Friday, July 14, 2017

ಗೊಂಚಲು - ಎರಡ್ನೂರಾ ಇಪ್ಪತ್ತೈದು.....

ಮಳೆ - ಬಣ್ಣ - ಅವಳು - ಕಡಲು.....

ಹೇ ಕಪ್ಪು ಹುಡುಗೀ -
ಅಲೆ ತಲುಪದ ತೀರದಲ್ಲಿ ನಿನ್ನ ಹೆಸರ ಬರೆಯ ಹೋದೆ - ಕರಿಗಪ್ಪು ಹಸಿ ಮೋಡವೊಂದು ಒಳಗೊಳಗೇ ನಕ್ಕಿತು...

ಜೊಳ್ಳು ಬೀಜವನ್ನು ಗೊಬ್ಬರ ಗುಂಡಿಯಲಿ ಹೂತರೂ ಆಗೋದು ಮಣ್ಣೇ...

ಹೊರಗೆ ಆರ್ಭಟದ ಗಲಗಲ... 
ಆಳಕಿಳಿದಷ್ಟೂ ಕ್ರುದ್ಧ ಮೌನ...
ಎಂಥ ಮಳೆಗೂ ತುಂಬದ ಪಾತ್ರ...
ಗಾಳಿಯಲೆಗೆ ನೀರಲೆಯ ಸಾತತ್ಯ...
ಈ ಮನಸೂ ಆ ಕಡಲಂತೆಯೇ - ಒಳ ಹೊರಗಿನ ತಿಕ್ಕಾಟದಲ್ಲಿ, ಎಂದೂ ತುಂಬದ ಖಾಲಿತನದಲ್ಲಿ...
ವ್ಯತ್ಯಾಸ ಇಷ್ಟೇ - ಕಡಲು ತನ್ನದಲ್ಲದ್ದನ್ನು ದಡಕೆ ದೂಡಿ ತನ್ನೊಳಗೆ ಗುರುತುಗಳನುಳಿಸಿಕೊಳ್ಳದೇ ತಾನು ತಾನಾಗಬಲ್ಲದು, ಆದರೆ ಈ ಮನದೆ ಎಷ್ಟೇ ಹಳತಾದರೂ ನೆನಪುಗಳ ಗಾಯ ಮಾಯಲಾರದು...
ಸಾವಿರ ನದಿಗಳ ಸಿಹಿ ನೀರಿಗೂ ತನ್ನ ತನದ ಉಪ್ಪು ಬೆರೆಸುವ ಕಡಲ ಕಲೆ ಮನಕೆ ಸಿದ್ಧಿಸುವುದೇ ಇಲ್ಲ...

ತುಂಟ ಗಾಳಿ ಅಲೆಯೊಂದು ಸುಳಿಸುಳಿದು ಬಳಿ ಬಂದು ನಿನ್ನ ಇನಿದನಿಯಲಿ ಎನ್ನ ಹೆಸರನು ಉಸುರಿದೆ - ಕಂಗಳಿವು ನಿನ್ನನಲ್ಲೆಲ್ಲೋ ಹುಡುಕಿವೆ...

ನೆನಪುಗಳ ಕೂಡಿಡಬೇಕು - ನಗೆಯ ಜಾಡಿನ ಗುರುತುಳಿಯಬೇಕು...😍😍

ಬಸುರಿ ಮೋಡ ಮಳೆಯಾಗಿ ಸುರಿವಾಗ ತುಂಟ ಅಲೆಯೊಂದು ಅಲೆದಲೆದು ಬಳಿ ಬಂದು ಕಣ್ ಮಿಟುಕಿಸಿ ನಿನ್ಹೆಸರ ಉಸುರಿತು...
ನೆನಪ ನಾಭಿಯಾಳದಿಂದ ಹುಚ್ಚೆದ್ದ ಮೃಗೋನ್ಮಾದವೊಂದು ಎದೆ ಹೊಕ್ಕು ಅಲೆಯಂತೆ ಕುಣಿದಾಡಿತು...
#ನೆನಪುಗಳ_ಕೊಂದು_ಕೊಂಡೊಯ್ಯೋ_ತಾಕತ್ತು_ಸರ್ವಾಧಿಕಾರಿ_ಸಾವಿಗೂ_ಇಲ್ಲ...

ಸುರಿಯುತಿರಲಿ ಸೋನೆಯಂತೆ ಎತ್ತಿಡುವ ಅಡಿಗಡಿಗೆ ನಗೆಯ ಬಣ್ಣದ ಹುಡಿ...
#ಹೆಜ್ಜೆ ಜಾಡು_ಗೆಜ್ಜೆ ಹಾಡು_ಕನಸ ಸುರಗಿಯ ಗಂಧ...



ದನಿಯಿಲ್ಲದ ಗೆಜ್ಜೆಗೆ ಬಣ್ಣವೇ ಮೆರಗು... 
ತುಸು ಸೋಕಲಿ ಹೆಜ್ಜೆಗೂ ನಗೆ ಬಣ್ಣದ ಸೆರಗು...
#ಹೆಜ್ಜೆ, ಗೆಜ್ಜೆ, ಬಣ್ಣ - ಲಜ್ಜೆ ಒಜ್ಜೆಯ ಬೆರಗು...😍😘

ಚಿತ್ರ ರೂಪದರ್ಶಿಗಳು: ಅರ್ಚನಾ ಖ್ಯಾಡಿ ಹಾಗೂ ಸುಮತಿ ದೀಪಾ... 



*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ನಾಲ್ಕು ಬಿಡಿ ಬಿಡಿ ಸಂಗತಿಗಳನ್ನು ಹೆಣೆಯುವಲ್ಲಿ ಗೊಂಚಲು ೨೨೫ ಯಶಸ್ವಿಯಾಗಿದೆ.
    ಕಡಲಿನ ತಾನು ಪರಕೀಯತೆಯನ್ನು ಇಟ್ಟುಕೊಳ್ಳದ ವರ ನಮ್ಮ ಮನಸುಗಳಿಗೂ ಪ್ರಾಪ್ತಿಸಲಿ ಪ್ರಭುವೇ!
    5*

    ReplyDelete