Sunday, July 31, 2022

ಗೊಂಚಲು - ಮುನ್ನೂರ್ತೊಂಭತ್ತೊಂದು.....

ಮಸಣದೆದುರಿನ ಸಮಾಧಾನ...

ಕೊಟ್ಟು ಮರೆತರೇನೇ ನೆಮ್ಮದಿ, 
ಪಡೆದದ್ದನ್ನು ನೆನೆದರೇನೇ ಘನತೆ 
- ಹಣವಾಗಲೀ, ಪ್ರೀತಿಯಾಗಲೀ... 
ಎಲ್ಲಾ ಎಲ್ಲಾನೂ ಮೊಗೆಮೊಗೆದು ಕೊಟ್ಟು ಕೊಟ್ಟು ಎಷ್ಟು ತಣ್ಣಗೆ ಸದ್ದೇ ಇಲ್ಲದೇ ಎದ್ದು ಹೋದಳು...
ಅವಳ ನೆನೆಯುತ್ತಾ ಏನೆಲ್ಲಾ ಮರೆಯಬೇಕು ನಾನಿನ್ನು...
____ ಕಾರುಣ್ಯ ಎಂದರೇ ಅವಳು...

ಹಸಿದ ಜೀವಗಳೆದುರು ಅವಳ ಬೊಗಸೆ ಎಂದೂ ಅಕ್ಷಯ ಪಾತ್ರೆ - ಅನ್ನದ್ದಾಗಲೀ, ಪ್ರೀತಿಯದ್ದಾಗಲೀ...
ಕರುಳಿಂದ ಹೃದಯವ ಬೆಳೆದವಳು, ಬೆಸೆದವಳು...
ಜಗದ ಚೆಲುವನೆಲ್ಲ ತನ್ನಲ್ಲೇ ತುಂಬಿಕೊಂಡ ಬೆಳದಿಂಗಳ ಕುಡಿಯಂಥ ಹುಡುಗಿ...
___ಆಯಿ ಎಂಬೋ ಅಶ್ವತ್ಥ... 💞😘

ನನ್ನ ಇನ್ನೆಲ್ಲಾ ಅಬ್ಬರದ ನಗೆಯ ಎದೆಗೆ ಆತುಕೊಂಡು ಮಿಡುಕುವ ಬಿಕ್ಕಳಿಕೆ ಅವಳು...
ಬದ್ಕಿದ್ಯನೇ ಇನ್ನೂವಾ ಅಂತ ಕೆಣಕಿ ಕೇಳಲೀಗ ಅವಳಿಲ್ಲ...
ನನ್ನ ಉಳಿಸಿಕೊಡಲು ನನ್ನೊಳಗೆ ಬದುಕಿರದೇ ವಿಧಿಯಿಲ್ಲ ಅವಳಿಗೀಗ...
___ ಯಾರ ಹಳಿಯಲಿ - ಅವಳ ದೇವನ ಹಳಿಯಲೂ ನಾನವನ ನಂಬಿಲ್ಲ...

ಅವಳ ಬದುಕಿನ ನೋವು ನನ್ನ ಹೆಗಲಿನ ಸೋಲಾಗಿ ಕಾಡುತ್ತಿತ್ತು ಈವರೆಗೆ...
ಇನ್ನೀಗ ಅವಳ ಸಾವು ಕಣ್ಣ ಹನಿಯೂ ತುಂಬಿಕೊಡಲಾಗದ ಎದೆಯ ಖಾಲಿತನವಾಗಿ, ಕಣ್ಣ ಮುಂದಿನ ರುದ್ರ ನಿರ್ವಾತವಾಗಿ ಕಾಡುತ್ತಿದೆ...
ಮೂಟೆ ಮೂಟೆ ಪ್ರೀತಿಯ ಹಂಚುವ ಅರವಟಿಗೆಗಳ ನಡುವೆಯೂ ಹಾಗೇ ಉಳಿವ ಒಂದು ಅನಾಥ ಭಾವ...
____ ನಾನಿಟ್ಟ ಪಿಂಡದ ಅನ್ನ ಅವಳ ಹಸಿವಿಗಾಯಿತಾ...?!

ಎದೆಯ ತಲ್ಲಣಗಳು ಕಣ್ಣ ಬಿಸಿ ಹನಿಯಾಗಿ ಹರಿದು ಇರುಳ ಹಗುರಾಗಿಡಲು ಸೋಲುವಾಗ ಅವಳಿಲ್ಲ ಎಂಬ ಖಾಲಿ ಭಾವದ ಈ ಮೌನ ರಾತ್ರಿ‌ಗಳು ಸಾವಿನಷ್ಟೇ ತಣ್ಣಗಿವೆ...
ಅವಳ ಹೆಸರ ಹೇಳಿ ಇಟ್ಟ ಬಲಿ ಬಾಳೆಯಲ್ಲಿ ಅವಳ ನೆನಪುಗಳ ಬಲಿಗಿಡಲಾಗದಲ್ಲ...
____ ಏನೆಂತು ಬರೆದರೆ ಅವಳ ಕನಸು ಕಾಣಬಹುದು...?!

'ಶ್ರೀ ಅವಳು ನಿನ್ನೊಳಗೇ ಇದ್ದಾಳೆ' ಅಂದರು ಕಂಗಾಲು ಎದೆಯ ಸಂತೈಸಿ...
ಹೌದು
ಆರ್ಭಟದಿ ಅವಳ ಉಸಿರ ಕದ್ದೊಯ್ದ ಜವನಿಗೆ ಅವಳು ಹೆಜ್ಜೆ ಊರಿದಲ್ಲೆಲ್ಲ ಭಂಡ ಬದುಕನು ಬಾಗಿಸಿ ಉಳಿಸಿ ಹೋದ ನಗೆಯ ನವಿರು ಪ್ರೀತಿ ಗುರುತನ್ನು ಅಳಿಸೋ ತಾಕತ್ತಿಲ್ಲ...
ನೆನಪು ಕನಸಿಗಿಂತ ಶುದ್ಧ ಸತ್ಯ - ನಾನದನೇ ಉಸಿರಾಡುತೇನೆ...
____ ಮಸಣದೆದುರಿನ ಸಮಾಧಾನ...

ಅವಳ ಮರೆಯಲೋಸುಗ ನೂರು ಜೊಳ್ಳು ದಾರಿಗಳ ಹುಡುಕುತ್ತಲೇ ಅವಳ ನೆನಕೆಯ ನಾಕು ಗಟ್ಟಿ ಗುರುತುಗಳ ಭದ್ರ ಹೆಕ್ಕಿಟ್ಟುಕೊಳ್ಳುತ್ತೇನೆ - ಮರುಳನ ಹರಕು ಹಸಿಬೆ ಚೀಲದಲ್ಲೇ ಬಿಮ್ಮನೆ ಕೂತ ಅವಳ ಮಸಣದಲಿ ನೆಟ್ಟ ತುಳಸೀ ಕುಡಿ ಮತ್ತು ಚಿಟಿಕೆ ಮಣ್ಣು...
____ ಮಳ್ಳು ಮಾತಲ್ಲಿ ಜಗ ಮರೆತವನ ಅಂತರಂಗದ ರಣ ಮೌನ...

ಅಂದು ನಿನಗೆ ಕೊಡಬೇಕಿದ್ದದ್ದನ್ನು ಕೊಡುವಲ್ಲಿನ ನನ್ನ ಜಾಣ ಮರೆವು ಇಂದೀಗ ಎಲ್ಲವನ್ನೂ ಕೊಟ್ಟು ನೀ ಎದ್ದು ಹೋದಮೇಲೆ ಉಸಿರಿಗೊಮ್ಮೆ ನೆನಪಾಗಿ ಭೋರೆಂಬ ಮಳೆಯನೂ ಸೀಳಿ ದಿಗಿದಿಗಿ ಉರಿವ ಚಿತೆಯೆದುರಿನ ರುದ್ರ ಮೌನವಾಗಿ ಕಾಡುತ್ತಿದೆ...
ನಿನ್ನೆಡೆಗಿನ ನನ್ನ ಹುಚ್ಚು ತಕರಾರುಗಳನು ನಾ ಕಿರುಚಾಡಿ ಹೇಳುತ್ತಿದ್ದಾಗ ಕಣ್ಣ ಹನಿಗಳ ಮರೆಯಲಿಟ್ಟು ನಗುತ್ತಾ 'ಆssನ್ ಬೈದ್ರೂ ಎಂದೇ ಮಗಂಗೆ, ನೀ ಬೈದ್ರೆ ಮಗ ಬೈದದ್ದು ಅಷ್ಟೇ' ಅಂತಂದುಬಿಡುತ್ತಿದ್ದೆಯಲ್ಲ - ಆಹಾ! ಎಂಥಾ ಸರಳ ಸೂತ್ರ ನಿನ್ನದು ನಿನ್ನ ಕರುಳಿನೆದುರಿನ ಸಮಾಧಾನಕ್ಕೆ... 
ಹಂಗೇ ಎದ್ದು ಬಂದು ಅಂದಿನಂಗೆಯೇ ಮಮತೆ ಕಟ್ಟಿದ ಕಿರಿಕಿರಿ‌ಯ ದನಿಯಲಿ ನನ್ನ ಮರೆವನ್ನೊಮ್ಮೆ ಬೈದು ಹೋಗಬಾರದೇ ಅಂದುಕೊಳ್ಳುತ್ತೇನೆ ಇಂದು ನಿನ್ನ ಮಸಣ ಕಲ್ಲಿನೆದುರು ಕಬೋಜಿಯಾಗಿ ನಿಂತು...
ನಿನ್ನ ಗೋತ್ರ ಪ್ರವರಗಳ ಮಣಮಣಿಸಿ ಇಟ್ಟ ಪಿಂಡದಗುಳನು ಹುಡುಕಿ ಕಾಕಗಳು ಬಂದವಾ?! ಕಾದು ನಿಲ್ಲಲೂ, ತಿರುಗಿ ನೋಡಲೂ ಧೈರ್ಯ‌ವಾಗಲಿಲ್ಲ ಅಥವಾ ಧೈರ್ಯ‌ವುಳಿದಿಲ್ಲ...
ಮರೆತವನಂತೆ ಬದುಕಬೇಕಿನ್ನು ಕಾಲವೂ ಮರೆಯಲಾಗದ ಸೊಲ್ಲನು...
____ ಕಣ್ಣಲ್ಲಿ ಹನಿ ಇಲ್ಲದವನ ಎದೆಯ ರಕ್ತವೀಗ ಸದಾ ಉದ್ವಿಗ್ನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment