Wednesday, December 17, 2014

ಗೊಂಚಲು - ಒಂದು ನೂರಾ ಮೂವತ್ತೇಳು.....

ಹೊತ್ತು ಹೋಗದ ಹೊತ್ತಲ್ಲಿ ಹೊತ್ತಿ ಉರಿವ ಭಾವಗಳು.....

ಬದುಕ ಅಪ್ಪುವೆನೆಂದವಳ ಬದುಕ ಬೆಳಕ ಕಸಿದ ಹಸಿ ಹಸಿ ನೆನಪುಗಳ ನರಳಿಕೆಯ ಸದ್ದಲ್ಲಿ   ನಿದಿರೆಯ ಸಖ್ಯವಿಲ್ಲದ ಮಾಗಿಯ ಚಳಿಯ ನಸುಕು - ಎದೆಯ ಗರ್ಭದ ಗೋಡೆಯ ಆಗೀಗ ಒದೆಯೋ ಕಸುವಿಲ್ಲದ  ಕನಸ ಕೂಸು - ಕರುಳ ದಿಬ್ಬವ ತಬ್ಬಿದ ರುದ್ರ ಮೌನ - ದಿಂಬಿನ ಮೇಲೆ ಹೊರಳುತಲಿರೋ ಅವಳ ಒಂಟಿ ಕೂದಲೊಂದಿಗೆ ಮಾತಿಗಿಳಿದ ಎಂಥಾ ಚಳಿಗೂ ಹೆಪ್ಪುಗಟ್ಟದ ಕಣ್ಣ ಹನಿ - ಹೆಬ್ಬಾಗಿಲ ಮರೆಯಲ್ಲಿ ಸಾವಿನ ಹೆಜ್ಜೆ ಸಪ್ಪಳ...
***
ಬದುಕ ಜೀವನ್ಮುಖೀ ಭಾವಗಳಿಗೆ ಕಾವನ್ನಿತ್ತು ಉಸಿರ ತುಂಬಿ ಎದೆ ನೆಲದ ಹಸಿವನ್ನು ಹಿಂಗಿಸಬೇಕಿದ್ದ ಕನಸ ಊಟದ ಶಕ್ತಿಯ ಸಖ್ಯವಿಲ್ಲದ ಸಂಜೆಗಳಿಲ್ಲಿ ನಡು ಮುರಿದುಕೊಂಡು ತೆವಳುತಿವೆ...
***
ದೊಡ್ಡಾಸ್ಪತ್ರೆಯ ಖಾಲಿ ಖಾಲಿ ಕಾರಿಡಾರು - ನೋವ ನಗುವಾಗಿಸೋ ಪುಟ್ಟ ಯತ್ನ...
ಮನದ ಮನೇಲಿ ಅದೇ ಹಳೆಯ ವಾಸನೆ - ನೋವು, ಸಾವಿನದ್ದು... :-)
***
ಕನಸೇ -
ಮಕ್ಕಳ ಕೇಕೆಯ ಕಸಿದ ಇರುಳು ಹಗಲನ್ನು ಇಷ್ಟಿಷ್ಟಾಗಿ ನುಂಗುವ ಮುಸ್ಸಂಜೆಯ ಹೊತ್ತಲ್ಲಿನ ಬಯಲ ಮೂಲೆಯ  ನಿರಂಕುಶ ನೀರವ ಮೌನ (?)  ದಟ್ಟವಾಗಿ ನನ್ನೆದೆಯನೂ ಆವರಿಸುತ್ತೆ ನೀ ಬದುಕಿಂದ ಮತ್ತೆ ಬಾರದಂತೆ ಎದ್ದು ಹೋದ ನೆನಪು ಕಾಡುವಾಗ...
***
ಎಷ್ಟೆಲ್ಲಾ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರವೀಯುತಿದ್ದ ಚಂದಿರನಲ್ಲೂ ಈಗೀಗ ಉತ್ತರ ಖಾಲಿಯಾದಂತಿದೆ ನನ್ನ ಎಂದೂ ಮುಗಿಯದ ಗೊಂದಲದ ಪ್ರಶ್ನೆಗಳಿಗೆ...:-(
***
ಬಾಲರ ಕೇಕೆ, ಹರೆಯದ ಹುಚ್ಚಾಟ, ನಡುಗಾಲದ ಬೇಗುದಿ, ಮುಪ್ಪಿನ ನಿಟ್ಟುಸಿರು ಎಲ್ಲವಕ್ಕೂ ಕಿವಿಯಾದ ಊರಾಚೆಯ ಬಯಲು... 
ಅವರೆಲ್ಲರ ಮಾತು ಮೌನಗಳಿಗೆಲ್ಲ ಸಾಕ್ಷಿಯಾಗಿಯೂ ನಾ ಯಾರಿಗೂ ಸ್ವಂತವಲ್ಲ...
ಪಾದಗಳಿಗಂಟಿದ ಎನ್ನೆದೆಯ ಧೂಳಿಗೂ ಅವರುಗಳ ಒಳಮನೆಗೆ ಪ್ರವೇಶವಿಲ್ಲ; ಹೊಸ್ತಿಲಲಿ ಕಾಲು ಕೊಡವಿಯೇ ಒಳಗಡಿಯಿಡುವುದು ಎಲ್ಲ...:-)
***
ಅಮ್ಮನ ಗರ್ಭದಲ್ಲಿನ ಮೌನವೀಗ ಮತ್ತೆ ದಕ್ಕುವಂತಿದ್ದಿದ್ದರೆ; 
ನಗೆಯ ತೊಟ್ಟಿಲಲಿ ಬದುಕನಿಟ್ಟು, ಭರವಸೆಯ ಗಿಲಕಿಯ ಕುಲುಕಿನ ಹಿಮ್ಮೇಳದಲಿ ಗೆಲುವಿನ ಲಾಲಿ ಹಾಡುತ್ತ, ಹೊಸ ಕನಸಿನ ಕುಲಾವಿಗೆ ನೂಲು ನೇಯಬಹುದಿತ್ತೇನೋ ನೀನಿರದ ಈ ಪ್ರಕ್ಷುಬ್ಧ ಸಂಜೆಗಳಲೂ... 
ಮತ್ತೆಲ್ಲವನೂ ಮೊದಲಿಂದ ಶುರು ಮಾಡುವಂತಿದ್ದಿದ್ದರೆ; ಮಾತಿನೆಡೆಗಿನ ನನ್ನ ಅತೀವ ಹಪಹಪಿಯ ನಡುವೆಯೂ, ಮಾತು ಎದೆಯ ಸುಡುವಲೆಲ್ಲ ಮೂಗನಾಗಿ ಒಂಚೂರು ಒಲವ ಸಲಹಬಹುದಿತ್ತೇನೋ ನನ್ನೀ ಬಂಜರೆದೆಯಲೂ...
***
ಎದೆಯಾಳದಿ ಕನಸುಗಳ ಸೋಲಿನ ಬೇಗುದಿ - ಸುಡುವ ಚಳಿ - ನೆನಪುಗಳ ಅಗ್ಗಿಸ್ಟಿಕೆ - ಮಾತುಗಳ ಹವಿಸ್ಸು - ಮೌನ ಯಜ್ಞ...
***
ಮೌನ (?) ... 
ಅಲ್ಲಲ್ಲ ಮಾತು ಕೋಮಾದಲ್ಲಿರುವಂತಿದೆ...
***
ನೋವು, ಸಿಟ್ಟು, ದ್ವೇಷ, ಅಸೂಯೆ, ಹತಾಶೆಗಳು ಬದುಕಿಸುವುದಕಿಂತ ಪ್ರೀತಿ ಕೊಲ್ಲಲಿ ಎನ್ನ... 
ಒಲವ ತೋಳಲ್ಲಿ ಸಾವಿಗೂ ಶೃಂಗಾರ ಸಂಭ್ರಮ...
***
ಬದುಕ ಪ್ರೀತಿ ಮತ್ತು ಬದುಕಿಗೆ ಸ್ಫೂರ್ತಿ ಎರಡನ್ನೂ ಬದುಕಿನಿಂದಲೇ ಬಸಿದುಕೊಳ್ಳಬೇಕು... 
ಹುಟ್ಟಿದಲ್ಲಿಯೇ ಕೊನೆಗೊಂಡು ಮತ್ತಲ್ಲಿಂದಲೇ ಪರಿಭ್ರಮಣಕೆ ಮೊದಲಿಡುವ ಶೂನ್ಯದ ಖಾಲಿತನ ಮತ್ತು ಬಿಂದುವಿನ ಪೂರ್ಣತೆ ಎರಡೂ ಬದುಕಿನ  ಉನ್ನತ ಧ್ಯಾನಸ್ಥ ಸ್ಥಿತಿಗಳೇ...
ಪಡಕೊಂಡೆ, ಕಳಕೊಂಡೆ ಎಂಬುದೆಲ್ಲ ವೃತ್ತದೊಳಗಣ ಕಾಲುದಾರಿಯ ಇಬ್ಬದಿಯ ಆಗು ಹೋಗುಗಳಷ್ಟೇ...
ಹೊರಚೆಲ್ಲುತ್ತಾ ಹಿರಿದಾಗಿ ಶೂನ್ಯವಾಗುವುದೂ, ತುಂಬಿಕೊಳ್ಳುತ್ತಾ ಕಿರಿದಾಗಿ ಬಿಂದುವಾಗುವುದೂ ಎರಡೂ ಕೂಡಾ ವೃತ್ತದೊಳಗಣ ಸಂಪತ್ತುಗಳೇ...
ಅದಕೇ ಬದುಕಿಗೇನೆಲ್ಲ ಬೇಕೋ ಅದೆಲ್ಲವನ್ನೂ ಅಲ್ಲಿಂದಲೇ ಬಸಿದುಕೊಳ್ಳಬೇಕು ಅಂತನ್ನಿಸುತ್ತೆ... 
ಅದು ಕರುಣಿಸಿದಷ್ಟು - ಅಲ್ಲಲ್ಲ ನಮ್ಮ ಬೊಗಸೆಯ ವಿಸ್ತಾರದಷ್ಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)