ಬರೀ ಕನಸು...
ಮತ್ತು
ಮುಖವಾಡಗಳ ಬದುಕು...
ಮತ್ತು
ಮುಖವಾಡಗಳ ಬದುಕು...
"ಕನಸುಗಳಿಗೆ ಬಸಿರಾಗದ ಮನಸಿಲ್ಲವೇನೋ.! ಆದರೆ ಎಂದೂ ನನಸಾಗದ
ಕನಸುಗಳಿಗೆ ಬಸಿರಾಗಿ ಆ ಹುಸಿ ಬಸಿರನ್ನು ಬರಿದೇ ಹೊತ್ತು ಅಂಡಲೆಯುವ
ಮನಸಿನ ಬೋಳೇತನಕ್ಕೆ ಏನೆನ್ನಬೇಕು.? ಅರ್ಥವಿಲ್ಲದ ಕನಸುಗಳನ್ನೇ
ಅಲ್ಲವಾ ಹಗಲ್ಗನಸು ಅನ್ನೋದು.
ಓ ಮನಸೇ.....ಬರಿದೇ ಭ್ರಮೆಯ ಸೃಷ್ಠಿಸುವ ಹಗಲ್ಗನಸುಗಳಿಗೆ ಬಸಿರಾಗಿ
ಆ ಬಸಿರು ಹುಸಿಯಾದಾಗ ರೋಧಿಸದಿರು.
ಮನಸೇ...ಪ್ಲೀಸ್...ತಿಳಿಯಾಗು...
ತಿಳಿಯಾಗಿ ನಕ್ಕುಬಿಡು...
ಆ ಮುಗುಳ್ನಗು ನನಸಾಗಬಲ್ಲ ಕನಸುಗಳನ್ನು ಹೊತ್ತು ತರಲಿ...
*****
***
*
"ನಾಳೆಯ ಕನಸುಗಳಲ್ಲಿ ಇಂದಿನ ವರ್ತಮಾನವನ್ನು ನಗ್ತಾ ನೂಕೋದು
ಸುಲಭ."
ಆದ್ರೆ ನಾಳೆಗಳ ಬಗೆಗೆ ಸಿಹಿಗನಸು ಕಾಣುವ ಅವಕಾಶವೇ
ಇಲ್ಲದಾದಾಗ - ಭವಿಷ್ಯದೆಡೆಗಿನ ಭರವಸೆಗಳೇ ಸತ್ತು ಹೋದಾಗ, ನಿನ್ನೆಯ ಕಹಿ
ಘಟನೆಗಳನ್ನೇ ಸವಿ ನೆನಪೆಂದುಕೊಂಡು ಶುಷ್ಕ ನಗು ನಕ್ಕು ಇಂದನ್ನು
ತಳ್ಳಬೇಕಾಗಿ ಬರುವುದು ಬದುಕಿನ ಎಂಥ ಯಾತನಾದಾಯಕ ವಿಪರ್ಯಾಸ
ಅಲ್ವಾ? ಅಳಬೇಕೆನಿಸಿದಾಗಲೂ ನಗೆಯ ಮುಖವಾಡ ಧರಿಸ್ತಾ - ಹೇಗೋ
ಜೀವಿಸಬೇಕೆಂದ್ಕೊಂಡು ಇನ್ಹೇಗೋ ಜೀವಿಸ್ತಾ ಕಾಲ ಕಳೆಯೋದೇನಾ
ಬದುಕೆಂದರೆ.? ಸುತ್ತಲಿನ ಸಮಾಜದೆದುರು ನಾವು ಚೆನ್ನಾಗಿದೀವಿ
(ಸಂತೋಷವಾಗಿ) ಅಂತ ತೋರಿಸ್ಕೊಳ್ಳೋದು ಒಂದಷ್ಟು ಮಟ್ಟಿಗೆ ಅಗತ್ಯ
ಮತ್ತು ಅನಿವಾರ್ಯ ಕೂಡಾ. ಯಾಕಂದ್ರೆ, ಎಷ್ಟೇ ಸ್ವಾವಲಂಬಿ ಮನುಷ್ಯ
ಅಂತಂದ್ಕೊಂಡ್ರೂ ಆತ ಜೀವಿಸಬೇಕಾದದ್ದು - ಬದುಕು ಸವೆಸಬೇಕಾದ್ದು ಇದೇ
ಸಮಾಜದ ನಡುವೆ. ಇದೇ ಸಮಾಜದ ಒಂದು ಅಂಗವಾಗಿ.
ಮನುಷ್ಯಂಗೆ 'ಮುಖವಾಡಗಳು' ಎಷ್ಟೊಂದು ಅಗತ್ಯ ಅಲ್ವಾ...!