Saturday, June 22, 2013

ಗೊಂಚಲು - ಎಪ್ಪತ್ತಾರು.....

ಹೀಗೊಂದಿಷ್ಟು.....

ಬಾಳ ಪಯಣದ ತುಂಬ
ನಗೆ ಮಲ್ಲಿಗೆಯ ಚೆಲ್ಲಿ 
ಒಲವ ಗೀತೆಯ ನಾನು
ಹಾಡಬಲ್ಲೆನೇನು...
ಆಸೆ ದೋಣಿಯನೇರಿ
ನೋವ ಅಲೆಗಳ ಹಾರಿ
ಮಗುಚಿ ಬೀಳದೆ ನಾನು
ಆ ತೀರದೆಡೆಗೆ ತೇಲಬಲ್ಲೆನೇನು...

ಮರಣದೂರಿನ ಕಡೆಗೆ
ದಾಪುಗಾಲಿನ ನಡಿಗೆ
ಅರೆಕ್ಷಣವೂ ನಿಲ್ಲದೀ
ಕಾಲನಂಬಿನ ಚಲನೆ...
ದಾರಿ ಏರನು ಏರಿ
ಸುಸ್ತಾದ ಈ ಹೃದಯದಲಿ
ಏರಿಳಿವ ಪ್ರತಿ ಉಸಿರಲೂ
ಸತ್ತ ಕನಸಿನ ಹೆಣದ ವಾಸನೆ...

ಇದ್ದಲ್ಲಿ ಇರಲಾರದೀ
ಮಹಾ ಚಂಚಲ ಮನಕೆ
ಎಲ್ಲ ಮೀರುವ ಬಯಕೆ
ಆಗೊಮ್ಮೆ ಈಗೊಮ್ಮೆ...
ಗೆದ್ದುದೇನೂ ಇಲ್ಲ
ಬಾಯಿ ಬೊಗಳೆಯ ಬೆಲ್ಲ
ಕೈ ಮೀರಿದ್ದೇ ಎಲ್ಲ
ಹುಟ್ಟೊಮ್ಮೆ ಸಾವೊಮ್ಮೆ...

Wednesday, June 19, 2013

ಗೊಂಚಲು - ಎಪ್ಪತ್ತು ಮತ್ತೈದು.....

ಮನಸು ಅಳುವಾಗ ಕುಣಿವ ಭಾವಗಳು.....
(ಇವೆಲ್ಲ ಬರೀ ಸಂಚಾರೀ ಭಾವಗಳಷ್ಟೇ...)

* ನಗುತಿರುವಾಗ ಹತ್ತಿರವೂ ಸುಳಿಯದ ಅಮ್ಮನ ನೆನಪು ಮನಸು ಅಳುವಾಗ ಮಾತ್ರ ಬಿಡದೆ ಕಾಡುತ್ತೆ ಯಾಕೆ...?
ನನ್ನೀ ಮನಸಿನ ಕ್ರೂರ ಸ್ವಾರ್ಥಕ್ಕೆ ಏನೆನ್ನಲಿ...

* ಪ್ರೀತಿ ಕೊಡುವುದೆಂದರೇನೆಂದೇ ಗೊತ್ತಿಲ್ಲದವನಿಗೆ ಪ್ರೀತಿಸುವುದ ಕಲಿಸ ಹೋಗಿ ತಮಗೆ ತಾವೇ ನೋವ ಮಾಡಿಕೊಂಡವರಿಗೆಲ್ಲ ಒಂದು ಋಣದ ನಮನ ಸಲ್ಲಿಸಬೇಕೆನ್ನಿಸುತ್ತೆ ಆಗಾಗ...ಅದಕ್ಕೂ ನಾನೆಂಬ ನನ್ನ ಅಹಂ ಅಡ್ಡಬರುತ್ತೆ...ಪಾಪಿ ಕಲ್ಲು ಮನಸಿನ ಕರಗದ ಕೊಬ್ಬಿಗೇನೆನ್ನಲಿ...

* ಮನಸು ತೀವ್ರವಾಗಿ ಕಂಗಾಲಾದಾಗ ಗಂಡಸು ಹೆಂಡ ಇಲ್ಲವೇ ಹೆಣ್ಣಿನ ಸಂಗಕ್ಕೆ ಜಾರುತ್ತಾನೆ - ಹಾಗಂತ ಕೇಳಿದ್ದಿದೆ...
ಮನಸು ಮಗುಚಿ ಬಿದ್ದು ತೀವ್ರವಾಗಿ ರೋಧಿಸುತಿರುವಾಗಲೂ ಹೆಂಡವ ಒಡಲಿಗಿಳಿಸಿಕೊಳ್ಳಲೂ, ಬಳಿಬಂದವರಿಗೆಲ್ಲ ದಕ್ಕಿಯೂ ಯಾರವಳೂ ಆಗದವಳ ತೋಳ ಸೇರಲೂ ಅಡ್ಡಬರುವ ಹಾಳು ಜನ್ಮ ಸಂಸ್ಕಾರ...
ನಿದ್ದೆಯನೂ ಕೊಂದು ಕಣ್ಮುಂದೆ ಕುಣಿವ ಬದುಕ ವಾಸ್ತವಗಳು...
ನಾನು ಸಾವನ್ನು ಪ್ರೀತಿಸಲಾರೆ - ಬದುಕು ನನ್ನ ನಾ ಬಯಸಿದಂತೆ ಸಲಹಲಾರದು...
ಹುಚ್ಚುಚ್ಚು ಉಪದ್ವ್ಯಾಪಿ ಆಲೋಚನೆಗಳು...
ನಾನ್ಯಾಕೆ ಹೀಗಾದೆ...???

* ಬೆಸೆದುಕೊಂಡ ಯಾವ ಭಾವ ಬಾಂಧವ್ಯವನೂ ತುಂಬ ಕಾಲ ಚಂದಗೆ ಸಲಹಿಕೊಳ್ಳಲಾಗದ ನನ್ನದೇ ಮನದ ವೈಕಲ್ಯಕೆ ನಾನಿಟ್ಟುಕೊಂಡ ಹೆಸರು - ನಾನು ನಿಷ್ಠುರವಾದಿ...
ನೇರಾ ನೇರ ಮಾತಾಡಿದೆನೆಂದು ಬೀಗುತ್ತಿದ್ದರೆ ನಾನು - ನಗಲೆಂದು ನನ್ನ ಕೈಹಿಡಿದ, ನನ್ನ ಒಂದಷ್ಟು ನಗುವಿಗೆ ಕಾರಣವಾದ ಬಾಂಧವ್ಯವೊಂದು ಒಳಗೇ ನೋಯುತ್ತ ಸಾಯುತ್ತಿರುತ್ತದೆ...

* ಮೌನವೆಂದರೆ ಬೆಚ್ಚಿಬೀಳುವ ನಾನೇ ಒಂದಿಷ್ಟು ಮೌನಿಯಾಗಲು ಬಯಸುತ್ತಿದ್ದೇನೆ...
ಮಾತೇ ಎಲ್ಲವೂ ಎಂಬಂತೆ ಬದುಕಿದ ನಾನು ಫಿಲ್ಟರ್ ಇಲ್ಲದ ನಾಲಗೆ ಆಡಿದ ಅದೇ ನನ್ನ ಅತಿಯಾದ, ಶ್ರುತಿಯಿಲ್ಲದ ಮಾತುಗಳಿಂದ ಮನಸುಗಳ ನಡುವಣ ಬಂಧ ಸಾಯುವ ಭಯವು ಕಾಡುವ ಹೊತ್ತಲ್ಲಿ ನನ್ನದಲ್ಲದ ಮೌನಕ್ಕೆ ಒಮ್ಮೆ ಶರಣು ಹೋಗಬೇಕೆಂದುಕೊಳ್ತೇನೆ...
ಹಸಿವಾದಾಗ ಕರುವಿಗೆ ತಾಯ ನೆನಪಾದಂತೆ ಮಾತು ತನ್ನ ಹರಿತದಿಂದ ಮನಸ ಕೊಂದದ್ದು ಅರಿವಾದ ಘಳಿಗೇಲಿ ಮೌನದ ನೆನಪಾಗುತ್ತಿದೆ...
ಮನಸಿಗೆ ಬುದ್ಧಿ ಬಂದು ಮಾತು ಮೌನಗಳ ನಡುವೆ ನಾನು ಮಧುರ ಸಮನ್ವಯ ಸಾಧಿಸಿಕೊಳ್ಳುವುದೆಂದು...
ಎಲ್ಲ ಕಂಗಾಲು ಕಂಗಾಲು...

* ಸುತ್ತ ಪ್ರೀತಿ ಹಂಚುವವರ ಸಂತೆಯೇ ಇದ್ದೂ ಆಗಾಗ ಅಲ್ಲಲ್ಲಿ ಒಂಟಿ ಭಾವ ಇನ್ನಿಲ್ಲದಂತೆ ಕಾಡುತ್ತೆ...
ಮನಸು ಅಯೋಮಯವಾಗುತ್ತೆ...
ಒಂದು ಕ್ಷಣ ಕಾಡಿದ ಒಂಟಿ ಭಾವವೇ ಇಷ್ಟೊಂದು ಕಂಗೆಡಿಸುವುದಾದರೆ ಜನ್ಮವಿಡೀ ಒಂಟಿಯೇ ಆಗಿಹೋದವರ ಪಾಡೇನು...???

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Tuesday, June 18, 2013

ಗೊಂಚಲು - ಎಪ್ಪತ್ನಾಕು.....

ಶೀರ್ಷಿಕೆ ಇಲ್ಲದ ಭಾವಗಳು.....
(ಇವೆಲ್ಲ ಬರಹವಾಗಿ ಅತಿ ಸಾಮಾನ್ಯ ಸಾಲುಗಳು - ಆದರೆ ಬದುಕಾಗಿ...)

* ಕನಸಲ್ಲಿ ಬರೆದ ಕವನ ನಿನ್ನ ಹೆಸರು...

:::^:::

* ಕೊಟ್ಟಾತನಿಗದು ಏನೂ ಅಲ್ಲದಿರಬಹುದು...
ಬರೀ ಒಂದು ಪಾವಲಿ (ನಾಣ್ಯ) - ಒಂದು ಮುಗುಳ್ನಗುವೇ ಇರಬಹುದು...
ಆದರೆ ಪಡೆದಾತನಿಗೆ ಅದೇ ಎಲ್ಲವೂ ಆಗಿದ್ದೀತು...
ಭಿಕ್ಷೆಯಾದರೆ ಒಪ್ಪತ್ತಿನ ಊಟ - ಪ್ರೀತಿಯಾದರೆ ಒಂದಿಡೀ ಜನ್ಮ ಉಸಿರಾಡಿಕೊಂಡಿರಲೊಂದು ಕಾರಣ...

@@@

* ಮೌನ ನನಗರ್ಥವಾಗಲ್ಲ - ನೀನು ಮಾತೇ ಆಡಲ್ಲ...
ನಾನು ಅಗತ್ಯಕಿಂತ ಹೆಚ್ಚೇ ಬಯಲು - ನೀನು ಗುಹೆಯೊಳಗಿನ ಕತ್ತಲು...
ಮೌನ ನಿನ್ನ ಗುಣವಾ ಅಥವಾ ಮಾತಾಡೋ ಮನಸಿಲ್ಲವಾ..?
ಗೊಂದಲ ನನಗೆ...
ಆದರೂ ನಿನ್ನ ಕಿವಿಗಳು ನಂದೇ ಅಂದ್ಕೊಂಡು ಸುರಿಯುತ್ತಲೇ ಇರುತ್ತೇನೆ ನನ್ನ ಮುಗಿಯದ ಹಳಸಲು ಶಬ್ದಗಳ...:(

* ನಿನ್ನನಿಷ್ಟು ನಗಿಸಿ ನಿನ್ನೊಂದಿಗಿಷ್ಟು ನಗಬೇಕೆಂದು ಮಾತಿಗೆ ಶುರುವಿಡುತ್ತೇನೆ ಪ್ರತಿ ಬಾರಿಯೂ...
ನಿನ್ನ ಕಣ್ಣೀರೊಂದಿಗೆ ಮಾತು ಮುಗಿಯುತ್ತದೆ...
ಹಾಗಾದಾಗಲೆಲ್ಲ ಜಗಳ ತಪ್ಪಿಸಲು ಒಂದಷ್ಟು ಕಾಲವಾದರೂ ಮೌನದ ಮೊರೆಹೋಗಬೇಕೆಂದುಕೊಳ್ಳುತ್ತೇನೆ. ಆದರೆ ಮಹಾ ವಾಚಾಳಿ ನಾನು. ಮೌನ ಸಾಧಿಸುವುದೆಂತು ಸಾಧ್ಯ. ಅದೂ ಎಲ್ಲವನೂ ಅರುಹಿ ಹಗುರಾಗಬಹುದಾದ ನಿನ್ನ ಸ್ನೇಹದೊಂದಿಗೆ...
ಸರಿ ಗಂಭೀರ ವಾದವನ್ನಾದರೂ ನಿಲ್ಲಿಸೋಣ ಅಂದುಕೊಳ್ತೇನೆ. ಆದರೆ ನಿನ್ನೊಡನೆ ಮಾತಿಗೆ ಮಿತಿ ಹಾಕಿಕೊಂಡರೆ ನಿನ್ನ ವಿನಾಕಾರಣದ ಪ್ರೀತಿಯೊಂದಿಗೆ ಕೊಬ್ಬು ತೋರಿ ನನ್ನ ಅಮಿತ ಖುಷಿಗಳಿಗೆ ನಾನೇ ಎರವಾದಂತಲ್ಲವಾ...
ಬೆರೆಯಲಾರದ - ತೊರೆಯಲಾಗದ ನನ್ನ ತೊಳಲಾಟಕೇನೆನ್ನಲಿ...
ಇನ್ನೀಗ ನಾನೇನ ಮಾಡಲಿ - ನಗಿಸಬೇಕೆಂದು ಹೊರಟೂ ಅಳುವಂತೆ ಮಾಡೋ ನನ್ನ ಸ್ವಭಾವದ ದೌರ್ಬಲ್ಯಕ್ಕೆ ನನ್ನ ನಾನೇ ಹಳಿದುಕೊಂಡು ನಿನ್ನೆದುರು ಮಂಡಿಯೂರಿ ಕ್ಷಮೆಯ ಕೋರುವುದರ ಹೊರತಾಗಿ...
ನೀನಾದರೋ ನೀಡಿದೆಲ್ಲ ನೋವನೂ ಮೌನದಲೇ ನುಂಗಿ ಮತ್ತೆ ನಗುತಲೇ ಮಾತು ಶುರುವಿಡೋ ಮೌನಗೌರಿ...

***^^^***

* ಕಿಸೆ ಖಾಲಿಯಿರುವಾಗ ಹೊಟ್ಟೆಗೆ ಹಸಿವಾಗಬೇಕು ಅಥವಾ ಹಂಗಿನ ಊಟದಲ್ಲಿ ಹಸಿವ ನೀಗಿಸಿಕೊಳ್ಳಬೇಕಾದ ಅಸಹಾಯಕತೆ ಕಾಡಬೇಕು...
ಹಾಗಾದಾಗ ಮಾತ್ರ ಹಸಿವಿನ ಕಷ್ಟ ಮತ್ತು ಅನ್ನದ ಬೆಲೆಯ ಅರಿವಾದೀತು...

* ಹಸಿ ಹಸಿ ಬೆಳಗಲ್ಲಿ ಬಿಸಿ ಬಿಸಿ ದೋಸೆ ತಿನ್ನಿಸಿ ನನ್ನ ಮತ್ತು ಮನೆತುಂಬ ಇರುತಿದ್ದ ನನ್ನದೇ ವಾರಗೆಯ ಮಕ್ಕಳ ಹೊಟ್ಟೆಯ ತುಂಬಿಸಿ ತಾನು ಮಾತ್ರ ತಂಗಳನ್ನಕ್ಕೆ ಉಪ್ಪು ನೆಂಜಿಕೊಂಡು ಹಸಿವ ಅಡಗಿಸಿಕೊಳ್ಳುತಿದ್ದ ನನ್ನ ಸಣ್ಣತ್ತೆ ನಂಗಿಂದಿಗೂ ದೇವತೆಯಂತೆ ಕಾಣ್ತಾಳೆ...

* ಎಲ್ಲಾ ಇದ್ದೂ ಬೇಯಿಸಿಕೊಳ್ಳೋ ತ್ರಾಣವಿಲ್ಲದೇ ಉಪವಾಸ ಮಲಗೋ ಹಿರಿಯರ ಕಂಡಾಗಲೆಲ್ಲ ಕಣ್ಣ ಹನಿಯೊಂದಿಗೆ ಅಮ್ಮನ ನೆನಪಾಗುತ್ತೆ...

* ಏನೇನೋ ಭ್ರಮೆಗಳಿಗಾಗಿ ಅಥವಾ ರುಚಿಯ ಬಾಯಿ ಚಪಲಕ್ಕಾಗಿ ಊಟದಿಂದ ದೂರ ಓಡುವ ಕಿರಿಯರ ಕಂಡಾಗಲೆಲ್ಲ ಅವರದು ಪ್ರಾಯದ ಸೊಕ್ಕಿನಂತೆ ತೋರಿ ಕೋಪ ಮಿಶ್ರಿತ ಬೇಸರವಾಗುತ್ತೆ...


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)