ಕೆಲವು ಸಲ ಬದುಕು ನಮ್ಮನ್ನ ತೀರಾ ತೀರಾ ಬರಿದು
ಮಾಡಿದಾಗ ಏನ್ ಮಾಡೋದು ಹೇಳು ಅಂತ ಕೇಳಿದ ಗೆಳತಿಗೆ : ಸುಮ್ಮನೇ ನಕ್ಕು ಬಿಡೋದು ಅಷ್ಟೇ; ದಕ್ಕಿದಾಗ
ದಕ್ಕಿದಷ್ಟನ್ನು ಹೀರಿಕೊಳ್ಳುತ್ತಾ - ಇಲ್ಲಿ ಬರಿದಾಗಿ ಇನ್ನೆಲ್ಲೋ ತುಂಬಿಕೊಳ್ಳೋ ಸುಳ್ಳು ಸುಳ್ಳೇ
ಭರವಸೆಯೊಂದಿಗೆ...ಹಾಗಂತ ಹೇಳಿದ್ದೆ.
ಸಾಯಲು ಬಿಡದ ನಲಿವು - ನಗುವ ಕೊಲ್ಲೋ ನೋವುಗಳು
- ಶಾಯಿ ಮುಗಿದ ಪೆನ್ನಲ್ಲಿ ಗೀಚಿ ಗೀಚಿ ಬರೆಯಲೆತ್ನಿಸೋ ನಾಕು ಸಾಲಿನಂಥ ನಿನ್ನೆ ಮತ್ತು ನಾಳೆಗಳ ನಡುವಿನ
ಇಂದೆಂಬ ಗೊಂದಲದಲ್ಲಿ ಜೀಕೋ ಪೊಳ್ಳು ಭರವಸೆಗಳ ಭಂಡ ಬಾಳು...
ನೋವ ಕಣ್ಣಿರು, ನಲಿವ ಪನ್ನೀರ ಅಷ್ಟಿಷ್ಟು ಬೆರೆಸಿ
ಮಾಡಿದ ಪಾನಕದಂತದ್ದು ಈ ಬದುಕು...
ಬೆರೆಸುವಾತನಿಗೆ ಹದ ತಪ್ಪಿತೇನೋ ಪಾನಕದ ರುಚಿ
ಇಷ್ಟೇ ಇಷ್ಟು ಹದಗೆಟ್ಟಿದೆ...
ಕಳೆದ ವರ್ಷಗಳ ಲೆಕ್ಕ ಸ್ಪಷ್ಟವಾಗಿ ಸಿಕ್ಕಿ ಭಯ
ಬೀಳುವ; ಇಷ್ಟು ಕಾಲ ಬಾಳಿಯೂ ತೃಪ್ತವಾಗದೇ ಇನ್ನಷ್ಟು ಕಾಲ ಬದುಕುಳಿವ ಬಯಕೆ ತುಂಬಿದ ದುರಾಸೆಯ ಮನಸು...
ಕಳೆದು ಹೋದ ಖುಷಿಗಳ, ಹೀಗೇ ಬದುಕಬೇಕೆಂದುಕೊಂಡು
ಹೇಗೆ ಹೇಗೋ ಬದುಕಿಬಿಟ್ಟ ನಿನ್ನೆಗಳ ಬಗೆಗಿನ ಬೇಸರವನ್ನು ಬರುವ ನಾಳೆಗಳು ಬರೀ ನಗೆಯನೇ ಹೊತ್ತು ತಂದಾವೆಂಬ
ಕನಸಲ್ಲಿ ಮರೆಯಲೆತ್ನಿಸುತ್ತಾ...
ರಾತ್ರಿಯ ಸ್ವಪ್ನದಲಿ ಕಣ್ಣ ಮಿಟುಕಿಸಿ ಕಚಗುಳಿ
ಇಡುವ ನನ್ನೊಲವ ಕಪ್ಪು ಹುಡುಗಿ ಹಗಲಲ್ಲಿ ನನಸಾಗಿ ಬದುಕ ಬೆಳಕಾಗಿ ನಗಲಾರಳು ಎಂಬುದು ಅಗತ್ಯಕ್ಕಿಂತ
ಹೆಚ್ಚಾಗಿ ಸ್ಪಷ್ಟವಿದ್ದರೂ ಆ ಬೆಳದಿಂಗಳ ನಗುವಿಗಾಗಿ ಮನದ ಕದದ ಬೀಗವ ಕಿತ್ತಿಟ್ಟು ಕೂತು ಕಾಯುತ್ತಾ...
ಪಡಕೊಂಡದ್ದೆಲ್ಲ ಕೊಟ್ಟವರ ಕರುಣೆಯ ಕರುಳ ಹಿರಿಮೆಯಿಂದ
ದಕ್ಕಿದ್ದು - ಕಳಕೊಂಡದ್ದು ಮಾತ್ರ ಸಂಪೂರ್ಣ ಸ್ವಯಂಕೃತ ಎಂಬುದು ಸ್ಪಷ್ಟವಾಗಿ ಮನಸಿಗೆ ಅರಿವಿದ್ದರೂ
ಎಲ್ಲಾ ನಾನೇ ಎಂಬ ಹುರುಳಿಲ್ಲದ ಕೊಬ್ಬಿನಿಂದ ಬೀಗುತ್ತಾ...
ಕಳೆದುಕೊಂಡದ್ದು,
ಪಡೆದುಕೊಂಡದ್ದು,
ಕಳೆದುಕೊಂಡೂ ಪಡೆದುಕೊಂಡೆನೆಂಬ ಭಾವ ಮೂಡಿಸಿದ್ದು,
ಪಡೆದುಕೊಂಡೂ ಕಳೆದುಕೊಂಡಂತೆ ಭಾಸವಾಗಿದ್ದು,
ಅರ್ಧ ದಕ್ಕಿದ್ದು,
ಬಾಕಿ ಉಳಿದದ್ದು,
ಆಸೆ - ನಿರಾಸೆಗಳ ಸಂಕಲನ - ವ್ಯವಕಲನಗಳ ಲೆಕ್ಕಾಚಾರದಲ್ಲಿ,
ಮುಗಿದ ನಿನ್ನೆ - ಕಾಣದ ನಾಳೆಗಳ ಗುಂಗಲ್ಲಿ ಇರುವ
ಇಂದನ್ನು ಮರೆಯುತ್ತಾ,
ಯಾವ ಕಾರಣದಿಂದ ಪ್ರೀತಿಸಿದೆನೋ - ಅವವೇ ಕಾರಣಗಳಿಗಾಗಿ ಅದರಿಂದ ದೂರ ಓಡುತ್ತಾ,
ಕಳೆದು ಹೋದ - ಅಂತೆಯೇ ಕಳೆದು ಹೋಗಬಹುದಾದ ಬದುಕ ಕ್ಷಣಗಳನ್ನು ಹಿಡಿದಿಡಲಾಗದೇ
ಬೆರಗಿನಿಂದ ನೋಡುತ್ತಾ...
ನಿಟ್ಟುಸಿರೊಂದಿಗೆ ಕರಗಿ ಹೋಯಿತು ಒಂದಷ್ಟು ಕಾಲ...
ಆದರೂ ಏನ್ ಗೊತ್ತಾ -
ಇಂತೆಲ್ಲ ಉಪದ್ವ್ಯಾಪಿತನಗಳಿಂದಾಗಿಯೇ ಏನೋ ಈ ಬದುಕ ಮೇಲೆ ತುಂಬಾ ಅಂದ್ರೆ ತುಂಬಾನೇ ಪ್ರೀತಿ ಮೂಡಿಬಿಡುತ್ತೆ...
ಒಂಥರಾssss ಒಲವು - ಅಪರಿಮಿತ ವ್ಯಾಮೋಹ...
ಅನ್ನಿಸುತ್ತೆ ಆಗಾಗ, ಬದುಕನ್ನು ಅದಿರುವಂತೆಯೇ - ಮೊದಲಿರುಳ ಉನ್ಮಾದದಲ್ಲಿ
ಅವಳನ್ನು ಆವರಿಸಿದಂತೆಯೇ - ಹಸಿ ಹಸಿಯಾಗಿ ಹಾಗೆ ಹಾಗೇ ಆವರಿಸಿ, ಆಲಂಗಿಸಿ, ಆಸ್ವಾದಿಸುತ್ತಾ - ಅಳಿವಿನಳುಕು
ಕೂಡ ಕಾಡದಂತೆ ಇನ್ನಿಲ್ಲದಂತೆ ಪ್ರೀತಿಸುತ್ತಾ - ಪ್ರೀತಿಸುತ್ತಲೇ - ಮತ್ತ ಪ್ರೀತಿಯಿಂದಲೇ ಕೊನೆಗೊಮ್ಮೆ
ಮುಗಿದು ಹೋಗಬೇಕು...
ಒಳಕೋಣೆಗೆ ಹೆಜ್ಜೆ ಇಡುವಾಗಿನ ತುಡಿತ, ಮಿಡಿತಗಳು ಅಲ್ಲಿಂದ ಎದ್ದು ಹೋಗುವಾಗಲೂ
ಇರುವಂತೆ ಮನಸನ್ನು ಅಣಿಗೊಳಿಸಿಕೊಳ್ಳಬೇಕು...
ಹುಟ್ಟಿನಲ್ಲಿನ ಖುಷಿಯನ್ನೇ ಸಾವಿನಲ್ಲೂ ಸಾಧಿಸಲು ಸಾಧ್ಯವಾದೀತಾ ನನ್ನಿಂದ
ಅನ್ನೋದು ಸದಾ ಕಾಡೋ ಸಾವಿರ ಸಾವಿರ ಡಾಲರ್ ಪ್ರಶ್ನೆ... :)
ಹಾಂ! ಹೇಳೋಕೆ ಮರೆತಿದ್ದೆ
- ಇಂದಿನ ವಿಶೇಷ ಏನು ಗೊತ್ತಾ :
ಈಗೊಂದಿಷ್ಟು ಸಂವತ್ಸರಗಳ ಹಿಂದೆ ಇಂಥದೇ ಒಂದು ಆಗಸ್ಟ್ ತಿಂಗಳ ಮೊದಲ ದಿನದ
ಮುಂಬೆಳಗಿನಲ್ಲಿ ಈ ಬದುಕಿನೊಂದಿಗೆ ಬಂಧ ಬೆಸೆದುಕೊಂಡು - ಅಳುವ ಮುದ್ರೆಯ ಮೂಲಕ ಚಿತ್ರಗುಪ್ತನ ಖಾತೆ
ಪುಸ್ತಕದಲ್ಲಿ ಮೊದಲ ಹಾಜರಿ ಹಾಕಿದ್ದೆ...:)
ನೋವು ಕಾಡಲಿ ಬೇಸರವೇನಿಲ್ಲ - ಜೊತೆಗೆ ಒಂದಿಷ್ಟು ನಲಿವೂ ಉಲಿಯಲಿ - ನಗುವಿನಾಸೆಯಲಿ
ಭರವಸೆಯ ಬೆಳಕ ಹಾಡೊಂದು ಮೂಡಲಿ...
ಜಾರದಿರಲಿ ಕಣ್ಣ ಹನಿಯು ನೋವ ಬಾಧೆಗೆ - ಹನಿಯುತಿರಲಿ ಸದಾ ಕಣ್ಣು ನಲಿವ ಸೋನೆಗೆ...
ನೋವಲೂ ನಗಬಲ್ಲ - ನಗುವಲ್ಲಿ
ನಾನೆಂಬ ಅಹಂನಿಂದ ಬೀಗದಿರಬಲ್ಲ - ನನ್ನ ನಾನೇ ಸಲಹಿಕೊಳ್ಳಬಲ್ಲ ಒಂಚೂರು ಚೈತನ್ಯ ನನ್ನೊಳಗನ್ನು ತುಂಬಿ
ನನ್ನ ಬಾಕಿ ಇರುವ ದಿನಗಳ ಬೆಳಗಲಿ...
ಹಾಗಂತ ನಂಗೆ ನಾನೇ ಶುಭಕೋರಿಕೊಳ್ಳುತ್ತಿದ್ದೇನೆ...:) :)
ಒಂದಿಷ್ಟು ನಗುವ ಉಸಿರಾಡುವ ಬಯಕೆಯ ನಾಳೆಗಳ ಹಾಜರಿಗೆ ನಿಮ್ಮದೂ ಪ್ರೀತಿಯ
ಹಾರೈಕೆಯಿರಲಿ...:) :) :)