Wednesday, September 18, 2019

ಗೊಂಚಲು - ಮೂರು ಸೊನ್ನೆ ಎಂಟು.....

ಅಳಿಸಿಹೋದ ನಾನು.....  

ಅವಳು
ಮಾರುತನ ಅಂಗೈಲಿಟ್ಟು ನಾ ಕಳುಹಿದ ಮುದ್ದೊಂದನು ಕುಪ್ಪಸ ಗೂಡಲ್ಲಿ ಬಚ್ಚಿಟ್ಟುಕೊಂಡಳಂತೆ - ಇಲ್ಲೀಗ ಮೋಡಕ್ಕೆ ಬೆಂಕಿ ಬಿದ್ದಿದೆ...

ಅವಳು
ನಿದ್ದೆಗಣ್ಣ ಹೊಳಪಿನಲ್ಲಿ ಬಿದ್ದೆದ್ದ ಒದ್ದೊದ್ದೆ ಶಬ್ದಗಳ ಸಾಲು ಸಾಲು ಸಂಪದವ ತುಟಿಗೆ ಸುರಿದು ಬಿರಿದ ತೊಡೆಯಿಂದ ಕಟಿಯ ಬಳಸುವಳು...

ಅವಳು
ಅವಳ ಬೆನ್ನ ಬಯಲ ಖಾಲಿಯಿಂದ ಹಿಡಿದು ಹೊಕ್ಕುಳ ದಂಡೆಯ ನವಿರಿನವರೆಗೆ ನನ್ನ ಬೆರಳು ಬರೆವ ಓತಪ್ರೋತ ಪ್ರೇಮ ಗೀತೆಯ ಉಸಿರ ಲಯದಲ್ಲಿ ನನ್ನೆದೆ ರೋಮಗಳಿಗೆ ಓದಿ ಹೇಳುವಳು...

ಅವಳು
ಹಾಸಿಗೆಯ ಮಡಿಲಿಗೆ ಸ್ವರ್ಗವ ಉಡಿ ತುಂಬಿದವಳು - ಜನುಮಗಳ ಜಡ ಕಳೆದು ಬೆವರಿಗೂ ಸುಖದ ಮುಲುಕು ಕೊಟ್ಟವಳು - ಪ್ರೇಮ ಪೂಜೆಯಲ್ಲಿ ಕರಡಿಯಾಗದಂತೆ ಚಂದ್ರನಿಗೆ ತಾಕೀತು ಮಾಡುತ್ತಾಳೆ - ಕತ್ತಲನು ಬೆತ್ತಲ ಬೆಳಕಿನ ಸೆಳಕಲ್ಲಿ ಮತ್ತೆ ಮತ್ತೆ ಮೀಯಿಸುತ್ತಾಳೆ...

ಅವಳು
ಮಿಂದ ಮಧ್ಯಾಹ್ನ, ನೆಂದ ಮುಸ್ಸಂಜೆ, ಸಾವಿನಂತ ಖಾಲಿ ಖಾಸಗಿ ಇರುಳಲ್ಲೂ ನನ್ನ ನಾಭಿ ನಾಳದಲ್ಲಿ ಸುಳಿ ಸುಳಿದು ಸತಾಯಿಸೋ ರಣ ರಣ ಹಸಿವು...

"ಭಯ ಮತ್ತು ಖುಷಿ ಒಟ್ಟೊಟ್ಟಿಗೆ ಹುಟ್ಟುವ ಪುಳಕ - ಆಷಾಢದ ಮಳೆಯೊಂದಿಗೆ ಅವಳ ಭೇಟಿ..."
#ಹಸಿಮಣ್ಣ_ಮೆತ್ತಿಕೊಂಡ_ಚೌಕಟ್ಟಿಲ್ಲದ_ಕಪ್ಪು_ಚಿತ್ರ...
↯↯↺↹↻↯↯

ಗಾಳಿ ಕೊಳಲಿನ ಗೀತೆ - ನದಿಯ ಬೆರಳಿನ ಉಂಗುರ - ಗರ್ಭ ಧರಿಸಿದ ಮೋಡ - ಹದ್ದು ಕಣ್ಣಿನ ಹಸಿವು - ಅಮಲುಗಣ್ಣಿನ ನಡಿಗೆ - ತೊಡೆಯ ತಿವಿಯುವ ಹೆಸರಿಲ್ಲದ ಒದ್ದೆ ಹೂವಿನ ಬಾಣ...
ಎದೆಯ ರೋಮದ ಮೇಲೆ ನವಿಲುಗರಿ ಆಡಿದಂಗೆ ನಿನ್ನ ಉಸಿರ ಹೊರಳಿನ ಆ ಸಂಜೆಗಳ ನೆನಹ ನೆಗ್ಸು...
ನಾನಿಲ್ಲಿ ಒಂಟಿ ನಡೆಯುತ್ತಿಲ್ಲ - ನಿನ್ನೊಳಗೆ ನನ್ನ ಹಡೆಯುತ್ತಿದ್ದೇನೆ...
#ಅಳಿಸಿಹೋದ_ನಾನು...
↯↯↺↹↻↯↯

"ಅವಳ ಕಿರು ಬೆರಳ ಹಿಡಿದು ರತಿ ತಾ ಮೆರೆಯುತ್ತಾಳೆ - ತನ್ನ ತಾ ಮರೆಯುತ್ತಾಳೆ..."
ಎದೆಯ ರೋಮದ ಮರೆಯಿಂದ ಇಣುಕೋ ಮೂಗುತಿ ಹಾಕಿದ ಹಚ್ಚೆ - ಬೆನ್ನ ಬಿರುಸಿನ ತುಂಬಾ ಗಡಿಬಿಡಿಯಲಿ ಓಡಾಡಿದ ಎಡಗೈಯ್ಯ ಒಂಟಿ ಬಳೆಯ ಪ್ರೀತಿ ಗುರುತು - ಭುಜವ ತಾರಕದಿ ಮೀಟಿದ ಹಲ್ಲು - ಕುಣಿದು ಮಣಿಸುವಲ್ಲಿ ಗೆಜ್ಜೆಯಿಂದ ಕಳಚಿಬಿದ್ದ ಗಿಲಕಿ - ಉಸಿರಿಗೇ ಅಂಟಿ ಕೂತ ಹೆಣ್ಣು ಗಂಧ...
ಸುಡುಸುಡುವ ಕತ್ತಲು ಜೋಡಿ ಬೆವರ ಕುಡಿದು ಹಗುರಾದ ಕಥೆಯ ಹಗಲ ಕನ್ನಡಿಗೆ ಬಚ್ಚಲಿನ ಬೆತ್ತಲು ಬಿಗುಮಾನದಿ ಹೇಳುತಿದೆ...
#ಸುರತ_ವೈಭವ.‌‌..
↯↯↺↹↻↯↯

ಎರಡು ರಮ್ಯ ಕವಿತೆಗಳು ಒಟ್ಟಿಗೆ ಮಿಂದವು...
#ಮಿಥುನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ಏಳು.....

ಸಿಹಿ ಸವಿ ಸೋಲು..... 

ಈ ಇರುಳ ತಂಗಾಳಿಗೆ ಬೆಂಕಿ ಬಿದ್ದರೆ ಕಾರಣ ನೀನೇ, ಹೆಸರೂ ನಿನ್ನದೇ...  

ಎಡ್ಹೊತ್ತಿನ ಹುಚ್ಚು ಕನಸಿಂದಾಗಿ ಅವಳ ಮೈಯ್ಯ ಕಿರು ಕತ್ತಲ ಬಳುಕುಗಳಲಿ ಚಿಗುರೊಡೆವ ಸಣ್ಣ ಬೆಮರ ಹನಿಗಳು ಪಿಸುನುಡಿವ ರೋಮಾಂಚಕ ಕಥೆಗಳ ತುಂಟ ನಾಯಕ ನಾನೇನಂತೆ...
#ಮುಸುಕಿನೊಳಗಣ_ಮುಲುಕು...

ಮಳೆಯಲ್ಲಿ ನೆಂದು ಬಂದವಳು ಹೊಸಿಲಲ್ಲಿ ಮುಡಿ ಕೊಡವಿದಳು - ಉಸಿರಿಗೆ ಹೊತ್ತಿದ ಬೆಂಕಿ ಒಳಮನೆಯಲಿ ಹೊರಳುತಿದೆ - ಮಳೆ ನಿಲ್ಲುತ್ತಿಲ್ಲ; ಬೂದಿಯಾಗೋ ಬೆತ್ತಲಿಗೆ ಯಾರು ಹೊಣೆ...
#ಬೆವರಿಗೂ_ಮಣ್ಣ_ಘಮ_ಈಗ...

ಕಿಬ್ಬೊಟ್ಟೆಯಾಳದ ಕಿರು ನಡುಕಗಳ ಅಲೆಗಳು ಎದೆಯಲ್ಲಿ ಹುಟ್ಟಿಸುವ ಭಯಕ್ಕೆ ಅವಳು ನನ್ನ ಹೆಸರಿಟ್ಟಳು...
#ಸಿಹಿ_ಸೋಲಂತೆ...

ಎದೆ ಗೊಂಚಲ ಕಣಿವೆಯ ಇಕ್ಕಟ್ಟಿನಲಿ ಉಸಿರು ಕಳಕೊಂಡವನ ಬೊಗಸೆಯಲಿ ಎತ್ತಿ ಮತ್ತೆ ತುಟಿ ಅಮೃತವನುಣಿಸಿ ಜೀವತುಂಬಿ ಊರು ಕಾಲುವೆಯ ಹಸಿಯಲಿ ಜೀಕಲು ಬಿಟ್ಟಳು...
#ಸ್ವರ್ಗ_ಸಂಸರ್ಗ...

ಸೊಗಸುಗಾರ ನಾನು - ಅವಳ 'ಎದೆ'ಗಂಟಿದ ಹುಚ್ಚು ಬೇತಾಳವಂತೆ...
#ಸುಖೀ_ಕತ್ತಲು...

ಮುಸ್ಸಂಜೆಗೂ ಮುನ್ನವೇ ಚೌತಿ ಚಂದ್ರನ ನೋಡ್ಬಿಟ್ಟೆ - ಅವ್ಳು ಎದ್ರಿಗೇ ಬಂದ್ಬಿಟ್ಳು...
#ಕಿಶೋರ_ಚಂದ್ರಿಕೆ...

ಒಂದೇ ಬಿಂದಿಗೆ ನೀರು ಬೆಸೆದೆರಡು ಬಿಸಿ ಎದೆಗಳ ನಡುವಿಂದ ಬೆವರ ತೊಳೆದಿಳಿವಾಗ....
#ರತಿ_ಮಜ್ಜನ...

ಹೆಚ್ಚೇನಲ್ಲ -
ಈ ತಂಪು ತಂಪು ಸಂಜೆಯ ಉಸಿರ ತಿಲ್ಲಾನಗಳನೆಲ್ಲ ನಿನ್ನ ಮೈಯ್ಯ ಕತ್ತಲ ತಿರುವುಗಳ ಬಿಸಿಯಲ್ಲಿ ಅಲ್ಲಿಷ್ಟು ಇಲ್ಲಿಷ್ಟು ಜೋಪಾನ ಮಾಡೋ ಹಂಬಲಕೆ ಚೂರು ಸಹಕರಿಸಬಾರದೇ ಕನಸೇ...
#ಹಸಿ_ಹುಚ್ಚು...

ಹಕ್ಕಿ ಹಗುರಿನ ಪಾದ ಎದೆಯ ಹೊಸಿಲನು ತುಳಿದರೆ, ಬರಿಗೈಯ್ಯ ಬಡಪಾಯಿ ಪೋಲಿ ಹೈದ ನಾನು ಒಡಲಾಳದಿಂದೆತ್ತಿ ಸವಿ ಮುತ್ತೊಂದನಲ್ಲದೇ ಮತ್ತೇನ ಕೊಟ್ಟೇನು...
#ಉಡುಗೊರೆ...

ಮುಚ್ಚಿದ ಕಣ್ಣಲ್ಲಿ ನೀನು ಬೆಳಕಿನುಡುಗೆಯಲಿ ದಳದಳವಾಗಿ ಅರಳುತ್ತೀ - ಈ ನರ ನಾಡಿ ವೀಣೆ ಬಿಗಿದು ಉಸಿರ ಹರಿವಿಗೆ ಸುಖದ ಹಸಿವಿನ ಬೆಂಕಿ ಅನಾಯಾಸ  ತುಂಬುತ್ತೆ...
#ಇರುಳ_ಸಂಸರ್ಗ...

ಬೆನ್ನ ಬಯಲ ತುಂಬಾ ಬೆರಳಿಟ್ಟ ಚುಕ್ಕಿಗಳನು ತುಟಿ ಒಂದೊಂದಾಗಿ ಜೋಡಿಸಿದಾಗ ಸ್ವರ್ಗದ ಬಾಗಿಲಿಗೆ ರಂಗೋಲಿಯಿಟ್ಟಂತಾಯ್ತು...
ಕಿನ್ನರಿಯ ಎದೆ ಸಿರಿಯ ಕುಪ್ಪಸ ಗೂಡಿನ ಬೀಗಕ್ಕೀಗ ಕೋಟೆ ಕಾಯುವ ಒಂಟಿ ಭಟನ ನಿತ್ರಾಣ ಒತ್ತಡ...
#ಆರಂಭ...

ಈ ತಣ್ಣನೆ ಇರುಳಿನ ನಿದ್ದೆಗೂ ಮುನ್ನ ಹೊಕ್ಕುಳ ತಿರುವಿನ ಬಿಸಿಯನಿಷ್ಟು ಸಾಲ ಕೊಡುವೆಯಾ.‌‌..
#ನಿನ್ನನ್ನೇ_ಹೊದ್ದಂತೆ_ಭಾಸ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)