ಮನಸು ಅಳುವಾಗ ಕುಣಿವ ಭಾವಗಳು.....
(ಇವೆಲ್ಲ ಬರೀ ಸಂಚಾರೀ ಭಾವಗಳಷ್ಟೇ...)
* ನಗುತಿರುವಾಗ ಹತ್ತಿರವೂ ಸುಳಿಯದ ಅಮ್ಮನ ನೆನಪು
ಮನಸು ಅಳುವಾಗ ಮಾತ್ರ ಬಿಡದೆ ಕಾಡುತ್ತೆ ಯಾಕೆ...?
ನನ್ನೀ ಮನಸಿನ ಕ್ರೂರ ಸ್ವಾರ್ಥಕ್ಕೆ ಏನೆನ್ನಲಿ...
* ಪ್ರೀತಿ ಕೊಡುವುದೆಂದರೇನೆಂದೇ ಗೊತ್ತಿಲ್ಲದವನಿಗೆ
ಪ್ರೀತಿಸುವುದ ಕಲಿಸ ಹೋಗಿ ತಮಗೆ ತಾವೇ ನೋವ ಮಾಡಿಕೊಂಡವರಿಗೆಲ್ಲ ಒಂದು ಋಣದ ನಮನ ಸಲ್ಲಿಸಬೇಕೆನ್ನಿಸುತ್ತೆ
ಆಗಾಗ...ಅದಕ್ಕೂ ನಾನೆಂಬ ನನ್ನ ಅಹಂ ಅಡ್ಡಬರುತ್ತೆ...ಪಾಪಿ ಕಲ್ಲು ಮನಸಿನ ಕರಗದ ಕೊಬ್ಬಿಗೇನೆನ್ನಲಿ...
* ಮನಸು ತೀವ್ರವಾಗಿ ಕಂಗಾಲಾದಾಗ ಗಂಡಸು ಹೆಂಡ
ಇಲ್ಲವೇ ಹೆಣ್ಣಿನ ಸಂಗಕ್ಕೆ ಜಾರುತ್ತಾನೆ - ಹಾಗಂತ ಕೇಳಿದ್ದಿದೆ...
ಮನಸು ಮಗುಚಿ ಬಿದ್ದು ತೀವ್ರವಾಗಿ ರೋಧಿಸುತಿರುವಾಗಲೂ
ಹೆಂಡವ ಒಡಲಿಗಿಳಿಸಿಕೊಳ್ಳಲೂ, ಬಳಿಬಂದವರಿಗೆಲ್ಲ ದಕ್ಕಿಯೂ ಯಾರವಳೂ ಆಗದವಳ ತೋಳ ಸೇರಲೂ ಅಡ್ಡಬರುವ
ಹಾಳು ಜನ್ಮ ಸಂಸ್ಕಾರ...
ನಿದ್ದೆಯನೂ ಕೊಂದು ಕಣ್ಮುಂದೆ ಕುಣಿವ ಬದುಕ ವಾಸ್ತವಗಳು...
ನಾನು ಸಾವನ್ನು ಪ್ರೀತಿಸಲಾರೆ - ಬದುಕು ನನ್ನ
ನಾ ಬಯಸಿದಂತೆ ಸಲಹಲಾರದು...
ಹುಚ್ಚುಚ್ಚು ಉಪದ್ವ್ಯಾಪಿ ಆಲೋಚನೆಗಳು...
ನಾನ್ಯಾಕೆ ಹೀಗಾದೆ...???
* ಬೆಸೆದುಕೊಂಡ ಯಾವ ಭಾವ ಬಾಂಧವ್ಯವನೂ ತುಂಬ
ಕಾಲ ಚಂದಗೆ ಸಲಹಿಕೊಳ್ಳಲಾಗದ ನನ್ನದೇ ಮನದ ವೈಕಲ್ಯಕೆ ನಾನಿಟ್ಟುಕೊಂಡ ಹೆಸರು - ನಾನು ನಿಷ್ಠುರವಾದಿ...
ನೇರಾ ನೇರ ಮಾತಾಡಿದೆನೆಂದು ಬೀಗುತ್ತಿದ್ದರೆ
ನಾನು - ನಗಲೆಂದು ನನ್ನ ಕೈಹಿಡಿದ, ನನ್ನ ಒಂದಷ್ಟು ನಗುವಿಗೆ ಕಾರಣವಾದ ಬಾಂಧವ್ಯವೊಂದು ಒಳಗೇ ನೋಯುತ್ತ
ಸಾಯುತ್ತಿರುತ್ತದೆ...
* ಮೌನವೆಂದರೆ ಬೆಚ್ಚಿಬೀಳುವ ನಾನೇ ಒಂದಿಷ್ಟು
ಮೌನಿಯಾಗಲು ಬಯಸುತ್ತಿದ್ದೇನೆ...
ಮಾತೇ ಎಲ್ಲವೂ ಎಂಬಂತೆ ಬದುಕಿದ ನಾನು ಫಿಲ್ಟರ್
ಇಲ್ಲದ ನಾಲಗೆ ಆಡಿದ ಅದೇ ನನ್ನ ಅತಿಯಾದ, ಶ್ರುತಿಯಿಲ್ಲದ ಮಾತುಗಳಿಂದ ಮನಸುಗಳ ನಡುವಣ ಬಂಧ ಸಾಯುವ
ಭಯವು ಕಾಡುವ ಹೊತ್ತಲ್ಲಿ ನನ್ನದಲ್ಲದ ಮೌನಕ್ಕೆ ಒಮ್ಮೆ ಶರಣು ಹೋಗಬೇಕೆಂದುಕೊಳ್ತೇನೆ...
ಹಸಿವಾದಾಗ ಕರುವಿಗೆ ತಾಯ ನೆನಪಾದಂತೆ ಮಾತು ತನ್ನ
ಹರಿತದಿಂದ ಮನಸ ಕೊಂದದ್ದು ಅರಿವಾದ ಘಳಿಗೇಲಿ ಮೌನದ ನೆನಪಾಗುತ್ತಿದೆ...
ಮನಸಿಗೆ ಬುದ್ಧಿ ಬಂದು ಮಾತು ಮೌನಗಳ ನಡುವೆ ನಾನು
ಮಧುರ ಸಮನ್ವಯ ಸಾಧಿಸಿಕೊಳ್ಳುವುದೆಂದು...
ಎಲ್ಲ ಕಂಗಾಲು ಕಂಗಾಲು...
* ಸುತ್ತ ಪ್ರೀತಿ ಹಂಚುವವರ ಸಂತೆಯೇ ಇದ್ದೂ ಆಗಾಗ
ಅಲ್ಲಲ್ಲಿ ಒಂಟಿ ಭಾವ ಇನ್ನಿಲ್ಲದಂತೆ ಕಾಡುತ್ತೆ...
ಮನಸು ಅಯೋಮಯವಾಗುತ್ತೆ...
ಒಂದು ಕ್ಷಣ ಕಾಡಿದ ಒಂಟಿ ಭಾವವೇ ಇಷ್ಟೊಂದು ಕಂಗೆಡಿಸುವುದಾದರೆ
ಜನ್ಮವಿಡೀ ಒಂಟಿಯೇ ಆಗಿಹೋದವರ ಪಾಡೇನು...???
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
ಈ ಬದುಕಿನ ನೇಯ್ಗೆಯೇ ಹಾಗೆ....
ReplyDeleteವಿಚಾರ ಮಾಡಿ ನೋಡಿ....
ಒಮ್ಮೊಮ್ಮೆ ಇಡೀ ಪ್ರಪಂಚ ಹೊತ್ತಿ ಉರಿಯುತ್ತಿದ್ದರೂ
ನಮಗೇನೂ ಆಗಿರುವುದಿಲ್ಲ... (ಮನಸ್ಸಿನ ಸ್ತಿಥಿಗತಿಗಳಲ್ಲಿ)
ಇನ್ನೆಷ್ಟೋ ಸಲ ಎಲ್ಲ ಸರಿಯಾಗೇ ಇದ್ದರೂ ನಮಗೇನೋ ಆಗಿರುತ್ತದೆ....
ಎಷ್ಟೋ ಸಲ ಸಮಝಾಯಸಿ ಕೊಟ್ಟುಕೊಂಡಷ್ಟು ಸಿಕ್ಕು ಸಿಕ್ಕು
ಎಲ್ಲದಕ್ಕೂ ಕಾಲವೇ ಉತ್ತರವಾಗುತ್ತದೆ....
ಹೀಗಿರುವಾಗ ಮನಸ್ಸು ತಿಳಿಯಾಗಲು ಬಿಡುವುದೇ ಉತ್ತಮವೇನೋ....
ನಾನು ಹೇಳ್ತೇನೆ ಕಾರಣ ... ತೀರಾ ಗಳಿಗೆಗಳಿಗೆಗೂ ನಾವು ಯಾವುದರೆದುರು ಶಿರ ಬಾಗಿಸಿ ಶರಣಾಗುತ್ತೇವೋ ಆ ಆತ್ಮವಿಶ್ಲೇಷಣೆಯೇ ನಿನ್ನ ಈ ಎಲ್ಲ ಮಾತುಗಳ ಹಿಂದಿರುವುದು... ಅದು ಸರಿಯಾ ತಪ್ಪಾ ಬೇಕಾದದ್ದಾ, ಬೇಕಾಗಿಲ್ಲವಾ ನನಗೂ ಗೊತ್ತಿಲ್ಲ ... ಯಾಕಂದರೆ ಈ ಎಲ್ಲ ಉಪದ್ವ್ಯಾಪಿ ಯೋಚನೆಗಳು ನನ್ನನ್ನೂ ಕಾಡ್ತಾವೆ.
ReplyDeleteಪ್ರತಿ ಸಾರೆ ಇಲ್ಲಿಗೆ ಬರಬಾರದೆಂದೇ ಅಂದುಕೊಳ್ಳುತ್ತೇನೆ... ತಡೆಯಲಾರದೆ ಬಂದುಬಿಡುತ್ತೇನೆ.. ಅದೇ ಗುಂಗಿನಲ್ಲಿ ಕಳೆದು ಹೋಗುತ್ತೇನೆ.. ಯಾಕೋ ಶ್ರೀವತ್ಸ ನಿನ್ನ ಗೊಂಚಲೆಲ್ಲಾ ನನ್ನ ಮನದಾಳದಲ್ಲಿದ್ದ ಬಂಧಿಸಿಟ್ಟ ಭಾವಗಳ ಸೆರೆಬಿಡಿಸಿ ಸ್ವತಂತ್ರ ಮಾಡುತ್ತವೆ? ನನ್ನ ಕಷ್ಟ ನನಗೆ, ಮತ್ತೆ ಅವನ್ನು ಬಂಧಿಸಿಡುವುದು ಸುಲಭವಾ!!!
ReplyDelete