Saturday, February 16, 2013

ಗೊಂಚಲು - ಅರವತ್ತು ಮತ್ತೆರಡು.....

ಎದೆಯ ಚುಂಬಿಸಿದ ಪ್ರೀತಿ ಗಂಗೆಯ ಗೆಳೆತನ.....

ಉಸಿರಲ್ಲಿ ಬೆರೆತ ಹೆಸರಿಲ್ಲದ ಹುಡುಗೀ -
ಈ ಬಡ ಜೋಗಿಯ ಎದೆ ಜೋಪಡಿಯಲೀಗ
ನಿನ್ನೊಲವ ಕನಸುಗಳ ಗೆಜ್ಜೆಯ ಶ್ರೀಮಂತ ಘಲಿರು...

ಸಣ್ಣ ಮಳೆಯ ಸಂಜೆ,
ತುಟಿ ಉರಿಯುವ ಖಾರದ ಜೋಳ,
ಅರೆಗತ್ತಲ ದಾರಿ,
ಒಬ್ಬಂಟಿ ನಡಿಗೆ ಮತ್ತು ನಿನ್ನ ನೆನಪು...
ನನ್ನಂತರಂಗಕ್ಕೆ ಮಳೆಬಿಲ್ಲ ರಂಗು...
ಈ ಬದುಕೆಷ್ಟು ಸೊಗಸಲ್ಲವಾ...!!!

ಮೊದಲೆಲ್ಲ ಹೀಗಿರಲಿಲ್ಲ ನಾನು. ಶುದ್ಧ ಬಂಡೆಯಂಥ ಮನುಷ್ಯ. ಹಾಗಂತ ಗೆಳೆಯ ಗೆಳತಿಯರಿರಲಿಲ್ಲ ಅಂತಲ್ಲ. ಭಾವ ಬಂಧಗಳಿಗೆ ಸ್ಪಂದಿಸುತ್ತಿರಲಿಲ್ಲ ಅಂತಲೂ ಅಲ್ಲ. ಸ್ನೇಹಿತರ ದೊಡ್ಡ ಹಿಂಡು ನನ್ನ ಸುತ್ತ ಆಗಲೂ, ಈಗಲೂ. ಆದರೆ ವ್ಯತ್ಯಾಸ ತುಂಬಾ ಇದೆ. ಅದು ನಂಗೇ ಕಾಣಿಸ್ತಿದೆ. ನನ್ನ ನಡುವಿನ ಗೆಳೆಯ ಗೆಳತಿಯರೆಲ್ಲ  ಪ್ರೀತಿ, ಪ್ರೇಮ ಅಂತ ಕನವರಿಸುವಾಗಲೆಲ್ಲ ನಕ್ಕುಬಿಡುತ್ತಿದ್ದೆ. ಪ್ರೇಮದಲ್ಲಿ ಸೋತು ಬಂದ ಗೆಳತಿ ನೋವಿನಿಂದ ಅಳುತ್ತಿದ್ದರೆ; ನಿನ್ನದು ಪ್ರೀತಿಯಾಗಿರಲೇ ಇಲ್ಲ ಅಂತ ಉಪದೇಶ ಕೊಟ್ಟಾಗ ಸಿಟ್ಟಿನಿಂದ ನೀನು ಹೃದಯಾನೇ ಇಲ್ಲದ ಪ್ರಾಣಿ ಅಂತ ಬೈದು ಎದ್ದು ಹೋಗಿದ್ದಳು. ಯಾರದೋ ನೋವಿಗೆ ಸ್ಪಂದಿಸುವುದೆಂದರೆ ಅವರೊಂದಿಗೆ ಸೇರಿ ಅಳೋದಲ್ಲ...ಭಾವುಕತೆಗೂ, ಬರೀ ಎಮೋಷನ್ಸ್‌ಗೂ ವ್ಯತ್ಯಾಸವಿದೆ ಅಂತೆಲ್ಲ ಭಾಷಣ ಬಿಗಿಯುತ್ತಿದ್ದವನು ನಾನು...

ಇಂತಹುದೇ ಘಳಿಗೆಯೊಂದರಲ್ಲಿ ನನ್ನ ಬದುಕಿಗೆ ಹೊಸದಾಗಿ ಬಂದು ಸೇರಿ ಹಾಯ್ ಅಂದವಳು ನೀನು... 
ಆ ದಿನ ನಿನ್ನ ಹೆಸರನ್ನೂ ಕೇಳಿರಲಿಲ್ಲ ನಾನು. ಇಂದಿಗೂ ನಿನ್ನ ಹೆಸರು ನಂಗೆ ನಗಣ್ಯವೇ. ನಿನ್ನೊಂದಿಗಿನ ಭಾವವಷ್ಟೇ ಮುಖ್ಯ.

ಮೊದಲ ನೋಟದಲ್ಲೇ ನೀನು ಆಕರ್ಷಿಸಿದವಳೂ ಅಲ್ಲ. ಅಂಥ ಅಪರೂಪದ ಚೆಲುವೆಯೂ ಅಲ್ಲ. ನನ್ನ ಬಾಲಿಶ ಕನಸಿನ ಹುಡುಗಿಯ ಚೆಲುವು ಖಂಡಿತಾ ನಿನ್ನಲಿರಲಿಲ್ಲ. ಸಣ್ಣ ಆಕಾರದ, ಸಾಮಾನ್ಯ ಬಿಳುಪಿನ, ಬೆರಗು ಕಣ್ಗಳ ಹುಡುಗಿ..ನನ್ನ ಸ್ನೇಹದ ಅಡ್ಡಾಕ್ಕೊಂದು ಹೊಸ ಸೇರ್ಪಡೆ ಅಷ್ಟೇ...

ಆದರೆ ಆ ಬೆಳಗು...ಅದು ಬೆಳಗಲ್ಲ... 
ನನ್ನ ಬದುಕು ಪ್ರೀತಿ ಪಾರಿಜಾತದ ಗಂಧ ಹೀರಲು ಹೆಜ್ಜೆ ಎತ್ತಿಟ್ಟ ಮೊದಲ ಘಳಿಗೆ ಅಂತ ಅನ್ನಿಸುತ್ತೆ ಈಗ. ಅಂದೂ ನೀನು ಎಂದಿನಂತೆಯೇ ಬಂದಿದ್ದೆ. ಆದರೆ ಎತ್ತಿಡುವ ಹೆಜ್ಜೆಗಳಲಿ, ಘಲಿರೆನ್ನುವ ಗೆಜ್ಜೆಯಲಿ ಏನೋ ಉತ್ಸಾಹ. ನೇರ ನನ್ನೆಡೆಗೆ ನಡೆದು ಬಂದು ಹಲ್ಲೋ ನಂಗೆ ವಿಷ್ ಮಾಡಲ್ವಾ; ನನ್ನಮ್ಮ ನಂಗೆ ಜನ್ಮ ನೀಡಿದ ಚಂದದ ದಿನ ಇಂದು ಅಂತ ನೇರಾ ನೇರ ನನ್ನ ಕಣ್ಗಳಲ್ಲಿಳಿದಿದ್ದೆ. ನಾನು ಶುಭಕೋರಿದೆನಾ ಗೊತ್ತಿಲ್ಲ. ಆದರೆ ನಿನ್ನ ಕಣ್ಗಳನ್ನ ಹತ್ತಿರದಿಂದ ಕಂಡ ಆ ಕ್ಷಣ ನಾನು ಸಣ್ಣಗೆ ಕಂಪಿಸಿದ್ದೆ. ಆ ಬಟ್ಟಲು ಕಂಗಳಲ್ಲಿನ ಆರೋಗ್ಯವ ಕಂಡು. ಕಣ್ಣು ಮನಸಿನ ಕನ್ನಡಿ ಅಂತ ಪ್ರಾಮಾಣಿಕವಾಗಿ ನಂಬ್ತೇನೆ. ಕಣ್ಗಳಲ್ಲಿ ಅಷ್ಟೆಲ್ಲ ಆರೋಗ್ಯ ಇದ್ದರೆ ಮನಸಲ್ಲೂ ಇರಲೇಬೇಕಲ್ಲವಾ...ಅಷ್ಟೇ..
ಮೊದಲಬಾರಿಗೆ ನಾನಾಗಿ ನಾನು ಒಂದು ಹೆಣ್ಣು ಜೀವದ ಗೆಳೆತನಾನ ಬಯಸಿ ನಿನ್ನೆಡೆಗೆ ಕೈಚಾಚಿದ್ದೆ. ಅಲ್ಲಿಂದ ಮುಂದೆ ನಿನ್ನೊಡನೆಯ ಪ್ರತಿ ಹೆಜ್ಜೆಯಲ್ಲೂ ನಿನ್ನ ಸ್ವಚ್ಛ ಮನದ ಆರೋಗ್ಯ ನಂಗೆ ಅನುಭವಕ್ಕೆ ಬರ್ತಾ ಹೋಯ್ತು. ನನಗೇ ಅರಿವಿಲ್ಲದೇ ನಂಗೆ ಪ್ರೇಮಕಥೆಗಳು ಇಷ್ಟವಾಗುತ್ತಾ ಹೋದವು.. ನಾನು ಇಷ್ಟಿಷ್ಟೇ ಮೃದುವಾಗುತ್ತಾ ಹೋದೆ..ಮನಸ್ಸಿಂದ, ಭಾವಗಳಿಂದ...ಯಾವ ಘಳಿಗೇಲಿ ಮನಸು ಪೂರಾ ಪೂರಾ ನಿನ್ನ ಮಡಿಲ ಮಗುವಾಗಿ ಹೋಯ್ತೋ ಗೊತ್ತಿಲ್ಲ. ಅಂತೂ ನಾನು ಪೂರ್ತಿ ನೀನೇ ಆಗಿ ಹೋದೆ...

ಯಾರ ದೊಡ್ಡಸ್ತಿಕೇನೂ ಸಹಿಸದ ನಾನು ಸುಮ್ ಸುಮ್ನೇ ನಿನ್ನೆದುರು ಕಬೋಜಿಯಾಗ್ತೇನೆ. ನೀನು ಒಮ್ಮೊಮ್ಮೆ ಅಮ್ಮನಂತೆ, ಇನ್ನೊಮ್ಮೆ ರಚ್ಚೆ ಹಿಡಿವ ತಂಗಿಯಂತೆ, ಮಗದೊಮ್ಮೆ ಪ್ರೀತಿಯಿಂದ ಕಿವಿ ಹಿಂಡೋ ಕನ್ನಡಶಾಲೆಯ ಅಕ್ಕೋರಂತೆ ಕಂಡುಬಂದು ನನ್ನಲ್ಲಿ ಖುಷಿಯುಕ್ಕಿಸುತ್ತೀಯಾ.. ಹಾಗಾಗಿ ನಾನೊಬ್ಬನೇ ಇರುವಾಗ ಕೂಡ ನನ್ನಷ್ಟಕ್ಕೇ ನಗುತ್ತಿರುತ್ತೇನೆ ಹಿತವಾಗಿ.. ಸೋಲೆಂದರೆ ಸಿಟ್ಟಿಗೇಳುವ ನಾನು ನಿನ್ನೆದುರು ನಗುನಗುತ್ತ ಮಂಡಿಯೂರುತ್ತೇನೆ. 
ಯಾಕೆ ಹಿಂಗೆಲ್ಲ ಆಗುತ್ತೆ ಅಂತ ಅಮ್ಮನ್ನ ಕೇಳಿದೆ. ಈ ಬದುಕಿನ ಮೊದಲ ಗೆಳತಿ ಅವಳು...ಅಯ್ಯೋ ಮರುಳಾ ಪ್ರೀತಿಯಾಗಿದೆ ಕಣೋ ಅಂತ ತಲೆ ತಟ್ಟಿದಳು.. ಇಷ್ಟು ದಿನಕ್ಕೆ ಒಂದು ಪ್ರೀತಿಯುಕ್ಕೋ ಕೆಲಸ ಮಾಡಿದೀಯಾ ಕಣೋ.. ಅಂತ ಅಪರಂಜಿಯಂಥ ಹುಡುಗಿಗೆ ಸೋತಿದೀಯಲ್ಲಾ ಅಷ್ಟು ಸಾಕು ಅಂದು ಬಿಟ್ಟಳು... ಯಾಕೋ ನಿನ್ನ ಬಗ್ಗೆ ಅಸೂಯೆ ಆಯ್ತು. ನನ್ನಮ್ಮನ ಪ್ರೀತೀನೂ ಗೆದ್ದುಬಿಟ್ಟೆಯಲ್ಲೇ ಕೂಸೇ..
ನಿನ್ನ ಜೊತೆಗಿದ್ದರೆ ನಂಗ್ಯಾಕೆ ಇಷ್ಟೊಂದು ಖುಷಿಯಾಗುತ್ತೆ.? ನಿನ್ನನ್ಯಾಕೆ ನಾನು ಇಷ್ಟೊಂದು ಹಚ್ಚಿಕೊಂಡಿದ್ದೇನೆ.?? ನಿನ್ನ ಜೊತೆಗಿರ್ತಾ ಇರ್ತಾ ನನಗೇ ನಾನು ಇನ್ನಷ್ಟು ಸ್ಪಷ್ಟವಾದಂತ ಭಾವ ನನ್ನಲ್ಯಾಕೆ.??? ನಿನ್ನ ಕಣ್ಣ ಕೊಳದಲ್ಲಿ ಮೀಯುತ್ತ ನನ್ನ ನಾನೇಕೆ ಕಳೆದುಕೊಳ್ಳುತ್ತೇನೆ.???? ಅಂತೆಲ್ಲ ಕೇಳಿದ್ದು ನೀನು.
ಯಾಕೇಂದ್ರೆ ನೀನು ನನ್ನ ಪ್ರೀತಿಸ್ತಿದೀಯಾ ಅದಿಕ್ಕೆ ಅಂದರೆ ನಾನು; ಏ ಇರ್ಲಿಕ್ಕಿಲ್ಲ ಕಣೋ ನಾನಿನ್ನೂ ಪ್ರೇಮ, ಮದುವೆ, ಸಂಸಾರಗಳ ಬಗ್ಗೆ ಯೋಚಿಸಿಲ್ಲ ಅಂದಿದ್ದೆ ನೀನು.
ಅಲ್ಲಾ ಕಣೇ ಎಲ್ಲಾರೂ ಮಾಡೋ ತಪ್ಪೇ ಇದು. ಪ್ರೀತಿಸಿದೆ ಅಂದ್ರೆ - ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು, ಒಂದಷ್ಟು ಮರ ಸುತ್ತಿ, ಮನೆಯವರನೆಲ್ಲ ಒಪ್ಪಿಸಿಯೋ  - ಎದುರಿಸಿಯೋ ಮದುವೆಯಾಗಿ, ಸಂಸಾರ ಹೂಡಿ, ಮಕ್ಕಳನ್ನು ಹೆತ್ತು, ಅವರನ್ನು ಬೆಳೆಸಿ, ಅವರಿಗಾಗಿ ಗಳಿಸಿ, ಉಳಿಸಿ, ಒಂದಿನ ಎಲ್ಲರಂತೆ ಸತ್ತುಹೋಗೋದು ಅಂದ್ಕೊಂಬಿಡೋದು..ಪ್ರೀತಿ ಅದಲ್ಲ... ಪ್ರೀತಿ ಬಾವಿಯಲ್ಲ  ಕಣೇ ನದಿ..ಪ್ರೀತಿಗೆ ಚೌಕಟ್ಟು ಹಾಕಿದ ಕ್ಷಣ ಅಷ್ಟರಮಟ್ಟಿಗೆ ಪ್ರೀತಿ ಸತ್ತಂತೆ. ಪ್ರೇಮಕ್ಕೆ ಚೌಕಟ್ಟು ಕಟ್ಟಿದಾಗ ಪ್ರೇಮವೂ ಸ್ವಾರ್ಥವೇ. ಪ್ರೀತಿ ಇಬ್ಬರನ್ನೂ ಬೆಳೆಸಬೇಕು. ಇಬ್ಬರ ಸುತ್ತಣ ಬದುಕುಗಳನ್ನೂ ಬೆಳಗಿಸಬೇಕು... ಅರಳಿಸಬೇಕು.. ಸಂಭ್ರಮಿಸಬೇಕು... ಮದುವೆ, ಸಂಸಾರಗಳೆಲ್ಲ ಪ್ರೀತಿಯನ್ನು ವ್ಯಕ್ತಪಡಿಸೋ, ಹಂಚಿತಿನ್ನೋ ಸಾಮಾನ್ಯ ಮಾಧ್ಯಮವಾಗಬೇಕು... ಮದುವೆ, ಸಂಸಾರಗಳೇ ಪ್ರೀತಿ ಅಲ್ಲ. ಪ್ರೀತಿ ಅದಿಲ್ಲದೆಯೂ ಉಳಿಯಬೇಕು...ನಲಿಯಬೇಕು...ನದಿ ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿರುತ್ತೆ.. ಅದರ ಇಕ್ಕೆಲಗಳಲ್ಲಿ ನಾಗರೀಕತೆ ತಂತಾನೇ ಚಿಗುರುತ್ತಿರುತ್ತೆ. ಅವುಗಳ ಜತೆಗಿದ್ದೂ ಅವುಗಳ ಹಂಗಿಲ್ಲದೇ ನದಿ ಹರಿಯುತ್ತಲೇ ಇರುತ್ತೆ. ಅದಕ್ಕೇ ಪ್ರೀತಿ ಜೀವ ಉಳಿಸೋ ಗಂಗೆ...ಪ್ರೀತಿ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಕೈಹಿಡಿದ ಗೆಳೆತನ ಅಂದದ್ದು ನಾನು...ನಾ ಅಂದಂತೆ ಬದುಕಿ ತೋರುತ್ತಿರುವುದು ನೀನು...
ಹೀಗೆಲ್ಲ ಯೋಚಿಸುತ್ತಲೇ, ಮಾತಾಡುತ್ತಲೇ ನನ್ನನ್ನು ನಾನು ಮತ್ತು ನನ್ನ ಬದುಕನ್ನು ನಾನು ಇನ್ನಷ್ಟು ಪ್ರೀತಿಸಿಕೊಳ್ಳುವಂತೆ,  ಜೀವದ್ರವ್ಯ ಬತ್ತಿದ ಮೇಲೂ ಹಾರು ಹಕ್ಕಿಯ ವಿಶ್ರಾಂತಿಗೆ - ತಬ್ಬಿ ಬೆಳೆವ ಲತೆಯ ಬದುಕಿಗೆ ಆಸರೆಯನೀವ ಒಣಮರದ ನಿಸ್ವಾರ್ಥ ಒಲವ ಒರತೆ ನನ್ನಲ್ಲೂ ಒಂದಿಷ್ಟು ಒಸರಿದ್ದರೆ ಅಂತ ಬಯಸುವಂತೆ ಮಾಡಿದ್ದು ನಿನ್ನ ಗೆಳೆತನ.

ನಾನೂ ನಿನ್ನನ್ನು ತುಂಬಾನೇ ಪ್ರೀತಿಸಿದೆ. ಹಾಗಾಗಿ ಬದುಕಿಂದು ಸಂಭ್ರಮಿಸುತ್ತಿದೆ. ಅಮ್ಮ ಇನ್ನಷ್ಟು ಹತ್ತಿರವಾಗ್ತಿದಾಳೆ. ಬೀದಿಯ ಮಕ್ಕಳೆಲ್ಲ ಅದ್ಭುತ ಗೆಳೆಯರು.. ಪ್ರೀತಿಯ ಚಂದಿರ ಇನ್ನಷ್ಟು ಬೆಳಗುತ್ತಿದ್ದಾನೆ..ಮನೆ ಮುಂದಿನ ಕೈತೋಟದಲ್ಲಿ ಹೂಗಳ ಬಣ್ಣದೋಕುಳಿ..

ನಾನೆಷ್ಟೇ ನೂಕಿದರೂ ನನ್ನೆಡೆಗೆ ನುಗ್ಗಿ ಬರುವ ನಿನ್ನೊಲವ ಅಲೆಗಳ ತೊನೆತಕ್ಕೆ ಸಿಕ್ಕಿ ನಾ ಕಟ್ಟಿಕೊಂಡ ನನ್ನಹಂಕಾರವೆಂಬ ಮರಳ ಮಹಲು ಕರಗಿ ಹೋಗಿ ಈಗಿಲ್ಲಿ, ಎನ್ನೆದೆಯ ದಂಡೆಯಲಿ ಪ್ರೀತಿ ಕಪ್ಪೆಚಿಪ್ಪು ಗರ್ಭಧರಿಸಿದೆ...


ಸಾಗರನ ಮರಳ ದಂಡೆಯ ಮೇಲೆ  ನಿನ್ನೆದೆಯ ಬಿಸುಪು ನನ್ನೆದೆಯ ರೋಮವ ತಾಕಿ, ಕಣ್ಣು ಕಣ್ಣು ಸೇರಿ ಪ್ರೀತಿ ಆಳ ಹುಡುಕುತಿರಲು, ಜೇನಿನಾಸೆಗೆ ತುಟಿಗಳು ಹಂಬಲಿಸಿ ಸನಿಹ ಸರಿಯುತಿರೆ, ಬಾನ ಭಾಸ್ಕರ ನಮ್ಮ ಏಕಾಂತದ ಹಿತವಾದ ಉನ್ಮಾದಕೆ ತಾನಡ್ಡಿಯಾಗದಿರಲೆಂದು ವಸುಧೆಯ ಸೆರಗ ಮರೆಯ ಹುಡುಕುತಿದ್ದಂತೆ ಮತ್ತೆ ಮತ್ತೆ ಕನಸಾಗುತ್ತಿದೆ ಈಗೀಗ...

ಯಾವುದೋ ದಾರಿಯಲಿ, ನೀರವ ಮೌನದಲಿ ಒಬ್ಬಂಟಿ ನಡೆಯುತಿದ್ದೆ...ಆಗಸದ ಚಂದಿರನೂ ನನ್ನೊಡನೆ ಹೆಜ್ಜೆ ಹಾಕುವವನಂತೆ ನನ್ನ ಮೇಲುಗಡೇಲೇ ನಡೀತಿದ್ದ ಬಾನ ದಾರಿಯಲ್ಲಿ. ಮನಸಿಗೇನೋ ಪುಳಕ. ಚಂದಿರನೆಂದರೆ ನನಗ್ಯಾಕಿಷ್ಟೊಂದು ಇಷ್ಟವಾಗುತಿದ್ದಾನೆ ಈಗೀಗ..? ಆತ ನಿನ್ನನೇ ಹೋಲುತ್ತಾನೆಂದಾ...

ಹೀಗೆ ನಮ್ಮಿಬ್ಬರ ಬದುಕಲ್ಲೂ ಒಂದು ಪ್ರೀತಿ ಅರಳಿ ನಿಂತಿದೆ ಮತ್ತು ನಾವಿಬ್ಬರೂ ಅರಳಿ ನಿಂತ ಪ್ರೀತಿಯ ತೋಟದಲ್ಲಿ ಸಂಭ್ರಮಿಸುತ್ತಿದ್ದೇವೆ. ಒಟ್ಟಿಗೆ ಬಾಳುವ ಮಾತಾಡದೇ, ಮನಸಲ್ಲೇ ಮನೆ ಕಟ್ಟಿಕೊಂಡು, ಅದನ್ನು ಚಂದಗೆ ಶೃಂಗರಿಸಿಕೊಂಡು ಅಲ್ಲಿ ಒಟ್ಟಿಗೇ ಬದುಕುತ್ತಿದ್ದೇವೆ. 
ಕನಸುಗಳಿಗೆ ಹೊಸ ಬಣ್ಣ ತುಂಬಿದ ಗೆಳತೀ - ಎಂಥ ಸೊಗಸಿದೆಯಲ್ಲವಾ ಈ ಪ್ರೀತಿಯಿಂದ ಬದುಕಿಗೆ..


ಇಂತಿ -   
                                                             ಪ್ರೀತಿ ಲೋಕದ ಬಡ ಜೋಗಿ...

ಚಿತ್ರ ಕೃಪೆ : ಅಂತರ್ಜಾಲ...

Tuesday, February 12, 2013

ಗೊಂಚಲು - ಹತ್ತು x ಆರು + ಒಂದು.....

ಅಗಾಧ ಬದುಕು - ನಿಗೂಢ ಸಾವು
ಅಳುವ ಮನಸು.....

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು...
ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ...

ಬಣ್ಣ ಬಣ್ಣದ ಕತ್ತಲು...
ಭವಿಷ್ಯವನ್ನು ತೋರಲಾರದ ಬೆಳಕು...
ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ...

ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ. 
ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು. 
ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ. 
ಆದರೆ ಸೋಲುಗಳು - 
ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು. 
ಅವು ಸತತ ಹಾಗೂ ನಿರಂತರವಾಗಿದ್ದರಂತೂ ಆ ವ್ಯಕ್ತಿ ಇದ್ದೂ ಸತ್ತಂತಿರುತ್ತಾನೆ. 
ಅದು ಸೋಲಿನ ತಾಕತ್ತು.
ಮತ್ತೆ ಈ ಕಷ್ಟಗಳೂ ಹಾಗೇ ತುಂಬಾ ಒಗ್ಗಟ್ಟು ಪ್ರದರ್ಶಿಸುತ್ತವೆ.
ಯಾವತ್ತೂ ಅವು ಒಂದರೊಡನೊಂದು ಕೂಡಿಕೊಂಡೇ ಬಂದು ಅಮರಿಕೊಳ್ಳುತ್ತವೆ.
  
ಕೆಲವೇ ಕೆಲವು ಸೋಲುಗಳಿರುತ್ತವೆ ಆನಂದವನ್ನೀಯುವಂಥವು. 
ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯಗಳೆದುರಿನ ಸೋಲುಗಳು. 
ಭಿನ್ನ ಲಿಂಗದ ಪ್ರೇಮಕ್ಕೆ ಸೋತ ವ್ಯಕ್ತಿ  ಆ ಸೋಲಿನಲ್ಲೂ ಆನಂದವನ್ನು ಕಾಣ್ತಾನೆ. 
ಆದ್ರೆ ಯಾವ ಕ್ಷಣದಲ್ಲೇ ಆಗ್ಲಿ ಆ ಪ್ರೇಮ ವಿಫಲವಾದರೆ ಆ ವೈಫಲ್ಯವನ್ನಾತ ತನ್ನ ವ್ಯಕ್ತಿತ್ವದ ಸೋಲು ಅಂದ್ಕೋತಾನೆ. 
ಹಾಗಂದುಕೊಂಡ ವ್ಯಕ್ತಿಯ ಬದುಕು ನರಕ. 
ಕನಿಷ್ಠ ಪಕ್ಷ ಆ ಪ್ರೇಮ ವೈಫಲ್ಯದ ಬಿಸಿಯನ್ನು ಬದುಕು ತಣಿಸುವ ತನಕ.

ಸೋಲು ನಮ್ಮನ್ನು ಒಮ್ಮೊಮ್ಮೆ ಹಣಿದು ಹಣ್ಣಾಗಿಸಿ - ಸೋಲಿರುವಲ್ಲೇ ನಾವು ಹೆಜ್ಜೆ ಇಡ್ತೀವೋ ಅಥವಾ ಸೋಲೇ ನಾವು ಹೆಜ್ಜೆ ಇಡುವಲ್ಲೆಲ್ಲ ಬಂದು ಕುಳಿತಿರುತ್ತೋ ಎಂದು ಅರ್ಥವಾಗದಂಥ ಸ್ಥಿತಿಗೆ ತಂದು ನಿಲ್ಲಿಸಿ ಕಂಗೆಡಿಸುವುದು ನಿಜವೇ ಆದರೂ ಯಾವ ಸೋಲೂ ಶಾಶ್ವತವೇನಲ್ಲ. 
ಸೋಲು ನಾವು ಸ್ವೀಕರಿಸಿದಂತೆ - 
ಪತನ ಅಂದುಕೊಂಡರೆ ನಾವು ಜೀವಂತ ಹೆಣ. 
ಗೆಲುವಿನ ದಾರಿಯಲ್ಲಿನ ಹೊಸ ಅನುಭವ ಅಂದುಕೊಂಡರೆ ನಿಧಾನವಾಗಿಯಾದರೂ ನಮ್ಮ ಆಟದ ಅಂಗಳ ಗಗನ. 
ಸೋಲಿನ ಕೈಯಳತೆಯಲ್ಲೇ ಗೆಲುವಿನ ಕಣ್ಣಾಮುಚ್ಚಾಲೆ. 
ಅದನ್ನರಿತುಕೊಂಡು ಸೋಲುಗಳನೆಲ್ಲ ಮಣಿಸಿ ಗೆಲುವಾಗಿಸಿಕೊಂಬ ಸಹನೆ ಮತ್ತು ಛಲ ನಮಗಿರಬೇಕಷ್ಟೇ. 
ಬಾಹ್ಯವಾಗಿ ಎಂಥ ಸೋಲೇ ಎದುರಾದರೂ ಮನಸನ್ನು ಸೋಲಗೊಡದಂತೆ ಎಚ್ಚರವಹಿಸಿ  ಅಲ್ಲಿಂದಲೇ ಹೊಸ ಸ್ಫೂರ್ತಿ ಪಡಕೊಂಡು ಮತ್ತೆ ಯುದ್ಧಕ್ಕೆ ಹೊರಡುವ ತಾಕತ್ತು ಬೆಳೆಸಿಕೊಳ್ಳಬೇಕಷ್ಟೇ. 
ಸೋಲು ತರುವ ನೋವನ್ನು ಬಾಗಿಲಾಚೆಯೆ ನಿಲ್ಲಿಸಿ - ಆ ಪಯಣದುದ್ದಕ್ಕೂ ದಾರಿಯಲ್ಲಿ ಸಿಕ್ಕ ಅನುಭವಜನ್ಯ ಪಾಠವನ್ನಷ್ಟೇ ಒಳಗೆಳೆದುಕೊಳ್ಳುವ ಜಾಣ್ಮೆ ಗಳಿಸಿಕೊಳ್ಳಬೇಕಷ್ಟೇ. 
ಸೋಲುಗಳ ಮರುಭೂಮಿಯ ನಡುವೆ ನಿಂತು ಗೆಲುವುಗಳ ಜಲಪಾತದ ಅಪೇಕ್ಷೆ ಪಡದೇ - ಆ ಮರುಭೂಮಿಯ ಮಧ್ಯೆಯೇ ಅಲ್ಲಲ್ಲಿ ಸಿಗುವ ಹೊಸ ಹೊಸ ಅನುಭವಗಳೆಂಬ ಓಯಸ್ಸಿಸ್ಸಿನಿಂದಲೇ ಮನದಲ್ಲಿ ಭರವಸೆಯ ಖರ್ಜೂರದ ಗಿಡ ನೆಟ್ಟು ಹೊಸ ಕನಸಿಗಾಗಿ ಆತ್ಮಬಲವ ವೃದ್ಧಿಸಿಕೊಳ್ಳಬೇಕಿದೆ.
ಆಗ ಮುಂದಾದರೂ ಗೆಲುವಿನ ನಿತ್ಯಹರಿದ್ವರ್ಣ ದಕ್ಕೀತು.
ಗೆಲುವಿನ ಜಲಪಾತದಡಿಯಲಿ ನಿಂತು ಮೀಯುವ ಕನಸ ಕಣ್ಣಲ್ಲಿಟ್ಟುಕೊಂಡು - ಅದು ಕೈಗೂಡುವವರೆಗೆ ಪುಟ್ಟ ಕಲ್ಯಾಣಿಯಲ್ಲೇ ಮೀಯುತ್ತ - ಮೀನುಗಳೊಂದಿಗೆ ಆಟವಾಡುತ್ತ - ಈ ಕ್ಷಣವನ್ನು ಇದ್ದದ್ದು ಇದ್ದ ಹಾಗೇ ಅನುಭವಿಸ್ತಾ ಖುಷಿಯಾಗಿರಬಲ್ಲೆವಾದರೆ ಅದಕಿಂತ ದೊಡ್ಡ ಮಾನಸಿಕ ಗೆಲುವು ಇನ್ನೇನಿದೆ...
ಒಂದು ಸೋಲು ಹೊಸ ಹತ್ತು ಗೆಲುವುಗಳಿಗೆ ನಾಂದಿ ಹಾಡಬೇಕು.

ಬದುಕಿಗಾಗಿ - ಗೆಲುವಿಗಾಗಿ ಹೋರಾಡುವ ಮಾತು ಬಂದಾಗಲೆಲ್ಲ ನಂಗೆ ಜೇಡರ ಹುಳ ನೆನಪಾಗುತ್ತೆ. 
ಆ ಪುಟ್ಟ ಜೇಡರ ಹುಳದ ಪ್ರಯತ್ನಶೀಲತೆ ನನ್ನಲ್ಲಿ ಅಚ್ಚರಿ ಮೂಡಿಸುತ್ತೆ.
ಆಗಷ್ಟೇ ಬಲೆ ಹೆಣೆದು ಮುಗಿಸಿ ಬಲೆಗೆ ಬೀಳುವ ಆಹಾರಕ್ಕಾಗಿ ಕಾಯುತ್ತ ಕೂತರೆ ಅಷ್ಟರಲ್ಲಾಗಲೇ ಯಾರೋ ಶತ್ರು ಆ ಬಲೆಯನ್ನು ತುಂಡರಿಸಿರ್ತಾನೆ.
ಆಗ ಮತ್ತೆ ಓಂಕಾರದಿಂದ ಪ್ರಾರಂಭಿಸಬೇಕು. 
ಅದೂ ಹಸಿದ ಹೊಟ್ಟೆಯಲ್ಲಿ. 
ಆದ್ರೂ ಅದು ಕಂಗೆಡದೇ ಮತ್ತೆ ಮತ್ತೆ ಬಲೆ ನೇಯುತ್ತಲೇ ಇರುವ ಪರಿಯಿದೆಯಲ್ಲ ಅದು ಆ ಚಿಕ್ಕ ಜೀವದ ಪ್ರಯತ್ನಶೀಲತೆ, ಸಹನೆ, ಬದುಕಲೇಬೇಕೆಂಬ ಛಲ ಇವಕ್ಕೆಲ್ಲ ಸ್ಪಷ್ಟ ನಿದರ್ಶನ.
ಆ ಪುಟ್ಟ ಹುಳದ ಆಶಾಭಾವ ಪ್ರಕೃತಿಯ ಬಲಿಷ್ಠ ಕೃತಿ ಅನ್ನಿಸಿಕೊಂಡ ನಮ್ಮಲ್ಲೇಕಿಲ್ಲ. 
ಸೋಲಿಗೆ ಯಾಕಿಷ್ಟು ಕಂಗೆಡುತ್ತೇವೆ.

ನಮಗೆಲ್ಲ ಗೊತ್ತು - 
ಬದುಕಿನ ಅಗಾಧತೆಗೆ ಈ ಎಲ್ಲ ಸೋಲು ವೈಫಲ್ಯಗಳನ್ನೂ, ಅವುಗಳಿಂದ ಜೊತೆಯಾದ ನೋವುಗಳನ್ನೂ ಮರೆಸಿಬಿಡುವ, ಅಳಿಸಿಹಾಕುವ ದಿವ್ಯ ತಾಕತ್ತಿದೆ. 
ಹಾಗಂತಲೇ ಬದುಕಬೇಕೆಂಬ ಸಣ್ಣ ಆಸೆ ಇದ್ದರೂ ಸಾಕು ನಿರಾಸೆಯ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದ ವ್ಯಕ್ತಿ ಕೂಡ ಕ್ರಮೇಣ ಎದ್ದು ನಿಲ್ಲಬಲ್ಲ, ಚೇತರಿಸಿಕೊಳ್ಳಬಲ್ಲ. 
ಮತ್ತೆ ಬದುಕ ಕಟ್ಟಿಕೊಂಡು ನಗಬಲ್ಲ. 
ಬದುಕಿನ ಅಗಾಧತೆಗೆ ಅಂಥ ತಾಕತ್ತಿರೋದರಿಂದಲೇ ಪ್ರಾಜ್ಞರು ಬದುಕನ್ನು ಸಾಗರಕ್ಕೆ ಹೋಲಿಸಿದ್ದಾರೆ. 
ಉಕ್ಕಿ ಹರಿವ ನೂರಾರು ನದಿಗಳನ್ನು ತನ್ನಲ್ಲಡಗಿಸಿಕೊಂಡೂ ಕಡಲು ತನ್ನ ಸಮತೋಲನವನ್ನು ಕಾದಿಟ್ಟುಕೊಳ್ಳುವ ಪರಿ ಅಗಾಧ. 
ಎಲ್ಲೆಲ್ಲಿಂದಲೋ ಹರಿದು ಬರುವ ಬೇರೆ ಬೇರೆ ರುಚಿ ಬಣ್ಣಗಳ ನದಿಗಳನೆಲ್ಲ ತನ್ನೊಳಗೆ ಹೀರಿಕೊಂಡು, ತನಗೆ ಬೇಕಾದಂತೆ ಬದಲಿಸಿ ಒಂದೇ ತೆರನಾಗಿಸಿಕೊಂಡು ಗಂಭೀರವಾಗಿ ತೊನೆಯುವ ಶರಧಿಯ ವೈಶಾಲ್ಯವನ್ನು ಬದುಕಿಗೆ ಹೋಲಿಸಿದ್ದು ಎಂಥ ಸಮಂಜಸ ಅಲ್ವಾ...
ಯಾವ್ಯಾವ ಕಡೆಯಿಂದಲೋ ಹ್ಯಾಗ್ಯಾಗೋ ಮುತ್ತಿ ಬರುವ ನೋವು ನಲಿವುಗಳನ್ನೂ ನುಂಗಿಕೊಂಡು ಇಂದಿನ ನೋವು ನಲಿವುಗಳನೆಲ್ಲ ನಾಳೆಗೆ ಕೇವಲ ನೆನಪು ಮಾತ್ರವಾಗಿ ಪರಿವರ್ತಿಸಿ ನಮ್ಮ ನಾಳೆಗಳನ್ನು ಸಹನೀಯವಾಗಿಸಬಲ್ಲ ಸಾಮರ್ಥ್ಯ ಬದುಕಿನ ಅಗಾಧತೆಗಿದೆ. 
ಹಾಗಿರೋದಕ್ಕೇ ಯಾರ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎಂಬ ಮಾತಿಗೆ ಬೆಲೆ ಬಂದಿದೆ. 
ಇಂದಿನ ನೋವು, ನಲಿವು - ನಾಳೆಗೆ ಅದು ಬರೀ ನೆನಪು. 
ನೋವಿನದಿರಲಿ ನಲಿವಿನದಿರಲಿ ನೆನಪು ಮೂಡಿಸುವುದು ನಗುವನ್ನೇ.

ಇನ್ನು ಬದುಕಿನ ಅಗಾಧತೆಯನ್ನು ಕೂಡ ಅಳಿಸಿಬಿಡುವ ತಾಕತ್ತಿರೋದು ಸಾವಿಗೆ. 
ಸಾವು ಬಿಡಿ. 
ಅದಕ್ಕೆ ಈ ಬದುಕನ್ನೇನು ಈ ಭುವಿಯಲ್ಲಿ ನಮ್ಮದೊಂದು ಕುರುಹನ್ನೂ ಇಲ್ಲದಂತಾಗಿಸಿಬಿಡುವ ತಾಕತ್ತಿದೆ. 
ಸಾವಿನ ನಿಗೂಢತೆ ಬದುಕಿನ ಅಗಾಧತೆಗಿಂತ ಮಿಗಿಲು.
ಯಾವಾಗ..?
ಎಲ್ಲಿ.??
ಯಾವ ರೀತಿ.???
ಎಂಬಂಥ ಯಾವ ಮಾಹಿತಿಯನ್ನೂ ನೀಡದೇ ದಿಢೀರೆಂದು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಎದುರಾಗಿ ಬಿಡಬಲ್ಲ ಸಾವಿನ ಬಗೆಗೆ ಮಾತಾಡದಿರುವುದೇ ಲೇಸು.
ಸಾವು ಉಳಿಸಬಹುದಾದದ್ದು ವಿಷಾದ ಮಾತ್ರ.
ಉಳಿದವರ ಮನದಲ್ಲಿ - ಅಳಿದವರ ಬಗೆಗೆ...

ಇಷ್ಟೆಲ್ಲ ತಿಳಿದ ಮೇಲೂ
ಪ್ರಜ್ಞೆಯ ಆಳದಿಂದ
ನಿನ್ನೆ ಸತ್ತ ಕನಸಿನ ಘೋರಿಯ ಮೇಲೆಯೇ
ನಾಳೆ ಹೊಸದೊಂದು ಕನಸಿನ ಹಸಿರು ಚಿಗುರೀತು ಎಂಬ ಭರವಸೆ ಮೂಡಿ ನಿಲ್ಲುತ್ತಿದ್ದರೂ...
ಥೂ -
ಹಾಳಾದ ಈ ಮನಸ್ಯಾಕೆ ಹೀಗೆ...
ಸಿಕ್ಕ ಖುಷಿಗಳ ನೆನೆದು ನಗುತ ಹಾಯಾಗಿರುವುದ ಬಿಟ್ಟು...
ಒಂದ್ಯಾವುದೋ ಕನಸಿನ ಸಾವಿಗೆ...
ಅನುಭವಿಸಿದ ಪುಟ್ಟ ನೋವಿಗೆ ಜೋತು ಬಿದ್ದು ಸದಾ ಕೊರಗುತ್ತಿರುತ್ತದೆ...
ಏನದಕ್ಕೆ ಅಳುವೆಂದರೆ ಆ ಪರಿ ಖುಷಿಯೋ...!!!

ವಿ.ಸೂ : ಈ ಬರಹ ಈ-ಪತ್ರಿಕೆ 'ಪಂಜು'ವಿನ ದಿನಾಂಕ 11-02-2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪಂಜು ಪತ್ರಿಕೆಯ ಕೊಂಡಿ ಇಂತಿದೆ... http://www.panjumagazine.com/?p=650 

Thursday, February 7, 2013

ಗೊಂಚಲು - ಅರವತ್ತು.....

ಅವಳ ಮಡಿಲ ಕಂಪಲ್ಲಿ ಜಗವ ಮರೆವ ತಂಪು...
ಎಲ್ಲ ಹೋಲಿಕೆಗಳಿಗೂ ಮೀರಿದ, ಕರುಳಿಂದ ಬೆಸೆದ ಬಂಧ ...
ಅಮ್ಮ ಅಂದರೆ ಅಮ್ಮ ಅಷ್ಟೇ.....
ಈ ಚೆಲುವೆಯ ಮನದ ಮುಗುಳ್ನಗೆಯು ಎನ್ನಾತ್ಮಶಕ್ತಿಯ ಮೂಲ ಸೆಲೆ... 

ಇಂದು - 07/02/2013
ನಾ ನಕ್ಕಾಗ ಸಂಭ್ರಮಿಸಿ...
ನನ್ನ ನೋವಲ್ಲಿ ಕಣ್ಣ ಹನಿ ಹರಿಸಿ...
ತನ್ನ ನೋವ ಮರೆತು ನನ್ನ ನಗಿಸಿ ಆಡಿಸಿ...
ಒಲವ ಸುಧೆ ಉಣಬಡಿಸಿ...
ಮಮತೆಯ ಮಡಿಲಲ್ಲಿ ತೂಗಿ...
ತಾನುರಿದು - ತನ್ನ ಪ್ರೀತಿ ಹಣತೆಯ ಬೆಳಕಲ್ಲಿ
ಸದಾ ನನ್ನ ಬಾಳ ಬೆಳಗುತಿರುವ...
ಎನ್ನ ಉಸಿರಿಗೆ ಹೆಸರ ನೀಡಿದ...
ಎನ್ನ ಜೀವದ ಜೀವದಾತೆ...
ಎನ್ನ ಬದುಕ ಭಾಗ್ಯದೇವತೆ...
ಎನ್ನ ಕಾಯುವ ಒಲವ ಆಲದ ಮರ...
ಎನ್ನ ಆಯಿಯ ಜನುಮ ದಿನ...
ಆ ಚೈತನ್ಯಕ್ಕೊಂದು ಪ್ರಣಾಮ...

ಆಯೀ ನನ್ನೊಲವು ನಿನ್ನೆಡೆಗಿದೆ...
ನಿನ್ನ ಮಗುವೆಂಬ ಹೆಮ್ಮೆ ನನ್ನದು...
ನಿನ್ನ ನಗಿಸುತಲಿರುವ ಚೈತನ್ಯ ನೀಡು...