Tuesday, December 1, 2020

ಗೊಂಚಲು - ಮುನ್ನೂರೈವತ್ತಾರು.....

ಸಂಗಾತ ಸಾಯುಜ್ಯ.....

ನನ್ನಾಸೆ ಕಾಳಿಂದೀ -
ನಿನ್ನ ಕಿಬ್ಬೊಟ್ಟೆ ಮಿಡಿತದಲಿ ನನ್ನ ನಾಲಿಗೆ ಮೊನೆ ಬರೆದ ನಿನ್ನೆ ಮೊನ್ನೆಗಳ ಮಿಥುನ ಚಿತ್ರವಿದೆ...
ಮೈಯ್ಯ ಏರಿಳಿವಿನ ನಸುಗತ್ತಲ ಸುಳಿಗಳಲಿ ಈಸುಬಿದ್ದ ಬೆರಳ ಕುಂಚ ಅರಳಿಸಿದ ಹುಚ್ಚು ಮೋಹದ ಮದರಂಗಿ ರಂಗಿನ ಕಲೆಯಿದೆ...
ಇಂದೂ ಅವನೆಲ್ಲ ಮತ್ತೆ ಮತ್ತೆ ಇನ್ನಿನಿತು ಆಸ್ಥೆಯಿಂದ ತಿದ್ದಿ ತಿದ್ದಿ ಬರೆಯಲೇ...
ಮೈಯ್ಯಾರೆ ತಳಿಬಿದ್ದು ತುಟಿಯ ತೇವವ ತೀಡಿ ಎದೆಯ ಜಾಡಿಯಲಿ ಹೊಸತೇ ಅನ್ನಿಸೋ ಹಸಿ ಬಿಸಿ ಬಣ್ಣ ತುಂಬಲೇ...
ಈ ಕಾರ್ತೀಕದ ತಿಳಿ ತಂಪು ಮಧ್ಯಾಹ್ನಗಳಲಿ ಅಲ್ಯಾರೋ ತುಂಟ ಕವಿ ಚಕ್ರಪಡಿ ಹಾಕಿ ಕುಳಿತು ಪದಗಳಲಿ ಕೊರೆದ ಶೃಂಗಾರ ಶಿಲ್ಪಗಳನು ನಾನಿಲ್ಲಿ ನಿನ್ನ ಚೂಪು ಹಸಿವಿನ ಬೆಚ್ಚಾನೆ ಬೆತ್ತಲೆ ಮೈ ಓಣಿಗಳಲಿ ಹಂಗಂಗೇ ಕಡೆದು ನಿಲ್ಲಿಸಲೇ...
ಸಹಕರಿಸಬಾರದೇ ಮತ್ತೆ ಮತ್ತದೇ ಮಧುರ ಸಮರ್ಪಣೆಗೆ - ತೆರೆದ ಮಾಗಿಯ ಬಾಗಿಲಲಿ ರತಿಗೆ ರಸಿಕನ ಬಾಗಿನಕೆ...
#ಮಿಳನ_ಸುರೆಯ_ಸಂಭ್ರಾಂತಿ...
♡♤♥♤♡

ಉಸಿರ ಕಡೆವ ಚೆಲುವ ಕಡಲೇ -
ನಿದ್ದೆ ಮಂಪರಲೂ ತೋಳ ಬಿಗಿಯಿಂದ ಕಳಚಿಕೊಳ್ಳದಂತೆ ಅಲ್ಲಲ್ಲೇ ಮಗ್ಗಲು ಬದಲಿಸಿ ಹೊರಳುವಾಗಿನ ನಿನ್ನ ಕಾಲಂದುಗೆಯ ಕಿಣಿ ಕಿಣಿ ಕಾವಳದ ನಿಶ್ಶಬ್ದದಲ್ಲಿ ಊರಾಚೆಯ ಪ್ರೇಮ ದೇವಳದ ಮುಂಬಾಗಿಲ ಪುಟ್ಟ ಘಂಟೆ ದನಿಯಂತೆ ಕೇಳಿಸಿ ಮೈಮನವ ಪುಳಕದಲಿ ಬಾಗಿಸುತ್ತದೆ...
ಕಿಟಕಿಯಿಂದ ಸೋರುವ ತುಂಡು ಚಂದಮನ ಮಂದ ಬೆಳಕಲ್ಲಿ ಮೀಯುತಿರೋ ದೇವ ಬಿಡಿಸಿದ ಆ ಮೂಗಿನಂಚಿನ ಮಚ್ಚೆಗೂ, ಅಪ್ಪ ತೊಡಿಸಿದ ಮೂಗುತಿಗೂ ಹೊಳಪಿನಲಿ ಜಿದ್ದಾಜಿದ್ದಿ...
ನಿದ್ದೆಯೊಡನೆ ಠೂ ಬಿಟ್ಟು ನಿನ್ನಂದದ ಮೈಸಿರಿಯ ಸೊಬಗಿನೂರಲಿ ಕಳೆದೋಗುವ ನನ್ನ ರಸಿಕ ಕಂಗಳು...
ನಿನ್ನಾ ತುಟಿ ದಂಡೆಯ ತೇವಕೊಂದು ನವಿರು ಒಗರು ಕಂಪಿದೆಯಲ್ಲ - ನಿದ್ದೆಯಲೂ ಬಿರಿದಿರೋ ಎಸಳು ತುಟಿಗಳಿಗೆ ಮುತ್ತಿನಲಂಕಾರ ಮಾಡ ಹೋದರೆ ಉಸಿರ ಬಿಸಿಯ ಸೇರಿ ನೆತ್ತಿಗೇರುವ ಆಸೆ ಭಾರದ ಮೂಲ ಅದೇ...
ಘಮದ ಗಾರುಡಿಗೆ ಅಯಾಚಿತವಾಗಿ ಗಂಡು ತೋಳ ಸೆರೆ ಬಿರುಸಾದರೆ, ಬಿಗಿದ ಹೆಣ್ಣು ಬೆತ್ತಲೆದೆ ಮುಂದಿನ ಕವಿತೆ ಕಟ್ಟುತ್ತದೆ...
ಮತ್ತೆ ಎಲ್ಲಾ ಹೊಚ್ಚ ಹೊಸದಾಗಿ ಮೊದಲಾಗುತ್ತದೆ - ಅಪಾದಮಸ್ತಕ ಸಾನುರಾಗದ ಕಾಳ್ಗಿಚ್ಚು...
ಉಬ್ಬೆಗಟ್ಟಿದ ಮೋಡಗಳೆರಡು ಮುದ್ದಿಗಿಳಿದಂಗೆ -
ಜಿಹ್ವೆಯ ಒರಟು ಮೈಯಿಂದ, ಕೆರಳು ಮೊನೆಯಿಂದ ಹಸಿದ ಹಸಿ ಜೀವಾಂಗಗಳ ಸೇವಿಸಿ ಸ್ವರ್ಗ ಸೃಜಿಸುವ ಪ್ರಣಯ ಕೂಟಕೆ ನಾಭಿಚಕ್ರ ಮಿಡಿದು ನಶೆಯೇರಿ ಸೆಳೆಯುತ್ತದೆ...
ಇರುಳ ಯಾವ ಝಾವವೋ ಹೊರಳಿ -
ಸುಖದ ಊಟೆಯೊಡೆದ ನಿನ್ನ ಬೆಮರ ಕಂಪಿನೊಡಲಿಗೂ, ನೀ ಮುಡಿದು ಹೆರಳಿನೊಡನೆ ಹೊಸಕಿಹೋದ ಮಲ್ಲಿಗೆ ಘಮಲಿಗೂ ಜುಗಲ್ಬಂದಿಯ ಮಧುರ ಕದನ...
ಮತ್ತಾಗ ಸಂಪನ್ನ ಹಗುರತೆಯಲಿ,
ದೇಹವನೊಂದನೇ ಅಲ್ಲ ಮನವನೂ ಬೆರೆಸಿ ನಿನ್ನೊಡನೆ ಕೂಡಿಯಾಡೋ ಆಮೋದದ ಈ ಸಜ್ಜೆಮನೆಯೇ ನಿಜ ಸ್ವರ್ಗ ಕಣೋ ಅಂತಂದು, ಪ್ರಮತ್ತ ಕಂಗಳಲಿ ಉತ್ಕರ್ಷ ತೃಪ್ತಿಯನುಲಿದು, ಹೆಗಲು ಕಚ್ಚಿ ಗುರುತುಳಿಸಿ, ಭಾವಸಮಾಧಿಗಿಳಿವ ನಿನ್ನ ಮೋಹೋನ್ಮಾದದ ಪ್ರತಿ ಬೇಟವೂ ನಾಳಿನ ಮೇಳಕೆ ಮೈಮನಸನು ಮತ್ತೆ ಕನಸಲ್ಲಿ ಈಗಿಂದಲೇ ಹುರಿಗಟ್ಟಿಸುತ್ತದೆ...
#ಕಾಮನೋಕುಳಿಯಲಿ_ಮೈಮನಕಂಟಿದ_ಬಣ್ಣಗಳೆಷ್ಟೋ...
♡♤♥♤♡

ವ್ರತದಲ್ಲಿದೀನಿ ದೂರ ನಿಲ್ಲು ಅಂದ್ಲು...
ಅಲ್ಲೇ ನಿಲ್ಲೆಂದರೂ ಆಗಷ್ಟೇ ಮಿಂದ ಹೆಣ್ಣು ಮೈಯಿಂದ ಹೊಮ್ಮುತಿದ್ದ ಒದ್ದೆ ಘಮಕೆ ನಾಭಿಯಲ್ಲಿ ಅಲೆ ಒಡೆಯುವುದು ನಿಂತೀತೇ...
ವ್ರತ ಕೆಡಿಸದೇ ಸಾಯೋಕೆ ಮನಸಿಲ್ವೇ ಅಂದೆ...
ಬೆಳ್ಬೆಳಗ್ಗೆ ಸಾಯೋ ಮಾತಾಡಿದ್ರೆ ಕಚ್ಬಿಡ್ತೀನಿ ಅಂತ ಸಿಟ್ಟಿಂದ ಪರಚೋಕೆ ಬಂದ್ಲು...
ವ್ರತ ಬೆವರಾಗಿ, ಸಿಟ್ಟು ಮುದ್ದಾಗಿ, ಪ್ರೇಮಾಲಾಪದ ತಾರಕದೊಂದಿಗೆ ಬೆಚ್ಚಾನೆ ಹಗಲುದಿಸಿತು...
ಮತ್ತೀಗ ನನ್ನಿಂದ ನೀರೆರೆಸಿಕೊಂಡ ಅವಳದು ಝಾವದ ಎರಡನೇ ಸ್ನಾನ ಹಾಗೂ ತಪ್ಪು ಕಾಣಿಕೆಗೆ ಇಷ್ಟದೇವಗೆ ತುಪ್ಪದ ದೀಪ...
#ಹುಣ್ಣಿಮೆ_ಕಡಲ_ಉಲ್ಲಾಸ_ಅವಳು...
♡♤♥♤♡

ಅನುಗಾಲದ ಅನುರಾಗವೇ -
ಆಡಾಡುತ್ತಲೇ ನಿದ್ದೆಹೋದ ಮಗು ನಿದ್ದೆಗಣ್ಣಲ್ಲಿ ಮತ್ತೆ ಆಟಿಕೆಯ ಹುಡುಕಿಕೊಂಡಂತೆ ನನ್ನ ಕೆನ್ನೆ ಸವರಿ, ತುಟಿಯ ತೇವದ ನವಿರು ಘಮವುಣಿಸಿ, ಎದೆ ಬಿರುಸಿನ ಕುರುಳಲಿ ಸುಳಿವ ಪ್ರೇಮಗಂಧವ ಆಖೈರು ಹೀರುವಾಂಗೆ ಮುಸುಮುಸು ಅವುಚಿಕೊಳ್ಳುತ್ತಾ, ನನ್ನ ನಿನ್ನ ನಡುವೆ ಗಾಳಿಗೇನು ಕೆಲಸ ಎಂಬಂತೆ ತೋಳ್ಚಾಚಿ ಬೆನ್ನ ಬಳಸಿ ಇನ್ನಿಷ್ಟು ಗಾಢ ನಿದ್ದೆಯ ಎತ್ತಿಕೊಳ್ಳುವ ಬೆತ್ತಲೆ ಬೆಂಕಿ ನೀನು...
ಉಸಿರ ಮರ್ಮರದ ಧುಸುಮುಸು ಶಬ್ದವೂ ಆಪ್ಯಾಯ ಗಾರುಡಿಯೇ ಆಳ್ಕೆ ಉನ್ಮಾದ ಉಮ್ಮಳಿಸಲು, ಅಂತೆಯೇ ಆತ್ಮ ಸಂವಾದ ಮೇಳೈಸಲು...
ನಡುರಾತ್ರಿಯ ನಿಡುಗಾಲದ ಅರೆ ಖಬರಿನ ವಿಲಾಸಕೆ ಎನ್ನ ರಟ್ಟೆ ತಿರುವು, ಏರುಗಳಲಿ ನಿನ್ನಾ ಓಲೆ, ಮೂಗುತಿಗಳ ರಕ್ತಗೆಂಪು ಗೀರುಗೀರು ಭಿತ್ತಿಚಿತ್ರಾವಳಿ - ತಿಂದ ಖಾರದ ರುಚಿ ಉರಿವ ತುಟಿಯಲುಳಿದಂತೆ; ಗಾಳಿ ಸೋಕಿದಾಗೆಲ್ಲ ಮತ್ತೆ ಹೊಸ ಪುಳಕ...
ನನ್ನ ಹರೆಯವ ಹಾಡಂತೆ ಹಾಯ್ದು ಕಾಯ್ದ ಕರುಳು ಹಾಗೂ ನಾಭಿಚಕ್ರದ ಬಿಸಿ ಸ್ವಪ್ನಗಳೆಲ್ಲ ಹಂಗಂಗೇ ಎದೆ ಮೇಲೆ ಒರಗಿ ಮೂಗುಜ್ಜಿ ಅರಳುತಿರುವಂತ ಭಾವೋನ್ಮೇಷ ಘಳಿಗೆಗಳವು...
ಮಿಳನ ಮೇಳದ ಎಳೆ ಗೆಲ್ಲುಗಳಂಥ ಇಂಥವಿಷ್ಟು ಆಪ್ತ ಸುಖಹಾಸ ನಿನ್ನ ತೋಳಲ್ಲಿನ ನನ್ನ ಪ್ರತಿ ತಿಳಿ ಎಚ್ಚರದ ಸೌಂದರ್ಯ...
#ರಜನೀಗಂಧ...
#ಮತ್ತೆ_ಮತ್ತದೇ_ಇರುಳಿಗೆ_ಕಾಯುತ್ತಾ_ಕನವರಿಸುತ್ತಾ...
♡♤♥♤♡

ನಂಗೆ ಸಿಟ್ಟು ತರ್ಸಿ ಸಾಯ್ಬೇಡಾ ಅಂದ್ಲು ಕಣ್ಣ ಗೋಳದಲಿ ಉರಿ ಹಚ್ಚಿಕೊಂಡು...
ನಿನ್ನ ಸನ್ನಿಧಾನದಲಿ ಸಾವೂ ಸಮ್ಮತವೇ ಅಂದೆ ಕಣ್ಣಲ್ಲವಳ ಕಣ್ಮುಗಿಲ ತುಂಬಿಕೊಂಡು...
ಬುದ್ದೂ ಥರಾ ಏನೇನೋ ಹಲುಬ್ತಾ ಕೂರ್ಬೇಡ ಸುಮ್ನೆ ಬಾಯ್ಮುಚ್ಚು ಅಂತ ಬೈದ್ಲು ಗಂಗೆಯ ಕಣ್ತುಂಬಿಕೊಂಡು...
ಈಗ ಮಾತಿಲ್ಲ ಕಥೆಯಿಲ್ಲ ಅವಳೊಡನೆ - ತುಟಿಗೆ ತುಟಿ ಬೆಸೆದು, ನಾಲಿಗೆಯ ಹೊಸೆದು ಬರೀ ಬಾಯ್ಮುಚ್ಚುವಾಟ ಕಣ್ಮುಚ್ಚಿಕೊಂಡು...
#ಬಲು_ವಿಧೇಯ_ಪೋಲಿ_ನಾನು...
♡♤♥♤♡

ಜೀವಾ ಭಾವಗಳೆಲ್ಲ ಹೆಪ್ಪುಗಟ್ಟಿದ ಮೃತ ಕಾಲದ ಮನದ ಏಕಾಕಿತನತವನೂ ಆತ್ಮ ಭರ್ತ್ಸನೆಯಲ್ಲಿ ನೀಗಿಕೊಂಡು ನಗಲೂಬಹುದು - ಹಣೇಬರದ ಹೊಣೆ ಹೊರಿಸಿ... 
ಉಬ್ಬೆಗಟ್ಟಿದ ಮೋಡದಂಥಾ ಜೀವಂತ ದೇಹದ್ದೇ ನೋಡು, ನಿನ್ನ ಒಪ್ಪಿಗೆಯ ಹಾದಿಯ ಕಾದು ಕೂಡದೇ ಈ ಕರಡಿ ಕಾವು ಕಳೆಯುವುದೇ ಇಲ್ಲ...
ಕನಸಿನಂಬುಧಿಯ ಅಂಬಿಗಳೇ -
ಅರುಣೋದಯದ ಮಗ್ಗುಲಲಿ ಒಂದೇ ಒಂದು ಪ್ರಹರ ತೋಳ ಹಾಯಿಯಲಿ ತುಂಬಿಕೊಂಡು ಆ ತೀರಕೆ ಸೇರಿಸೇ...
ನಿನ್ನ ಹಾಯುವ ಸುಖದ ಸುಳಿಯಲ್ಲಿ ಮೈಸೋತು ಮುಳುಗಿ ಸಾವೇ ಬಂದರೂ ಉಳಿದೀತು ನನ್ನಲ್ಲಿ ನಿನ್ನ ಋಣವೇ...
#ಸಂಗಾತ_ಸಾಯುಜ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೈವತ್ತೈದು.....

ಭಾವದಾನ.....

ಒಂದು -
'ನಾನು' 'ನೀನು' ನಡೆವ ಅವರು ತೋರಿದ, ಒಪ್ಪಮಾಡಿದ ರಾಜಮಾರ್ಗ - ಅಧಿಕಾರದ ಆರತಿಯಲ್ಲಿ ಬೆಳಗಿದ ಪ್ರತಿಷ್ಠಿತ ಸ್ಥಾಪಿತ ಸ್ವಾತಂತ್ರ್ಯ - ಒಣ ಪಾವಿತ್ರ್ಯದ ತೂಕ...
ಇನ್ನೊಂದು -
'ನಾವು' ತೆರೆದುಕೊಂಡ 'ನಾವೇ' ಕೊರೆದ ಹಳ್ಳದಿಣ್ಣೆಯ ಕಾಲುಹಾದಿ - ಸಂವೇದನೆಯ ಕಿರು ಹಣತೆಯೆದುರು ಬಿಚ್ಚಿಕೊಳ್ಳೋ ಸಹಜೋಲ್ಲಾಸದ ಆಪ್ತತೆಯ ಸ್ವಾತಂತ್ರ್ಯ - ಪ್ರಕೃತಿ ಪ್ರೇಮದ ಪಾಕ...
ಇಲ್ಲಿ -
ಆಯ್ದುಕೊಳ್ಳುವ ಆಯ್ಕೆ, ಕಾಣ್ಕೆಯ ನಮಗೆ ಕೊಡಬಹುದಾ ನೋಡಿ ಅಥವಾ ಗಂಟು ಪಾವಿತ್ರ್ಯ ಮತ್ತು ಸಹಜ ಪ್ರಣಯ ಎರಡೂ ಸಮತೂಗುವ ಬೆಳಕ ಬೆಳೆಯಬಹುದಾ ಜೋಡಿ...
#ಸಂನ್ಯಾಸಿಯ_ಕಿವಿ_ತುಂಬಾ_ಸಂಸಾರದ_ಚಟ್ಟು...
➧➥➦➤

ಕಟ್ಟಿಕೊಂಡ ಬಂಧ ಸಂಬಂಧಗಳ ಎದುರು ನಮ್ಮ ಸಿಟ್ಟು, ಅಸಹನೆ, ಬೇಸರ, ವಿರಾಗಗಳನೆಲ್ಲ ವ್ಯಕ್ತಪಡಿಸಿದಷ್ಟು ಸರಾಗವಾಗಿ ನಮ್ಮೊಳಗಿನ ಸಹಜ ಪ್ರೀತಿ, ಪ್ರೇಮ, ಕಾಮದ ಭಾವಗಳ ಬಿಚ್ಚಿಡಲಾಗದ ರಹಸ್ಯ ಏನು...!?
ಕಡಿಯುವುದು ಸಲೀಸು - ಬೆಸೆಯುವುದೇ ಬಲು ದುಬಾರಿ ಸಾಹಸ...
#ಭಾವದಾನ...
➧➥➦➤

ನಾಲಿಗೆಯ ಬಿಗಿದರೆ ಶಬ್ದವನಷ್ಟೇ ತಡೆಯಬಹುದು...
ಮಾತು ನಿಲ್ಲಿಸಬೇಕೆಂದರೆ ಎದೆಯ ಗಂಟಲನೇ ಕಟ್ಟಬೇಕು...
#ಕೇಳಿಸ್ತಾ...
➧➥➦➤

"ಕತ್ತಲಲ್ಲಿ ಕಣ್ಮುಚ್ಚಿ ನಡೆಯಬಹುದು - ಬೆಳಕಿನದೇ ಭಯ..."
➧➥➦➤

"ಕಣ್ಮುಚ್ಚಿ ಕತ್ತಲ ಕುಡಿಯಹೋದೆ - ಒಳಗಿನ ಬೆಳಕು ಕಣ್ಬಿಟ್ಟಿತು..."
➧➥➦➤

ಹರಿವು ದಕ್ಕುವುದೊಂದು ಕಾಲ - ಹರಿದು ಹೋಗುವುದು ಒಂದು ಕಾಲ...
ಅದೇ ದಾರಿ - ಅದೇ ದಾಳ - ಅಲ್ಲೇ ಉರುಳಿದ್ದು, ಅರಳಿದ್ದು ಈ ಬದುಕ ಗಾಳ...
ಉಳಿದದ್ದು...?

ಎಲ್ಲರಿಗೂ ಸಮಯವೊಂದು ಬರುತ್ತೆ - ಕಾಯಬೇಕಂತಾರೆ...
ಕಾಲನೋಲಗದಲ್ಲಿ ಪ್ರೀತಿಯೇ ನೀನೂ ಸಿಗಬಹುದೇ...!!
ಕಾಯಬೇಕಿಲ್ಲ - ಸಾಯು ಕಾಲ ತಪ್ಪಿರೂ ನೋಯು ಕಾಲ ತಪ್ಪಲ್ಲ ಅಂತಾರೆ...
ಹಾಗಂತ ನೋವ ದಾಟಿದಂಗೆ ಸಾವನು ದಾಟಲಾದೀತೆ - ಎಲ್ಲರನೂ ಒಂದು ಸಮಯ ಕೊಲ್ಲುತ್ತೆ...
ನಿನ್ನ ನೆರಳೂ ಸೋಕದೇ ಕಾಲನಂಬಿಗೆ ನನ್ನ ಬಲಿ ಬೀಳಬಹುದೇ...
#ಕಾಯುತ್ತಲೇ_ಇದ್ದೇನೆ...
➧➥➦➤

ವ್ಯಕ್ತಿತ್ವ ವಿಕಸನ ಅಂದ್ರೆ ಹಿರಿತನದ ಎದೆ ಬಿಳಲ ಕೈಬಿಡದ ಮಗುತನ...
#ಪ್ರಜ್ಞೆ_ಮತ್ತು_ಮನದ_ಗಟ್ಟಿ_ಗೆಳೆತನ...
➧➥➦➤

ಜೊತೆಯಿದ್ದೇ ದೂರ ನಿಲ್ಲುವುದನು ಕಲಿಸು - ಸಾವಿನ ಹಾಗೆ...
ಸಾವು ಹದ ತಪ್ಪಿ ಬದುಕ ತಬ್ಬಿದರೂ, ಅವಸರಿಸಿ ಬದುಕಿಗೆ ಝಾಡಿಸಿ ಒದ್ದರೂ ಅಕಾಲ ಮುಕ್ತಿಯೇ(?) ಜೀವಿಗೆ...
ಪ್ರೀತಿಯೂ ಹಾಗೇ...
#ಕೊಟ್ಟೂ_ಬಾಕಿಯೇ_ಉಳಿಯಬೇಕು...
➧➥➦➤

ಸಣ್ಣ ಸಣ್ಣ ಸ್ವಾರ್ಥಗಳಲೇ ಜೀವಂತ ನಾವುಗಳು...
ದೇವನಿಗೂ ಭಕ್ತಿಯ ಬಯಕೆ ಬಳಿದವರು...
#ನಾನು_ನೀನೆಂಬ_ನೂರು_ನಾಮಾವಳಿ...
➧➥➦➤

ಕಣ್ಣ ಮೊನೆಯಿಂದ ಸುರಿವ ನೋವ ಹನಿ, ಕಿವಿಯ ತಿರುವಿನಿಂದ ಇಳಿವ ಸುಖದ ಬೆವರು ಎರಡನೂ ಕುಡಿದು, ಎರಡಕೂ ಸಾಕ್ಷಿಯಾಗಿ ಜಿಡ್ಡು ಜಿಡ್ಡಾದ ಚಿತ್ತಾರದ ಮೌನ...
#ಉಪಧಾನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೈವತ್ನಾಕು.....

ರತಿರಸದಬ್ಬಿಯಲಿ ಆತ್ಮವ ತೊಳೆದು.....

"ಕಾರ್ತೀಕದ ಛಳಿಯ ಗೂಡಲ್ಲಿ ಮೈದುಂಬಿ ಉರಿವ ಹಣತೆ ನಿನ್ನ ವಿರಹ..."
ಪ್ರತಿ ಉಶ್ವಾಸದಲ್ಲೂ ನರನಾಡೀ ಮಿಡಿತಗಳ ಮಿಡುಕಾಡಿಸೋ ಸುಳಿಗಾಳಿ ಮೈಗಂಟಿದ ನೆನಪ ಹರಳೆಣ್ಣೆ ಘಮ...
ಈ ಥಂಡಿ ಥಂಡಿ ರಾತ್ರಿಗಳ ತೋಳ ಹಸಿವನು ನಿನ್ನ ಹುರಿ ಹುರಿ ಮಾಂಸಖಂಡಗಳಷ್ಟೇ ನೀಗಿಸಬಲ್ಲವೋ ಜೋಗೀ...
ಕಣ್ಮುಚ್ಚಿದರೆ ಸಾಕು,
ಸರಸದ ಸರಸಿಯಲಿ ಕಾಲಾಡಿಸುತ್ತಾ ಕಾಲನ ಹಾಯಿಗೆ ಹುಟ್ಟಿನ ಗುಟ್ಟನು ಬಿಡಿಬಿಡಿಸಿ ತೋರುವ ಕನಸಾಗುತ್ತದೆ ಮತ್ತೆ ಮತ್ತೆ.‌..
ಚುಚ್ಚುವ ಕಣ್ಣುಜ್ಜಿ ಮಗ್ಗುಲಾದರೆ,
ಬೆಳುದಿಂಗಳ ಹಾಸಿದ ತಾರಸಿಯ ಅಂಚನು ಬೆತ್ತಾಲೆ ಬಾಳೆಗಂಬಗಳಿಂದ ಸಿಂಗರಿಸುವಾಗ ಊಟೆಯೊಡೆವ ಬೆವರ ಹನಿ ಹನಿಗಳಲಿ ತಾರೆಗಳ ಮುಖ ಹೊಳೆದಂತ ಸ್ವಪ್ನ ಚಿತ್ರಗಳು ನಡುರಾತ್ರಿಯ ಬಿಸಿ ನಡುಕವಾಗಿ ಕಾಡುತ್ತವೆ ಮತ್ತೆ ಮತ್ತೆ...
ಅಬ್ಬೋ,
ಮಾಗಿಯ ಬಾಗಿಲಲಿ ವಿರಹದ ಹುಯಿಲು ಎಷ್ಟು ತೀವ್ರವೋ ದೊರೆಯೇ...
#ಬಂದುಬಿಡು_ನಾಭಿಕಡಲ_ಮೊರೆತಕ್ಕೆ_ನೀನಿರದ_ಸಜ್ಜೆಮನೆ_ದಿಕ್ಕೆಡುತ್ತದೆ...
⇭⇱⇲⇭

'ಅಧರ'ಸೋಮ ರಸ ಸಾರ
'ಬಗಲ' ಗಂಧ ಗಾಳ
ಶೃತಿ ಸುಭಗ 'ವಕ್ಷ' ತಂಬೂರ ತಾಳ
ಮೃಗ'ನಾಭೀ' ಚಕ್ರಸುಳಿ ಸಿಡಿ
ನಟನ ನಾಟ್ಯ ನೂಪುರ ಲಯ ಮಹೋನ್ನತ 'ಕಟಿತಟ' ಮಂದ್ರ ತಾರಕ ತುಡಿತ
ಧವಲ 'ಊರು' ಬಂಧ
ಕಾಮ ಕಸ್ತೂರಿ 'ಊರು ಸೂರು' ಸೂರೆ
ಮಯೂರ 'ಮಿಳನ...'
ಸುಮ್ಮನೇ ಮೈಮುರಿದು
ಬೇಶರತ್ ಮೈಯ್ಯೊಡ್ಡಿ
ಮನತೆರೆದು ಮಿಡಿದು ಮೀಯುತಿರಬೇಕು
ಧಾರೆ ಸುರಿವ ಮದ ಮತ್ತ ನವಯೌವನ
ಮೋಹಕ ಮೋಹಾ ಮಾಯದ ತೋಳಲ್ಲಿ...
#ಸುಖ_ಸಂಜೀವಿನಿ...
⇭⇱⇲⇭

ಇರುಳುಗಪ್ಪಿನ ಕೂಸೇ -
ಮತ್ತೆ ಮತ್ತೆ ಕಣ್ಸೆಳೆದು ಹೃದಯ ಪಾತ್ರೆಯ ಭಾವರಸಗಳ ಗೊಡಗುಡುವಂತೆ ಒಗ್ಗಿಸೋ ಅದಮ್ಯ ಹೆಣ್ತನದ ತುಂಟ ಚೆಲುವು - ನೀನು...
ಆ ಮೋಹಕತೆಗೆ ಬೇಶರತ್ ಶರಣಾದ ಸಂಭ್ರಾಂತ ತುಡುಗು ಬೋಳೇ ಹೈದ - ನಾನು...
ಕನಸಿನೂರ ಆಳಲು ಮಾಡಿಕೊಂಡ ಜಂಟಿ ಒಪ್ಪಂದ - ಮರುಳು ಮೋಹ...
ಸಾಕ್ಷಿಗೆ ರುಜು ಹಾಕಿದ್ದು ಅನುರಾಗಿಗಳ ಪರಮಾಪ್ತ - ತಾರೆಗಳೂರಿನ ಮುಕಾದಮ ಚಂದಿರ...
ಜಗದ ಹಂಗು ತೊರೆದು, ಅಲೆ ತೊಳೆದ ಮರಳ ತೀರದಲಿ ಅಸಾಧ್ಯ ರಸಿಕ ಲಹರಿಯ ಗಿರಿಯನೇರಿ, ಕಾಮನ ಒಲೆಯ ಹೂಡಿ, ಹರೆಯದ ಹಸಿವ ನೀಗಿಕೊಂಡು, ಅಪಾದಮಸ್ತಕ ಸುಖದ ಬೆಂಕಿಯ ಹಂಚಿಕೊಂಡ ಪರವಶತೆಯ ಬೆಳುದಿಂಗಳಿರುಳು...
ಈ ಒಂಟಿ ರಾತ್ರಿಗಳಲಿ ಇಂಥ ಸುಖದ ನೆನಪು, ಕನಸುಗಳನು ನಿಷೇಧಿಸಬೇಕು ನೋಡು...
ಅಂಗೈಯ್ಯ ಸ್ವೇದ ಕಾವ್ಯವೇ -
ನೀನು ಅಂಗಾಲ ತುಳಿದು, ಅನಂಗನ ಸೆಳೆದು, ಬೆರಳ ಬೆಸೆದು ದಾಟಿಸಿದ ಸಂಜೆಗಳ ಆಸೆ ಬಿಸಿಯೇ ನನ್ನ ಇರುಳ ಮಂಚದ ಶೃಂಗಾರ ಸಿಂಗಾರ...
ಹಸಿ ಬೆವರ ಅಂಟಿಸಿಕೊಂಡ ಹಾಸಿಗೆಯ ಮುದುರುಗಳ ಮಳ್ಳು ನಗೆಯಲ್ಲಿ ಕಣ್ಣು ಕೂಡಲು ಬಿಡದ ಹಟ್ಟಾಕಟ್ಟಾ ಹರೆಯದ ಹಪಾಪೋಲಿ ಉನ್ಮಾದೀ ನಶೆಯ ಹೊಸದೇ ಕನಸುಗಳು...
ನಿನ್ನ ಮೈಯ್ಯ ಬಿಸಿಯಲ್ಲಿ ಛಳಿ ಕಾಯಿಸಿಕೊಳ್ಳೋ ಸ್ವಪ್ನ ಸುರತದ ಹಗೂರ ಸುಸ್ತಿಗೆ ಹಿತವಾದ ನಿದ್ದೆ...
#ನಿನ್ನಿಂದ...
#ನನ್ನಿರುಳ_ಹಸಿ_ಬಿಸಿ_ಬಣ್ಣ_ನೀನು...
⇭⇱⇲⇭

ಸಜೀವ ಕೆಂಡದಂತವಳೇ -

"ರತಿರಾಗದ ಚರಮ ಚರಣದ ಸುಖದ ನಿಬ್ಬೆರಗಿಗೆ ನಿನ್ನದೇ ಹೆಸರು..."
ಮುಂಗಾರಿನಬ್ಬರ ಮುಗಿವ ಹೊತ್ತಿನ ಐನಾತಿ ಮಳೆಯಲ್ಲಿ ನೆಂದು ಈ ಒದ್ದೊದ್ದೆ ಗಂಡು ಮೈ ಸಣ್ಣಗೆ ಗಡಗಡಗುಡುವಾಗಲೆಲ್ಲಾ ನಿನ್ನ ಉರಿ ಉರಿ ಮೈಯ್ಯ ಮೋಹಾಗ್ನಿಯ ನುರಿ ನುರಿ ಬಯಕೆ ಇನ್ನಷ್ಟು ಒದ್ದೆ ಮುದ್ದೆಯಾಗಿಸಿ ಕಾಡುತ್ತದೆ ಜೀವನಾಡಿಗಳ...
ಹನಿಯ ವಜ್ಜೆಯ ಹೊತ್ತು ತಂಪೆರೆದು ಹೊಯ್ಲಿಡುವ ಸುಳಿ ಗಾಳಿಯ ಇರುಳ ಬಾಗಿಲಲಿ ನಿನ್ನುಸಿರ ಬೆಂಕಿ ಬಳ್ಳಿ ತೋಳ್ಗಳಲಿ ತೋಯ್ವ, ಕೊರಡು ಮೈಯ್ಯ ಹಸಿವ ಮೀಯಿಸೋ, ಬಿಸಿ ನೀರ ಬುಗ್ಗೆಯ ಕೊಂಡಾಟದ ರತಿ ರಮ್ಯ ಮಜ್ಜನವೆಂದರೆ ಸ್ವರ್ಗ ಸೀಮೆಯ ಹಬ್ಬವಲ್ಲದೇ ಇನ್ನೇನು...
ಕಾಮನೊಲುಮೆಯ ರಸಿಕ ರುಚಿ, ಅಭಿರುಚಿಯ ಬಿಡಿಸಿ ಬಿಡಿಸಿ ಹೇಳ್ತಾವೆ ಬಯಸಿ ಬಯಸಿ ಬೆಸೆದುಕೊಂಡ ಮೈಯ್ಯ ಬಯಲ ತುಂಬಾ ಚಿತ್ತಾರದಂಗೆ ಉಳಿದು ಕಾಡುವ ಸುಖದ ಘಾತಗಳು, ಗಾಯಗಳು, ಅಪರಾತಪರಾ ಗೀರುಗಳು...
ಉಸಿರ ನಾಳಗಳ ದಿಬ್ಬಗಳಿಗಂಟಿ ಉಶ್ವಾಸ ನಿಶ್ವಾಸಗಳಲಿ ಅಲೆಅಲೆಯಾಗಿ ತುಯ್ಯುತ ಉಳಿದೇ ಹೋಗುವ, ಉಲಿದುಲಿದು ಕಾಡುವ ಕಮ್ಮಗಿನ ಬೆಮರ ಘಮಲು...
"ಮೊದಲಿನ ಉನ್ಮತ್ತ ರಸಿಕ ಅಗೆತದ್ದು ಒಂದು ದಡೆಯಾದರೆ, ನಡುವಿನಬ್ಬರ ಇಳಿದ ಆಮೇಲಿನ ಶಾಂತ ಸಲ್ಲಾಪದ್ದೇ ಇನ್ನೊಂದು ಆಳ..."
ಆ ಸಂತೃಪ್ತ ಸಂಯೋಗದ ನೆನಹೂ ಕೂಡ ಎಷ್ಟು ಸಮೃದ್ಧ ಹಾಗೂ ಭಾವೋನ್ಮತ್ತ...
ಹೇಮಂತದ ಸನಿಹದಲಿ ಮಂಚದ ಮನೆಯ ಕನ್ನಡಿಯ ಕಣ್ಣ ತುಂಬಾ ನಾಚಿಕೆ ಕಳಚಿದ ಪೋಲಿ ಚಿತ್ರವೇ...
#ಕದ_ತೆರೆದ_ಜೋಡಿ_ಪ್ರಾಯಕ್ಕೆ_ಕಲೆ_ಒಳ್ಳೆಯದು...
⇭⇱⇲⇭

ಹೇ ಬೆಳಕ ಸವತಿಯಂಥವಳೇ,
ನೂರು ಅಲಂಕಾರಗಳ ನಿವಾಳಿಸಿ ಎಸೆವ ಕತ್ತಲಿಗೆ ಕಾಮನ ನೂರು ಬಣ್ಣಗಳ ತುಂಬಿಕೊಡುವ ನಿನ್ನ ಹುಟ್ಟು ಬೆತ್ತಾಲೆ ಬೆಡಗು... 
ನೀನೆನ್ನ ಎದೆಯ ತಬ್ಬಿದ ಬೆಳಕ ತೋಳು...
ಮೈಯ ನಾಳಗಳಲೆಲ್ಲ ನಿನ್ನ ನಶೆ ತುಂಬಿ ಜೋಲಿ ತೂಗುವ ಕಣ್ಣಾಲಿಗಳಲಿ ಅನೂಹ್ಯ ಚೆಲುವ ಬಾಚಿಕೊಳುವ ಚಂಚಲ ಬೆರಗು...
ನೀನೆಂದರೆ ನಿದ್ದೆಯನೂ ಹಬ್ಬಿದ ಬೆವರ ಬಳ್ಳಿ...
ಇಲ್ಲೀಗ ನಾವು ನಮ್ಮ ಬೆತ್ತಲೆಯ ಜೊನ್ನ ಕೇರಿಯ ಓಣಿ ಓಣಿಯ ಹೊಕ್ಕು ಆತ್ಮವ ಹೆಕ್ಕಿ ತರುವ ಪರಮಾಪ್ತ ಪಯಣದಲಿ, ಬರಿದಾಗುತ್ತಾ ತುಂಬಿಕೊಂಡು - ತುಂಬಿಕೊಂಡಷ್ಟೂ ಹಗುರಾಗಿ - ಇರುಳ ತೊಟ್ಟಿಲ ತೂಗೋ ಬ್ರಹ್ಮಾಂಡ ಸುಖದ ಸೋಬಾನೆ...
ಸ್ವರ್ಗಾಂತ ಸೀಮೆಯ ತುಳಿದು ಕರುಳ ತುಂಬಾ ನನ್ನ ತುಂಬಿಕೊಂಡ ನೀನು ಕಣ್ಣ ತೀರ್ಥದಲಿ ಪ್ರೀತಿ ಹೇಳುವಾಗ, ಅದೇ ಮೈಮರೆವಿನ ಜೊಂಪಿನಲಿ ನಿನ್ನ ಮೈತುಂಬ ಹೊದ್ದು ಹೆರಳ ಧೂಪವ ಹೀರುತ್ತಾ ತೋಳ ತುಂಬಿಕೊಳ್ಳುವ ನಾನು ಹೇಮಂತದ ಹೊಳೆ...
ಎರಡಿಲ್ಲ ಅಲ್ಲಿ ಆಳು - ಅದ್ವೈತವಾಗಿ ಹೆಣೆದಾಗ ಜೀವಭಾವ ಬಿಳಲು...
ಉಸಿರ ಅಬ್ಬರ ಕಳೆದು, ಬೆವರು ಬೆವರ ಸೇರಿ ಆರಿ, ಘಳಿಗೆ ಮಟ್ಟಿಗೆ ಮೈಯ್ಯ ಹೆಣಿಗೆ ಕಳಚಿ ಮಗ್ಗುಲಾಗಿ, ನಿನ್ನ ಕಿವಿಯೋಲೆ ನನ್ನ ತೋಳಿಗೆ ಹಚ್ಚೆ ಬರೆವಾಗ, ಉಸಿರ ಶೃತಿಗೆ ತಕ್ಕಂತೆ ಒಂದೇ ಲಯದಲ್ಲಿ ಕೊಳದ ಅಲೆಯಂತೆ ತುಯ್ಯುವ ನಿನ್ನೆದೆ ತಂಬೂರಿಯ ನಾ ಮಂದ್ರದಲಿ ಮೀಟುತ್ತಾ, ನನ್ನ ಕಣಕಾಲು ನಿನ್ನ ಕಾಲಂದುಗೆ ಹಲಗೆ ಬಳಪಗಳಾಗಿ ಕಚಗುಳಿಯ ಚಿತ್ರಲೋಕ ತೆರೆಯುತ್ತಾ, ನಿದ್ದೆಯ ಶಪಿಸುವ ಕಂಗಳಲಿ ಒಬ್ಬರನೊಬ್ಬರು ಕುಡಿಯುತ್ತಾ, ಎದೆಯ ಗೂಡಲ್ಲಿ ಬಾಕಿ ಉಳಿದ ಮಾತು ಮೌನಗಳ ಮೆಲ್ಲಗೆ ಮೆಲ್ಲುತ್ತಾ ಕತ್ತಲ ಹಾಯುವುದೂ ಏನು ಸೊಗಸು...
ಲಯವಾಗಿ, ಗುರುವಾಗಿ ಅರಳುವ ಮಧುಮಂಚದ ಆಜೀವ ಪರಿಮಳಕೆ ನೀನೇ ವ್ಯಾಖ್ಯಾನ, ನಾನು ಆಖ್ಯಾನ...
ಕಾಯಲಿ ಪ್ರತಿ ಇರುಳನೂ ನಮ್ಮ ನಮಗೆ ಬಸಿದುಕೊಡೋ ಇಂಥ ನೂರು ಸವಿ ಸೋಲು...
#ಮೈಯ್ಯ_ಕಿಬ್ಬಿಗಳಲಿಳಿವ_ರತಿರಸದಬ್ಬಿಯಲಿ_ಆತ್ಮವ_ತೊಳೆದು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, November 20, 2020

ಗೊಂಚಲು - ಮುನ್ನೂರೈವತ್ಮೂರು.....

ಅವಸ್ಥೆ..... ಚೆಲುವಾಂಬುಧಿಯೇ -
ಈ ಬದುಕಿನ ಸಕಲ ಆಸೆಗಳು ಸತ್ತಮೇಲೂ ನಿನ್ನ ಕೂಡಿ ಆಡಿ ಉರಿದುಹೋಗುವ ಆಸೆಯೊಂದು ಸಾಯಲೇ ಇಲ್ಲ... ನಶೆ ವಿಷವೆಂದಾದರೆ ವಿಷವೂ ಬದುಕಿಸುತ್ತೆ ಕೆಲವರ... ಇವೆಲ್ಲ, ಈ ಸುಖದ ಬೇಟೆ, ಮೋಹ ಮೋದ ಪ್ರಮೋದಗಳೆಲ್ಲ ಕ್ಷಣಿಕ ಸುಖಾವೇಶಗಳು ಅನ್ನುತ್ತಾರೆ ಅನುಭವಿಗಳು (?), ಅನುಭಾವಿಗಳೆಲ್ಲ... ಆದರೋ, ಮೂರು ಘಳಿಗೆಗೆಲ್ಲ ಮುಗಿಯಿತು ಅಂತ ಹೇಳಿ ಮುಗಿವ ಮುನ್ನವೇ ಮತ್ತೆ ಹುಟ್ಟಿ ನಿಲ್ಲುವ ಬಯಕೆಗಳ ನಶ್ವರ ಅನ್ನುವುದು ಹೇಗೆ...!? ಮತ್ತೆ ಮತ್ತೆ ಆವರ್ತನದಲಿ ಇಂಥದೇ ದೇಹದಲ್ಲಿ ಆಶ್ರಯ ಪಡೆವ ಆತ್ಮ ಅವಿನಾಶಿಯಾದರೆ; ಅಂಥದೇ ಆವರ್ತನದಲಿ ಮತ್ತೆ ಮತ್ತೆ ಇದೇ ಜೀವಾಭಾವದಲ್ಲಿ ಉಕ್ಕುವ, ಸಾಗರ ಸೇರದೆಯೂ ಸಾರ್ಥಕ ನಗೆ ಬೀರೋ ಹಸಿರಿನುಸಿರಾದ ಕಾಡು ಸಲಿಲದಂಗೆ ಕಾಡುವ ನನ್ನ ನಿನ್ನ ಸವಿ ಸುಖ ಒಡನಾಟದ ಬಯಕೆಗಳು ಅದು ಹೇಗೆ ಅಚಿರ...!? ಅದೇನೋ ಮೊಟ್ಟೆಯ ಕಥೆ ಹೇಳ್ತಿದ್ರು ಅವ್ರೆಲ್ಲ: ಮೊಟ್ಟೆ ಹೊರಗಿನ ಶಕ್ತಿಯಿಂದ ಒಡೆದರೆ ಸಾವು, ಒಳಗಿನ ಒತ್ತಡದಿಂದ ಬಿರಿದರೆ ಹುಟ್ಟು, ಹಂಗಾಗಿ ಯಾವತ್ತೂ ಒಳಗಿನ ಒತ್ತಡ ಶ್ರೇಷ್ಠ ಅಥವಾ ಶ್ರೇಷ್ಠವಾದದ್ದೆಲ್ಲ ಒಳಗಿಂದ ಮಾತ್ರ ಬರ್ತಾವೆ ಅಂತ - ಅಂತರಂಗವನಷ್ಟೇ ಉದ್ಧರಿಸಿಕೋ, ಬಾಹ್ಯದ್ದೆಲ್ಲ ಅಲ್ಪ, ಅವನ್ನು ನಿಗ್ರಹಿಸು ಅಂತೆಲ್ಲ... ನಂಗೆ ಕೆಟ್ಟ ಗೊಂದಲ ನೋಡು... ಈ ಮೊಟ್ಟೆ ಹಾಗೂ ಮೊಟ್ಟೆಯೊಳಗೆ ಜೀವದ ಒತ್ತಡ ಹುಟ್ಟಿದ್ದು ಹೇಗೆ...? ಮೊಟ್ಟೆಯ ಸೃಷ್ಟಿಸಿದ್ದು ಪ್ರಾಕೃತಿಕ ಕ್ಷೇತ್ರ ಮತ್ತು ಬೀಜದ ಸಂಗಮವಲ್ವಾ - ಸರ್ವವಿದಿತ ಸುಖದ ವಿನಿಮಯ; ಅದಿಲ್ಲದೇ ಮೊಟ್ಟೆಯೇ ಇಲ್ಲ... ಮೊಟ್ಟೆಯಲ್ಲಿ ಜೀವೋತ್ಪತ್ತಿಯ ತುಡಿತ ಮೂಡಲು ಮತ್ತೆ ಹೊರಗಿನ ಕಾವಿನ ಆಸರೆ - ಮತ್ತದೇ ಬಹಿರಂಗ ಪ್ರೇಮದ, ಕಾಳಜಿಯ ಒತ್ತಡ; ಕಾವು ಕೊಡುವಲ್ಲಿ ಸಣ್ಣ ನಿರ್ಲಕ್ಷ್ಯವಾದರೂ ಮೊಟ್ಟೆ ಒಳಹೊರಗಿಂದೆಲ್ಲಾ ಕೊಳೆತು ನಾರತ್ತೆ... ಅರ್ಥವೇ ಆಗೋದಿಲ್ಲ ಇವೆಲ್ಲಾ ದೊಡ್ಡ ದೊಡ್ಡ ಜಿಜ್ಞಾಸೆಗಳು... ಆತ್ಮಕ್ಕೆ ದೇಹ ಬರೀ ಅಂಗಿಯಂತೆ - ಅಂಗಿ ಅಂದ್ರೆ ಅನಗತ್ಯ ಅಲಂಕಾರ... ಹಂಗಾದ್ರೆ ವಸ್ತ್ರವ ಬದಲಾಯಿಸುವುದೇತಕ್ಕೆ ಮತ್ತು ಬದಲಾಯಿಸಬೇಕು ಅಂದಾಗ್ಲೂ ಆ ಪ್ರಕ್ರಿಯೆಗೆ ಮತ್ತದೇ ಕ್ಷಣಿಕ, ಅಲ್ಪ, ಅಪವಿತ್ರ ಅಂತೆಲ್ಲ ಕರೆಸಿಕೊಳ್ಳುವ ಬಾಹ್ಯ ಸುಖದ ಆವರ್ತನವೇ ಜೊತೆಯಾಗಬೇಕಲ್ಲ... ಅಲ್ಲಿಗೆ ಒಂದನ್ನೊಂದು ಆತುಕೊಂಡ, ಆಶ್ರಯಿಸಿ ಜೀವಿಸೋ, ಅವುಚಿಕೊಂಡೇ ಎತ್ತರಕ್ಕೇರೋ ಆನಂದಗಳಲ್ಲಿ ಯಾವುದು ಕ್ಷಣಿಕ, ಯಾವುದು ಶಾಶ್ವತ...!? ಆತ್ಮನ ತೃಪ್ತಿಯೂ ಈ ದೇಹದ, ಭಾವದ ಕೈಹಿಡಿದು ಇದೇ ಹಾದಿಯಲ್ಲೇ ಸಾಗುವಾಗ ಒಂದು ಮಾತ್ರ ಕ್ಷಣಭಂಗುರ ಹೇಗಾದೀತು...!? ಅಲ್ಲಾss ಅಪ್ರಾಕೃತಿಕ ಲಾಲಸೆಗಳನ್ನು ಅಲ್ಪ, ಕ್ಷಣಿಕ ಅಂದರೆ ಒಪ್ಪುವಾ... ಆದ್ರೆ ಪ್ರಕೃತಿಯೇ ತನ್ನ ಉಳಿವಿಗಾಗಿ, ಚೆಲುವಿಗಾಗಿ ಜೀವ ಭಾವಗಳಲ್ಲಿ ಹರಿಬಿಟ್ಟ ಮಧುರ ಮೋಹಕ್ಕೂ ಹಕ್ಕಿನ ಬೇಲಿಗಳ ಹೆಣೆದು ಕೆಳದರ್ಜೆಗಿಳಿಸಿ ತನ್ನ ದೊಡ್ಡಸ್ತಿಕೆ ಮೆರೆಯಲು ಹವಣಿಸುವ ಮತ್ತು ಆ ಹಾದಿಯಲ್ಲಿ ಮತ್ತೆ ಮತ್ತೆ ಕದ್ದುಮುಚ್ಚಿ ಸೋಲುವ ಮನುಷ್ಯನ ಅತಿ ಬುದ್ಧಿವಂತಿಕೆಗೆ ಏನೆನ್ನುವುದು...!! ಇಹದಿಂದ ಪರಮಪದಕರ್ಹ ಆತ್ಮ ದೇವನ ಪಾದ ಸೇರುವುದೆನ್ನುತ್ತಾರೆ - ಮತ್ತು ಆ ದೇವಾನುದೇವತೆಗಳನೆಲ್ಲ ಸೌಂದರ್ಯ ಹಾಗೂ ವೀರ್ಯದಿಂದ ಬಣ್ಣಿಸುತ್ತಾರೆ... ಪಾಮರರು ನಮಗೇನು ಅರ್ಥವಾದೀತು ಹೇಳು ಇವುಗಳ ಹಿಕಮತ್ತುಗಳು... ಹೋಗಲಿ, ನರಕವಾಸಿಯ ಸ್ವರ್ಗದ ಕನಸು ನಶ್ವರವೇ ಅಂತಾದರೂ ಅದಿಷ್ಟು ಆಪ್ತವಾಗಿದೆಯಲ್ಲ - ಒರಟು ಕಾಲನ ರಾಜ್ಯಭಾರದಲಿ ಇರಲಿಬಿಡು ಇಷ್ಟು ಹಿತ ಈ ಬದುಕಿಗೆ... ಸಹವರ್ತಿಯೇ - ಕ್ಷಣಿಕವೇ ಅಂದರೂ ಕತ್ತಲ ಸುಖದ ಬೆಳಕಿನ ಕಿರು ಸೆಳಕೂ ಈ ಕ್ಷಣದ ಸತ್ಯವೇ ಎಂಬುದನ್ನು ಅಲ್ಲಗಳೆಯುವಂತಿಲ್ಲವಲ್ಲ - ಆಪ್ತತೆಯ ಮೈಮನಸಿನ ಒಪ್ಪಿತ ಮುಕ್ತತೆಯಲಿ ಅದನ್ನಿಷ್ಟೂ ತೀವ್ರ ತಾರಕದಲಿ ಜೀವಿಸಿಬಿಡೋಣ... ಚಿರಾನುರಾಗದ ಅಮಲೇ - "ಇದ್ದಾರೆ ಇರಲ್ಹೇಳು ಉಸಿರೇ ಕ್ಷಣಿಕ - ಸವಿಯೋಣು ಬಾ ತೋಳ ತಾಂಬೂಲವ ಕಸುವಿರೂ ತನಕ... ಇದ್ದಾರೆ ಸಿಕ್ಕೀತು, ಹುಡುಕಿದರೆ ಹೊಂದಲೂ ಆದೀತು - ಚರಮ ಸುಖದ ಕಣ್ಣ ಹನಿಯಲೇ ಆತ್ಮನಾ ಬೆಳಕ..." #ರಸಿಕ_ಲೋಭಿಯ_ಪ್ರಲಾಪಗಳು...  ➛➤➥➦➤➛

ಮರ್ಕಟ ಮನಸ್ಸು - ದೇಹಕ್ಕೆ ಸಂಯಮ, ನಿಷ್ಠೆಗಳ ಪಾಠ (ಶಿಕ್ಷೆ)... #ವ್ಯವಸ್ಥೆ... ದೇಹದ ಮೂಲಕ ಮನಸನ್ನು ನಿಗ್ರಹಿಸುವುದಾ...? ಅಥವಾ ಮನಸ್ಸನ್ನು ಬಂಧಿಸಲಾಗದ್ದಕ್ಕೆ ದೇಹವನ್ನು ಶಿಕ್ಷಿಸುವುದಾ...?? ಕಾಯಾ ವಾಚಾ ಮನಸಾ ನೀನು ಮಾತ್ರ ಅಂತ ಹೇಳಿಸಿದ್ದರಲ್ಲ ಪುರೋಹಿತರು ಎಲ್ಲಾ ಸನ್ಮಂಗಲಗಳ ಸಾಕ್ಷಿಯಾಗಿ - ಆದ್ರೆ, ಮಾತು ಮುನಿಸಾಗಿ ಇಲ್ಲಾ ಕಣ್ಹನಿಯಾಗಿ ಸೋಲುತ್ತಾ, ಮನಸು ಮುರಿದ ಕೊಳಲ ಅಪಸ್ವರವಾಗಿ ಕನಲುತ್ತಾ ಇಲ್ಲೀಗ ನಿಂದು ಮಾತ್ರ ಅಂತಾಗಿ ಉಳಿದದ್ದು ಅಧಿಕಾರದ ಊಳಿಗಕ್ಕೆ ಸಿಕ್ಕಿ ಸುಕ್ಕಾದ ಅರೆಬರೆ ದೇಹ ಮಾತ್ರವಲ್ಲವಾ... ದೇಹವನ್ನು ಅಂಕೆಯಲ್ಲಿಡುವ ವ್ಯವಸ್ಥೆಯ ಯಾವ ನಿಯಮವೂ, ಕಠೋರ ಕಟ್ಟುಪಾಡುಗಳ ಎಂಥ ಬಂದೋಬಸ್ತ್ ಬೇಲಿಯೂ ಮನಸಿನ ಎಲ್ಲೆಗಳನು ಬಿಗಿದು ಕಟ್ಟಿ ಕೆಡವಲಾಗದ್ದಕ್ಕೆ ನೋಡು ನಿನ್ನೊಡನೆ ನಿಂತು ಪೆಕರು ಪೆಕರು ನಕ್ಕಂತೆ, ನಿನ್ನ ಮಗ್ಗುಲಲಿ ಮೈಚಾಚಿ ಸುಖದ ಬೇಟೆಯಾಡಿದಂತೆ ಚೂರು ನಟಿಸಲಾದರೂ ತ್ರಾಣ ಇದ್ದದ್ದು... ಹಗಲಲ್ಲಿ ಪ್ರೇಮಿಸಿಕೊಳ್ಳಲು ಒಂದೋ ಬೇಹದ್ ಪ್ರೇಮವಿರಬೇಕು, ಇಲ್ಲಾ ತಣ್ಣನೆ ಕ್ರೌರ್ಯವಿರಬೇಕೆನಿಸುತ್ತೆ - ಸಭ್ಯರು (?) ನಾವು! ಇರುಳನ್ನು ಆಯ್ದುಕೊಂಡು ಮುಸುಕೆಳೆದುಕೊಂಡೆವು; ಕಣ್ಣು ತೆರೆದೇ ಇದ್ದರೂ ಕಣ್ಣ ಭಾವಕ್ಕೆ ಕತ್ತಲ ತೆರೆಯಿರುವಂತೆ - ಅವರಿವರಂತೆ, ಎಲ್ಲರೊಳಗೊಂದಾದಂತೆ... ಎಲ್ಲ ಹೊಯ್ದಾಟಗಳಾಚೆ ಕಲಿತದ್ದೇನೆಂದ್ರೆ: ಮೌನದ ಮನೆ ಹೊಕ್ಕು ನಿನ್ನಂತೇ ಮಾತು ಕಲಿತು ಕನಲುವುದು - ಎಲ್ಲರಂತಾಗುವುದು... #ಮಾತನುಂಗಿದ_ಪಾತ್ರಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, November 16, 2020

ಗೊಂಚಲು - ಮುನ್ನೂರೈವತ್ತೆರಡು.....

ಕಳ್ಳು ಕಾವ್ಯ.....

ಕಣ್ಣ ದೀಪದಿಂದೇ ಬೊಗಸೆ ತುಂಬಾ ಬೆಳಕ ಭಿಕ್ಷೆ ಸುರಿವ ಅಕ್ಷಯ ಜ್ಯೋತಿ ನೀನು...
ಮತ್ತು
ಮುಟಿಗೆ ಪ್ರೀತಿಗೆ ಬೇಲಿಯಾಚೆ ಕಾದು ನಿಂತ ಕತ್ತಲೂರ ಬಡ ಜೋಗಿ ನಾನು...
ಹಾಗೇ
ನನ್ನನೇ ನಾನು ದಾಟಿಕೊಳ್ಳುವ ಹಗ್ಣದಲ್ಲಿ ನಿನ್ನ ಕರುಳ ಕರುಣೆ ನೆತ್ತಿ ಸೋಕಿ ಬದುಕು ಚೂರು ಬೆಚ್ಚಗೆ ಮುಂದುವರಿಯುತ್ತದೆ - ಮತ್ತೆ ಬದುಕಿಕೊಳ್ಳುತ್ತೇನೆ...
ನೀನೆಂದರೆ -
ಬದುಕ ಕೊಳಲಿಗೆ ಜೀವ ತುಂಬಿದ ಭಾವದುಸಿರು; ಹೆಸರ ಬೇಡದ ಮಾಯೆ...
ನೀ
ಒಡಲುಕ್ಕಿ ನಕ್ಕ ದಿನ ನನ್ನ ದೀಪಾವಳಿ...
#ಉಸಿರ_ಛಾಯೆ...
♡♤♥♤♡

ದೇವಕಣಗಿಲೆ ಹೂವಿನಂಥವಳೇ -
ಸಣ್ಣ ಮಳೆಯ ನಾಕು ಚಣ ಮತ್ತು ಸುಮ್ಮನೇ ನನ್ನ ಬಳಸಿದ ನಿನ್ನ ಕೈ... 
ಸ್ವಯಂ ಬಂಧಿ ಕಂಗಳಲ್ಲಿ ತಟವಟ ತಿಳಿಗತ್ತಲು...
ಬೆಚ್ಚಗೆ ಹರಸಿದ ವಿದಾಯದ ಮಗ್ಗುಲಿನ ಗಟ್ಟಿ ತಬ್ಬುಗೆ...
ಉಸಿರ ಕಿಬ್ಬಿಗಳಲಿ ಶಾಶ್ವತ ಗೂಡು ಕಟ್ಟಿದ ನಿನ್ನ ಹೆರಳ ಗಂಧ...
ಬದುಕಿನ ಕರುಣೆ ಎಷ್ಟು ಚಂದ ಮಾರಾಯ್ತೀ... 
ಮಾತಿನ ಮಲ್ಲನ ಗೋನಾಳವನೂ ಪ್ರೇಮದಿ ಅಪ್ಪುವ ಮೌನ...
ಎಂದಿನದೋ ಒಂದು ಅಪ್ಯಾಯ ಭೇಟಿ ಮುಂದಿನ ಸಾವಿರ ಸಂಜೆಗಳ ಕಾಯ್ದುಕೊಡೋ ಸೊಬಗಿಗೇನೆನ್ನಲೀ...
#ಆಯಸ್ಸಿನ_ಖಾತೆ_ಪಟ್ಟಿಯ_ಸವಿನೆನಪುಗಳ_ಜಮಾಬಂದಿ...
#ನಿನ್ನ_ನೇಹ...
♡♤♥♤♡

ಬೆಳಕಿನ ಬಣ್ಣ ಕೇಳಿದರು
ನಿನ್ನ ಕಿರು ನಗೆಯ ತೋರಿದೆ...
ಪ್ರೀತಿಯೂರ ದಾರಿ ತೋರೆಂದರು
ನಿನ್ನ ಕಣ್ಣ ಬೆಳಕಿನೆಡೆ ಬೆರಳು ಮಾಡಿದೆ...
#ದೃಷ್ಟಿಯಾಗದಿರಲಿ...
♡♤♥♤♡

"ನನ್ನೇ ನಾ ಮರೆತು ತೋಳ್ದೆರೆದ ಹುಯಿಲಿನಲ್ಲೂ ನಿನ್ನ ಮರೆಯಲಾಗದ ಸಿಹಿ ಸೋಲಿನ ಸಂಗಾತವ ಏನೆಂದು ನಾ ಕೂಗಲಿ..."
ಖಾಲಿ ತೋಳಿಗೂ ಇಳಿದಾವು ನೂರು ಕನಸು ನಿನ್ನ ನೆನಪಿನ ಹಾದಿಗಂಟಿ - ಮೋಡ, ಮಳೆ ತೇಲಿದಂಗೆ ಗಾಳಿಗುಮ್ಮನ ಹರಿಗೋಲಿಗಂಟಿ...
ನೀನು ಬರೆಸಿದರಷ್ಟೇ ನಿನ್ನ ಬರೆದೇನು ಚೂರುಪಾರು ಮತ್ತು ನಾನೀಗ ಬರೆದಿದ್ದೆಲ್ಲಾ ನಿನ್ನದೇ ಒಕ್ಕಲ ಪೈರು...
ಬೆಳಕು, ಬದುಕು, ಪ್ರೇಮ, ಕಾಮ, ಕತ್ತಲು, ಸಾವು, ಇತ್ಯಾದಿ ಇತ್ಯಾದಿ ಎಲ್ಲಾ ಎಂದರೆ ನನ್ನೆಲ್ಲಾ ಮೋಹಾಮಾಯೆಗಳನೂ ಸ್ವಚ್ಛಂದವಾಗಿ ಆಳುವ ಅಖಂಡ ಪ್ರೀತಿ ಹಸಿವು ನೀನು...
#ಉಪಮೇಯ_ಉಪಮಾನಗಳಾಚೆಯ_ಉಸಿರ_ಉರುವಲು...
♡♤♥♤♡

ನೀ ಹೀಗೆ ಕಾಡುವುದು ಎಷ್ಟು ಚಂದ ಮತ್ತು ಕಾಡುತ್ತಲೇ ಇರು ಸದಾ ನನ್ನ ಅಂದವಳು ಸದ್ದಿಲ್ಲದೇ ಕಳೆದು ಹೋಗಿದ್ದಾಳೆ... 
ನಾನೀಗ ಕರುಳ ಒಣಗಲು ಹಾಕಿ ಮಳೆಗೆ ಕಾಯುವ ಸುಖಕ್ಕೆ ಒಗ್ಗುತ್ತಿದ್ದೇನೆ...
#ದಣಪೆಯಾಚೆಯ_ಕಣ್ಣಹಾದಿ...
♡♤♥♤♡

ಈ ಕ್ಷಣದ ಸತ್ಯವನ್ನಷ್ಟೇ ನಂಬಬೇಕು ಬದುಕಾಗಿ...
ಉಹೂಂ -
ನಂಬುವುದಷ್ಟೇ ಅಲ್ಲ, ಈ ಘಳಿಗೆಯ ಸತ್ಯವನ್ನಷ್ಟೇ ಅರುಹಬೇಕು ಕೂಡಾ ಒಪ್ಪವಾಗಿ...
#ಕೆಲವೆಲ್ಲ_ಖುಷಿಗಳಿಗಾಗಿ...
#ನೀನು_ಸುಳ್ಳೂ_ಅಲ್ಲ_ಸತ್ಯವೂ_ಅಲ್ಲ...
♡♤♥♤♡

ನಗುವ ತುಟಿಯ ಮೇಲಿಂದ ಉರುಳಿದ ಕಣ್ಣ ಹನಿ ಹೇಳುವ ಒದ್ದೊದ್ದೆ ಕಥೆ - ವಿರಹ...
ಮನೆಯ ಪ್ರತಿ ಗೋಡೆ ವಾಡೆಯ ಸೆರಗಿಗೂ ನಮ್ಮ ಪ್ರೇಮದ ಬೆವರಿನಂಟಿನ ನಂಟಿರುವ ಹಗೂರ ಕಾಲವೊಂದಿತ್ತು....
ಈಗಿಲ್ಲಿ ಒಡೆದ ಎದೆಯ ಕನ್ನಡಿ ಹರಳು ಅಣಕಿಸುವಾಗ ಹೊರಲಾಗದ ಭಾರಾಭಾರದ ನಿಟ್ಟುಸಿರ ಬೇನೆಯ ಅಡಗಿಸಲು ಗೋಡೆಗಳ ಕತ್ತಲ ಮೂಲೆಗಳ ಹುಡುಕುತ್ತೇನೆ...
#ವಿಯೋಗ...
♡♤♥♤♡

ಬೇಹದ್ ಮಾತಾಡಿದ್ದು ದೇಹ - ಬೇಶರತ್ ಅರಳಿ ಹರಿದದ್ದು ಮನಸು...
#ಪ್ರಣಯ_ವಿಲಾಸ...
♡♤♥♤♡

ಮಧುರವಾದುದೊಂದು ತಪ್ಪನೂ ಮಾಡದೆ ಬದುಕು ಇನ್ನಷ್ಟು ಅಪೂರ್ಣವಲ್ಲವೇ...
ಕಳ್ಳ ಮಧ್ಯಾಹ್ನದ ಬಾಗಿಲಲಿ ನಿನ್ನ ಕಾಯುತ್ತಾ...
#ಕಳ್ಳು_ಕಾವ್ಯ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೈವತ್ತೊಂದು.....

ನನ್ನ ವ್ಯಾಖ್ಯಾನ.....

ಹುಟ್ಟುವಾಗ ಮನಸ್ಸಿನ ಯಾವುದೋ ಹವಣಿಕೆಯ ಬೇಶರತ್ ಅನ್ನಿಸೋ ಎತ್ತರದ ಸ್ಥಾನದಲ್ಲಿ ಹಾರಾಡಿ ಹಡಾಹುಡಿ ನಡೆಸೋ ಅದೇ 'ಪ್ರೇಮ' ಮದುವೆಯ ಹಾದಿಗೆ ಹೊರಳಿ ಗೂಡು ಕಟ್ಟುವಾಗ ನೀಯಿಸಬೇಕಾದ ಜವಾಬ್ದಾರಿಗಳ ಗುಪ್ಪೆ ಹಾಕಿಡುವ ಚಂದ ಪಾತ್ರ ಅಷ್ಟೇ ಆಗುವ ಮಿತಿಯನ್ನು ಮೀರಿವುದು ಹೇಗೆ ಸಾಧ್ಯ...!?
ಪ್ರೇಮಿ ಸಿಕ್ಕರೆ ಪೂರಾ ಪ್ರೇಮ ಸಿಕ್ಕಂತೇನಾss...!?
ಓಘಕ್ಕೆ ಒಡ್ಡು ಕಟ್ಟಿ ಇಕ್ಕೆಲದಲಿ ಹಸಿರ ಬೆಳೆದರೆ ಹರಿವಿನ ಸಾಗರದೆಡೆಯ ಹಸಿವು ತೀರೀತಾss...!?
ಪ್ರೇಮದ ಪರಿಭಾಷೆ ಬಂಧನ ಅಲ್ಲವೇ ಅಲ್ಲ ಎಂಬುದೂ ಸತ್ಯವೇ ಅಲ್ವಾ...!?
ಎಲ್ಲಾ ಗೋಜಲು ಗೋಜಲು...
ಈ ಗೊಂದಲ ಹುಟ್ಟಿದರೆ ಪ್ರೇಮ ಅರಳಲಿಕ್ಕಿಲ್ಲ - ಪ್ರೇಮ ಬೆಸೆಯದೇ ಗೌಜಿ ಕರಗಲಿಕ್ಕಿಲ್ಲ...
ಪ್ರೇಮಂ ಅಯೋಮಯಂ...
#ಪ್ರೇಮಿ_ಪ್ರೇಮದ_ಪಾತ್ರ_ಮಾತ್ರ...
♦♣♣♣♦

ಪ್ರೇಮ, ಪ್ರಣಯಗಳೆಲ್ಲ "ಕೇಳದೇ ಕೊಟ್ಟೂ ಮತ್ತು ಕೇಳಿ ಪಡೆದೂ" ಒಂದೇ ಅಳತೆಯಲ್ಲಿ ತುಂಬಿಕೊಳ್ಳಬಹುದಾದ ಹಾಗೂ ತುಂಬಿಕೊಳ್ಳಬೇಕಾದ ಒಡನಾಡೀ ಆಪ್ತ ಸಂವೇದನೆಗಳೇ ತಾನೆ... ಮದುವೆ ಅಥವಾ ಸಂಸಾರದ ಸಮರಸದಲ್ಲಿ ಇದು ಇನ್ನಷ್ಟು ವೇದ್ಯವೇನೋ... ಅಂಥ ಹೇಳಿ ಕೇಳಿ ಕೂಡಿ ಹಂಚಿಕೊಳ್ಳಬೇಕಾದ ಮಧುರ ವಿಷಯಗಳಲ್ಲಿ ‘ನಾ ಹೇಳದೇ ನೀ ನನ್ನ ಅರಿಯಬೇಕು, ನಾ ಕೇಳದೇ ನೀ ಎಲ್ಲ ಕೊಡಬೇಕು’ ಎಂದು ಹಠ ಹೂಡಿದರೆ ಕೊನೆಗೆ ಉಳಿಯುವುದು ‘ನಾನೂ’ ಎಂಬ ಒಣ ಪ್ರತಿಷ್ಠೆ ಮಾತ್ರವಲ್ಲವಾ... ಇನ್ಯಾರದೋ ಮನಸನ್ನು ಹೂಬೇಹೂಬು ಓದಿ ಅವರಿಷ್ಟದಂಗೆ ನಡೀತೀನಿ ಅನ್ನೋದು ಕ್ಲೀಷೆ ಅನ್ಸಲ್ಲವಾ... ಜೊತೆ ಜೊತೆಗೆ ಒಡನಾಡುತ್ತಾ ಒಡನಾಡುತ್ತಾ ತಾನೇ ತಾನಾಗಿ ಅರಿವಾದರೆ ಸೈ, ಅರಿವಾಗದೇ ಹೋದರೆ ಮಡಿಲಿಗೆಳಕೊಂಡು ಕಿವಿ ಹಿಂಡಿ ಇದು ಹಿಂಗಿಂಗೆ ಅಂತ ಬಿಡಿಸಿ ತಿಳಿಸೋದೇನೂ ತಪ್ಪಲ್ಲವಲ್ಲ... ಪರಿಣಾಮ ಚಂದವಿದ್ದಲ್ಲಿ ಸುತ್ತುಬಳಸಿನ ಹಾದಿಯೂ ಚಂದವೇ ಇರತ್ತಲ್ವಾ... ಇಷ್ಟಕ್ಕೂ ಜೊತೆ ನಡೆವುದೆಂದರೂ, ಪರಸ್ಪರ ಹಂಚಿಕೊಳ್ಳುವುದೆಂದರೂ, ಅಂತರಂಗದ ಭಾವ ಬಹಿರಂಗದ ಅಭಿವ್ಯಕ್ತಿಯಾಗಿ ನಿರಂತರ ಕಲಿಕೆಯೇ ಅಲ್ಲವೇ...
ಅನುರಾಗದಲ್ಲಿ ಸಾಮರಸ್ಯ ಅಂದರೆ ಕೇಳೋದ್ರಲ್ಲೂ ಕೊಡೋದ್ರಲ್ಲೂ ಸಮಭಾವದ ಸವಿರಸವೇ ಅನ್ಸತ್ತಲ್ಲ...
ಇದೆಲ್ಲ ಹಾದಿ ಹಾಯ್ದೂ ರಸ ಒಸರದೇ ಸೋತ ಅಬ್ಬೆಪಾರಿಗಳ ತುಂಬಿದ ಕಂಗಳ ಪ್ರಶ್ನೆಗೆ ಮಾತ್ರ ನಿಟ್ಟುಸಿರ ಭಾರದ ಹೊರತಾದ ಉತ್ತರವಿಲ್ಲ... 
#ಪ್ರೇಮ_ಪ್ರಣಯ_ಇತ್ಯಾದಿ...
♦♣♣♣♦

"ನಾಟಕ ಜಾರಿಯಲ್ಲೇ ಇರುತ್ತೆ..."
ಅಂಕದ ಮೇಲೆ ನನ್ನ ಪಾತ್ರ ಮುಗಿಯಬಹುದು..‌.
ವೇಷ ಬಳಿದ ಬದಲೀ ಮುಖಗಳು ಬರಬಹುದು...
ನಾನು ಆಡಿಬಿಟ್ಟ, ಚೂರು ಆಡದೇ ಉಳಿಸಿಕೊಂಡ ಅದೇ ಹಪ್ಪು ಹಳೆಯ ನವಿರು, ಒಗರು ಸಂಭಾಷಣೆ ಈಗ ಹೊಸ ದನಿಯಲ್ಲಿ...
ನಸನಸೆಯೊಂದಿಗೇ ಒಪ್ಪಿಕೊಂಡು ಸ್ವಂತಿಕೆಯ ಪರಿಭಾವಿಸುವ ಅಪರಿಚಿತ ರೂಪದ ಹೊಸತನದ ಖುಷಿ - ತಿಳಿಗತ್ತಲಿಗೆ ಒಗ್ಗಿದ ಬಿರುಗಂಗಳಲ್ಲಿ...
#ಚಿತ್ರದ_ಪರದೆ...
#ಹಿಂದುಮುಂದಿನ_ಪಾತ್ರ...
#ಒಡನಾಟ...
♦♣♣♣♦

ಎಲ್ಲರಂತಾಗುವುದು ಎಷ್ಟು ಸಸ್ತಾ...
#ನನ್ನ_ಪಾಲಿನ_ಸಾವು...
♦♣♣♣♦

#ನನ್ನ_ವ್ಯಾಖ್ಯಾನ...
ಶ್ರೀ ಜೀವನ ಅಂದ್ರೆ ಏನೋ...?
ಮುಷ್ಟಿ ಹೃದಯ ಒಸರೋ ಪ್ರೀತಿಯನ್ನು ಬೊಗಸೆಯಲಿ ಮೊಗೆದು ಆದಷ್ಟೂ ಹಂಚಿ ಹಂಚಿ ತಿನ್ನೋದು ಮತ್ತು ನೋವು ನಲಿವುಗಳ ನಗ್ನತೆಯ ಆ ಹಾದಿಯಲ್ಲಿ ನಡೆಯುತ್ತಾ ನನ್ನೊಳಗೆ ನಾ ಅರಳೋದು - ಒಂದು ಸುಂದರ ತಪನೆ...

ಪ್ರೀತಿ ಅಂದ್ರೆ...??
ನನ್ನೊಡನೆ ನಾನು ಸರಸಕ್ಕೆ ಬಿದ್ದು ನನ್ನ ನಾ ಕಾಣುವಂತೆ ಆಂತರ್ಯವ ಬೆದಕುತ್ತಾ, ನುಣುಚಿಕೊಳ್ಳೋ ಸಾಬಕ್ಕಿ ಪಾಯಸವ ಬಟ್ಟಲೆತ್ತಿ ಸುರಿವಂಗೆ ಜೀವನವನ್ನ ಉಪಾಯದಲಿ ಸಂಭಾಳಿಸಿ ಆಮೋದಪೂರ್ಣವಾಗಿ ಸವಿದು ಸಾಯೋದು - ಅರ್ಥಾರ್ಥಗಳ ಮೀರಿದ ಮಧುರ ನಿರ್ವಾಣ...

ಮತ್ತೆ ಸಾಧನೆ ಅಂತಾರಲ್ಲ ಅದೇನು...???
ಜೀವನ ಹಾಗೂ ಪ್ರೀತಿ ಎರಡನ್ನೂ ಅವಿದ್ದಂಗೇ, ಅವು ದಕ್ಕಿದಂಗೇ, ದಕ್ಕಿದಷ್ಟನ್ನೇ, ಅಲ್ಲಿಗಲ್ಲಿಗೆ ಎಂಬಂತೆ ಬೇಶರತ್ ಸಮಾss ಜೀವಿಸೋದು - ಕತ್ತಲು ಮತ್ತು ಬೆಳಕಿನ ಬೆಚ್ಚಬೆರಗು...

ಈ ಅವಮಾನ ಅಂದ್ರೇನು...????
ಈ ಘಳಿಗೆಯನ್ನ ಅದು ಎದುರಿಗೆ ಬಂದಂಗೇ ಬಸಿದು ಬಡಿದುಂಡು ಜೀವಿಸಲಾಗದೇ, ನನ್ನ ನಾ ಗೆಲ್ಲಲಾಗದೇ ಯುದ್ಧವಿಲ್ಲದೇನೇ ಶರಣಾಗಿ ಅಳುವುದು - ಹೊರಗಿನ ಊನವನ್ನ ಶತಾಯಗತಾಯ ಗೆಲ್ಲಬೇಕಾದದ್ದು ನನ್ನೊಳಗೆ ನಾನು...
♦♣♣♣♦

ಕೂಡಿಕೊಂಡದ್ದು ತಾ ಕೂಡಿಯಾಡಿ ಬೇಸರಾಗಿ ಸುಸ್ತೆಂದು ಕಳಚಿಕೊಂಬುವ ಕಾಲವೂ ಒಂದಿರತ್ತೆ - ಆ ಕಾಲದ ತಪ್ತ ಮೌನದಲಿ ಮೆಲ್ಲ ಮೆಲುಕಾಡಲೆಂಬಂತೆ ಈ ಹೊತ್ತು ತೆರಪು ಕೊಡದೇ ಗುಪ್ಪೆ ಗುಪ್ಪೆ ನೆನಕೆಗಳ ಪೇರಿಸುತ್ತಾ ಸಾಗುತ್ತೇನೆ...
ಹೊಸ ಹೆಸರಿನವು, ಹೆಸರು ಭಾಗಶಃ ಅಳಿಸಿಹೋದವುಗಳು, ಹೆಸರು ಕೆತ್ತಲು ಮರೆತಂತಿರುವ ಅಥವಾ ಹೆಸರು ಬೇಕಿಲ್ಲದಂತೆ ಬೋಳಾಗಿ ನಿಂತವುಗಳು, ತಿದ್ದಲಾಗದ ಹತಾಶೆಯಲಿ ಓತಪ್ರೋತ ಗೀಚಿ ಗೀಚಿ ವಿರೂಪವಾದವುಗಳು - ಹಿಂಗೆ ಹೆಂಗೆಂಗೋ ಆತುಕೊಂಡ ಕ್ರಿಯೆ ಪ್ರಕ್ರಿಯೆಗಳೆಲ್ಲ ಹಾದಿಗುಂಟ ಮೂರಡಿಗೊಂದು, ಆರಡಿಗೊಂದು, ಮೂರು ಆರರ ಕೂಡು ಗಡಿಗಿನ್ನೊಂದು ಎಂಬಂತೆ ಕತ್ತಲು, ಬೆಳಕಿನ ಬಣ್ಣಗಳ ಮೈಲಿಗಲ್ಲುಗಳಾಗುತ್ತವೆ ಹಾಗೂ ಅವುಗಳ ನೆನಪುಗಳೆಲ್ಲ ಮಧ್ಯಾಹ್ನದ ನೆರಳಿನಂಗೆ ಜೊತೆ ನಡೆಯುತ್ತವೆ... 
ಅದಲ್ಲದೇ -
ಎದೆಯಂಗಳದ ಕಿಚಿಪಿಚಿಯ ಒದ್ದೆಯಲೂ, ರಣ ರಣ ಧೂಳಿನಲೂ ಹೆಜ್ಜೆ ತುಳಿದಾಡಿದ ಇಂತವೇ ಝುಂಗುಡುವ ನೆನಪುಗಳಿವೆ ಮತ್ತು ಅವಿರುವ, ಅವಿರುತ್ತವೆ ಅನ್ನುವ ಘನ ಕಾರಣಕ್ಕೆ ಈ ಬದುಕಿಷ್ಟು ಸಹನೀಯವಾಗಿದೆ...
ಹಾಗೇನೇ -
ತಮ್ಮೆಲ್ಲ ಧಾಂಗುಡಿಯ ಗುಡುಗುಡು ನಡಿಗೆಯಲಿ ಒಡನಾಡಿಗಳ ಬಗಲ ಚೀಲದಲೂ ನನ್ನೊಡನಾಡಿದ ನೆನಹುಗಳ ಹೊಳಹುಗಳಿಷ್ಟು  ಮಿಸುಗುತ್ತಿದ್ದರೆ ಸಾವು ಸಾರ್ಥಕ...
#ಸಾವಧಾನಕೊಂದು_ಮುರುಕು_ಆವಾಹನೆ...
♦♣♣♣♦

ಪ್ರೀತಿ ಅಂದ್ರೆ ಮತ್ತೇನಲ್ಲ ಶಾಲೀನತೆಯಲಿ ಬಾಗುವುದು...
ಬಾಗುವುದೆಂದರಿಲ್ಲಿ ಸೋತಂತಲ್ಲ ಅಥವಾ ತನ್ನತನವ ಬಿಟ್ಟುಕೊಡುವುದೂ ಅಲ್ಲ...
ಬದಲಾಗಿ,
ಎದುರಿನ ವ್ಯಕ್ತಿತ್ವ ನಮಗಿಂತ ಹಿರಿಯದಾದರೆ ಅದರ ಎತ್ತರಕ್ಕೆ ಅಭಿಮಾನ ತೋರುವುದು...
ಜೊತೆಯ ಚಹರೆ ನಮಗಿಂತ ಕಿರಿದಾದರೆ ಅದರ ಮಗುತನಕೆ ಇಳಿದು ಸಂಭಾಳಿಸುವುದು...
ಇಷ್ಟೇ -
ಹಿರಿಮೆಯ ಕೈಹಿಡಿದು, ಕಿರು ಮುಷ್ಟಿಗೆ ಕೈನೀಡಿ, ಎರಡೂ ಸನ್ನಿಧಿಯಲೂ ತಾನು ತಾನಾಗಿ ಉಳಿಯುತ್ತ, ಬೆಳೆಯುತ್ತ ಸಾಗುವುದು... 
ಪ್ರೀತಿ ಅಂದ್ರೆ ಮತ್ತೇನಲ್ಲ ಬಾನು ಭುವಿಯಂತೆ ಒಂದಕ್ಕೊಂದು ಶಾಲೀನತೆಯಲಿ ಬಾಗುವುದು...
#ಪ್ರೀತಿ_ದಾರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 15, 2020

ಗೊಂಚಲು - ಮುನ್ನೂರೈವತ್ತು.....

ಮಳೆಮಿಡತೆ ನನ್ನ ಹಾಡು.....

ಚಿತ್ರ ಪಟ: ನನ್ನೂರ ಸಣ್ಣ ಝಲಕು...

ಹಗಲೂ, ಇರುಳೂ ಅವಳ ಉಡಿ ತುಂಬಿದ ಒಲವು...

ಚಂದಿರ ಅವಳ ಕಣ್ಣ ಬಿಂಬ -
ಇರುಳೆಂದರೆ ನಿದಿರೆ, ನಕ್ಷತ್ರ ಮಾಲೆ, ಬಾನ್ಬೆಳಕ ಕಡಲು, ಕನಸಿಳಿವ ಬೆರಗು, ಹೊಳೆಹೊಳೆವ ಬಾನ ನೀಲಿ ಕಣ್ಣು, ಇಳಿವ ತಾರೆಗಳ ಬೆಳಕಲ್ಲಿ ಭುವಿಯ ಸಾವಿರ ಬಣ್ಣಗಳ ಬಾಚಿ ತಬ್ಬಿದ ಕತ್ತಲ ಕಪ್ಪು ಕಾಡಿಗೆ ಮೆರಗು, ನಿದ್ದೆ ಮರುಳಿನ ಮಾತಿನಂತೆ ಎಲೆ ಎಲೆಗಳ ನಡುವಿಂದ ಕೋಕೋ ಆಡುವ ಗಾಳಿ ಗುಮ್ಮನ ಮೆಲುದನಿ, ನಿಶ್ಶಬ್ದದ ಎದೆಯ ತುಳಿದು ಬೆವರೋ ಮಾರ್ಜಾಲ ಮಿಥುನ ಕಾವ್ಯ, ಬೆಟ್ಟದಿಕ್ಕಟ್ಟಿನ ಬೆಲಗ ಹಾದಿಯಲಿ ಗಡಿಬಿಡಿಯಲಿ ಹರಿವ ನೀರ ದನಿಯಲಿ ವಿರಹ - ಶೃಂಗಾರದ ಮೇಘದೂತ...

ಸೂರ್ಯ ವಸುಧೆಯ ಹಣೆ ಬಿಂದಿ -
ಬೆಳಗಾಗುವುದೆಂದರೆ ಚಾಪೆ ಮಡಿಸುವ ಕತ್ತಲಿನ ಧಾವಂತ - ಕಣ್ಬಿಡುವ ಬೆಳಕ ಲಾಸ್ಯ - ಕಾಡು ಹೂವಿನ ಅಪರಂಜಿ ನಗು - ಹೆಸರ ಹಂಗಿಲ್ಲದ ಹಕ್ಕಿಗಳ ಕಿಲಿಕಿಲಿ ಸುಪ್ರಭಾತ - ಇಬ್ಬನಿ, ಮೋಡ ದಿಬ್ಬಣ ಸಾಲು - ಒಡಲುಕ್ಕಿ ಹರಿವ ಜೀವಜಲ ಜಂಝಾರವ - ದುಡಿವ ಜನಗಳ ರಟ್ಟೆಗಳಲಿ ರಚ್ಚೆ ಹಿಡಿದುಳಿದ ನಿನ್ನೆಯ ಚೂರು ಆಯಾಸ, ದುಪ್ಪಡಿ ಮುಸುಗಿನ ಸಣ್ಣ ಆಲಸ್ಯ - ಛಳಿಯ ಛವಿಯ ಕೊಡೆ ಅಡಿಯಲಿ ಹನಿ ಮೌನ ನಿಜ ಧ್ಯಾನ ಅಲ್ಲಿ - ಸದ್ದು ಸಡಗರದ ಸಲ್ಲಾಪದಲಿ ಅನಾಯಾಸದಲಿ ತನ್ನ ತಾನೇ ಆರೈಯ್ದುಕೊಳ್ಳುವ ಬೀಜ ಬಿಳಲು ಚಿಗುರು ಹಸಿರು ನಿತ್ಯ ವಸಂತದ ಘಮ್ಮನುಸಿರು...

ಮಾತಿಗೊಲಿಯದ ಅಲಂಕಾರ, ಆಡಿ ಮುಗಿಯದ ಅನುಭಾವದ ಭಾವ ಧ್ಯಾಸ ಅದು...
ಅವಳಾ ಕರುಳಾ ಬಿಳಲು ನಾನು - ಮಣ್ಣಾಗುವ ಮನ ಜೀವಂತ ಅವಳಾ ಮಡಿಲಲ್ಲಿ...
#ಮಲೆನಾಡು_ನನ್ನ_ಗೂಡು_ಮಳೆಮಿಡತೆ_ನನ್ನ_ಹಾಡು...
⇋↩↪⇌↱


ಚಿತ್ರ ಪಟ: ನನ್ನ ಕ್ಯಾಮೆರಾ ಕಣ್ಣಲ್ಲಿ ದೀಪಾವಳಿ...

ಉಸಿರ ಬತ್ತಿಗೆ ಪ್ರೀತಿ ಎಣ್ಣೆ ಸವರಿ

ಭರವಸೆಯ ಸಣ್ಣ ಕಿಡಿ ತಾಕಿಸಿ
ಗಾಳಿ ಮುಗುಳ ನೆಚ್ಚಿ ಮೆಚ್ಚಿ
ಜೀವ ಹಣತೆಯ ಹಿಡಿದು ನಿಂತೆ...
ಬೊಗಸೆಯೊಳಗೆ ನೆರಳನಿಟ್ಟು
ಬಯಲ ತುಳಿದ ಬೆಳಕ ಕಾಲು...
ಕತ್ತ(ಲ)ಲೂ ಕನಸಿಗೆ ಗಬ್ಬ ಕಟ್ಟಿ
ಎದೆಯ ಗರ್ಭದಿಂದೆದ್ದ ನಗೆಯ ಸೆಳಕೇ ಹಬ್ಬ...
ದೀಪ ಹಚ್ಚಬೇಕು ನಾನೂ - ಬೆಳಕ ಹಂಚುವ(ದೇ) ಹಬ್ಬ...
#ಶುಭವೊಂದೇ_ಆಶಯ...
                __ 14.11.2020 (ದೀಪಾವಳಿ)
⇋↩↪⇌↱

ಆತ್ಮದ ಬೆಳಕು ಸ್ವಾತಂತ್ರ್ಯ...
#ವಂದೇ_ಮಾತರಂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, October 14, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತೊಂಭತ್ತು.....

ಇಷ್ಟು ಸಾಕು.....

ಕನಸೇ -
ಕೊನೇಯದಾಗಿ ಕಣ್ಣ ಕೊಳದ ನೀರಲೆಯಲಿ ಕಲೆಸಿ ಹೋದದ್ದು ನೀನಾ ನಾನಾ... 

ಇಷ್ಟುದ್ದ ಬಾಳಿ ಬದುಕಿದರೂ ಒಲಿಯದ ಮೌನದ ಚಾಳಿ ಮತ್ತು ಕರಗದ ಖಾಲಿತನ...
ನನಗಾಗಿ ಘನತೆಯದೊಂದು ಗೂಡನೂ ಗಳಿಸಿಕೊಡಲಾಗದ ನನ್ನ ಮಾತೆಂಬ ಉದ್ದುದ್ದ ಬಡಬಡಿಕೆಗಳು...
ನಡೆದಂತೆ ನನ್ನದೇ ಹೆಗಲ ಮೇಲೆ ನನ್ನದೇ ಹೆಣದ ಮೆರವಣಿಗೆ...

ಸರದಿಯಲ್ಲಿ ಎನ್ನ ಪಾಳಿ ಎಂದೋ ಏನೋ...
ಎನ್ನೊಡನೆಯ ಎನ್ನದೇ ಯುದ್ಧ ಮುಗಿಯುವ ಆ ದಿನದ ಆ ಘಳಿಗೆಗೆ ಚಾತಕದಂಗೆ ಕಾಯುತ್ತಾ ಕಾಯುತ್ತಾ ನೂಕುವುದು ಹಗಲನೂ ಇರುಳನೂ ಒಂದೇ ಸಮದ ನಿತ್ರಾಣದಿ...
ನಿರೂಪ ಕೊಡುವವನು ನನ್ನ ನಿರ್ಲಕ್ಷಿಸಿದಂತಿದೆ...

ಕಾಯುವುದು ಕಾಯುವುದು..‌. 
ನೀ ಬರದೇ ಹೋದರೂ, ಬರಲಾರೆ ಎಂಬ ಅರಿವಿನ ಸೊಡರು ಹಿಡಿದೂ ಕಾಯುವುದು ಸುಖವಹುದು...
ಕಾಯುತ್ತಾ ಕಾಯುತ್ತಾ ವಿಕ್ಷಿಪ್ತ ನಿರಾಯಾಸದಿ ಸಾವಿನ ಮನೆ ಹೊಸಿಲ ತುಳಿವುದು...
ಕಾದಿದ್ದೇನೆ ಮತ್ತು ಕಾದೇ ಇದ್ದೇನೆ ಎಂಬ ನರಕಸುಖ...

ಹನಿ ಬತ್ತಿದ ಕಣ್ಣಲ್ಲಿ ಬಂಜರೆದೆಯ ಬಿಂಬ...
ಮರಳು ಸೀಮೆಯ ಮೌನ...
ಇದು ಒಂದು ಬದಿಯ ಪಾಡು...

ಪಟ: ಎನ್ನದೇ ಜಂಗಮವಾಣಿಯ ಕಣ್ಣಲ್ಲಿ...

ಇನ್ನೊಂದು ಮಗ್ಗುಲಲಿ ಅದೇ ಹೊತ್ತಿಗೆ -
ಗಾಳಿಗೊಲಿದು ಕರಗಿ ಸೋನೆಯಾದ ಮೋಡದ ತುಂಡಿನ ತೇವಕೆ, ಬೆಳಕಿನೊಲವಿನ ಶಾಖಕೆ ಕಿಟಕಿಯಾಚೆಯ ಮರದ ಮೈಯ್ಯೆಲ್ಲ ಹೂವಾಗಿ ಅರಳಿದೆ...
ಹಕ್ಕಿಗೊರಳ ತುಂಬಾ ಜೇನು ಝೇಂಕಾರ...
ದುಂಬಿ ಒಡಲಿಗೆ ಮಧು ಪೇಯ, ಹೂಗರ್ಭ ಕಾಯಿ ಬಸಿರು - ಪ್ರಕೃತಿ ಶಬ್ದವೆಂದರೆ ಹೊಸತೇ ಜೀವಚಕ್ರ...
ಸೃಷ್ಟಿ ಸೊಬಗಿನ ನವನೀತದ ವಿನೀತಕೆ ಆ ಕ್ಷಣ, ನನ್ನೇ ಕೊಲ್ಲಲಣಿಯಾದ ಎನ್ನಾಂತರ್ಯದ ಕ್ಷುದ್ರ ನಿಶ್ಶಬ್ದದ ಕೈ ನಡುಗಿದಂತಿದೆ...
ಎದೆಯ ಸಲಿಲ ಒಣಗಿದ ಸುದ್ದಿ ಪ್ರಜ್ಞೆಯ ಗದ್ದುಗೆಯ ತಲುಪದಿರುವ ಸಣ್ಣ ಸಹನೀಯತೆ - ವಿಚಿತ್ರ ಭರವಸೆ...
ನೀನು ಇಲ್ಲೇ ನನ್ನ ಕಣ್ಣ ಹರಿವ ತಪ್ಪಿಸಿ ನೆರಳಿಗಂಟಿ, ನನ್ನ ಹೆಜ್ಜೆಗಳನು ನಿನ್ನ ಹೆಜ್ಜೆಗಳಲಿ ಅಳೆಯುತ್ತಾ, ತುಂಟ ಪುಳಕಗಳ ಮಂದಹಾಸವ ಹೆಕ್ಕಿಕೊಂಡು ನಡೆಯುತಿರುವಂತೆ ಭಾವ ಭಾಸ...
ಪ್ರಕೃತಿ(ನಿನ್ನ)ಯ ಹೂ ಮನದ ಹೊಳಲು ನನ್ನೀ ಹೂ ಬಿದ್ದ ಎದೆ ಕಣ್ಣಲೂ ನಗೆ ಬೆಳಕ ಕೆತ್ತುವುದು ಪ್ರೀತಿ ಸಂಯೋಜನೆಯ ಚಂದ ಸಂಭಾಷಣೆ...

ಜೀವದುಸಿರ ನಿಲ್ಲಿಸುವುದು ಸುಲಭ - ಆದರೆ ಭಾವದ್ದೋ, ಬರೀ ಪಾತ್ರ ಬದಲಿಸಬಹುದಷ್ಟೇ...
ಕತ್ತಲ ಸೆರಗಿನ ಅಂಚಲ್ಲೇ ಬೆಳಕಿನ ಕಿಡಿಯ ಹೊಸ ಹಾಡು...

ಮತ್ತೀಗ -
ನೀನು - ನನ್ನ ನಡೆಯಲಾಗದ ಸುಸ್ತೀವ ವೈಕಲ್ಯ ಮತ್ತು ನಿಲ್ಲಲು ಬಿಡದ ಬಯಕೆಯ ವೈಭೋಗ...
"ಆಕಳಿಸುತ್ತಲೇ ಎಚ್ಚರಕ್ಕೆ ದಾಟುವಂತೆ - ಮುಗಿಯದಿರಲಿ ಹುಚ್ಚು ಪಯಣ ನೀನೇ ಸಿಕ್ಕರೂ..."
#ಇಷ್ಟು_ಸಾಕು_ಮತ್ತು_ಇಷ್ಟಾದರೂ_ಬೇಕು_ಬದುಕಿಗೆ...

Friday, October 9, 2020

ಗೊಂಚಲು - ಮುನ್ನೂರಾ ನಲವತ್ತು ಮತ್ತೆಂಟು.....

ದೇವಬಲಿಯಂತ ಬದುಕು.....

ಬದುಕು ಉದ್ದೇಶಗಳ ಹುಡುಕಿಕೊಂಡು ಅವುಗಳ ಪೊಳ್ಳು ಬಿಳಲಿಗೆ ನೇತುಬಿದ್ದು ಜೀಕ್ತಾ ಇದ್ರೆ, ಸಾವು ಚುರುಕು ಕಣ್ಣಿಂದ ಸಣ್ಣ ನೆಪವ ಹುಡುಕ್ತಾ ಹೊಂಚಿ ಕೂತಿರತ್ತೆ...
#ಭಾವಗತಿ...
⇭⇱⇲⇭

ಸಾವು ಬಿಡುಗಡೆ ನಿಜ...
ಆದ್ರೂ ಬದುಕು ಕೆಟ್ಟ ಕನಸಾಗಬಾರದು...
ಎದೆಯ ನಿಸ್ಸತ್ವ ನಿರ್ವೇದದ ದಾರಿಯಾಗಬಾರದು...
#ವಿರತಿ...
⇭⇱⇲⇭

ಯಮನ ಕಣ್ಣಿಗೆ ವಯಸ್ಸಾಗುವುದಿಲ್ಲ - ಕುಣಿಕೆ ಬೀಸೋ ಕೈ ಸೋತು ಸುಸ್ತೆಂದದ್ದಿಲ್ಲ - ಯಮ ಭಟರು ರಜೆ ತಕೊಂಡ ದಾಖಲೆಯೇ ಇಲ್ಲ...
#ಸಾವು...

ಬದುಕಿನ ಈ ಅನಿಶ್ಚಿತ ಹಾದಿಗಳೆಲ್ಲಾ ಅವಸರಿಸಿ ಹರಿಯುವುದು ನಿಶ್ಚಿತ ಸಾವಿನೆಡೆಗೇ...
..........ಇಂತಿಪ್ಪಲ್ಲಿ.........
"ಬದುಕಿನ ಯಾವ ನಿಯಮವೂ, ಎಂಥ ಬೇಲಿಯೂ ಸಾವಿಗೆ ಲೆಕ್ಕಕ್ಕೇ ಇಲ್ಲ..."
#ಎದೆಯ_ಬಲಿ...

ಯಾರಿಗೂ ಹೇಳದೇ ಕಳೆದೋಗಬೇಕು ಮತ್ತು ಎಲ್ಲರನೂ ಬೇಹದ್ ನೆನೆಯಬೇಕು...
#ಎಲ್ಲಿಗೂ_ಸಲ್ಲದ_ಪಯಣ...

ಭೇಟಿಯ ಮಾತಿನ್ನೂ ಬಾಕಿ ಇದೆ - ಉಳಿಯುವ ಹಟ ಆರದಿರಲಿ...
#ಉಸಿರ_ಉರಿ...

ಕಾಯುವ ತ್ರಾಣ ಕಾಯ್ದಷ್ಟು ದಿನ ಒಳಿತಿನ ಹಂಬಲು ಇಲ್ಲಿ...
ಒಂದೇ ಒಂದು ಮರು ಕೂಗಿನ ಆರ್ತ ತಪನೆ ನನ್ನಲ್ಲಿ...
#ಕೇಳಿಸ್ತಾ...

ಇಲ್ಲಿ ಎಲ್ಲರಲ್ಲೂ ಬರಿ ನೋವೊಂದೇ ಸತ್ಯವಾ...?
ನಗು ಎಂದರದು ನೋವು ತಾನೇ ತಾನಾಗಿ ಬಿಟ್ಟುಕೊಟ್ಟ ಸಣ್ಣ ವಿರಾಮ ಅಥವಾ ನೋವಿನಿಂದ ನಾವೇ ನಾವಾಗಿ ಕಸಿದುಕೊಳ್ಳಬೇಕಾದ ಸಣ್ಪುಟ್ಟ ಆರಾಮವಷ್ಟೇನಾ...??
ಎಲ್ಲೋ ಸಿಕ್ಕ ಅಥವಾ ದಕ್ಕಿಸಿಕೊಂಡ ನಗುವೊಂದು ಬಾಳಿನ ಒದ್ದಾಟದ ಹಾದಿಯ ಒಂದು ಹೆಸರಿಲ್ಲದ ನಿಲ್ದಾಣ ಮಾತ್ರವಾ...???
ಸುತ್ತ ಕಣ್ಬಿಟ್ಟು ನೋಡಿದರೆ ಸುಸ್ತಾಗುತ್ತೆ...
#ಉತ್ತರ_ಅರಗದಿರೋ_ಕಾರಣಕ್ಕೆ_ಕೇಳಬಾರದ_ಪ್ರಶ್ನೆಯೆನಿಸುತ್ತೆ...
⇭⇱⇲⇭

ನಗಲು ಪ್ರಯತ್ನಿಸುತ್ತೇನೆ - ಬಾಕಿ ಉಳಿಸಿಕೊಂಡ ಭಾಷೆ ಬಾಯಿ ಕಟ್ಟುವಾಗ...
ನಗಲು ಹೊರಡುತ್ತೇನೆ - ಸೋತ ಮಾತಿನ ಒನಕೆ ಎದೆಯ ಕುಟ್ಟುವಾಗ...
ನಗಲು ಹವಣಿಸುತ್ತೇನೆ - ಒಳ ಭಾವ ಝರಿ ಒಣಗಿ ನರಳುವಾಗ...
ಗಲಗಲಿಸಿ ನಗುತ್ತಲೇ ಇರುತ್ತೇನೆ - ಕನಸುಗಳಿಗೆ ಹಾದಿ ತೋರೋ ಎದೆಯ ಹಿಲಾಲು ಇನ್ನುರಿಯದಂಗೆ ನಂದಿಹೋದಾಗ...

ನಿನ್ನ ನಗು ಚಂದ ಕಣೋ ಅಂತಾರೆ - "ಸತ್ತ ಪಾತ್ರವನ್ನು ಜೀವಿಸಿದ್ದಕ್ಕೆ ಪರಕಾಯ ಪ್ರವೇಶದ ಬಿರುದು..."

ಹೌದು -
ಎಲ್ಲಾ ಎಂದಿನಂತೆಯೇ ಇದೆ...
ನಾಡಿ ಸರಿಯಾಗೇ ಬಡ್ಕೋಳತ್ತೆ ನಿಮಿಷಕ್ಕಿಷ್ಟೂ ಅಂತಾ...
ತುಟಿಯು ಬಿರಿದು ನಗುವ ಅರಳಿಸುತ್ತೆ ಎದುರಿನವರೂ ನಗುವಂತೆ...
ಕೃತಿ ಸ್ಮೃತಿಯಲೆಲ್ಲ ತಿಂದದ್ದು, ಉಗುಳಿದ್ದು ಯಾವ್ದೂ ಹದ ಮೀರಿದಂತಿಲ್ಲ...
ಎಲ್ಲಾ ಎಂದಿನಂತೆಯೇ ಇದೆ - ಹೊರಗಿನ ಲೆಕ್ಕವೆಲ್ಲ ಪಕ್ಕಾss ಇದೆ...
'ಅಂತರಂಗದ ಜೀವಸತ್ವವ' ಮಾತ್ರ ಬಗೆದು ಕಿತ್ತೊಯ್ದ ಬದುಕಿನ ಮಾಯಾ ವಿದ್ಯೆ ಯಾವುದು...!?

ಮೌನಿಯಾಗಬೇಕು...
ಎದೆಯ ಗದ್ದಲ ನಿಲ್ಲುವಂಥಾ ಮೌನ ಒಲಿಯಬೇಕು...
ಪೂರ್ಣವಿರಾಮದಂತ ಮೌನ - ಈ ಒಣಪೀಡೆ ರೋಗದ ನಾಯಿಯಂಥಾ ದಿನ ಸಂಜೆಗಳ ಜರೂರತ್ತು...
#ದೇವಬಲಿಯಂತ_ಬದುಕು...
⇭⇱⇲⇭

ಬದುಕು ಬಾಗಿಲು ಬಡಿದಾಗ ಆಲಸ್ಯದಲ್ಲಿದ್ದೆ - ಸಾವಾದರೋ ಗಾಳಿಯೊಂದಿಗೆ ಒಳ ಬಂದು ಕೂತಿತ್ತು...
#ಉಸಿರು_ಬಿಸಿಯಿದೆ_ಬದ್ಕಿದೀನಂತೆ...

ತುಂಬಾ ತುಂಬಾ ಖುಷಿಯಾದಾಗ ಚೂರು ಭಯವೂ ಜೊತೆಯಾಗುತ್ತದೆ...
#ನನ್ನ_ಮನಸು...

ಸಂಕಟದಲ್ಲಿ ಕಳಚಿಕೊಂಡಷ್ಟು ಸುಲಭ ಅಲ್ಲ ಸಂಭ್ರಮದಲ್ಲಿ ಎದ್ದು ಹೋಗೋದು...
#ಸಾವು...
⇭⇱⇲⇭

ಸತ್ತು ಹೆಣವಾದರೆ ನಾಕು ಹೆಗಲು ಎಲ್ಲಿಂದಾದರೂ ಹೊಂದೀತು - ಬದುಕಲು ಹೊರಟರೆ ಮಾತ್ರ ನನ್ನ ಪಾದವೇ ಸವೆಯಬೇಕು...
#ಎದೆಯ_ನೋವಿನೆದುರು_ಸಾವು_ಎಷ್ಟು_ಹಗೂರ...
⇭⇱⇲⇭

ಎಲ್ಲಿಯೂ ನಿಲ್ಲದವನು ಎಲ್ಲಿಯೂ ಸಲ್ಲದೇ ಹೋಗಬಹುದು...
ಇಲ್ಲೋ ಅಲ್ಲೋ ನಿಂತವನು ನಿಂತಲ್ಲೇ ಕೊಳೆಯಬಹುದು...
ಹಬ್ಬಿ ಅರಳಿ ನಡೆವ ಮಾಯಕದಲ್ಲಿ ಗಟ್ಟಿ ತಬ್ಬಿದ್ರೆ ಉಸಿರ್ಗಟ್ಟತ್ತೆ, ಕೈ ಕೊಡವಿದ್ರೆ ಅನಾಥನಾಗ್ತೀನಿ...
ಆದರೋ, ನಡುವಿನಂತರದ ಕಾಲ್ಪನಿಕ ಗಡಿರೇಖೆಯ ಗುರುತಿಸುವ ಮಾಪಕ ಅರಿಯದ ದಡ್ಡ ನಾನು...
ಹಾಗೆಂದೇ, ಅರ್ಥವಾಗದ ಅತಂತ್ರ ಸುಸ್ತಿಗೆ ಅರ್ಥ ಹುಡುಕುತ್ತಾ ಇರುಳು ಹಗಲಿಗೆ ಹೊರಳಿ ಅರ್ಥ ಇನ್ನಷ್ಟು ಸಿಕ್ಕು ಸಿಕ್ಕು...
ನಿಂತು ನಿಲ್ಲದೇ ನನ್ನ ಕೊಲ್ಲುವ ನನ್ನದೇ ತ್ರಿಶಂಕು ಚಿಂತನೆಗಳು...
#ವಿಕ್ಷಿಪ್ತಾತ್ಮದ_ನಿದ್ದೆ_ಆಡದ_ಕಣ್ಣಲ್ಲಿ_ಬೆಳಕು_ಕೆಂಪು_ಕೆಂಪು...

ಜೀವದಲ್ಲೂ, ಭಾವದಲ್ಲೂ ಬದುಕಿಗೆ ಜೊತೆ ನಡೆಯುವುದೊಂದು ಸಂಭ್ರಮದ ಕನಸು - ಸಾವಿಗೆ ಜೊತೆ ಕೂಡುವುದನು ಕಲ್ಪಿಸಲೂ ಆಗದು ಮನಸು...
#ಸುರಕ್ಷಿತ_ಅಂತರವಿರಲಿ...

"ಎಲ್ಲಾ ಅಂದ್ರೆ ಎಲ್ಲಾ ಮರೆಯಬಹುದಂತೆ - ನಿನ್ನೆಗಳನೆಲ್ಲ ಕಳಕೊಂಡು ಹೊಸ ನಾಳೆಗೆ ಮತ್ತೆ ಮಗುವಾಗಬಹುದಂತೆ...
ಬಂದಾರೆ ಬರಬಾರದೇ ಅಂಥ ಚಂದ ಖಾಯಿಲೆ..."
***ಸಲಹುವವರ ಕಷ್ಟದ ಮಿಡಿತಕ್ಕೆ ಉತ್ತರ ಏನೆಂದು ಕೇಳಬೇಡಿ...
#ಬೇವರ್ಸಿ_ಆಶೆ...
⇭⇱⇲⇭

ಅವರಿಗವರೇ ಆರೋಪಿಸಿಕೊಂಡ ಅಥವಾ ಸಮಾಜ ದಯಪಾಲಿಸಿದ ಒಳ್ಳೇತನದ, ಸಭ್ಯತೆಯ ಪ್ರಭಾವಳಿಯ ಒಣನಶೆಯ ಮೇಲರಿಮೆ ಜೊತೆ ಇರುವವರ ಪ್ರೀತಿಯ ಎದೆ ಬೇರನು ತಣ್ಣಗೆ ಸದ್ದಿಲ್ಲದೆ ಇಂಚಿಂಚು ಕೊಲ್ಲುತ್ತದೆ...
ಮಂಜುಗತ್ತಿಯ ಇರಿತದ ಗಾಯದಿಂದ ರಕ್ತ ಒಸರಲಿಕ್ಕಿಲ್ಲ - ಆದರೆ, ರಕ್ತ ಹೆಪ್ಪಾಗುವುದೂ ಸಾವಿನ ಹಾದಿಯೇ...
#ನಿತ್ಯ_ನಿರಂತರ_ಭಾವಹತ್ಯೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಾ ನಲವತ್ತು ಮತ್ತೇಳು.....

ಹಾವು, ಏಣಿ ಮತ್ತು ಒಂದು(ದೇ) ಪಟ.....

ಸಿಗಲೀ ಎಂಬ ಹಂಬಲವಿದ್ದರೆ ಅಲ್ಲಿ ಸಿಕ್ಕೀತೆಂಬ ಚೂರು ಭರವಸೆ ಹುಟ್ಟೀತು...
ಹೊಂದಲೇಬೇಕೆಂಬ ಆಸೆಯಲ್ಲಲ್ಲವಾ ತಲುಪಲು ಬೇಕಾದ ಶಕ್ತಿಯ ಉತ್ಪತ್ತಿ...
ಇದೊಂದೂ ನನ್ನೊಳಿಲ್ಲದೇ ಆ ಎತ್ತರ ಸಿಗಲಿಲ್ಲ ಅಂದು ಯಾರ್ಯಾರ ಹೇಗೆಲ್ಲ ದೂರಲೀ...
ಗಿರಿ ನೆತ್ತಿಯ ಏರಿ ಪಾದ ಊರದೇ ಮೋಡದಲೆಯ ಮೇಲೆ ಜೋಡಿ ಹೆಸರ ಗೀಚಲಾದೀತು ಹೇಗೆ...
ಪಡೆವ ದಾಹ, ಹಂಗೇನೆ ಸಲಹೋ ಪಾತ್ರವಿಲ್ಲದ ನಾನು ಕೊಡುವ ಭಾವವಿಲ್ಲ ಎಂದು ಬದುಕ ಯಾವ ಮುಖದಲ್ಲಿ ಆರೋಪಿಸಲಿ...
#ಬೆಳಕು_ಬೇರು_ಬಿಡಲಿ...
↶↺↜↝↻↷

ಎಂಥಾ ಬೆಳುದಿಂಗಳ ಚೆಲ್ಲಿದರೂ ಚಂದಿರನಲ್ಲಿನ ಕಲೆಯನ್ನು ಮಾತ್ರ ಆಡಿಕೊಳ್ಳುವ ಒಂದು ವರ್ಗ - ಬಾಜಿ ಗೆದ್ದ ಕೋಣದ ಕೊಂಬು ಕಡಿಯುವಂಥದ್ದು...
ಬೆಳದಿಂಗಳ ಚಂದದ ತಂಪು ಹೊಳೆ ಮಡುವಲ್ಲಿ ಈ‌ಸುತ್ತಾ ಚಂದಮನ ಕಲೆಯನ್ನೂ, ಸ್ವಂತ ಹೊಳೆಯಲಾಗದ ಅವನ ಸೋಲನ್ನೂ ಮರೆತು ಪರಾಕು ಹಾಡುವ ಇನ್ನೊಂದು ದಂಡು - ಗೆದ್ದೆತ್ತಿನ ಬಾಲ ಜೋಲುವವರದ್ದು...
ಎರಡೂ ಜನಪ್ರಿಯ - ಆದ್ರೆ ಅಂಥ ಹಿತವೇನಿಲ್ಲ ಇಂಥವರ ಜತೆ ನಡೆವ ಹಾದಿಗೆ...
ಇನ್ನೂ ಒಂದು ಶಾಖೆಯಿದೆ:
ಹುಣ್ಮೆಯ ಬೆಳ್ದಿಂಗಳು, ಅಮಾಸೆಯ ಕಾರ್ಗತ್ತಲು ಎರಡರ ಒಳ ಹೊರಗನೂ ಹೊಕ್ಕುಬಳಸಿ ಎರಡನೂ ಅದಿದ್ದಂಗೆಯೇ ಅರಗಿಸಿಕೊಂಡು, ಹೆಜ್ಜೆ ಎಡಗದಷ್ಟು ಬೆಳಕು ಹರವಿ ಹಾಗೂ ಕಣ್ಕುಕ್ಕದಂತೆ ಕತ್ತಲ ಕೊಡೆ ಬಿಚ್ಚಿ ಘನವಾಗಿ ಜೊತೆ ನಿಂತು ಅಡಿ ಮುಡಿಯ ಕಾಯುವ ಮುಸ್ಸಂಜೆಯಂಥವರದು - ಅಂಥ ಒಡನಾಟ ಸಿಕ್ಕಾಗ ನಸನಸೆಗಳಿಲ್ಲದೆ ಅವರೊಟ್ಟಿಗೆ ಕೈಬೀಸ್ಕೊಂಡು ನಿಸೂರು ನಡೆದುಬಿಡಬಹುದು - ಅಲ್ಲಿ ನನ್ನ ಉಪದ್ವ್ಯಾಪಿ ನಖರಾಗಳಿಗೂ ಪ್ರೀತಿಯ ಹೊಸ ಮುಖದ ಸ್ಪರ್ಶ ಸೋಜಿಗವಿರುತ್ತೆ...
ಇದ್ದಾರೆ ಇರ್ಲಿ ಬಿಡಿ ಅವರಲ್ಲೂ ಚಿಕ್ಪುಟ್ಟ ದೌರ್ಬಲ್ಯಗಳು ನಮ್ಮ ನಿಮ್ಮಂತೆಯೇ - ಒಪ್ಕೊಂಡು, ಅಪ್ಕೊಂಡು ಹಾದಿ ಹಾಯೋಣ - ಇಷ್ಟಕ್ಕೂ, ರಾಜಾ ರಾಮನಿಗಿಂತ ಬೀದಿ ಗೆಳೆಯ ಕರಿಯನ ಜೊತೆ ಒಡನಾಟ ನಿರಾಳ, ಸುಲಭ ಹಂಗೇ ಸರಳ...
#ಸನ್ನಿಧಿ...
↶↺↜↝↻↷

ಎಲ್ಲೂ ನಿಲ್ಲದೇ ಓಡುವ ಕಾಲ ಮತ್ತು ಹೆಜ್ಜೆಗೊಮ್ಮೆ ವಿರಾಮ ಬಯಸುವ ನಾನು - ಹೇಗೋ ಹೊಂದಿಕೊಂಡು ಹಾದಿ ಹಾಯುವ ಮೋದ...
ಬೊಮ್ಮಗೌಡ ಲಾಲಿ ಹಾಡುವಾಗ ಜವರಾಯ ತೊಟ್ಟಿಲು ತೂಗ್ತಾನೆ - ಇವನು ಪೂರ್ವ, ಅವನು ದಕ್ಷಿಣ; ಇಬ್ಬರೂ ಸೇರಿ ಸೃಷ್ಟಿಯನಾಳುವ ವಿನೋದ...
#ಮೋಜಿನಾಟ: ಹಾವು, ಏಣಿ ಮತ್ತು ಒಂದು(ದೇ) ಪಟ...
↶↺↜↝↻↷

ತುಂಬಾ ಸುಸ್ತು - ಸಣ್ಣ ಹರಿವೂ ಇಲ್ಲದ ನೀರಸ ಒಣ ಒಣ ದಿನ, ರಾತ್ರಿಗಳ ದಾಟುವುದೆಂದರೆ...
ಗಡಿಯಾರದಲ್ಲಿ ಕಾಲ ಓಡುತ್ತಲೇ ಇದೆ - ನಿಂತು ನೋಡುತ್ತಿದ್ದವನು ನಿಂತಲ್ಲೇ ನಿಂತಿದ್ದೇನೆ...
ಕಣ್ಣ ತೀರ್ಥ ಕಲಕದಂಗೆ ನಿನ್ನ ನೀನು ಕಾಯ್ದುಕೊಂಡು, ಹೊರಡೋ ನೋವಿನ ಅಥವಾ ಮತ್ತೆ ಬರುವ ಮಾತಿನ ಸಣ್ಣ ರೂಹೂ ಉಳಿಸಿಕೊಡದೇ ನನ್ನನಿಲ್ಲೇ ಬಿಟ್ಟು ಬಿಟ್ಟು ನೀನು ಹೊರಟು ಹೋದ ಮೃತ ಸಂಜೆಯು ಹಾಗೇ ಉದ್ದಕೂ ಬಿದ್ದಿದೆ...
ಯುದ್ಧದ ರಾತ್ರಿಗಳಿಗಿಂತ ಸುಸ್ತು - ಕನಸು ಹೊಳೆಗುತ್ತಿತ್ತು, ಸುಳ್ಳು ಸಮಾಧಾನದ ನಗೆ ಸಾಯ್ಲಿ, ಹೊಸ ನೋವೂ ಕೂಡಾ ಇಲ್ಲದ ಈ ನೀರಸ ಜಡ ಜಡ ದಿನ, ರಾತ್ರಿಗಳ ಹಾಯುವುದೆಂದರೆ...
#ಎದೆಯ_ಭಾರಕೆ_ತಲೆ_ಸಿಡಿಯುತ್ತದೆ...
↶↺↜↝↻↷

ಕಣ್ಣ ಹನಿಯಲ್ಲಿ ಎದೆಯಂಗಳವ ಸಾರಿಸಿಟ್ಟು ಕಾಯುತ್ತಾ ಕೂತಿದ್ದೇನೆ...
ನಿನ್ನ ತಲುಪೀತೇನು ನಿನ್ನ ಪಡೆಯಲು ನಿನ್ನೊಂದಿಗೂ ಯುದ್ಧಕ್ಕೆ ಬೀಳಬೇಕಾದ ನನ್ನ ಪ್ರೇಮದ ಹಾದಿ...
#ಈ_ಹೊತ್ತು...
↶↺↜↝↻↷

ಹಸಿ ಹಾಲಿಗೆ ಚೂರು ಹುಳಿ ಹಿಂಡಿದರೂ ಹಾಲು ಹಾಳಾಗುತ್ತೆ...
ಆದ್ರೆ ಹಾಲನ್ನು ಹದವರಿತು ಕಾಯಿಸಿ, ಹದವಾಗಿ ಹುಳಿ ಬೆರೆಸಿದರೆ ಮೊಸರು, ಬೆಣ್ಣೆ, ತುಪ್ಪ...
ಇಷ್ಟೇ -
'ಹೃದಯ' ಹಾಲಂತೆ ಹಾಗೂ 'ಪ್ರೀತಿ' ಹುಳಿ ಅಥವಾ ಅದ್ಲೂಬದ್ಲು...
ಬೆರೆಸುವ ಇಲ್ಲಾ ಬೆರೆಯುವ ಹದ ಹಾಗೂ ಆಯ್ಕೆ ನಮ್ಮದು...
#ಹೃದಯದ_ದಿನವಂತೆ_ಶುಭಾಶಯ_ನಿಂಗೆ...
       ___29.09.2020
↶↺↜↝↻↷

ಹೃದಯಗಳ ಕ(ಒ)ಡೆಯುವುದೂ ಒಂದು ಕಲೆ...
ಬೆಸೆಯಲು ಪ್ರೀತಿಯ ಹನಿ ಅಂಟು ಸಾಕು...
ಒಡೆಯಲೂ ಪ್ರೀತಿಯೇ ಚಿನ್ನದಾ ಚಾಕು...
#ಭಾವ_ಬದುಕು...
#ವಿಶ್ವ_ಹೃದಯ_ದಿನವಂತೆ...
    ___29.09.2020
↶↺↜↝↻↷

ಮೊದಲು ಒಲಿಸಿಕೊಳ್ಳೋಕೆ ಅಂತ ಒಂದಷ್ಟು ಸುಳ್ಳು - ಯಾರ್ನಾರ ಒಲಿಸ್ಕೊಳ್ಳೋದು ಕೆಟ್ಟ ಕೆಲಸವೇನಲ್ಲವಲ್ಲ, ಹಂಗಾಗಿ ಸುಳ್ಳು ತಪ್ಪಲ್ಲ ಅಂದ್ಕೊಳ್ಳೋಣ...
ಆಮೇಲೆ ಒಲಿಸಿಕೊಂಡು ಹಾಕಿಕೊಂಡ ಗಂಟು ಬಿಚ್ಚಿಕೊಳ್ಳದಿರಲೀ ಅಂತ ಆಗೀಗ ಅಷ್ಟಿಷ್ಟು ಸುಳ್ಳು - ಒಳ್ಳೇ ಕೆಲ್ಸ, ಒಂದೊಳ್ಳೆ ಉದ್ದೇಶಕ್ಕಾಗಿ ಸುಳ್ಳು ಪಳ್ಳು ಅಪರಾಧವಲ್ಲ ಬಿಡಿ...
ಒಟ್ನಲ್ಲಿ ಅಪ್ರಿಯ ಸತ್ಯವನ್ನು ಬಾಗಿಲಾಚೆ ನಿಲ್ಲಿಸಿ, ಕೇಳುವವನೊಟ್ಟಿಗೆ ಹೇಳುವವನೂ ಅದನೇ ನಂಬಿ ಒಳ್ಳೆತನದ (?) ಸುಳ್ಳನ್ನು ಜಾಣ್ಮೆಯಿಂದ ಬೆರೆಸಿ, ದಣಪೆಯಿರಬೇಕಾದಲ್ಲೆಲ್ಲ ಬೇಲಿಯಿರೋ ಪವಿತ್ರ ಸಂಬಂಧಗಳೆಲ್ಲ ನಗ್ತಾ ನಗ್ತಾ ಬಾಳಿ ಬದುಕ್ತವಾ ಅಂತ...
ಅಲ್ಲಿ ಸತ್ಯವೂ ಸುಳ್ಳಿನ ಒಂದು ಬಣ್ಣವಿರಬಹುದಾ...?!
#ಸುಳ್ಳು_ಸುಳ್ಳಲ್ಲದ_ಪಯಣ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರಾ ನಲವತ್ತು ಮತ್ತಾರು.....

ತನ್ನತನದ ಬಣ್ಣ.....

ನಾಳೆ ನಾಳೆ ಅಂಬರು - ನಾಳೆಗಳ ಭರವಸೆಯ ಉಂಬುವವರು...
ಆದರೆ,
'ಹಿಂಗ್ ಹೋಯ್ ಹಂಗ್ ಬಂದೆ' ಅಂತಂದು ನನ್ನ ನಂಬಿಸಿ ಹೊರಟ ನಿನ್ನ ಹೇಳಿಕೆಯ ಆ ನಾಳೆ ಬರುವುದೇ ಇಲ್ಲ...
ಕಾಯುತ್ತಾ ಕೂತ ಎದೆಗಣ್ಣಿನ ಹಸಿಯಲ್ಲಿ ಕಲೆಸಿ ಹೋದ ಒಣ ಹಾದಿಯ ಧೂಳು ನನ್ನೇ ಶಪಿಸುತ್ತದೆ - "ಬುದ್ಧಿ ಬೇಡ್ವಾ ನಿಂಗೆ..."
ಹೌದು,
ಬುದ್ಧಿ ಹೃದಯದ ಖೈದಿಯಾಗಿದೆ...
ಅದಕೆಂದೇ,
ಅಲೆದು ಅಲೆದು ನಿನ್ನ ಸೇರಿ ಅಸೀಮ ವಿಸ್ತಾರ ಹೊಂದಿಯೇನೆಂಬ ಇರಾದೆಯಿತ್ತು ಹೊರಡುವಾಗ - 'ಬರಿ ಮಾತು, ಸುಳ್ಳು ಮೌನ'ಗಳ ಕಾಯುತ್ತಾ ಕಾಯುತ್ತಾ ನಿತ್ರಾಣನಾಗಿ ಕಳೆದೋಗಿದ್ದೇನೆ ಕಾರ್ಗತ್ತಲ ನಿರ್ವಾತದಲ್ಲೀಗ...
ನನ್ನನೇ ನಂಬದ ನಾನು ನಿನ್ನ ನಂಬಿ ಸಾಗಿದ ಹಾದಿಯ ಸೋಜಿಗವಾದರೂ ಏನು...!!
#ಎದೆಯ_ಹಾಡದು_ಬುದ್ಧಿಗೆ_ಅರಗದ_ತೌಡು...
↢↡↟↜↝↟↡↣

ಬಯಲಿಗೆ ಗೋಡೆ ಕಟ್ಟಿ ಬೆಳಕಿನ ಬಲಿ ಕೇಳುತ್ತಾರೆ - ಹಳೆಯದೊಂದು ನಗೆಯ ಕಂದೀಲಿನ ಮಸಿ ಒರೆಸಿದೆ - ಮತ್ತೆ ಎಂದಿನಂತೆ ದಿನಮಣಿ ಛಾವಣಿ ಏರಿದ...

"ಬದುಕು ಬಾಗಿಸಿದಷ್ಟೂ ಮನಸು ಮಗುವಾಗಬೇಕು...
ನನ್ನ ಕನ್ನಡಿಯಲ್ಲಿ ಕಂಡ ನಾನು ನನಗೇ ಬೆರಗುಣಿಸಬೇಕು..."

ನಾಳೆಗಳಿಗೆ ಬೇಕಾದ ನೆನಹುಗಳ ಬುತ್ತಿಯನ್ನ ಇಂದು ಕೈಯ್ಯಾರೆ ಕಟ್ಟಿಕೊಳ್ಳಬೇಕು ನಾನು...
ನೆನಪಿನೂಟಕೆ ಬೆಲ್ಲ ಇದ್ದಷ್ಟೂ ಕಮ್ಮಿಯೇ - ಇಂದಿನ ಬಾಳೆಲೆಯಲಿ ಸಿಹಿ ತುಂಬಿಕೊಳ್ಳಲಾಗದೇ ಹೋದವನ ನಾಳೆಗಳೂ ಅಷ್ಟು ಕಹಿಯೇ...

ಕನಸೇ, ಕಸುವಳಿಯುವ ಮುನ್ನ ಸಿಕ್ಕಿ ಬಿಡು ಹಿಡಿಯಷ್ಟಾದರೂ  - ನಗೆಯೇ, ಜೊತೆಯಾಗು ಬಾ ಬಾಗಿಲಿಗೆ ಬಂದಾಗ ಜವನಿಗೆ ಪಡಿ ನೀಡುವಷ್ಟಾದರೂ...
#ನನ್ನ_ನಗು_ನನ್ನ_ದೀಪ...
↢↡↟↜↝↟↡↣

ಯಾರೇ ಪ್ರೀತಿ, ಅಕ್ಕರೆ, ಕಾಳಜಿ, ಕಾಮ ಇವನೆಲ್ಲ ಅವವೇ ಹೆಸರಿನಲ್ಲಿ ಅಥವಾ ಸಹಜ ನೇಹದ ಆಪ್ತತೆಯ ಪಾತಳಿಯಲ್ಲಿ ಕೊಡ ಹೋದರೆ ಇಲ್ಲಾ ಕೊಟ್ಟರದು ಸಂತೆಯೊಳಗಣ ಅನಾಥ ಕೂಗಾಗುವುದೇ ಹೆಚ್ಚು...
ಅದೇ ಅವಕ್ಕೆಲ್ಲ 'ಪ್ರೇಮ'ದ ಹೆಸರಿಟ್ಟು ಬಣ್ಣ ಬಳಿದು ಎದುರಿಗಿಟ್ಟರೆ, ಆಹಾ!!! ತಲೆಯ ಮೇಲೆ ಹೊತ್ತು ಉತ್ಸವವೇ ನಡೆಯುತ್ತದೆ ಕೊಟ್ಟವರದ್ದು...
ಪಾವಿತ್ರ್ಯದ ಪ್ರಭಾವಳಿಯ ಹೆಸರಿನ ನಶೆ ಬಲು ದೊಡ್ಡದು ಸಾಖೀ...
ಪಡಖಾನೆಯ ನಸುಗತ್ತಲಲಿ ತೇಲಿದವನಿಗೆ ಭ್ರಮೆಗಳ ಅಮಲು ಸುಖ ಅಂತ ಗೊತ್ತಿತ್ತು; ಆದ್ರೆ, ಚಂದ ಹೆಸರಿನಲ್ಲಿ ಅದು ಇನ್ನೂ ಸುಖ ಅಂತ ಗೊತ್ತೇ ಆಗ್ಲಿಲ್ಲ ನೋಡು...!!!
ಉಹೂಂ, ಬೇಡ ಬೇಡ -
ಭಾವಕ್ಕೆ ಕೊಡೋ ಅಗ್ದೀ ಚಲೋ ಹೆಸರ ರಂಗಿನ ಲಾಭ ನಂಗೆ ಗೊತ್ತೇ ಆಗದಿರಲಿ...
↢↡↟↜↝↟↡↣

ಖಾಲಿ ಹಾದಿಗಳಿಗಿಂತ ಭರ್ತಿ ತುಂಬಿದ ರಸ್ತೆಗಳೇ ಹೆಚ್ಚಿನ ವೇಗವನ್ನು ಪ್ರಚೋದಿಸುತ್ತವೆ ಇಲ್ಲಿ...
ಹಸಿರು, ಹಳದಿ, ಕೆಂಪುಗಳ ಓಡು, ನಿಧಾನ, ನಿಲ್ಲು ಎಂಬ ತಟವಟಗೊಳಿಸೋ ಸಂಕೇತಗಳು...
ಚದರಡಿಗಳ ಅಳತೆಯಲ್ಲಿ ನಿರ್ಜೀವ ಕಟ್ಟಡಗಳ ಗುಪ್ಪೆ ಗುಪ್ಪೆ...
ಕಣ್ಣ ಗೋಲದ ತುಂಬಾ ಆ ಸಿಮೆಂಟಿನ ಗೂಡುಗಳ ಮೈಗೆ ಮೆತ್ತಿದ ತರಹೇವಾರಿ ಬಣ್ಣಗಳು...
ಅರ‍್ರೇ,
ಬಣ್ಣಗಳೆಂದರೆ ಭಾವದ ಜೀವತಂತುಗಳಲ್ಲವಾ...!!
ಕಾಲನ ಚಲನೆಯಲ್ಲಿ ಜಡದ ಆಯುಷ್ಯಕ್ಕೂ ಚಲನೆ ಇದೆಯಲ್ಲ - ಅಲ್ಲಿಗೆ ಈ ಇಮಾರತುಗಳೂ ನನ್ನೊಂದಿಗೆ ಓಡುತ್ತಿವೆ...
ಅದೇ ಓ ಆ ಕಟ್ಟಡದ ಆಚೆ ಬದಿಯ ಖಾಲಿಯಲ್ಲೇ ನಿತ್ಯ ಮುಳುಗೇಳುವ ಸೂರ್ಯ ಚಂದ್ರರ ಬಿಡಾರವಿದೆ...
ಸೂರ್ಯ ಹಾಗೂ ಮೋಡಗಳ ಮಿಂದು ಮಾಸಿದ ಹೊರ ಮೈ, ಒಳ ಕೋಣೆಯಲ್ಲಿ ಪ್ರೇಮ ಬೆವರುವ ರೋಮಾಂಚಕ್ಕೆ ಮೂಕ ಕಣ್ಣಾಗುವ ಮೋದ, ಅಡುಗೆ ಮನೆಯ ಸಿಡಿಮಿಡಿ, ಜಗುಲಿಯ ಹಾಳು ಹರಟೆ ಕೇಕೆಗಳಿಗೆಲ್ಲ ಸಾಕ್ಷಿಯಾಗುವ ಜಾಣ ಕಿವುಡುತನ, ಎಳೆ ಕಂದನ ಮೊದಲ ಗೀರು ಅಕ್ಷರಾಭ್ಯಾಸಕ್ಕೆ ತನ್ನೆದೆ ಬಯಲ ತೆರೆದಿಟ್ಟ ಒಳ ಮೈಯ್ಯ ಮಮತೆಯ ಪುಳಕ, ಬೆಳದಿಂಗಳ ಗಾಳಿ ನೆರಳ ತೆರೆಯಾಟಕೆ ಮಿರುಗುವ ಕಿಟಕಿ ಗಾಜಿನ ಕಂಪನ...
ಓಹ್!!!
ಎಷ್ಟೆಲ್ಲಾ ಮಾತುಗಳಿವೆ ಈ ಬಣ್ಣದ ಪೌಳಿಗಳ ಒಳ ಹೊರಗಿನ ಒಡನಾಟದಲಿ...
ಬಣ್ಣಗಳು ಕಣ್ಣಿಗೆ ಹೇಳುವ ಕಥೆ, ನಿಶ್ಚಲತೆ ಎದೆಯ ಕಡೆಯುವ ಕಥೆ, ಪುಟ್ಟ ಮಾಡಿನ ನೀಲಿಗಂಟಿದ ಹಕ್ಕಿ ಹಿಕ್ಕೆಯ ದೃಷ್ಟಿ ಬೊಟ್ಟಿನ ಕಥೆ, ಮಾತು ಬಾರದ ಕಿಲ್ಲೆಗಳು ಭಾಷೆ ಅರಿತವರ ಹಾಡ ಕಾಯುವ ಚಂದ ಕಥೆ - ಇಂಥವೇ ಏಸೊಂದು ಕಥೆಗಳ ಕೂಟ ಈ ಗೋಡೆ ಸಾಲುಗಳಲಿ...
ಕೇಳೋ ಕಿವಿಯಿಲ್ಲದ ನಾನು ಈ ಥಾರು ರಸ್ತೆ, ಆ ಗೋಡೆಗಳ ಸಮೂಹಗಳನೆಲ್ಲ ನಿರ್ಜೀವ ಅನ್ನುವುದು ಎಷ್ಟು ಸರಿ...!?
ಉಹೂಂ,
ಚೂರು ಕಣ್ಣಾಗಬೇಕು ನಾನು, ಇಷ್ಟೇ ಇಷ್ಟು ಕಿವಿ ತೆರೆಯಬೇಕು - ಅನ್ನವಷ್ಟೇ ಅಲ್ಲ ಬದುಕಿಗೆ ಬಣ್ಣವೂ ಇದೆ ಇಲ್ಲಿ...
ಮೈಗೆ ರಾಚುವ ಧೂಳ ಜೊತೆಗೇ ಮನಸ ಮಿಂಟುವ ಪ್ರೀತಿ ನಗೆಯೂ ತೇಲುತ್ತದೆ ಅದೇ ಗಾಳಿಯಲ್ಲಿ...
ಅನುಭಾವದ ಪಲುಕುಗಳ ಹೇಳಲು ಬಾರದವನೂ ಇಷ್ಟೆಲ್ಲಾ ಹೇಳಬಹುದು...
#ನಗರದ_ಬೀದಿಗಳು...
↢↡↟↜↝↟↡↣

ಯಾರೋ ಹಾರಿಬಿಟ್ಟ ಬಾಲಂಗೋಚಿ ಗಾಳಿಪಟ ಗಾಳಿಗೊಲಿದೇ ಕುಣಿಯುತಿದೆ ಅಂದುಕೊಳ್ತೇನೆ...
ಜೀವವಿಲ್ಲದ ರೆಕ್ಕೆಯನೂ ಗಾಳಿ ತೇಲಿಸುತ್ತದೆ - ಪ್ರೇಮಪೂರ್ಣ ದೊಡ್ಡಸ್ತಿಕೆ...
ಹಪ್ಪು ಹಳೇಯ ನಗುವ ನೆನಪಾದರೂ ಅಷ್ಟೇ ಆ ಕ್ಷಣಕ್ಕೆ ಮೊಗವರಳುತ್ತದೆ - ಅವಳು ಸುಖಾಸುಮ್ಮನೆ ಭುಜ ಸವರಿದಂತೆ...
ಉಸಿರ ಉರಿಗೆ ವಿಷಾದದ ಜಿಡ್ಡು ಅಂಟಿಬಿಟ್ಟರೆ ಅಲ್ಲಿಗೆಲ್ಲ ಮುಗಿಯಿತು...
ಈ ಸಂಜೆಗಳಿಗೆ ಅದೇನು ಶಾಪವೋ, ಬೆಳಕಿಗೆ ಬೆನ್ನಾಗಿ ಇರುಳಿಗೆ ದಾಟುವ ಅನಾಥ ಸಂಕದಂಥೆ ತೋರುತ್ತವೆ - ಬೆನ್ನಮೇಲೆಲ್ಲ ಹಗಲು ಊರಿದ ಪಾದಕಂಟಿದ ಧೂಳು, ಬೆವರು, ಬಣ್ಣಗಳ ಕಲಬೆರಕೆ ಗುರುತಿನ ನಿತ್ಯ ನವೆ...
ಹೌದೂ, ಆ ಗಾಳಿಪಟ ಗಾಳಿಗೆ ಒಲಿದೇ ಆಡುತ್ತಿದೆಯಾ...?
ಹಾದಿಯ ನಡೆದ ಕಸುವು ಮತ್ತು ನಗೆಯ ಚಿವುಟಿದ ನೋವು ಎರಡೂ ನೆನಪನ್ನು ಒಟ್ಟೊಟ್ಟಿಗೆ ಕೆದಕುತ್ತದೆ ಈ ಎದೆಗೆ ಹೆಟ್ಟಿದ ಮುಳ್ಳು...
#ಸಂಜೆಗೆಂಪು...
↢↡↟↜↝↟↡↣

ಯಾರದೇ ಪಟ ನೋಡಿ ಸುಂದರ ಅಂದಷ್ಟು ಸುಲಭವಲ್ಲ ಎದುರು ನಿಂತು ಕಣ್ಣೊಳಿಳಿದು ನೀ ಚಂದ ಅನ್ನೋದು...
#ತನ್ನತನದ_ಬಣ್ಣ...
%%%

ಕೇಳಿಲ್ಲಿ,
ಬಿಗಿದ ಮುಷ್ಟಿಯಂತಿರೋ ಈ ಎದೆ ಯಾವ ಕ್ಷಣದಲ್ಲೂ ಒಡೆದೋಗ್ಬಹುದು...
ಆ ಹಾದೀಲಿ ನೀ ಕಂಡು ಕಣ್ಣಲ್ಲೇ ಕಣ್ಣ ಮೀಟಿ ನಕ್ಕ ಖುಷಿಯ ಉಚ್ಛ್ವಾಸದಲ್ಲೂ - ಅಂತೇನೇ, ನೀ ನಿನ್ನ ಹಂಗೆ ನೋಡ್ಬೇಡಾ ಅಂತಂದು ಕಣ್ಣ ತಿರುವಿ ಆ ತಿರುವಲ್ಲಿ ಕರಗಿ ಹೋದಾಗಿನ ನಿಶ್ವಾಸದಲ್ಲೂ...
ಈ ಇವನ ಬಡ ಎದೆ ಹೇಗೂ ಒಡೆದೋಗ್ಬಹುದು...
#ಕಾಣಬೇಡ_ಕಳೆದೋಗಲೂಬೇಡ...
↢↡↟↜↝↟↡↣

"ನಿಂತಲ್ಲೇ ನಿಂತವನು ದಾಟಿ ಹೋದವರ ಬಗ್ಗೆ ನಿನ್ನೆಗಳ ಹೊರತು ಇನ್ನೇನ ಹೇಳಲಾದೀತು..."

"ಕಳ್ಕೊಂಡಲ್ಲೇ ಹುಡುಕ್ಬೇಕೋ ಮಳ್ಳಾ ಅಂತಿದ್ಲು ಯಾವಾಗ್ಲೂ - ಅವಳಂಗಳಕೆ ಹೋಗಿ ಹೆಸರು ಕೂಗಿದೆ, ಕನಿಷ್ಠಪಕ್ಷ ಕಿಟಕಿ ಬಾಗಿಲನೂ ತೆಗೆಯದೇ ಕತ್ತಲಾದ್ಲು..."

ಹುಡುಕುವ ಹುಚ್ಚಾಟ ಮುಗಿದ ಹೊತ್ತಿಗೆ ಇಲ್ಲೀಗ,
ನೀರವ ಸಂಜೆ - ಖಾಲಿ ಖಾಲಿ ಮನದ ಪಾತ್ರೆ - ಅಕಾರಣ ಅಲವರಿಕೆ...
ನನ್ನೊಳು ನಾನಿಲ್ಲದಿರುವ ನಿಸ್ಸತ್ವದ ಒಣ ಎಲೆಯ ಹಗುರತೆ...
ನನ್ನ ಸುಖದ ನಿದ್ದೆ ಅಂದರೆ ಅವಳ ತೋಳ್ಸೆರೆಯದ್ದು - ಇಲ್ಲಾಂದ್ರೆ ನಾನೇ ಹುಡುಕಿದರೂ ಸಿಗಲಾರದ ಆ ನಿರ್ವಾತದ್ದು...

ಎಲ್ಲ ಅವಳ ಹಾಡುವಾಗ ತಲೆದೂಗಲಷ್ಟೇ ಶಕ್ತ - "ನಾನು ಮೂಕ ಹಕ್ಕಿ..."
ಮತ್ತೇನಿಲ್ಲ,
ಎದೆಯ ನೆಲ ಬೀಳು ಬಿದ್ದಿದ್ದಕ್ಕೆ ಕಣ್ಣ ಕೊಳ ಬತ್ತಿದ್ದೇ ಸಾಕ್ಷಿ...
#ಕನಸ_ಕಾಯಲಾಗದ_ಜೀತ...
↢↡↟↜↝↟↡↣

ಎದೆಯ ಪ್ರಾಮಾಣಿಕ 'ಪ್ರೀತಿ'ಗಿಂತ ದೊಡ್ಡ 'ಗೌರವ' ಬೇರಿಲ್ಲ - ಎಂಥಾ ಹಿರಿತನಕ್ಕೂ, ಯಾವುದೇ ಬಂಧ ಬಾಂಧವ್ಯಕ್ಕೂ...
#ಕೊಡುಕೊಳ್ಳುವಿಕೆಯ_ಜಾದೂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, September 17, 2020

ಗೊಂಚಲು - ಮುನ್ನೂರಾ ನಲವತ್ತು ಮೇಲೈದು.....

ಎದೆಗೂಡಿನ ಬೆಳಕು.....

ಕೇಳಿಸಿಕೊಳ್ಳೋ ಆಪ್ತ ಕಿವಿಗಳು ಜೊತೆಗಿದ್ರೆ ಒಳಗಿನ ಸತ್ಯಗಳನ್ನು (ನೋವುಗಳನ್ನು) ಹೇಳ್ಬೇಕಾದ ಸಮಯದಲ್ಲೇ ಹೇಳಿಕೊಳ್ಳೋ ಮನಸ್ಥಿತಿ ನಮಗಿರತ್ತಾ ಅಂತ ಮೊದ್ಲು ನೋಡ್ಕೋಬೇಕಲ್ವಾ - ಅಯ್ಯೋ ನನ್ನವರಾರಿಲ್ಲ ಅಂತ ಜಗವ ಆರೋಪಿಸೋ ಮುನ್ನ...

ಸ್ವಾಭಿಮಾನದ ಹೆಸರಿನ ಮುಸುಕಲ್ಲಿ ಮುಚ್ಚಿಟ್ಟುಕೊಂಡ ನಮ್ಮ ಅಹಂ ನಮ್ಮನ್ನು ಅಷ್ಟು ಮುಕ್ತವಾಗಲು ಬಿಡತ್ತಾ...?
ಅದೂ ಹೋಗ್ಲಿ ಅಂದ್ರೆ, ಅದೇ ಅಹಂ ಜಗತ್ತಿನ ಕಣ್ಣಲ್ಲಿ ಸಣ್ಣವರಾಗಿಬಿಡ್ತಿವೇನೋ ಅನ್ನೋ ಭ್ರಮೆಯನ್ನ ಹುಟ್ಟಾಕಿ ನಮ್ಮ ನೋವಿಗೆ ನಮ್ಮನ್ನು ಸ್ವಯಂ ವೈದ್ಯ ಆಗೋಕೂ ಅಥವಾ ಮನಸಿನ ಅಸಹಜ ಹೊಯ್ದಾಟಕ್ಕೆ ಸ್ವಯಂ ಆಗಿ ಮನೋವೈದ್ಯರ ಕಾಣೋಕೂ ಬಿಡಲ್ಲವಲ್ಲ - ಇದಕ್ಕೇನುತ್ತರ...??
ಇನ್ನು ಪ್ರೀತಿ ಸಿಕ್ಕಿಲ್ಲ ಅನ್ನೋಕೂ ಮುಂಚೆ ಪ್ರೀತೀನ ಪಡೆಯೋಕೆ, ಬೆಳೆಯೋಕೆ, ಉಳಿಸಿಕೊಳ್ಳೋಕೆ ಎಷ್ಟು 'ಪ್ರಬುದ್ಧ'ವಾಗಿ ಶ್ರಮಿಸಿದ್ದೀವಿ ಅನ್ನೋದನ್ನ ಯೋಚಿಸಬೇಕಲ್ವಾ...
ಹಂಚಿಕೊಳ್ಳೋಕೆ ಪ್ರಾಮಾಣಿಕವಾಗಿ ಶ್ರಮಿಸಿಯೂ ಪ್ರೀತಿ ಸಿಕ್ಕಿಲ್ಲ ಅಂತೀವಾದ್ರೆ, ಆ ದಾರೀಲಿ ಸಾಗ್ತಾ ಸಾಗ್ತಾ ನಮ್ಮನ್ನು ನಾವು ಪ್ರೀತಿಸಿಕೊಳ್ಳೋದನ್ನು ಕಲಿತಿಲ್ಲ ಅಂತಾಯ್ತು...
ಅರ್ರೇ, ನಮ್ಮನ್ನು ನಾವು ಪ್ರೀತಿಸ್ಕೊಳ್ಳೋಕೆ ಕಲಿಸದ ಇತರರೆಡೆಗಿನ ಪ್ರೀತಿ, ಪ್ರೀತಿ ಹೇಗಾದೀತು - ಅದೇ ಪ್ರೀತಿ ಅನ್ನೋದಾದ್ರೆ ನಮ್ಮ ಪ್ರೀತಿ ನಮ್ಮ ಶಕ್ತಿಯಲ್ಲ, ಬದಲಾಗಿ ನಮ್ಮ ದೌರ್ಬಲ್ಯ ಅದು - ಮತ್ತು ಚಟವಾದದ್ದೆಲ್ಲ ಅವಸಾನದ ದಾರಿಯನ್ನೇ ತೋರತ್ತೆ... 
ಅಸೀಮ ಆದರಕೆ ಗೋಡೆಯನ್ನೂ, ಆ ಮೂಲಕ ಸುಳ್ಳು ಸ್ವಾಭಿಮಾನದ ಸೌಧವನ್ನು ಕಟ್ಟಿಕೊಂಡು ಒಳಗೆ ಕೂತವರಿಗೆ ಮಾತ್ರ ಪ್ರೀತಿಯ ಕೊರತೆ ಮೂಡೀತು - ಅದೇ ಬಯಲಿಗೆ ಮುಕ್ತ ನಿಂತವನನ್ನ ಖಿನ್ನತೆ ಹೇಗಪ್ಪಾ ಕಾಡೀತು...!!
ನಾಕಾರು ದಾರಿಗಳ ಸೋಲು, ಅವಮಾನ, ಮೋಸ, ವಂಚನೆಗಳ ಹತಾಶೆಯನ್ನು ಸರ್ವತ್ರ ಆರೋಪಿಸಿಕೊಂಡು ಮನಸ್ಸಿನ ಬಾಗಿಲು ಹಾಕ್ಕೊಂಡ್ರೆ ಅದ್ಯಾವುದೂ ಸೋಂಕಿಲ್ಲದ ಅದರಾಚೆಯ ಹಾದಿಗಳ ನಿರುಪದ್ರವಿ ನಗೆಯ ಬೆಳಕೂ ಹೊರಗೇ ನಿಲ್ಲಬೇಕಾಯ್ತಲ್ಲ - ಇಷ್ಟಕ್ಕೂ ರಾಜಕುಮಾರಿ ಸ್ವಂತವಾಗಬೇಕಂದ್ರೆ ಏಳು ಸಾಗರ ದಾಟಿ ಮಾಯಾವಿ ಕೋಟೆಯೊಳಗಣ ಗಿಣಿಯ ಬಿಡಿಸಿ ತರಲೇಬೇಕಲ್ಲ...
ನಡೆದು ಬಂದ ಹಾದಿಯನು ಪೂರಾ ಮರೆತವನ ಗೆಲುವಿಗೆ ಅಹಂಕಾರ ಮೆತ್ತಿಕೊಂಡಂತೆಯೇ, ಗೆದ್ದ ಹಾದಿಯಲ್ಲೂ ಹಿಂದೆ ಸೋತ ಹಾದಿಗಳ ಕಹಿಗಳನೇ ನೆನೆನೆನೆದು ಅಳುತ್ತಾ ಕೂತವನ ನಗುವಿಗೂ ಹತಾಶೆಯ ರಾಡಿ ಅಂಟಿಕೊಳ್ಳತ್ತೆ, ಮತ್ತೀ ಹತಾಶೆ ಪಡೆದ ಎಲ್ಲವನ್ನೂ ನುಂಗಿ ಹಾಕತ್ತೆ; ಕೊನೆಗೆ ವಿಕೋಪಕ್ಕೆ ಒಯ್ದರೆ ಬದುಕನ್ನೂ...
ಯಾರದ್ದೋ ಮೋಸವನ್ನೇನು, ಬದುಕು ಮಾಡಿದ ಮೋಸವನ್ನೂ ಒಂದಮ್ಮೆ ಕ್ಷಮಿಸಬಹುದು; ಆದ್ರೆ ನಂಗೆ ನಾನೇ ಮಾಡಿಕೊಳ್ಳೋ ಮೋಸಕ್ಕೆ ಕ್ಷಮೆ ಹೇಗೆ...
ನನಗೆ ಯಾರೂ ಇಲ್ಲ ಅಂಬುದು ಶುದ್ಧ ಸುಳ್ಳು - ನನ್ನ ಜೊತೆ ನಾನೇ ನಿಂತಿಲ್ಲ ಎಂಬುದು ಮಾತ್ರ ಕೊಟ್ಟಕೊನೆಯ ಅಕ್ಷಮ್ಯ ಸತ್ಯ...
ಹಾಗೆಂದೇ, ಸ್ವಯಂ ಹತ್ಯೆಯ ಸಮರ್ಥಿಸೋ ಎಲ್ಲವೂ ಬರೀ ಸಬೂಬು ಅನ್ಸತ್ತೆ...
ಕಾರಣ, ಪ್ರತಿ ಕ್ಷಣ ಸಾವಿಗಂಜಿ ಬದ್ಕೋ ನಮಗೆ ಸಾಯೋಕೆ ಬೇಕಾದಷ್ಟು ಧೈರ್ಯ ತಣ್ಣಗೆ ಬದ್ಕೋಕೆ ಖಂಡಿತಾ ಬೇಕಿರಲ್ಲ - ಬದುಕು ಮೊದಲ ಹಾಗೂ ಕೊನೆಯ ಆದ್ಯತೆ ಆಗಿರಬೇಕಷ್ಟೇ...
ಎಷ್ಟು ಸರಳ ನಿಯತಿಯ ನೀತಿ:
"ಬದುಕು ಸಾವಿರ ಸಲ ಸೋತ್ರೂ ಗೆಲ್ಲೋಕೆ ಸಾವಿರದೊಂದನೇ ಅವಕಾಶವನ್ನು ಮುದ್ದಾಂಮಾಗಿ ಕೊಡತ್ತೆ - ಆದ್ರೆ, ಸಾವು ಒಮ್ಮೆ ಗೆದ್ದರೆ ಅಲ್ಲಿಗೆಲ್ಲಾ ಮುಗೀತು ನಮ್ಮ ಪಾಲಿಗೆ..."
#ಖಿನ್ನತೆ_ಎಂಬ_ಹಳಹಳಿಕೆ...

↜↯↯↝

ಸುಸ್ತಾಗ್ತಿದೆ ಕಣೋ, ಯಾವ ದಾರಿನೂ ಕಾಣಿಸ್ತಿಲ್ಲ, ಬದುಕೇ ಸಾಕೂ ಅನ್ಸೋ ಹಂಗೆ, ನಂದೇ ನಗೆಯೂ ನಂಗೆ ಮುಖವಾಡ ಅನ್ಸೋಕೆ ಶುರುವಾಗಿದೆ...
ಏನೋ ಮಾಡ್ಲಿ...?
ಏನೂ ಮಾಡ್ಬೇಡ - ಸುಮ್ನೇ ಇದ್ಬಿಡು ಚೂರು ಕಾಲ - ಓಡುವುದರಷ್ಟೇ ಕೂತು ಸಾವರಿಸಿಕೊಳ್ಳೋದೂ ಅಗತ್ಯ ದೂರ ತೀರ ನಡಿಗೆಗೆ...
ಬದುಕು ನಮ್ಮನ್ನು ಒಪ್ಕೋಬೇಕು ಅಂದ್ರೆ ಮೊದ್ಲು 'ನಮ್ಮನ್ನು ನಾವು' ಒಪ್ಕೋಬೇಕಲ್ವಾ - ನೋವಿರುವಾಗಲೂ ನಗೋದು ಮುಖವಾಡ ಅನ್ನೋದಾದ್ರೆ ಅದರ ಧನಾತ್ಮಕತೆ ಒಡೆಯದಷ್ಟು ಆ ಮುಖವಾಡ ಗಟ್ಟಿ ಇರ್ಲಿ...
ಯಾಕೇಂದ್ರೆ -
"ಯಾರದೇ ಆತ್ಮದ ಗರಡಿಮನೆಯಲ್ಲಿ ನಗೆಯ ಸಾಮು ನಿಲ್ಲಬಾರದು" ಆಯ್ತಾ...
ಕಣ್ಣೆದುರು ಕತ್ಲೆ ಕವದ್ರೂ ಕಣ್ಣೊಳಗಿನ ಬೆಳಕು ಆರಲ್ಲ - ಸವೆದ ದಾರಿ ಯಾವ್ದೂ ಎದುರಿಲ್ಲದಾಗಲೂ ನಡಿಗೆ ನಿಂತಿಲ್ಲವಾದರೆ ನನ್ನ ಹಾದಿಯ ನಾನೇ ಸವೆದ ಗರ್ವದ ಖುಷಿ ನಂದು ಅಲ್ವಾ...
ನಂಗೇ ಯಾಕೆ ಎಲ್ಲಾ ಸುತ್ಕೋಳತ್ತೆ ಅಂತ ನೋಯೋ ಬದ್ಲು ಸುತ್ಕೊಳ್ಳೋ ನೋವಿಗೆಲ್ಲ ನಗೆಯ ಕಷಾಯ ಕುಡಸ್ತೀನಿ ಅನ್ಕೊಂಡು ಹೊರಟ್ರೆ ಅರ್ಧ ಯುದ್ಧ ಗೆದ್ದಂತೆಯೇ ಲೆಕ್ಕ...
ನಿನ್ನ ಮುಗುಳ್ನಗು ನನ್ನೆದೆ ನೆಲದಲ್ಲಿ ಬಿತ್ತಿ ಬೆಳೆದ ಹಗಲಿರುಳ ಕನಸ ಪೈರಿನ ತಲೆ ಸವರಿ ಹೋಗು ಬಾ...

ತುಂಬಾ ನೋವಾಗ್ತಿತ್ತು, ನೀನು ನೆನಪಾದೆ, ಹಗುರಾಯ್ತು ಉಸಿರು - ನಿಂಗೂ ನೋವಾದಾಗ ಸ್ನೇಹಗಳೇ ನೆನಪಾಗ್ತಾವಾ...?
ನಾನೇನು ಮೇಲಿಂದ ಉದುರಿದವನಾ!! 
ಇಲ್ಲೇ ನಿನ್ನಂಥದ್ದೇ ತೊಳಲಾಟಗಳಲಿ ಮಿಂದು, ನಿನ್ನಂಥವರ ನೇಹದ ಸವಿ ಉಂಡೇ ಬೆಳೆದದ್ದು...
ಒಂದೊಮ್ಮೆ ಕಿವಿಯಾಗುವುದು, ಸಣ್ಣ ಸಾಂತ್ವನದ ನುಡಿಯಾಗುವುದು ಕೂಡಾ ಹೆಗಲಿಗೆ ಹೆಗಲಾದಂತೆಯೇ ಲೆಕ್ಕ - ಹಾಗೆಂದೇ, ಚೂರು ಸಂವೇದನೆಯುಳ್ಳ ಸಹಯಾತ್ರಿಗಳೆಲ್ಲ ನೇಹಿಗಳೇ ಇಲ್ಲಿ...
ಹೀಗಿರುವಾಗ -
ತೀರ ಸೋತಾಗಲೂ ನೆನಪಾಗಬೇಕು - ಕಾಲವೂ ನೆನಪುಳಿಯಬೇಕು - ಬದುಕು ಬಿಡಿಸಿದ ನೋವು ನಗುವಿನ ಬೆರಗನೆಲ್ಲ ಮಾತಲ್ಲೇ ಬಗೆಯುತ್ತ ಕಾಲವ ಹಂಚಿ ತಿಂದ ನೇಹಗಳು...
ಎಲ್ಲರೂ ಆಯ್ದು, ಕಾಯ್ದುಕೊಳ್ಳಬೇಕು - ತಮ್ಮ ಎದೆಯ ಹಾಡನು ಆಲಿಸಬಲ್ಲ ಒಂದಾದರೂ ಅನ್ಯ ಆಪ್ತ ಎದೆ ಗೂಡನು...

ಒಂದು ಸಮಾಧಾನದ ನಿಟ್ಟುಸಿರ ಉಳಿಸುವ ಹೀಗೇ ಹೀಗೊಂದಿಷ್ಟು ಮಾತಾಗುತ್ತದೆ ಆಗೀಗ ಒಡನಾಡಿಗಳ ಒಳಗುದಿಗಳ ಜೊತೆಗೆ...
ಉತ್ತರ ನನ್ನದಾ, ಇಲ್ಲಾ ಪ್ರಶ್ನೆಯೇ ನಂದಾ ಎಂಬುದು ಗೊತ್ತಾಗದ ರೀತಿಯಲ್ಲಿ...
ಕೊನೆಗೆ -
ಅಟ್ಟ ಸೇರಿ ಲಡ್ಡಾದ ನೆನಪುಗಳ ಮಾಯಾ ಪೆಟ್ಟಿಗೆಯಲಿ ಕೈಯ್ಯಾಡಿಸಿ ಒಂದಿಷ್ಟು ಸವಿ ನೆನಪುಗಳ ಕೆದಕಿ, ಅನಾದಿಯ ಕನಸೊಂದನು ಹೆಕ್ಕಿ ಆಡಿಕೊಂಡು ನಕ್ಕು, ಹಳೆಯ ಜಗಳವೊಂದಕೆ ಹೊಸ ಆಜ್ಯ ಸುರಿದು ಜೀವ ತುಂಬಿ, ಬುಡ ಅಲ್ಲಾಡುತಿರುವ ನಾಳೆಗಳ ಭರವಸೆಯ ದೀಪಗಂಬವ ಪಾಳಿಸಿ ಚೂರು ಗಟ್ಟಿ ಮಾಡಿ "ಕಣ್ಣ ಆಯಾಸ ಕಳೆಯಲು ಚೂರು ಕತ್ತಲೂ ಜೊತೆಗಿರಲಿ - ಕತ್ತಲ ಪತ್ತಲದ ಜೋಲಿಯಲಿ ಎದೆಗುಡಿಯ ಬೆಳಕು ತೂಗಲಿ ಲಾಲಿ" ಎನ್ನುವಲ್ಲಿ ಮಾತು ಮುಗಿಯುತ್ತದೆ ಅಂದಿಗೆ...

ಏನ್ಗೊತ್ತಾ -
ಹಿಂಗೆ ನನ್ನೊಳಿಲ್ಲದ ನಿಜ ಧೈರ್ಯವನು ಭಂಡತನದಂಗೆ ನನ್ನವರಿಗೆ ಉಣಿಸಲು ನಿಂತಾಗ, ಇಲ್ಲವೇ ನನ್ನ ಕಿರು ನೋವ ಮುಳ್ಳನು ತೋರಿ ಅವರ ಎದೆಗೇ ನಾಟಿದ ವಿಷದ ಅಂಬಿನ ಮೊನೆಯ ಕೀಳುವ ಹುಚ್ಚು ಸಾಹಸಕೆಳಸುವಾಗ ಒಳಗಿನ ಸತ್ಯ ಕಣ್ಣಲ್ಲಿಳಿಯುವ ಭಾರಕ್ಕೆ ಜೀವ ಹಿಡಿಯಾಗುತ್ತದೆ...
ನಿನ್ನೆದುರಲೂ ಅಳಬಾರದಾ ಎಂಬ ಅವರ ಆರ್ತ ಪ್ರಶ್ನೆಗೆ ಅಸಹಾಯಕತೆಯ ಹಿಮ ಕರುಳ ಕೊರೆಯುತ್ತದೆ...
ಆದರೂ ಜೀವಕೆ ಕೆಚ್ಚು ತುಂಬೋ ಮಾತು ನಿಲ್ಲಿಸಲಾರೆ - ಅಜ್ಜಿಯ ಕಥೆಯ ರಾಜಕುಮಾರಿ/ರ ಇದ್ದಿದ್ದೇ ಸುಳ್ಳಾದರೂನೂ, ಏಳು ಸಾಗರ ದಾಟಿ ರಕ್ಕಸನ ಸಂಹರಿಸಿದ ಭಾವ ಬೆಳೆದುಕೊಟ್ಟ ಹಿತದ ಕನಸೊಂದು ನಡೆಯಬೇಕಾದ ಒಂಟಿ ಹಾದಿಯ ಸುಸ್ತನು ಕಳೆದು ನಗೆಯ ಬುತ್ತಿಯಾದದ್ದು ಸುಳ್ಳಲ್ಲವಲ್ಲ...
ಉಹೂಂ...
ಸುತಾರಾಂ ಬಿಟ್ಟು ಕೊಡೋ ಮನಸಿಲ್ಲ, ಕಾರಣ ಯಾರೂ ಘನತೆಯ ಬಡಿದಾಟವೂ ಇಲ್ಲದೇ ಜವನೆದುರು ಸೋಲಬಾರದು - ನನ್ನ ಹಡಾಹುಡಿ ಸುಳ್ಳಾಗಬಾರದು...
#ಪ್ರೀತಿಯು_ಬಿತ್ತುವ_ಅರೆಬರೆ_ಭರವಸೆಯೂ_ನೋವನು_ಗೆಲ್ಲಲೆಂಬಾಶಯದ_ಘನ_ಪ್ರಾರ್ಥನೆಯೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Friday, September 11, 2020

ಗೊಂಚಲು - ಮುನ್ನೂರಾ ನಲವತ್ತು ಮತ್ನಾಕು.....

ಶಬ್ದಾಡಂಬರದ ಖಟ್ಪಟಿ.....

ಶಬ್ದಗಳು ಕೊಲ್ಲುತ್ತವೆ - ಶಬ್ದಗಳು ಗೆಲ್ಲುತ್ತವೆ...
ಮೊದಲ ಪಾದದಲ್ಲಿಯೋ, ಒಟ್ರಾಶಿ ಗೊಣಗೊಣ ಗುಪ್ಪೆಯ ನಟ್ಟ ನಡುವಲೆಲ್ಲೋ, ಇಲ್ಲಾ ನಿಲ್ಲಿಸಿದರೂ ಮುಗಿಯದ ಕೊನೇಯ ಆ(ವಿ)ಲಾಪದಲ್ಲೋ ಅಥವಾ ಸಾಲು ಸಾಲಿನ ನಡುವಿನ ಕಾಲ್ಸಂಕದಂಥ ಖಾಲಿಯಲ್ಲೋ ಎಲ್ಲೋ ಒಂದ್ಬದಿಗೆ ಒಂದ್ಯಾವುದೋ ಭಾವ ಎದೆಯ ಜಗ್ಗಿ ನಿಲ್ಲಿಸಿ ಮರುದನಿಯ ಉದ್ಗಾರ ಎಬ್ಬಿಸುತ್ತದಲ್ಲ ಅದು, ಅದಷ್ಟೇ ಶಬ್ದ ಸಾರಥ್ಯದ (ಓದು, ಬರಹ, ಮಾತು, ಮೌನ ಇಂಥವೇ ಇತ್ಯಾದಿ) ಸಾರ್ಥಕತೆ - ನಿನ್ನ ಅರಸುವ ನಶೆ... 

ಶಬ್ದಗಳು ಮಡಿದಲ್ಲಿ ಕವಿತೆ ಹುಟ್ಟುತ್ತದೆ...
ಎದೆಕಟ್ಟಿ ದನಿಯಾಗದೇ ನೀ ದಾಟಿದ ಹಾದಿಯ ತೊಳೆವ 
ತೀರ ತಲುಪದ ಶಬ್ದ ಜೋಗಿ ಕೊರಳಿನ ಏಕನಾದವಾದಂತೆ...
ಕಾಲು ಸೋತ ಹಾದಿಯ ನಿಟ್ಟುಸಿರ ಮಗ್ಗುಲಲಿ ಜೊಂಪೆ ಜೊಂಪೆ ಉದುರೋ ಬೊಕ್ಳ್ಹೂಗಿಗೆ ಮಡಿಲೊಡ್ಡಿ ನಿಂತು ನೀನು ಅಬೋಧ ನಕ್ಕಂತೆ - ಮಸಣದಲಿ ಶಿವ ಸಿಕ್ಕಂತೆ...

ಮೌನದಾಸರೆಯ ಶಬ್ದ ಅಂತರಂಗದ ತಪನೆ...
ಉದ್ದಕೆ ಖಾಲಿ ಬಿದ್ದ ಏಕಾಂಗಿ ಹಾದಿಯ ಅನಾಮಿಕ ತಿರುವಲ್ಲಿ ನನ್ನ ಕಣ್ಣಲ್ಲಿ ನಿನ್ನ ಕಣ್ಣ ಬೆಳಕು ಬಿದ್ದು ಉಸಿರಲ್ಲಿ ಕಿಡಿ ಹೊತ್ತಿದ ದಿವ್ಯ ಘಳಿಗೆಯ ಶುದ್ಧ ತೀವ್ರತೆ, ಅದು ಬದುಕಿನ ನೈಜ ಧನ್ಯತೆ - ನನಗೆ ನಾನೇ ದಕ್ಕಿ ನನ್ನೊಳಗೆ ನೀನರಳಿದಂತೆ...

ನಿಶ್ಯಬ್ದವೂ ಶಬ್ದದೂರನೇ ತಪಿಸುತ್ತದೆ...
ಬದುಕು ಓದಿಸಿದ ಅತಿ ಪುಟ್ಟ ಕವಿತೆ - ಕಣಿ ಹೇಳುವ ನಿನ್ನುಸಿರು...
ಕನಸು ಬರೆಸಿದ ಸುದೀರ್ಘ ಕಾವ್ಯ - ನಿನ್ನ ಕಣ್ಣ ಕುಂಚದ ಕುಸುರಿ...
ಮತ್ತು 
ನನ್ನೆಲ್ಲಾ ಶಬ್ದಾಡಂಬರದ ವಸ್ವಂತವೂ ನಿನ್ನ ತಲುಪುವ ಖಟ್ಪಟಿ ಅಷ್ಟೇ - ಮೌನ ಸಾಗರ ಒಡೆದು  ಮುತ್ತು ಮಾತಾದ ತುಟಿ ತೇವದಂತೆ... 
ಶಬ್ದ ಇತಿಹಾಸವಾಗುತ್ತದೆ, ಶಬ್ದ ಇತಿಹಾಸವ ಹಾಡುತ್ತದೆ - ನಿರ್ವಾಣವು ನಿರ್ಮಾಣದ ದಿಕ್ಸೂಚಿ ಅಂದಂತೆ...
#ಮಾತು_ಹುಟ್ಟದ_ಸಂತೆಯ_ರಣ_ಗದ್ದಲದಲಿ_ಕಳೆದುಹೋದ_ಎದೆಯ_ರೇಖೆಯ_ಶಬ್ದ_ನಾನು...

ಗೊಂಚಲು - ಮುನ್ನೂರಾ ನಲವತ್ತು ಮತ್ತ್ಮೂರು.....

ಹಂಚಿ ತಿನ್ನುವ ಅಮೃತ.....

ಮೈಯಿಂದ ಇಳಿವ ಪ್ರತೀ ಬೆವರ ಹನಿಯೂ ಯಾವುದೋ ಮರು ಹುಟ್ಟಿನ ಕಾವ್ಯವೇ - ಪ್ರಕೃತಿ ಪ್ರೇಮದ ನೆಲ ನೆಲೆ...
ಬಾನ್ಬಯಲಲಿ ಕರಿ ಮೋಡಗಳ ಸಂತೆ ನೆರೆದಷ್ಟೂ ವಸುಧೆ ಗರ್ಭಕೆ ಹಸಿರ ಕುಡಿಯೊಡೆಯೋ ಪುಳಕ - ಬಾನು, ಕಾನು, ಜಲದಿಂದುಮಾಲೆ...
ಪ್ರೀತಿಸುವವರನು ಪ್ರೀತಿಯಿಂದ ಕಾಯ್ದುಕೊಳ್ಳಬೇಕು - ಬೆಳಕಿನಂತೆ, ಮಳೆಯಂತೆ...
ಹೌದೂ -
ಪ್ರೇಮದ ಬಣ್ಣ ಯಾವುದು...!?
⇑⇍⇎⇏⇓

ಈ ಪ್ರೇಮವೆಂಬೋದು ವಿರಹದಲ್ಲಿ, ಬರಹದಲ್ಲಿ, ಅಂತೇ ಸಾವಿನಲ್ಲಿ ಸಿಕ್ಕಷ್ಟು ಚಂದಗೆ, ರಮ್ಯವಾಗಿ ಬದುಕಾಗಿ ಅಥವಾ ಬದುಕಲ್ಲಿ ಸಿಗಲಾರದ ಮಾಯೆಗೇನೆನ್ನಲಿ...
#ಸಿಗಬಾರದು_ನೀನು...
⇑⇍⇎⇏⇓

ಆ ಹೆಜ್ಜೆಗಳಿಗೆ ಮುಂದ್ಯಾವ ಹಾದಿಯಲೂ ಮುಳ್ಳು ಚುಚ್ಚದಿರಲೀ ಎಂದು ಪ್ರಾರ್ಥಿಸಿದೆ...
ನನ್ನ ದೈವ ಅಸ್ತು ಅಂದಿರಬೇಕು...
ಅಲ್ಲೀಗ ನನ್ನ ನೆನಪೇ ಇದ್ದಂತಿಲ್ಲ...
#ಪ್ರೀತಿ_ಒಮ್ಮೊಮ್ಮೆ...
⇑⇍⇎⇏⇓

ಹುಟ್ಟಿನಲ್ಲೂ ಅಸ್ತದಲ್ಲೂ ಅದೇ ಗಾಢ ಹೊನ್ನ ರಂಗು ರವಿ ತೇಜಕೆ...
ತೆರೆ ಅಳಿದು ಬೆಳಕಾಗುವುದಾ, ಮುಸುಕೆಳೆದು ಕತ್ತಲಿಗಿಳಿಯುವುದಾ ಎಂಬುದರ ಮೇಲೆ ಹಗಲು, ಇರುಳಿನ ನಿರ್ಣಯ...
ಪ್ರೀತಿಯೂ ಹಂಗೇನೇ...
#ನಿನ್ನ_ಹಾದಿ_ಯಾವುದು...
⇑⇍⇎⇏⇓

ಸಾವಿನಾಚೆಯೂ ಒಂದು ಊರ ಕಟ್ಟಿ ಬದುಕ ಬೆಳಕೊಂಡಷ್ಟು ಸಲೀಸಾಗುತ್ತಿಲ್ಲ ನಿನ್ನ ಹೊರತಾಗಿ ಬೇರೊಂದು ಕನಸ ಕಸಿ ಕಟ್ಟಿ ನಗೆಯ ಉಳಿಸಿಕೊಳ್ಳುವುದು...
#ಆತ್ಮವ_ಕಾದಿಟ್ಟ_ಉಸಿರ_ಬಳ್ಳಿ...
⇑⇍⇎⇏⇓

ಕಿಟಕಿ ಪಕ್ಕದ ಹಸಿರು ಅರಳಿದ ಮರದಲ್ಲಿ ಅತ್ತಿಂದಿತ್ತ ಏನೋ ಗಾಬರಿಯಲಿ ಎಂಬಂತೆ ಓಡಾಡಿಕೊಂಡು ಇಣಚಿಯೊಂದು ಒಂದೇಸಮ ಬಾಲ ಬಡಿಯುತ್ತಾ ಶಕ್ತಿಮೀರಿ ದನಿ ತೆಗೆದು ಏನನೋ ಹೇಳುತಿದೆ - ಯಾರ ಕರೆಯುತಿದೆಯೋ, ಯಾವ ನೋವನು ಅದಾರಿಗೆ ದಾಟಿಸುತಿದೆಯೋ ಅಥವಾ ಅದು ಆ ಪುಟ್ಟ ಜೀವಿ ತನ್ನ ಪ್ರೇಮವ ಹೇಳುವ ಪರಿಯೋ...
ಭಾಷೆ ಬಾರದ ನಾನು ದನಿಯ ಇಂಪಿಗೆ ಕಿವಿಯ ಅಡವಿಟ್ಟು ಮೂಗ ನೋಟ ಬೀರುತ್ತಾ ಕೂತಿದೇನೆ...
ಸಕಲ ಜೀವಜಾಲಗಳ ಭಾಷೆಗಳಿಗೂ ಭಾಷ್ಯ ಬರೆಯಬಲ್ಲ ಶಕ್ತ ಪ್ರಕೃತಿ ಎಲ್ಲರ ಮಾತಿಗೂ ತನ್ನ ಪ್ರತಿಕ್ರಿಯೆಯಾಗಿ ಮುಗುಮ್ಮಾದ ನಗುವನ್ನಷ್ಟೇ ಕರುಣಿಸುತ್ತದೆ...
#ಪ್ರೀತಿ...
⇑⇍⇎⇏⇓

ಪ್ರೀತಿ ಗಡಿಗಳ ಮೀರಿ ನಿಲ್ಲಬೇಕು - ಸದಾಶಯ...
ರಾಜಕೀಯಕ್ಕೋ ಗಡಿಗಳದೇ ಅಸ್ತಿತ್ವ - ಯುದ್ಧ...
ಪ್ರೀತಿ ಬಹುದೊಡ್ಡ ರಾಜಕೀಯ - ಶಾಂತಿ...
#ಕೃಷ್ಣ_ಕೃಷ್ಣಾ...

*** ಅರ್ಥ_ಮತ್ತು_ವಿವರ_ಕೇಳಬೇಡಿ...
⇑⇍⇎⇏⇓

ಅಷ್ಟೇ,
ದೈವತ್ವ ಅಂದರೆ ಮತ್ತೇನಿಲ್ಲ - "ಮನುಷ್ಯನಾಗುವ ರಕ್ಕಸ ಪ್ರೀತಿ..."
#ಹಂಚಿ_ತಿನ್ನುವ_ಅಮೃತ...
⇑⇍⇎⇏⇓

ಬೆಳಗೆಂದರೆ ನಿನ್ನ ಪ್ರೀತಿ...
ಇರುಳೆಂದರೆ ನಿನ್ನ ವಿರಹ...
"ಲವ್ಯೂ ಮತ್ತು ಮಿಸ್ಯೂ"ಗಳ ತೀವ್ರತೆಯಷ್ಟೇ ನನ್ನ ನನಗೆ ಕಾದು ಕೊಡುತಿರುವ ಜೀವನ ವೈಭವ...
ಸುಕ್ಕಿಲ್ಲದೇ ಸಿಕ್ಕ ಭಾವ ಸೌಂದರ್ಯ ನೀನು...
#ಇದ್ದುಬಿಡು_ಹೀಗೆಯೇ_ಎದೆಯನಾಳುವ_ನಗೆಯ_ಗುಂಜಾರವವೇ...
⇑⇍⇎⇏⇓

ಮಣ್ಣಾಗಬೇಕು ನಾನು...
ನಿನ್ನ ಬೇರಿನ ಅನ್ನವಾಗಲು ಮಣ್ಣೇ ಆಗಬೇಕು ನಾನು...
#ಪ್ರೀತಿ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, August 1, 2020

ಗೊಂಚಲು - ಮುನ್ನೂರಾ ನಲವತ್ತು ಮೇಲೆರಡು.....

ನನ್ನ ಹುಟ್ಟು.....
(ಹಾರುವ ಕನಸಿಗೆ ಗಾಳಿಯೇ ರೆಕ್ಕೆಯ ಸೆರಗು...)

ಕರುಳ ಬಳ್ಳಿಯ ಕತ್ತರಿಸಿದರು...
ಬಯಲಿಗೆ ಬಿದ್ದ ಭಯಕೆ ಕಣ್ಮುಚ್ಚಿಯೇ ಚೀರಿದೆ...
ಫಕ್ಕನೆ ಎತ್ತಿಕೊಂಡು ಎದೆ ಹಾಲು ಬಳ್ಳಿಯ ಬಾಯಿಗಿಟ್ಟು ಬೆಳಕಿಗೆದೆಗೊಡಲು ಶಕ್ತಿ ಹರಿಸಿದಳು...
ಅಷ್ಟೇ,
ಕಣ್ಕುಕ್ಕುವಂತೆ ಜಗವನೇನೂ ಗೆದ್ದಿಲ್ಲ; ಆದರೆ ನನ್ನೊಳು ನಾ ಎಂದೂ ಸೋತಿಲ್ಲ...
ಅವಳ ಎದೆ ಹಾಲು ಅಮೃತವಿರಲಿಕ್ಕಿಲ್ಲ - ಆದರೆ, ಆತ್ಮ ಸ್ಥೈರ್ಯಕಿಂತ ಅಮೃತ ಎಳ್ಳಷ್ಟೂ ಮೇಲಲ್ಲ...
ನೆತ್ತಿ ನೇವರಿಸಿ ಅಂಗಳಕೆ ಬಿಟ್ಟ ಅವಳ ಹಸ್ತದಲಿ ಬದುಕನು ಪ್ರೀತಿಯಿಂದ ಆವರಿಸೋ ಪ್ರೀತಿ ತುಂಬೋ ಜಾದೂ ಇದೆ...
ಅವಳ ಮಮತೆ ಮಡಿಲಲಿ ಕುಂತೇ ಗ್ರೀಷ್ಮಗಳ ದಾಟಿದ್ದು ವಸಂತಗಳ ಮಿಂದದ್ದು...
#ಆಯೀ_ಅಂದರೆ_ಆತ್ಮಕೆ_ಸಾಮು_ಹಿಡಿದವಳು...

ಎದೆಯ ಇರಿವ ನೋವ ಹನಿಯೂ ಶಾಪವಾಗದ ಸೂತ್ರವು...
ಕರುಳ ಕೊರೆವ ನಿಟ್ಟುಸಿರಲೂ ಪ್ರೀತಿಯೊಂದೇ ಪಾತ್ರವು...
ಎಂದೂ ಬರಿದಾಗದ ಅವಳ ಸೆರಗ ಗಂಟಿನ ಹರಕೆ, ಹಾರೈಕೆಗಳ ಹಮ್ಮಿಣಿಯದು ಎನ್ನ ಜಗವ ಆರೈಯ್ಯುವ ಸತ್ರವು...
ಅವಳೆಂಬ ಅವಳ ಅಖಂಡ ಕಾರುಣ್ಯವೇ ಎನ್ನ ಕಾಯ್ವ ದೈವವು...
#ಹೆಗ್ಗಣ_ಮುದ್ದು...

ದೇವನೆಂಬುವನಿದ್ದು ಅವ ಮುನಿದು ನಿಂತರೂ ಎದುರು ಸೆಟೆದು ನಿಂತೇನು ಚೂರೂ ಭಯವಿಲ್ಲದೆ...
ಆದರೆ,
ಅವಳ ಕಣ್ಣಂಚು ತುಂಬಿಕೊಂಡ ಎಲ್ಲ ಘಳಿಗೆಯಲೂ ದೊಡ್ಡ ನಗೆಯ ಮಗ್ಗುಲಲ್ಲೇ ಇಂಚಿಂಚು ಸತ್ತಿದ್ದೇನೆ ಒಳಗೊಳಗೇ...
#ನನ್ನ_ಕಣ್ಣಲ್ಲಿ_ನಾ_ಸಾಯೋ_ಸಂಜೆಗಳು...

ಆಜನ್ಮ ಅವಿವಾಹಿತರಾಗಿರೋ ಲಾಭ ಅಂದ್ರೆ, ಹುಟ್ದಬ್ಬದ್ ದಿನದ ಹೊರತು ಬೇರ್ಯಾವಾಗ್ಲೂ ವಯಸ್ಸಾಗೋತೂ ಹೇಳು ಚಿಂತೆ ಕಾಡದೇ ಇಪ್ಪುದು.‌‌..
#ಮಜವಾದ_ಸತ್ಯ...
#ಜ್ಞಾನೋದಯ...

ಎದೆಬಿರಿಯೆ ನಕ್ಕ ಮರುಘಳಿಗೆ ಅದೇ ಹಳೆಯ ನೋವು ಹೊಸದಾಗಿ ಪರಿಚಯಿಸಿಕೊಳ್ಳುತ್ತೆ ಎದೆಯ - ಗಂಟಿಗೊಂದು ಗೆಲ್ಲುಗಳಾಗಿ ಟಿಸಿಲೊಡೆದು...
ಕಾರಣ,
ನಗೆಯ ಬೆಳಕಲ್ಲಿ ವಿಷಾದದ ಎಲ್ಲಾ ಮಗ್ಗುಲುಗಳೂ ಇನ್ನಷ್ಟು ಸ್ಪಷ್ಟಗೋಚರವಾಗಿ ಎದ್ದು ನಿಲ್ಲುತ್ತವೆ - ರಕ್ತಬೀಜಾಸುರ ಬಲಪಡೆದು...
#ಜನುಮಕ್ಕಂಟಿದ_ರಾಗ...

ಯಾವ ಋತು ರಾಗವೂ ಜೀವತುಂಬದ, ಸಾವೂ ಮೂಸಿ ನೋಡದ ಹಪ್ಪು ಸ್ತಬ್ಧತೆಯ ಒಂಟೊಂಟಿ ಹಾದಿ...
ಎದೆಯ ಹಾಡಿಯ ತುಂಬಾ ಅಂಡಲೆಯುವ ಅತೃಪ್ತ ಆಸೆಗಳ ಕೊಳ್ಳಿ ದೆವ್ವಗಳು...
ಗೊಬ್ಬು ಮಣ್ಣು, ಅಬ್ಬೆ ಮಳೆಗೂ ಜೊಳ್ಳು ಕಾಳು ಚಿಗುರುವುದಿಲ್ಲ... 
ಕೆಲ ಬದುಕುಗಳೂ ಹಾಗೇನೇ...
ಮುಫತ್ತು ಹಳವಂಡಗಳ ಗಾಯಗಳು ಉಳಿಸಿ ಹೋದ ಗೀರು ಗೀರು ಗುರುತುಗಳಷ್ಟೇ ಸ್ವಂತ ಸ್ವಂತ ಅಲ್ಲಿ...
#ನಾ_ಯಾರಿಗಾದೆನೋ...

ಜೋರು ಉರಿವ ದೀಪದಲ್ಲಿ ಫಟ್ಟನೆ ನಂದುವ ದೊಡ್ಡ ಆಸೆ ಮತ್ತು ಸಣ್ಣ ಭೀತಿ...
#ನನ್ನ_ನಗು_ಮತ್ತು_ನಾನು...

ಬಂದದ್ದು ನನ್ನ ಆಯ್ಕೆಯಲ್ಲ - ಹೋಗೋ ದಾರಿ ಗೊತ್ತೇ ಇಲ್ಲ - ಇದ್ದಲ್ಲೇ ಇದ್ದಂತೇ ಇದ್ದು ಕೊಳೆಯೋ ಜಂತು ಜೀವ...
#ನಾನು...

ಆಯ್ಕೆಗಳ ಕೊಡಲೀ ಎಂಬ ಆಶೆಬುರುಕ ಹಂಬಲದಲ್ಲಿ ಕೈಚಾಚ್ತೇನೆ...
ಆಯ್ಕೊಂಡ್ ತಿನ್ನೋಲೇ ತಿರಬೋಕಿ ನನ್ಮಗನೇ ಅಂತಂದು ಗಹಗಹಿಸುತ್ತೆ ಬದುಕು...
#ಕಿಲುಬ್ಹಿಡಿದ_ಹಾದಿ...

ಇಲ್ಲಿ ಆನೆಂಬ ಸುಳ್ಳಿಗೆ ಮಿಗಿಲಿಲ್ಲ.‌..
ನಗುನಗುತ್ತಾ ಅಳುತ್ತಳುತ್ತಾ ಮಿಡಿಯುವ ಗುಡುಗುವ ಆನೆಂಬ ಸುಳ್ಳಿಗೆ ಮಿಗಿಲೇನಿಲ್ಲ.‌..
#ನಡಿಗೆ...

ಬದುಕು ತುಂಬಿಕೊಂಡಿರುವಾಗ ಉದ್ದೇಶ ರಹಿತ ನಡಿಗೆ ಒಂದು ಚಂದ ಕನಸು...
ಬದುಕಿಗೇ ಒಂದು ಉದ್ದೇಶವಿಲ್ಲದಾದಾಗ ನಗೆಯ ಮುಖಮುರಿಯೋ ಖಾಲಿತನದಲ್ಲಿ ಕುದಿಯುತ್ತಾ ನಡಿಗೆಯನೇ ನಿರಾಕರಿಸುವ ಸೂಕ್ಷ್ಮ ಮನಸು...
ಹಳೆಯ ನೋವುಗಳೆಲ್ಲಾ ಹಪ್ಪು ಹಿಡಿದಿವೆ...
ಜೊತೆ ನಡೆಯೋಕೆ ಹೊಸತೊಂದು ನೋವಾದರೂ ಬೇಡವಾ...
ಸಂಜೆಗಳು ಖಾಲಿಖಾಲಿಯಾದರೆ ಇರುಳಿಗೆ ಹೊಚ್ಚಿಕೊಳ್ಳಲು ಬರೀ ಕತ್ತಲಷ್ಟೇ ಉಳಿದುಬಿಡುತ್ತೆ...
ಹಾಗೆಂದೇ -
ಖಾಲಿಯನ್ನು ತುಂಬಿಕೊಳ್ಳುತ್ತೇನೆಂದೇ ಹೊರಡುತ್ತೇನೆ ಪ್ರತಿ ಬಾರಿಯೂ ಹೊಸತೇ ಅನ್ನಿಸೋ ಹುಚ್ಚಾಟದ ಹಾದಿಯಲ್ಲಿ...
ಪ್ರಾರಬ್ಧ ನೋಡಿ, ಮತ್ತದೇ ಖಾಲಿಯೆಡೆಗೇ ನಡೆದಿರುತ್ತೇನೆ ನೆನಪಿಂದ ಹಿಂತಿರುಗಲರಿಯದ ದಾರಿಯಲ್ಲಿ...
#ಬರೀ_ಸುಸ್ತೊಂದೇ_ಗಳಿಕೆ...

ತುಂಬಿಕೊಳ್ಳಲೇನೂ ಇಲ್ಲ ಇಲ್ಲಿ...
ಖಾಲಿಯಾಗುತ್ತಾ ಖಾಲಿಯೆಡೆಗೇ ನಡೆಯುವುದು...
ಖಾಲೀ ಕೈಯ್ಯ ಕೋಲೆ ಬಸವ ನಾನು...
ಒಂದೊಂದೇ ಒಂದೊಂದೇ ನಿನ್ನೆಗಳನು ಕಳಚಿಕೊಳ್ಳುತ್ತಾ, ಅಳಿಸಿ ಹಾಕುತ್ತಾ ಇಷ್ಟಿಷ್ಟಾಗಿ ನಾನೂ ಅಳಿದು ಹೋಗುವ, ಸಾಲದ ನಾಳೆಗಳಿಗಾಗಿ ಚಡಪಡಿಸೋ ಉದ್ರಿಕ್ತ ಪ್ರಕ್ರಿಯೆ - ಬದುಕೂ ಸುರತದಂತೆಯೇ ಅಥವಾ ನಿರಂತರ ಸುರತವೇ...
ಹುಣ್ಣಿಮೆಗೆ ಬೆಳುದಿಂಗಳಾಗಿ ಅರಳಿ ಅಮಾವಾಸ್ಯೆಯ ಹೊತ್ತಿಗೆ ಕತ್ತಲೇ ಆಗುವ ಚಂದಿರ - ಅಂತೆಯೇ ಅದೇ ಕತ್ತಲ ಕುಹರದಲೇ ಶಕ್ತಿಯ ತುಂಬಿಕೊಂಡು ಮತ್ತೆ ಆವರ್ತನ...
ಆದರೂ,
ಬದುಕು ಎಷ್ಟೊಳ್ಳೆ ತಾಯ್ಮನದ ಮೇಷ್ಟ್ರು...
ನಿರಂತರ ಸೊನ್ನೆ ಸುತ್ತೋ ನನ್ನಂಥ ಖಡ್ಡ ಮತ್ತು ದಡ್ಡ ಖುಮಾಂಡುವಿಗೂ ತನ್ನಂಗಳದಿ ಆಡಲು ಬಿಡುತ್ತೆ...!!!

ಅವಳು ಅಳು ನುಂಗಿ ಬದುಕ ಊಳುತ್ತಾಳೆ - ಆ ಹೋಳಿಯಲ್ಲಿ ನಾನು ನಗೆಯ ಬಿತ್ತಿಕೊಳ್ಳುತ್ತೇನೆ...
ನೆಲದ ಎದೆ ಬಿರಿಯದೇ ಹಸಿರಿಗೆ ಉಸಿರೆಲ್ಲಿಂದ...
ನಿತ್ಯ ಬಸಿರ ಧರಿಸಿ, ನೋವ ಭರಿಸುವ ಮಣ್ಣಾಳದ ಬೇರಿನ ಶಕ್ತಿಯಲ್ಲಲ್ಲವಾ ಎಲೆಯ ಅಸ್ತಿತ್ವ...
#ಅವಳ_ಗರ್ಭದ_ನಾಡಿ_ನನ್ನ_ಉಸಿರ_ನೆಲೆ...

ಏನೋ ಬೇಕಿದೆ - ಏನೆಂದು ಹುಡುಕಬೇಕಿದೆ...
ಹುದುಗಿರುವ ಒಳ ಹುಯಿಲಿನ ಹೊರೆ ಇಳಿಸಲು...
ನೋವಿನ ಹಾದಿಯ ಕಾಯುವ ಸಾವು - ಸಾವಿನ ಬೇಲಿಗೆ ಹಬ್ಬಿದ ಬಾಳ ಬೀಳು...
ನಿನ್ನಲ್ಲಿ ಅಲೆಯಬೇಕು - ನನ್ನನ್ನು ಕಡೆಯಬೇಕು...
ಇನ್ನೂ ಏನೋ ಪಡೆಯಬೇಕಿದೆ ಮತ್ತದು ಏನೆಂದು ಹುಡುಕಬೇಕಿದೆ...
#ಎಲ್ಲಿಂದ_ಹೇಗೆ_ಯಾವ_ಹಾದಿ...

ಉಮ್ಮಳಿಸುವ ಎದೆಯಿಂದ ನಗೆಯ ಹಿಕ್ಕೆಯ ಹೆಕ್ಕಿ ಹೆಕ್ಕಿ ತಂದು ಜಗಕೆ ಮಾರುವ ಅಜೀಬು ದರ್ದಿನ ದಿನ ಸಂಜೆಗಳು...
ಇರುಳ ಗೂಡಿನಲ್ಲಾದರೂ ಕಣ್ಣ ನೆಲಕೆ ತಾ ಹಸಿಯಾಗಿ ನಿಸೂರಾಗಲು ಬಿಡದ ಗಂಡು ಬಂಡೆತನ...!!
ಕಣ್ಣ ಬೆಳಕಿನಾಚೆಯ ದಾಟು ಬಳ್ಳಿಯ ದಾಟಿ ಬದುಕ ಹಾದಿಯನೇ ಮರೆತವನು...
ಹಂಗಂಗೇ ಫಾಲ್ತು ಫಾಲ್ತು ಮೂರೂ ಮುಕ್ಕಾಲು ದಶಕ...
ಸೋತ ಕಥೆಗಳನೇ ಗೆದ್ದ ಧಾಟಿಯಲಿ ಹಾಡುತ್ತ ನಿನ್ನೆಗಳ ತೆವಳಿದ್ದು...
ಕನಸೇ - ನೀನಿಲ್ಲದೇ, ನಿನ್ನ ಕನಸೂ ಇಲ್ಲದೇ ಇನ್ನೆಷ್ಟು ಹಾದಿಯೋ...
ಕರೆಯಬೇಕಾದವನು ಹೆಸರ ಮರೆತಂತಿದೆ......
#ಆಯಸ್ಸು...

ಉಪಸಂಹಾರ:

ಬೆಳಕಲ್ಲಿ ಎಡಗೈಯ್ಯಲಿ ಎಲ್ಲೋ ಎಡ್ಡಕ್ಕೆತ್ತಿಟ್ಟು ಮರೆತ ಬೆಂಕಿಪೊಟ್ಣವ ಕತ್ತಲಲಿ ಹುಡುಕುತ್ತಾ ಹುಡುಕುತ್ತಾ ಕಳೆದೇ ಹೋಗಿದ್ದೇನೆ - ನನ್ನ(ನ್ನೆ)ದೇ ಮನೆಯಲ್ಲಿ...
ಸರಬರನೆ ಒಳ ಹೊರಗಾಡುವ ಎದೆ ನೋವ ನಿಟ್ಟುಸಿರ ಭೋರು ಗಾಳಿಗೆ ಆರಿ ಹೋದ ನಗೆಯ ನಂದಾದೀಪವ ಮತ್ತೆ ಹಚ್ಚಬೇಕು - ನನಗೆ ನನ್ನ ಮತ್ತೆ ಪರಿಚಯಿಸಿಕೊಳ್ಳಬೇಕು...
#ಈ_ಹೊತ್ತಿನ_ಜರೂರತ್ತು...

ಕಣ್ಣ ಪರಿಧಿಯಾಚೆ ಎಲ್ಲಾ ಹಾದಿಗೂ ಕತ್ತಲೇ ಅಂಟಿಕೊಂಡಿರತ್ತೆ...
ಎದೆಯಲಿಷ್ಟು ಬೆಳಕಿದ್ದು ಅದರ ಕಣ್ಣಿ ಕಳಚಿದ್ದರೆ ಕಣ್ಣ ಹರಹಿನಾಚೆಯೂ ಬೆಳಕ ಕಾಣಬಹುದು ಅಥವಾ ಕಲ್ಪಿಸಬಹುದು...
ಮಣ್ಣ ಹೀರಿ ಬೇರು ಬಲಿತಾಗಲೇ ಹಸಿರಿಗೆ ಬೆಳಕ ಸೀಳಿ ಆಗಸಕೆ ಬೆಳೆವ ಶಕ್ತಿ...
ಹುಟ್ಟು ಹಬ್ಬವಾಗಬೇಕೆಂಬ ಬದುಕಿನ ಮಧ್ಯ ಯುಗದ ಗುಟ್ಟಾದ ಆಸೆಯೊಂದಿದೆ - ನಿನ್ನೆ ನಾಳೆಗಳೆಲ್ಲ ಸಂಭ್ರಮಗಳಾಗಿ, ಬಾಳ ತೇರಿನ ಉತ್ಸವವಾಗಲಿ ಎಂಬ ಕಳ್ಳ ಒಳ ಬಯಕೆ...
ಅದಕೆಂದೇ -
ಎನ್ನಂತರಾತ್ಮನ ಬೇರು ಗಟ್ಟಿಯಾಗಲಿ ಎಂದು ಬಯಸುತ್ತೇನೆ...
ನೋವ ಸೊಲ್ಲನು ಮೀರಿ ಬದುಕ ಬೆಳಕ ಕೊನೇಯ ಹನಿಯನೂ ಮೀಯಬೇಕು - ಜವನೂರ ಬಾಜಾರಿನಲ್ಲಿ ನಗೆಯ ಮುತ್ತು ರತ್ನಗಳ ಮಾರಬೇಕು...
ಹೀಗೇ, ಹಿಂಗಿಂಗೇ ಏನೇನೋ ಆಗಿ ನಾನು ನಾನಾಗಬೇಕು...
ಈ ಹುಟ್ಟು ಬದುಕಿನ ಪಾತಳಿಯಲ್ಲಿ ಹರಡಿ ಹಬ್ಬವಾಗಬೇಕು...
ಬದುಕ ಹಾಡು ಮುಗಿಯಬಾರದು ಬದುಕೇ ಮುಗಿದರೂ...

ವರ್ಷಗಳುರುಳುತ್ತವೆ - ವರ್ಷಗಳಷ್ಟೇ ಉರುಳುತ್ತವೆ...
ಹುಟ್ಟಿನ ತೇದಿಯ ಎಣಿಸಿದರೆ ಎದೆಯಲೊಂದು ವಿಚಿತ್ರ ಆಂದೋಲನ...
ನಿದ್ದೆ ತಿಳಿದೆದ್ದ ಮರು ಘಳಿಗೆ ಚಿರನಿದ್ರೆಯೇ ಇರಬಹುದು ಅನ್ನಿಸಿದರೆ ಬದುಕು ಸೋತಂತೆ ಲೆಕ್ಕವಾ...?
ಗೊತ್ತಿಲ್ಲ...
ನಿದ್ದೆಯ ನಶೆಯ ತಬ್ಬಿಯೇ ಈ ಉಸಿರ ಬಳ್ಳಿಗೆ ಭರ್ತಿ ಮೂವತ್ತರ ಮೇಲೆಂಟು ವಸಂತ...!!!
ಆ ಸಂಜೆಗಳ ಏರಿಗುಂಟ ಹಾಯ್ದು ಬರುವ ನೆನಪ ನೇವರಿಕೆಗಳೆಲ್ಲ ನಾ ಸಾಕಿಕೊಂಡ ಭಂಡ ನಗೆಯ ಭಂಟರೇ...
ನಾಳೆಗಳಲೂ ಉಳಿಯಲಿ, ಉಲಿಯುತಿರಲಿ ಆ ನಗೆಯ ಭಡವರೇ...
ನನಗೆ ನನ್ನದೇ ಶುಭ ಆಶಯವು...
ಶುಭಾಶಯವು...

ಪ್ರತೀಕ್ಷಾ - ಕಪ್ಪು ನೆಲ ನನಗಿತ್ತ ಹಸಿರು ಕನಸು...
ಕಪ್ಪು ಹುಡುಗಿ - ನನ್ನ ಕನಸಿನ ಕಪ್ಪು ನೆಲ...
#ನನ್ನದೆನಿಸದ_ನಾಳೆಗಳಿಗೂ_ನನ್ನ_ಕರೆಯುವ_ಕಳ್ಳ_ಕೊಂಡಿಗಳು...

ಎದೆ ಗುಡಿಯ ನಗೆಯ ನಂದಾದೀಪವ ಮತ್ತೆ ಹಚ್ಚಬೇಕು - ಹಚ್ಚಿಟ್ಟು ಕಾಯ್ದುಕೊಳ್ಳಬೇಕು...
ಅಷ್ಟೇ.......