Sunday, January 30, 2011

ಗೊಂಚಲು - ಮೂರು...

"ಕನಸು ಕೊಳೆತ ನಾತ":~


ಒಂದು ಸುಂದರ ಬದುಕಿತ್ತು.
ಅಲ್ಲೊಂದಿಷ್ಟು ಚಂದನೆಯ ಕನಸುಗಳಿದ್ದವು...


ಬದುಕು -
ಬದುಕೆಂದರೆ ಅದೇ ತಾನೆ - ಗಿಜಿಗುಡುವ ಅನಿಶ್ಚಿತತೆಗಳ ಸಂತೆ.
ಅಂಥದೊಂದು ಅನಿಶ್ಚಿತ ಅವಘಡಕ್ಕೆ ಎದುರು ನಿಲ್ಲಲಾಗದೇ, ಬದುಕಿಗಾಗಿ - ಅಲ್ಲ ಕೇವಲ ಬದುಕಿರುವುದಕ್ಕಾಗಿ,
ಆ ಎಲ್ಲ ಕನಸುಗಳನ್ನೂ ಪ್ರಜ್ಞಾಪೂರ್ವಕವಾಗಿ ಕೊಂದೆ.
ಕೊಂದುದಲ್ಲದೇ ಮನದ ಮೂಲೆಯ ಆಳದಲ್ಲಿ ಹೂತುಬಿಟ್ಟೆ.


ಆದರೀಗ,
ಹೂತ ಕನಸುಗಳ ಕೊಳೆತ ನಾತ ಬರುತ್ತಿದೆ.


ಆಸೆಯೆಂಬ ನಾಯಿಗೆ ನಾಚಿಕೆಯೇ ಇಲ್ಲ.
ಸಮಾಧಿಯನ್ನೂ ಅದು ಬಿಡಲಾರದಲ್ಲ...!
ಸಮಾಧಿಯ ಹೊಟ್ಟೆಯ ಬಗೆಬಗೆದು ಕೊಳೆತು ಜೀರ್ಣವಾದ ಶವವ ಹೊರತೆಗೆದು ಅದರ ನಾತ ಜೀವವ ಹಿಂಡುವಂತೆ ಮಾಡಿ ನಗುವುದಲ್ಲ..!


ಮತ್ತೆ ಹೂಳಲೂ ಆಗದೆ, ಇತ್ತ ನಾತವ ಸಹಿಸಲೂ ಆಗದೆ ಮಿಡುಕಿ ಒದ್ದಾಡುತಿದೆ ನನ್ನ ಜೀವಾತ್ಮ.


ನಿನ್ನೆಗಳ ಭಗ್ನ ಕನಸುಗಳ ಘೋರಿಯ ಮೇಲೆ ಕುಳಿತು ನಾಳೆಗಳ ಭವ್ಯತೆಯ ಬಗೆಗೆ ಹಗಲ್ಗನಸುಗಳ ಕಾಣುತ್ತಾ ಇಂದನ್ನು ಹಾಗೇ ಸುಮ್ಮನೆ ತಳ್ಳಿಬಿಡುವುದೇ ಬದುಕಾಗಿ ಹೋಯಿತಾ..?
ಹೀಗೆ ಬದುಕಿರುವುದಕ್ಕೋಸ್ಕರ ಬದುಕಿರುವುದು ಅಷ್ಟೊಂದು ಅಗತ್ಯವಾ..?
ಇಂಥ ಬದುಕಿಗಿಂತಲೂ ಸಾವಿಗೇ ಒಂದು ಸೌಂದರ್ಯವಿದೆಯೇನೋ..!!!


ಆದರೆ - ನಂಗೆ
"ಸಾಯಲು ಮನಸಿಲ್ಲ..."

Wednesday, January 26, 2011

ಗೊಂಚಲು - ಎರಡು...

ಬೆಳದಿಂಗಳು ಚೆಲ್ಲಿರುವ ರಾತ್ರಿ ಒಂಟಿಯಾಗಿ ಪ್ರಕೃತೀನ ನೋಡೋದು ಎಷ್ಟು ಖುಷಿಯ ಸಂಗತಿ ಗೊತ್ತಾ..! ಚಂದಿರನ ಹಾಲು ಬೆಳಕಿನ ತಂಪನ್ನ ಆಸ್ವಾದಿಸುತ್ತಾ ಒಮ್ಮೆ ಆಕಾಶಾನ ಒಮ್ಮೆ ಪ್ರಕೃತೀನ ನೋಡೋ ಮುದವೇ ಬೇರೆ.ಜಗವನೆಲ್ಲ ತಣ್ಣಗಿಡ್ತೀನಿ ಅಂತ ಬೀಗೋ ಚಂದ್ರ - ಆತನ ಬೆಳಕಿನ ನಡುವೆಯೇ ತಮ್ಮ ಅಸ್ತಿತ್ವಾನ ಸಾರುತ್ತಾ,ತಾವೇನು ಕಮ್ಮಿ ಅಂತ ಕೇಳ್ತಾ ಮಿನುಗೋ ತಾರೆಗಳು - ತನ್ನ ನೀಲಿಯ ವಿಸ್ತಾರದಲ್ಲಿ ಇವರನ್ನೆಲ್ಲ ಸಾಕ್ತಿದೀನಿ ಅಂತ ಬಿಂಕ ತೋರೋ ಬಾನ ನಿಶ್ಚಲತೆ. ಓಹ್..! ಗ್ರೇಟ್.

ಇನ್ನು ಭುವಿಗೆ ಬಂದ್ರೆ: ನಿಗೂಢವಾಗಿ,ಗಂಭೀರವಾಗಿ ಗೋಚರಿಸೋ ದೂರದ ಬೆಟ್ಟಗಳು - 'ಅವು ಬದುಕಿನಂತೆ'. ಸುಮ್ಮನೇ ಅಲುಗಾಡುತ್ತಾ ಬೆಳಕಿನ ಜೊತೆ ಚೆಲ್ಲಾಟವಾಡೋ ತೆಂಗಿನ ಗರಿಗಳು - 'ಅಂಗಳದಲ್ಲಿ ಆಡೋ ಹಸುಳೆಯಂತೆ.' ಹಾಲಿನ ಅಭ್ಯಂಜನ ಮಾಡ್ಕೊಂಡು ಹಾಗೇ ನಿಂತಂತೆ ಕಾಣೋ ಅಡಿಕೆಮರಗಳು - 'ಮುಖಕೆಲ್ಲ ಅರಿಶಿನ ಬಳ್ಕೊಂಡು ಸುಮ್ನೇ ನಾಚುತ್ತಾ, ಹಾಗೇ ನಗುತ್ತಾ ಯಾರಿಗೋ ಕಾದು ನಿಂತ ಹೊಸ ಹರೆಯದ ಮುಗುದೆಯಂತೆ.' ಚಂದ್ರಂಗೇ ಮುತ್ತಿಡಬೇಕೆಂಬ ಆಸೆಯಿಂದ ತೀರಾ ತೀರಾ ಎತ್ತರಕ್ಕೆ ಬೆಳೆದು ಇನ್ನು ಬೆಳೆಯೋಕಾಗದೇ ತಲೆ ಬಾಗಿಸಿ ನಿಂತ ಹುಲ್ಲ ಗರಿಕೆಯಂತೆ ಕಾಣೋ ಬಿದಿರ ಹಿಂಡು - 'ಹದಿವಯಸಿನ ಹುಡುಗನ ಮನದ ಆಸೆಯಂತೆ.' ಬೋಳುಗುಡ್ಡೆಯ ತಲೆಯ ಮೇಲೆ ಆಗಸವನ್ನೇ ಆಸೆಯಿಂದ ನೋಡ್ತಾ ಕೂತಂತೆ ಕಾಣುವ ಕಲ್ಲು ಬಂಡೆ - 'ಪ್ರಿಯತಮನ ಬರವಿಗಾಗಿ ಕಾದು ಕುಳಿತ ವಿರಹಿಣಿಯಂತೆ.'

ಓಹ್..! ಎಂಥ ಅಧ್ಬುತ. ಎಷ್ಟೊಂದು ವೈವಿಧ್ಯದ ಸೊಬಗು.ಬೆಳಿಗ್ಗೆ ಸೂರ್ಯನ ಬೆಳಕಲ್ಲಿ ಸರ್ವೇ ಸಾಮಾನ್ಯ ಎಂಬಂತೆ ಕಾಣುವ ವಸ್ತುಗಳು ಕೂಡಾ ರಾತ್ರಿಯ ಬೆಳದಿಂಗಳಲ್ಲಿ ವಿಶಿಷ್ಟವಾಗಿ, ಮನೋಹರವಾಗಿ,ಮನಮೋಹಕವಾಗಿ ಗೋಚರಿಸುತ್ತವೆ.ಅದೊಂದು ಬೇರೆಯದೇ ಪ್ರಪಂಚ. ಕಲ್ಲು ಮನಸಲ್ಲು ಕೂಡಾ ಭಾವನೆಗಳ ಒರತೆ ಚಿಮ್ಮುವಂತೆ ಮಾಡಬಲ್ಲ ದಿವ್ಯ ಲೋಕವದು. ಆ ದಿವ್ಯ ಲೋಕದಲ್ಲಿ ಒಂಟಿಯಾಗಿ ವಿಹರಿಸೋದೊಂದು ಅಧ್ಬುತ ಅನುಭೂತಿ.ಹಾಗೇ ಚಂದ್ರ ತಾರೆಗಳ ಲೋಕದಲ್ಲಿ, ಅದರಾಚೆಯ ಬಾನ ನೀಲಿಯಲ್ಲಿ ವಿಹರಿಸುತ್ತಾ ಮನದ ಭಾವಗಳನ್ನು ಸ್ವಚ್ಛಂದವಾಗಿ ಹರಿಯಬಿಡೋದು - ಆ ಮೂಲಕ ಕನಸುಗಳಿಗೆ ಪಕ್ಕಾಗೋದು. ಓಹ್..! ಅದೆಂಥ ದಿವ್ಯ ರಸಾನುಭೂತಿ. ಮನಸು ಖುಷಿಯಿಂದ ಹುಚ್ಚಾಗಿಬಿಟ್ಟಿರುತ್ತೆ. ಹಾಗೆ ಹುಚ್ಚಾದಾಗಲೇ ಮನಕ್ಕೆ ತನ್ನ ಹುಚ್ಚನ್ನು ಹಂಚಿ ಹೆಚ್ಚಿಸಿಕೊಳ್ಳಲು ಪಕ್ಕದಲ್ಲೊಬ್ಬಾಕೆ ಹುಚ್ಚಿಯ ಸಾಂಗತ್ಯ ಬೇಕೆನಿಸೋದು. ಒಮ್ಮೆ ಆ ಸಾಂಗತ್ಯದ ಆಸೆ ಮನದಿ ಮೂಡಿತೆಂದರೆ ಸಾಕು. ಅಷ್ಟು ಹೊತ್ತು ಒಂಟಿಯಾಗಿ ಏಕಾಂತವನ್ನು ಬಯಸ್ತಿದ್ದ ಮನ ಆಮೇಲಿಂದ ಸಂಗಾತಿ & ಆಕೆಯೊಂದಿಗೆ ಸೇರಿ ನಡೆಯುವ ಪಯಣದ ಕನಸನ್ನು ಕಾಣೋಕೆ ಶುರುಹಚ್ಕೊಂಬಿಡತ್ತೆ. ಆ ಕನಸು ಕಲ್ಪನೆಗಳು ಕೂಡ ಸೊಗಸಾಗಿಯೇ ಇರುತ್ವೆ ಅನ್ನಿ. ಆ ಅನುಭೂತೀನ ಆಸ್ವಾದಿಸಿಯೇ ತಿಳ್ಕೋಬೇಕು. ಅಕ್ಷರಗಳಲ್ಲಿ ಬಿಂಬಿಸೋಕದು ಅಸಾಧ್ಯ.

ಹಾಗೆ ಆಸ್ವಾದಿಸಬೇಕೆಂದರೆ - ಬೀಸುವ ತಂಗಾಳಿಯೊಂದಿಗೆ ತೇಲಿ ಬರೋ ಎಲ್ಲ ತರಹದ ಭಾವಗಳೂ ಒಳ ತೂರಿ ಬರುವಂತೆ ಮನದ ಬಾಗಿಲನ್ನು ಪೂರ್ಣವಾಗಿ ತೆರೆದಿಟ್ಕೋಬೇಕು. ಆ ಉದಾರ ಭಾವ ನಮ್ಮ ಬುದ್ಧಿಗಿರಬೇಕು.

ಈ ಎಲ್ಲ ರಸಾನುಭೂತೀನೂ ಆಸ್ವಾದಿಸಿದ ಆ ಕ್ಷಣ ನನಗನ್ನಿಸಿದ್ದೇನಂದ್ರೆ ಎಂದಾದರೊಂದು ದಿನ ಇಂಥದೇ ಬೆಳದಿಂಗಳ ರಾತ್ರಿಯಲ್ಲಿ,ಇಷ್ಟೇ ಸ್ವಚ್ಛಂದ -  ಪ್ರಪುಲ್ಲ ಮನಸ್ಥಿತೀಲಿ ಬಾಳಸಂಗಾತಿಯೊಂದಿಗೆ ಆಕೆಯ ಹೆಗಲು ತಬ್ಬಿ ಓಡಾಡಬೇಕು. ಹಾಗೇ ಕೂತು ಕನಸುಗಳನ್ನು ಶೇರ್ ಮಾಡ್ಕೋಬೇಕು. ಮಡಿಲಲ್ಲಿ ಒರಗಿ ನಕ್ಷತ್ರಗಳನ್ನೆಣಿಸಬೇಕು.ಆಕೇನ ನಗಿಸಿ ಚಂದ್ರನನ್ನೇ ಅಣಕಿಸಬೇಕು. ಆಕೆಯ ಕಂಗಳಲ್ಲಿ ಮಿನುಗೋ ಖುಷಿಗೆ ನಾನು ಕಾರಣನಾಗಬೇಕು. ಆ ಖುಷಿ ಮುತ್ತಾಗಿ ತುಟಿಯ ತೋಯಿಸಬೇಕು. ಅದ ನೋಡಿ ಚಂದ್ರನೂ ನಾಚಿ ಮೋಡದ ಮರೆಯಲಿ ಅಡಗಬೇಕು.

ಈ ಕಲ್ಪನೆ ಚೆನ್ನಾಗಿದೆ ಅಲ್ವಾ..? ಅದು ಬರೀ ಕಲ್ಪನೆ ಅಂದ್ರೆ ತಪ್ಪಾಗುತ್ತೆ. ಅದು ನನ್ನ ಕನಸೂ ಆಗಿತ್ತು. (ವಾಸ್ತವದ ಭೀಕರತೆಯಲ್ಲಿ ಇಂಥ ಸಾವಿರಾರು ಕನಸುಗಳು ಸತ್ತು ಸಮಾಧಿಯಾಗಿ ಹೋದವು.)

ಇಂಥ ಮಧುರ ಭಾವಗಳಿಗೆ ಬಸಿರಾಗುವಂತೆ ಪ್ರೇರೇಪಿಸಿದ ಅಂದಿನ ಆ ಬೆಳದಿಂಗಳ  ಹುಣ್ಣಿಮೆ ರಾತ್ರಿಗೆ - ಆ ಬೆಳದಿಂಗಳ ಸೂಸಿದ ಚಂದಿರನಿಗೆ - ಅವನ ಚಂದಕ್ಕೆ ಇನ್ನಷ್ಟು ಮೆರಗು ತುಂಬಿದ ತಾರೆಗಳಿಗೆ - ಅವಕ್ಕೆಲ್ಲ ಆಶ್ರಯ ನೀಡಿದ ಬಾನ ನಿಶ್ಚಲ ನಿರ್ಮಲ ನೀಲಿಗೆ. ಎಲ್ಲವಕ್ಕೂ ಸೇರಿ ನನ್ನದೊಂದು ಸಲಾಮ್..

ಗೊಂಚಲು - ಒಂದು...

"ಭೂತಕಾಲದ ನೋವು ವರ್ತಮಾನದ ನಗುವಾಗುತ್ತೆ. ಎದುರಾಗುವ ಪ್ರತಿ ನೋವನ್ನೂ ನಗುವಾಗಿಸಿಕೊಳ್ಳಬಲ್ಲವರಾದರೆ ಕೊನೆಗೆ ಬದುಕೆಲ್ಲ ನಗುವೇ ಆಗಿಬಿಡುತ್ತೆ."


ಸವಿನೆನಪುಗಳ ನಡುವೆ ಇಣುಕಿ ನೋಡುವ ಒಂದ್ಯಾವುದೋ ಕಹಿ ನೆನಪಿಗೆ ತನ್ನ ಕಣ್ಣಂಚ ನಗುವನ್ನು ಕೊಲ್ಲುವ ತಾಕತ್ತಿಲ್ಲದಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ವ್ಯಕ್ತಿಗೆ ಬದುಕೊಂದು ಸ್ವರ್ಗವೇ ಆಗುತ್ತದೆ..


ಒಂದು ಭವ್ಯ ಭವಿಷ್ಯತ್ತಿನ ಪುಟ್ಟ ಪ್ರಣತಿ ಸದಾ ಮನದಲ್ಲಿ ಉರಿಯುತ್ತಲೇ ಇರಲಿ. ಬದುಕಿನ ಯಾವುದೋ ಒಂದು ತಿರುವಿನಲ್ಲಿ ಗೆಲುವೆಂಬುದು ಅನಿರೀಕ್ಷಿತವಾಗಿ ಫಕ್ಕನೇ ಎದುರಾಗಿ ಕೈಯ ಹಿಡಿಯುತ್ತೆ ಎಂಬ ಭರವಸೆ ಬದುಕಿಗೆ ಬೆನ್ನು ತಿರುಗಿಸದೇ ಮುನ್ನಡೆಯಲು ಪ್ರೇರೇಪಿಸುತ್ತಿರಲಿ. ಅದು ಸುಳ್ಳೇ ಭರವಸೆಯಾದರೂ ಸರಿ. ಅದು ನಮ್ಮೊಳಗೆ ನಾವು ಸದಾ ನಗುತಿರಬಲ್ಲ ಆತ್ಮ ಶಕ್ತಿಯನ್ನು ಹೊಂದಿಸಿಕೊಟ್ಟರೆ ಅಷ್ಟೇ ಸಾಕು.


ನಗೆಯು ಸಾಂಕ್ರಾಮಿಕವಾಗಲಿ....