Thursday, July 24, 2014

ಗೊಂಚಲು - ನೂರಾ ಇಪ್ಪತ್ತೇಳು.....

ಸುಮ್ಮನೇ ಒಂದಿಷ್ಟು.....

ನೋವುಗಳೇ ಜಾಸ್ತಿ ನೆನಪಲ್ಲಿ ಉಳಿಯುತ್ತವೆ ಮತ್ತು ನೋವುಗಳು ಕಳೆದ ಮೇಲೆ ನಾಳೆಗಳಲ್ಲಿ ಅವು ನಿಟ್ಟುಸಿರ ನಗುವಾಗಿ ಬದಲಾಗುತ್ತವೆ...
ಅಲ್ಲದೇ ಆತ್ಮೀಕವಾದ ಪ್ರೀತಿ ಜತೆಯಿದ್ದಾಗ ನೋವು ಕೂಡ ಹಿತವೇ ಅನ್ನಿಸುತ್ತಂತೆ...
ಯಾಕೋ ಎದೆಯ ಗೂಡಲ್ಲಿ ಉಸಿರು ಖಾಲಿಯಾಗುವ ಮುನ್ನ ಎಲ್ಲರನ್ನೂ ಒಂದಿಷ್ಟು ನೋಯಿಸಿ ಶಾಶ್ವತ ನೆನಪಾಗಿ ಹೋಗಲಾ ಎಂಬ ಕೆಟ್ಟ ಬಯಕೆ ಮೂಡುತ್ತೆ ಆಗೀಗ...
(ಕ್ಷಮಿಸಿ ಈಗೇನು ಕಡಿಮೆ ನೋಯಿಸಿದ್ದೀಯಾ ಅಂತ ಕೇಳುವವರಿಗೆ ಉತ್ತರ ಇಲ್ಲ ನನ್ನಲ್ಲಿ...)


ಕಪ್ಪು ಬಿಳುಪಿನ ಬದುಕಿಗೆ ಬಣ್ಣದ ಕನಸುಗಳ ಮದರಂಗಿ ಮೆರಗಿನ ಕೈಯ ಆಸರೆ ನೀಡಿ - ನನ್ನಲ್ಲಿ ಸಾವಿನಂಥ ಸಾವಿನೆದುರೂ ನಗೆಯ ತಂಬಿಟ್ಟಿನ ಬುತ್ತಿ ಬಿಚ್ಚಿ ಕೂರಬಲ್ಲ ಶಕ್ತಿ ತುಂಬಿ - ತಾನೇನೂ ಮಾಡಿಲ್ಲ, ತನಗೇನೂ ಗೊತ್ತಿಲ್ಲ, ನಿನ್ನ ಗೆಲುವೆಲ್ಲ ಕೇವಲ ನಿನ್ನ ಬದುಕ ಪ್ರೀತಿಯ ಫಲ ಅಂತಂದು ಅಲ್ಲೆಲ್ಲೋ ಮೂಲೆಯಲಿ, ಮೌನ ಮುಸ್ಸಂಜೆಯಲಿ ಖುಷಿಯ ಕಣ್ಣ ಹನಿ ಜಾರಿಸುವ ನನ್ನಾತ್ಮ ದೀಪಕ್ಕೆ ನಾನಿಟ್ಟ ಪ್ರೀತಿ ಹೆಸರು "ನನ್ನ ಕಪ್ಪು ಹುಡುಗಿ..."


ಅಲ್ಯಾವುದೋ ದೂರದ ಊರಿನ ಕಾಡ ದಾರೀಲಿ ಓಡಾಡುತಿರುವ ಗೆಳೆಯ ಸಂದೇಶ ಕಳಿಸ್ತಾನೆ: ನವಿಲೊಂದು ಹಾರುವುದ ಕಂಡು ಮುದಗೊಂಡೆ ಅಂತಂದು...
ನಿದ್ದೆ ಮರುಳಲ್ಲಿ ನಗುತಿದ್ದ ಅವಳ ನೆನಪ ಖುಷಿಯ ಕಚಗುಳಿಯಿಂದ ನಾನಿಲ್ಲಿ ಮುಗುಳ್ನಗುತ್ತೇನೆ ನನ್ನರಿವನ್ನು ಮೀರಿ...
ಈ ಬದುಕೆಂಬ ಬದುಕೇ ಸುಸ್ತಾಗಿ ದಕ್ಷಿಣಕೆ ತಲೆಯಿಟ್ಟು ಅಡ್ಡಡ್ಡ ಮಲಗೋಕೆ ಹವಣಿಸುತಿರೋ ಹೊತ್ತಲ್ಲಿ ಗೆಳೆಯನದೊಂದು ಸಂದೇಶ, ಗೆಳತಿಯ ಗುಳಿ ಕೆನ್ನೆ ನೆನಪು ಜೊತೆಯಾದ ಆ ಕ್ಷಣ ಮನದ ಅದ್ಯಾವುದೋ ಮೂಲೆಯಿಂದ ಪುಟ್ಟ ಕನಸೊಂದು ಸೂರ್ಯ ಮುಖಿಯಾಗಿ ಗರಿಬಿಚ್ಚಲು ಹೆಣಗಾಡುತ್ತೆ...!!
ಅಚ್ಚರಿಯ ಆ ಕನಸಿಗೆ ನಾ "ನನ್ನ ಕಪ್ಪು ಹುಡುಗಿ" ಎಂದು ಹೆಸರಿಟ್ಟು ನಗುತ್ತೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 16, 2014

ಗೊಂಚಲು - ನೂರಿಪ್ಪತ್ತಾರು.....

ಹೀಗೆಲ್ಲ ಅನ್ನಿಸಿದರೆ ತಪ್ಪಾ.....

ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗುತ್ತೆ ಅಂತಾರೆ...
ಮಧುರ ಬಂಧಗಳ ನಡುವೆ ಈ ಮಾತು ಹೆಚ್ಚಾಗಿ ನೋವನೇ ಧ್ವನಿಸುತ್ತೆ...
ತುಂಬ ಸಲ ಗೆಳೆತನಗಳ ನಡುವೆ ಈ ಮಾತು ಬಂದು ಹೋಗುತ್ತಿರುತ್ತೆ - ಒಮ್ಮೊಮ್ಮೆ ಸುಮ್ಮನೇ ತಮಾಷೆಯಾಗಿ, ಇನ್ನೊಮ್ಮೆ ಮನದ ವೇದನೆಯ ಕುರುಹಾಗಿ...
ನನ್ನೆದುರು ಈ ಮಾತು ಬಂದಾಗ ನನ್ನ ನಾನು ಹೀಗೆ ಸಮರ್ಥಿಸಿಕೊಳ್ಳ ಹೊರಡುತ್ತೇನೆ:

ನೀರ ಪ್ರತಿ ಹನಿಯ ಪರಮೋಚ್ಛ ಗುರಿ ಸಾಗರ ಸಂಗಮ...

ಹನಿ ನಿಂತಲ್ಲೇ ಸಾಗರ ತಾನು ಬರಲಾರದಲ್ಲ...
ಹೊಸ ನೀರ ಹನಿ ಬಂದು ಈ ನೀರ ಹನಿಯ ಮುಂದೆ ತಳ್ಳಿದಾಗ ಈ ಹನಿ ತಾನೇ ತಾನಾಗಿ ಒಂದು ಹೆಜ್ಜೆ ಸಾಗರದೆಡೆಗೆ ಸಾಗುವುದು ದಿಟ ತಾನೆ...

ನೀರ ಪ್ರತಿ ಬಿಂದುವಿನ ನೈಜ ಸಾರ್ಥಕ್ಯ ಹಸಿರ ವಿಹಂಗಮಕೆ ಉಸಿರಾಗಿ ನಕ್ಕದ್ದು...
ಬಿಂದು ತಾನು ಭುವಿಯಾಳದ ನಿಧಿಯಾಗಿ ಶೇಖರವಾಗದೆ ಹೋದಲ್ಲಿ ಹಸಿರ ಬೇರು ಆಳಕಿಳಿದು ಬಲವಂತವಾಗದಲ್ಲ...

ಹೊಸ ಹನಿಯೊಂದಿಗೆ ಬೆರೆತು ಹೊಸ ಹುರುಪು ಹೊಂದಿ ಹರಿವನು ಮೈಗೂಡಿಸಿಕೊಳ್ಳಲಾರೆನೆಂಬ ಅಥವಾ ಭುವಿಯೆದೆಯಲಿ ಇಂಗಿ ಹೊಸ ಝರಿಯಾಗಿ ಚಿಮ್ಮಲಾರೆನೆಂಬ ಹನಿ ಸಾಗರದ ಅಗಾಧತೆಯ ಕಾಣುವ ಇಲ್ಲವೇ ಭುವಿಯೊಡಲ ಒಲವ ಹೀರಿ ಹಸಿರ ಉಸಿರಲ್ಲಿ ನಗುವ ಸೊಬಗಿಂದ ವಂಚಿತವಾಗದಾ...

ಹೊಸದರೊಂದಿಗೆ ಬೆರೆತು ಸ್ಫುಟಗೊಂಡು ಹೊಸದಕೂ ಆಸರೆಯಾಗಿ ಹರಿದಾಗಲೇ ಅಲ್ಲವಾ ಹಳೆಯದರ ಹಿರಿತನಕೆ ಹೊಸ ಬೆಲೆ ಮತ್ತು ಅಸ್ತಿತ್ವಕ್ಕೆ ಹೊಸ ಚೈತನ್ಯ ದಕ್ಕುವುದು...

ಇಷ್ಟಕ್ಕೂ ಈ ಹನಿ ಕೂಡ ಹಳೆಯದಾಗುವ ಮುನ್ನ ಹೊಸದಾಗಿಯೇ ಇತ್ತಲ್ಲವಾ...

ಇನ್ಯಾವುದೋ ಹನಿಯ ಮುಂದೆ ತಳ್ಳಿಯೇ ಅಲ್ಲವಾ ಇದಿಲ್ಲಿ ಅಸ್ತಿತ್ವ ಸ್ಥಾಪಿಸಿದ್ದು...

ಹೊಸ ನೀರು ನನ್ನ ದಾರೀಲಿ ಮಾತ್ರವೇ ಹರಿಯುವುದಿಲ್ಲ ಅಲ್ಲವಾ – ಎದುರಿನ ದಾರೀಲೂ ಭರದಿಂದಲೇ ಹರಿದೀತು ತಾನೆ...

ಇಂಗಿ ಒಳಹರಿವಾಗಿ ಅನುಗಾಲವೂ ಉಳಿವ ಅಥವಾ ಹರಿದು ಶರಧಿ ಸೇರಿ ಮೆರೆವ ಜೀವನ ಪ್ರೀತಿಯ ಹನಿ ತಾನು ಹೊಸದರೊಂದಿಗೆ ಎಂದಿಗೂ ಜಿದ್ದಿಗೆ ಬೀಳದೇನೋ - ಹೊಸದನ್ನು ತನ್ನ ಸ್ಥಾನ ಕದ್ದ ಕಳ್ಳನೆಂಬಂತೆ ಕಾಣದೇನೋ – ಜಿದ್ದಿಗೆ ಬದಲಾಗಿ ಹೊಸದರೊಂದಿಗೆ ಪ್ರೀತಿಗೆ ಬಿದ್ದೀತು – ಹೊಸ ಹನಿಯನು ಪ್ರೀತಿಯಿಂದ ತಬ್ಬಿ ತನ್ನ ಕಕ್ಷೆಯ ನಕ್ಷೆಯ ಹಿಗ್ಗಿಸಿಕೊಂಡೀತು...

ಬಂಧವೊಂದು ಸಾಯುವುದಕೆ ಹೊಸ ಬಂಧ ಕಾರಣವಾಗುವುದೆಂಬ ಮಾತು ಪೂರ್ತಿ ಸತ್ಯವೆನಿಸಲ್ಲ ನನಗೆ – ಹೊಸದನ್ನು ಅದಿರುವಂತೆ ಹೀರಿ ತನ್ನಂತಾಗಿಸಿಕೊಂಡು ನಗಬಲ್ಲ ಮಾತೃ ಮನದ ಹಿರಿತನವಿದ್ದಲ್ಲಿ (ನನಗಿದೆಯಾ ಆ ಹಿರಿತನ ಎಂದು ಕೇಳಬೇಡಿ)...

ಒಂಟಿಯಾಗಿಯೇ ಉಳಿದು ಒಂಟಿಯಾಗೇ ಅಳಿವೆನೆಂದು ಪಣ ತೊಟ್ಟು ಎಲ್ಲೂ ಬೆರೆಯದೇ ಬಿಸಿಲಿಗೆ ಮೈಯ್ಯೊಡ್ಡಿದ ಹನಿ ತಾನು ಒಂಟಿಯಾಗಿಯೇ ಆವಿಯಾಗಿ ಅಳಿದರೂ; ಮೋಡವಾಗಿ, ಮಳೆಯಾಗಿ ಮತ್ತೆ ಭುವಿಯೆದೆಯ ಮುತ್ತಾಗಲೇಬೇಕಲ್ಲವಾ...

ಅದರ ಬದಲು ಹೊಸದರೊಡನೆ ಕಲೆತು, ಹೊಸದಾಗಿ ಹೊಳೆದು, ಹೊಸತಕೂ ಮೆರಗು ತುಂಬಿ ಇನ್ನಷ್ಟು ಕಾಲ ನಗುವುದು ಮೇಲಲ್ಲವಾ...

ಅದಕೇ ಯಾರದೇ ಹೊಸ ಬಂಧವನೂ ಮನಸಿಂದ ಶಂಕಿಸಲಾರೆ...
ಅಲ್ಲಿ ಬಂಧಗಳು ಸಾವಿರ ಸಾವಿರವಾದರೂ ನನ್ನ ಸ್ಥಾನ ನನಗಿದ್ದೇ ಇದೆ ಅಂದುಕೊಳ್ತೇನೆ - ಸಾಗರಕೆ ಒಂದು ಹನಿ ಏನೂ ಅಲ್ಲದಿರಬಹುದು ಆದರೆ ಹನಿ ಹನಿ ಸೇರಿಯೇ ಸಾಗರ ಆದದ್ದು - ಹಸಿರು ನಗಲು ಪ್ರತಿ ಬಿಂದುವೂ ಊಟವೇ - ಉಬ್ಬರದ ಒಂದು ಹನಿ, ಹಸಿರಿನೂಟದ ಒಂದು ಬಿಂದು ನಾನೆಂಬ ಖುಷಿಯೇ ಆ ಬಂಧದೊಂದಿಗೆ ನಾ ನಗುತಿರಲು ಪ್ರೇರೇಪಿಸುತ್ತೆ ನನ್ನ...

ನನ್ನೊಡನೆಯ ಬಂಧಗಳು ನನ್ನ ತೊರೆಯಲು ನನ್ನ ಸ್ವಭಾವಜನ್ಯ ತಪ್ಪುಗಳು ಮತ್ತು ನನಗಿಲ್ಲದ ಯೋಗ್ಯತೆ ಕಾರಣವೇ ಹೊರತು ಅಲ್ಲೆಲ್ಲೋ ಹೊಸ ನೀರು ಹರಿದದ್ದಲ್ಲ ಎಂಬುದು ನನ್ನ ನಂಬಿಕೆ ಮತ್ತು ನನ್ನ ಪಾಲಿನ ಸತ್ಯ ಕೂಡ...

ಇವೆಲ್ಲ ಕೇವಲ ನನ್ನ ಪಾಲಿನ ಸತ್ಯಗಳು - ನಿಮ್ಮ ಸತ್ಯಗಳೇನಿವೆಯೋ....

Tuesday, July 8, 2014

ಗೊಂಚಲು - ನೂರು + ಇಪ್ಪತ್ತೈದು.....

ಅರ್ಧ ಬರೆದ ಸಾಲುಗಳು...
ಅರ್ಥ - ಅವರವರ ಭಾವಕ್ಕೆ.....

ಮಳೆ ಹನಿದ ನಂತರದ ಸಾವಿರ ಕವಲುಗಳ ಒದ್ದೆ ಒದ್ದೆ ದಾರಿ - ಇರುಳ ಮೊದಲ ಜಾವದಲ್ಲಿನ ಒಂಟಿ ಒಂಟಿ ಅಲೆದಾಟ – ನೆನಪುಗಳ ಚರಮಗೀತೆ – ಕನಸುಗಳ ಸೋಬಾನೆ ಹಾಡು – ಹುಟ್ಟು ಸಾವಿನ ನಡುವೆ ಬದುಕೆಂಬ ಹೆಳವನ ಕುಂಟು ಮೆರವಣಿಗೆ...
ಆ ಮೆರವಣಿಗೆಯ ನಡುವೆಯೇ ಈಗೊಂದಿಷ್ಟು ಕಾಲದಿಂದ ಸವಿ ಸ್ನೇಹಗಳ ಮಡಿಲ ತಂಪಲ್ಲಿ ನಾ ಎಂದಿನಿಂದಲೋ ಪ್ರೀತಿಯಿಂದ ಸಾಕಿಕೊಂಡು ಬಂದಿದ್ದನ್ನ ನಾನೇ ಮರೆತು ಹೋಗಿದ್ದ, ನಾ ಮರೆಯಬಾರದಾಗಿದ್ದ ನನ್ನ ಒಂಟಿ ಒಂಟಿ ಏಕಾಂತವ ನಾಳೆಗಳಿಗಾಗಿ ಮತ್ತೆ ದಕ್ಕಿಸಿಕೊಂಡೇನಾ...


ಅವಳೆಡೆಗಿನ ನನ್ನ ಒಲವು ನನ್ನ ಬದುಕಿನ ಮೂಲಾಧಾರ ಶಕ್ತಿಯಾಗಿ ನನ್ನೊಳಗೇ ಉಳಿದು ನನ್ನೊಂದಿಗೇ ಸಮಾಧಿ ಸೇರಲಿ...
ಕಾರಣ -
ಪ್ರೇಮವೆಂದರೆ ಬದುಕನ್ನೂ ಹಂಚಿ ತಿನ್ನುವುದಲ್ಲವಾ..?
ಹಳಸಿದ್ದನ್ನ ಹಂಚಿ ತಿನ್ನುವ ಬಾ ಅಂತ ಯಾರನ್ನಾದರೂ ಕೇಳಲಾದೀತಾ..?
ಹಸಿವಿದೆ ಅಂತ ಹೇಸಿಗೆಯ ತಿನ್ನಲಾರೆವಲ್ಲಾ...
ಅಲ್ಲಿಗೆ ಬರಡು ಬದುಕಿಗೆ ಪ್ರೇಮ ನಿಶಿದ್ಧ ಅಲ್ವಾ...
ದೂರವಿರಿ ಮಧುರ ಭಾವಗಳೇ ನನ್ನಿಂದ ದಯವಿಟ್ಟು...
ನಾನು ಸಲಹಲು ಅಶಕ್ತನಿದ್ದೇನೆ ನಿಮ್ಮನ್ನು ನಿಮ್ಮಂತೆ...


ಕೇಳು ಹುಡುಗೀ -
ಅವ ನಕ್ಕುಬಿಟ್ಟ – ಭುವಿಯೆಲ್ಲ ಬೆಳಕಾಯಿತು...
ಅವನೂ ನಿದ್ದೆಗೆ ಜಾರುವನಂತೆ – ಆಗ ಇರುಳೆಂದರು...
ಆಗಸದೆಡೆಗೆ ಕಣ್ಣಿಟ್ಟು ನೋಡು ಒಮ್ಮೆ ಚಂದಿರನೊಳಗಿಂದ ನಗುತಿದ್ದಾನೆ ಅದೇ ಅವನು – ಕುರುಡು ಬದುಕುಗಳಲೂ ಬಣ್ಣ ಬಣ್ಣದ ಕನಸ ತುಂಬುತ್ತಾ...
ನಿದ್ದೆ ಮರುಳಲ್ಲಿರಬೇಕು ನಕ್ಕಿದ್ದು ಅದಕೇ ಚಂದಿರ ಅಷ್ಟು ತಂಪು ತಂಪು...
ಅವರಿಬ್ಬರೂ ಅವಳ ಆತ್ಮ ಸಂಗಾತಿಗಳು...
ಅವರಿಲ್ಲದೇ ಅವಳಲ್ಲಿ ಉಸಿರ ಸಂಚಾರವಿಲ್ಲ...
ಉರಿಯುತ್ತಲೇ ಅವಳ ತಾಕಿ ಅವಳಲ್ಲಿ ಜೀವ ಸಂಚಾರದ ಶಕ್ತಿಯಾದವನು ಅವನು ಹಗಲ ಮಣಿ – ಬೆಳಕ ಗಣಿ...
ಅವನ ಬೆಳಕಿಂದಲೇ ಒಂದಿನಿತು ಕಿರಣಗಳ ಬಸಿದುಕೊಂಡು ಚಂದಗೆ ತಂಪಾಗಿ ನಗುತ ಅವಳಲ್ಲಿನ ಒಲವಿನುಬ್ಬರಕೆ ಸಾಕ್ಷಿಯಾಗುವವನು ಇವನು ಇರುಳ ದೀಪ...
ಇರುಳಾಯಿತೆಂದು ಮರುಗದಿರು ಚಂದಿರ ನಗುತಾನೆ ಅಂತಂದೆಯಲ್ಲ ಅಮಾವಾಸ್ಯೆಯ ಇರುಳಲೇನ ಮಾಡಲಿ ಅಂತ ಕೇಳದಿರು; ಬಾನ ಬಯಲಲ್ಲಿ ತಾರೆಗಳೂ ಇವೆ ನಿನ್ನ ನಗಿಸಲು ಗೆಳತೀ... 
ಚಂದಿರನೂ ಇಲ್ಲ ಬಾನೆಲ್ಲ ತಮ್ಮದೇ ಎಂಬ ಹುರುಪಲ್ಲಿ ಮಿನುಗೋ ಆ ಚುಕ್ಕಿಗಳ ಸಂಭ್ರಮದ ಗಡಿಬಿಡಿಯ ನೋಡಬೇಕು ನೀನು ನಿನ್ನ ಕನಸ ಕಂಗಳಲಿ...
ಕಾಣುವ ಒಳಗಣ್ಣ ತೆರೆದು ನೋಡಿದರೆ ಭುವಿಯ ಹಸಿರಲ್ಲಿ, ಚಂದಮನ ತಂಪಲ್ಲಿ, ತಾರೆಗಳ ಮಿನುಗಲ್ಲಿ ಎಲ್ಲೆಲ್ಲೂ ಅವನೇ ಕಾಣುತ್ತಾನೆ... 
ಬೆಳಕ ಪ್ರತಿನಿಧಿ – ಶಕ್ತಿ ಸಂಜೀವಿನಿ... 
ಹೊರಗೆಲ್ಲ ಬೆಳಗುವ ಆ ಸೂರ್ಯ ಚಂದ್ರ ಒಂದಿಷ್ಟು ನಮ್ಮ ಒಳಗನ್ನೂ ಬೆಳಗಲಿ - ಎಡಬಿಡದ, ಸೋತು ಸುಸ್ತಾಗದ ತಮ್ಮ ನಿತ್ಯ ಕೈಂಕರ್ಯದಿಂದ; ಅರಿವಿನ ಬೆಳಕಿಂದ... 
ಬದುಕೆಲ್ಲ ಬೆಳಕೇ ತುಂಬಲಿ - ಅವಳ ಮಡಿಲಲ್ಲಿ ಜೀವ ಜಾಲ ತುಂಬಿ ನಕ್ಕಂತೆ...


ಮರೀ -
ನಿನ್ನ ಗೆಲುವು ನನ್ನ ಸೋಲೇ ಆದರೂ ಆ ಸೋಲಲ್ಲೂ ನಂಗೆ ಸಂಭ್ರಮವಿದೆ...
ನಿನ್ನ ಸೋಲು ನನ್ನ ಗೆಲುವೆಂಬುದಾದರೆ ಆ ಗೆಲುವಲ್ಲೂ ನನ್ನ ಮನದ ನೋವ ಕಣ್ಣೀರಿದೆ...
ಈ ಮಧುರ ಭಾವಕ್ಕೆ ನಾ ಯಾವ ಹೊಸ ಹೆಸರನೂ ಕೊಡಲಾರೆ – ಸವಿ ಸ್ನೇಹವನ್ನುಳಿದು...
ನಿನ್ನಾಯ್ಕೆ ಗೆಲುವೋ, ಸೋಲೋ...?
ಉಳಿದದ್ದು ನಿನ್ನ ಚಿತ್ತ...


ಹಾಳಾದ ಈ ಕಹಿ ನೆನಪುಗಳೆಂಬ ಪಾರ್ಥೇನಿಯಂ ಕಳೆಯಂಥ ಭಾವಗಳು ಅದೆಷ್ಟು ಹುಲುಸಾಗಿ ಬೆಳೆಯುತ್ತವೆ ಗೊತ್ತಾ...
ಬೆಳೆಯದಿರಲೆಂದು ಎಷ್ಟೇ ಚಿವುಟಿದರೂ ಮತ್ತೆ ಮತ್ತೆ ಚಿಗುರಿ ಕನಸುಗಳ ಬೆಳೆಯ ಬೆಳವಣಿಗೆಯ ಕತ್ತು ಹಿಸುಕಿ ಮೆರೆದಾಡುತ್ತವೆ...
ಬೇರು ಸಹಿತ ಕಿತ್ತೆಸೆಯೋಣ ಅಂದುಕೊಂಡರೆ ನನ್ನೀ ಮನಸೆಂಬುದು ಕನಸುಗಳಿಗಿಂತ ಮುಂಚೆ ನೆನಪುಗಳ ತಾಯಿ...
ನೆನಪುಗಳನೂ ಪ್ರೀತಿಸಲು ಸಾವಿರ ಕಾರಣಗಳಿವೆ ಆ ತಾಯಿ ಮಡಿಲಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, July 2, 2014

ಗೊಂಚಲು - ನೂರಿಪ್ಪತ್ನಾಕು.....

ಈ ನಡುವೆ ಒಲವ ಮೆರವಣಿಗೆ.....
(ನೆನಪು, ಕನಸುಗಳ ಗುಂಗಲ್ಲಿ ಅವಳ ಒಲವ ಬಗೆಗೆ ಒಂದಷ್ಟು ಬಿಡಿ ಬಿಡಿ ಸಾಲುಗಳು...)

ನೋವ ಹೂಳು ತುಂಬಿ ಬಗ್ಗಡವಾಗಲಿದ್ದ ಕಣ್ಣ ಕೊಳದಲ್ಲಿ ಗೆಜ್ಜೆ ಕಾಲ್ಗಳನಾಡಿಸಿ ನಗೆಯಲೆಯನೆಬ್ಬಿಸಿದವಳು... 
ಕತ್ತಲಾಗಿದ್ದ ಎದೆಯ ಗರ್ಭಗುಡಿಯ ಬಾಗಿಲಲಿ ಒಲವ ಪ್ರಣತಿಯ ಹಚ್ಚಿಟ್ಟು ಕಣ್ಣ ಮಿಟುಕಿಸಿದವಳು...
ಅವಳೆದೆಯ ಬಟ್ಟಲ ಒಲವ ಅಕ್ಷಯ ಪಾತ್ರೆಯ ಬಲದಿಂದ ನಿತ್ಯ ದಾಸೋಹವ ನಡೆಸಿ ಎನ್ನೆದೆಯ ಹಸಿವ ನೀಗುತಿರುವಳು...

ತನ್ನ ಮುಗುಳ್ನಗುವಿಂದಲೇ ಶಕ್ತಿ ತುಂಬಿದಳಾಕೆ ನನ್ನಾಳದ ಕನಸ ಹಕ್ಕಿಯ ರೆಕ್ಕೆಗೆ...
ಇನ್ನೀಗ ಅವಳ ಮಡಿಲ ಅಕ್ಕರೆಯ ಜೇನೊಂದೆ ಸಾಕು ಈ ಬದುಕಿಗೆ...

ಅವಳ ಬದುಕ ಸಂತೆಯ ನಡುವೆ ನಕ್ಕ ಯಾವುದೋ ಮುಖ ನಾನು...
ನನಗಾದರೋ ಅವಳು ನನ್ನ ಕನಸ ನಕ್ಷತ್ರಗಳ ಸಂತೆ ಮಾಳಕೆ ತಾವು ನೀಡಿದ ಬಾನು...

ತನ್ನ ಸ್ನೇಹದ ತೊಟ್ಟಿಲಲೆನ್ನ ಕಂದನಾಗಿಸುವಳು...
ನನ್ನ ಖುಷಿಗಳಿಗೆಲ್ಲ ಅಮ್ಮನೆನಿಸುವಳು...

ತನ್ನ ಎದೆ ಕಣಿವೆಯ ಕತ್ತಲ ಸೊಬಗಿಂದ ನನ್ನ ದೇಹದ ಬಯಕೆ ಬೆಂಕಿಯ ಮಣಿಸಿ ತಣಿಸಿದಾಕೆ...
ಅದೇ ಹೊತ್ತಿಗೆ - 
ತನ್ನೊಳಗೆ ತಾ ಸದಾ ಹಚ್ಚಿಟ್ಟುಕೊಂಡ ಒಲವ ಹಣತೆಯ ಜ್ಯೋತಿಯಿಂದ ಎನ್ನ ಆತ್ಮದ ದೊಂದಿಗೆ ಕಿಡಿಯ ಹೊತ್ತಿಸಿದಾಕೆ...

ಅವಳ ಸ್ನೇಹದ ಮಡಿಲ ಘಮದ ನೆನಪ ಮಾಲೆಯ ಧರಿಸಿದ ನನ್ನೀ ಮನದ ಮನೆಯಂಗಳದಲ್ಲಿನ್ನು ಸದಾ ನಗುವಿನುತ್ಸವ...
ಎಷ್ಟೆಲ್ಲ ಸವಿಗನಸುಗಳು ಕುಂಟೆಬಿಲ್ಲೆಯಾಡುತ್ತಿವೆ ಅವಳು ಕಣ್ಣಲ್ಲಿ ಕಣ್ಣಿಟ್ಟ ಮೇಲೆ ನನ್ನ ಕಣ್ಣ ಬಯಲಲ್ಲಿ....
ಇದೀಗ ನನ್ನೆಲ್ಲ ಕ್ಷಣಗಳೂ ಸುಂದರ ಮತ್ತು ಬರೀ ಸುಂದರ...

ನನ್ನೀ ಬದುಕ ಕೊಳಲಿಗೆ ಉಸಿರ ತುಂಬಿ ಮಧುರ ನಾದ ಹೊಮ್ಮಿಸಿದಾಕೆ... 
ತಿಳಿ ಮನದ ನಗೆಯ ಬದುಕಿದು ಅವಳದೇ  ಕರುಣೆಯ ಕಾಣಿಕೆ...

ಅವಳು ಏನೂ ಆಗದೆಯೇ ಎಲ್ಲವೂ ಆಗಬಲ್ಲವಳು...
ಸ್ನೇಹದ ಕಿರುಗೆಜ್ಜೆ ನಾದದಲೇ ಎನ್ನ ಬದುಕನಾಳುವಳು...

ಹೆಸರೇನೆಂದು ಕೇಳದಿರಿ...
ಕಣ್ಣ ಬಿಂಬದ ಬೆಳಕಿಗೆ ಏನೆಂದು ಹೆಸರಿಡಲಿ...
ನನ್ನ ಹೆಸರನೂ ತನ್ನದಾಗಿಸಿಕೊಂಡ ಎನ್ನ ಮನ ಮನೆಯ ಮಾರಾಣಿ – ಅವಳೆನ್ನ ಕಪ್ಪು ಹುಡುಗಿ...