Sunday, October 16, 2011

ಗೊಂಚಲು - ಇಪ್ಪತ್ತು + ಎರಡು...






ಅವಳ ಮಡಿಲಲ್ಲಿ ತಲೆಯಿಟ್ಟ ಕನಸಿಗೇ
ಹೃದಯ ಸಂಭ್ರಮಿಸಿತು...
ಇನ್ನು ಅವಳೇ ಸಿಕ್ಕರೆ...???

ಅವಳ ಮುಂಗುರುಳ ಸೋಕಿ ಬಂದ
ಮಂದ ಮಾರುತ ನನ್ನ ಮೈ ಸೋಕಿದಾಗ
ಜೀವ ಝಲ್ಲೆಂದಿತು...
ಇನ್ನು ಅವಳೇ ಸೋಕಿದರೆ...???

ಅವಳ ಚೆಲುವು ಕಣ್ತುಂಬಿ
ಅವಳ ಆತ್ಮಿಕ ನೋಟ ಹೃದಯ ತುಂಬಿ
ಅವಳ ನಗುವಿಗೆ ಇಹವೆ ಮರೆತು
ಅವಳ ಕೆನ್ನೆಯ ಗುಳಿಯಲ್ಲಿ
ನನ್ನ ಮಾತೆಲ್ಲ ಹೂತು ಹೋಗಿ
ಅವಳ ಗೆಳೆತನದಿಂದ ಬದುಕೇ ಸಂಭ್ರಮಿಸಿತು...

ನೆನಪುಗಳ ಮಾತಾಡುವಾಗ ಹೇಳಬೇಕೆಂದುಕೊಂಡೆ
ಒಲವೇ...
ನೆನಪಾಯ್ತು ಅಂದರೆ - ನೆನಪಾದ ಆ ಘಳಿಗೆಯವರೆಗೆ
ಮರೆತಿದ್ದೆ ಅಂತಲ್ಲವಾ ಅರ್ಥ...
ಮರೆವ ಮಾತೇ ಇಲ್ಲದಂತೆ 
ನೀ ನನ್ನ ಮನವ ಆವರಿಸಿರುವಾಗ
ನೆನಪಿಸಿಕೊಳ್ಳೋ ಮಾತೆಲ್ಲಿಯದು...
ಉಸಿರಾಡುವುದನ್ನೂ ನೆನಪಿಸಿಕೊಳ್ಳಬೇಕಾ...!!! ಎಂದು.

ಆದರೆ
ವರ್ಷಗಳ ಕಾಲ ಗೆಳೆತನದ ಬಿಸುಪು ಹೀರಿದ ಮೇಲೂ
ಘಂಟೆಗಳ ಕಾಲ ಮಾತು - ಮೌನಗಳ ಸವಿದ ಮೇಲೂ
ನನ್ನ ಮನಸು ಬಯಸುತಿರುವ
ಅವಳೆದುರು ಆಡಬೇಕಾದ ಸಾವಿರ ಮಾತುಗಳು
ಹಂಚಿಕೊಳ್ಳಬೇಕಿದ್ದ ನೂರೆಂಟು ಕನಸುಗಳು 
ಹೇಳಲಾಗದೇ ಹಾಗೆಯೇ ಉಳಿದು
ಎದೆಯಲ್ಲೇ ಹೆಪ್ಪುಗಟ್ಟಿ
ಏಕಾಂತದ ಮೌನದಲ್ಲಿ ಕಣ್ಣ ಹನಿಯಾಗಿ ಹೊರಬರುತ್ತದೆ...


ನಾನು...
ಅವಳು...
ನಡುವೆ ಚಂದನೆಯ ಮೌನ...
ಮೌನದಲೇ ಜೀವ ತಳೆವುದು ತಾನೆ...!!!
ಒಲವ ಚಲುವಿನ ಬದುಕು - ಮುದ್ದಾದ ಕನಸು - ಮುದ್ದಾಡೋ ಬಯಕೆ...
ಇನ್ನೂ ಏನೇನೋ...