ಹೇಗೆ ಪ್ರತಿಕ್ರಿಯಿಸಬೇಕು ಅಂತ ಫರ್ಮಾನು ಹೊಡೆಸುವ ಬುದ್ಧಿವಂತರೇ ತುಂಬಿರುವಾಗ ಬೊಬ್ಬೆಯಷ್ಟೇ ಕೇಳೀತೆ ಹೊರತೂ ಅಲ್ಲೆಲ್ಲೋ ಬೀದಿ ಬದಿಯಲ್ಲಿಯ ಕ್ರೌರ್ಯ ನಿಂತೀತು ಅಂತ ಬಯಸುವುದು ಹೇಗೆ...
ಹೃದ್ಗತವಾದ ಅರಿವು ಕಾನೂನಿಗಿಂತ ಎಷ್ಟೋ ಪಟ್ಟು ಪ್ರಭಲವೇ ಆದರೂ, ನಿರ್ಭಯವಾಗಿ ಅತ್ಯಾಚಾರ ಎಸಗಬಲ್ಲಷ್ಟು ಕ್ರೌರ್ಯವು ಮನಸ್ಸು ಮತ್ತು ದೇಹದಲ್ಲಿ ಬೆಳೆದವರನ್ನೂ ಅಪ್ರಾಪ್ತರು ಹಾಗೂ ಇನ್ನೂ ಏನೇನೋ ಕಾರಣಗಳ ಮೂಲಕ ಕ್ಷಮಿಸಬಲ್ಲ ಕಾನೂನು ಇನ್ನೂ ಜೀವಂತ ಇರುವ ನೆಲದಲ್ಲಿ ನ್ಯಾಯಕ್ಕೆ ಉಸಿರು ದಕ್ಕೀತು ಅಂತ ನಂಬುವುದು ಹೇಗೆ..?

ಗಂಭೀರ ವಿಷಯಗಳನ್ನು ಗಂಭೀರವಾಗಿಯೇ ಸ್ಪಷ್ಟವಾಗಿ ಚರ್ಚಿಸಬಲ್ಲ ಪ್ರಭುದ್ಧತೆ ಇಲ್ಲದ ನನ್ನಂತವರಲ್ಲಿ ಏನೋ ತೀವ್ರ ಗೊಂದಲವಷ್ಟೇ ಉಳಿಯುತ್ತೆ...

#ಒಂದೊಂದೇ ಮನೆ ಮನಸ್ಸುಗಳು ಚೊಕ್ಕವಾಗುತ್ತ ಸಾಗಿದರೆ ಬೀದಿಯೂ ಚೊಕ್ಕವಾದೀತೇನೋ - ನಿಧಾನವಾಗಿಯಾದರೂ...

*** ಎಂದೋ ಎಲ್ಲಿಯೋ ನೀಡಿದ ಪ್ರತಿಕ್ರಿಯೆ ಇಂದೀಗ ಇನ್ನಷ್ಟು ವಿಸ್ತಾರವಾಗಿ ಮತ್ತೆ ನೆನಪಾಯಿತು...

Tuesday, December 19, 2017

ಗೊಂಚಲು - ಎರಡ್ನೂರಾ ನಲ್ವತ್ಮೂರು.....

ಸಂಭಾಷಣೆ.....
(ಕಥೆಯೇ ಬದುಕಾಗುವಲ್ಲಿ...)

ಏನೇ ಸುಂದ್ರಿ ಬದ್ಕಿದ್ಯಾ...?
ಹಾಹಾಹಾ... ಹೋಗ್ತಿಲ್ಲ ಜೀವ - ಸಾವು ಬಲು ತುಟ್ಟಿ - ಸುಲಭಕ್ಕೆ ದಕ್ಕಲ್ಲ ಅನ್ಸತ್ತೆ - ಅದೂ ಅಲ್ದೆ ಬದುಕು ಕಾಡದೇ ಸಾವಿಗೂ ಬೆಲೆ ಇಲ್ಲ...

ನಿದ್ದೆ ಆಯ್ತಾ...?
ಮನೆ ತುಂಬ ಇರುವೆಗಳು, ತಲೇಗ್ ಹತ್ಕೊಂಬಿಡ್ತಾವೆ - ದಿಂಬು ಒದ್ದೆ, ನಿದ್ದೆ ಕಷ್ಟ...

ಊಟಕ್ಕೇನು..?
ರಟ್ಟೆ ಬಲ ಸತ್ರೂ ಬಾಯಿ ರುಚಿ ಸಾಯಲ್ಲ ನೋಡು - ಅನ್ನ, ಮಜ್ಗೆ, ನೆಂಚ್ಕೊಳ್ಳೋಕೆ ಇದ್ಯಲ್ಲ ಕಣ್ಣೀರು...

ಏನ್ ದರ್ಬಾರ್ ನಡೀತಿತ್ತು ಅಮ್ನೋರ್ದು...?
ಅಡಿಗೆ ಮಾಡ್ಕೊಳ್ಳೋ ಚೈತನ್ಯ ಉಡುಗಿದ್ಮೇಲೆ ಹಸಿವಾಗ್ಬಾರ‍್ದಿತ್ತು - ದೇವರ ಪೂಜೆ ಮಾಡ್ತಿದ್ದೆ - ಅವನ ಕರುಣೆ ಇರ್ಲಿ ಅಂತ ಅಲ್ಲ; ನಂಗೆ ಮಾತಿಗೊಬ್ಬ ಬೇಕಿತ್ತು...

ಸಧ್ಯ ಆಸ್ಪತ್ರೆಗೆ ಹೋಗಿದ್ಯಾ...?
ಹಾಂ... ತಪ್ಪದ್ದೇ ಹೊವ್ತೆ - ಡಾಕ್ಟ್ರು ತುಂಬಾ ಒಳ್ಳೇವ್ರು; ಚೆನ್ನಾಗಿ ವಿಚಾರಿಸ್ಕೋತಾರೆ - ಕೊಟ್ಟ ದುಡ್ಡಿಗೆ ಮೋಸ ಇಲ್ಲ...

ಮೊನ್ನೆ 'ಆ ಅವರ ಮನೆ' ಮದ್ವೆಗೆ ಹೋಗಿದ್ಯಂತೆ...
ಹೂಂ... ಹೋಗಿದ್ದೆ... ಹೊಸ ಸೀರೆ, ಗಳಿಗೇನೆ ಮುರ್ದಿರ್ಲಿಲ್ಲ... ಎಲ್ಲಾ ಚಂದ ಇದೆ ಅಂದ್ರು... ನೀ ಕೊಡ್ಸಿದ್ದು ಅಂದೆ... ಆದ್ರೂ ವಯಸ್ಸಾಯ್ತು ನೋಡು - ಹಿಂತಿರ್ಗಿ ಕಾಡ್ನಲ್ಲಿ ಬಪ್ಪಾಗ ಕಣ್ಣು ಮಂಜು ಮಂಜು...

ಈ ಸಲ ಬೆಳೆ ಜೋರಿದ್ದಡಾ ಅಲ್ದಾ...?
ಹೌದೌದು... ದುಡಿಯೋ ಕೈಗೆ ಚಿಪ್ಪಾದ್ರೂ, ಗುಡಿಯ ತಲೆಗೆ ಕಳಶ... ಹಂಗೆ....

ನಿನ್ನ ಗೆಳೆಯರೆಲ್ಲ ಹೆಂಗಿದಾವೆ - ದನ, ಕರು, ಕುನ್ನಿ, ಬೆಕ್ಕು...?
ಓsss...ಅವೊಂದೇ ನೋಡು ಇಟ್ಟ ತುತ್ತಿಗೆ ಬಡ್ಡಿ ಸೈತ ಪ್ರೀತಿ ಕೊಡೋವು... ಮೂಕ ಪ್ರಾಣಿಗಳು ಅಂತೀವಿ - ಆದ್ರೆ ಪ್ರೀತಿಗ್ಯಾವ ಭಾಷೆ ಹೇಳು - ಹತ್ರ ಸುಳಿದ್ರೆ ಸಾಕು ಮೈಯಿ ನೆಕ್ಕತ್ವೆ - “ಸುಖ ಮಾತಲ್ಲಿಲ್ಲ...”

ಪಕ್ಕದ್ ಮನೆ ಹುಡ್ಗೀರು ಇನ್ನೂ ಅಲ್ಲೇ ಇದ್ವೇನೋ...?
ಹಾಹಾ... ಹಾಂ ಅಲ್ಲೇ ಇದ್ವೇ - ಇನ್ನೊಂದು ಹೊಸ ಕೂಸು ಸೇರಿದ್ದು ಸಂತಿಗೆ...
ಜಾಸ್ತಿ ಕಾಡ್‌ಸಡ್ರೋ ನೊಂದ್ಕಂಬಲಾಗ ಪಾಪ...

ಹಬ್ಬಕ್ಕೆ ರಜೆ ಇಲ್ಯನೋ...?
ಅಯ್ಯೋ ಬಿಡೇ, ಈ ಹಬ್ಬದ್ ಹೊತ್ತಲ್ಲಿ ಊರಿಗ್ ಹೊಂಟ್ರೆ ದುಡ್ದಿದ್ದೆಲ್ಲ ಬಸ್ಸಿಗೇ ಬೇಕು ಗೊತ್ತಿದ್ದಾ...
ಹೂಂ... ಹೌದು ಬಿಡು, ತುಟ್ಟಿ ಕಾಲ... ‘--------------’ ಊಟ ಮಾಡಿ ಮಲ್ಗೋ - ಕೆಲ್ಸ ಕೆಲ್ಸ ಅಂತ ಹೊಟ್ಟೆ ಕಾಯ್ಸಡ - ನಿದ್ದೆ ಊಟ ಬಿಟ್ಟು ಕೂರೋದ್ ನೋಡದ್ರೆ ಕರುಳು ಸುಡ್ತು... ‘--------------’ ಹಾಳಾದ್ದು ಛಳಿ, ಎಷ್ಟೊತ್ಗೂ ಮೂಗು ಸೋರ‍್ತು - ಫೋನು ಇಡ್ತೆ ಆತಾ...
‘--------’ ಹಾಂ.‌‌.. ಮತ್ತೆ ಮಾಡ್ತೆ... ನೀ ಹುಶಾರು...

ಮಾತಷ್ಟೇ ಮುಗಿದದ್ದು...
ಅವಳ ಸೆರಗಿನಂಚು ಒಣಗಿದ್ದೇ ಇಲ್ವೇನೋ - ಚಿಕ್ಕೋರಿರ್ವಾಗ ನಮ್ಮಗಳ ಕೂಗು, ಮೂಗು ಒರೆಸಿ ಒರೆಸಿ ಒದ್ದೆ; ಈಗ ಬಿಡಿ ಅವಳದ್ದೇ ಕಣ್ಣಲ್ಲಿ ಸಾಕಷ್ಟು ಇಳಿಯತ್ತೆ, ಗಂಟಲು ಕಟ್ಟಿದ್ರೆ ಮೂಗೂ ಸೋರತ್ತೆ...
↝↜↺↻↝↜

ಮಮತೆಯ ಕೈತುತ್ತಲಿ ಉರಿಯುವ ನಗೆ ಹಣತೆ - ಅವಳೇ ಕಡೆದ ಅವಳುಡಿಯ ಚಿಗುರು ಕವಿತೆ...
#ಕರುಳ_ಕೈಚೀಲ_ಎದೆಹಾಲ_ಗೀತಿಕೆ...

Wednesday, December 13, 2017

ಗೊಂಚಲು - ಎರಡ್ನೂರಾ ನಲ್ವತ್ತೆರ‍್ಡು.....

ನೀರ ಮೇಲ್ಬರೆದ ಚಿತ್ರ.....

"ಪ್ರತೀಕ್ಷಾ........"
ಸಾವಿಲ್ಲದ ಸಾವಿನ ಗ್ರಂಥ......
ವಿಕ್ಷಿಪ್ತ ಬದುಕಿನ ವಿಷಾದ ಗೀತೆ........

"ಪ್ರತೀಕ್ಷಾ........"
ಒಂದು ಎದೆಗೂಡ ಬೆಳಕು.........
ಉಳುಕು ಕಾಲಿನ ಕನಸು...........

"ಪ್ರತೀಕ್ಷಾ........."
ಕನಸಲ್ಲಿ ಬರೆದ ಅರ್ಧಂಬರ್ಧ ಹಾಡು..........
ಗಿಲಕಿ ಬಿದ್ದೋದ ನೂಪುರದ ಜೋಡು..........

"ಪ್ರತೀಕ್ಷಾ........"
ಕನಸಿನೂರಿನ ಛಾವಣಿ ಇಲ್ಲದ ಗೂಡು..........
ಹಗಲ ಕಾಣದ ಪಾರಿಜಾತದ ಜಾಡು...........

"ಪ್ರತೀಕ್ಷಾ........"
ಕನಸ ತೊಟ್ಟಿಲಲಿ ಅರಳಿ ಮೈಮುರಿಯೋ ಪುಟ್ಟ ತಾರೆಯ ಹೋಳು..........
ಬೆರಗು ಕಂಗಳ ಬೆಳದಿಂಗಳ ಬಿಳಲು.........
ನನ್ನ ನಿದಿರೆಯ ಕಿವಿ ಹಿಂಡೋ ಕಿಲಕಿಲ ನಗೆಯ ಲಾಲಿ...........

"ಪ್ರತೀಕ್ಷಾ........"
ನನ್ನ ಖುಷಿಯ ಕನಸನೆಲ್ಲ ತನ್ನ ಹೆಸರಿಗೆ ಬರೆಸಿಕೊಂಡ ಕರುಳ ಹೂವು........
ಎದೆ ಅಂಗಳದಂಚಲಿ ಉದುರಿ ಹಚ್ಚೆ ಹಾಕಿದ ಮರಿ ಉಲ್ಕೆ.........

"ಪ್ರತೀಕ್ಷಾ........"
ಚಿತ್ರ ಕಾವ್ಯ:
ಗೆಳತಿ “ಸುಮತಿ ದೀಪಾ ಹೆಗಡೆ”
ಹುಡುಕ್ ಹುಡುಕಿ ಅಳಿಸೋ ಪುಟ್ಟ ಪುಟ್ಟ ಕೈಗಳಿಗೆ ಅಮ್ಮನಿಟ್ಟ ಬಾಗಿಲ ರಂಗೋಲಿ ಮೆಚ್ಚಿನ ಆಟಿಕೆ..........
ಅಪ್ಪನ ಬೆನ್ನೇರಿದರೆ ಕೂಸುಮರಿ, ಹೆಗಲೇರಿ ಅಂಬಾರಿ - ಅಜ್ಜಿಯ ಕಥೆಯ ರಾಜಕುಮಾರಿ............

"ಪ್ರತೀಕ್ಷಾ........"
ಅಂಬೆಗಾಲಿನ ಯಾಜಮಾನ್ಯ - ತೊದಲ್ನುಡಿಯ ಅಕ್ಕೋರು - ಗುಂಡು ಕಲ್ಲಿಗೆ ಹಾಲುಣಿಸೋ ಪುಟಾಣಿ ಅಮ್ಮ..............
ಒರಟು ಹಸ್ತ ಅವಳ ಚಿತ್ರ ಚಿತ್ತಾರದ ಹಾಳೆ - ಹೊಟ್ಟೆಯ ಮೇಲೆ ಪುಟ್ಟ ಗೆಜ್ಜೆಯ ಗೀರು - ಒಡೆದ ಮರಳು ಗೂಡಿಗೆ ಕಣ್ಣ ಮಳೆಯ ತರ್ಪಣ.............
ಅಳುವ ಮುನಿಸಿಗೆ ಕಾಡ ಮೌನ - ಖುಷಿಯ ಕೇಕೆಯಲಿ ಶರಧಿ ಮರ್ಮರ.........

"ಪ್ರತೀಕ್ಷಾ........"
ಕೂಸು ಹುಟ್ಟುವ ಮುನ್ನವೇ ಹೊಲಿದಿದ್ದ ಕನಸ ಕುಲಾವಿ........
ಚಿಗುರುವ ಹೊತ್ತಲ್ಲಿ ಬೇರು ಸತ್ತ ತುಳಸಿ........
ಹಳಹಳಿಸಿ ನರಕ ಸುಖ ಸವಿಯಲು ಎದೆಯಲ್ಲಿ ಕಾದಿಟ್ಟುಕೊಂಡ ಪಣತೆಯ ಪಳೆಯುಳಿಕೆ..........

ಪದ ಕಟ್ಟಲಾಗದ ಎದೆಯ ಪದಕ; ಎಷ್ಟೆಲ್ಲ ಹೇಳಬಹುದು ಅವಳ ಬಗ್ಗೆ - ಹೇಳಿಯೂ ಹೇಳದಿರುವುದೇ ಚಂದ ಬಗೆ.........

***ಯಾರು - ಎತ್ತ ಎಂದು ಕೇಳೋ, ಅರ್ಥ - ಗಿರ್ಥಗಳ ಹುಡುಕೋ ಪ್ರಶ್ನೆಗಳನ್ನು ನಿಷೇಧಿಸಲಾಗಿದೆ...

Saturday, December 9, 2017

ಗೊಂಚಲು - ಎರಡ್ನೂರಾ ನಲ್ವತ್ತೊಂದು.....

___ವಿವರ ಗೊತ್ತಿಲ್ಲದ ಸಾಲುಗಳು.....

ಶ್ರೀ,
ಕಾಡುವ ಎಲ್ಲಾ ಗೊಂದಲಗಳಿಗೂ ಸಾವೊಂದೇ ಉತ್ತರವಾಗಬಾರದಾದರೆ ಬದುಕಿನ ಪ್ರತಿ ಹೆಜ್ಜೆಯನ್ನೂ ಪ್ರಶ್ನಿಸಿಕೋ - ಪ್ರತಿ ಪ್ರಶ್ನೋತ್ತರಗಳೊಡನೆ ಆಪ್ತವಾಗಿ ಸಂವಾಧಿಸು - ಹಾದಿಯ ಕೊಟ್ಟ ಕೊನೆಯಲ್ಲಿ ಜೋಳಿಗೆಯಲ್ಲಿಷ್ಟು ಕುಶಲ ಸತ್ಯಗಳು ಜೊತೆಗುಳಿದಾವು...
ಬದುಕಿಗೆ ಅನುಭವಗಳೇ ಪ್ರಮಾಣವಾದರೆ; ಪ್ರಶ್ನೆ ಮತ್ತು ಸೃಜನಶೀಲ ಒಳ ಹೊರ ಸಂವಾದ ಆ ಅನುಭವ, ಅನುಭಾವಗಳ ವಿಸ್ತಾರದ ಸ್ಪಷ್ಟ ವಾಹಕಗಳು...
ಯಾವ ಪ್ರಶ್ನೆಗಳಿಗೂ ನಿಲುಕದ, ಪ್ರಶ್ನಿಸಲಾಗದೆ ಒಪ್ಪಲೇಬೇಕಾದ ಸತ್ಯ ಇದ್ದರೆ ಅದು ಸಾವು ಮಾತ್ರ...
#ನನ್ನ_ಆಧ್ಯಾತ್ಮ...
⇍↰⇎↱⇏

ಕವಳಕ್ಕೆ ಬೇಕಾದ ಹಾಗೆ ಕಳೆ ಕಳೆಯ ಮುಖವಾಡಗಳ ಚಿತ್ರ ವಿಚಿತ್ರ ಅಲಂಕಾರದಲಿ ಸಲೀಸು ಬದುಕುವ ಕಲೆಯ ಹೃದಯಸ್ತ ಮಾಡಿಕೊಳ್ಳಲಾಗದೆ ಸೋತದ್ದೂ ಇರಬೇಕು ಸೃಷ್ಟಿಯ ಬೇರಾವ ಪ್ರಾಣಿವರ್ಗವೂ ಮನುಷ್ಯನಷ್ಟು ವೇಗವಾಗಿ, ವಿಶಾಲವಾಗಿ ಮತ್ತು ವಿಕಾರವಾಗಿ ವಿಕಾಸ ಹೊಂದದೇ ಇರಲು ಒಂದು ಘನ ಕಾರಣ...
#ನಾನೆಂಬೋ_ತುರಂಗಬಲ_ಛದ್ಮವೇಷಿ...
⇍↰⇎↱⇏

ಇರುವಿಕೆ ಒಂದು ನಂಬಿಕೆ - ಅಂತೆಯೇ ಇಲ್ಲದಿರುವಿಕೆಯೂ ಒಂದು ನಂಬಿಕೆಯೇ...
ಬರುವಾಗ ತಂದದ್ದಷ್ಟನ್ನು ಕೂಡ ಹೋಗುವಾಗ ಒಯ್ಯಲಾಗುವುದು ಕಷ್ಟ; ಆದರೂ ಇರುವಾಗ ಉಂಡದ್ದೂ ಸುಳ್ಳಲ್ಲವಲ್ಲ...
ನಶ್ವರತೆಯ ಬೆನ್ನು ಬಿದ್ದರೆ ಈಶ್ವರನೂ ನಶ್ವರನೇ...
ಹೆಜ್ಜೆಗೊಬ್ಬ ಗುರು - ಕರೆದು ನಿಲ್ಲಿಸಿ ಎಲ್ಲರೂ ಒಂದೇ ದಾರಿ ಹೇಳಿದರೆ ಭಯವಾಗುತ್ತೆ; ಕಣ್ಣಿಗೆ ಬಣ್ಣಗುರುಡು ಅಂಟಿಕೊಂಡು ನನ್ನೊಳಗಣ ಹಾದಿ ಕಾಣದೇ ಹೊದೀತಲ್ಲ...
ಚಿತ್ರ ಬರೆದ ಬೆರಳು:
ಗೆಳತಿ ‘ಸುಮತಿ ದೀಪಾ ಹೆಗಡೆ’
ಅಪರಿಚಿತ ಕಾಡಿನಲ್ಲಿ ಜಾಡು ತಪ್ಪಬೇಕು - ಗುರಿಯೂ, ದಾರಿಯೂ ನಂದ್‌ನಂದೇ ಆದ ಸೊಕ್ಕು ನನಗಿರಲಿ - ನೀರು, ನಿಡಿ ಸಿಗದ ಬಯಲಲ್ಲಿ ಘಟ ಬಿದ್ದರೂ ಮೋಸವಿಲ್ಲ; ಹುಳದ ಹಸಿವಿಗಾದೀತು...
ನನ್ನ ಬದುಕ ನೊಗ ನಾನೇ ಹೊತ್ತು ತುಳಿದ ನನ್ನದೇ ಹಾದಿಯಲಿ ಹೆಟ್ಟಿದ ಮುಳ್ಳು, ಮೆತ್ತಿದ ಧೂಳು, ಕಟ್ಟಿದ ತೋರಣ, ಉಂಡೆದ್ದ ಹೂರಣ - ಓಹ್, ಹೇಳದೇ ಉಳಿದ ಎಷ್ಟೆಲ್ಲ ಹಿತ್ತಲ ಕಥೆಗಳೋ ನೆತ್ತರು ಬತ್ತಿದ ಅನುಭಾವಿ ಪಾದಗಳಡಿಯಲಿ...
ನನ್ನ ದೇವರು ನನ್ನ ಕಣ್ಣಲ್ಲೇ ಕಾಣಲಿ ಬಿಡಿ...
#ನಾನು...
             ______ವಿವರ ಗೊತ್ತಿಲ್ಲದ ಸಾಲುಗಳು...
⇍↰⇎↱⇏

ಅಲೆ ತೊಳೆದು ಹೋದ ದಂಡೆಯ ಎದೆ ಮೇಲೆ ಉಳಿದ ಮೌನದ ಅಸ್ಪಷ್ಟ ಹೆಜ್ಜೆ ಗುರುತು...
ದಂಡೆ ಸೆರಗಿನಂಚಲ್ಲಿ ಅಲೆ ಎಸೆದು ಹೋದ ಶಂಖದೊಡಲಲಿ ಕಡಲೊಡಲ ಮರ್ಮರ...
ನೆಂಚಿಕೊಳ್ಳಲು, ಹಂಚಿಕೊಳ್ಳಲು ನೋವೊಂದೇ ಇರುವಲ್ಲಿ ಕಣ್ಣಂಚು ಮೀಯುವಾಗ ಎದೆಯ ಆರ್ದ್ರತೆಗೆ ಪದಗಳ ಪಾದ ತೋಯುತ್ತದೆ...
ಪೂಜೆಯಿಲ್ಲದ ಪಾಳು ಗುಡಿಯ ಒಂಟಿ ಕೈಯ ದೇವರೆದುರಿನ ಘಂಟೆಯ ಅಸ್ತಿತ್ವದಂತೆ - ಕನಸು...
ಅಮ್ಮನ ಕೈ ಹಿಡಿದು ಮಗು ತನ್ನ ತಾ ಸಾಂತ್ವನಿಸಿಕೊಂಡಂತೆ - ನೇಹದಪ್ಪುಗೆ...
ಮಾತು ಮೌನಗಳ ಆತು ಕೂತಿರುವ ಪ್ರೀತಿಗೆ ಪ್ರೀತಿ ಸೋತು ಪ್ರೀತಿಯೊಂದೇ ಬದುಕ ಭಾಷ್ಯವಾಗಲಿ...
#ಭಾವ_ಬಿಡಿಚಿತ್ರ_ಬದುಕ_ಚೌಕಟ್ಟು...
⇍↰⇎↱⇏

ಅಲ್ಲಿ -
ಹೂ ಅರಳದೇ ದುಂಬಿ ಕೂರುವುದಿಲ್ಲ - ಕೂತರೂ ರಸವಿಲ್ಲ, ಫಲವಿಲ್ಲ...
ಊರೆಲ್ಲ ಅಲೆದ ಚಿಟ್ಟೆ ಕೂತಲ್ಲೆಲ್ಲ ಕಾಲು ಕೊಡವಿತು - ಚಿಟ್ಟೆ ಪಾದದ ಧೂಳಿಗೆ ಹೂಬನದಲೀಗ ಗರ್ಭೋತ್ಸವ...
ದುಂಬಿಯ ಹಾಡು ಹೂವು ಕಲಿತಿಲ್ಲ - ಹೂವಿನ ಗಂಧ ಚಿಟ್ಟೆ ಮೈಗಿಲ್ಲ - ಭಲೇ! ತಮ್ಮ ತಮ್ಮಂತೆ ತಾವಿದ್ದೇ ಬೆರೆತು ಬಾಳುವ ಸೊಗವ ಕಲಿಸಿದ್ಯಾರು ಅವರಿಗೆ...
ಇಲ್ಲೋ -
ಅವನ - ಅವಳ ನೇಹದ ಸವಿ ಸಾಂಗತ್ಯ ಸಂಗಾತಿ ಪಟ್ಟದಲಿ ಕೂತು ಸಂಸಾರವಾಗಿ ಗುಣಿಸ ಹೋಗಿ ಕೂಡಿದ್ದು ಕೂಡ ಭಾಗವಾಗಿ ಶೇಷಾವಶೇಷಗಳಲ್ಲಿ ಕೊರಗಿ ಸೋತದ್ದೇ ಹೆಚ್ಚು...
ಆದರೆ ಅದೇ ಸಂಗಾತಿಗಳ ಸಾಂಗತ್ಯ ನೇಹ ಭಾವದ ಬಂಡಿಯನೇರಿ ಸಾಗುವೊಲು ಬದುಕ ಹಾದಿ ತುಂಬ ನಲಿವಿನುತ್ಸವದ ಬೆಳಕಿನ ಸರ ಬೆಳಗಿದ್ದೂ ಸುಳ್ಳಲ್ಲ..
#ನಾನು...
                   ______ವಿವರ ಗೊತ್ತಿಲ್ಲದ ಸಾಲುಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, December 6, 2017

ಗೊಂಚಲು - ಎರಡ್ನೂರಾ ನಲ್ವತ್ತು.....

ಪ್ರೇಮ - ಕಾಮದ ಉಡಿಯೊಳಗೆ.....   

ವಿರಳ ಅಪವಾದಗಳ ಹೊರತುಪಡಿಸಿದರೆ -
ಪ್ರಜ್ಞೆಯ ಬಡಿದು ಮಲಗಿಸೋ ಪ್ರೇಮದ ಅಮಲು ಸೃಷ್ಟಿಸುವ ಮನಸಿನ ಹುಚ್ಚು ಚಾಂಚಲ್ಯಕೊಂದು ವಿರಾಮವೀಯ್ದು ಪ್ರೇಮದ ನಿರರ್ಥಕತೆಯ ಸಾಬೀತುಪಡಿಸಲು ಮತ್ತು ಅದೇ ಹೊತ್ತಿಗೆ ಹೊತ್ತಿ ಉರಿಯುವ ಹರೆಯದ ದೇಹಾಗ್ನಿಗೆ ಒಂದು ನಿರ್ಭಯ, ನಿರಾಳ ಸುಖದ ಗೂಡು ಕಟ್ಟಿಕೊಡಲು ಹುಟ್ಟಿಕೊಂಡ ಸುಂದರ ವ್ಯವಸ್ಥೆಯಾ ಮದುವೆ ಎಂದರೆ ಅಂತನ್ನಿಸುತ್ತೆ ಹೆಚ್ಚಿನ ಸಲ...
ಪ್ರಕೃತಿಯ ಆಟದಲ್ಲಾದರೋ ಪ್ರೇಮ ಪ್ರಕೃತಿಯ ಮೂಲ ಧರ್ಮವಾದ ಜೀವ ಸೃಷ್ಟಿ ವಿಸ್ತಾರದ ಹರಿವಿನ ರೂವಾರಿಯಾದ ಕಾಮದ ಇನ್ನೊಂದು ಭಾವಾಭಿವ್ಯಕ್ತಿ ಅಥವಾ ಅಭಯದ ಭ್ರಮಾ ವಲಯ ಅಷ್ಟೇ ಅಂತನ್ನಿಸುತ್ತೆ...
ಉಳಿದಂತೆ ಪ್ರೇಮವೆಂದರೂ, ಮದುವೆಯೆಂದರೂ ಶರತ್ತುಬದ್ಧ ನಿರಂತರ ಹೊಂದಾಣಿಕೆ ಮತ್ತು ಅವಲಂಬನೆ ಅಷ್ಟೇಯೇನೊ...
#ಎಂದೂ_ಸ್ಪಷ್ಟವಾಗದ_ಪ್ರೇಮ_ಕಾಮದ_ಪರಿಭಾಷೆ...
➴⇴➶⇴➴

ಅಸೀಮ ಸ್ವಾತಂತ್ರ್ಯ ಹಾಗೂ ಅಚಲ ನಿರ್ಭಯತೆಯನ್ನು ಎತ್ತಿಕೊಡಬೇಕಿದ್ದ ಪ್ರೇಮವನ್ನು ಸ್ವಾಧೀನತೆಯ ಚೌಕಟ್ಟಿನಲ್ಲಿ ಬಂಧಿಯಾಗುವಂತೆ ಮತ್ತು ಬೇಶರತ್ ಸೊಗದ ಬ್ರಮ್ಹೋತ್ಸವವಾಗಬೇಕಿದ್ದ ಪ್ರಕೃತಿಯ ಕೈಗೂಸಾದ ಕಾಮವನ್ನು ನಿಶೆಯ ನಿಟ್ಟುಸಿರಾಗುವಂತೆ ರೂಪಿಸಿದ ಒಂದೇ ದಾರದ ಭದ್ರ ಕೋಟೆ "ಮದುವೆ..."
#ಜೀರ್ಣವಾಗದ_ಕಹಿಸತ್ಯ...
➴⇴➶⇴➴

ಅಮ್ಮ - ಅಪ್ಪ, ಇನ್ಯಾರೋ ಹಿರಿಯ ಬಂಧು ಅಥವಾ ಸಲೀಸು ಜೊತೆ ಸಿಗುವ ಸಹಚಾರಿ ಬಂಧ ಇವರೆಲ್ಲ ನಿಜದ ಕಳಕಳಿಯಲಿ ತೋರುವ ಪ್ರೀತಿ, ಅಕ್ಕರೆ, ಕಾಳಜಿಗಳು ಸಹ ನಮಗೆ ಕಿರಿಕಿರಿಯಂತೆ, ಕಟ್ಟಳೆಯಂತೆ ತೋರುತ್ತೆ ಹೆಚ್ಚಿನ ಸಲ - ಸಲಿಗೆ ಸದರವಾಗೋ ಬಿಂದು ಯಾವುದು...?
ಅದೇ ನಮ್ಮ ಮೋಹದ ಯಾರೋ ಭಿನ್ನ ಲಿಂಗಿ ಯಾವ ಭಾವ ತೀವ್ರತೆಯೂ ಇಲ್ಲದೇ ಒಂದು ಔಪಚಾರಿಕತೆಗೆ ಆಡುವ ಪ್ರೀತಿ, ಅಕ್ಕರೆ, ಕಾಳಜಿಯ ಸಹಜ ಮಾತುಗಳು ಕೂಡ ಅವರ ವ್ಯಕ್ತಿತ್ವದ ಹಿರಿಮೆಯಂತೆ ತೋರಿ ನಮ್ಮೆದೆಯ ಆಪ್ತತೆಯ ರಹದಾರಿ ಚಕ್ಕನೆ ತೆರೆದುಕೊಳ್ಳುತ್ತದೆ; ಇದಿನ್ನೂ ಮುಂದೆ ಹೋದಲ್ಲಿ ಮೋಹವೇ ತರತರ ಕವಲಾಗಿ ಹೊಸ ಹೊಸ ಹೆಸರು ಆರೋಪಿಸಲ್ಪಡುವುದೂ ಉಂಟಲ್ಲ - ಈ ಪಲ್ಲಟದ ಹಿಂದೆ ಸಂಚರಿಸುವ ಶಕ್ತಿ ಯಾವುದು...??
ಈ ನಡುವೆ ನಿಯತಿಯ ಪ್ರೀತಿ, ಕಾಳಜಿಗಳು ಅದನ್ನು ತೋರುವವರ ಜವಾಬ್ದಾರಿ ಅಥವಾ ದೌರ್ಬಲ್ಯದಂತೆ ಉಪಚರಿಸಲ್ಪಡುವುದು ಎಂಥ ದುರಂತ...!!! :(
#ದಿಕ್ಕು_ನೋಡದೆ_ತನ್ನಾಸೆಯಲ್ಲಿ_ತಾನೇ_ಅಂತಿಮನೆಂಬಂತೆ_ಸೊಕ್ಕಿ_ಹರಿವ_ಮನಸು...
➴⇴➶⇴➴

ಪ್ರೇಮಕ್ಕೆ ದಾರದ ಸಾಕ್ಷಿ ಸೃಷ್ಟಿಸಿ - ಕಾಮಕ್ಕೆ ಕತ್ತಲನ್ನು ಆಯ್ದುಕೊಂಡ ಕೂಚಂಭಟ್ಟ, ತ್ರಿಶಂಕು ಮನಸಿನ ಮನುಷ್ಯ ಪ್ರಾಣಿ ಬೇಲಿಯನೊಲ್ಲದ ಪ್ರಕೃತಿಗೆ ಅನೈತಿಕತೆಯ ಪಟ್ಟ ಕಟ್ಟಿದ...
#ಶವ_ಮೆರವಣಿಗೆ...
                __ವಿವರ ಗೊತ್ತಿಲ್ಲದ ಸಾಲುಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, December 5, 2017

ಗೊಂಚಲು - ಎರಡ್ನೂರಾ ಮೂವತ್ತೊಂಭತ್ತು.....

ಕವಿತೆ_ದೇಹಬಂಧ_ಅವಳು_ಆತ್ಮಾನುಸಂಧಾನ.....

ಹೆಣ ಭಾರದ ನೋವೂ ವಜ್ಜೆ ಇಳಿಸಿಕೊಂಡಂತೆ ಹಗುರ ಅಲ್ವಾ ಹೆಗಲು ತಬ್ಬೋ ಆಪ್ತ ಸ್ಪರ್ಷದಲಿ...
ಮೌನ ಮಾತಾಗಲು, ಮಾತು ಹಿತವಾಗಲು "ಸ್ಪರ್ಷ" ಭಾವ ಸೇತು...
ಒಂದರೆ ಚಣ ಬೆಸೆದ ಹಸ್ತ - ಒಂದ್ಯಾವುದೋ ಬಿಗಿ ತಬ್ಬುಗೆ - ಆಗೆಲ್ಲೋ ನೇವರಿಸಿದ ನೆತ್ತಿ - ಅದ್ಯಾವಾಗಲೋ ಸುಸ್ತಲ್ಲಿ ತೊಡೆ ಮೇಲಿಟ್ಟ ತಲೆ - ಕಣ್ಣ ಕಟ್ಟೆ ಒಡೆಯುವಾಗ ಹಣೆಗಿಟ್ಟ ಪ್ರೀತಿ ಪಪ್ಪಿ...
ಮತ್ತೆ ಮತ್ತೆ ಅದದನೇ ನೆನೆ ಹಾಕಿ ಮೆಲ್ಲುತಾಳೆ ಗೆಳತಿ...
#ಎದೆಯ_ಮಾಡುಗುಳಿಯಲಿ_ನೆನಪಿನ_ಚಿಮಣಿ_ಆರದಂತೆ_ಹಚ್ಚಿಟ್ಟು...
⇅↩↯↪⇅

ಸ್ನೇಹಕ್ಕೆ ಸ್ನೇಹವೇ ಕಾಲಕೂ ಕೈಹಿಡಿದು ಕಾಯುವ ಅದ್ವೈತ ಕಾಣಿಕೆ...
ಕಂಬನಿಯನೂ ಮುಂಬನಿಯಂತಾಗಿಸಿ ಮಾತು - ಮೌನದ ಕಿರು ಬೆರಳಲೇ ಎದೆಯ ಗೂಡಿಗೆ ಬೆಳಕ ದಾಟಿಸುವ ನಗೆಯ ಅಮೃತಗಿಂಡಿ...
#ಚೂರು_ಒಲವ_ಕೊಟ್ಟು_ಕೊಳುವ_ಜೋಡಿ ರಾಗವದು...
⇅↩↯↪⇅

"ಪ್ರೀತಿ ಹಿರಿದಾದಷ್ಟೂ ಅಂತರಗಳು ಅಳಿಯುತ್ತವಂತೆ - ದೂರಾಭಾರವ ಲೆಕ್ಕಿಸದ ಆಪ್ತಾನುಭಾವಕ್ಕೆ ಮನಸೇ ಪ್ರಮಾಣ..."
ಬೆಪ್ಪು ಹುಡುಗೀ -
ಇಲ್ಲೆಲ್ಲೋ ಕುಳಿತವನ 'ನಾನಿದೀನಿ ಜೊತೆಗೆ' ಅನ್ನೋ ಒಂದು ಪುಟ್ಟ ಆಪ್ತ ಭಾವದ ಮಾತಿನ ಭರವಸೆ, 'ಒಳಿತಾಗಲಿ ನಿಂಗೆ' ಅನ್ನೋ ಸರಳ ಪ್ರಾರ್ಥನೆಯ ಸ್ಪರ್ಷ ಅಲ್ಲೆಲ್ಲೋ ನಡು ಹಾದಿಯಲಿ ಸಣ್ಣಗೆ ಕಂಗೆಟ್ಟು ನಿಂತ ನಿನ್ನ ಹೆಜ್ಜೆಗೆ ಮುಂಬರಿಯಲು ತುಸುವೇ ಧೈರ್ಯವ ಎತ್ತಿ ಕೊಡುವುದಾದರೂ ಬೆಸೆದ ಈ ನೇಹ ಸಾರ್ಥಕ ಕಣೇ...
ನಿನ್ನ ನೋವ ಹೀರಲಾರೆನಾದರೂ ಕಣ್ಣ ಹನಿಗೊಂದು ಅಭಯದ ನುಡಿವಸ್ತ್ರವಾದೇನು...
#ನಾನಿದೀನ್ಕಣೇ_ಇಲ್ಲೇನೆ... #ನನ್ನೆಲ್ಲ_ಪ್ರಾರ್ಥನೆಯಲ್ಲಿ_ಹಿರಿಪಾಲು_ನಿಂದೇನೆ...
⇅↩↯↪⇅

ಕೊರಗುಳಿಯದಿರುವಷ್ಟು ನಲ್ಮೆಯಾಪ್ತತೆ,  ಬೆರಗಳಿಯದಿರುವಷ್ಟು ನವಿರು ಅಪರಿಚಿತತೆ - ಕೆಲವು ಹಾಡಿಗಳ ಒಡನಾಟ ಹಾಗಿದ್ದರೇನೆ ಚಂದವೇನೋ...
#ಕವಿತೆ_ದೇಹಬಂಧ_ಅವಳು_ಆತ್ಮಾನುಸಂಧಾನ...
⇅↩↯↪⇅

ಗಾಢ ಕತ್ತಲಿಗೂ ಬೆಳಕಿನದೇ ಧ್ಯಾನವಿದ್ದಂತಿದೆ - ಪುಟಾಣಿ ಬೆಳಕ ಕುಡಿಯೊಂದಿಗೂ ತನ್ನ ಅಸ್ತಿತ್ವವನೇ ಕರಗಿಸಿಕೊಂಡು ಬೆರೆತುಹೋಗುವ ನಿರ್ಮೋಹಿ ಕತ್ತಲಾಗಬಾರದೆ ಆನು, ಅವಳ ನೇಹದ ಎದೆ ಗುಡಿಯಲ್ಲಿ...
ಇಂಥದ್ದೇ ಯಾವುದೋ ಒಂದು ಹಬ್ಬದ ಹಿಂಚು ಮುಂಚಿನ ದಿನದಲ್ಲಂತೆ ಅವಳು ಬೆಳಕಂತೆ ಎದುರು ಬಂದು ತಾನಾಗಿ ಕೈಕುಲುಕಿದ್ದು - ಈ ಹೆಳವ ಬದುಕಿಗಿನ್ನೊಂದು ಅಕಾರಣ ಅಕ್ಕರೆಯ ಮಡಿಲು ದಕ್ಕಿ ಜಿಗಣೆಯಂತೆ ಅವಳ ಹೆಗಲ ಅಂಟಿಕೊಂಡದ್ದು...
ಈಗ ನಗೆ ನಿತ್ಯ ಪಾರಾಯಣ...
ನೆನಪು ಸುಳಿಚಕ್ರ - ಯಾವುದೋ ಹಾದಿಯ ಕವಲು.......😍
#ಬೆಳಕು_ಬೆಳಕ_ಹಡೆಯುತ್ತ_ಕತ್ತಲು_ಬಂಜೆಯಾಗಿ_ಪ್ರೀತಿ_ಬೆಳಕ_ಹಬ್ಬ...
⇅↩↯↪⇅
ಪಟ ಸೌಜನ್ಯ: ವಿನಾಯಕ ಗುಮ್ಮಾನಿ
ಉಂಗುರ ಬೆರಳಿನ ಮಚ್ಚೆಯಂಥವಳೇ,
ಹೋಯ್ ಕಂಡತ್ತಾ...... ಅದೋ ಅಲ್ಲಿ.......... ಆ ಗೋರ್ಕಲ್ಲ ಮುಡಿಯ ಮಡುವಲ್ಲಿ........... ಉಸಿರ ಹಕ್ಕಿಯ ರೆಕ್ಕೆಗೆ ಬಣ್ಣ ಬಳಿಯುತ್ತ ನಿಂತ ಮರುಳ ಪ್ರಾಣಿಯ ರೂಹು ನನ್ನದೇನೇ.......... ಕಲ್ಲು ಬಸಿರಿನ ಹೆಸರು, ಅದು ನಿನ್ನದೇನೇ.............
ಎಲ್ಲ ಕೇಳ್ತಾರೆ - ಯಾರವಳು...?
ನನಗೂ ಗಲಿಬಿಲಿ - ಯಾರು ನೀನು...??
ಬಿರಿದ ಹೂವ ಬಸಿರಿಗೆ ಯಾವ ಚಿಟ್ಟೆಯ ಹೆಸರೋ...
ಯಾವ ಹೂವಿನ ಸೆರಗು ಚಿಟ್ಟೆ ಮೇಳನ ಮಂಚವೋ...
ಅಲೆಯಾಳದಿ ಅಲೆವ ಹಂಸೆಯ ಪಾದದ ಗುರುತನು ತೋರಲಿ ಹೇಗೆ...???
ಹಂಸ ಹಾರುವ ತನಕ ಇದ್ದು ಬಿಡುವ ಹೀಗೇ - ಹೂವು ಚಿಟ್ಟೆಯ ಪ್ರೇಮದ ಹಾಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, December 2, 2017

ಗೊಂಚಲು - ಎರಡ್ನೂರಾ ಮೂವತ್ತೆಂಟು.....

ನಿನ್ನ ಹೆಸರಿಗೆ - ಮಾಗಿ ಬಸಿರಿಗೆ.....

ನನ್ನ ಪ್ರಶ್ನೆ ಪರಿಪ್ರಶ್ನೆಗಳೆಲ್ಲ ನಿನ್ನ ಮೌನದೆದುರು ಉತ್ತರಕ್ಕಾಗಿ ಬಾಯ್ದೆರೆದು ಕಾಯುತ್ತವೆ ಅನವರತ...
ಅಂತೆಯೇ ನಿನ್ನ ಲಜ್ಜೆ ದನಿಯೊಂದಿಗೆ ಉತ್ಸಾಹದ ನವಿರು ಘಮಲೊಂದು ಎದೆ ಕದವ ತಟ್ಟುತ್ತದೆ ಪ್ರತಿ ಬಾರಿ...
ಕನಸು ನೀನು, ಕರೆ ಮಾಡಿ ನಲಿವನುಲಿದರೆ ಉಸಿರು ಒದ್ದೆ ಒದ್ದೆ - ರಕ್ತಕ್ಕೆ ರುದ್ರ ಚಲನೆ - ಕಣ್ಣು ಆಕಾಶ ಬುಟ್ಟಿ - ಜೀವಭಾವ ನಗೆ ಮರಿಯ ಆಟಿಕೆ - ಬಂಧಿಸಿಟ್ಟ ಭಾವಜಾಲಕೆ ಒಲವಿಂದಲೆ ಮುಕ್ತಿ...😊
#ಹೊಸ_ಹಾಡು_ಹುಟ್ಟುವ_ಗುಟ್ಟಿನ_ಖುಷಿಗೆ_ನಿನ್ನದೇ_ಹೆಸರು...
↤↰↱↲↳↦

ಕುತ್ಗೆ ಉದ್ದ ಮಾಡಿ ಹಾದಿ ಬದಿಗೆ ನೋಡಿ ನೋಡಿ, ಬರ ಕಾದು ಕಾದು ಸುಸ್ತಾಗೋತು...
ಮಾಗಿ ಅರಳುವ ಕಾಲ ಕಣೇ - ಚಿಗುರೆಲೆಯ ಬೆನ್ನ ಮೇಲೆ ಪಾತರಗಿತ್ತಿ ಮೊಟ್ಟೆ ಇಟ್ಟಿದೆ - ಇನ್ನೂ ಬಿಡಿಸಿ ಹೇಳ್ಬೇಕಾ ನೇರ ಮೆತ್ತಿಗೇ ಬಂದ್ಬಿಡು - ಬಾಕಿ ಇದ್ದ ಮಾತಷ್ಟೂ ಮುತ್ತಾಗಿ ತುಟಿ ಮೀಟಲಿ - ಮುಂದಿನದು ಕಾಲ ಚಿತ್ತ...😉
↤↰↱↲↳↦

ಬಾಳೆ ಹಂಬೆಯಂತ ನುಂಪು ಪಾದಗಳು ಅಂಗಳದ ಮೂಲೆಯಲಿ ಇಬ್ಬನಿಯ ಹೊಕ್ಕುಳಲ್ಲಿ ಅರಳಿದ ಹೂಗಳಂತೆ ತೋರುವ ಗರಿಕೆಗಳನು ಹಿತವಾಗಿ ತುಳಿದ ಸದ್ದು - ಕೆಂಡದ ಬಣ್ಣದ ಹಬ್ಬಲಿಗೆ ದಂಡೆ ಆಯಿಗೆ ಬಲು ಪ್ರಿಯವಂತೆ - ನನ್ನ ಕಂಡು ಕಾಡಲು ನೀ ಹುಡುಕೋ ನೆಪಗಳೆಷ್ಟು ಚಂದ ಮಾರಾಯ್ತಿ...
ಬಾಳೆ ಹೂವಿನ ನವಿರುಗಂಪಿಗೆ ಮೂಗರಳಿಸೋ ಉದ್ದ ಚುಂಚಿನ ಪುಟ್ಟ ಹಕ್ಕಿಯ ಪುಳಕ ನಾ ಕುಳಿತ ಮಂಚದ ಕರುಳ ಮೀಟುತ್ತದೆ ನಿನಗೆಂದು ತವಕಿಸೋ ಛಳಿ ಛಳಿಯ ಈ ಬೆಳಗಿನ ತಂಪಿಗೆ...
ನಿನ್ನ ನೂಪುರದ ಕಿಂಕಿಣಿಯ ಉಲ್ಲಾಸದ ವಿಲಾಸಕೆ ನಡುಮನೆಯ ತಿಳಿಗತ್ತಲ ತಿರುವುಗಳಲ್ಲಾಗಲೇ ಸುಳಿ ಕಂಪನ...
ಆಯಿ ಗಂಗೆ ಕರುವ ಮೈತೊಳೆದು ದಣಪೆ ದಾಟುವ ಮುನ್ನಿನ ಸಣ್ಣ ಸಂಧಿಯಲಿ ನಮ್ಮ ತೋಳುಗಳು ದಣಿಯಲಿ ವಯದ ಕಾವಿನ ಘಮಲಿಗೆ...
ಮುತ್ತಿನೂಟವ ಹಕ್ಕಿನಂದದಿ ಹಂಚಿಕೊಳ್ಳುವ ಒದ್ದೆ ತುಟಿಗಳ ಹಸಿವಿಗೆ...
ತುಸು ಲಜ್ಜೆ ಸಡಿಲಿಸು - ಮೈಯ್ಯ ದಿಣ್ಣೆಗಳ ಸುತ್ತಿ ಸುಳಿಯೋ ಬಿಸಿ ಉಸಿರ ಹಾವಳಿಗೆ ಉಟ್ಟ ವಸನದ ಮುದುರುಗಳಲಿ ಹುಟ್ಟಿಕೊಳಲಿ ಮಾಗಿ ಬೆವರಿನ ಕಟ್ಟೆ ಕಾವ್ಯ...
#ಮಾಗಿಯ_ಮೈಛಳಿ...
↤↰↱↲↳↦

ಛಳಿಯ ಎದೆಯ ಮೇಲೆ ಮಳೆ ಸುರಿಯುತಿದೆ - ನಿನ್ನ ನೆನಪಿನ ಕಾವೊಂದೇ ಆಸರೆ...
ಊರೆಲ್ಲ ತಂಪು ಗಾಳಿಗೆ ನಲುಗುವಾಗ ನಾನಿಲ್ಲಿ ನಿನ್ನ ಹೊದ್ದು ಬೆಂದ "ಊರುಬಂಧದ" ಕನಸಿಗೆ ಬೆಚ್ಚಗೆ ನಡುಗಿದರೆ ತಪ್ಪು ನನ್ನದಲ್ಲ...
#ಹರೆಯಕ್ಕೆ_ಬೆಂಕಿ_ಇಕ್ಕೋ_ಛಳಿ_ಮಳೆಯ_ಹಗಲು...
↤↰↱↲↳↦

ಅಡಿಕೆ ಸೀಮೆಯ ಹುಡುಗ ನಾನು, ಮಾಗಿಯ ಕಾಲದಲ್ಲಿ ಕರಿ ಮೋಡ ಕಂಡರೆ ಕಳವಳಿಸುತ್ತೇನೆ...
ಅಲ್ಲಿ ನನ್ನವರ ತೊಗರು ಮೆತ್ತಿದ ಮೈಕೈಗಳು ವರ್ಷದ ಕೂಳು ಹಾಳಾಗೋ ಭಯದಲ್ಲಿ ತಡಬಡಿಸುತ್ತವೆ...
ಮೆಟ್ಕತ್ತಿ ಮಾಡಿದ ಗಾಯಕ್ಕೆ ಖಾರ ಅರೆಯದಿರಲಿ ಮಳೆರಾಯ - ದಣಿದ ಜೀವಗಳ ಕಣ್ಣ ಕನಸುಗಳು ತಲ್ಲಣಿಸದಿರಲಿ...
#ಛಳಿಮಳೆಯ_ಕಳಮಳದ_ಹಗಲು...
↤↰↱↲↳↦

ಕಡಲಂತ ಕಪ್ಪು ಹುಡುಗೀ -
ಸಾವಿರ ಕಂಗಳ ಬೆಳಕಿನ ಜಾತ್ರೆಯಲ್ಲಿ ನಿನ್ನ ಕಂಗಳ ಸೆಳೆದಿಡುವ ಹಂಬಲದ ಹುಚ್ಚಿಗೆ ಎಷ್ಟೆಲ್ಲ ಮಂಗಾಟಗಳು ಹುಟ್ಟುತ್ತವೋ ನನ್ನೊಳಗೆ............ ಮಾಗಿಯ ಗಾಳಿಯಲಿ ಗೂಳಿ ಮನಸಿದು ಮೋಹದ ಹಾದಿಯ ಮಾಯೆಯ ಮೀರುವುದೆಂತು........... ಎದೆ ಕೊರಳಿಗೆ ತುಂಬಿದ ಉಸಿರೆಲ್ಲ ನಿನ್ನ ಹೆಸರನೇ ಉಸುರುಸುರಿ ಕಾಡುವಾಗ ಹೋಗಬ್ಯಾಡ ಹಿಂದೆ ನೋಡದೆ, ಹರಿಯಬ್ಯಾಡ ನಗೆಯ ಪರದೆ............. ಹೋದದ್ದಾದರೆ ಆಗ - ನೀನಿಲ್ಲದ ಹಾಡಿಯ ಹಾಡಿಲ್ಲದ ಜಿಡ್ಡು ಜಿಡ್ಡು ಜಾಡಿನಲ್ಲಿ................ ಬೆಳಕು ಸಾಯಲಿ........ ಆವರಿಸಲಿ ನಿದ್ದೆ ಸಾವಿನಂತೆ ಅಥವಾ ಅದಲಿ ಬದಲಿ........... ನೆನಪುಗಳು ಕಾಡಬಾರದು, ಕನಸುಗಳು ತೀಡಬಾರದು........ ನಿಶ್ಯಬ್ಧದ ಘಮ ಹೊತ್ತ ಕತ್ತಲೆಂದರೂ, ಸಾವೆಂದರೂ ಸಾಂತ್ವನದ ಜೋಕಾಲಿ.......... ನನಗೆ ನನ್ನದೇ ಲಾಲಿ.........

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 15, 2017

ಗೊಂಚಲು - ಎರಡ್ನೂರಾ ಮೂವತ್ತೇಳು.....

"ನಾನು....."

ಆ ಅಮಲುಗಂಗಳ ಸೆಳಕು ಸುಖದ ಹಾಯಿಯ ತಿಳಿ ಲಾಸ್ಯವಾ ಅಥವಾ ನಾ ಸುರಿದು ಬರಿದಾದದ ಮೇಲೂ ಅವಳಲ್ಲಿ ಇನ್ನೂ ತೀರದೆ ಉಳಿದು ಹೋದ ಹಸಿ ದಾಹದ ಹಾಸ್ಯವಾ...?
ಮೆಲ್ಲಗೆ ಚಿಗುರು ಬೆರಳಲ್ಲಿ ನೆತ್ತಿ ನೇವರಿಸುತ್ತಾಳೆ - ಸುಖದ ಮುಚ್ಚಟೆಯಾ? ಸುಸ್ತಿಗೆ ಸಾಂತ್ವನವಾ?? ಅಥವಾ, ಅಥವಾ ಇಷ್ಟೇನಾ ಅಂತಿದಾಳಾ...???
ಹುಡುಕುತ್ತೇನೆ ಅವಳ ಕಣ್ಣಾಳವ - ಅದುರುವ ಕಣ್ಣ ಚಮೆಗಳು, ತುಟಿಗಚ್ಚಿದ ಹಲ್ಲು ಗುಟ್ಟು ಬಿಟ್ಟು ಕೊಡುವುದಿಲ್ಲ...
ನನ್ನೊಳಗಿನ ತಟವಟ ಗುರುತಿಸಿ ನಕ್ಕುಬಿಟ್ಟರೆ..?
ಆವರೆಗಿನ ಪುರುಷ ಪೌರುಷದ ಪಸೆ ಆರಿದಂತಾಗಿ ಪಕ್ಕನೆ ಕಣ್ತಪ್ಪಿಸಿ ಅವಳ ಮಿದುವಲ್ಲೇ ಅಡಗುತ್ತೇನೆ - ಗೊತ್ತಲ್ಲ 'ಜಟ್ಟಿ ಮೀಸೆ' ಕಥೆ...
ಮತ್ತಲ್ಲಿ ಉಸಿರ ಬೆವರಿಗೆ ಅವಳ ಮೊಲೆ ಮಲ್ಲೆ ಮತ್ತೆ ಹಾದಿ ತಪ್ಪಿ ಬಿರಿದು ತುಸು ಕಂಪಿಸಿದರೂ ನನ್ನ ತೊಡೆ ನಡುಗುತ್ತೆ - ಮದವಿಳಿದ ಮೋಡಕ್ಕೆ ಮತ್ತೆ ಹನಿಗಟ್ಟಿ ಹದವೇರಲು ಕೆಲ ಸಮಯ ಬೇಕು - ಮತ್ತಾಗ ಜೀವಕಾಯದ ಸೋಲನ್ನ ಸೊಕ್ಕಿನ ತೋಳ ಬಲದಲ್ಲಿ ಮುಚ್ಚಲೆಳಸುತ್ತೇನೆ...
ಭಣಿತಕ್ಕೆ ತಕ್ಕಂತೆ ಬಿರುಸಾಗೋ ಅವಳ ಉಸಿರ ಮುಲುಕುಗಳು, ಹಾರಿ ಬೀಳೋ ಕಿಬ್ಬೊಟ್ಟೆಯೊಂದಿಗೆ ಸಾಥಿಯಾದ ಕಾಲಿನಿಕ್ಕಳದ ಹಸಿವಿನ ಪಲುಕುಗಳು ತನ್ನ ದೇಹದ ಬದಲು ಅಹಂ ಅನ್ನು ಕಾಡಿ "ಗಂಡು ಸೋತು ಮೃಗವಾಗುವಾಗ ಹೆಣ್ಣು ಮಿಂದು ನದಿಯಾಗುವಳಾ...??"
ಕೆರಳೋ ದೇಹಬಾಧೆಗಿಂತ ಕಾಡೋ ಪ್ರಶ್ನೆಗಳ ಧಾಳಿಯೇ ಜೋರಾಗಿ ಸಿಗದ ಉತ್ತರವ ಹುಡುಹುಡುಕಿ ಸೋತು ನಿದ್ದೆಗೆ ಜಾರುತ್ತೇನೆ ಪ್ರತಿ ಇರುಳೂ...
#ನಾನು...
🔀🔃🔀

ಬೇಕೆನ್ನಿಸಿದ ಓಲೆ ಬೆಲ್ಲವ ಮೊಣಕಾಲ ತಬ್ಬಿ ಓಲೈಸಿಯೋ ಅಥವಾ ಸಂತೆಯಲಿಯೇ ಗಳಗಳಿಸಿ ಅತ್ತಾದರೂ ಪಡೆದು ತಿನ್ನುವ ಮತ್ತು ಬೇಡದ ಊಟಕ್ಕೆ ರಣ ರಂಪ ಮಾಡಿ, ಅವಳ ಕೋಪಕ್ಕೆ ತುತ್ತಾಗಿ ಲತ್ತೆ ತಿಂದು, ಮತ್ತೆ ಚಂದಿರನ ಉಂಡು, ತುಸು ಹೆಚ್ಚೇ ಮುದ್ದು ಮಾಡಿಸಿಕೊಂಡು ಅವಳ ಲಾಲಿಯಲಿ ರಾಜನಾಗಿ ಮಲಗುವ ಕಂದನೊಳಗಣ ಆಯಿಯ ಮಡಿಲ ಸಲಿಗೆಯಾಪ್ತತೆಯ ಹಕ್ಕಿನ ಪ್ರೀತಿ ಸಿಗ್ಗಿಲ್ಲದೆ ಇಂದಿನ ನನ್ನೆಲ್ಲ ನೇಹಕೂ ಲಾಗೂ ಆಗುವಂತೆ ಮನಸ ಒಪ್ಪ ಮಾಡಿಟ್ಟುಕೊಂಡಿದ್ದಿದ್ದರೆ......ರೆ........ರೆ.....
ಬೆಳೆದ ದೇಹದಲ್ಲೂ ಮಗುತನದ ಹಿಗ್ಗು, ತಾಯ್ಮನದ ಬಾಗು ಎದೆ ಕಡಲ ಅಲೆಯಾಗಿ ತುಯ್ಯುತಿದ್ದರೆ ನನ್ನೊಡನೆ ನನ್ನ ಸಂಬಂಧದಲ್ಲಿ, ಅಂತೆಯೇ ನಿಮ್ಮೊಡನೆ ನನ್ನ ಅನುಬಂಧದಲ್ಲಿ ಅನವರತ ನಗೆ ದೀಪ ಬೆಳಗುತಿರುವುದೇನೂ ತೀರ ಕಷ್ಟವಿರಲಿಲ್ಲ...
ಆದರೆ......
ಆದ್ರೇನು,
ಸುಳ್ಳೇ ಮೇಲರಿಮೆ, ಕಳ್ಳ ಕೀಳರಿಮೆ, ಅತೀ ಸ್ವಾಭಿಮಾನ, ಹುಚ್ಚು ದುರಭಿಮಾನ - ಸರಗೋಲು ತೆರೆದಿಟ್ಟ ಒಟ್ರಾಶಿ ನೂರಾರು ಭ್ರಮೆಗಳ ಒಡ್ಡೋಲಗದಲ್ಲಿ ಮೆರೆವ ಮನಸಿಗೆ ಬಾಲ್ಯವನ್ನು ನೆನೆದಷ್ಟು ಸುಲಭವಲ್ಲ ಬಾಲ್ಯವನ್ನು ಕಾಲಕೂ ಜೀವಿಸುವುದು...
#ನಾನು...
➢➤➣

ಭಾವ ಕ್ರಾಂತಿಯ ಗಾಢತೆ ತೆಳುವಾಗುತ್ತ ಸಾಗಿದ ಹಾಗೆ ಸಂವಹನದ ತೀವ್ರತೆಯ ಕೊಂಡಿಗೆ ತುಕ್ಕು ಹಿಡಿಯುತ್ತ ಸಾಗುತ್ತೆ... 
ಒಡಲ ಒಡನಾಟದ ಹಸಿವಿನಿಂದ ಕಳಚಿಕೊಂಡ ಕೊಂಡಿಗಳ ಸಂದಿನಲ್ಲಿ ಸಬೂಬುಗಳ ಬಂದಳಕ ಹಬ್ಬಿ ಬೆಳೆಯುತ್ತ ಹೋಗಿ ಬಂಧವೆಂಬ ಅಶ್ವತ್ಥದ ಉಸಿರಿಗೆ ಉಬ್ಬಸ...
ಯಾವ ಕವಲಿನಲ್ಲಿ ಕೊನೆಯದಾಗಿ ಕೈಬೀಸಿದ್ದು ನೀನು...? 
ಶವಪರೀಕ್ಷೆಯ ಹೊತ್ತಲ್ಲಿ ಕರುಳು ಬಗೆದಾಗ ಬೆರಳಿಗೆ ಪ್ರೀತಿಯ ಒಣ ಬೀಜವಾದರೂ ತಾಕೀತಾ...??
ಬೀಜವಿದ್ದರೂ ಹೊಸ ಸಂಪುಟಕೆ ನಾಂದಿ ಯಾರು ಹಾಡೋದು...???
ಇಷ್ಟಕ್ಕೂ ಉಬ್ಬಸಕೆ ಮದ್ದು ಮಾಡಿ ಮತ್ತೆ ಬಂಧವ ಮುದ್ದು ಮಾಡೋ ಉಮೇದು ಇದೆಯಾ ನಮ್ಮಲ್ಲಿ...????
ಜೋಡಿ ಕನಸ ಕೊರಳ ಸೆರೆಯ ಕೊಯ್ದಾಗ ಅಳಿದದ್ದು ನೀನಲ್ಲ 'ನಾನು' ಸಾಯದ ನಾನು...
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 12, 2017

ಗೊಂಚಲು - ಎರಡ್ನೂರಾ ಮೂವತ್ತಾರು.....

ಹರಿದ ಹಾಳೆ.....

__ಪ್ರೀತಿ ಕೂಡ ಕಾಲೋಚಿತ ಅನುಕೂಲಸಿಂಧು ಭಾವಧಾತು...
__ಬೆಳಕಿನ ಕೋಲಿನ ನಿರಂತರ ಧಾಳಿಯ ನಂತರವೂ ಕತ್ತಲ ಗರ್ಭದ ಉಸಿರಿನ ಬಿಸಿ ಆರದೆ ಉರಿಯುತ್ತಲೇ ಇದೆ, ಇರುತ್ತದೆ, ಇರಬೇಕು ಕೂಡ...
__ಈ ಸತ್ಯ ಮತ್ತು ಸುಳ್ಳುಗಳಿಗೆ ಇದಮಿತ್ಥಂ ಅನ್ನುವಂಥ ಅಸ್ತಿತ್ವ ಇಲ್ಲ... ಅವು ಅಭಿವ್ಯಕ್ತವಾಗೋ ಸಂದರ್ಭದ ರೂಕ್ಷತೆ ಹಾಗೂ ಅವನ್ನು ಹೊತ್ತು ತಿರುಗೋ ಶಕ್ತಿಯ ಜಾಣ್ಮೆಯೇ ಅವುಗಳ ಬಲಾಬಲದ ನಿರ್ಣಾಯಕ ಅಂಶಗಳಾಗುತ್ತವೆ...
___ಉಫ್...
ಕಾದು ಕಾದು ಜೀವ ಹೈರಾಣ - ಇನ್ನೆಷ್ಟು ದೂರವೋ ನನ್ನ ನಿಲ್ದಾಣ........................
#ಮುರುಕು_ಬಂಡಿ_ಓಡುವ_ಕಾಲ...
↜⇖⇗↝

ತಾನೇ ಬಿಡಿಸಿದ ಚಿತ್ರವ ತಾನೇ ಹರಿದೆಸೆವ ಬದುಕ ನಿರ್ವೇದವ ಸಮರ್ಥಿಸಲಾಗದೆ, ಒಪ್ಪಲೂ ಆಗದೆ ಎದೆ ಕನಲುತ್ತೆ ಪ್ರತಿ ಸಾವಿನೆದುರು...
#ಓಡುವ_ಕಾಲನ_ಕಾಲಿಗೆ_ಬೇಡಿಯ_ತೊಡಿಸುವರಾರು...
↜⇖⇗↝

ಬೆಳಕೇ -  
ಮೂಗನಾಗಿಸು ಎನ್ನ, ಮೌನದೊಳೆಲ್ಲವ ಹೂಳಬಲ್ಲ ಜಾಣರೆದುರು... 
ದನಿಯ ಹೂಳುವುದೇ ಒಳಿತು ನಗೆಯ ಭ್ರಮೆಯ ಮೂರ್ಖನಾಗುವ  ಬದಲು...
#ಈಜು_ಬಾರದವನ_ಸಾಗರವ_ಸೀಳುವಾಸೆ...
↜⇖⇗↝

ಮತ್ತೆ ಮತ್ತೆ ಸೋತೂ ಮತ್ತೆ ಮತ್ತೆ ಕಾಣೋ ಕನಸು:
ನಾಲಿಗೆಯಲಿ ವೈಭವದಿ ಹೊರಳುವ ಆಪ್ತತೆ ಹೆಜ್ಜೆಯ ದನಿಯೂ ಆಗಿ ಹರಿದರೆ ನಡಿಗೆಗೂ ಎಂಥ ವೈಭವ... 
ಆದರೆ ಮತ್ತೆ ಮತ್ತೆ ಶಬ್ದಗಳ ಬಣ್ಣ ನಾಜೂಕಿನಲಿ ನೇಯ್ದ ಹಸಿ ಬಲೆಗೆ ಸಿಕ್ಕಿ ಬೆರಗಿನ ರೆಕ್ಕೆ ಹರಿದ ಮನಸಿದು ಜಿಡ್ಡು ಜಿಡ್ಡು...
#ವಿಲಾಪ...
↜⇖⇗↝

ಜಾಣ ಮೌನ = ಸಜೀವ ಶ್ರದ್ಧಾಂಜಲಿ..........
↜⇖⇗↝

ತನ್ನವರೇ ತನ್ನ ಹಣಿಯುವಾಗ ಚೀರುವ ಕಬ್ಬಿಣಕೆ, ಹಿಡಿಕೆ ಹಿಡಿದ ಕಮ್ಮಾರ ನೀರು ಸುರಿದು ಸಾಂತ್ವನವ ಹೇಳಿದಂತಿದೆ ಅವಳ ನೋವಿಗೆ ನನ್ನ ನುಡಿಸಾಣಿಕೆ...
ಕನಲಿದಭಿಮಾನದಿ ಕಟ್ಟೆಯೊಡೆದ ಅವಳೆದೆಯ ಅಸಹಾಯ ಕಣ್ಣ ಹನಿ ಸಾರಾಸಗಟು ಸುಡುತ್ತದೆ ಎನ್ನ ಕಲ್ಲೆದೆಯ ಸುಳ್ಳು ನಗೆಯ...
#ಏನಕೂ_ಹೆಗಲಾಗದ_ಹೆಣ_ಬದುಕು_ನನ್ನದು... #ಅದರೂ_ಪಾಳಿ_ಮುರಿದು_ಮೊದಲೇ_ಹೋಗದಿರೆನ್ನುತ್ತಾಳೆ_ಅಮ್ಮ_ಅವಳು...
↜⇖⇗↝

ಬಿಚ್ಚಿಡುವ ತುಡಿತವಿಲ್ಲದ ಭಾವದ ಒಳ ಹರಿವು - ಮೌನದ ಸುಳ್ಳೇ ವಿಜ್ರಂಭಣೆ...
ಅಂತೆಯೇ ಪೂರಾ ಪೂರಾ ಬೆತ್ತಲಾಗುವ ಹಸಿವಿನ ಭಾವದ ಹೊರ ಹರಿವೆಂದರೆ - ಮಾತಿನ ಜೊಳ್ಳು ಮೆರವಣಿಗೆ...
ಅಸ್ತಿತ್ವಕೆ ಬೆಲೆ ಇಲ್ಲದಲ್ಲಿ ಚಿಪ್ಪಿನೊಳಗಿದ್ದು, ಅಸ್ತಿತ್ವವನೂ ಮರೆತು ಲೀನವಾಗುವಲ್ಲಿ ಚೌಕಾಶಿಯ ತೊರೆದು ಪಟಪಟಿಸಿ, ಕತ್ತಲು ಬೆಳಕಿನ ಸಮನ್ವಯದಲಿ, ಮಾತು ಮೌನಗಳಲಿ ಬಂಧ ಕಳಚಿ ಭಾವ ಅರಳಿ ಘಮಿಸಿದರೆ - ಅದರ ಹೆಸರೇ ಪ್ರೀತಿ...
#ಕೊಂಡಾಟದ_ಹುಳದ_ಗೂಡು_ಮತ್ತು_ಜೀವಚಕ್ರದ_ಹಾಡು-ನಿಜ_ಪ್ರೀತಿ_ಜಾಡು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 5, 2017

ಗೊಂಚಲು - ಎರಡ್ನೂರಾ ಮೂವತ್ತೈದು.....

ಭಾವ ಗುಡುಗುಡಿ.....

ಕರಿ ಕಾನು ಮೌನ - ಕೆಂಬೂತದ ಕೂಗು - ಅಚ್ಚೆ ಮನೆ, ಇಚ್ಚೆ ಮನೆ ಪುಟ್ಟ ಪುಟ್ಟಿಯರ ಕಣ್ಣಲ್ಲಿನ ವಿಚಿತ್ರ ಬೆರಗು - ಪಿಟಿಕೋಟಿಗೆ ಮೆತ್ತಿದ ಅಂಗಳದ ಕಟ್ಟೆಯ ಕೆಮ್ಮಣ್ಣು - ಬೆನ್ನು ಸವರೋ ಪರಿಚಿತ ಕಳ್ಳ ಕಣ್ಣ ಹೆಜ್ಜೆ - ದಾಹಕ್ಕೆ ಕೈಗಿಟ್ಟ ಬೆಲ್ಲ ನೀರಿನ ರುಚಿ - ಹಕ್ಕಿ ನರಸಣ್ಣನ ಶುಭನುಡಿ - ಕಾಗೆ ಸ್ನಾನ - ಜಗುಲಿಯಲಿ ಸಿಡಿದ ಅಪ್ಪನ ರಸಿಕ ಮಾತಿಗೆ ಒಲೆಯೆದುರು ಅರಳಿದ ಆಯಿಯ ಕೆನ್ನೆಯ ಕೆಂಪು - ತುಳಸೀ ಕಟ್ಟೆಯ ಎದುರಿನ ಹಸೆಯ ಅಂಚಲ್ಲಿ ಗುಟ್ಟಾಗಿ ಗೀಚಿದ ಗೊಲ್ಲನ ಹೆಸರು - ಕರುಳ ಹಕ್ಕಿನ ಆಸ್ತಿಯಾದ ಬಣ್ಣ ಬಸಿದೋದ ಅಪ್ಪನ ಉದ್ದ ಕೈಯಿನ ಅಂಗಿ, ಜಡ್ಡು ಎಣ್ಣೆಯ ಘಮಲಿನ ಅಜ್ಜನ ಸ್ವೆಟರ್ರು, ಅಜ್ಜಿಯ ಸೆರಗೆಂಬ ಬಿಕ್ಕಿನ ಕರವಸ್ತ್ರ, ಹಾಸಿಗೆಯ ಮೇಲ್ಹಾಸಿನಲಿ ಅಸೀಮ ಬೆಚ್ಚನೆಯ ಆಯಿಯ ಹರಿದ ಸೀರೆ - ಬಂಡಿ ಚಂದಿರನ ಮೊಗದ ಚೌತಿಯ ಶಾಪದ ಕಲೆ - ಲಂಗದ ಮಡಿಲಲಿ ಉಳಿದ ಬಕುಲದ ಹೂಗಳ ಗಂಧ - ಕಲ್ಯಾಣಿ ಮೆಟ್ಟಿಲ ಏಕಾಂತಕೂ ನೀರ ಕನ್ನಡಿಯ ನಂಟು - ಎಂಜಲ ಗುಬ್ಬಿ ಮಾಡಿ ಹಂಚಿ ತಿಂದ ಪೇರಳೆ ಹಣ್ಣು - ಅಟ್ಟದ ಕತ್ತಲ ಕಳೆಯುವ ನಕ್ಷತ್ರ ಮಂಡಲ - ಮಂದಾರ ಗಿಡದ ಗೆಲ್ಲಲ್ಲಿ ಇಬ್ಬನಿಯ ಕುಡಿಯುತ್ತ ಕೂತ ಹಳದಿ ಹಬ್ಬಲಿಗೆ ದಂಡೆ - ಮೋಟು ಬೀಡಿ ಸೇದಿ ಸಿಕ್ಕಿ ಬಿದ್ದ ಅಣ್ಣ ಹಾಗೂ ಬಾವನ ಕಾಪಾಡಿದ ಸಿಹಿಯಲ್ಲಿನ ದೊಡ್ಡ ಪಾಲಿನ ಆಸೆ ಮತ್ತು ಅಕ್ಕರೆ - ಛಳಿ ಬೆಳಗಿನ ನಿದ್ದೆಯ ಎದೆಗೊದೆಯುವ ಉಸಿರ ಬೆವರಿನ ಕುಪ್ಪಸದ ಭಾರ - ಮಳೆ ಕಳೆದು ಸುರಿವ ಕಾರ್ತೀಕ ಹುಣ್ಣಿಮೆಗೆ ಸೋಬಾನೆಯ ಗಂಟು, ಘಾಟು - ಒಲವ ಸೆರಗಿನ ಅಂಚ ಹಿಡಿದು, ಮಂದಹಾಸದ ಮಿಂಚ ಮಿಡಿದು, ಎದೆಯ ಕನಸಿಗೆ ಜೋಗುಳ, ಬರೆವ ಜೋಗಿಯ ಹಂಬಲ - ಇನ್ನೂ ಇನ್ನೂ ಇನ್ನೂ ಏನೇನೋ ನೆನಪು, ಕನಸುಗಳ ಕಂಬಳ...
#ಹೊಸ_ನೀರ_ಮಿಂದು_ಹೆಣ್ಣೆದೆ_ನದಿಯಾಗುವ_ಕಾಲಕ್ಕೆ...
⥢⥮⥤ ⥢⥮⥤

ಮೇಲೆ ಕೋಟಿ ನಕ್ಷತ್ರ - ಕಣ್ಣ ತುಂಬಾ ಅವುಗಳದೇ ಬೆಳಕು ಗಾಢ ಕತ್ತಲ ತೋಟದ ಹಾದಿಗೆ - ತೆಳುವಾದ ಕಾಫಿ ಹೂಗಳ ಘಮ - ಹೆಜ್ಜೆಗೊಮ್ಮೆ ಕಾಲ ತಾಕುವ ಯಾರದೋ ಮನೆಯ ದಾಸು ಕುನ್ನಿಯ ಬಾಲ - ಬೆನ್ನ ಹಿಂದೆ ನೂರು ಗಜ ದೂರ ಮನೆ ಒಳಗೆ ಅಮ್ಮಾ ಅಂದ ಮಗು ಕುಕಿಲು - ಚಳಿಗೆ ಮುದುಡಿಕೊಂಡಂತಿರೋ ಆ ಅಂಗಳದ ದೀಪ - ಕೈಯ ಮೊಬೈಲ್ ಪರದೆ ಮೇಲೆ ಅಮ್ಮನ ನಗು ಮುಖದ ಚಿತ್ರ - ಕಾಫಿ ಹೆಸರಿನೊಂದಿಗೇ ನೆಪ್ಪಾಗೋ ಪುಟಾಣಿ ಗೆಳತಿಯ ಕಾಫಿ ನಾಡಿನ ಮಿಡಿತಗಳ ವರ್ಣನೆ - ಜಗದ ಯಾವ ಮೂಲೆಗೆ ಹೋದರೂ ಘಂಟೆಗೊಮ್ಮೆ ಮಾತಾಡಿಸ್ತಾನೇ ಇರೋ ಸಾಕ್ಷಿಪ್ರಜ್ಞೆಯಂಥ ನೇಹ - ಸುಮ್ನೆ ಅದೇನು ಕತ್ತಲಲ್ಲಿ ಅಲೀತೀಯಾ ಬಂದು ಮಲ್ಕೊ ಅನ್ನೋ ಬೆಳಗಿನಿಂದ ಜೊತೆ ಅಲೆದು ದಣಿದು ಹಾಸಿಗೆಗೆ ಬೆನ್ನು ತಾಕಿಸಿದ ಜೀವಗಳು... 
ಇನ್ನೇನು ಬೇಕು ಅಪರಿಚಿತ ಊರಿನ ಇರುಳೊಂದು ಸಾವಿನಷ್ಟೇ ಪರಿಚಿತ ಘಮ ಬೀರಲು...
#ಉಸಿರು_ಹೆಪ್ಪಾಗಿ_ಕನಸು_ಕರಗುವಲ್ಲೂ_ಮಿಣಿ_ಮಿಣಿ_ಮೀನುಗೋ_ಕರುಳ_ದೀಪಕ್ಕೆ_ಇಂಥದೊಂದಷ್ಟು_ರಾತ್ರಿಗಳು_ಬೇಕು_ಎಣ್ಣೆಯಾಗಿ...
⥢⥮⥤ ⥢⥮⥤

ಪಪ್ಪಾ ನನ್ನನ್ನ ಕಪ್ಪು ಎಂದವರೂ ನನ್ನ ಮೆಚ್ಚುವಂತ ಜಾದೂ ಕಲಿಸು...
ಹಾಗಂದ ಅಳುಮೋರೆ ಮಗಳ ಎಳೆಯ ನೊಸಲ ಮೇಲೊಂದು ನಗೆಯ ಕಿಡಿಯನಿಟ್ಟು ಆ ಹಾದಿಯಲಿ ಸುತ್ತಿ ಬಂದೆ...
ಅಗೋ ಈ ಸಂಜೆಗೆ ಬೀದಿಯ ಬಾಯ್ತುಂಬ ಇವಳ ಮಿನುಗು ಕಂಗಳದೇ ಮಾತು...
ಊರ ಕಣ್ಣು, ಮಾರಿ ಕಣ್ಣು, ನಾಯಿ ಕಣ್ಣು, ನರಿ ಕಣ್ಣು, ಯಾರ ಕಣ್ಣೂ ತಾಕದಿರಲಿ - ದೃಷ್ಟಿ ಸುಳಿಯಬೇಕೀಗ ಎದೆಯಮೇಲೊರಗಿದ ನಗೆಯ ನವಿಲು ಗರಿಗೆ...
#ಇವಳು_ಅವಳೆನಗಿತ್ತ_ನಗೆಯ_ಕವಳ...
⥢⥮⥤ ⥢⥮⥤

ಯಾವ ಹಾದಿಯೋ - ಯಾವ ತೀರಕೋ - ಕನಸೋ ಕಂಗಳ ರೆಪ್ಪೆಯಾಳದಿ ಹೊಳೆವ ಬೆಳಕಿಗದ್ಯಾವ ಬಣ್ಣವೋ - ಯಾವ ಮುರ್ಕಿಯಲಿ ಯಾವ ಹಾಡಿಯೋ - ಅದೆಷ್ಟು ಬೊಗಸೆ ಬೆವರಿಗೆ ಅದೆಷ್ಟು ಮೈಲಿಕಂಭವೋ - ಯಾವ ಕಲ್ಲೆಡವಿ ಯಾವ ನೆಪಕೋ ನಿಂತೇ ಹೋಗುವ ಪದ ಪಾದವೋ - ಅರಿವಿಲ್ಲದೀ ಪರಿಪರಿಯ ನಡಿಗೆ - ತೀರದ ನಗೆಹೊನಲ ಹಂಬಲದ ಸಾವಿರ ಬಣ್ಣದ ಹಸಿವಿನ ಎದೆಯ ಹುಚ್ಚಿಗೆ ನವ ನವಜಾತ ಕಾಣ್ಕೆಯ ಅಭಿಲಾಷೆಯೇ ದೀವಿಗೆ - ಗೂಢ ನಿಗೂಢ ಬದುಕ ಜಾಡಿಗೆ...
ಉನ್ಮತ್ತ ಉದ್ರಿಕ್ತ ಜಾತಕದ ಕೇಕೆಗೆ ಸಾವ ನೆರಳೇ ಹಾಸಿಗೆ...
ಅಲ್ಲಿಯೂ,
ಎನ್ನ ಎದೆ ಸಂಚಿಯ ತೂತಿಂದ ಜಾರಿ ಬಿದ್ದ ನಗೆಯ ಬೀಜ ಮರವಾಗಿ ಹಿಂದೆ ಬರುವವಂಗೆ ದಾರಿ ನೆರಳಾಗಲಿ... 
#ಪುಟ್ಟ_ಬುಟ್ಟಿಯಲಿ_ಬೆಟ್ಟ_ತುಂಬಿದ_ಭಾವ...
⥢⥮⥤ ⥢⥮⥤


ಹಂಗೇ ಖುಷಿಯಾದಾಗ - ನಗೆ ಗಂಗೆ ನಿನ್ನ ನೆನಪಾದಾಗ - ಎದೆಯಲೇನೋ ಸುಳಿದಿರುಗುತೈತೆ - ಬೊಂಬೆಯೂ ಮಾತಾಡತೈತೆ...😍😚
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, October 12, 2017

ಗೊಂಚಲು - ಎರಡ್ನೂರಾ ಮೂವತ್ನಾಕು.....

ಪ್ರೀತಿ ಪುರಾಣ....

ಸೃಷ್ಠಿ - ಪ್ರಾಣ - ತ್ರಾಣ - ಅಸ್ತಿತ್ವ - ಕಾಳಜಿ - ಕಾರುಣ್ಯ - ಕಳಕಳಿ - ದಯೆ - ಧೈರ್ಯ - ದಾಕ್ಷಿಣ್ಯ - ಮೋಹ - ಮಮತೆ - ನಂಬಿಕೆ - ವಿಶ್ವಾಸ - ಭರವಸೆ - ಭಾವ - ಬಾಂಧವ್ಯ - ಆರೈಕೆ - ಹಾರೈಕೆ - ಕನಸು - ನೆನಪು - ನಿಲುವು - ನಡಿಗೆ - ಶಿಕ್ಷಣ - ರಕ್ಷಣೆ - ನುಡಿ - ಮಡಿ - ನಿರಪಾಯಕಾರಿ ಮತ್ತು ನಿರಹಂಕಾರಿಯಾದ ಸಹಜ ಸ್ವಾರ್ಥ - ಒಡಲ ಒಡನಾಡಿಯಾಗಿ ಸದಾ ಜೊತೆ ಸಾಗೋ ಮುಚ್ಚಟೆಯ ನೇಹ...
ಓಹ್... !!! 
ಇನ್ನೂ ಎಷ್ಟೆಷ್ಟೋ ಆಪ್ತ ರೂಪಗಳು - ಎಲ್ಲವೂ ಪ್ರೀತಿಯೆಂಬೋ ತಾಯ್ಬೇರಿನ ಕರುಳ ಟಿಸಿಲುಗಳೇ ಅಲ್ಲವೇ...
ಕೊನೆಗೆ ಪ್ರಕೃತಿ ಪಾಶದ ಭಾವಕೊಪ್ಪಿತ ಗಪ್ ಚುಪ್ ಕಾಮವೂ ಪ್ರೀತಿಯ ಸೆಳುವಿನ ಕವಲೇ ತಾನೆ... 

ಅಲ್ಲೆಲ್ಲೋ ಎಷ್ಟೊಂದು ಪ್ರೀತಿಸಿಕೊಂಡಿದ್ದವರು, ಬದ್ಧ ದ್ವೇಷಿಗಳಾಗಿ ಹೋದರು ಎಂಬ ಮಾತು ಕೇಳುವಾಗ ನಗುವಿನೊಡನೆ ನನ್ನೊಳಗೆ ಮೂಡುವ ಪ್ರಶ್ನೆ: "ಒಂದೇ ಹರಿವಿನಲ್ಲಿ ಪ್ರೀತಿ ಮತ್ತು ದ್ವೇಷ ಎರಡೂ ಸತ್ಯಗಳಾಗಲು ಹೇಗೆ ಸಾಧ್ಯ... ??"
‘ಸಂದರ್ಭಕ್ಕೆ ತಕ್ಕಂತೆ’ ಅದಲು ಬದಲಾಗೋ ಭಾವಗಳಿಗೆ ಹೆಸರು ಏನಿಟ್ಟರೂ ನಾನದನು ವಿಮರ್ಶಿಸಲು ಸಮರ್ಥನಲ್ಲ...

ತುಸು ಅಪರಿಚಿತತೆಯೇ ಪ್ರೀತಿಯ ಸೌಂದರ್ಯ ಮತ್ತು ನೋವು ಕೂಡ ಅನ್ಸುತ್ತೆ...

ಪ್ರೀತಿಯೆಂದರೆ ಹಣ್ಣೆಲೆ ಅಳಿದು ಗೊಬ್ಬರವಾಗಿ ಬೇರನು ಸೇರಿ ಹೂವಾಗಿ ಅರಳುವಂತೆ - ಹೀಗೆ ಅಳಿದು ಹಾಗೆ ಚಿಗಿತು - ಒಂದಷ್ಟು ಕಳೆದುಕೊಳ್ಳುತ್ತಾ ಇನ್ನಷ್ಟು ಬೆಳೆಯುವ - "ಸಮರ್ಪಣೆ ಮತ್ತು ಸ್ವಾತಂತ್ರ‍್ಯದ ಹದ ಬೆರೆತ ಸ್ನೇಹಮಯೀ ಆತ್ಮದೆಚ್ಚರ..."

ಹಹಹಾ... ಇವೆಲ್ಲಾ ಒಡನಾಟಕ್ಕೆ ಒಗ್ಗದ ಅತಿ ವಾಸ್ತವದ ದೊಡ್ಡ ಮಾತಾಯಿತಾ ಅಂತ... 😄

ವಾಡಿಕೆಯಂತೆ ಪ್ರೀತಿ:
ಯಪ್ಪಾ ನಿನ್ನ ಕಾಳಜಿ ಕಿರಿಕಿರಿಯಾಗುತ್ತೆ  - ನನ್ನನ್ನು ವಿಚಾರಿಸೋರೇ ಇಲ್ಲ;
ತಲೆ ಚಿಟ್ಟು ಹಿಡಿಸೋ ಮಾತುಗಳು ಮುಗಿಯೋದ್ಯಾವಾಗ - ಈ ಮೌನ ಉಸಿರುಗಟ್ಟಿಸುತ್ತೆ;
ಎಲ್ಲದಕ್ಕೂ ಪ್ರಶ್ನೆಗಳೇ ನಿನ್ನದು - ನೀ ಕೇಳಬೇಕಿತ್ತು ಹೇಳ್ತಾ ಇದ್ದೆ;
ನಂಗೆ ನನ್ನ ನೋವನ್ನ ಹಂಚಿಕೊಳ್ಳೋ ಇಷ್ಟ ಇಲ್ಲ ಯಾರಲ್ಲೂ - ನನ್ನ ನೋವಲ್ಲಿ ಯಾರೂ ಜೊತೆ ಇಲ್ಲ;
ಛೆ ಬದಲಾಗೋದೇ ಇಲ್ಲ - ಅಯ್ಯೋ ಮೊದಲಿನಂತಿಲ್ಲ;
ದೇಹ ದೇಗುಲ - ಆಸೇನ ಎಷ್ಟಂತ ಹಿಡಿದಿಡಲಿ;
ಉಫ್... ಹೀಗಿದ್ದರೆ ಹಾಗಿಲ್ಲ - ಹಾಗಾದರೆ ಹಂಗಲ್ಲ... 
ಜೊತೆ ಬಂದರೆ ತಳ್ಳುವ, ಕಳೆದೋದರೆ ಹುಡುಕುವ ವಿಚಿತ್ರ ಗೊಂದಲ - ಬರೀ ಮಾತು, ಮೌನದ ರುದ್ರ ಗದ್ದಲ - ನಿಜದಲ್ಲಿ ನನಗೇನು ಬೇಕೋ ನನಗೇ ಗೊತ್ತಿಲ್ಲ...
ಅಂತಿಮವಾಗಿ ಪ್ರೀತಿ ಅಂದರೆ ನನಗೆ ಬೇಕಾದಂತೆ ನೀನಿರುವುದು - ನನ್ನಾಸೆಯಂತೆ ನೀ ವರ್ತಿಸುವುದು - ನನ್ನಾಣತಿಯಂತೆ ನಡೆವವರು ಮಾತ್ರ ನನ್ನವರು...

ಹೌದೂ ಅವನು/ಅವಳು ಸೋಲಬಾರದು ಆದರೆ ನಾನು ಗೆಲ್ಲಬೇಕು ಎಂಬೋ ಮಧುರ ಹೊಟ್ಟೇಕಿಚ್ಚಿನ ಈ ಪ್ರೀತಿ ಅಂದ್ರೆ ಏನು ಅಂತ...!!??

*** ನಾನಿಲ್ಲಿ ಪ್ರೇಮದ ಬಗ್ಗೆ ಮಾತಾಡ್ತಾ ಇಲ್ಲ - ಅಷ್ಟಿಷ್ಟು ಅದಕೂ ಹೊಂದಿದರೆ ಅದು ಪ್ರೇಮದ ಬೇರೂ ಪ್ರೀತಿಯೇ ಆಗಿರುವುದರ ಕಾರಣವಷ್ಟೇ...

Friday, October 6, 2017

ಗೊಂಚಲು - ಎರಡ್ನೂರಾ ಮೂವತ್ಮೂರು.....

ಮತ್ತೆ ಮಳೆ ಕೊಯ್ಲು.....

ಪುನುಗಿನ ಬೆಕ್ಕಿನಂತವಳೇ -
ದುಂಬಿ ಗುನುಗಿಗೆ ತುಂಬೆ ಹೂ ನಸು ನಾಚಿ ಅರಳುವ ಹೊತ್ತಲ್ಲಿ ಬಾನ ಸೋನೆ ಸುರಿದರೆ ಅಡಿಗೆ ಮನೆಯಲಿ ಸಾಸಿವೆ ಸಿಡಿವಾಗ ಕಣ್ಣ ಚಮೆಯಲ್ಲಿ ನೀ ಕೊರಳಿಗಿಟ್ಟ ಕಚಗುಳಿಯ ನೆನಹಾಗುತ್ತೆ ಮತ್ತೆ ಮತ್ತೆ...
ಹೂವೆದೆಯ ಗಂಧ ಬೆರೆತ ಭುವಿ ಬೆವರ ಕಂಪಿಗೆ ಕಡು ಮೋಹಿ ಕಾಡು ಜೀವ ನಾನಾಗ ಗರಿಬಿಚ್ಚಿದ ಗಂಡು ನವಿಲು...
ಈ ಖುಷಿಗೆ ನಿನ್ನದಲ್ಲದೇ ಇನ್ನೇನ ಹೆಸರಿಡಲೇ...😍
#ಕನಸು_ಕಪ್ಪುಮೋಡ...
🌱🌿🌴🌾

ಗಿರಿಯ ನೆತ್ತಿಯನೇರಿ - ಸುರಿದ ಮಳೆಗೆ ಎದೆಯನೊಡ್ಡಿ -
ಗಾಳಿಯಲೆಗೆ ನೆತ್ತಿಯನೇರಿದ ಖುಷಿಯ ನಶೆ...
❣️
ಭವದ ಖುಷಿಗಳನೆಲ್ಲ ನೆಗೆನೆಗೆದು ನಭ ಬಗೆದು ಎದೆ ಮುಡಿಗೆ ಮುಡಿದುಕೊಂಬಂತೆ ಹರಸಿ ಹನಿ ಮಾಲೆಯಾಗಿ ಹನಿ ಹನಿದು ಬಾ... 
ಬಾ ಮಳೆಯೇ ಬಾ...😍
🌱🌿🌴🌾

ಜಗದ ಅಂಬಿನ ಮಾತು
ಅವಳ ಕೊಂಬಿನ ಮೌನ
ಎದೆಯ ಇರಿದಿರಿದು ಮೆರೆವ ಶತಮಾನದ ನೆನಕೆಯ ಕೀವೆಲ್ಲ ಇಳಿದಿಳಿದು ತೊಳೆದು ಹೋಪಂತೆ ಸುರಿ ಸುರಿದು ಎದೆ ಕುಡಿಕೆಯ ಬೆಳಗಿ ಮಡಿ ಜಲವ ತುಂಬು ಬಾ...❣️
ಬಾ ಮಳೆಯೇ ಬಾ...😍
🌱🌿🌴🌾

ಬಾನ ಬಯಲ ತುಂಬಾ ಜೊಂಪೆ ಜೊಂಪೆ ಮೋಡದ ಹೂಗಳ ವಸಂತೋತ್ಸವ - ಕರಿ ಬಾನು ಸುರಿಸೆ ಹನಿ ಜೇನು ಭೂಗರ್ಭದಲಿ ಜೀವೋತ್ಸವ...😍
#ಭುವಿಬೆವರು_ಮೋಡ#ವಸುಧೆಯುಸಿರು_ಗಾಳಿ#ಮಳೆಮಿಲನ...
🌱🌿🌴🌾

ರವಿರಾಯನ ಕಣ್ಣಿಗೆ ಕೈಯ್ಯಡ್ಡ ಹಿಡಿದು ಕಣ್ಣಾಮುಚ್ಚೆ ಆಡೋ ತುಂಬು ಜವ್ವನೆ ಕಪ್ಪು ಕಪ್ಪು ಮೋಡ - ಮಬ್ಬು ಮಬ್ಬು ಹಗಲು...😍
ಶುಭದಿನ...❣️
🌱🌿🌴🌾

ಧಾರೆ ಸುರಿವ ಮಳೆಯ ಭಣಿತಕ್ಕೆ ಉಸಿರು ಒದ್ದೆಯಾದ ಜಾರ ಸಂಜೆಗೆ ಅವಳ ನೆನಪು ಸುಟ್ಟ ಹಲಸಿನ ಬೀಜ - ಇರುಳ ಮೊದಲ ಪಾದಕೆ ನಾಭಿ ಮೂಲೆಯ ಅಬ್ಬಿ ಒಲೆಯಲ್ಲಿ ಆಸೆ ಕೆಂಡ ನಿಗಿ ನಿಗಿ...
ಪ್ರಣಯ ಪ್ರಣೀತ ಒಲವ ನೆನಪ ಸೋನೆಗೆ ಕೊಡೆ ಹಿಡಿಯಲಾರೆ - ನೆನೆದ ಎದೆಯ ಹೊಕ್ಕ ಛಳಿಯ ಅಡ್ಡ ಪರಿಣಾಮಗಳಿಗೆ ಪ್ರಕೃತಿಯೇ ಹೊಣೆ...
#ಮಳೆ_ಮಳೆ_ಮತ್ತು_ಮಳೆ_ಮತ್ತಾsss_ಇರುಳು... #ನಾಭಿಸುಳಿಭಾವಸ್ಫೋಟ....
🌱🌿🌴🌾

ಎರಡು ಯಾಮ...

ಸಂಜೆ ಮಳೆ - ಬಲು ಬೆರಕಿ ತಾರುಣ್ಯ - ಇರುಳ ಚಾದರದೊಳಗೆ ಮಡಿ ಮರೆತ ಕನಸೊಂದು ಕಮ್ಮಗೆ ಬೆವರುವಾಗ ನೀ ನೆನಪಾಗಬೇಡ...
#ಇರುಳ_"ಸನ್ನಿ"...😉

ಕೊಳೆತ ನೆನಪುಗಳ ಮಾರೋ ಕಳ್ಳ ಸಂತೆಯಿಂದಲೇ ಅರೆಪಾವು ಕನಸ ಹುಡುಕಿ ಕದ್ದಾದರೂ ತರಬೇಕು - ನಾಳೆ ಜವನ ಜೋಳಿಗೆಗೆ ಮುಟಿಗೆ ನಗೆಯ ಸುರಿಯಬೇಕು...☺️
#ಇರುಳ_ಸನ್ನಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಎರಡ್ನೂರಾ ಮೂವತ್ತೆರ‍್ಡು.....

ಅರೆಪಾವು ಒಳ ಭಾವ.....

ದೇಹ ಮತ್ತು ಮನಸಿಗೆ ರಂಗುರಂಗಿನ ಬಟ್ಟೆ ಹೊಲಿದು, ಹುಟ್ಟು ಮತ್ತು ಬೆತ್ತಲೆಯ ಪಾವಿತ್ರ್ಯ ಮತ್ತು ಸೌಂದರ್ಯವನ್ನು ಕೊಂದಲ್ಲಿಂದಲೇ ಮನುಷ್ಯನ 'ತಣ್ಣನೆಯ' ಕ್ರೌರ್ಯದ ವಿಷ ಸರಪಳಿ ಆರಂಭವಾದದ್ದೆನಿಸುತ್ತೆ...!!!
#ನಾಗರೀಕವೆಂಬೋ_ಅಸಹಜ_ಕ್ರೌರ್ಯ...
↜↞↑↠↝

ಮಾತಿಗೆ ಮಾತು ಬೆಳೆದು ಮೌನ ಹುಟ್ಟಿತು...
ಗೆದ್ದವರ್ಯಾರು...??
↜↞↑↠↝

ಹೊರಗಿನ ಬೆಳಕು, ಬಣ್ಣದ ಆಕರ್ಷಣೆ ಎಷ್ಟು ತೀವ್ರವೆಂದರೆ - ರೆಕ್ಕೆ ಸುಟ್ಟ ಚಿಟ್ಟೆಯ ಜೀವಭಾವದ ಕಣ್ಣೋಟ ಮತ್ತೂ ದೀಪದ ಕಡೆಗೇ ತೆವಳುತ್ತದೆ..........
#ಹಲಕೆಲವು_ಬದುಕುಗಳು...
↜↞↑↠↝

ಅರುವ ಮುಂಚಿನ ದೀಪ, ಹೆಣಕ್ಕೆ ಸೋಕಿದ ಬೆಂಕಿ ಆರ್ಭಟಿಸಿ ಉರಿಯುವುದು - ನೆತ್ತಿ ಸಿಡಿಯುವ ಸದ್ದಿಗೆ ನರಿಯೂ ಬೆಚ್ಚಿ ಕ್ಷಣ ಮೂಗ.........
#ಜೋರು_ನಗುವಾಗಲೆಲ್ಲ_ಕಿವಿ_ಮುಚ್ಚಿಕೊಳ್ಬೇಕನ್ಸುತ್ತೆ...
↜↞↑↠↝

ಗೋಡೆ ಕಟ್ಟಿದವನ ಕಣ್ಣಲ್ಲಿ ಬಯಲ ಬೆಳಕ ಬಂಧಿಸಿದ ಭಾವ...
ಕೋಟೆಯೊಳಗೆ ಕತ್ತಲು ಕನಲುವ ಸದ್ದಿಗೆ ಕಿವಿ ಸ್ಪೋಟಿಸಿದಂತಾಗಿ ಪೂರ್ವದ ಮೂಲೆಯಲೊಂದು ಬಾಗಿಲ ಕೊರೆದದ್ದು...
ಈಗ ಒಳ ಹೊರಗಾಡುವ ಬೆಳಕ ಕೋಲಲ್ಲಿ ಅದ್ಯಾವುದೋ ಅವ್ಯಕ್ತ ಅಪರಾಧೀ ಭಾವ ಕಂಡಂತಾಗಿ... 
ಉಫ್,
ಕರುಳ ಕೊರೆವ ಪ್ರಶ್ನೆ - 
ತೆರೆದ ಬಾಗಿಲವಾಡೆಯ ಮರೆಯಲ್ಲಿನ ಸರಬರ ಸದ್ದು ಅವಳು ಹೊರ ಹೋಗಲು ಹವಣಿಸಿದ್ದಾ...? 
ಅಥವಾ ಒಳಗೇ ಮುಡಿ ಬಿಗಿದುಕೊಂಡು ಹಿಡಿಯಾಗಿ ಅಡಗಿದ್ದರ ಕುರುಹಾ...?? 
ಆಗ ಕೇಳಿದ ಕನಲಿಕೆ ಸುಖದ್ದೂ ಇದ್ದೀತಲ್ಲವಾ...??? 
ತಲೆ ಹೋಳಾಗುವಂತಾ ಗೊಂದಲ...
ಮತ್ತೀಗ,
ಕತ್ತಲ ಹೆಜ್ಜೆ ಗುರುತನ್ನು ಹುಡುಕಲು ಲಾಟೀನಿನ ಕಿವಿ ಹಿಂಡುತ್ತೇನೆ...
#ಅರ್ಥಗಿರ್ಥ_ಕೇಳ್ಬೇಡಿ_ಆಯ್ತಾ...
↜↞↑↠↝

ಗಿರಿಯ ನೆತ್ತಿಯಲಿ ಮೋಡ ಕೈಯ್ಯಲ್ಲಿ - ಏರಲಾರದ ಸುಸ್ತಿಗೆ ಹಾದಿಯ ದೂಷಿಸಲೆಂತು...

ಅವರು ಕತ್ತಲ ಸುರಿದು ಸುತ್ತ ಗೋಡೆ ಕಟ್ಟಿದರು - ಬೆಳದಿಂಗಳ ಕುಡಿಗೆ ಕಾಯುತ್ತ ಚುಕ್ಕಿಗಳಿಗೆ ಲೆಕ್ಕ ಕಲಿಸೋದ ಕಲಿತೆ...
ಅವರೋ ತಾರಸಿಯನೂ ಕಟ್ಟಿದರು - ನಾ ಕಂಬನಿಯಲೇ ಮಣ್ಣ ಕಲೆಸಿ ಹುತ್ತ ಕಟ್ಟಿ ನೆಲದೊಳಗಿಳಿದೆ...

ಹುಟ್ಟು ಬದುಕಿಗಾಗಿ ಅಳೋದನ್ನ ಕಲಿಸುತ್ತೆ - ಅಯಾಚಿತ...
ಕಣ್ಣೆದುರಿನ ಸಾವು, ನೋವು ನಾಕು ಚಣ ನಗು ನಗುತ್ತಾ ಬದುಕೋದನ್ನ ಕಲಿಸಿದ್ದಾದರೆ - ಸ್ವಯಾರ್ಜಿತ...
#ಕೆರೆತಕ್ಕೆ_ಸಿಗದ_ನೋವು_ಮದ್ದಿಗೆ_ಬಗ್ಗದ_ಸಾವು_ಬರೀ_ದೇಹದ್ದಲ್ಲ...
↜↞↑↠↝

ಎಲೆಯ ತುದಿಯಲಿ ಹೊಯ್ದಾಡೋ ಇಬ್ಬನಿ ಹನಿಯಲಿ ದಿನಮಣಿಯು ಮೀಯುವುದ ಕಂಡೆ - ಮಳೆಬಿಲ್ಲ ಜೋಕಾಲಿ...
ಬದುಕಿರುವುದಕ್ಕಾಗಿ ಬಡಿದಾಡುವುದಕ್ಕೂ ಬದುಕಿರೋ ಘಳಿಗೆ ಘಳಿಗೆಯನೂ ಜೀವಿಸುವುದಕ್ಕೂ ಏಸೊಂದು ಅಂತರವಿದೆಯಲ್ಲಾ...
#ಬದುಕೆಂಬ_ಉತ್ಸವ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, September 16, 2017

ಗೊಂಚಲು - ಎರಡ್ನೂರಾ ಮೂವತ್ತೊಂದು.....

ಉಸಿರ ಬೆಮರಿನ ಮತ್ತು.....

ಗಂಡು ಬೆತ್ತಲನ್ನ ಬಯಸುವಲ್ಲಿ ಹೆಣ್ಣು ಕತ್ತಲನ್ನು ಬಯಸುತ್ತೆ...
ಸೋಲನ್ನೂ ಮುಚ್ಚಿಟ್ಟು ಕಾಯುವ ಸಾಂತ್ವನದ ಕರುಳು, ಕನಸುಗಳ ಬೇರು - ಇರುಳು ತಾಯಂತೆ...
ಕನಸಿಗೆ ಕಸುವ ತುಂಬುತ್ತಲೇ ಗೆಲುವನೂ ಆಡಿಕೊಂಡು ನಗಬಲ್ಲ ಒರಟೊರಟು ಹಾದಿ - ಹಗಲು ತಂದೆಯಂತೆ...
ಮುಂಬೆಳಗಿಗೂ ಮುಳುಗೋ ಸಂಜೆಗೂ ಹೊರಳೋ ಅಲೆ ಕೆಂಡಗೆಂಪು...
ಹಗಲಿನ ತಾಂಡವ - ಇರುಳಿನ ಚಂದಮ ಸಂಧಿಸುವ ನಡುಗಾಲ ಮುಸ್ಸಂಜೆಯಲಿ ಅರಳಿದ್ದು ಪಾರಿಜಾತ...
#ಬಲಾಬಲದಲಿ_ಹೊಯ್ದಾಡು#ಬರಿದಾಗಿ_ಹಗುರಾಗು#ಮತ್ತೆ_ಬಲವಾಗು...
⇴💑⇴

ಅವಳ ಹಬೆಯಾಡೊ ಹಸಿ ಚೆಲುವ ಹಿತವಾಗಿ ತಬ್ಬಿದ ಬೆಳಕು ಸೋರುವ ವಸನ
ಮಿಂದೆದ್ದ ಹನಿ ಹೊತ್ತೇ ಅರಳಿ ಆಮಂತ್ರಿಸೋ ಮೊಲೆ ಹೂವಿನ ಯೌವನ
ಹಸಿ ಹೆರಳ ಕೇದಗೆ ಕಂಪಿಗೆ
ಮತ್ತ ಕಂಗಳ ಚಂಚಲ ಇಶಾರೆಗೆ
ಅವನಾಸೆ ಹಕ್ಕಿ ಗರಿಬಿಚ್ಚಿ ಸೊಕ್ಕಿ ಮಡಿ ಮರೆತ ನಡು ಹಗಲು...
ಮರುಳ ಹಸಿವಿನ ಬೆರಳ ಕೈವಾರ ಮೈಯೆಲ್ಲ ಸುತ್ತಿ ಸುಳಿದು
ವ್ಯಗ್ರ ನಡು ನಡುಗಿ ಹಿಂಡಿ ಹಿಡಿಯಾಯ್ತು ಬಿಸಿ ಬೆತ್ತಲ ಪ್ರತಿ ಕವಲು
ಉರುಳುರುಳಿ ಝೇಂಕರಿಸೊ ಉನ್ಮತ್ತ ಉಸಿರು
ಭರಪೂರ ಬೆವರಾಗಿ ಬೆಳಕಾಯ್ತು ಪ್ರೇಮದ ಕರುಳು
ಹೊಕ್ಕುಳಾಳದಲೆಲ್ಲೋ ಗಡಬಡಿಸಿ ಒಡೆದ ಅಮೃತ ಗಿಂಡಿ
ಸುರಿ ಸುರಿದು ಬರಿದಾಗಿ ಬಾನು ಭುವಿಯಲಿ ಇಂಗಿ
ಸಿಡಿವ ನೆತ್ತಿಯಲಿದೋ ಸುಖದ ಸಂಭ್ರಾಂತಿ
ತೊಟ್ಟಿಲ ಕನಸಿನ ನಾವೆ ತೇಲುವ ಎದೆಯ ಕಡಲಲಿ ತೊಯ್ದು ತುಯ್ಯುವ ನಗೆಯ ಸಂಕ್ರಾಂತಿ...
#ಬಿರುಬಿಸಿಲಲೂ_ಹುಚ್ಚೆದ್ದ_ಅಂತಃಪುರ..‌.
⇴💑⇴

ಮನ್ಸಿನ್ ಕದವ ತೆಗ್ದಿಟ್ ಮಲ್ಗೇ ನಾ ನಿನ್ ಕನ್ಸಿಗ್ ಬತ್ತೀನಿ -
ಬರಿಗೈ ದಾಸ ಆಗಾಕಿಲ್ಲ ಜೊಂಪೆ ಜೊಂಪೆ ಹೆರಳಿಗಿಷ್ಟು ಮಲ್ಗೆ ತತ್ತೀನಿ -
ಮಂಚಕ್ಕಾತು ಕೂತು ಇನಿತು ಪೋಲಿ ಮಾತಾಡ್ವಾ -
ನಡು ನಡುವೆ ಒಂಚೂರು ಲಜ್ಜೆಯ ಅಧಿಗಮಿಸು,
ಕಣ್ಣ ಹಸಿವಲಿ ನಾ ಮಾತು ಮರೆತಾಗ ಅಧರಕಧರವ ಸಂಕಲಿಸು,
ಕೊರಳ ಮಚ್ಚೆಯ ಕೆಣಕೋ ಬಿಸಿ ಉಸಿರ ಲಾಸ್ಯದಲಿ ತುಸು ಸಂಭ್ರಮಿಸಲಿ ಹರೆಯ...
ಮುಂದಿನದೆಲ್ಲ ಪ್ರಕೃತಿ ಚಿತ್ತ ಚಿತ್ತಾರ...
#ಜೀವದಲ್ಲಿ_ಜೀವಕಣಗಳೆಲ್ಲ_ಜೀವಂತವಿರುವಂತೆ_ಸಾಕ್ಷಿ_ಈವ_ಚಾದರದೊಳಗಿನ_ಕತ್ತಲು...😉
⇴💑⇴

ಕಪ್ಪು ಹುಡುಗಿಯ ಮೈಯ್ಯ ಪುತ್ಥಳಿಯ ಕತ್ತಲ ತಿರುವುಗಳಲಿ ನಾಚಿ ಅಡಗಿ ಕೂತಂತಿರುವ ಪುಟ್ಟ ಪುಟ್ಟ ಮಚ್ಚೆಗಳ ಸರ್ವೆಗೆ ಆಸೆಯಿಂದ ಹೊರಳುತ್ತೇನೆ ಮತ್ತೆ ಮತ್ತೆ...
ಏರಿಳಿವಿನ ಜಾರು ಹಾದಿಯಲಿ ಸುಳ್ಳು ಸುಳ್ಳೇ ಲೆಕ್ಕ ತಪ್ಪುತ್ತೇನೆ ಮತ್ತೆ ಮತ್ತೆ...
ತಪ್ಪಿದ ಲೆಕ್ಕಕ್ಕೆ ಮುತ್ತಿನ ಕಂದಾಯವ ಕೇಳದೆ ಕಟ್ಟುವ ನನ್ನ ತುಂಟ ಉದಾರತೆಯ ಮಧುರ ಪಾಪದ ಪ್ರತಿ ಪಾದಕೂ ಹುಸಿ ಮುನಿಸಿನ ಬಿಸಿ ಉಸಿರಲಿ ತುಟಿ ಕಚ್ಚುತ್ತಾಳೆ ಮತ್ತೆ ಮತ್ತೆ...
ಇಷ್ಟಿಷ್ಟಾಗಿ ಹದ ಮೀರಿದ ಹಸಿವಲ್ಲಿನ ಉತ್ಖನನದುತ್ತುಂಗದ ಉತ್ಥಾನ ಉರವಣಿಗೆಯಲಿ ನಡುವೆ ನುಸುಳಲಾಗದೇ ಸೋತ ಗಾಳಿ ಬೆನ್ನಿಂದ ಬೆನ್ನಿಗೆ ಜಾರಿ ಕೋಡಿ ಬಿದ್ದ ಬೆವರನ್ನೆ ತಾಕಿ ಕಂಪಿಸಿದಂತಿದೆ ಮತ್ತೆ ಮತ್ತೆ...
#ಪ್ರಣಯ_ಪಾರಾಯಣಕೆ_ಮತ್ತೆ_ಮತ್ತೆ_ಸಿಡಿವ_ಇರುಳ_ಕರುಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, September 12, 2017

ಗೊಂಚಲು - ಎರಡ್ನೂರಾ ಮೂವತ್ತು.....

ಹೆಸರಿಲ್ಲದೆ ಎದೆ ಹಾಡಿಯಲಿ ಹಸಿರಾಗುಳಿದ ಪುಟ್ಟ ಅಮ್ಮನ ನೆನಹು.....

ನಾಲ್ಕಾರು ವರ್ಷಗಳ ಹಿಂದಿನ ಕಥೆ:
ಅಷ್ಟುದ್ದ ಕೋಣೆ - ಅಷ್ಟೇ ಉದ್ದುದ್ದ ಹೆಸರು: "ಸಾಮಾನ್ಯ ಒಳ ರೋಗಿಗಳ ಕೊಠಡಿ..." 
ಕೋಣೆ ತುಂಬಾ ಮಾರಿಗೊಂದರಂತೆ ಮಂಚ - ಮಂಚಕ್ಕೊಬ್ಬರಂತೆ ಚಿತ್ರ ವಿಚಿತ್ರ ಮನಸ್ಥಿತಿಯಲಿ ನರಳೋ ರೋಗಿಗಳು - ರೋಗಿಗೂ ಮಂಚದ ಸಂಖ್ಯೆಯೇ - ಅವರ ನೋಡಿಕೊಳ್ಳಲು ಜೊತೆಗೆ ನನ್ನಂತೆಯೇ ಅವರ ಕಡೆಯ ಒಬ್ಬರೋ ಇಬ್ಬರೋ...
ಯಾವ ಬಾಗಿಲಲ್ಲಿ ಯಮನ ಭಟರು ಯಾರಿಗಾಗಿ ಕಾಯ್ದು ಕುಳಿತಿರುವರೋ ಅಥವಾ ಒಳಗೇ ನುಗ್ಗಿ ಎಳೆದೊಯ್ದಾರಾ ಎಂಬ ಕಳವಳವೇ ಎಲ್ಲರ ಕಣ್ಣಲ್ಲೂ ಕುಣಿಯುವಾಗ ನಗುತ ಮಾತಾಡೋ ವೈದ್ಯರೇ ದೇವರು - ಮನಸು ಅರಿವೇ ಆಗದೆ ಮೆತ್ತ ಮೆತ್ತಗೆ ನಾದಿಟ್ಟ ಹಿಟ್ಟಿನಂತೆ...
ಹಮ್ಮು ಬಿಮ್ಮುಗಳ ಕವಚದ ಎದೆ ಬಂಡೆ ಹಾಗೆ ಮಿದುವಾದಾಗಲೇ ಪಕ್ಕದ, ಆಚೆಯ, ಅದರಾಚೆಯ ಮಂಚದ ರೋಗಿ ಕೂಡ ನೆಂಟನಂತೆ ಕಾಣೋದು...
ಅಂತ ಹೊತ್ತಲ್ಲೇ ನನ್ನ ಕಣ್ಣಿಗೆ ಬಿದ್ದದ್ದು ಆ ಮೂಲೆಯ ಮಂಚದ ಅಂಚಲ್ಲಿ ಹೀಚು ಕಂದನ ಅವುಚಿ ಕೂತ ಹೆಣ್ಣು ಜೀವ - ಕೆರೆಯ ಮೀನೊಂದನು ಅನಾಮತ್ತು ಎತ್ತಿ ಬೀದಿಗೆಸೆದಂತೆ ಮುಖ - ಇದ್ದೀತು ವಯಸು ಹದಿನೆಂಟೋ ಇಲ್ಲ ಮತ್ತೆರಡು ಹೆಚ್ಚೋ...
ಆ ಜೀವದ ಮಡಿಲಲಾಡೋ ಇನ್ನೂ ವರುಷ ತುಂಬದ ಹಸುಳೆಯ ಎದೆ ಗೂಡಿನ ಅಪಸವ್ಯಕ್ಕೂ ನನ್ನ ತಂಗಿಯ ಹೃದಯದ ರಂದ್ರಕ್ಕಿಟ್ಟದ್ದೇ ಇಷ್ಟುದ್ದ ಹೆಸರಂತೆ ವೈದ್ಯ ಲೋಕದಲ್ಲಿ...
ದೊಡ್ಡಾಸ್ಪತ್ರೆಯ ಬಾಗಿಲಲ್ಲಿ ಅಕ್ಷರ ಅರಿಯದ ಕಣ್ಣೀರು...
ದೇವ ನಗೆಯ ಮಕ್ಕಳ ಕಾಡುವ ದೇವನಿಗೆ ತಾಯ ನಿಟ್ಟುಸಿರ ಶಾಪ ತಾಕದೇ...!?

ಈ ನಗರ - ಆ ದೊಡ್ಡಾಸ್ಪತ್ರೆ - ಸಂತೆಯಂತೆ ತುಂಬಿ ತುಳುಕೋ ಪರೀಕ್ಷಾ ಕೋಠಡಿಗಳು - ಕಿಸೆ ಸುಡುವ ಪರೀಕ್ಷೆಗಳು - ದಿಗಿಲು ಹುಟ್ಟಿಸೋ ರೋಗಗಳ ಹೆಸರು - ಭಯ ಹುಟ್ಟಿಸೋ ಚಿಕಿತ್ಸೆ - ಅವೆಲ್ಲಕಿಂತ ಆ ಹೆಣ್ಣು ಜೀವದ ಕರುಳ ಕೊಯ್ಯುವುದು ಮಡಿಲ ಕೂಸಿಗೆ ಕದ್ದು ಮುಚ್ಚಿ ಮಾಡಿಸಬೇಕಾದ ಉಪಚಾರ; ಕಾರಣ ಒಡಲು ತುಂಬಿದ ಮಗು ಹೆಣ್ಣು... :(
ಅಸ್ತಿತ್ವವನೇ ತಿವಿಯುವ ಮಾತಿನ ಮನೆಯವರು - ದುಡಿಯುವ ಅನಿವಾರ್ಯತೆಯ ಅಸಹಾಯ ಗಂಡ - ಸುತ್ತ ಸುಸ್ತು ಕಂಗಳ ಸಂತೆ - ದವಾಖಾನೆಯ ವಿಚಿತ್ರ ಘಮಲಿಗೆ ಕರುಳಿನಾಳದಿಂದ ಗುಡುಗುಡಿಸಿ ಬರುವ ತಳಮಳದ ಅನಾಥ ಭಾವ - ಗಡಿಬಿಡಿ, ಗದ್ದಲಗಳ ನಡುವೆಯೂ ಉಸಿರ ಕವುಚಿದ ಗರ್ಭಸ್ಥ ಮೌನ - ನಿದ್ದೆಗಣ್ಣಲೂ ಬೆಚ್ಚಿ ನಡುಗುವ ಕಂದಮ್ಮನೆದುರು ಕೂತವಳ ಸಂತೈಕೆಗೆ ಉಬ್ಬಿದ ಕೊರಳ ಸೆರೆ, ಸದ್ದಿಲ್ಲದೆ ಸುರಿದೂ ಸುರಿಯದಂತಿರುವ ಕಣ್ಣ ಹನಿಗಳೇ ಸಾಥಿ... 

ಇದೀಗ ಬೆಳ್ಳಂಬೆಳಗ್ಗೆ ಪಾಪುವಿನ ಎದೆ ಬಗೆದು ಅದೇನೇನೋ ಚಿಕಿತ್ಸೆ...
ಯುಗದಂತೆ ಭಾಸವಾಗೋ ಘಂಟೆಗಳ ಕೊನೇಲಿ "ಆಪರೇಶನ್ ಸಕ್ಸಸ್ ಕಣಮ್ಮಾ" - ವೈದ್ಯರ ಅದೊಂದು ಮಾತೀಗ ಸಾವಿರ ಆನೆಯ ಬಲದ ಸಮಾಧಾನ...
ಆದರೂ, ಅಮ್ಮನಾದರೇನಂತೆ ತುರ್ತು ನಿಗಾ ಘಟಕಕ್ಕೆ ದಿನಕ್ಕೊಂದೇ ಬಾರಿ ಪ್ರವೇಶ...
ಕಣ್ಣ ನದರಿನಾಚೆಯ ಕಂದನ ಭಾರದ ಉಸಿರಾಟ - ಅಮ್ಮನಲ್ಲಿ ಒಡಲಿಗೇ ಬೆಂಕಿ ಬಿದ್ದ ಚಡಪಡಿಕೆ - ಕಣ್ಣ ನಿದ್ದೆ ಆರಿ ದಿನವೆಷ್ಟಾಯಿತೋ...

ಇದೆಲ್ಲ ನಡೆವಾಗ ನಾ ಮಾಡಿದ್ದು ಮತ್ತೇನಿಲ್ಲ: 
ಒಂದು ಮಾತು, ಒಂದೇ ಒಂದು ಪುಟ್ಟ ಭರವಸೆಯ, ಧೈರ್ಯದ ಮಾತು - ‘ಏನಾಗಲ್ಲ ಹೆದರಬೇಡಮ್ಮಾ, ಎರಡು ದಿನ ಎಲ್ಲಾ ಸರಿ ಹೋಗುತ್ತೆ...’
ಆಪರೇಶನ್‌ಗೆ ರಕ್ತ ಬೇಕಾದ್ರೆ..?
ಇದ್ದಾರೆ ಬಿಡಿ ಗೆಳೆಯರು, ಕರೆಸೋಣವಂತೆ...
ಯಾವ ಬಾಗಿಲು ಎಲ್ಲಿಗೊಯ್ದು ಎಲ್ಲಿ ಕಳೆದೋಗುವಂತೆ ಮಾಡುತ್ತೋ ಅಂತ ಕಂಗಾಲಿನಲಿ ಕಣ್ಬಿಡುವಾಕೆಗೆ - ಕೊಡಮ್ಮಾ ಇಲ್ಲಿ ಕಾಸು; ನಾ ತರ್ತೀನಿ ಗುಳಿಗೇನ, ಊಟಾನ...
ಅಷ್ಟೇ... ಒಂದು ಮುಟಿಗೆ ಸಮಾಧಾನ - ನನ್ನ ಮಿತಿಯಲ್ಲಿ...

ಇದೀಗ ಆ ಪಾಪುವೂ ಇದೇ ಸಾಮಾನ್ಯ ಕೊಠಡಿಯ ಬೆಡ್ ನಂ.___
ಮೂಗು, ಎದೆ, ಕೈಗೆಲ್ಲ ಕೊಳವೆಗಳು... 
ಕರುಳಿಗೆ ಕತ್ತರಿ ಹಾಕಿದ ನಡುಕ...
ಆದರೂ ಮಗು ಅದು - ದೈವ ರೂಪ - ರಕ್ಕಸ ಗೈರತ್ತು - ನೋವಿಗೆಂದು ಅಳುತ್ತಲೇ ನನ್ನದೊಂದು ಮಂಗಾಟಕ್ಕೆ ಚಕ್ಕನೆ ನಕ್ಕುಬಿಡುತ್ತೆ - ಬದುಕಿನ ಬಹು ದೊಡ್ಡ ಪಾಠ...
ಇತ್ತ ತಂಗಿ ಚೇತರಿಸಿಕೊಂಡು ನಾವಿನ್ನು ಹೊರಡಲನುವಾಗೋ ಹೊತ್ತಿಗೇ ಅತ್ತ ಆ ಕಂದನ ಅಳುವಿಗಿಂತ ನಗೆಯ ಕಿಲಿಕಿಲಿಯೇ ಹೆಚ್ಚಾಗುತ್ತಿತ್ತು - ಸಣ್ಣ ಸಮಾಧಾನ...
ಆ ಬೆಳಗು ಸೂರ್ಯ ಆಸ್ಪತ್ರೆಯ ನೆತ್ತಿ ಏರೋ ನಡು ಹೊತ್ತು - ‘ಅಣ್ಣಾ ಅಣ್ಣಾ ಇಲ್ಲಿ ಬನ್ನಿ’ ಎಂಬ ಕೂಗಿಗೆ ಬೆಚ್ಚಿ ಓಡಿದ್ದೆ ಬೆಡ್ ನಂ.___ ಹತ್ತಿರ...
ಆ ಪಾಪುವಿಗೆ ಮತ್ತೇನಾಯ್ತೋ ಅನ್ನೋ ದಿಗಿಲು ನನ್ನಲ್ಲಿ...
ಉಫ್...!!!
ಆ ತಾಯಿ ಕರೆದದ್ದು ನೋವಿಗಲ್ಲ... 
ಆ ಕ್ಷಣ ಆಕೆಯ ಕಣ್ಣಲ್ಲಿ ಹೊಳೆಯುತಿದ್ದುದು ಜನ್ಮಗಳ ಮಮತೆ... 
ಆ ಘಳಿಗೆ, ಆ ಚಿತ್ರ, ಬಳಿ ಕರೆದು ಆಕೆ ಆಡಿದ ಮಾತು ನನ್ನೆದೆಯ ಕಣ್ಣಿಂದ ಎಂದಿಗೂ ಮಾಸಲಾರದು... 
ಮೊದಲ ಬಾರಿಗೆ "ತನ್ನೆಲ್ಲ ಜಂಜಡಗಳ ನಡುವೆಯೂ, ನನ್ನೆಲ್ಲ ಬಡಾಯಿಯ ಕೊನೆಯಲ್ಲೂ ‘ಊಟ ಮಾಡಿದ್ಯಾ’ ಅನ್ನೋ ಒಂದೇ ಪ್ರಶ್ನೆ ಕೇಳೋ ಆಯಿ" ಇನ್ನಷ್ಟು ಅರ್ಥವಾದಳು...

ಮಂಜಾದ ಕಣ್ಣಲ್ಲಿ ಅಚ್ಚಾದ ಆ ಚಿತ್ರ: 
ಚಿಕಿತ್ಸೆಗೆ ಬಿದ್ದ ದಿನದಿಂದ ಇಂಜೆಕ್ಷನ್ನು, ಗ್ಲುಕೋಸು ಅಂತ ಕೊಳವೆಯಿಂದ ಕರುಳ ಸೇರೋ ನೀರಿನಿಂದಲೇ ಉಸಿರು ಹಿಡಿದಿದ್ದ, ಯಾವ ನೋವಿಗೋ, ಇನ್ನಾವ ಕನಸಿಗೋ ಕ್ಷಣಕೊಮ್ಮೆ ಕಿಟಾರನೆ ಕಿರುಚಿ ದಿಗಿಲು ಹುಟ್ಟಿಸುತ್ತಿದ್ದ ಪಾಪು ಎಲ್ಲ ನೋವ ಮರೆತು ಕಾಲಾಡಿಸುತ್ತಾ, ಹೊಟ್ಟೆಗೊದೆಯುತ್ತಾ ಮತ್ತೆ ತಾಯೆದೆಯ ತೊಟ್ಟಿಂದ ತನ್ನ ಪಾಲಿನ ಅಮೃತ ಹೀರುತಿತ್ತು...
ಕೂಸು ಮತ್ತೆ ಕೂಸಾಗಿ ದಕ್ಕಿದ ತಾಯೊಲವ ಒಡಲ ಖುಷಿಯ ಸೀಮಾಂತ ಭಾವಲಿ ಆ ತಾಯಿ ನಾನೊಬ್ಬ ಪ್ರಾಯಸ್ಥ ಗಂಡು ಪ್ರಾಣಿ ಎಂಬುದನೂ ಮರೆತು, ಕೇವಲ ಒಂದೆರಡು ಭರವಸೆಯ ಆಪ್ತ ಮಾತಿನ ಬಂಧವಾದ ನನ್ನನ್ನು ಆ ಪರಿ ಕೂಗಿ ಕರೆದು ಹೇಳಿದ ಮಾತು:
" ಅಣ್ಣಾ ನೋಡಿ ಇಲ್ಲಿ, ಪಾಪು ಅಮ್ಮಿ ಉಣ್ಣತಾ ಇದೆ..."

ಎಲ್ಲ ವಿವರಗಳಾಚೆ ಮನದೊಳಮನೆಯ ಮಾತು ಮತ್ತೇನಿಲ್ಲ - ಆಯಿ ಅಂದರೆ ಆಯಿ ಅಷ್ಟೇ - ಜಗದೆಲ್ಲ ಆಯಂದಿರಿಗೆ ಸಾಸ್ಟಾಂಗ... 
#ವಿವರಕ್ಕೆ ಸಿಕ್ಕದ ಸೀಮಾಂತ ಭಾವ ಎದೆಯಲ್ಲಿ - ಘಟನೆಯ ವಿವರವಷ್ಟೇ ಈಗಿಲ್ಲಿ...
_/\_!!!_/\_

ಅವಳೆಂದರೆ,
ಕಳೆದು ಕೊಂಡೇನೆಂಬ ಕಿಂಚಿತ್ ಭಯವೂ ಇಲ್ಲದೇ ಸುಖಾಸುಮ್ಮನೆ ಕೂಡ ಜಗಳಾಡಬಹುದಾದ ಏಕೈಕ ಪ್ರೀತಿ ಮಡಿಲು - ದೇವರಂತ ಮುದ್ದು ಗೆಳತಿ...😘😘
#ಆಯಿಯೆಂಬೋ_ಒಲವ_ಆಲ...💖

Wednesday, August 16, 2017

ಗೊಂಚಲು - ಎರಡ್ನೂರಾ ಇಪ್ಪತ್ತೊಂಭತ್ತು.....

ಮಳೆ ಕೊಯ್ಲು.....

ಒಂದೊಮ್ಮೆ ಕನಸ ಬಿತ್ತಲು ಹನಿ ನೀರಿಲ್ಲ - ಅನಾವೃಷ್ಟಿ...
ಮಗದೊಮ್ಮೆ ಬೀಜವಷ್ಟೇ ಅಲ್ಲ ಹದ ಮಾಡಿದ ನೆಲದ ಗುರುತೂ ಉಳಿಯಲ್ಲ - ಅತಿವೃಷ್ಟಿ...
ಆದರೆ ಮಾತ್ರ - ಎಲ್ಲ ಕಾಲದಲ್ಲೂ ಎದೆ ನೆಲದ ಜೀರ್ಣವಾಗದ ನೆನಕೆಗಳ ಕಳೆ, ಕೊಳೆಯ ಕರುಳ ಹುಣ್ಣು ಕರಗುವುದೇ ಇಲ್ಲ...
#ಬಿಸಿಲು_ಮಳೆ_ಹದವೇ_ತಿಳಿಯದ_ಬದುಕು_ಕಣ್ಣಾಮುಚ್ಚಾಲೆ...
;;;;;^!^;;;;;

ಗುಡಿರ್ಗುಡಿಸಿ ಮಾತಾಗಿ
ಮಿಂಚಿ ಬೆಳಗಿ ಚೆಲುವನೀಂಟಿ
ಮೋಡ ಸಿಡಿದು ಹನಿಯಾಗಿ
ಬಾನ ಪ್ರೇಮ ಮಳೆಯಾಗಿ
ಇಳೆಯೆದೆಯಲಿ ಇಂಗಿತು...
ಇಳಿದಿಳಿದು ಬಾನ ತೇಜ
ಹೊಸ ಹಸಿರಿಗೆ ಮೊದಲ ಬೀಜ
ಭುವಿ ಗರ್ಭದ ಬಿಸಿಯಲಿ...
#ಮೊದಲಾಮಳೆ_ಮೈನೆರೆದಿಳೆ...
;;;;;^!^;;;;;

ಅಂಗೈಯಿಂದ ಅಂಗೈಗೆ ಆಲಿಕಲ್ಲನ್ನು ಬದಲಿಸುತ್ತಾ ಕಣ್ಣರಳಿಸೋ ಮಗಳ ಬೆಳ್ಳಿ ಗೆಜ್ಜೆಗೆ ಮಣ್ಣು ಮೆತ್ತಿ ಹೊನ್ನ ಬಣ್ಣವಾಗಿ, ನಗೆಯು ಮಲ್ಲಿಗೆ ತೋಟ...
ಬಲವಂತಕೆ ಅಂಗಳಕಿಳಿದು ಮಳೆಗೆ ಮುಖವೊಡ್ಡಿದ ನಾನು ಒಳಬಂದು ಜಗುಲಿಯ ಕನ್ನಡಿ ಒಡೆದೆ...
#ಬಣ್ಣ_ಬಳಿದೋದ_ದರ್ವೇಶಿ_ಮುಖ...
;;;;;^!^;;;;;

ಈ ಅಡ್ಡ ಮಳೆಗೆ ಆ ಹಾದಿಯ ಕೊಳೆಯೆಲ್ಲ ಬಳಿದು ಹೋದಂತೆ ಈ ಎದೆಯ ಕಚ್ಚಿಕೊಂಡ ಹಾವಸೆಯೂ ತೊಳೆದು ಹೋಪಂತಿದ್ದರೆ...
#ಕಣ್ಣ_ಹನಿ_ಎದೆಯ_ಮಿದುವಾಗಿಸುವುದೆಂಬುದು_ಎಲ್ಲ_ಕಾಲಕೂ_ಸತ್ಯವೇನಲ್ಲ...
;;;;;^!^;;;;;

ಅಡ್ಡ ಮಳೆಯ ಮುಸ್ಸಂಜೆಗೆ ಮನಸು ಮಗುಚಿ ಬಿದ್ದರೆ ಮಳೆಯ ಹಳಿಯಲಾರೆ...
#ಮಳೆಗೇನು_ಗೊತ್ತು_ಚಿಗುರಿದ_ನೆನಪ_ಹಕೀಕತ್ತು...
;;;;;^!^;;;;;

ಮಳೆಯಾಗಿ ಸುರಿದು ಕಣ್ಣ ಹನಿಯ ಒರೆಸೋ ಮೋಡ - ಎದೆಗೆ ಬಿದ್ದು ಒಡೆದ ಹನಿಯಲ್ಲೇ ಹೊಸ ಚಿಗುರ ಸೃಜಿಸಿ ಭರವಸೆಯನುಣಿಸೋ ಭುವಿಯೊಡಲು; ಉಸಿರ ಹಿಂಡಿ ಸಾವ ತೋರುವ ಎದೆಯ ಗಾಯಕೂ ಸಿಹಿ ಮದ್ದು...
#ಭಾಷ್ಯಗಳ_ಮೀರಿದ_ಒಲವ_ಭಾಷೆ...
;;;;;^!^;;;;;

ಅವನ ತುಂಟತನಗಳನ್ನೆಲ್ಲ ತೋರಣ ಕಟ್ಟಿ ಸ್ವಾಗತಿಸುತ್ತವೆ ನಾಚಿ ಮುಚ್ಚಿದ ಅವಳ ಕಂಗಳು...
ಒಳನಾಡಿಗಳ ಮೀಂಟುವ ಅವನ ನಗೆಯ ಭಾಷೆ ಅವಳ ಕೆನ್ನೆಯ ರಂಗಾಗಿ, ತುಟಿ ಕಟಿಗಳ ಕಂಪನವಾಗಿ, ಉಸಿರ ಬಿರುಸಲಿ ಎದೆಯ ಮಿದುವಿನ ಹಿಗ್ಗಾಗಿ, ಹಿತವಾಗಿ ಬೆವೆತ ಕಂಕುಳ ಘಮವಾಗಿ, ಕಾದ ಇಳೆಯ ಮಳೆಯ ಕನಸಾಗುವುದು...
#ಸಂಜೆಮಳೆ_ಅರಳುಮಲ್ಲಿಗೆ...
;;;;;^!^;;;;;

ಬೆಚ್ಚಿ ಬೀಳುತ್ತೇನೆ - ಮೂರು ಸಂಜೆಯ ಮೂಡುಗಾಳಿಯ ಹೊತ್ತಲ್ಲಿ ನೆತ್ತಿ ತೋಯಿಸೋ ಮಳೆಯ ರಾಗಕೆ...
ಹೂತ ಕನಸಿನ ಹೆಣಗಳೆಲ್ಲ ಘೋರಿಯೊಡೆದು ನೆನಪುಗಳಾಗಿ ತೇಲಿ ಬಂದು ಎದೆಯ ದಂಡೆಗೆ ಬೀಳುವ ರುದ್ರ ವೇಗಕೆ...
#ಸಂಜೆಮಳೆ_ಅರುಳುವ_ಮುನ್ನವೇ_ತೊಟ್ಟು_ಕಳಚಿದ_ಮಲ್ಲಿಗೆ...
;;;;;^!^;;;;;

ಮುಂಬೆಳಗಲೇ ಎದ್ದು ಮುಡಿ ಮಜ್ಜನ ಮಾಡಿದಂತ ಒದ್ದೊದ್ದೆ ಹಾದಿ...
ಸುರಿದು ಸುಸ್ತಾಗಿ ಮತ್ತೆ ಸುರಿಯಲಣಿಯಾಗಿ ನಿಂತ ಕಪ್ಪು ಕಣ್ಣಿನ ಬಾನು...
ಭಾವಕೋಶದಲ್ಲಿ ಜಡ ವಸ್ತುಗಳೂ 'ಯಾರಿಗೂ ಹೇಳ್ಬೇಡ' ಎನ್ನುತ್ತಲೇ ಏನೇನೋ ಪಿಸುನುಡಿಯುತ್ತವೆ ಎನ್ನಲ್ಲಿ...
ಕಣ್ಣಿಗೆ, ಕಾಲಿಗೆ ಶುದ್ಧ ಹೊಸದೆನಿಸೋ ಬೀದಿಯಲೂ ಭಾವಕ್ಕೆ ನೂರಾರು ಸಂಬಂಧಿಗಳು...
#ಮಳೆಮಾಸ_ಹಾದಿ_ಬೀದಿಗೆಲ್ಲ_ಮತ್ತೆ_ಹೊಸ_ಹರೆಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, August 14, 2017

ಗೊಂಚಲು - ಎರಡ್ನೂರಾ ಇಪ್ಪತ್ತೆಂಟು.....

ಪಾಚಿಗಟ್ಟಿದೆದೆಗೋಡೆ.....

ಎನ್ನ ಒಳಗೇ ಒಲವಿರಲು ನಿನ್ನ ಹಂಗೆನಗಿಲ್ಲ - ಹಂಗಿನಲಿ ಒಲವು ಬೊಗಸೆಯೊಳಗಿನ ಬೆಳಕು...
ಅಂತೆಯೇ ನಿನ್ನ ಮಡಿಲಿಲ್ಲದೇ ಒಲವಿಗೆ ನೋಟದ ಹರಹಿಲ್ಲ, ಜನ್ಮ ವಿಸ್ತಾರವಿಲ್ಲ...
ಸೂರ್ಯನುಸಿರಿಗೆ ಹೂವು ಅರಳಿ ಬೆಳಕೂ ಸ್ವತಂತ್ರ ಗಂಧವೂ ಸ್ವತಂತ್ರ...
ಭಾವದಲ್ಲಿ ಬೆಳಕಂತೆ ಬೆಳೆದು, ಭವದಲ್ಲಿ ಹಿಮದಂತೆ ಕರಗಿ, ಕರಗಿಯೂ ಬೆಳೆಯುವ ಆಟದಲ್ಲಿ ಸ್ವತಂತ್ರ ಅಸ್ತಿತ್ವಗಳೆರಡು ಪರಸ್ಪರಾಲಂಘಿಸಿ ಹೊಸ ಸ್ವತಂತ್ರ ಗತಿ ಹುಟ್ಟುವಲ್ಲಿ ಒಲವು ಸ್ವಾತಂತ್ರ್ಯದ ಅವಲಂಬಿತ...
#ಏನ_ಹೇಳಿದೆನೋ_ನಂಗೇ_ಅರಿವಿಲ್ಲ...
{!}+{!}+{!} 

ಅದೇನು ದೌರ್ಬಲ್ಯವೋ ಕಾಣೆ ನನ್ನಲ್ಲಿ - ಸಾವಿನ ಮನೆಯೊಂದನುಳಿದು ಇನ್ನೆಲ್ಲಿಯೂ ನಾನು ನನ್ನ ಮನಸು ಹಬ್ಬಿ ತಬ್ಬಿಕೊಂಡ ಬಂಧಗಳ ಮೌನದ ಸಮರ್ಥನೆಯನ್ನು, ಮೇಲರಿಮೆಯನ್ನು ಒಪ್ಪಲಾರದೇ ಹೋಗುತ್ತೇನೆ...
ಅಲ್ಲೆಲ್ಲ ಅವರ ಆ ಬಚ್ಚಿಟ್ಟ ಭಾವಗಳೆದುರು ಮಾತನ್ನೇ ಧೇನಿಸುತ್ತ ಪಿಳಿ ಪಿಳಿ ಕಣ್ಬಿಡುತ್ತ ನಿಟ್ಟುಸಿರಾಗೋ ಅಸಹಾಯ ಮೂಗ ನಾನು...
#ನಗಬೇಕಾದಾಗಲೇ_ಅಕಾರಣ_ಮಗುಚಿಬೀಳುವ_ಅಪದ್ಧ_ಮನಸು...
{!}+{!}+{!}

ಮಾತಲ್ಲಿ ಸುಳಿದಿರುಗೋ ಭಾವ ತೀವ್ರತೆ ಮನಸಿಗೆ ದಕ್ಕದೇ ಹೋಗುವ ಕೆಲವು, 'ಮತ್ತೆ ......... ಮತ್ತೆ' ಎಂಬೋ ಶುಷ್ಕ ಶಬ್ದದ ನಡುವಿನ ಉಶ್ವಾಸ ನಿಶ್ವಾಸದಲ್ಲಿ ಮಾತನೆಲ್ಲ ಬಚ್ಚಿಡುವ ಇನ್ಕೆಲವು - ರದ್ದಿಯಾದದ್ದು ಸಾಕಾಗಿ, ಸೋತು ಸೋತು ಸುಸ್ತಾಗಿ ಮುಖ ತಿರುವಿದೆ...
ನಾಕು ಹೆಜ್ಜೆ ಒಂಟಿ ನಡೆದು ಸೋತದ್ದು ನಂಗಾಗಿಯೇ ಮತ್ತು ಆ ಸೋಲಲ್ಲೇ ನನ್ನ ನಗುವೂ ಅಡಗಿದೆ ಅಂತ ಅರಿವಾಗಿ ಮರಳಿ ಹೆಜ್ಜೆ ಹಾಕ ಬಂದರೆ ಹಾದಿಯೆಲ್ಲ ಬರಿದೋ ಬರಿದು...
ಯಾವ ಕವಲಲ್ಲಿ ಯಾರು ಸರಿದು ಹೋದರೆಂದು ತಿಳಿಯದ  ಹಿಂದಿಲ್ಲದ ಮುಂದಿಲ್ಲದ ತ್ರಿಶಂಕು ಪಿಶಾಚಿ ಈಗಿಲ್ಲಿ ನಾನು...
ನೆಪಕೊಂದು ಕುಂಟು ಕನಸನಾದರೂ ಭಿಕ್ಷೆ ನೀಡು ಬದುಕೇ ಬದುಕಿಕೊಳ್ಳುತ್ತೇನೆ...
#ನೆನಪುಗಳ_ಕಾವಲು_ಕಾಯುತ್ತ_ಕಾಯುತ್ತ_ಎದೆಗೋಡೆ_ಪಾಚಿಗಟ್ಟಿದೆ...
{!}+{!}+{!}

ಮುಸ್ಸಂಜೆಯಲಿ ಅಯಾಚಿತವಾಗಿ ಹುಟ್ಟಿಕೊಳ್ಳೋ ನಿರಂಕುಶ ಖಾಲಿತನ - ಹಿಂತಿರುಗಿ ನೋಡಿದರೆ ನೋವು ನಲಿವು ಎರಡೂ ನಿಟ್ಟುಸಿರ ಬಿಸಿಯ ಚೆಲ್ಲಿ ಎದೆ ಕೊಳವ ಕದಡುತ್ತವೆ - ಸಿಡಿವ ಕಂಗಳಾಳದಲಿ ಸೋತ ರಟ್ಟೆಯ ಬಿಂಬ - ಕೊನೆ ಕೊನೆಯ ಹೆಜ್ಜೆಗಳು ಇನ್ನಷ್ಟು ಭಾರ ಭಾರ...
ಆದರೂ,
ಕನಸೇ ನಿನ್ನ ಕನಸುವುದ ಬಿಡಲಾರೆ - ಹೃದಯಕ್ಕೆ ನೋವಾಯ್ತೆಂದು ಕರುಳ ಸುಟ್ಟುಕೊಂಡರೆ ಬಂಜರಾಗುವುದು ನನ್ನ ಹಾದಿಯೇ ಅಲ್ಲವೇ...
ಅಲ್ಲಿಗೆ, ಬದ್ಕಿರೋ ಕಾರಣಕ್ಕಾದ್ರೂ ನಗುವನ್ನ ಸಲಹಿಕೊಳ್ಳಬೇಕು...
#ಹೆಜ್ಜೆ_ನಡುಗಿದಷ್ಟೂ_ಗೆಜ್ಜೆಗೆ_ದನಿ_ಹೆಚ್ಚು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, August 1, 2017

ಗೊಂಚಲು - ಎರಡ್ನೂರಾ ಇಪ್ಪತ್ತೇಳು.....

ಅಂದಾದುಂದಿ ಕಳೆದೋದ ಅಷ್ಟೊಂದು ವರುಷಗಳು..... 

ಕಪ್ಪಾದರೂ ಇರುಳು; ಕಪ್ಪಲ್ಲ ಕಣ್ಣ ಬೆಳಕು -
ಬೆಳ್ಳಗಿದ್ದರೂ ಹಗಲು ಹಾಲಲ್ಲ; ತೋರುವಲ್ಲಿ ಎದೆಯ ಒಡಕು...

ನಂಗೆ ಪ್ರೀತಿಯ ಉತ್ತಿ ಬಿತ್ತಿ ಗೊತ್ತಿಲ್ಲ...
ಪ್ರೀತಿಯ ಮಟ್ಟು ಪೆಟ್ಟುಗಳ ಅರಿವಿಲ್ಲ...
ನನ್ನದೇನಿದ್ದರೂ ಆ ಆ ಕ್ಷಣಗಳಿಗಿಷ್ಟಿಷ್ಟು ತೋಚಿದಷ್ಟು ತೋಚಿದಂತೆ ಸ್ಪಂಧಿಸುವುದು, ಕ್ರಿಯೆಗಳಿಗೆ ಅಗತ್ಯ ಪ್ರತಿಕ್ರಿಯೆ ನೀಡುತ್ತಾ ಸಾಗುವುದು...

ಪ್ರೀತಿ ಮೌನದ ಕಡಲು ಅಂದವರ ನಡುವೆ ನಾನು ಅಲೆಗಳಿಗೆ ಕಿವಿಯೊಡ್ಡುತ್ತೇನೆ...
ನಿಜದಲ್ಲಿ ಪ್ರೀತಿ ಮಾತೂ ಅಲ್ಲ, ಮೌನವೂ ಅಲ್ಲ - ಅದು ಹಸಿದೆದೆಯ ಜೊತೆ ಕೂತು ಘನತೆ ತುಂಬಿ ಕೊಡುವ ಮಾತು ಮೌನದ ಹದ ಬೆರೆತ ಭರವಸೆಯ ತುತ್ತಿನ ಸ್ಪರ್ಶ...

ನಂದೇನಿಲ್ಲ ಬಿದ್ದ ಬೀಜದ ಆಯ್ಕೆಯದು ಮೊಳೆಯುವುದಾ ಇಲ್ಲಾ ಕೊಳೆಯುವುದಾ ಎಂಬುದು - ಎನ್ನೆದೆಯ ಬಿಸಿ ಬರೀ ಪೋಷಕ ಪುರವಣಿ ಅಷ್ಟೇ...

ನಿಜ ಗೊತ್ತಾ,
ನಂಗೆ ಅನ್ನ ಹೆಚ್ಚಾದರೆ ಮರುದಿನ ಆ ನಾಯಿಗೆ ಅಜೀರ್ಣ - ಜಗದ ಕಣ್ಣಲ್ಲಿ ನಂಗೆ ನಾಯಿ ಅಂದ್ರೆ ತುಂಬಾ ಪ್ರೀತಿ...
#ಯಾರದು_ಜಾಲಿಯ_ಮರದಡಿ_ನೆರಳ_ಹುಡುಕುವವರು...

ಮರಳಿ ಬಾರದ ಮನ್ವಂತರಕೆ ಮರಮರಳಿ ಹೊರಳ್ಹೊರಳಿ ಕನವರಿಸುವ ಕರು ಮನಸು...
ನಗೆಯ ನಿನ್ನೆಯ ಹೊಗೆಯೂ ಇಲ್ಲ ಇಂದಿನಲಿ - ಹಾಗಿದ್ದೂ ನಾಳೆಯ ಕನಸುವುದು ನಿಲ್ಲದು; ನೆರಳಿಲ್ಲದಿದ್ದರೇನಂತೆ ಬೇರಿಹುದಲ್ಲ ಜಾಲಿ ಮರಕೆ...
ಸಂತೆಯೊಳಗಣ ನಗುವಿಗೆ ಏಕಾಂತದಿ ಸುರಿದೋದ ಎದೆಹನಿಯೇ ಪ್ರಧಾನ ಅರ್ಘ್ಯ ಅಂತಂದರೆ ಸಾಕ್ಷಿ ಕೇಳಬೇಡಿ...

ಪಕ್ಕನೆ ಅತ್ತುಬಿಡೋ ಸ್ವಾತಂತ್ರ್ಯ ಕಿತ್ತುಕೊಂಡು, ರಟ್ಟೆಗೆ ಬಲ ತುಂಬದೇ ಹುಚ್ಚು ಇಚ್ಛೆಗಳ ಕಿಚ್ಚನು ಮೈಮನದೆ ತುಂಬಿ, ಬಿಕ್ಕಿ ನಗಬೇಕಾದ ಹರೆಯವ ಕೈಗಿತ್ತು ಮಜ ನೋಡುವ ಬದುಕಿನ ತಣ್ಣನೆಯ ಕ್ರೌರ್ಯವ ಏನೆಂತು ಬಣ್ಣಿಸಲಿ...
ಆದರೂ, ಎಂಥದ್ದೇ ಆದರೂ ನಗುತಿರುವಂತೆಯೇ ಪಾತ್ರ - ಆಗಬಾರದೆ ಗೋಡೆಯ ಚಿತ್ರ...
ಯಾವುದೂ ಅನಗತ್ಯವಾಗಿ ಉದ್ದುದ್ದ ಬೆಳೆಯಬಾರದಲ್ಲವಾ...

"ಹುಟ್ಟು ಹಬ್ಬವಾಗುವುದು ಅಮ್ಮನ ಕರುಳ ಬಲದಿಂದ...
ಬದುಕು ಹಬ್ಬವಾಗುವುದು ಅವರವರ ಆತ್ಮ ಬಲದಿಂದ..." ಹೀಗಂತ ನಾನೇ ಹೇಳಿದೆ...
ಆದರೆ ಮೂವತ್ತು ಮತ್ತೈದು ವರ್ಷಗಳ ಕಳೆದು ಮತ್ತೊಂದು ಹೊಸ ವರ್ಷದ ಬಾಗಿಲಲಿ ನಿಂತು ಹಿಂತಿರುಗಿ ನೋಡಿದರೆ  ಆ ಆತ್ಮಬಲ ನನ್ನಲಿದೆಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂಬುದೇ ಆಗಿರುತ್ತೆ...

ಅದೇ ಹೆಸರು, ಏರಿಳಿವ ಉಸಿರು, ಅದೇ ನಾಡಿ ಮಿಡಿತ, ನಿಲ್ಲದ ಹೃದಯದ ಲಬ್ ಡಬ್ ಬಡಿತ ಮತ್ತು ಗೋನಾಳಿ ಒಡೆವಂತ ಅಟ್ಟಹಾಸ...
ಜಗದ ಹಾದಿಯಲ್ಲಿ ನಾನಿನ್ನೂ ಬದುಕಿಯೇ ಇದ್ದೇನೆ...

ಆದ್ರೆ ಏನ್ಗೊತ್ತಾ -
ತಳ ಒಡೆದ ಮಡಕೆಯಂತ ನನ್ನೊಳಗೆ ನಾ ಸತ್ತು ದಿನವೆಷ್ಟಾಯಿತೋ...
ಹೆಣವೊಂದು ಬದುಕಿನೊಂದಿಗೆ ಮಾತಾಡಿದಂತೆ ಈ ಖಾಲಿ ಖಾಲಿ ತುಕಾಲಿ ದಿನಗಳು...

ಅರೆ, ಅಷ್ಟರಲ್ಲಿ ಮಸಣದ ಮುತ್ತುಗದ ಹೂವಿನೊಂದಿಗೆ ದುಂಬಿಯೊಂದು ಸುರತಕ್ಕೆ ಬಿದ್ದುದ ಕಂಡೆ - ಮತ್ತೆ ಎದೆಯ ಗೋನಾಳದ ತಳದಲ್ಲೊಂದು ಭರವಸೆಯ ಬಿಂದು...
ಈ ವರ್ಷ ಮಳೆ ಸಮೃದ್ಧವಿದ್ದೀತು...

ಹುಟ್ಟು ನನ್ನ ಆಯ್ಕೆ ಆಗಿರಲಿಲ್ಲ, ಸಾವು ಯಾರದೇ ಅಂಕೆಯಲಿಲ್ಲ; ಈ ಬದುಕು ಇದು ನನ್ನದು...
ಹೌದು, ಹಾಗಾಗಿ ಅದು ಇದ್ದಂತೆಯೇ ಇರ್ಲಿ ಬಿಡು ಅನ್ನೋದು ಸಿಗದ ಹಣ್ಣು ಹುಳಿ ಹುಳಿ ಎಂಬ ನರಿ ಬುದ್ಧಿಯ ಸ್ವಾರ್ಥ...

ಶುಭಾಶಯಗಳು ಬದುಕೇ - 
ಎಲ್ಲ ತೊರೆದೋದ ಮನೆಯ ಮೂಲೆಯ ಮಾಡುಗುಳಿಯಲ್ಲಿ ಮರೆತು ಉಳಿದೋದ ಅನಾಥ ಎಣ್ಣೆಯ ಗಿಂಡಿಯಂತೆ ಸಾವಿನ ಕಣ್ಣಂಕೆಯಿಂದ ನುಣುಚಿಕೊಂಡು ಇಷ್ಟು ಕಾಲ ಬದುಕಿದ್ದಿದ್ದಕ್ಕೆ - ಎಂದೋ ಅನಾದಿಯಲ್ಲಿ ಇದೇ ತೇದಿಯ ದಿನ ಹುಟ್ಟಿದ್ದೆ ಎಂಬ ನೆಪದಲ್ಲಿ...      

                                        ___ ಶ್ರೀವತ್ಸ ಕಂಚೀಮನೆ 

Tuesday, July 18, 2017

ಗೊಂಚಲು - ಎರಡ್ನೂರಾ ಇಪ್ಪತ್ತಾರು.....

ಏನೋ ಅಷ್ಟಿಷ್ಟು..... 

ಸಾವನ್ನು ಜೀವಿಸುವ ಭಾವಾನುಭಾವ ಸಂಗ್ರಹ ಈ ಬದುಕು...
ನನ್ನೊಳಗಣ ಹಗಲ ಮುಖ ಹಾಗೂ ಇರುಳ ಮುಖದ ನಡುವಿನ ನಾಡಿ ನುಡಿಯ ಹಾಡು ವಿರೂಪಗೊಂಡು ಆತ್ಮಾನುರಾಗ ತೀವ್ರತೆ ಕಳಕೊಂಡ ಹೊತ್ತು ಬದುಕೇ ಸಾವು...
!!!#!!!

ಪಡೆದ ಪ್ರೀತಿಗೆ ಗೌರವ ಸಲ್ಲಿಸುವುದೆಂದರೆ ಕೊಟ್ಟವರಿಗೆ ತಕ್ಷಣಕೊಂದು ಧನ್ಯವಾದದ ಆಭಾರ ಮನ್ನಣೆ ಅರ್ಪಿಸಿ ಖುಷಿಪಡಿಸಿ ಮರೆಯುವುದಾಗಲೀ ಅಥವಾ ಅಲ್ಲಲ್ಲಿ ಆಗೀಗ ಕೊಟ್ಟವರ ಕೊಡುಗೈಯ್ಯನ್ನು ಹಾಡಿ ಹೊಗಳಿ ಮೆರೆಸುವುದಾಗಲೀ ಅಲ್ಲ...
ಆ ಪ್ರೀತಿ ತುತ್ತಿಟ್ಟ ಹೃದಯಕೆ ಇನಿತಾದರೂ ಪ್ರೀತಿಯನೇ ಬಡಿಸಬಹುದಾದ ಸಣ್ಣ ಅವಕಾಶಕೂ ಹಸಿ ಭಾವದಿ ಕಾಯುವುದು - ಕಾಯುತ್ತ ಕಾಯುತ್ತ ನಾವು ಪಡೆದ ವಲಯದಿಂದಾಚೆಯೂ ಹಿಗ್ಗಿ ಎಲ್ಲೆಲ್ಲಿ ಬೇಕಾದಲ್ಲಲ್ಲಿ ಅಷ್ಟಿಷ್ಟು ಹಂಚುತ್ತಾ ಪ್ರೀತಿ ಬಿಳಲನ್ನು ವಿಸ್ತರಿಸುತ್ತಾ ಸಾಗುವುದು...
ಬಯಲಲ್ಲಿ ಬಯಲಾಗಿ ತೆರೆದ ತೋಳ ತುಂಬ ಗಾಳಿಯು ಕದ್ದ ಗಂಧ ಪ್ರೀತಿ...
ಪಡೆದ ಕಣ್ಣಲ್ಲಿ ಕೊಟ್ಟ ಎದೆಯ ಮೃದು ಮಿಡಿತವು ಬಿಡಿಸಿದ ಬಣ್ಣದ ಬಿಲ್ಲು ಪ್ರೀತಿ...
#ಪ್ರೀತಿಗೆ_ಪ್ರೀತಿಯೊಂದೇ_ಪ್ರೀತಿಯ_ಉಡುಗೊರೆ...
!!!#!!!

ಕತ್ತಲ ಕಣ ಕಣದಿ ಕದ್ದು ಕುದಿವ ಸುಖದ ಹಪಹಪಿ...
ಬೆಳಕಿಗೋ ಎಲ್ಲವನೂ ಒಡೆದು ತೋರುವ ಹಠ...
ಕತ್ತಲ ಬೀಜದ ಚಿಪ್ಪೊಡೆದು ನಕ್ಕ ಬೇರು - ಚಿಗುರನು ಸಂಧಿಸುವ, ಬಂಧಿಸುವ ತಂತುವಿನಲಿ ಹೊಚ್ಚಿಹುದು ಕತ್ತಲು ಬೆಳಕಿನ ಅನುಸಂಧಾನ...
#ಅಜ್ಞಾನಿಯ_ವಿಜ್ಞಾನ...;)
!!!#!!!

ಸಾವು, ನೋವಿನ ಸನ್ನಿಧಿಯಲ್ಲಿ ಕೆಟ್ಟ ಮಾತಾಡಬಾರದು ಅನ್ನೋದು ಬದುಕಿನ ಸಹಜ ಸೌಜನ್ಯ...
ಸಾವು, ನೋವುಗಳು ಕೂಡಾ ಸುಳ್ಳಿನ ಅಥವಾ ಸೋಗಿನ ಪರವೇ ನಿಂತಂತಾಗೋದು ನಿಜದ ವಿಷಾದ...
ಸತ್ಯಕ್ಕೆ ಶ್ರೇಷ್ಠತೆಯ ಗುಡಿ, ಆದರ್ಶದ ಬೀಗ, ಪವಿತ್ರತೆಯ ಕಾವಲು, ಸೌಜನ್ಯದ ಸಾಷ್ಟಾಂಗ...
ಬದುಕಿನ ಬಾಯಿಗೆ ಸುಳ್ಳಿನ ಬಿಸಿಬಿಸಿ, ರುಚಿರುಚಿ ಕೂಳು...
!!!#!!!

"ನಗುವಿಗೆ ತೂಕವಿಲ್ಲ, ನೋವ ಹಿಮ ಕರಗುವದೇ ಇಲ್ಲ...
ಇಂತಿಪ್ಪಲ್ಲಿ ಸಾವಿನಷ್ಟು ಸುಖವಿಲ್ಲ ಬದುಕಿಗೆ... 
ಎದೆಯ ಅಭಿಮಾನ ಅಸಹಾಯವಾಗೋಕೂ ಮುಂಚೆ ಉಸಿರು ತಂಪಾಗಿಬಿಡಬೇಕು..."
  ___ನೋವ ಹಾದಿಯ ಧೂಳು ಮೆತ್ತಿದ ಕಣ್ಣ ಬಿಂದುವಿನ ಭಾರ ಭಾರದ ಮಾತು ಕಿವಿಯ ಸುಡುತಿದೆ...
!!!#!!!

ರಂಗಸ್ಥಳದ ಆವಾಹಿತ ಭಾವಕ್ಕೆ ಕಣ್ಣು ಕರಗಿದಷ್ಟು ತೀವ್ರವಾಗಿ ಕಣ್ಣೆದುರಿನ ಬದುಕಿನ ವಾಸ್ತವತೆಗೂ ಮನಸು ಆರ್ದ್ರವಾಗಿ ಸ್ಪಂಧಿಸಿದ್ದಿದ್ದರೆ ನಾನೂ ಒಂಚೂರು ಮನುಷ್ಯನಾಗಬಹುದಿತ್ತೇನೋ...
#ನಾಟಕೋತ್ಸವ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, July 14, 2017

ಗೊಂಚಲು - ಎರಡ್ನೂರಾ ಇಪ್ಪತ್ತೈದು.....

ಮಳೆ - ಬಣ್ಣ - ಅವಳು - ಕಡಲು.....

ಹೇ ಕಪ್ಪು ಹುಡುಗೀ -
ಅಲೆ ತಲುಪದ ತೀರದಲ್ಲಿ ನಿನ್ನ ಹೆಸರ ಬರೆಯ ಹೋದೆ - ಕರಿಗಪ್ಪು ಹಸಿ ಮೋಡವೊಂದು ಒಳಗೊಳಗೇ ನಕ್ಕಿತು...

ಜೊಳ್ಳು ಬೀಜವನ್ನು ಗೊಬ್ಬರ ಗುಂಡಿಯಲಿ ಹೂತರೂ ಆಗೋದು ಮಣ್ಣೇ...

ಹೊರಗೆ ಆರ್ಭಟದ ಗಲಗಲ... 
ಆಳಕಿಳಿದಷ್ಟೂ ಕ್ರುದ್ಧ ಮೌನ...
ಎಂಥ ಮಳೆಗೂ ತುಂಬದ ಪಾತ್ರ...
ಗಾಳಿಯಲೆಗೆ ನೀರಲೆಯ ಸಾತತ್ಯ...
ಈ ಮನಸೂ ಆ ಕಡಲಂತೆಯೇ - ಒಳ ಹೊರಗಿನ ತಿಕ್ಕಾಟದಲ್ಲಿ, ಎಂದೂ ತುಂಬದ ಖಾಲಿತನದಲ್ಲಿ...
ವ್ಯತ್ಯಾಸ ಇಷ್ಟೇ - ಕಡಲು ತನ್ನದಲ್ಲದ್ದನ್ನು ದಡಕೆ ದೂಡಿ ತನ್ನೊಳಗೆ ಗುರುತುಗಳನುಳಿಸಿಕೊಳ್ಳದೇ ತಾನು ತಾನಾಗಬಲ್ಲದು, ಆದರೆ ಈ ಮನದೆ ಎಷ್ಟೇ ಹಳತಾದರೂ ನೆನಪುಗಳ ಗಾಯ ಮಾಯಲಾರದು...
ಸಾವಿರ ನದಿಗಳ ಸಿಹಿ ನೀರಿಗೂ ತನ್ನ ತನದ ಉಪ್ಪು ಬೆರೆಸುವ ಕಡಲ ಕಲೆ ಮನಕೆ ಸಿದ್ಧಿಸುವುದೇ ಇಲ್ಲ...

ತುಂಟ ಗಾಳಿ ಅಲೆಯೊಂದು ಸುಳಿಸುಳಿದು ಬಳಿ ಬಂದು ನಿನ್ನ ಇನಿದನಿಯಲಿ ಎನ್ನ ಹೆಸರನು ಉಸುರಿದೆ - ಕಂಗಳಿವು ನಿನ್ನನಲ್ಲೆಲ್ಲೋ ಹುಡುಕಿವೆ...

ನೆನಪುಗಳ ಕೂಡಿಡಬೇಕು - ನಗೆಯ ಜಾಡಿನ ಗುರುತುಳಿಯಬೇಕು...😍😍

ಬಸುರಿ ಮೋಡ ಮಳೆಯಾಗಿ ಸುರಿವಾಗ ತುಂಟ ಅಲೆಯೊಂದು ಅಲೆದಲೆದು ಬಳಿ ಬಂದು ಕಣ್ ಮಿಟುಕಿಸಿ ನಿನ್ಹೆಸರ ಉಸುರಿತು...
ನೆನಪ ನಾಭಿಯಾಳದಿಂದ ಹುಚ್ಚೆದ್ದ ಮೃಗೋನ್ಮಾದವೊಂದು ಎದೆ ಹೊಕ್ಕು ಅಲೆಯಂತೆ ಕುಣಿದಾಡಿತು...
#ನೆನಪುಗಳ_ಕೊಂದು_ಕೊಂಡೊಯ್ಯೋ_ತಾಕತ್ತು_ಸರ್ವಾಧಿಕಾರಿ_ಸಾವಿಗೂ_ಇಲ್ಲ...

ಸುರಿಯುತಿರಲಿ ಸೋನೆಯಂತೆ ಎತ್ತಿಡುವ ಅಡಿಗಡಿಗೆ ನಗೆಯ ಬಣ್ಣದ ಹುಡಿ...
#ಹೆಜ್ಜೆ ಜಾಡು_ಗೆಜ್ಜೆ ಹಾಡು_ಕನಸ ಸುರಗಿಯ ಗಂಧ...ದನಿಯಿಲ್ಲದ ಗೆಜ್ಜೆಗೆ ಬಣ್ಣವೇ ಮೆರಗು... 
ತುಸು ಸೋಕಲಿ ಹೆಜ್ಜೆಗೂ ನಗೆ ಬಣ್ಣದ ಸೆರಗು...
#ಹೆಜ್ಜೆ, ಗೆಜ್ಜೆ, ಬಣ್ಣ - ಲಜ್ಜೆ ಒಜ್ಜೆಯ ಬೆರಗು...😍😘

ಚಿತ್ರ ರೂಪದರ್ಶಿಗಳು: ಅರ್ಚನಾ ಖ್ಯಾಡಿ ಹಾಗೂ ಸುಮತಿ ದೀಪಾ... *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)