Monday, June 12, 2017

ಗೊಂಚಲು - ಎರಡ್ನೂರಾ ಇಪ್ಪತ್ನಾಕು.....

ಒಂಚೂರು ಘನ ಗಂಭೀರ ಮಾತು.....

ನನಗನ್ನಿಸುವಂತೆ ಅಂತಿಮವಾಗಿ ಎಲ್ಲವೂ ನಂಬಿಕೆಯ ಕೈಗೂಸುಗಳು...
ನಂಬಿದವನಿಗೆ, ಅವ ನಂಬಿದ್ದೇ ದೇವರು; ಮತ್ತವ ನಂಬಿದಲ್ಲೇ, ನಂಬಿದ ಆಕಾರದಲ್ಲೇ ಅವತರಿಸ್ತಾನೆ...
ಬದುಕಿನದ್ದಿರಬಹುದು ಅಥವಾ ಬದುಕಿನಾಚೆಯ ಸತ್ಯಾಮಿಥ್ಯೆಗಳಿದ್ದೀತು ಎಲ್ಲವೂ ಅವರವರ ನಂಬಿಕೆಯ ರೂಪಗಳಷ್ಟೇ...
ನಡೆದವನು ನಡೆದದ್ದೇ ಹಾದಿ - ಗಮ್ಯದ ಹಂಗಿಗೆ ಬಿದ್ದರೆ ಹಾದಿ ದೀರ್ಘ ಮತ್ತು ಪಯಣ ನೀರಸ...
ಹಾಗಾಗಿ ಗಮ್ಯವನ್ನ (ಬೇಕಾದರೆ ಭಗವಂತ ಅನ್ನಲೂಬಹುದು) ಸೇರು ಅನ್ನುವುದಕ್ಕಿಂತ ಹುಡುಕು ಅನ್ನುವುದು ಚಂದ ಅನ್ಸುತ್ತೆ...
ಇಷ್ಟಕ್ಕೂ ನಡೆಯುವುದರ ಹೊರತು ಮಾಡುವುದಕ್ಕೇನಿದೆ...
ಹಾದಿಯ ಸಕಲವನೂ ಹೀರಿಕೊಳ್ಳುತ್ತಾ ನಡೆವುದರ ಚೆಲುವು ಗಮ್ಯಕ್ಕಿರುವುದು ಅನುಮಾನ - ಇದ್ದರೂ ಇದೇ ಅಂತಿಮ ಗಮ್ಯ ಅಂತ ಹೇಗೆ ಹೇಳೋದು - ಅಲ್ಲಿಗೆ ನಾ ಸೇರಿದ್ದೇ ನನ್ನ ಗಮ್ಯ ಅಷ್ಟೇ...
#ನನ್ನ_ನಂಬಿಕೆ...
)(!)(

ತನ್ನ ತೆಕ್ಕೆಯ ಹರಹಿನ ಕಿನಾರೆಯ ಬಯಲಲ್ಲಿ ತಾನೆಸೆದ ಕಸಗಳನುಳಿದು ಇನ್ಯಾವ ಹೆಜ್ಜೆ ಗುರುತೂ ಉಳಿಯದಂತೆ ತೊಳೆ ತೊಳೆದು ಮರಳುವ ಮರುಳ ಅಲೆಗಳದದೆಂತ ಸ್ವಾರ್ಥ...!!!
ಇಂತಾಗಿ ಅಲೆಯ ಬೇಹದ್ ಸ್ವಾಧೀನತೆಯನೂ ಸಹನೆಯಲಿ ಭರಿಸುವ ಕಿನಾರೆಯ ಮೌನ ನಗು ಬೆಚ್ಚಿಬೀಳಿಸುತ್ತೆ...!!!
ನೆನಪುಗಳ ಗುರುತುಳಿಯಬಾರದು; ಹಾಗಂತಲೇ ವಿಧ ವಿಧ ಕನಸುಗಳ ಹೆಣೆದದ್ದೇ ಹೆಣೆದದ್ದು...
ಬಣ್ಣ ಬಣ್ಣದ ರೆಕ್ಕೆಗಳು ಕನಸ ಗಾಳಿಪಟಕೆ - ಮರು ಹಗಲಿಗೆ ಕನಸೇ ನೆನಪಾಗಿ ಎದೆಯ ಬದುವಿನ ಸುತ್ತ ಕಸದ ಗುಡ್ಡೆ; ಹಹಹಾ, ಮತ್ತದು ಬಣ್ಣ ಬಣ್ಣದ ಕಸ...
ನಗುವೆಂದರೆ ನೋವಿಲ್ಲದಿರುವುದಲ್ಲ - ನೋವ ಭರಿಸುವ ಅಥವಾ ಮರೆಸುವ ಮನದ ಮನೆಯ ಶಕ್ತಿಮದ್ದು ಅದು...
#ಥೋ_ಸಂಜೆಗಳಲಿ_ಮಳೆಯಾಗಬಾರದು...
)(!)(

ತನಗೆ ದಕ್ಕದ ಪ್ರೀತಿಯನ್ನು ನಮಗೆಲ್ಲ ಬಡಿಸುತ್ತಲೇ ಬದುಕ ಎದುರಿಸಲರಿಯದೆ ಅರ್ಧದಲ್ಲೇ ಎದ್ದು ಹೋಗಿ ಅರಿವು ಒಡೆಯುವ ಮುನ್ನವೇ ಸಾವನ್ನು ಪರಿಚಯಿಸಿದ ದೊಡ್ಡತ್ತೆಯ ದೊಡ್ಡ ಕಂಗಳು, ಬಂಡಿ ಕುಂಕುಮ...
ಕಣ್ಣಲುಳಿದ ಈ ಬದುಕ ಹಾದಿಗೆ ಅಗಾಧ ಪ್ರೀತಿಯ ನೆರಳನಿತ್ತು ವಯಸು ಮಾಗಿ, ದೇಹ ಬಾಗಿ, ಉಸಿರು ಚೆಲ್ಲಿದ ಅಜ್ಜ, ಅಜ್ಜಿ ಹಾಗೂ ಮನೆತನದ ಗುರುಗಳ ಉರಿದ ಚಿತೆ...
ವರ್ಷಾನುಗಟ್ಟಲೆ ಗೆಳೆಯನಂತೆ, ಬಂಟನಂತೆ ತುತ್ತು ಹಂಚಿಕೊಂಡು ಜೊತೆಯಲಿದ್ದು ಕೊನೆಗೆ ಹಿಡಿದ ಹುಚ್ಚಿನ ಕಾರಣಕ್ಕೆ ಕೈಯ್ಯಾರೆ ಕೊಲ್ಲಲ್ಪಟ್ಟ ಪಾಂಡು ಕುನ್ನಿಯ ಕೊನೆಯ ದೈನ್ಯ ನೋಟ...
ಕಾರ್ಯ ಕಾರಣಗಳ ನಿಗೂಢವಾಗಿಟ್ಟು ಕಾಡ ಗಾಳಿಯಲಿ ತೇಲಿದ ಓರಗೆಯ ಅಣ್ಣನ ತಣ್ಣಗೆ ಕೊರೆಯುತಿದ್ದ ಸ್ಫುರದ್ರೂಪಿ ದೇಹ...
ಮೊನ್ನೆ ತಾನೆ ಆ ವೃದ್ಧರ ಗೂಡಿನ ಅಪರಿಚಿತ ಅಜ್ಜಿ ಅಪರಿಚಿತವಾಗುಳಿದೇ ಈಗಿದ್ದು ಈಗಿಲ್ಲದಂತೆ ಕೈಮೇಲೆ ಉಸಿರು ಚೆಲ್ಲಿ ಉಸುರಿದ ಬದುಕ ಕ್ಷಣಿಕತೆ...
ಉಫ್...
ಬದುಕನಾವರಿಸಿ ಮುಂಗೈಯ ಮೂಲೆಗೆ ಸಾವಿನ ಕಮಟನ್ನು ಬಳಿದು ಹಸಿ ಹಸಿಯಾಗುಳಿಸಿ ಹೋದ ಎಷ್ಟೊಂದು ಜೀವಗಳು..
ಸಾವು ಎದೆಯ ಎಡೆಯಲಾಡುವಾಗ ಬೆಳುದಿಂಗಳೂ ಮಂಕು ಮಂಕು...
)(!)(

ಮನುಷ್ಯನನ್ನು ಮನುಷ್ಯನಾಗಿ (?) ಜೀವಂತವಿರಿಸುವುದು ಅವನೊಳಗಣ ಆರದ ಅಗಾಧ ಅಜ್ಞಾತ ಅತೃಪ್ತಿಯೇ ಇದ್ದೀತು...
ಪ್ರೇಮ, ಕಾಮ, ಮೋಹ, ಧರ್ಮ, ಕರ್ಮ, ಸಂಸಾರ, ಸನ್ಯಾಸ, ಮಾತು, ಮೌನ - ಓಹ್!! ಎಷ್ಟೆಲ್ಲ ಚಂದ ಚಂದನೆ ಹೆಸರುಗಳು...
ಎಲ್ಲ ಅತೃಪ್ತಿಯ ಕವಲುಗಳೇ - ದೇಹದ್ದಿಷ್ಟು, ಭಾವದ್ದಿಷ್ಟು...
ಕೊನೆಗೆ ಸಾವಿನಾಚೆಯ ಪಯಣ ಅಥವಾ ಬದುಕು, ಅಷ್ಟೇ ಏಕೆ ಮುಕ್ತಿಯ ಹಂಬಲ ಕೂಡ ಅತೃಪ್ತಿಯ ಬೇರಿನ ಟಿಸಿಲೇ ಅಂತನ್ನಿಸುತ್ತೆ ನಂಗೆ...
#ನಾನೆಂಬೋ_ಅತೃಪ್ತ_ಆತ್ಮ...
)(!)(

ನೇಹವೇ -
ಮುರಿದ ಮೂಲಾಧಾರವನೂ ಅವುಡುಗಚ್ಚಿ ಹುರಿಗೊಳಿಸಿ ಕನಸುಗಳ ನೆಡುತಲಿ, ಸೆರೆಯುಬ್ಬಿ ಹಿಂಡುವೊಲೂ ಸಹಸ್ರಾರ ಬಿರಿವಂತೆ ದನಿಯೆತ್ತಿ ಹೊರಳಿಸುವ ನಿನ್ನ ಅಲೆಅಲೆಯ ನಗೆಯ ಭಾರಕೆ ನನ್ನ ತಳವಿರದ ಹುಸಿ ನೋವುಗಳೆಲ್ಲ ತಮ್ಮ ಕುಬ್ಜತೆಗೆ ನಾಚಿ ಹೂತು ಹೋಗುತ್ತವೆ ಕೆಲ ಘಳಿಗೆ...(!)
#ಸಾವಿಗೂ_ಕಣ್ಕುಕ್ಕುವ_ನಿನ್ನ_ನಗೆಯಲೆಯಲಿ_ತೇಲಲೆಳಸುವ_ಸ್ವಾರ್ಥ_ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Thursday, June 1, 2017

ಗೊಂಚಲು - ಎರಡ್ನೂರಾ ಇಪ್ಪತ್ಮೂರು.....

ನೇಹವೆಂಬೋ ಭಾವಾನುಭಾವ.....

ನೇಹವೇ,
ಅನ್ಸುತ್ತೆ ಆಗೀಗ -
ಕಳೆದೋಗಬೇಕು ನಾನೂ ನನ್ನಲ್ಲಿ - ಕಸರಾಗುವ ಮುನ್ನ ನಿನ್ನ ಕಣ್ಣಲ್ಲಿ...
ಆಗೆಲ್ಲ -
ನಿನ್ನ ನೋವು ನಲಿವುಗಳ ಜಗದ ಕುಹಕದ ಕಣ್ಣಿಂದ ಬಚ್ಚಿಡಲೋಸುಗವೋ ಅಥವಾ ಎಲ್ಲ ಹೂಳಿಡುವುದೇ ಹಗುರತೆಯ ಹಾದಿ ಎಂತಂದೋ ನಿನ್ನ ಸುತ್ತ ನಿನಗಾಗಿ ನೀ ಸೃಷ್ಟಿಸಿಕೊಂಡ ನೀರವತೆಯ ಪರಿಧಿಯನ್ನು ಅತಿಕ್ರಮಿಸಬಾರದು ಎಂತಲೇ ಹೆಣಗುತ್ತೇನೆ...
ಆದರೆ,
ಆ ಜಿದ್ದಿನಲ್ಲಿ ಕಣ್ಣೆದುರೇ ಭಾವ ಬಂಧದ ಬೆಸುಗೆಯ ನಡುವೆ ಇಂಚಿಂಚಾಗಿ ತೆರೆದುಕೊಳ್ಳುವ ಜಿಡ್ಡಿನ ಕಂದಕವ ಕಂಡು ಕರುಳು ಕಟಕಟಿಸುತ್ತದೆ...
ಅಲ್ಲಿಗೆ,
ಮತ್ತೆ ನಾನು ನಿನ್ನ ಮೌನದ ಗೋಡೆಯ ಮೇಲೆ ಲೊಚಗುಡುತ್ತ ತೆವಳುವ ಹಸಿದ ಹಲ್ಲಿಯಾಗುತ್ತೇನೆ - ಮಾತಿನ ಅಸಹಾಯ ಅನುಸಂಧಾನ...
ನಿಜವೆಂದರೆ - ಸುಲಭವಲ್ಲ ಹೆಳವನಿಗೆ ಒಂಟಿ ನಡಿಗೆ...
#ಸಾವೆಂದರೆ_ಮತ್ತೇನಲ್ಲ_ಸದ್ದಿಲ್ಲದೆ_ರದ್ದಿಯಾಗುವುದು...
{\!/!\!/}

ಬರಿ ನೇಹವೇನಾ - ಅಲ್ಲ ಅನ್ಸತ್ತೆ...
ಅಂದ್ರೆ ಪ್ರೇಮವಾ - ಖಂಡಿತಾ ಅಲ್ಲ...
ಮತ್ತೆ...?
ಭಾವದ ಸಲಿಗೆ ದೇಹಕ್ಕೆ ದಾಟಿದರೆ ಮೈಲಿಗೆಯಂತೆ...!!
ಲೋಕ ವಿವರ ಕೇಳತ್ತೆ - ಬಂಧ, ಸಂಬಂಧ ಏನು? ಹೇಗೆ? ಎಷ್ಟು? ಯಾಕೆ? ಎಲ್ಲೀವರೆಗೆ?
ಅರೆರೆ -
ಅರ್ಥವಾಗಲ್ಲ ನಂಗೆ: ಪ್ರಕೃತಿ ಪುರುಷ ಹೃದಯ ಸಂಗಾತಕ್ಕಾವ ಗೋತ್ರ, ಪ್ರವರ...?
ನನ್ನೊಳಗೋ ಅದಿಷ್ಟೇ -
ನೇಹಕೂ ಒಂದು ಹೆಜ್ಜೆ ಮುಂದೆ ಮತ್ತು ಪ್ರೇಮಕಿಂತ ಒಂದು ಮೆಟ್ಟಿಲು ಕೆಳಗೆ ಬೇಲಿಯಿಲ್ಲದ ಬಯಲಲಿ ಆಮೋದದಿ ತುಯ್ಯುವ ಹೆಸರಿರದ ಅಮೂರ್ತ ನಗೆ, ಮುಷ್ಟಿಯೊಳಗಣ ಬಿದಿಗೆ ಬೆಳ್ದಿಂಗಳ ಭಾವ ಜೀವ ಬೆಸುಗೆ...
#ಕಡಲು_ಪೌರ್ಣಿಮೆ_ಸುಖದ_ಕಣ್ಣಂಚ_ಹನಿ_ಮೌನ_ರಾಗ...
{\!/!\!/}

ಒಂದು ಮುರ್ಕಿಯ ಅಂಚಲ್ಲಿ ಅಚಾನಕ್ ಆಗಿ ಅರಿವೆ ಪರಿವೆಯ ಹಂಗಿಲ್ಲದೇ ಒಂದ್ಯಾವುದೋ ಹೊಸ ಆತ್ಮವನ್ನು ಸಂಧಿಸ್ತೀವಿ - ಸಣ್ಣ ಮಂದಹಾಸದಿಂದ ಶುರುವಾಗಿ ನಾಲ್ಕು ಗಾವುದ ಜೊತೆ ಜೊತೆಯ ಸರಸ ವಿರಸದಲ್ಲಿ ಭಾವನಾತ್ಮಕವಾಗಿ ಬಂಧಿಸಿಕೊಳ್ತೀವಿ - ಇನ್ಯಾವುದೋ ಕವಲು, ಸಣ್ಣ ಅಮಲು, 'ನಾನು' 'ನೀನು'ಗಳ ಕಾವಲು ಕಾಯುತ್ತಾ ಪ್ರಜ್ಞಾಪೂರ್ವಕವಾಗಿ ದೂರವನ್ನು ಸಾಧಿಸ್ತೀವಿ...
ಸಂಧಿಸಿ ಬಂಧಿಸಿ ಬಿಡಿಸಿಕೊಂಡ ಬದುಕಿನ ಚಿತ್ರದ ಅಂದವನ್ನ, ಬಂಧವನ್ನ ಸಕಾರಣಕ್ಕೋ, ಅಕಾರಣಕ್ಕೋ ಅಳಿಸಿ ಹಾಕುವ ವಿದಾಯವೆಂದರೆ ಬದುಕಿರುವಂತೆಯೇ ಸಾವನ್ನ ಅನುಭವಿಸುವುದೇ ಅಲ್ಲವಾ...
#ಬಂಧ_ಕನಸು_ಅರ್ಧಬರೆದಸಾಲು...
{\!/!\!/}

ಸಾವಿರ ಬಾರಿ "Love You" ಅಂತಂದು ಹೆಗಲು ತಬ್ಬಿಯೂ ಪ್ರೇಮವಲ್ಲದ, ಪ್ರೇಮವಾಗದ; ಅಷ್ಟೇ ಬಾರಿ "Hate You" ಅಂದು, ಅನ್ನಿಸಿಕೊಂಡು, ಮುನಿದು ಮುಖ ಊದಿಸಿಕೊಂಡೂ ಶಾಶ್ವತ ಮುಖ ತಿರುವಿ ನಡೆಯಲಾಗದ ಮುದ್ದು ಮುದ್ದು ಭಾವಾನುಭಾವ ಆಪ್ತತೆಗೆ ನೇಹವೆಂದಲ್ಲದೇ ಇನ್ನೇನಂತ ಕೂಗಲಿ...
ಚಣ ನಿಲ್ಲುವ ತಾಣವಲ್ಲದೆಯೂ ಅಲೆದಲೆದು ತೂರಿ ಬರುವ ಅಲೆಯ ಮೋದ; ಮರಳಿ ಮರಳಿ ಮೊರೆವ ಮಾತೆಲ್ಲವ ಮೌನದಲೆ ಆದರಿಸೋ ಕಿನಾರೆಯ ಸಂವೇದ - ಯುಗಯುಗಾಂತರದ ದಿವ್ಯ ಮೈತ್ರಿಯಲ್ಲದೇ ಇನ್ನೇನು...💞
#ನೇಹವೆಂಬೋ_ಶರಧಿ...
{\!/!\!/}

ಕಣ್ಣ ಕದಲಿಕೆಯ ಕಾಣು - ಮಾತು ಮಾತಲಿ ಮಾತು ಕಟ್ಟಿದ ಭ್ರಮೆಯ ಗೂಡು ಒಡೆದೀತು...
ನುಡಿಯಾಚೆಯ ನಡೆಯ ಗ್ರಹಿಸು - ಮಾತಾಗದ ಅಸಲೀ ಭಾವದ ಆಳಗಲದ ಅರಿವಾದೀತು...
ಆಪ್ತತೆಯ ಸನ್ನಿಧಿಯಲಿ ಭಯದ ಗೋಡೆ ಒಡೆದು, ಪ್ರೀತಿ ಬಾಗಿಲು ತೆರೆದು, ಭಾವ ಬಯಲಾಗಿ ಬಂಧ ಬೆಳಕಾಗಲಿ - ಅಲ್ಲೆಲ್ಲ ಎದೆ ಒಡೆವ ಮೌನಕಿಂತ ಕಿವಿ ಸುಡುವ ಮಾತೇ ಹಿತ...
#ಮಾತಿನಾಳದಮಾತು_ಮಾತುಮರೆಸಿದಮಾತು_ಎದೆಯಹೂಳಲಿಹೂತುಕೂತಿರೋಮಾತು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)