Saturday, July 3, 2021

ಗೊಂಚಲು - ಮುನ್ನೂರೆಪ್ಪತ್ತಾರು.....

ನಿನ್ನ ಹುಡುಕುವ ಹುಚ್ಚು.....

ಓದಿದಷ್ಟೂ ಮುಗಿಯದ ಭಾವ ಸಂಪುಟ - ನಿನ್ನ ಕಣ್ಣು...

ನಿನ್ನ ಕಣ್ಣಂಕೆಯ ಸರ್ಗೋಲನು ದಾಟಿ ನಿನ್ನೆದೆ ಅರಮನೆಯ ಆವರಣದಿ ಹೆಜ್ಜೆ ಊರಲು ಅರ್ಹವಲ್ಲದ ನನ್ನ ಕನಸುಗಳ ಸೆಲೆ ನನ್ನ ಕಣ್ಣಲ್ಲೂ ಉಕ್ಕಲಾರದೇ ಅಲ್ಲಲ್ಲೇ ಬತ್ತುತ್ತದೆ...

___ಗಾಳಿಗೋಪುರ...

ನೀ ಮೆಚ್ಚುವ ಗುಣಗಳ ಲವಲೇಶವೂ ಇಲ್ಲದ ಭರಪೂರ ಬಡತನ ನನ್ನದು - ಅದನ್ನು ಸುತಾರಾಂ ಅರಗಿಸಿಕೊಳ್ಳಲು ಒಪ್ಪದ ಆಶೆಬುರುಕ ಮನಸೂ ನನ್ನದೇ...
ಹಾಗೆಂದೇ, ನನ್ನೊಂದಿಗೆ ನನ್ನ ಯುದ್ಧ ನಿನ್ನ ಹಾದಿಯಲ್ಲಿ - ಮತ್ತೆ ಮತ್ತಲ್ಲೇ ಸೋಲುವ ಖುಷಿ ನಿನ್ನದೇ ಗುಂಗಿನಲ್ಲಿ...
___ಮರುಳನ ಹಾದಿಯ ಬೆರಗು...

ಸುಳ್ಳೇ ಆದರೂ ಬದುಕಲೊಂದು ಕನಸು ಬೇಕಿತ್ತು - ನಿನ್ನ ಆಯ್ದುಕೊಂಡು ನನ್ನ ಕಾಯ್ದುಕೊಂಡೆ...
___ಹೆಸರು ವಿಳಾಸ ಸಿಗದಿರಲಿ...

ನೀನೆಂದರೆ ನನ್ನೊಳಗಿನ ಕಲ್ಪನಾ ವಿಲಾಸ.‌‌..
ನಾ ಬರೆವ ಕವಿತೆಯೇ ನಿನ್ನ ಖಾಯಂ ವಿಳಾಸ...
___ನೀನು, ನಾನು...

ನನ್ನ ಕವಿತೆಗಳ ಪಲುಕುಗಳಿಗೆ ಎಂದೂ ಸಿಗದ ಬೆಳಕು ನೀನು...
ಬಯಲ ಗಂಧವ ಬಂಧಿಸಲಾರೆ ನಾನು - ರುದಯದಲಿ ತಣ್ಣಗೆ ಕಾಯ್ದುಕೊಂಡ ಹೆಸರಿಲ್ಲದ ಮಾಧುರ್ಯ ನೀನು...
_____ಎದೆಯ ಚೆಲುವು ಬಾಡದಿರಲಿ...

ತುಂಬಾ ಚಂದ ಪ್ರೀತಿಸುವ ನಿನ್ನನ್ನು ಇಲ್ಲೇ ನನ್ನಲ್ಲಿ ಮಾತ್ರ ನಿಲ್ಲೂ ಅನ್ನುವ ನನ್ನ ಸ್ವಾರ್ಥ ಎಷ್ಟು ಸರಿ...
ನದಿ ಹರಿವು ನಿಲ್ಸೋದು ಅಂದ್ರೆ ಹಸಿರ ಹುಟ್ಟಿಗೂ ಸಿಗದೇ ಬಾನ ಬೆಂಕಿಗೆ ಸಿಲುಕಿ ಅಲ್ಲಲ್ಲೇ ಬತ್ತಿ ಹೋಗೋದೇ ಅಲ್ವಾ...
___ಸ್ವಾಧೀನತೆಯ ಸಂಕಟ...

ನಿನ್ನ ಅಳುವಿನ ಪಕ್ಕ ಅಳುತ್ತಾ ಕೂರುವುದು ನನ್ನ ಆ ಕ್ಷಣದ ಭಾವೋದ್ವೇಗ...
ನಿನ್ನ ನೋವಿನ ಭಾರಕ್ಕೆ ಹೆಗಲಾಗಿ ನಿಲ್ಲುವುದು ನನ್ನೊಡಲ ಅಮೂರ್ತ ಭಾವುಕತೆ...
____ಕಣ್ಣಳತೆಯಾಚೆಯೂ ಚೂರು ನಿನ್ನವನಾಗಬೇಕು...

ನೀನೆಂಬ ಕನಸ ಕಾವ್ಯವೇ -
ಸಿದ್ಧಿಸದ ಕನಸು ಕಲ್ಪನೆಗಳ ಒಂಟಿ ಹಾದಿಗೂ ಒಂದು ತುಂಡು ನಗು ಸಿದ್ಧಿಸಿರತ್ತೆ...
ಆ ನಗೆಯ ಹೋಳಿನಾಸೆಗಾಗಿಯಾದರೂ ನಾ ಕನಸು ಕಟ್ಟಬೇಕು...
____ಪ್ರತೀಕ್ಷಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ತೈದು.....

ನಗು ನೀ ವಸಂತವೇ - ನಗುವೇ ವಸಂತವೇ.....
ಕುಂಚ ಕಲೆ: ಸುಮತಿ ದೀಪಾ ಹೆಗಡೆ...


ಅವಧಿ ಮುಗಿದ ಔಷಧಿ - ನನ್ನ ಪ್ರೀತಿ...

"ನೀನು ಒಲವಿನ ಕಾವ್ಯನಾಮವಂತೆ..."

ನನ್ನ ಸೋಲಿನ ಗೆಲುವು ಮತ್ತು ಖುಷಿ ನೀನು...
___ ಹೆಸರಿಲ್ಲದ ಕನಸು...

ನಂಗೆ ನಾನೇ ಚಂದ ಕಾಣ್ಸೋ ಹಂಗೆ ಕಡು ಪ್ರೀತಿಯ ಕುಡಿದಮಲಿನ ನಿದ್ದೆ ಮರುಳ ಒದ್ದೊದ್ದೆ ಗರಿಕೆಯಂಥ ಕಣ್ಣಲ್ಲಿ ಮುದ್ದಾಗಿ ನನ್ನ ಮೆಲ್ಲುವ ನೀನು...
____ ಹೆಸರಿಲ್ಲದ ಸಹಿಯಂಥ ಹುಡಿ ಹುಡಿ ಕನಸು...

ಹಲ್ಮೊಟ್ಟೆ ಕಚ್ಚಿ ತುಟಿ ಬಿಗಿದು ನಾಲಿಗೆಯ ಬಂಧಿಸಿಕೊಂಡವಳ ಕಣ್ಣ ಕೊಳದ ಅಲೆಗಳು ಪಿಸುದನಿಯಲಿ ಉಸುರುವ ನೂರಾರು ಕಥೆಗಳ ದುರಂತ ನಾಯಕ ನಾನು...
_____ ಮರುದನಿ ಇಲ್ಲದ ನಿರ್ವಾತ...

ನಿಸ್ತೇಜ ಎದೆ ದಡವನ(ನೊ)ಪ್ಪಿದ ಜೀವ ಶರಧಿ ನೀನು...

ಮುಂಗಾರಿನ ಮುಗಿಲ ದಿಬ್ಬಣ ಹಾಯ್ದು ನೆನೆದ ಕಾಡು ಹಾದಿ ನೀನು...
ಗಿಡದ ಎದೆಯ ನೀರಜ ಮೌನ ಹೂವಾಗಿ ಅರಳೋ ಕವಿತೆ...
____ ಕೇಳಬೇಕು ಹೇಳಲಾಗದ ಏನನ್ನೋ...

ನಾನಾಗಿಯೇ ಪೂರ್ಣವಲ್ಲದ, ನನಗೇ ಸ್ವಂತವಲ್ಲದ ನಾನು ಪೂರ್ಣ ನನ್ನವನಾಗು, ಕೇವಲ ನನ್ನವನಷ್ಟೇ ಆಗಿರು ಎಂಬ ನಿನ್ನ ಅಕಾರಣ ಪ್ರೀತಿಯ (?) ಸೌಮ್ಯ ಸ್ವಾಮ್ಯತೆಯ ಆಗ್ರಹಗಳೆದುರು ದಿಕ್ಕುಗಾಣದ ಕಬೋಜಿಯಾಗಿ ನಿಲ್ಲುತ್ತೇನೆ...
___ನಾನು, ನೀನು ಮತ್ತು ನೇಹ...

ಪೊರೆಯಲೂ ಆಗದ ತೊರೆಯಲೂ ಆಗದ ತೊದಲು ಭಾವಗಳು ನಿದ್ದೆ ಕೊಲ್ಲುತ್ತವೆ...
ನಿನ್ನ ಮೌನಕ್ಕೆ ಮಾತು ಬರುತ್ತದೆ ಸುಳ್ಳು ಮಂಪಿನ ಕನಸಲ್ಲಿ - ಮಡಿಲ ಬಿಸಿಯ ಕಂಪಿನ ನೆನಪು ನೆತ್ತಿ ಹತ್ತಿ ನಿದ್ದೆ ಸಾಯುತ್ತದೆ...
___ ಮತ್ತೆ ಎಲ್ಲ ಮುಂದುವರಿಯುತ್ತದೆ...

ಜೀವದ್ರವ್ಯವೇ -
ಸದಾ ಸರ್ವದಾ ನಗಬೇಕು - ನಗುತಲೇ ಇರಬೇಕು 'ನೀನು...' 
ನೋವ ಬೆಳೆವ ರಕ್ಕಸ ಕೋಟೆಗಳ ಕೆಡವಿ ನಿನಗಾಗಿ ನಗೆಯ ಹುಡುಕಿ ತರಬೇಕು - ನಗಿಸುತಿರಬೇಕು - ನಿನ್ನ ನಗುವಾಗಬೇಕು 'ನಾನು...'
ನೀನು ನೀನಾಗಿ ನಿನ್ನ ನಗುವ ಹಡೆವಂತೆ ನಾ ನಿನ್ನ ಸಹಚಾರಿಯಾಗಬೇಕು...
ನಿನ್ನ ನಗಿಸುವ ನೆಪದಿ ನಾನೂ ನಗಬೇಕು - ನನ್ನ ನಗೆಯ ಜಪದಿ ನೀನು ನಗೆಯುಣ್ಣಬೇಕು...
ಯೋಗಾಯೋಗಗಳ ಮೀರಿ ಸಹಯೋಗವ ಸಾಧಿಸಬೇಕು - ಜೀವ ಜೀವ ಜತೆಯಾಗಿ ನಗೆಯ ಜೀವಿಸಲುಬೇಕು...
____ ನಗು ನೀ ವಸಂತವೇ - ನಗುವೇ ವಸಂತವೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೆಪ್ಪತ್ನಾಕು.....

 ಹಿನ್ನೀರು.....

ಬಯಲಿಗೆ ಗೋಡೆ ಕಟ್ಟಿ ಬೆಳಕ ಬೆಳೆದುಕೋ ಅಂದರು; ಬಿಡಲಿಲ್ಲ ಅವಳು ಸೆರಗು ಬಿಗಿದು ನಕ್ಕಳು - ಸೂರ್ಯ ಮುಗಿಲ ಮೇನೆಯ ಪರದೆ ಸರಿಸಿದ ಮತ್ತು ಕತ್ತಲು ಛಾವಣಿ ಕಳಕೊಂಡಿತು...
ಬೆವರನ್ನಷ್ಟೇ ನಂಬಿದವಳು; ಮೋಡ ಬೆವರದಿರೆ ಮಳೆಬಿಲ್ಲೆಲ್ಲೀ ಅನ್ನುತಾಳೆ - ಅವಳೆಂದರೆ ಬದುಕ ಬಣ್ಣ...

"ಅಪಾತ್ರ ದಾನವಾಗುವ ಸಣ್ಣ ಗೊಂದಲವೂ ಇಲ್ಲದ ಮುಕ್ತ ಹರಿವಿನ ಸರಿತೆ...
ನನಗೆಂದೇ ನೂರು ಕ್ಲೇಶಗಳ ಪೆಟ್ಟಣಿಸಿಟ್ಟ ನೆಲ ಸೀಳಿ ಬರುವ ಅವಳೆದೆಯ ಪ್ರೀತಿ ಒರತೆ..."

ದೇವ ನೆರಳು ಉಸಿರ ನಗೆಯ ಕಾಯುವುದೆಂದರೆ ಇಷ್ಟೇ - ಕರುಳ ಹೂ ಅರಳಿ ಕೊರಳ ತಬ್ಬುವಾಗ ಕುರುಳ ಸವರಿ 'ಮನ್ಸಿಂಗ್ಬಂದಂಗೆ ಮಂಗ್ನಂಗ್ ಆಡೂದ್ಬಿಟ್ಟು ಮಾತ್ರ ಮನ್ಷಾ ಆಗು' ಅಂತ ಅವಳು ಧಾವಂತದಲಿ ಗದರುವುದು - ಮತ್ತದು ಅವಳ ಶುದ್ಧ ಮಮತೆ...

ಮಣ್ಣು, ಸಗಣಿ ಬೆರೆತ ಬೆವರ ತನ್ನ ಸೆರಗಿನಂಚಿಗೆ ಮೆತ್ತಿಕೊಂಡು, ತೇಯ್ದು ತೇಯ್ದು ತೆಗೆದ ಗಂಧವ ಕಾಣದ ದೇವನ ಹಣೆಗಿಡುವವಳ ನೋಡಿ ನಕ್ಕವನು; ಅಂತೆಯೇ ತನ್ನೆದೆಯನು ಆದ್ಯಂತ ಸುಡುವ ನೋವ ದಾವಾನಿಲವ ಅವಳು ತನ್ನ ಕಣ್ಣಲೇ ಇಂಗಿಸಿಕೊಂಡು ಅಂತಃಕರಣ‌ದ ಸುಡುಮಣ್ಣಲ್ಲಿ ಬೆಳಕೊಂಡ ಮುರುಟು ನಗೆ ಮೊಗೆಯ ಎನ್ನ ಹೆಗಲಚೀಲದಲಿಟ್ಟು ಹರಸುವಾಗ ಸಾದ್ಯಂತ ಬೆಚ್ಚುತ್ತೇನೆ...
___ಆಯೀ ಎಂಬುವ ಅರ್ಥಕೆ ನಿಲುಕದ ನೀಳ್ಗವಿತೆ...

ಶುಭನುಡಿಯೇ ಶಕುನದ ಚುಕ್ಕಿ -
ಇನ್ನೂ ಅವಳ ಆ ಮುದಿ ಮಂಜುಗಣ್ಣಲಿಷ್ಟು ಬದುಕ ಬೆಳಕುಲಿದರೆ ಅದು ನಂದೇನೇ/ನಂಗೇನೇ...
ನನ್ನ ಪಾಪಗಳಲಿ ಸುಟ್ಟು ಹೋದ ಅವಳ ಕನಸುಗಳ ಬೂದಿಯಾದರೂ ಅವಳಿಗುಳಿಯಲಿ - ಮರು ಜನುಮಕಿಷ್ಟು ಗೊಬ್ಬರ ಮಾಡಿಕೊಂಡಾಳು...
💕💝💕

ಮಣ್ಣಿಗಂಟಿಕೊಳ್ಳದಿದ್ದರೆ ಊರು ನನ್ನ ಹೆಸರಿನ ಬೆನ್ನಿಗಷ್ಟೇ ಅಂಟಿಕೊಳ್ಳುತ್ತದೆ...
ಮತ್ತು
ಬೆನ್ನಾದವನ ಕಣ್ಣಲ್ಲಿ ಊರು ಕಲೆಸಿ ಹೋದ ಚಿತ್ತದ ಚಿತ್ರವಾಗಿ ಕರಗುತ್ತದೆ...
ಜಾತ್ರೆ ಮುಗಿದ ಮಾರ್ನೇ ಹಗಲು ದೇವರ ಇಳಿಸಿ ಬಣ್ಣ ತೊಳೆದುಕೊಂಡ ತೇರಿನ ಕೀಲುಗಳಲಿ ಭಕ್ತರ ಕಣ್ಣರಿಯದ ಸುಸ್ತಿನ ನಿಟ್ಟುಸಿರೊಂದು ಹಾಗೇ ಉಳಿದಂತೆ...
___ ಹಿನ್ನೀರು...

ರಕ್ತಕ್ಕಂಟಿದ್ದಿಷ್ಟು...
ಮಣ್ಣಿಗಮರಿದ್ದಿಷ್ಟು...
ಸ್ವಂತದ ಕಮಾಯಿಯೂ ಇಷ್ಟೇ ಇಷ್ಟಿದ್ದಿದ್ದರೆ...
___ ಹೆಸರು...

'ಒಂದಾನೊಂದು ಕಾಲದಲ್ಲಿ ನಗೆಯೊಂದಿತ್ತು' ಎಂಬ ಕಥೆ ಕಾಲದ ಜೊತೆ ನಡೆದು ಬಂದ ಚಂದದಲ್ಲಿಯೇ ಕಾಲನ ಕಾಡು ಹಾದಿಯ ಅಡ್ಡಾತಿಡ್ಡ ಕವಲಿನಲ್ಲಿ ಜೀವವಿದು ಸರಕ್ಕನೆ ಕಳೆದೋಗಬೇಕು...
ಮುಂದಾಗಿ ಹೋದ ಗುರುತಿಗೆ ಹಸಿ ಹೆಣೆಯೊಂದನು ದಾರಿ ಮಧ್ಯೆ ಎಸೆದು ಹೋದಂಗೇ ನಗೆಯ ಎಳೆಯೊಂದನು ಉಳಿಸಿ ಹೋಗಬೇಕು...
ನಿನ್ನೊಳುಳಿದ ನನ್ನ ನಗುವಿಗಿಂತ ಮಿಗಿಲು ಮುಗಿಲೂ ಅಲ್ಲವೇನೋ...
____ ಉಸಿರು...
💕💝💕

ಶುಭ ನುಡಿಯೇ ಕೊರವಂಜಿ -
ಮಳೆಬಿಲ್ಲು ಬಿರಿದಂತ ಒದ್ದೆ ಕಣ್ಣ ತುಂಬಿದ ಎಳೆ ಎಳೆ ಕನಸೂ ನಂದೇನೇ...
ಅಲ್ಲಿಂದ,
ಕತ್ತಲ ಸುಳಿಯ ಖಡ್ಡ ಖಾಲಿ ಬೀದಿಗೂ ತುಂಬಿ ತುಂಬಿ ಬರುವ ಜೀವ ಚೈತನ್ಯ ಅದು ನನಗೇನೆ...
____ ಅನುರಾಗದ ಅನುಸಂಧಾನ...
💕💝💕

ಮಳೇಲಿ ನೆಂದು ಬಂದೋನ್ಗೆ ನೆತ್ತಿ ಒರಸ್ಕೋ ಅಂತ ಬೈಯ್ಯೋಕಾದ್ರೂ ನೀವುಗಳು ಹತ್ರ ಇರ್ಬೇಕಿತ್ತು... 
____ಬೆಳದಿಂಗಳ ಕುಡಿದಂತ ಆಯಿ ಮತ್ತು ಆಗೀಗ ಮತ್ತೆ ಮತ್ತೆ ಆಯಿಯ ಆವಾಹಿಸಿಕೊಳ್ಳೋ ಕಪ್ಪು ಹುಡುಗಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)