Sunday, July 31, 2022

ಗೊಂಚಲು - ಮುನ್ನೂರ್ತೊಂಭತ್ತೊಂದು.....

ಮಸಣದೆದುರಿನ ಸಮಾಧಾನ...

ಕೊಟ್ಟು ಮರೆತರೇನೇ ನೆಮ್ಮದಿ, 
ಪಡೆದದ್ದನ್ನು ನೆನೆದರೇನೇ ಘನತೆ 
- ಹಣವಾಗಲೀ, ಪ್ರೀತಿಯಾಗಲೀ... 
ಎಲ್ಲಾ ಎಲ್ಲಾನೂ ಮೊಗೆಮೊಗೆದು ಕೊಟ್ಟು ಕೊಟ್ಟು ಎಷ್ಟು ತಣ್ಣಗೆ ಸದ್ದೇ ಇಲ್ಲದೇ ಎದ್ದು ಹೋದಳು...
ಅವಳ ನೆನೆಯುತ್ತಾ ಏನೆಲ್ಲಾ ಮರೆಯಬೇಕು ನಾನಿನ್ನು...
____ ಕಾರುಣ್ಯ ಎಂದರೇ ಅವಳು...

ಹಸಿದ ಜೀವಗಳೆದುರು ಅವಳ ಬೊಗಸೆ ಎಂದೂ ಅಕ್ಷಯ ಪಾತ್ರೆ - ಅನ್ನದ್ದಾಗಲೀ, ಪ್ರೀತಿಯದ್ದಾಗಲೀ...
ಕರುಳಿಂದ ಹೃದಯವ ಬೆಳೆದವಳು, ಬೆಸೆದವಳು...
ಜಗದ ಚೆಲುವನೆಲ್ಲ ತನ್ನಲ್ಲೇ ತುಂಬಿಕೊಂಡ ಬೆಳದಿಂಗಳ ಕುಡಿಯಂಥ ಹುಡುಗಿ...
___ಆಯಿ ಎಂಬೋ ಅಶ್ವತ್ಥ... 💞😘

ನನ್ನ ಇನ್ನೆಲ್ಲಾ ಅಬ್ಬರದ ನಗೆಯ ಎದೆಗೆ ಆತುಕೊಂಡು ಮಿಡುಕುವ ಬಿಕ್ಕಳಿಕೆ ಅವಳು...
ಬದ್ಕಿದ್ಯನೇ ಇನ್ನೂವಾ ಅಂತ ಕೆಣಕಿ ಕೇಳಲೀಗ ಅವಳಿಲ್ಲ...
ನನ್ನ ಉಳಿಸಿಕೊಡಲು ನನ್ನೊಳಗೆ ಬದುಕಿರದೇ ವಿಧಿಯಿಲ್ಲ ಅವಳಿಗೀಗ...
___ ಯಾರ ಹಳಿಯಲಿ - ಅವಳ ದೇವನ ಹಳಿಯಲೂ ನಾನವನ ನಂಬಿಲ್ಲ...

ಅವಳ ಬದುಕಿನ ನೋವು ನನ್ನ ಹೆಗಲಿನ ಸೋಲಾಗಿ ಕಾಡುತ್ತಿತ್ತು ಈವರೆಗೆ...
ಇನ್ನೀಗ ಅವಳ ಸಾವು ಕಣ್ಣ ಹನಿಯೂ ತುಂಬಿಕೊಡಲಾಗದ ಎದೆಯ ಖಾಲಿತನವಾಗಿ, ಕಣ್ಣ ಮುಂದಿನ ರುದ್ರ ನಿರ್ವಾತವಾಗಿ ಕಾಡುತ್ತಿದೆ...
ಮೂಟೆ ಮೂಟೆ ಪ್ರೀತಿಯ ಹಂಚುವ ಅರವಟಿಗೆಗಳ ನಡುವೆಯೂ ಹಾಗೇ ಉಳಿವ ಒಂದು ಅನಾಥ ಭಾವ...
____ ನಾನಿಟ್ಟ ಪಿಂಡದ ಅನ್ನ ಅವಳ ಹಸಿವಿಗಾಯಿತಾ...?!

ಎದೆಯ ತಲ್ಲಣಗಳು ಕಣ್ಣ ಬಿಸಿ ಹನಿಯಾಗಿ ಹರಿದು ಇರುಳ ಹಗುರಾಗಿಡಲು ಸೋಲುವಾಗ ಅವಳಿಲ್ಲ ಎಂಬ ಖಾಲಿ ಭಾವದ ಈ ಮೌನ ರಾತ್ರಿ‌ಗಳು ಸಾವಿನಷ್ಟೇ ತಣ್ಣಗಿವೆ...
ಅವಳ ಹೆಸರ ಹೇಳಿ ಇಟ್ಟ ಬಲಿ ಬಾಳೆಯಲ್ಲಿ ಅವಳ ನೆನಪುಗಳ ಬಲಿಗಿಡಲಾಗದಲ್ಲ...
____ ಏನೆಂತು ಬರೆದರೆ ಅವಳ ಕನಸು ಕಾಣಬಹುದು...?!

'ಶ್ರೀ ಅವಳು ನಿನ್ನೊಳಗೇ ಇದ್ದಾಳೆ' ಅಂದರು ಕಂಗಾಲು ಎದೆಯ ಸಂತೈಸಿ...
ಹೌದು
ಆರ್ಭಟದಿ ಅವಳ ಉಸಿರ ಕದ್ದೊಯ್ದ ಜವನಿಗೆ ಅವಳು ಹೆಜ್ಜೆ ಊರಿದಲ್ಲೆಲ್ಲ ಭಂಡ ಬದುಕನು ಬಾಗಿಸಿ ಉಳಿಸಿ ಹೋದ ನಗೆಯ ನವಿರು ಪ್ರೀತಿ ಗುರುತನ್ನು ಅಳಿಸೋ ತಾಕತ್ತಿಲ್ಲ...
ನೆನಪು ಕನಸಿಗಿಂತ ಶುದ್ಧ ಸತ್ಯ - ನಾನದನೇ ಉಸಿರಾಡುತೇನೆ...
____ ಮಸಣದೆದುರಿನ ಸಮಾಧಾನ...

ಅವಳ ಮರೆಯಲೋಸುಗ ನೂರು ಜೊಳ್ಳು ದಾರಿಗಳ ಹುಡುಕುತ್ತಲೇ ಅವಳ ನೆನಕೆಯ ನಾಕು ಗಟ್ಟಿ ಗುರುತುಗಳ ಭದ್ರ ಹೆಕ್ಕಿಟ್ಟುಕೊಳ್ಳುತ್ತೇನೆ - ಮರುಳನ ಹರಕು ಹಸಿಬೆ ಚೀಲದಲ್ಲೇ ಬಿಮ್ಮನೆ ಕೂತ ಅವಳ ಮಸಣದಲಿ ನೆಟ್ಟ ತುಳಸೀ ಕುಡಿ ಮತ್ತು ಚಿಟಿಕೆ ಮಣ್ಣು...
____ ಮಳ್ಳು ಮಾತಲ್ಲಿ ಜಗ ಮರೆತವನ ಅಂತರಂಗದ ರಣ ಮೌನ...

ಅಂದು ನಿನಗೆ ಕೊಡಬೇಕಿದ್ದದ್ದನ್ನು ಕೊಡುವಲ್ಲಿನ ನನ್ನ ಜಾಣ ಮರೆವು ಇಂದೀಗ ಎಲ್ಲವನ್ನೂ ಕೊಟ್ಟು ನೀ ಎದ್ದು ಹೋದಮೇಲೆ ಉಸಿರಿಗೊಮ್ಮೆ ನೆನಪಾಗಿ ಭೋರೆಂಬ ಮಳೆಯನೂ ಸೀಳಿ ದಿಗಿದಿಗಿ ಉರಿವ ಚಿತೆಯೆದುರಿನ ರುದ್ರ ಮೌನವಾಗಿ ಕಾಡುತ್ತಿದೆ...
ನಿನ್ನೆಡೆಗಿನ ನನ್ನ ಹುಚ್ಚು ತಕರಾರುಗಳನು ನಾ ಕಿರುಚಾಡಿ ಹೇಳುತ್ತಿದ್ದಾಗ ಕಣ್ಣ ಹನಿಗಳ ಮರೆಯಲಿಟ್ಟು ನಗುತ್ತಾ 'ಆssನ್ ಬೈದ್ರೂ ಎಂದೇ ಮಗಂಗೆ, ನೀ ಬೈದ್ರೆ ಮಗ ಬೈದದ್ದು ಅಷ್ಟೇ' ಅಂತಂದುಬಿಡುತ್ತಿದ್ದೆಯಲ್ಲ - ಆಹಾ! ಎಂಥಾ ಸರಳ ಸೂತ್ರ ನಿನ್ನದು ನಿನ್ನ ಕರುಳಿನೆದುರಿನ ಸಮಾಧಾನಕ್ಕೆ... 
ಹಂಗೇ ಎದ್ದು ಬಂದು ಅಂದಿನಂಗೆಯೇ ಮಮತೆ ಕಟ್ಟಿದ ಕಿರಿಕಿರಿ‌ಯ ದನಿಯಲಿ ನನ್ನ ಮರೆವನ್ನೊಮ್ಮೆ ಬೈದು ಹೋಗಬಾರದೇ ಅಂದುಕೊಳ್ಳುತ್ತೇನೆ ಇಂದು ನಿನ್ನ ಮಸಣ ಕಲ್ಲಿನೆದುರು ಕಬೋಜಿಯಾಗಿ ನಿಂತು...
ನಿನ್ನ ಗೋತ್ರ ಪ್ರವರಗಳ ಮಣಮಣಿಸಿ ಇಟ್ಟ ಪಿಂಡದಗುಳನು ಹುಡುಕಿ ಕಾಕಗಳು ಬಂದವಾ?! ಕಾದು ನಿಲ್ಲಲೂ, ತಿರುಗಿ ನೋಡಲೂ ಧೈರ್ಯ‌ವಾಗಲಿಲ್ಲ ಅಥವಾ ಧೈರ್ಯ‌ವುಳಿದಿಲ್ಲ...
ಮರೆತವನಂತೆ ಬದುಕಬೇಕಿನ್ನು ಕಾಲವೂ ಮರೆಯಲಾಗದ ಸೊಲ್ಲನು...
____ ಕಣ್ಣಲ್ಲಿ ಹನಿ ಇಲ್ಲದವನ ಎದೆಯ ರಕ್ತವೀಗ ಸದಾ ಉದ್ವಿಗ್ನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ತೊಂಭತ್ತು.....

ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ.....

ತಮಾ ಎದ್ಕಳೋ ಸೂರ್ಯ ನೆತ್ತಿಗ್ ಬಂದ ಅಂತ ಗೊಣಗುತ್ತಾ ಸರಬರನೆ ಒಳಹೊರಗಾಡುತ್ತಿದ್ದ ಅವಳ ಸುಪ್ರಭಾತ‌ದ ಬೆಳಗುಗಳ ಜಾಗದಲ್ಲೀಗ ನೆನಪಿನ ಕೋಶದಲ್ಲಿನ ಅವಳ ಕಥೆಗಳ ಹುಡುಕುತ್ತಾ ಕಣ್ಣುಜ್ಜಿಕೊಳ್ಳೋ ನನ್ನ ಮಬ್ಬು ಬೆಳಗುಗಳಿವೆ...
____ ಮುಗಿದು ಹೋದ ಈ ಬದುಕಿನ ಮೊದಲ ಮತ್ತು ಕೊನೇಯ ಉದ್ದೇಶ...

ಬದುಕನು ಮೆರೆಸಲಾಗದೇ ಸೋತವನು ಸಾವಿನ ಊಟಕೆ ಯಥೇಚ್ಛ ತುಪ್ಪ ಬಡಿಸಿದೆ...
____ ಅವಳಿಷ್ಟದ ಅಡುಗೆ...

ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...
ನನ್ನೆಡೆಗಿನ ಅವಳ ಹುಸಿ ಮುನಿಸಿನ ಆರೋಪಗಳನೂ ಕೂಡಾ ಊಫಿ ಮಾಫಿ ಎಂದು ಬರಕಾಸ್ತುಗೊಳಿಸಿ ಎದ್ದು ಹೋದಳು...
___ ಖರೇ ಅವಳಿನ್ನು ನನ್ನ ಕರೆ ಸ್ವೀಕರಿಸುವುದಿಲ್ಲ...

ಅವಳ ನೆನಪುಗಳ ಗೀರು ಗೀರು ಚಿತ್ತು ಚಿತ್ತಾದ ಹಾಳೆಗಳು - ಯಾವ ಲೆಕ್ಕಾಚಾರಕ್ಕೂ ತಾಳೆಯಾಗದ ಅವಳಿಲ್ಲದೇ ಎದುರ್ಗೊಳ್ಳಬೇಕಾದ ಉಮ್ಮಳಿಕೆಯ ನಾಳೆಗಳು...
ಭೋರಿಡುವ ಮಳೆ ಮತ್ತು ಒಂದು ಹನಿ ಕಣ್ಣೀರ ನಿಷಾದ...
ಅವಳಿಲ್ಲದ ಈ ಹೊತ್ತನೂ ನಗುತ್ತಾ ದಾಟುವ ನನ್ನ ಧಾಡಸಿತನವೇ ಆಂತರ್ಯದ‌ಲ್ಲಿ ನನ್ನಲ್ಲಿ ಹುಟ್ಟು‌ಹಾಕುವ ವಿಚಿತ್ರ ವಿಶಾದ...
____ ವಿಯೋಗ...

ಜಗ ಮತ್ತು ಜಗದೆದುರು ಅವಳ ಹಾಡಿದ್ದನ್ನು ನಾ ಅವಳಿಗೆಂದೂ ಹೇಳಿಲ್ಲ...
ನಾ ಬರೆದ ಸಾಲುಗಳಲ್ಲಿರುವಷ್ಟು ನಿಜಕ್ಕೂ ನಾನವಳ ಪ್ರೀತಿಸಿದೆನಾ? ಕೇಳೋಣ ಎಂದರೆ ಇಂದು ಅವಳೇ ಇಲ್ಲ...
___ ಕಾಕಗಳ ಕೂಗಿ ಕೂಗಿ ಕೂಗಿ ಕರೆದು ಅವಳ ಕಥೆ ಕೇಳುವ ಹುಚ್ಚು ಕುಣಿತ ಈಗ...

ಅಳಬೇಕಿತ್ತು, ಅತ್ತರೆ ಹಗುರಾಗಬಹುದಂತೆ - ನಾನೋ ಅವಳ ಚಿತ್ರದ ಕಣ್ಣಲ್ಲಿ ಕಣ್ಣಿಟ್ಟು ಗಲಗಲಿಸಿ ನಗುತ್ತೇನೆ...
ಕಾಡ ನಡುವಿನ ಆರಡಿ ಅಂಗಳದಿ ಹೆಗಲಿಂದ ಇಳಿಸಿ ಋಣ ಭಾರಕ್ಕೆ ಇಟ್ಟುಬಂದ ಬೆಂಕಿ ಭಾವಕೋಶವ ಸುಡುತ್ತಲೇ ಇದೆ/ಇರುತ್ತದೆ...
____ ಪ್ರೀತಿ, ಮಮತೆಗಳ ಭಾರವ ವಿಯೋಗದಲ್ಲಿ ಕಾಣಬೇಕು, ತಾಳಬೇಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಂಬತ್ತೊಂಭತ್ತು.....

ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..... 

ಬದುಕು ನೀರಿನಂಥಾ ಭಾವದ ಗುರುವಾದರೆ,
ಸಾವು ನಿರ್ಭಾವದ ಮಹಾಗುರು...
____ ಎರಡರ ಅರಿವನ್ನೂ ಕೊಟ್ಟು ಸಲಹಿದ ಆಯಿ ಎನ್ನ ಜೀವಾಭಾವದ ದೇವಗುರು... 

ಬದುಕು ಕೈಬಿಟ್ಟಾಗಲೂ ಗಟ್ಟಿ ನಿಂತು ನಕ್ಕದ್ದಿದೆ, ಬಡಿದಾಡಿ ಗೆದ್ದದ್ದಿದೆ - ಇವಳು ಬೆನ್ನಿಗಿದ್ದಳಲ್ಲ...
ಅವಳೂ ಹೊರಟು ನಿಂತಾಗ ಬೆನ್ನ ಹುರಿಯಾಳದಲ್ಲಿನ ಅನಾಥ ಭಾವದ ನಿಶ್ಯಕ್ತಿಯ ಮೀರಿ ನಿಲ್ಲುವ ಶಕ್ತಿ‌ಯನೂ ಅವಳೇ ಆಶೀರ್ವದಿಸಬೇಕಲ್ಲ...

ಅವಳ ಬದುಕ ಭಾರ ಅವಳೇ ಹೊತ್ತು ಗೆದ್ದಳು - ನಾ ಅವಳ ಮೃತ ದೇಹ ಹೊತ್ತು ಸಮಾಧಾನಿಸಿಕೊಂಡೆ...

ಪ್ರೀತಿ ಕೊಡೋಕೆ ಸಾವಿರ ಜೀವಗಳು ಸಿಗಬಹುದು...
ಆದ್ರೆ
ಭಯವಿಲ್ಲದೆ ಕಿತ್ತಾಡೋಕೆ ಆಯಿಯಂತೋಳು ಮತ್ತೆ‌ಲ್ಲಿ ಸಿಕ್ಕಾಳು...

ಬದುಕಿನಷ್ಟೇ ಸ್ವಾಭಿಮಾನವ ಸಾವಲ್ಲೂ ಉಳಿಸಿಕೊಂಡು ಗತ್ತಿನಲ್ಲೇ ನಡೆದು ಹೋದಳು...
ಬದುಕಿನ ಯಾವ ಸೂತಕಗಳೂ ಅವಳ ಸೋಕುವುದಿಲ್ಲ ಇನ್ನು - ಸಾವು ಅವಳದ್ದು, ಶ್ರಾದ್ಧ ನನ್ನದು...

ಹಿಂದೆ ನೋಡದೆ ಹೊರಟಳು - ಹಿಂದೆ ಹೋಗುವ ಶಕ್ತಿ ಇಲ್ಲದವನು ಇಲ್ಲೇ ನಿಂತಿದ್ದೇನೆ...
ನಿಲ್ಲದ ಕಾಲ ಅದಾಗಿ ಇಂದಿಗೆ ಇಷ್ಟು ದಿನವೆಂದು ಲೆಕ್ಕ ತೋರುತ್ತದೆ...

ಇಲ್ಲಿ ಎಲ್ಲವೂ ಸುಳ್ಳೂ ಅನ್ನಿಸತ್ತೆ... 
ಈ ಬದುಕು, ಬವಣೆ, ನಗು, ನೋವು ಎಲ್ಲಾ ಅಂದರೆ ಎಲ್ಲಾ ಸುಳ್ಳೇ ಇರಬೇಕು... 
ಅವಳು ಉಸಿರು ಚೆಲ್ಲಿದ್ದು ಕೂಡಾ ಸುಳ್ಳೇ ಆಗಿದ್ದಿದ್ದರೆ...
ಅವಳ ಅಸ್ಥಿಗೆ ಬೆಂಕಿ ಇಟ್ಟ ಕೈಗಳ ನೋಡಿಕೊಳ್ಳುತ್ತೇನೆ... 
ನನ್ನ ಅಸ್ತಿತ್ವವೇ ಇನ್ನು ಸುಳ್ಳೂ ಅನ್ನಿಸತ್ತೆ...

ನಂಗಿಂತ ಮುಂಚೆ ಹೋಗಬೇಕಿತ್ತವಳಿಗೆ, ಹೊರಟಳು ಅಷ್ಟೇ...
ಬದುಕಲ್ಲಷ್ಟೇ ಅಲ್ಲ ಸಾವಲ್ಲೂ ಅವಳೇ ಗೆದ್ದಳು...
ಇನ್ನು,
ತಾ ಹೊರಟಲ್ಲಿಗೆ ಎನ್ನ ಅವಳೇ ಕರೆದುಕೊಳ್ಳಬೇಕು...
ದೇವರ ನಂಬದ ನಾನು ಅವಳನೇ ಬೇಡಬೇಕು...
____ಪ್ರಾರ್ಥನೆ...

ಬೆಂಕಿಗೆ ಅಷ್ಟೂ, ಗಾಳಿಗಿಷ್ಟು, ಮಣ್ಣಿಗಿನ್ನಷ್ಟು, ನೀರಲ್ಲಷ್ಟು, ಅನಂತಕ್ಕುಳಿದಷ್ಟು - 
ಹೀಗೆ
ಬಯಲಿಗೆ ಹಂಚುತ್ತಾ ಹಂಚುತ್ತಾ ಅವಳ ರೂಪ, ಗಂಧ, ಸಾಕಾರ ಆಕಾರದ ಗುರುತುಗಳ ಅಳಿಸುತ್ತಾ ಬಂದೆ...
ಎದೆಯ ಗೂಡಿನ ನೆನಪ ನಿತ್ಯಾಗ್ನಿಯಾಗಿ ಬೆಳೆಯುತ್ತಲೇ ಇದ್ದಾಳೆ...
ಕರುಳ ಬಳ್ಳಿ ಕತ್ತರಿಸಿ ಜಗಕೆ ಬಿಟ್ಟು ಕರುಳ ಮಮತೆಯಿಂದ ಎನ್ನ ಜಗವ ತೂಗಿದವಳ ದೇಹವ ಕರಗಿಸಿದಂಗೆ ಉಸಿರ ಹಬ್ಬಿ ನಿಂತ ಭಾವವ ಕರಗಿಸಲಾದೀತೇ...
ಅವಳ ಉಂಡು ತೇಗಿದ ಇದೇ ಪಂಚಭೂತಗಳು ಅವಳ ನೆನಪ ನೂಕುತ್ತಾವೆ ಎನ್ನೆಡೆಗೆ...
___ ಅಸ್ಥಿ ವಿಸರ್ಜನೆ...

ತಾನು ಶರಂಪರ ಬಡಿದಾಡಿ ಕಟ್ಟಿಕೊಂಡ ತನ್ನ ಬದುಕಿಗೆ ಅವಳು ಅವನ ಭಿಕ್ಷೆ ಎಂದು ಕೈಮುಗಿಯುತಿದ್ದಳು...
ಅವನು ಅನಾಯಾಸ ಎತ್ತಿ ಕೊಟ್ಟ ಸಾವಿಗೆ ನಾನು ಸುಖ ಮರಣ ಎಂದು ಶರಾ ಬರೆಯುತ್ತೇನೆ...
____ ಅವಳ(ಳೇ) ಭಗವಂತ...

ದಣಪೆಯಾಚೆಯ ಬಯಲಲ್ಲಿ ಉರಿದು ಹೋದ ಅವಳನ್ನು ಅಡುಗೆ ಮನೆಯ ನಸುಗತ್ತಲ ಮೂಲೆಯಲ್ಲಿ ಹುಡುಕುತ್ತೇನೆ...
ಗೋಡೆಗಂಟಿದ ಯಾವುದೋ ಮಶಿ ಕಲೆಯಲ್ಲಿ ಅವಳ ಕಿರುಬೆರಳ ಕನಸೊಂದು ಇನ್ನೂ ಉಸಿರಾಡುತಿರಬಹುದಾ...?!
____ ಕತ್ತಲೂ ಕಟ್ಟಿಕೊಡಲಾಗದ ಸಾಂತ್ವನ...

ಎಂದಿನಂತೆ ಬೆಳಗಾಗುತ್ತದೆ - ಅವಳ ನಗೆಯ ಬೆಳಕಿಲ್ಲ ಅಷ್ಟೇ...

ಈ ಊರು, ಆಷಾಡದ ಧೋss ಮಳೆ, ಅವಳ ವಿದಾಯದುಬ್ಬರದ ಮೌನ...
ಹೇಗಿದ್ದೀಯಾ ಶ್ರೀ...?
ನೋವೂ ನೋಯಿಸದಷ್ಟು ಗಟ್ಟಿಯಾಗಿ, ಅವಳ ನಿಂತ ಉಸಿರಿನಷ್ಟೇ ನಿರ್ಲಿಪ್ತ‌ವಾಗಿ.......ಹಾಯಾಗಿದ್ದೇನೆ......

"ಅಮ್ಮನಳಿದ ಜೀವಗಳೆಲ್ಲಾ ಅನಾಥವೇ..."

ಉಳಿದದ್ದು ಮಣ್ಣ ಮಡಿಲೊಂದೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)