Monday, February 3, 2014

ಗೊಂಚಲು - ಒಂದು ಸೊನ್ನೆ ಏಳು.....

ಹಾಗೇ ಸುಮ್ಮನೆ.....
(ಯಾವುದೂ ಸಂಪೂರ್ಣ ಸತ್ಯ ಅನ್ನಿಸಲ್ಲ - ವಿರೋಧಾಭಾಸಕ್ಕೆ ಮನಸೊಂದೆ ಹೊಣೆ...)

ನಿನ್ನೊಳಗಿನ ಪುಸ್ತಕವನು ಓದಿಕೋ - ಬದುಕು ಮಹಾಕಾವ್ಯದ ಒಂದು ಪುಟವಾದರೂ ಆದೀತು...
---
ನಿನ್ನ ಬದುಕಿಂಗೆ ಸ್ಪೂರ್ತಿ ನೀ ಗಳಿಸಿದ ಅನುಭವಗಳಿಂದ ದಕ್ಕಿದ ಅರಿವೇ ಆದಲ್ಲಿ ಈ ಬಾಳ ಒಂಟಿ ಒಂಟಿ ದಾರಿಯಲ್ಲೂ ನಿನ್ನೊಳಗು  ನಕ್ಕೀತು ಹಾಗೇ ಸುಮ್ಮನೆ ಎಂಬಂತೆ ಹಗುರತೆಯಿಂದ...
---
ನಿನ್ನೊಳಗೆ ನೀ ಇಳಿದಷ್ಟೂ ಅರಿವಿನ ಅಂತರ್ಜಲ ಹೆಚ್ಚು ಹೆಚ್ಚು ಶೇಖರಗೊಂಡು ನಗೆಯ ಹೊನಲಾಗಿ ಹೊರ ಧುಮುಕುತ್ತೆ...
---
ನಿನ್ನೊಳಗು ಅರಳಲಿ - ನಗು ಮನದಾಳದ ಭಾವವಾಗಿ ಹೊರಹೊಮ್ಮಲಿ - ಸುತ್ತ ಕೂಡ ನಗೆಯ ಬೆಳಕು ಸಂಚಯಿಸೀತು...
---
'ಅದರಲ್ಲೇನಿದೆ' ಎಂಬ ಪ್ರಶ್ನೆ ಮತ್ತು ಪ್ರಶ್ನೆಯ ಉತ್ತರಕ್ಕಾಗಿನ ಹುಡುಕಾಟದಲ್ಲೇ ನಮ್ಮೊಳಗಣ ಹಾಗೂ ಈ ಬದುಕಿನ ಬೆಳವಣಿಗೆಯ ಮೂಲ ಅಡಗಿದೆಯೇನೋ...

ನಿನ್ನ ಮನದಾಳದ ಸಂಗೀತವ ಕಿವಿಗೊಟ್ಟು ಆಲಿಸು - ಬದುಕಾಗ ಸಪ್ತಸ್ವರಗಳ ಸಮ್ಮಿಲನ... 
ಮಿಡಿವ ಪ್ರತಿ ರಾಗದಲೂ ಹೊಸ ಕನಸಿನ ಝೇಂಕಾರ...
---
ಆಪ್ತ ಮನಗಳೊಡನೆ ಭಾವಗಳ ಪ್ರಾಮಾಣಿಕ ವಿನಿಮಯ ಬದುಕ ಬೆಳವಣಿಗೆಯ ಹೂರಣ... 
ಭಾವ ನಿನ್ನೊಳಗೇ ಕೊಳೆಯದೇ ಎದುರಿನ ಮನದಲೂ ಹೊಳೆದಾಗ ಎರಡು ಭಾವಗಳು ಮಿಳಿತವಾಗಿ ಮನದಾಳ ನಗೆಯಿಂದ ಅರಳೀತು...

***

ಗಂವೆಂದು ಸುರಿವ ಗಾಢ ಕತ್ತಲೆಯ ಕಾಡು ಹಾದಿ...
ಕನಸಿನ ಸೊಡರ ಬೆಳಕ ಜೊತೆಯೂ ಇಲ್ಲದ ಒಂಟಿ ಒಂಟಿ ನಡಿಗೆ...
ಹೆಜ್ಜೆ ಹೆಜ್ಜೆಯಲೂ ಕತ್ತಲ ಕಾಡಲ್ಲಿ ಕಳೆದು ಹೋದೇನೆಂಬ ಮನಸಿನ ಕಂಗಾಲು...
ಆದರೂ,
ಹಿಂಗದ ಪ್ರೀತಿಯ ಹಸಿವಿನ ಹಪಹಪಿಯ ನಿರ್ಲಜ್ಜತೆಗಿಂತ - ಒಂದಷ್ಟು ದೂರ ಜೊತೆ ನಡೆದು, ಅಶಾಶ್ವತ ಬದುಕಲ್ಲೂ ಶಾಶ್ವತೆಯ ಕಲ್ಪನೆಗೆ ಕಾವುಕೊಟ್ಟ ಆಪ್ತ ಭಾವವೊಂದು ಸುಳಿವೀಯದೇ ಸತ್ತು ಹೋದೀತೆಂಬಂತೆ ಗೋಚರಿಸಿ ಕಂಗೆಡಿಸುವ ಹಿಂಸೆಗಿಂತ - ಕಿತ್ತು ತಿಂದರೂ, ನೀರವತೆಯ ಸುಖವನಾದರೂ ಕೊಡುವ ಒಂಟಿ ನಡಿಗೆಯೇ ಹಿತವೆನ್ನಿಸುತ್ತೆ ಒಮ್ಮೊಮ್ಮೆ...
ನಿರ್ಮಾನುಶ ದಾರಿಯಲ್ಲಿ ಹುಟ್ಟು ಒಂಟಿತನ ರೂಢಿಗತವಾಗಿ ಮೈತುಂಬಿ ಒಂದಷ್ಟು ಸಹನೀಯವೇ - ಆದರೆ, ಎರಡು ಹೆಜ್ಜೆ ಆಪ್ತ ಭಾವದೊಂದಿಗೆ ಜೊತೆನಡೆದು ನಾಲ್ಕನೇ ಹೆಜ್ಜೆಯ ಹೊತ್ತಿಗೆ ನಡುಬೀದಿಯಲಿ ಏಕಾಂಗಿಯಾಗುವುದು ಅಸಹನೀಯ...
ಇಷ್ಟಿಷ್ಟಾಗಿ ಕೊಲ್ಲದಿರಿ ಭಾವಗಳೇ - ನಿಶ್ಯಕ್ತ ಹೆಜ್ಜೆಗಳ ನೀರವ ನಡು ದಾರಿಯಲಿ...
ಕೊಲ್ಲುವುದಾದರೆ ಕೊಂದು ಬಿಡಿ - ಒಂದೇ ಏಟಿನ ಬಲಿಪೀಠದಲ್ಲಿ...
---
ಸಾವು ನನ್ನೊಂದಿಗೆ ನನ್ನೆಡೆಗಿನ ತನ್ನ ಪ್ರೀತಿಯನ್ನು ಹೇಳಿಕೊಂಡ ಮರುದಿನದಿಂದ ನಂಗೆ ಬದುಕ ಮೇಲೆ ಹುಚ್ಚು ಪ್ರೀತಿಯಾಗಿಬಿಟ್ಟಿದೆ...
ಬದುಕ ಒಲಿಸಿಕೊಂಬುದಕಾಗಿ ಹುಟ್ಟು ನಿರ್ಲಜ್ಜನಂತೆ ಅದರೆದುರು ಮಂಡಿಯೂರಿದ್ದೇನೆ...
ಬದುಕಿದು ಒಂದು ಕ್ಷಣಕಾದರೂ ಒಂದೇ ಒಂದು ಪ್ರೀತಿ ಸೂಸುವ ಮುಗುಳ್ನಗುವನಾದರೂ ಬೀರಿತಾದರೆ ನಾ ಸಾವಿನ ಪ್ರೀತಿಯನೂ ಪ್ರೀತಿಯಿಂದಲೇ ತಬ್ಬಿಬಿಟ್ಟೇನು...

4 comments:

  1. ಭಾವಗಳನ್ನೆಂದೂ ಕಮೆಂಟ್ ಮಾಡಲಾಗದು. ಅವುಗಳನ್ನು ಅಷ್ಟೇ ಹೃದ್ಯವಾಗಿ ಆಸ್ವಾದಿಸಕೊಳ್ಳುವುದು. ಮತ್ತು ಮೌನವಾಗಿ ಒಪ್ಪಿಕೊಳ್ಳುವುದು..

    ReplyDelete
  2. aha.. en chenda barediddeeri... super

    ReplyDelete
  3. ನಿನ್ನೊಳಗು ಅರಳಲಿ - ನಗು ಮನದಾಳದ ಭಾವವಾಗಿ ಹೊರಹೊಮ್ಮಲಿ - ಸುತ್ತ ಕೂಡ ನಗೆಯ ಬೆಳಕು ಸಂಚಯಿಸೀತು...

    super... :-)

    ReplyDelete