Sunday, November 15, 2020

ಗೊಂಚಲು - ಮುನ್ನೂರೈವತ್ತು.....

ಮಳೆಮಿಡತೆ ನನ್ನ ಹಾಡು.....

ಚಿತ್ರ ಪಟ: ನನ್ನೂರ ಸಣ್ಣ ಝಲಕು...

ಹಗಲೂ, ಇರುಳೂ ಅವಳ ಉಡಿ ತುಂಬಿದ ಒಲವು...

ಚಂದಿರ ಅವಳ ಕಣ್ಣ ಬಿಂಬ -
ಇರುಳೆಂದರೆ ನಿದಿರೆ, ನಕ್ಷತ್ರ ಮಾಲೆ, ಬಾನ್ಬೆಳಕ ಕಡಲು, ಕನಸಿಳಿವ ಬೆರಗು, ಹೊಳೆಹೊಳೆವ ಬಾನ ನೀಲಿ ಕಣ್ಣು, ಇಳಿವ ತಾರೆಗಳ ಬೆಳಕಲ್ಲಿ ಭುವಿಯ ಸಾವಿರ ಬಣ್ಣಗಳ ಬಾಚಿ ತಬ್ಬಿದ ಕತ್ತಲ ಕಪ್ಪು ಕಾಡಿಗೆ ಮೆರಗು, ನಿದ್ದೆ ಮರುಳಿನ ಮಾತಿನಂತೆ ಎಲೆ ಎಲೆಗಳ ನಡುವಿಂದ ಕೋಕೋ ಆಡುವ ಗಾಳಿ ಗುಮ್ಮನ ಮೆಲುದನಿ, ನಿಶ್ಶಬ್ದದ ಎದೆಯ ತುಳಿದು ಬೆವರೋ ಮಾರ್ಜಾಲ ಮಿಥುನ ಕಾವ್ಯ, ಬೆಟ್ಟದಿಕ್ಕಟ್ಟಿನ ಬೆಲಗ ಹಾದಿಯಲಿ ಗಡಿಬಿಡಿಯಲಿ ಹರಿವ ನೀರ ದನಿಯಲಿ ವಿರಹ - ಶೃಂಗಾರದ ಮೇಘದೂತ...

ಸೂರ್ಯ ವಸುಧೆಯ ಹಣೆ ಬಿಂದಿ -
ಬೆಳಗಾಗುವುದೆಂದರೆ ಚಾಪೆ ಮಡಿಸುವ ಕತ್ತಲಿನ ಧಾವಂತ - ಕಣ್ಬಿಡುವ ಬೆಳಕ ಲಾಸ್ಯ - ಕಾಡು ಹೂವಿನ ಅಪರಂಜಿ ನಗು - ಹೆಸರ ಹಂಗಿಲ್ಲದ ಹಕ್ಕಿಗಳ ಕಿಲಿಕಿಲಿ ಸುಪ್ರಭಾತ - ಇಬ್ಬನಿ, ಮೋಡ ದಿಬ್ಬಣ ಸಾಲು - ಒಡಲುಕ್ಕಿ ಹರಿವ ಜೀವಜಲ ಜಂಝಾರವ - ದುಡಿವ ಜನಗಳ ರಟ್ಟೆಗಳಲಿ ರಚ್ಚೆ ಹಿಡಿದುಳಿದ ನಿನ್ನೆಯ ಚೂರು ಆಯಾಸ, ದುಪ್ಪಡಿ ಮುಸುಗಿನ ಸಣ್ಣ ಆಲಸ್ಯ - ಛಳಿಯ ಛವಿಯ ಕೊಡೆ ಅಡಿಯಲಿ ಹನಿ ಮೌನ ನಿಜ ಧ್ಯಾನ ಅಲ್ಲಿ - ಸದ್ದು ಸಡಗರದ ಸಲ್ಲಾಪದಲಿ ಅನಾಯಾಸದಲಿ ತನ್ನ ತಾನೇ ಆರೈಯ್ದುಕೊಳ್ಳುವ ಬೀಜ ಬಿಳಲು ಚಿಗುರು ಹಸಿರು ನಿತ್ಯ ವಸಂತದ ಘಮ್ಮನುಸಿರು...

ಮಾತಿಗೊಲಿಯದ ಅಲಂಕಾರ, ಆಡಿ ಮುಗಿಯದ ಅನುಭಾವದ ಭಾವ ಧ್ಯಾಸ ಅದು...
ಅವಳಾ ಕರುಳಾ ಬಿಳಲು ನಾನು - ಮಣ್ಣಾಗುವ ಮನ ಜೀವಂತ ಅವಳಾ ಮಡಿಲಲ್ಲಿ...
#ಮಲೆನಾಡು_ನನ್ನ_ಗೂಡು_ಮಳೆಮಿಡತೆ_ನನ್ನ_ಹಾಡು...
⇋↩↪⇌↱


ಚಿತ್ರ ಪಟ: ನನ್ನ ಕ್ಯಾಮೆರಾ ಕಣ್ಣಲ್ಲಿ ದೀಪಾವಳಿ...

ಉಸಿರ ಬತ್ತಿಗೆ ಪ್ರೀತಿ ಎಣ್ಣೆ ಸವರಿ

ಭರವಸೆಯ ಸಣ್ಣ ಕಿಡಿ ತಾಕಿಸಿ
ಗಾಳಿ ಮುಗುಳ ನೆಚ್ಚಿ ಮೆಚ್ಚಿ
ಜೀವ ಹಣತೆಯ ಹಿಡಿದು ನಿಂತೆ...
ಬೊಗಸೆಯೊಳಗೆ ನೆರಳನಿಟ್ಟು
ಬಯಲ ತುಳಿದ ಬೆಳಕ ಕಾಲು...
ಕತ್ತ(ಲ)ಲೂ ಕನಸಿಗೆ ಗಬ್ಬ ಕಟ್ಟಿ
ಎದೆಯ ಗರ್ಭದಿಂದೆದ್ದ ನಗೆಯ ಸೆಳಕೇ ಹಬ್ಬ...
ದೀಪ ಹಚ್ಚಬೇಕು ನಾನೂ - ಬೆಳಕ ಹಂಚುವ(ದೇ) ಹಬ್ಬ...
#ಶುಭವೊಂದೇ_ಆಶಯ...
                __ 14.11.2020 (ದೀಪಾವಳಿ)
⇋↩↪⇌↱

ಆತ್ಮದ ಬೆಳಕು ಸ್ವಾತಂತ್ರ್ಯ...
#ವಂದೇ_ಮಾತರಂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment