Sunday, September 26, 2021

ಗೊಂಚಲು - ಮುನ್ನೂರೆಪ್ಪತ್ತೊಂಭತ್ತು....

ಸಂಜೆಯ ಮೈನೋವು.....

ಎದೆ ಕಡಲು ಉಕ್ಕಿ ದಡ ಮೀರಿ ಮರಮರಳಿ ಕಣ್ಣಿಂದ ಇಳಿವಾಗ ಯಾವುದೋ ನೋವಿಗೆ ಮಾತಾಗಿ ಗಂಟಲ ಕುಳಿಯಲೇ ಕಚ್ಚಿಕೊಂಡ ಉಸಿರಲ್ಲಿ ಕಲೆಸಿಹೋದ ದನಿಯಲ್ಲೇ ಫಕ್ಕನೆ ನಕ್ಕು ಸುಮ್ಮನಾಗ್ತೀಯಲ್ಲ - ಆ ಮೃತ ನಗೆಯ ಧುನಿ ಮತ್ತು ಆ ಒಂದು ಕ್ಷಣದ ವಿಶಾದ ಮೌನದೆದುರು ನನ್ನ ಸ್ವಾರ್ಥಗಳೆಲ್ಲ ಸತ್ವ ಕಳಕೊಂಡು ಹಿಡಿಯ ಹುಡಿಯಾಗುತ್ತವೆ...
______ ಅಳು ನುಂಗಿ ನಗು ಒಮ್ಮೆ ಅಂದವನ ಒಡಕು ನುಡಿಗಳೂ ಕರುಳಲ್ಲೇ ಹೆಪ್ಪು ಗಟ್ಟುವ ಘಳಿಗೆ...
↜↝↰↱↜↝

ಆಳಿ ಮುಗಿದ ಕೋಟೆ ಕೊತ್ತಲಗಳ ಅವಶೇಷಗಳನ್ನು ಬಗೆದು ಬಗೆದು ನೆನಪುಗಳ ಹೆಕ್ಕುತ್ತೇನೆ...
ಎದೆಯ ಹಳೇ ಹಪ್ಪು ಗಾಯಗಳ ಸಣ್ಣ ಸಣ್ಣ ಹಕ್ಕಳೆಗಳಲೂ ಮತ್ತೆ ನೆತ್ತರೊಸರುತ್ತದೆ...
ರಣ ಮೌನದ ಶೀತಲ ಪಾತ್ರೆಯಲಿ ರಕ್ಕಸ ಮೋಹವೂ ಹೆಪ್ಪು‌ಗಟ್ಟುತ್ತದೆ...
ಪಾದಕೆ ಮೆತ್ತಿದ ಧೂಳನು ಅಂಗಳದಲೇ ತೊಳಕೊಂಡು ಒಳಬಂದಂಗೆ ಹುಚ್ಚು ಗಾಳಿ ಮೆಟ್ಟಿದ ಮನಸನೂ ಸರಾಗ ಕೊಡವಿ ಮುನ್ನಡೆವಂತಿದ್ದಿದ್ದರೆ...
ವಿಯೋಗ, ವಿಶಾದಗಳನೇ ನಗ ನಾಣ್ಯಗಳಂಗೆ ಹೊತ್ತು ತಿರುಗುವುದೂ ಒಂದು ಖಯಾಲಿಯೇ ಬಿಡು...
____ ಸ್ವಯಂ ಮರುಕದ ನಶೆಯೇರದೇ ವಿಶಾದ ಗಾಢವೆನಿಸೋದಿಲ್ಲ...

ನಿರಾಶೆಯೊಂದಿಗೇ ಆಶೆಯ ಸಹಯಾನವಾ...?!
ಅಥವಾ
ಆಶೆಯ ಬೆನ್ನಿಗೆ ಬಿದ್ದ ಕೂಸಿರಬಹುದಾ ನಿರಾಶೆ...!!
____ ಹುಳಿ ತೇಗಿನಂಥ ಸಂಜೆ...

ಮುಸಲ ಸುರಿವ ಕರಿ ಮೋಡ, ಬಣ್ಣಾಬಣ್ಣದ ನೆನಪುಗಳು ಮತ್ತು ಬಣ್ಣವಿಲ್ಲದ ಕಣ್ಣ ಹನಿ...
____ ಸಂಜೆಯ ಮೈನೋವು...!!
↜↝↰↱↜↝

ಮುದ್ದೆಕಟ್ಟಿ ಎಸೆದ ಖಾಲಿ ಹಾಳೆಯ ಮುಂದುವರಿದ ಭಾಗ ನಾನು...
ಈ ರಸಕಾವ್ಯ ಸೃಷ್ಟಿ ಚೆಲುವೆಲ್ಲ ನನ್ನದೇ...
ಇಲ್ಲಿನ ಎಲ್ಲ ಎಲ್ಲಾ ಪ್ರೀತಿ ಪಲ್ಲವವೂ ನನಗೆಂದೇ ಇದೆ...
ಆಹಾ...!!
ಈ ಬಾಳ್ವೆ ಇದು ಬಲು ಚಂದ ಚಂದ...
***ಶರತ್ತುಗಳು ಅನ್ವಯಿಸುತ್ತವೆ...
↜↝↰↱↜↝

ಬದುಕಿಂಗೇ ಇಲ್ಲದ ಖಾತ್ರಿಯ ಹಂಬಲಗಳಿಗೆಲ್ಲಿಂದ ಕೊಡಲೇ...
ಬೇಲಿಯಿಲ್ಲದ ಭಾವಕೋಶ‌ದಲಿ ಮುಫತ್ತಾಗಿ ಬೆಳೆಯುತ್ತಾ ಹೋಗುವುದಷ್ಟೇ ಕನಸ ಮುತ್ತುಗಳ...
____ ಸ್ವಪ್ನ‌ದೂರಿನ ಹಾದಿಗೆ ಸುಂಕ ಕೇಳುವರಿಲ್ಲ ನೋಡು...
↜↝↰↱↜↝

ಜೀವಿಸುವ ಹುಕಿಗಾಗಿ ಸಾವಿನ ಮನೆಯಲೂ ನಗುವ ಹುಡುಕುತ್ತೇನೆ, ಮಗುವ ಬಳಸುತ್ತೇನೆ ಅಂದವನು ಮತ್ತು ಹಂಗಂಗೇ ಬದುಕಿದವನು...
ಅಷ್ಟಾಗಿಯೂ,
ಎಷ್ಟು ಬೇಗ ನೋವುಗಳ ಮೀರಿ ನಿಂತೆ ಎಂಬುವುದೇ ನೋವಾಗಿ ಕಾಡುತ್ತೆ ಒಮ್ಮೊಮ್ಮೆ - ವಿಚಿತ್ರ ಅಪರಾಧೀ ಭಾವ...
ವಾಸ್ತವಗಳನು ವಾಸ್ತು ನೋಡದೇ ಒಪ್ಪಿಕೊಳ್ಳುತ್ತಾ ಸ್ಪಂದನೆಗಳಿಗೆ ಬರಡಾಯಿತಾ ಎದೆ ಬಿಳಲೂ ಅನ್ಸಿಬಿಡತ್ತೆ...
____ಮುಂದುವರಿದು ಅರ್ಥವಾಗುತ್ತಿಲ್ಲ...
↜↝↰↱↜↝

ಮೈಮನಕೆ ಸುಖವುಂಡು ಅಭ್ಯಾಸ‌ವೇ ಇಲ್ಲದಿದ್ದರೆ ಸಣ್ಣ ಸುಖದ ಇಣುಕು ಬೆಳಕಿಗೂ ಕಣ್ಣು ಹೆಚ್ಚೇ ದಿಗಿಲಿನಿಂದ ತಡವರಿಸುತ್ತದೆ...
ಮತ್ತು
ಉಸಿರಾಳದಲ್ಲೆಲ್ಲೋ ದೀಪ ಜೋರು ಉರಿಯುತಿದೆ - ಇಷ್ಟರಲ್ಲೇ ಆರಬಹುದು ಎಂಬಂಥ ಅಪ್ರಬುದ್ಧ ಭಾವ ಕೆರಳುತ್ತದೆ...
ಗೊತ್ತಲ್ಲ,
ಬಂಗಾರ ಬಣ್ಣದ ಕೇದಗೆಯ ಮೈತುಂಬಾ ಮುಳ್ಳೇಮುಳ್ಳು - ಆ ದೇವಪರಿಮಳದ ಒಡಲದು ಸರ್ಪ ಸತ್ರವಂತೆ...
____ ವಿಕ್ಷಿಪ್ತ...
↜↝↰↱↜↝

ಹಾರ ಹೊರೆಯಾಗಬಾರದು...
↜↝↰↱↜↝

ದನಿ ಸೋತ ಬಿಕ್ಕುಗಳಾಗಿ ನಿನ್ನ ಕಣ್ಣಲೇ ಒಣಗಿದ ಹನಿಗಳೊಂದಿಗೆ ಎದೆಯ ಭಾಷೆ‌ಯಲಿ ಮಾತಿಗಿಳಿದೆ, ನಿನ್ನಾ ಸ್ವಚ್ಛ ನಗೆಯ ಖಾಯಂ ವಿಳಾಸ ಸಿಕ್ಕಿತು...
ಕರುಳುರಿಯ ಹೊಳೆಯಲ್ಲಿ ತೊಳೆದ ನಗೆಯ ಶಿಲ್ಪಕ್ಕೀಗ ಎಂಥ ಚೊಕ್ಕ ಹೊಳಪು, ಎಷ್ಟು ಗಂಭೀರ ಒನಪು...
____ಕಥೆಯಾಗದ, ಕಥೆಗೆ ಒಗ್ಗದ ಪಾತ್ರಗಳು...*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೆಂಟು....

ಪ್ರೀತಿ ನೇಯ್ಗೆ.....

ಶತಶತಮಾನದ ನೋವುಗಳೆಲ್ಲ ಜೀವ ಬಿ(ಬೇ)ಡುತ್ತವೆ - ಎದೆಯ ಸೋಕಿದ ನಿನ್ನ ಉಸಿರ ಪ್ರೇಮ ಸ್ಪರ್ಶ‌ಕೆ...
____ಮಾಯಾವಿ ಮೌನ ಕಾವ್ಯ ನೀನು...
💞💞💞

ಜಗದ ಜನರ ಸಂತೆಯಲ್ಲಿ ಜನಪ್ರಿಯ‌ವಾದ ಈ ಪ್ರೇಮ ಅಂಬೋದು ಬರುವಾಗ ಚಿತ್ರವಿಚಿತ್ರ ಸಂಭ್ರಮವ ಹೊತ್ತು ತಂದು, ಅಷ್ಟೇ ವಿಕಟ ಗೊಂದಲವ ಅಂಟಿಸಿಕೊಂಡು ಜೀವಿಸಿ, ಕೊನೆಗೆ ತೊರೆದು ಹೋಪಾಗಲೂ ಒಂದೆಳೆಯಷ್ಟಾದರೂ ವಿಲಕ್ಷಣ ಪಾಪಪ್ರಜ್ಞೆ‌ಯೊಂದನ್ನು ಉಳಿಸಿಯೇ ಹೋಗತ್ತೇನೋ ಅಂತ ನಂಗನಿಸೋದು ಸುಳ್ಳಾ...!?
_____ ಪ್ರೇಮವ ಕಂಡವರ ಕೇಳಬೇಕೆನಿಸುತ್ತೆ...
💞💞💞

ಪ್ರೇಮಿಯ ವಯಸೆಷ್ಟೇ ಮಾಗಿದರೂ ಹುಚ್ಚು ಪ್ರೇಮ ತನ್ನ ಬಾಲಿಶತೆಯ ಮೀರುವುದೇ ಇಲ್ಲವಾ...?!ಅಥವಾ ಬಾಲಿಶವೇ ಪ್ರೇಮದ ಚಂದ ಪರಿಪಾಕವಾ...?!
ಪ್ರೇಮವ ಬಲ್ಲವರ (?) ನಾ ಹೀಗೆ ಕೇಳಿದರೆ ಏನೆಂದಾರು... !!
___ಅನುಭವ ಹೀನನ ಮಳ್ಳ ನಗೆಯ ಬೆರಗು...
💞💞💞

ಮೆಲು ಗಾಳಿಗೆ ತೊಟ್ಟು ಕಳಚಿದ ಮುದಿ ಎಲೆಗಳ ಹಾಗೆ, ಅಲ್ಲೊಂದು ಇಲ್ಲೊಂದು ಹನಿಗಳನುದುರಿಸುತಿವೆ ತೆಳು ಮೋಡಗಳ ದಾಪು ನಡಿಗೆ...
ಕರಿಮುಗಿಲ ಜಾತ್ರೆ‌ಯಲಿ ತಾರೆಗಳ ಮಾರಿದ ಹಾಗೆ - ಅಲ್ಲಲ್ಲಿ ಬೀದಿ ಹಾದಿಯಂಚಲ್ಲಿ ಅರಳಿದ ಜೊಂಪೆ ಜೊಂಪೆ ಪಾರಿಜಾತದ ಹೊಯ್ಗೆ...
ನನ್ನ ಕಣ್ಣ ಕನ್ನಡಿಯಲ್ಲಿ ಅವಳ ಮುಗುಳ್ನಗು ಹುಬ್ಬು ತೀಡಿಕೊಳ್ಳುವ ನೇಯ್ಗೆ - ಎದೆಯಲ್ಲಿ ಪ್ರೀತಿ ಕಡಲು ಮರಿ ಹಾಕುವುದು ಹಾಗೇ - ಬದುಕಿದು ಹಬ್ಬವಾಗುವುದು ಹೀಗೆ...
____ಹುಣ್ಣಿಮೆಯಂದು ದಡಕೂ ಯೌವನವೇ...
💞💞💞

ಕೇಳಿಲ್ಲಿ -
ಚಲನೆಯೊಂದೇ ನಿತ್ಯ ಸತ್ಯ‌ವಾದಲ್ಲಿ ನಿನ್ನೆ ನನ್ನದಾಗಿದ್ದದ್ದೇನೋ ಇಂದೂ ನನ್ನದೇ ಆಗಿರಬೇಕಿಲ್ಲ ಅಲ್ವಾ...
ಕೆಲವೆಲ್ಲ ನನ್ನ ಹಾಯ್ದು ಮುನ್ನಡೆದಿರಬಹುದು, ಇನ್ಕೆಲವನ್ನು ನಾನೇ ದಾಟಿ ಮುಂದೆ ಬಂದಿರಲೂಬಹುದು...
ನೆನೆನೆನೆದು ಅಳುವುದಕಿಂತ ಅಲ್ಲಿಯದಲ್ಲಿಗೆ ಚುಕ್ತಾ ಅಂದುಕೊಂಡು ನಡೆಯುವುದೇ ಸೂಕ್ತವೇನೋ...
ಇಷ್ಟಕ್ಕೂ ನನಗೆ ನಾನೇ ಸ್ವಂತವಲ್ಲದ ಹಾದಿಯಲ್ಲಿ ಚೂರು ಕಾಲ ಜೊತೆಯಾಗಿದ್ದ, ನೆರವಾಗಿದ್ದ, ನೆರೆಹೊರೆಯಾಗಿದ್ದ, ವರವಾಗಿದ್ದ ನಾ ದಾಟಿ ಬಂದ ಸಂಕವನ್ನೂ, ನನ್ನ ಹಾಯ್ದು ಮುಂದಾಗಿ ಸಾಗಿದ ಲೋಕವನ್ನೂ ಸದಾ ನನ್ನದೇ ಅಥವಾ ನನ್ನದು ಮಾತ್ರವಾಗಿರಲೀ ಅನ್ನಲಾದೀತಾ...
ಊರೆಲ್ಲಾ ಸುತ್ತಿ ಸುಳಿದು ಮೈಯ್ಯೆಲ್ಲಾ ಧೂಳಾದಾಗಲೇ ಹಾದಿಗೆ ಶ್ರೀಮಂತಿಕೆ - ನಡೆವ ನನಗೂ ಅದೇ ಅಲ್ಲವಾ ಜೀವಂತಿಕೆ...
___ನೀ ಹೋದ ಮೇಲೂ ನಾ ಉಳಿದದ್ದು ಹಾಗೆಯೇ/ಹಾಗಾಗಿಯೇ...
💞💞💞

ತನಗೇನು ಬೇಕೆಂಬುದನು ಬಿಡಿಸಿ ಹೇಳದೇ ಸಿಕ್ಕಿಲ್ಲ ಎಂದಳುವುದು...
ಏನು ಸಿಕ್ಕಿಲ್ಲ ಎಂಬುವುದನೂ ತಿಳಿಸದೇ ಮೌನದಿ ದೂರ ನಿಲ್ಲುವುದು...
ಇವರು
ಮನಸಿನ ಹೆಸರಲ್ಲಿ ಸಾರುವ ಯುದ್ಧ‌ಗಳ ಪಟ್ಟುಗಳು ಮಟ್ಟುಗಳು ನನ್ನ ನಿಲುಕಿನದಲ್ಲ ಬಿಡಿ...
 ___ ಬಂಧ, ಸಂಬಂಧ, ಪ್ರೇಮ, ಕಾಮ ಇತ್ಯಾದಿ ಇತ್ಯಾದಿ...
💞💞💞

ಒಂದು ಚಂದ ಪದಮಾಲೆಯೂ ಹುಟ್ಟದ ಖಾಲಿ ಖಾಲಿ ಸಂಜೆಗಳೂ...
ನಿನ್ನ ತಲುಪಲಾರದೇ ಸೋಲುವ ಎದೆ ಗೂಡಿನ ಬಿಕ್ಕುಗಳೂ...
"ಸಾವಿನ(ಕಳೆಯ) ಸಾವಿರ ಕಳ್ಳ ಮುಖಗಳಲ್ಲಿ ಒಂದ್ಯಾವುದೋ ಸಜೀವ ನೋಟದ, ಕ್ರುದ್ಧ ಮಾಟದ ಹೆಸರು 'ವಿದಾಯ' ಇರಬಹುದಾ... !?"
____ ಎದೆಯ ಕಲ್ಲೂ ಕರಗಬಹುದಲ್ಲಿ...

💞💞💞

ನೂರು ನದಿ ಸೇರಿ ಕಡಲಾಗಬಹುದು - ಕಡಲಿನೊಡಲ ಒಂದು ಹನಿಯೂ ನದಿಯಾಗುವುದಿಲ್ಲ...
ನೂರು ತೊರೆಯನು ಕುಡಿದ ವಾರಿಧಿ ಹನಿ ದಾಹವ ತಣಿಸಿಲ್ಲ - ಅಂತೆಯೇ ಸಿಹಿ ಹಳ್ಳ ಮಲೆತೀತು ಕಡಲುಪ್ಪು ಹಳಸಿದ್ದನ್ನೂ ಕಂಡಿಲ್ಲ...
ಸಿಹಿ ಶರಧಿ ಇಲ್ಲಿಲ್ಲ - ಉಪ್ಪಿಲ್ಲದೇ ರುಚಿಯಿಲ್ಲ...
ಯಾವ ದಾಹವೋ ನೀರಧಿಯ ಮಡಿಲಿಗೆ - ಏಸು ಮೋಹವೋ ಅಬ್ಬಿಯೊಡಲಿಗೆ...
ಹೊಳೆಯಾಗಿ ಹರಿದು, ಹೆಗ್ಗಡಲಾಗಿ ತೊನೆದು ಒಡನಾಡಿ ಪ್ರೀತಿಯಾ ಹಡೆಯುವಾ...
ಒಂದು ಒಡಲು, ಒಂದು ಮಡಿಲು - ಒಲವ ಮರಿಗಳು ಸಾಲು ಸಾಲು...
_____ ನಾನು ನೀನು ಮತ್ತು ಒಂದು ಅಂತರ್ವಾಹೀ ಸಂಗಾತ...
💞💞💞

ಕೂಗಿ ಕೂಗಿ ಹೇಳೋ ಅಂತ ಒಬ್ಬರು...
ಮೌನದೊಳಗನು ತಿಳಿಯೋಕಾಗಲ್ವಾ ಅಂತ ಇನ್ನೊಬ್ಬರು...
ಮಾತು, ಮೌನ ಒಂದೂ ಸರಾಗ ಅರಗದ ಅಬ್ಬೇಪಾರಿ ನಾನು...
___ ಭಾವ ಬಂಧ ಭಕುತಿ...
💞💞💞

ಹರಿದೋದದ್ದನ್ನ ಜೋಡಿಸಬೇಕೆಂದರೆ ಒಂದೆಳೆ ನೂಲನು ನಂಬಿ ಎರಡೂ ಬದಿಗೂ ಸೂಜಿ ಚುಚ್ಚಲೇಬೇಕು - ಹೊದ್ದ ಕನಸಿನ ಬಟ್ಟೆಯಾದರೂ, ಸಂಬಂಧವೇ ಆದರೂ...
_____ ಪ್ರೀತಿ ನೇಯ್ಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)