Monday, February 17, 2014

ಗೊಂಚಲು - ಒಂದು ಸೊನ್ನೆ ಒಂಬತ್ತು.....

ನನಗೇ ಅರ್ಥವಾಗದೆ ಹೋದದ್ದು.....

ಸಾವಿರ ಮಾತುಗಳ ನಡುವೆಯೂ ತಿರುಳಿಲ್ಲದ ಹೀನ ಒಂಟಿ ಪೈಶಾಚ ಮೌನವೊಂದು ರಾತ್ರಿಗಳ ನಿದ್ದೆಯ ಕತ್ತು ಹಿಸುಕುತ್ತಿದೆ...
ಬಲವಂತವಾಗಿ ಮುಚ್ಚಿದ ರೆಪ್ಪೆಗಳಡಿಯಲ್ಲಿ ಕನಸುಗಳ ಹೆಣಗಳ ಬಯಲಾಟ...
ಆದರೂ ರಾತ್ರಿ ಮುಗಿಯಲೇ ಬಾರದೆನಿಸುತ್ತೆ – ಮುಚ್ಚಿದ ಕಣ್ಣು ತೆರೆಯಲೇ ಬಾರದು...
ಕಾರಣ – ಹಗಲಲೂ ಈ ಮೌನವ ಸಹಿಸಲಾಗದೆಂಬ ಮತ್ತು ಹೆಣಗಳ ರಾಶಿಯ ಬೆಳಕಲ್ಲಿ ನೋಡಲಾರೆನೆಂಬ ಮನದ ಕಂಗಾಲು...
ನಿಜಕ್ಕೂ ಈ ಬದುಕ ದಾರಿ ತುಂಬ ದೀರ್ಘವಾಯಿತೆನಿಸುತ್ತದೆ ಆಗೀಗ...

***

ಸೋತ ರಟ್ಟೆಗಳಲಿ ಹುಟ್ಟು ನಡುಗುತಿದೆ...
ಇನ್ನೆಷ್ಟು ಸುಳಿಗಳ ಹಾಯಬೇಕೋ ಬದುಕ ನಾವೆ ದಡ ಸೇರಲು...
ಕನಸ ಹುಟ್ಟು ಕೈಜಾರಿದರೆ ನಾವೆ ದಿಕ್ಕು ತಪ್ಪೋದು ದಿಟ...
ಸೋತ ಬಲಗೈಗೆ ಮುರಿದ ಎಡಗೈಯ ಆಸರೆ ನೀಡಿ, ಇಲ್ಲದ ಕನಸನು ಇದೆಯೆಂದು ಮನಸ ನಂಬಿಸಿ ತೇಲಲು ಹೆಣಗುತ್ತಿದ್ದೇನೆ... 
ನಾವೆ ಮಗುಚಿದರೆ ಬದುಕು ಜಲಸಮಾಧಿ – ನಂಗೆ ಈಜು ಬಾರದು...
ಆದರೂ –
ನಾಳೆ ಮುಳುಗುವ ಭಯಕಿಂತ ಇಂದೇ ಉಸಿರುಗಟ್ಟುವುದು ಲೇಸೇನೋ...

***

ಬುದ್ಧಿ ಎಷ್ಟೇ ವಾದಗಳ ಹೂಡಿದರೂ,
ಮನಸು ಅದೆಷ್ಟೇ ಸಬೂಬುಗಳ ಕಲೆ ಹಾಕಿದರೂ,
ನನ್ನ ಒಂದೇ ಒಂದು ತಪ್ಪು ನಡವಳಿಕೆಯನೂ, ನೋವನುಣಿಸಿದ ಕ್ರೌರ್ಯವನ್ನೂ ಸರಿಯೆಂದು ಸಾಬೀತುಗೊಳಿಸಲಾಗದು
ನನ್ನಂತರಾತ್ಮನ ನ್ಯಾಯಾಲಯದಲ್ಲಿ...
ಪಾಪಪ್ರಜ್ಞೆ ಸಾವಿಗಿಂತ ದೊಡ್ಡ ಶಿಕ್ಷೆ...

***

ಗೆಳತೀ -
ಕನಸುಗಳು ಸತ್ತಷ್ಟು ಸುಲಭಕ್ಕೆ ಕೆಲ ನೆನಪುಗಳೇಕೆ ಸಾಯಲಾರವೋ...
ಕನಸುಗಳ ಜತೆ ಜತೆಗೆ ಒಂದಿಷ್ಟು ಕೆಟ್ಟ ನೆನಪುಗಳೂ ಸಾಯುತ್ತಿದ್ದರೆ ಇನ್ನಷ್ಟು ನಿರಾಳವಾಗಿ ಉಸಿರಾಡಬಹುದದಿತ್ತೇನೋ ಅನ್ನಿಸುತ್ತೆ...
ಹಿಂಡುವ ನೆನಪುಗಳ ಹೂಳಿನಿಂದಾಚೆ ಬಂದು ಕೊಳೆ ತೊಳಕೊಂಡು ಹಗುರಾಗಬೇಕಿದೆ...
ಹಾಗೆ ಹಗುರಾಗಬೇಕೆಂದರೆ ನಿನ್ನಂತ ಆತ್ಮಬಂಧುಗಳೊಂದಿಗೂ ತುಂಬ ತುಂಬ ಜಗಳವಾಡಬೇಕು...
ಆದರೆ –
ನಿನ್ನೆಡೆಗೆ ನನ್ನ ಮನದ ಹುಚ್ಚು ನಿರೀಕ್ಷೆಗಳು ಹೆತ್ತ ತಪ್ಪು ಮತ್ತು ನೋವುಗಳಿಗಾಗಿ ನಿನ್ನಂಥ ಯಾರ್ಯಾರೆಲ್ಲರೊಂದಿಗೆ ಎಷ್ಟೂಂತ ಜಗಳವಾಡಲಿ...
ನನ್ನದೇ ಪ್ರಜ್ಞೆ ನನ್ನ ಮನವ ಅಣಕಿಸುವಾಗ ನಿನ್ನ ತಪ್ಪುಗಳ (?) ಅದ್ಹೇಗೆ ಎತ್ತಿ ಆಡಲಿ...

***

ತೊರೆದ ಆ ಊರಿಂದ ಪೊರೆಯುತಿರುವ ಈ ಊರವರೆಗೆ ಸಾಗಿ ಬಂದ ಆ ಖಾಲಿ ದಾರಿಯ ಧೂಳ ಕಣಗಳ ನಡುವೆ ಬಿದ್ದು ಹೊರಳಾಡುತಿರುವ ನನ್ನ ಕನಸುಗಳನೆಲ್ಲಾ ಮತ್ತೆ ಎತ್ತಿ ಮನದ ಖಜಾನೆಗೆ ತುಂಬಿಕೊಳ್ಳುವಂತಿದ್ದಿದ್ದರೆ.............

***

ಇಲ್ಲೊಂದಷ್ಟು ಸದ್ದಿಲ್ಲದೆ ಕೊಲೆಯಾಗುವವುಗಳನ್ನೂ, ಇನ್ನೆಲ್ಲೋ ಒಂದು ಮಾತಾಗಿ ಬೆರಳ ತಾಕುವುದನ್ನೂ – ಎರಡನ್ನೂ ಒಂದೇ ಆತಂಕದಿಂದ ನೋಡುತ್ತಿದ್ದೇನೆ...
ನಿರ್ಲಿಪ್ತನಾಗಿ ನೋಡುತ್ತಿರಬಹುದಾದದ್ದಷ್ಟೇ ಇಂದೀಗ ನಾ ಮಾಡಬಹುದಾದದ್ದು ಅನ್ನಿಸುತ್ತೆ...
ನಗಲಾದರೆ ನಗಬಹುದಷ್ಟೇ...
ಹೊಸದರ ಹುಟ್ಟು ಭಯವನ್ನೂ, ಆಪ್ತವಾದದ್ದರ (?) ಸಾವು ಬೆರಗನ್ನೂ ಮೂಡಿಸಿದರೆ ಅದು ನನ್ನದೇ ಮನಸಿನ ವೈಕಲ್ಯವಲ್ಲವಾ...
ಬೆಳಕಿಗಿಂತ ಕತ್ತಲೆಯೆ ಸಹನೀಯ ಈಗೀಗ...
ನಿರ್ಲಿಪ್ತತೆ ವರವೋ, ಶಾಪವೋ ಎಂಬುದನ್ನು ಕಾಲವೇ ಹೇಳಬೇಕು...
ಕಾಯುತ್ತ ಕೂತಿದ್ದೇನೆ ಸಹಜ ನಗುವಿಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Saturday, February 15, 2014

ಗೊಂಚಲು - ಒಂದು ಸೊನ್ನೆ ಎಂಟು.....

ವಸುಂಧರೆಯ ಚೆಲುವಿಗೆ ಬೆರಗಾಗಿ.....

ಸಾಗರನ ಸಖ್ಯ ಬಯಸಿ – ಗಾಳಿಯಲೆಗಳ ಸೀಳಿ – ಲಾಸ್ಯವಾಡುವ ಹಕ್ಕಿ ರೆಕ್ಕೆಯಂತೆ ಇಲ್ಲೀಗ ನನ್ನ ಮನಸು...
ಮೋಡಕಿಂತ ಎತ್ತರ ನಾನೀಗ ಎಂಬ ಭ್ರಮೆಯಲ್ಲಿ ಮನಸಲ್ಲಿನ ಭಾವದಲೆಗಳು ಬೀಸು ಗಾಳಿಯೊಂದಿಗೆ ಜಿದ್ದಿಗೆ ಬಿದ್ದಿವೆ...
ಕೊಡಚಾದ್ರಿ ಗಿರಿಯ ನೆತ್ತಿಯ ಚುಂಬಿಸಿದ ಪಾದಗಳಲ್ಲಿ ದಾರಿ ತುಳಿದ ಆಯಾಸ – ಮನದಲ್ಲಿ ಮತ್ತೆ ಒಗ್ಗೂಡುತಿರುವ ಅಷ್ಟಿಷ್ಟು ಜೀವನ ವ್ಯಾಮೋಹ...

ಒಂದೆಡೆ ಬಯಲು – ಪಕ್ಕದಲ್ಲೇ ಹಸಿರ ಸಾಗರ – ಅಲ್ಲೊಂದು ಕೊಳ – ಇನ್ನೆಲ್ಲೋ ಒಂದು ಹಳ್ಳ – ಕಾಡೆಂದರೆ ಸಾಸಿರ ಸಾಸಿರ ಬೆರಗು ತುಂಬಿದ ಬಳ್ಳ...
ಹಕ್ಕಿಗಳ ಉಯಿಲು – ಜೀರುಂಡೆಗಳ ಗಿಜಿ ಗಿಜಿ – ಅಲ್ಲೆಲ್ಲೋ ಓಡಾಡೋ ಮೃಗಗಳ ಹೆಜ್ಜೆ ಸಪ್ಪಳ – ಸರಿದಾಡೋ ಸರಿಸೃಪಗಳ ಸರಬರ; ಅಷ್ಟೆಲ್ಲ ಸದ್ದುಗಳ ನಡುವೆಯೂ ನೆಲೆ ಕಂಡುಕೊಂಡ ಗವ್ವೆನ್ನೋ ಮೌನ...
ಕಾಂಕ್ರೀಟು ಕಾಡು ಸುಸ್ತೆನಿಸಿದಾಗಲೆಲ್ಲ ಆ ಹಸಿರು ಕಾಡು ಇನ್ನಿಲ್ಲದಂತೆ ಕಾಡಿ ತನ್ನ ಮಡಿಲಿಗೆ ನನ್ನ ಕರೆಯುತ್ತೆ...
ಆ ಕಾಡಲ್ಲಿ ಕಳೆದು ಹೋದಾಗಲೆಲ್ಲಾ ಮನಸಿಗೇನೋ ಬೆಳಗು ಮೂಡಿದ ಭಾವ...
ಮೊನ್ನೆ ದಿನ ನನ್ನದೇ ಆಪ್ತ ಬಳಗದೊಂದದಿಗೆ ಹೀಗೆ ಅಲೆದದ್ದು ಕೊಡಚಾದ್ರಿಯ ಕಾಡಲ್ಲಿ...
ಇಲ್ಲೊಂದಿಷ್ಟು ಛಾಯಾಚಿತ್ರಗಳಿವೆ – ನನ್ನ ಕ್ಯಾಮರಾ ಕಣ್ಣಲ್ಲಿ ತುಂಬಿ ತಂದ ಅಲ್ಲಿಯ ಸವಿನೆನಪುಗಳು...
ಶರಾವತಿಯ ಹಿನ್ನೀರು ಮತ್ತು ಕೊಡಚಾದ್ರಿಯ ಹಸಿರು ನಿಮ್ಮ ಕಣ್ಣನೂ ತುಂಬಲಿ...
ಸುಮ್ಮನೆ ನೋಡಿ ಅನುಭಾವಿಸಿ – ಆ ಏರಿಯಲ್ಲಿನ ನಮ್ಮ ಏದುಸಿರು, ಇಳಿದಾದ ಮೇಲಿನ ನಿಟ್ಟುಸಿರು ಎರಡೂ ನಿಮ್ಮನೂ ತಾಕೀತು...
ಶರಾವತಿ ಹಿನ್ನೀರು...
ದಾರಿ ನಡುವೆ ಬಾಲ್ಯ ನೆನಪಾಗಿ...

ಹಾಗೇ ಸುಮ್ಮನೆ...

ಕಬ್ಬಿನ ಗದ್ದೆಗೆ ಪುಂಡರ ಹಿಂಡು...:)

ಹಳ್ಳಿ ಹಾಡು...

ಕಾಡ ನಡುವೆಯ ಸೊಬಗು ಹಿಡ್ಲುಮನೆ ಜಲಪಾತ...


ಹನಿಗಳ ನರ್ತನ...
ಏದುಸಿರ ಏರು ಹಾದಿ...


ಹಸಿರ ಹಾಸಿನ ದಾರಿ...

ಕೊಳದ ನೀರ ಹೀರಿ ಸುಸ್ತು ಮರೆವಾಗ...
ಬಯಲು ದಾರಿ...ರವಿ ತಾನು ವಸುಂಧರೆಯ ವಕ್ಷೋಜಗಳ ನಡುವೆ ಮರೆಯಾಗೋ ಹೊತ್ತಿನ ನಾಚಿಕೆಯ ರಂಗು...

ಬೆಳಗಾಗೋ ಹೊತ್ತು...

ಸರ್ವಜ್ಞ ಪೀಠ...ಮೋಡಕೆ ಮುತ್ತಿಕ್ಕೋ ಗಿರಿಯ ಹಂಬಲವಾ – ಈ ಎತ್ತರ...ಹಸಿರ ಹಾಸಿಗೆ ಮೋಡದ ಹೊದಿಕೆ...

ಕಾಲು ಜಾರಿದರೆ ಕೈಲಾಸ...:)ಕೊಡಚಾದ್ರಿಯ ನೆತ್ತಿಯ ಮೇಲಣ ಸರ್ವಜ್ಞ ಪೀಠದೆದುರು ನನ್ನ ಬಳಗದೊಂದಿಗೆ ನಾನು...

ಇನ್ನೀಗ ಮುಕ್ತಾಯ ಸಮಯ...

ಆ ಹಸಿರ ಒಡಲಲ್ಲಿ, ಜಲಪಾತದ ತುಂತುರಿನಲ್ಲಿ, ಹಿನ್ನೀರ ಜಲರಾಶಿಯ ನಡುವಲೆಲ್ಲ ಓಡಾಡಲು ಜೊತೆಯಾದ, ನನ್ನ ಆ ಕಾಡು ಹಾದಿಯಲ್ಲಿ ಕೈಹಿಡಿದು ನಡೆದಾಡಿಸಿದ ನನ್ನ ಆಪ್ತ ಬಳಗದ ವಿನಾಕಾರಣದ ಪ್ರೀತಿಗೆ ನಾನು ಶರಣು...