Wednesday, December 14, 2022

ಗೊಂಚಲು - ಮುನ್ನೂರ್ತೊಂಭತ್ತೇಳು.....

ಕತ್ತಲಿನ ನಕಲು ನಾನು.....

ಬೆಳಗು ಬಾ ಬೆಳಕೇ ಅಡಿಯಿಟ್ಟು ಎದೆಗೆ - ಧಾರೆ ಧಾರೆ ಮಮತೆಯನುಣಿಸೋ ಆಯಿಯಾ ನಗೆ ಗಂಗೆಯಂತೆ...
____ ಗ್ರಹಣ ಕಳೆಯಲಿ...
___ 25.10.2022

ಇಕ್ಕೇರಿ ದೇವಳ-ನನ್ನ ಕ್ಯಾಮರಾ ಕಣ್ಣು...

ಎದೆಯ ಬೆಳಕು ನಗೆಯಾಗಿ ಬಯಲಿಗೆ ಚಿಮ್ಮಿ, 
ಬಯಲ ಹೊನಲು ಎದೆಯ ಪದವಾಗಿ ಹೊಮ್ಮಿ,
ಬೆಳಕು ಬೆಳಕನು ಸಂಧಿಸುವ ಧ್ಯಾನ ದೀಪೋತ್ಸವ...
___ ಬದುಕು ಬೆಳಕಿನ ಹಬ್ಬ..‌.
____ 25.10.2022
💫💫💫

ಮಂದಹಾಸ - 
ಮಗುವೊಂದು ಜಿಗಿಜಿಗಿದು ದೇವಳದ ದೊಡ್ಡ ಘಂಟೆ ಬಾರಿಸುವಾಗ ಗರ್ಭ ಗುಡಿಯ ನಂದಾದೀಪ ರೆಕ್ಕೆ ಬಡಿದಂತೆ, 
ಪ್ರಾರ್ಥನೆ -
ಒಳ ಮನೆಯಲಿ ಅಮ್ಮ ಮಂಗಳ ಪದ ಹಾಡಿದಂತೆ,
ಉಲ್ಲಾಸ -
ಗರಿಕೆ ಅಂಚಿನ ಇಬ್ಬನಿಯ ಹನಿಯೊಂದು ತುಂಟ ಇರುವೆಯ ಕನ್ನಡಿಯಾದಂತೆ,
ಶೃಂಗಾರ -
ನೂರು ಪಲ್ಲವಗಳ ಹೊಮ್ಮಿಸೋ ನನ್ನುಸಿರ ತಿಲ್ಲಾನಗಳಿಗೆಲ್ಲ ಅವಳ ಹೆಸರಿಟ್ಟಂತೆ,
ಧಾವಂತ -
ಅಜ್ಜಿ‌ಯ ಕನಸಲ್ಲಿ ಮೊಮ್ಮಗಳು ಮೈನೆರೆದಂತೆ,
ಪ್ರಸವ -
ನವಿರು ಕವಿತೆಯ ಹುಟ್ಟು; ಎದೆಗಂಟಿದ ಒಲವ ಗಂಧ...
____ ನಿನ್ನೊಳಗೆ/ನಿನ್ನೊಡನೆ ಮುಂದುವರಿಯಲಿ...
💫💫💫

ಬದುಕೇ ಬರೆಸುತ್ತ(ತ್ತಿ)ದೆ...
___ ಓದಿಕೊಳ್ಳಬೇಕು ಮತ್ತು ಓದಿಕೊಂಡರೂ ಸಾಕು ನನ್ನ ನಾನು...
💫💫💫

ಏಯ್ ಮುದ್ಕನಂತವ್ನೇ - 
ಸತ್ರೆ ನಷ್ಟ ಅನ್ನೋಕೂ ಯಾರೊಬ್ರಿಗೂ ಲಾಭ ಆಗೋ ಹಂಗೆ ಬದ್ಕಿದ್ದಿಲ್ಲ, 
ಬಿಟ್ಟೋಗೋಕೆ ಅಂಟಿಕೊಂಡದ್ದು ಅಂತ ಒಬ್ರೂ ಹಿಂದಿಲ್ಲ ಮುಂದಿಲ್ಲ, 
ನೀನ್ಯಾವ್ ಸೀಮೆ ದೊಣ್ಣೆ ನಾಯಕನೋ!! 
ನಿನಗದ್ಯಾವ ದರ್ದು!! 
ಹಂಗಂತ ನಾ ಹಾಯ್ದ ಬದುಕೇ ನನ್ನ ಅಣಕಿಸುವಾಗ ಹುಟ್ಟುತ್ತಲ್ಲ ಒಂದು ಶಾಂತ ಭಂಡತನ,
ಆ ಭಂಡ ನಗುವನ್ನು ನಾನು ಮನಸಾರೆ ಜೀವಿಸಬೇಕೀಗ...
____ ಎನ್ನ ಆನೇ ಆಳಬೇಕು...
💫💫💫

ನನ್ನೊಳಗಿನ ಆ ಕಂಪನವ ನಾನೇ ಧಿಕ್ಕರಿಸಿದೆ, ಅದೆಲ್ಲ ಸುಳ್ಳೆಂದು ನನ್ನೇ ನಾ ನಂಬಿಸಿಕೊಂಡೆ...
ನಿನ್ನೆಡೆಗಿನ ಬಿಸುಪು ತನ್ನಿಂತಾನೇ ಇಳಿಯುತ್ತಾ ಹೋಯ್ತು, ಮತ್ತದು ನಿಂಗೂನು ಗೊತ್ತಾಯ್ತು ನೋಡು...
ಮತ್ತೀಗ ಉಳಿದದ್ದು ನಾವೇ ಕಾವು ಕೊಟ್ಟು ಬೆಳೆಸಿದ ಮುಗುಮ್ಮಾಗಿ ಕಳೆದೋಗುವ ಶೀತಲ ದಿನ ರಾತ್ರಿಗಳು...
ಇನ್ನು ನೀ ನನ್ನ ಮರೆತೆ ಎಂದು ನಾ ನಿನ್ನ ದೂರಬಹುದು ಮತ್ತು ನಿನ್ನ ಎಂದಿನ ತಣ್ಣನೆಯ ನಗು ಅಷ್ಟೇ ತಣ್ಣಗೆ ನನ್ನ ಇರಿಯಬಹುದು...
____ ಮಿಡಿವ ಮೈತ್ರಿಯ ನಡುವೆ ಒಡನಾಡುವ (ಒಡೆದಾಡುವ) ಮೌನ...
💫💫💫

ಹಲವೊಮ್ಮೆ ಕವಿಯ ನೋವೂ ಕೋಗಿಲೆಯ ಅಳುವಿನಂತೆಯೇ...
____ 'ಶಬ್ದ' ತೀರದ ಸೋಲೋ ಗೆಲುವೋ...?!
💫💫💫

ತೇರು ಮುಗಿದ ಮೇಲಿನ ನಡು ರಾತ್ರಿ ಊರು ಅಲೆಯಬೇಕು...
ಸುಸ್ತಾದ ದಾರಿ ದಿರಿಸು ಬದುಕಿನ ದೊಡ್ಡ ವೇದಾಂತ...
____ ಏಕಾಂಗಿಯ ಪಿಸುಮಾತು...
💫💫💫

ಹೇ ಇವಳೇ -
ಹೇಳಿಕೊಳ್ಳಲು ಇತಿಹಾಸವಿಲ್ಲದವನ,
ಹಂಚಿಕೊಳ್ಳಲು ಕನಸುಗಳೇ ಹುಟ್ಟದವನ,
ವರ್ತಮಾನ‌ದ ಬೆರಗುಗಳ ಬೆರಳು ಹಿಡಿದು ಬಿಂಕದಲಿ ನಡೆವ ಅಪರಿಚಿತ ಬೆಳಕಾಗಬಲ್ಲೆಯಾ ನೀನು...!?
____ ಕತ್ತಲಿನ ನಕಲು ನಾನು...
💫💫💫

ಉಫ್...
"ಸತ್ತ ಹೆಣಕ್ಕೆ ಹೆಗಲು ಕೊಟ್ಟಷ್ಟು ಸುಲಭವಲ್ಲ ನೋಡು ಬದುಕಿನ ನೋವಿಗೆ ಹೆಗಲಾಗಿ ನಿಲ್ಲುವುದು..."
___ ಎದೆಯ ಗಾಯದ ಕಮಟು ಉಸಿರಿಂದ ಬಯಲ ಸೇರಿ ಮತ್ತೆ ಉಸಿರಿಂದ‌ ಎದೆಗೇ ಬಂದು ಕೂತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತಾರು.....

ಶ್ರದ್ಧಾಂಜಲಿ ಸಭೆಯ ಕೊನೆಯ ನಿಟ್ಟುಸಿರು.....

ಇಲ್ಲೇ ಎಲ್ಲೋ ಚೆಲ್ಲಿ ಬಿದ್ದ ನಿನ್ನ ಮುಡಿಯ ಹೂವುಗಳು...
ಕರುಳ ಕಡೆದು ಕಣ್ಣಲ್ಲಿ ತುಳುಕೋ ಆ ಅದೇ ನೆನಪುಗಳು...

ಊರೆಲ್ಲಾ ಮಲಗಿದ ಮೇಲೆ ಹಾದಿ ಸೃವಿಸುವ ಮೌನದಲಿ ನಿನ್ನ ಹುಡುತ್ತೇನೆ ಅಥವಾ ಹುಡುಕದೆಯೂ ನಿನ್ನೇ ಕಾಣುತ್ತೇನೆ
ಮತ್ತು
ಎದೆಯಿಂದ ಉಕ್ಕುವ ಬಿಕ್ಕಿನ ಹನಿಗಳ ಗಂಟಲಲ್ಲೇ ಒಣ ಹಾಕುತ್ತೇನೆ...

ಅಡುಗೆ ಬರತ್ತೆ ನಂಗೆ ಆದ್ರೂ ಸಣ್ಣ ಹಸಿವಿಗೂ ನೀನೇ ಯಾಕೆ ನೆನಪಾಗಬೇಕು...!!!

ನಿನ್ನ ದೇವರ ಧಿಕ್ಕರಿಸಬಲ್ಲೆ - ನಿನ್ನ ಕಣ್ಣಂಕೆಯ ಭಯ, ಅಭಯವ ನೀನಿಲ್ಲದೂರಲ್ಲೂ ಮೀರಲಾಗದು ನೋಡು...

ಎಂಥದ್ದೇ ಪಾಡಿನಲ್ಲೂ ಜಗದೆದುರು ನನ್ನ ಬಿಟ್ಟುಕೊಡದವಳು - ಯಮನೆದುರು ಅಷ್ಟು ಸರಾಗ ಉಸಿರು ಚೆಲ್ಲಿದ್ದು ಹೇಗೆ...?!

ನಿನ್ನ ಸೆರಗಿನ ನೆರಳಲಿದ್ದ ತಂಪು ಖುಷಿಯನಷ್ಟೇ ನೆನೆನೆನೆದು ನಗುವೆನೆಂದು ಕಣ್ಮುಚ್ಚುತ್ತೇನೆ - ಆದರೇನು ಮಾಡಲಿ ಎದೆಯ ರೆಪ್ಪೆಯೊಳಗಿನ ನಿನ್ನ ಚಿತೆಯ ಬಿಸಿ ಆರಿಯೇ ಇಲ್ಲ...

ಭಾವದ ಗುಡಿಯ ಅಧಿದೇವತೆ‌ಯೇ -
ನೆನಪುಗಳ ಗುಡುಗುಡಿ‌ಯ ಸೇದಿ ಸೇದಿ ಕರುಳ ತಂತುಗಳ ಬೆಚ್ಚಗಿಟ್ಟುಕೊಂಬವನ ಕಾಡಂಚಿನ ಕನವರಿಕೆ‌ಗಳಲ್ಲಿ ಹುಟ್ಟುವ ಅನಿರ್ವಚನೀಯ ನಿರ್ವಚನ ನೀನು...
😞😞😞

ಹಸಿದ ಹೊಟ್ಟೆಗೆ, ಬಿರುಕು ಎದೆಗೆ ಪ್ರೀತಿಯಿಂದ ತುತ್ತನಿಟ್ಟ ಕೈಗಳಲೆಲ್ಲ ಅಮ್ಮನೇ ಅಮ್ಮ...
_____ ಆಯಿಯಂದಿರ ದಿನವಂತೆ... 💞😘🥰
😞😞😞

ಬಿಸಿ ಉಸಿರನು ನುಂಗಿದ ಸಾವು ಎಷ್ಟು ತಣ್ಣಗಿದೆ...
😞😞😞

ಎದೆಯ ಒದ್ದ ನೋವನೆಲ್ಲ ಸುಖಿಸಿ ಸುಖಿಸಿ ಕೊಂದದ್ದಾಯಿತು...
ಜೊತಗೇ 'ನಾನೂ' ಸತ್ತುದಾಯಿತು...
ಅಷ್ಟಾಗಿಯೂ/ಅಷ್ಟಾದ ಮೇಲೆ ಇನ್ನೂ ಉಳಿಸಿಕೊಂಡಿರಬಹುದಾದ ತುಂಡು ನಗುವಿಗೂ ಸುಂಕ ಕೇಳಬೇಡ ಬದುಕೇ - ನಿನ್ನ ಉರಿ ಉರಿ ಬಣ್ಣದ ಬೆಳಕಿಗೆ ಸೋತು ರೆಕ್ಕೆಯ ಅಡವಿಟ್ಟವ ನಾನು...
___ ಹಾವು ಹೆಡೆ ಬಿಚ್ಚಿ ಕಪ್ಪೆಗೆ ನೆರಳ ನೀಡಿದಂತೆ ಈ ಸಾ(ನೋ)ವು ಬದುಕಿನ ಆಟ...
😞😞😞

ಶ್ರೀ
ಅರ್ಥಾರ್ಥಗಳನಾಚೆ ದೂಡಿ ಅಂತರಂಗದಾ ನಗೆಯೊಂದನೇ ಕಾಣೋ - ಈ ಬದುಕಿದು ಯಮನ ಸ್ವಾರ್ಥದಾ ಬಿಸಿ ಊಟ ಕಣೋ...
ಎಷ್ಟೆಲ್ಲಾ ಮಾತುಗಳು ಮರೆತೇ ಹೋಗಿವೆ...
ಕೊನೇಲಿ ಉಳಿಸಿ ಹೋದ ಈ ಮೌನ ಕೊರೆಯುತ್ತಲೇ ಇದೆ...
____ ಸಾವು..‌.

ಕೊನೆ ಕೊನೆಯ ದಿನಗಳ ಮತ್ತು ಕೊನೆ ಕೊನೆಯ ದಿನಗಳಲ್ಲಿ ನೆನಪುಗಳೇ ಹೆಚ್ಚು...
_____ ಕನಸು ಹುಟ್ಟದ ಖಾಲಿಯಲ್ಲಿ...

ಮಹಾ ವಾಚಾಳಿಯ ಎದೆಯ ದನಿಯನ್ನೂ ಕ್ರುದ್ಧ ಮೌನ ಮುಕ್ಕುತ್ತದೆ ಒಮ್ಮೊಮ್ಮೆ - ಹಾಗೆಂದೇ ಬದುಕಿದು ರುದ್ರ ರಮಣೀಯ...
____ ನನಗೆ ನನ್ನದೇ ಶ್ರದ್ಧಾಂಜಲಿ...

ಇನ್ನೂ ಸಾಯದೇ ಇರುವ ಹಸಿ ಸುಳ್ಳು 'ನಾನು...'
ನನ್ನ ನೆರಳಲ್ಲಿ ನೀನೆಂಬ ಸತ್ಯ ಭಾಗಶಃ ಬದುಕಿರುವುದಷ್ಟೇ...
____ ಶ್ರದ್ಧಾಂಜಲಿ ಸಭೆಯ ಕೊನೆಯ ನಿಟ್ಟುಸಿರು...

ಗೊಂಚಲು - ಮುನ್ನೂರ್ತೊಂಭತ್ತೈದು.....

ಹೃದಯದ ಜಾದೂ ನಿಲ್ಲುವ ತನಕ.....

ಎದೆ ಹೊಕ್ಕು ಕರುಳ ಬೆಚ್ಚಗಿಡುವ ಗಾಢ ನೆನಪಿನ ಕಾಡು ಪರಿಮಳ ನೀನು...
____ ಏಕತಾರಿಯ ತಂತಿ - ಒಲವ ಕಂಪಿನೊಡಲು...
😔😔😔

ಚಿತೆಯ ಮತ್ತೆ ತಿರುಗಿ ನೋಡಬೇಡ ಅಂದರು,
ಕಣ್ಕಟ್ಟಿಕೊಂಡವನಂತೆ ಪಾಲಿಸಿದೆ...
ಉರಿ ಕಣ್ಣಿಂದ ಎದೆಗಿಳಿಯಿತೇನೋ - ಸುಡುತ್ತಲೇ ಇದೆ ಇನ್ನೂನೂ ಕರುಳ ಕೋಶಗಳ...
ಜಗದ ಜಗಮಗಗಳ ನಡುವೆ ನಿನ್ನ ಮರೆಯಹೋದೆ - ಮರೆತ ಅಳುವೂ ಮತ್ತೆ ಮೊರೆವಂತೆ ಎದೆಯಾಳವ ನೀ ಇನ್ನಷ್ಟು ತುಂಬಿಕೊಂಡೆ ಮತ್ತು ಜಗವೇ ಜಡವಾಯಿತು ನೀನಿಲ್ಲದೆ...
ತಿರುಗಿ ನೋಡದೇ ಹೇಗಿರಲಿ! ಕರುಳ ಬಳ್ಳಿ ಬಿಗಿದು ಈ ಬದುಕ ತೂಗಿದ ತೊಟ್ಟಿಲ...
___ ನೆನಪಿಗೆ ನೂರು ನೆಪ...
😔😔😔

ಕ್ಷಣ ಕಣದ ನೆನಪುಗಳಿಂದ ಕದಲದವರನು ದಿನಗಳ ಎಣಿಸಿ ಸೂತಕ ಕಳೆಯಿತೆನ್ನುವುದಾದರೂ ಹೇಗೆ...!?
____ ನೀನಿಲ್ಲವಾ ಇಲ್ಲಿ...!?
😔😔😔

ಕೊಡಲಾಗದ ಪ್ರೀತಿಯಿಂದ, ಕೊಡಬೇಕಿದ್ದ ಪ್ರೀತಿಗಾಗಿ, ಆಡಬೇಕಿದ್ದ ಜಗಳವಿನ್ನೂ ಬಾಕಿ ಇರುವಾಗಲೇ ನೀನು ಹೇಳದೇ ಕೇಳದೇ ಹೊರಟು ಹೋದದ್ಯಾಕೆ...?
ಅಥವಾ ನನ್ನ ಜಾಣ ಕಿವುಡು ನಿನ್ನ ಮೆಲುದನಿಯ ಕೇಳಿಸಿಕೊಂಡಿಲ್ವಾ...?
ವಿದಾಯಕ್ಕಾದರೋ ಮರು ಭೇಟಿಯ ಸಣ್ಣ ಭರವಸೆಯಾದರೂ ಇದೆ; ಆದರೆ ಈ ಶಾಶ್ವತ ವಿಯೋಗಕ್ಕೆ...?
ಒಂದಾದರೂ ಕನಸಿಗೆ ಮೇವು ಕೊಡದ ನೆನಪುಗಳನು ಎಷ್ಟಂತ ತಿಕ್ಕಿ ತಿಕ್ಕಿ ಉಸಿರ ಕಾವನು ಕಾಯ್ದುಕೊಂಬುದು...?
ಈ ಬದುಕಿನ ಕೊಟ್ಟ ಕೊನೆಯ ಉದ್ದೇಶವಾದ ನೀನೂ ಬದುಕಿಂದ ಎದ್ದು ಹೋದಮೇಲೆ ಇನ್ನೀಗ ಉಳಿದದ್ದಾದರೂ ಏನು...?
ಎದೆಯ ಭಾರಕ್ಕೆ ಹೆಗಲು ಕುಸಿದರೆ ತಲೆಯಿಡಲು ನಿನ್ನಷ್ಟು ಬೆಚ್ಚಗಿನ ಮಡಿಲನೆಲ್ಲಿ ಹುಡುಕಲಿ...?
ಹೇಳು, ನಿನ್ನನರಸಿ ನಿನ್ನ ಮಸಣಕೇ ಬರಬೇಕಾ...?
ನನ್ನೆಲ್ಲಾ ಪ್ರಶ್ನೆಗಳಿಗೂ ಅವಳು ಚೌಕಟ್ಟಿನ ಚಿತ್ರದಲ್ಲಿ ಚಿತ್ತಾರವಾಗಿ ಒಂದೇ ನಗುವ ನಗುತ್ತಾಳೆ...
____ ಸ್ವಪ್ನ ಸತ್ತ ನಿದಿರೆ...
😔😔😔

ಒಮ್ಮೆಯಾದರೂ ಊಟಕೂ ಮೊದಲು ಅವಳು ಉರುಹೊಡೆಸಿದ್ದ 'ಅನ್ನಪೂರ್ಣೇ ಸದಾಪೂರ್ಣೇ' ಅಂದು ದೇವಿ ಉಡಿಯ ನೆನೆದವನಲ್ಲ - ಇಂದಾದರೋ ತುತ್ತಿಗೊಮ್ಮೆ, ತೇಗಿಗೊಮ್ಮೆ ನೆನಪಾಗುತಾಳೆ ಗರ್ಭಗುಡಿಯ 'ಸಾವಿತ್ರಿ...'
ನಕ್ಷತ್ರ‌ವಾದವಳು...
____ ಆಯಿ ಅಂಬೋ ಮಮತೆಯಾಮೃತ ಅಕ್ಷಯ ಗಿಂಡಿ...

'ನಿಂಗ್ಳ ಜನ್ಮಕ್ಕಿಷ್ಟು ಬೆಂಕಿ ಹಾಕ' ಅಂತ ಒಂದೇ ಮಾತಲ್ಲಿ ಬೈತಾ ಇದ್ದ ನನ್ನಜ್ಜ, ನಾವು ಮಕ್ಕಳ ಮಂಗಾಟ, ತರ್ಲೆ ಕೂಗಾಟಗಳು ಅವನಿಗೆ ಕಿರಿಕಿರಿ ಮಾಡುವಾಗ...
ಅದವನ ಬೈಗುಳವಲ್ಲದೇ ಪ್ರಾರ್ಥನೆ ಅಥವಾ ಹಾರೈಕೆ ಆಗಿತ್ತಾ ಅಂತ ಯೋಚಿಸ್ತೇನೆ ಈಗ...
ಕಾರಣ,
ಶೀತಲದಲ್ಲಿ ಎಲ್ಲವೂ ಜಡವೇ - ಒಂದು ಉರಿಯಿಲ್ಲದೇ ಉಸಿರೂ ಕೂಡಾ ನಿಸ್ಸತ್ವವೇ ಅಲ್ಲವೇ...
ಆಡಾಡುತ್ತ ಆಟದಿಂದಾಚೆ ಬೆಳೆದರೆ ಬೈದದ್ದು ಪಾಠವಾಗಿ ಬೆನ್ತಟ್ಟುತ್ತದೆ ನೋಡು...
______ ಹಿರಿಯ ಪ್ರೀತಿಗೆ ಎಷ್ಟು ಮುಖಗಳೋ...
😔😔😔

ಹೃದಯದ ಜಾದೂ ನಿಲ್ಲುವ ತನಕ...
😔😔😔

ಒಂದು ಸಣ್ಣ ಕೊಂಡಿ ತುಂಡಾದರೂ ಎಷ್ಟೆಲ್ಲಾ ಕಳೆದು ಹೋಗುತ್ತದೆ...!!!
ಅಂಥದ್ದರಲ್ಲಿ ನನ್ನದೆನ್ನುವ ಎಲ್ಲವನ್ನೂ ಹಿಡಿದಿಟ್ಟಿದ್ದ ನೀನೇ ಅಳಿದ ಮೇಲೆ ಇನ್ನೇನಿದೆ...
ಬೈದು ಸುಸ್ತಾಗಿ, ಅತ್ತು ಹಗುರಾಗಿ, ನಗುತಲೇ ಎದ್ದು ಹೋದೆ ನೀನು - ಅಳಲಾರದ ಹುಂಬತನದಲಿ ಜಡವಾಗುತ್ತ ಸೋಲುತಿರುವ ನಾನು...
ಮೌನದಲ್ಲಿ ಕಳಚಿಕೊಂಡ ನೀನು ಮತ್ತು ಸಂತೆಯಲ್ಲಿ ಕಳೆದು‌ಹೋದ ನಾನು...
___ ಸ್ಮಶಾನ ರುದ್ರ‌ನಿಗೆ ತುಸು ಹೆಚ್ಚೇ ಬಲಿ ಅನ್ನವ ಬಡಿಸಬಹುದಿತ್ತು, ಚಿತೆಯೊಂದಿಗೆ ನೆನಪುಗಳನೂ ಸುಡುವಂತಿದ್ದರೆ.‌‌..
😔😔😔

ಒಡೆದ ಪಾದಗಳ ಬಿರುಕುಗಳಲಿ ಅದೆಷ್ಟು ಹಾದಿ ಕವಲಿನ ಕಣ್ಣಹನಿಗಳಿತ್ತೋ - ಏಳೂವರೆ ದಶಕ ನುರಿ ನುರಿ ಬೇಯಿಸಿದ ಬದುಕು...
ಹುಚ್ಚು ಮಳೆಯೂ ಆರಿಸಲಾಗಲಿಲ್ಲ ಧಿಗಿಧಿಗಿ ಉರಿವ ಚಿತೆಯ - ಚೂರೂ ಹಂದಾಡದಂಗೆ ಕೈಯ್ಯಿ, ಕಾಲುಗಳ ಹೆಬ್ಬೆರಳುಗಳನು ಜೋಡಿಸಿ ಬಿಗಿದು ಕಟ್ಟಿ ಕೈಯ್ಯಾರೆ ಚಿತೆಯೇರಿಸಿ ಬಂದಿದ್ದೇನೆ; ಆದರೂ ಎನ್ನೆದೆಯ ಮೌನದಲ್ಲಿನ್ನೂ ಅವಳೇ ಹೊಯ್ದಾಡುತ್ತಾಳೆ...
ನೂರು ನಶೆಗಳಲಿ ತೇಲಿ ಮರೆತೇನೆಂದು ಬೊಬ್ಬಿರಿದು ನಗುತೇನೆ - ನಶೆಯಬ್ಬರವಿಳಿದ ಮರು ಘಳಿಗೆ‌ಯ ನಿರ್ವಾತದಲಿ ಮತ್ತೆ ಅವಳೇ ನಗುತಾಳೆ...
ಉಸಿರು ತೀಡುವ ಎದೆಯ ಪಕ್ಕೆಗಳಿಗೆ ನೇತು ಬಿದ್ದ ಅವಳ ಹುಚ್ಚು ಕನಸಿನ ಹತ್ತು ಮುಖಗಳ ಚಿತ್ರ‌ಗಳನು ಇಳಿಸಿಡುವುದಾದರೂ ಎಲ್ಲಿ...
ಮತ್ತು
ಹೊತ್ತು ಎದೆ ಭಾರ, ಇಳಿಸಿದೆನಾದರೆ ಬದುಕೇ ಖಾಲಿ...
ಕಣ್ಮುಚ್ಚಿ‌ದಷ್ಟೂ ಗಾಢ ಆ ನೆನಪಿನ ಚಿತ್ರ‌ದ ಬಣ್ಣ...
____ ನನಗಾಗಿ ಉರಿದ ದೀಪ ನನ್ನ ಉಳಿಸಿ ತಾ ಆರಿದ ಮೇಲೆ...