ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Wednesday, December 14, 2011
Sunday, November 27, 2011
ಗೊಂಚಲು - ಇಪ್ಪತ್ಮೂರು....
ಪ್ರೇಮ - ಕಾಮಗಳ ನಡುವೆ...
ಪ್ರೇಮ
ಮನದ ಮೂಲೆಯಲಿ ಮೊಳಕೆಯೊಡೆದು
ಬಳ್ಳಿಯಾಗಿ ಹಬ್ಬಿ ಹರಡಿ
ಮನವನೆಲ್ಲ ಆವರಿಸಿ
ಮೊಗ್ಗು ಬಿರಿದು ಹೂವಾಗಿ ಅರಳಿ
ಸುತ್ತೆಲ್ಲ ಅಂದ - ಗಂಧವ ಚೆಲ್ಲಿ
ಬದುಕು ಹಿಗ್ಗಿ ಸಂಭ್ರಮಿಸುವಂತೆ ಮಾಡಬಲ್ಲ
ಮಧುರ ಭಾವಗಳ ಗುಚ್ಛ...
ಕಾಮ
ಮನಸು ಮೈಯನೆಲ್ಲ ಕೆರಳಿಸಿ
ಉನ್ಮತ್ತಗೊಳಿಸಿ
ಘರ್ಷಣೆಯಿಂದ ಮಾತ್ರ ಶಮನಗೊಳ್ಳುವ
ಬೆವರಿಳಿಸಿ
ಕೆರಳಿದಷ್ಟೇ ವೇಗವಾಗಿ ಕ್ಷಣಗಳಲಿ ಇಳಿದೂ ಹೋಗುವ
ಉನ್ಮಾದಿತ ಭಾವ...
ಒಂದು ಅಲೌಕಿಕ.
ಇನ್ನೊಂದು ಶುದ್ಧ ಭೌತಿಕ.
ಒಂದು ಅಗೋಚರ ಮನದ 'ಅನುಭಾವ'.
ಇನ್ನೊಂದು ಶುದ್ಧ ಗೋಚರ ದೇಹದ 'ಅನುಭವ'.
ಆದರೂ ವಿಪರ್ಯಾಸ ನೋಡಿ
ಪ್ರೇಮ - ಕಾಮಗಳು ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬಷ್ಟು ಒಂದರೊಡನೊಂದು ಬೆರೆತು ಹೋದ ವಿರುದ್ಧ ಭಾವಗಳು...
ಒಂದಿಲ್ಲದೆ ಇನ್ನೊಂದು ಅಪರಿಪೂರ್ಣ...
ಅಪ್ಪಟ ಮನಸಿನ ಭಾವ ಪ್ರೇಮವನ್ನು ಸಶಕ್ತವಾಗಿ ವ್ಯಕ್ತಪಡಿಸಲು ಇರುವ ಏಕೈಕ ಮಾಧ್ಯಮ ದೇಹವೊಂದೇ...
ಪ್ರೇಮದ ಭವ್ಯತೆ ಇರುವುದು ಅರ್ಪಣಾ ಭಾವದಲ್ಲಿ...
ತನ್ನದೆನ್ನುವುದೆಲ್ಲವನ್ನೂ ತನ್ನವರಿಗರ್ಪಿಸಿದ ಸಂತೃಪ್ತ ಭಾವ ಉತ್ತುಂಗಕ್ಕೇರುವುದು ಮಿಲನಮಹೋತ್ಸವದುತ್ತುಂಗದಲ್ಲಿ...
ಉತ್ಕಟವಾದ ಪ್ರೇಮಭಾವದ ಉತ್ತುಂಗದಲ್ಲಿ ಮನಸು ದೇಹದ ಮಿಲನವ ಬಯಸುತ್ತೆ...
ಭೌತಿಕ ದೇಹಗಳ ಮಿಲನದುತ್ತುಂಗದಲ್ಲಿ ಅಲೌಕಿಕ ತೃಪ್ತ ಭಾವ - ಕ್ಷಣಿಕವೇ ಆದರೂ ಸತ್ಯ ಮತ್ತು ಸಶಕ್ತ...
ಉನ್ಮಾದದ ಬೆವರಿಳಿದ ಮೇಲೂ ತಬ್ಬಿ ಮಲಗುವ ಬಯಕೆ ಪ್ರೇಮಕ್ಕೆ...
ಎದ್ದು ಹೋಗಲು ಬಚ್ಚಲು ಮನೆಯೊಂದು ನೆಪ ಬರೀ ಕಾಮಕ್ಕೆ...
ದಿನಕ್ಕೆ ಹಲವರೊಂದಿಗೆ ಹೊರಳಾಡಿದ ಮೇಲೂ ಅತೃಪ್ತ - ಪ್ರೇಮದ ಬೆಂಬಲವಿಲ್ಲದ ಸೂಳೆಯ ಕಾಮ...
ಹತ್ತಾರು ವರ್ಷ ಒಂದೇ ಗಂಡಿನ ತೆಕ್ಕೆಯಲ್ಲಿದ್ದೂ - ಅದದೇ ಚುಂಬನ,ಆಲಿಂಗನ,ಮಿಲನಗಳಲ್ಲಿ ತೃಪ್ತ - ಗರತಿಯ ಪ್ರೇಮ...
ಒಂದಿನಿತೂ ಪ್ರೇಮವಿಲ್ಲದ ಮಿಲನ ಬರೀ ಶುಷ್ಕ ಸಂಭೋಗ...
ಕಾಮದ ಸವಿಯಿಲ್ಲದ ಪ್ರೇಮ ಬರೀ ನೀರಸ ಸಂಯೋಗ...
ಅದಕೇ ಅಂದಿದ್ದು ಪ್ರೇಮ ಕಾಮಗಳು ಒಂದನ್ನುಳಿದು ಇನ್ನೊಂದು ಪೂರ್ಣವಲ್ಲ ಎಂದು...
ಆದರೂ ಪ್ರೇಮ ಪವಿತ್ರ - ಕಾಮ ಅಪವಿತ್ರ ಎನ್ನುತ್ತೇವೆ...
ಏಕೇನೋ...???
ಕಾರಣ ಗೊತ್ತಿಲ್ಲ...
ಪ್ರಾಕೃತಿಕವಾಗಿ ಸಮಾನವಾದ
ಒಂದನ್ನುಳಿದು ಇನ್ನೊಂದು ತುಂಬ ಕಾಲ ಬದುಕಲಾರದ
ಎರಡು ವಿಚಾರಗಳಲ್ಲಿ ಒಂದು ಪವಿತ್ರ ಇನ್ನೊಂದು ಅಪವಿತ್ರ ಹೇಗಾದೀತು...???
ಅರ್ಥವೇ ಆಗುತ್ತಿಲ್ಲ...
ಗಂಭೀರ ವಿಚಾರಗಳಲ್ಲಿ ಎಂದಿಗೂ ದ್ವಂದ್ವವೇ ಅಂತಿಮವೇನೋ...!!!
Sunday, October 16, 2011
ಗೊಂಚಲು - ಇಪ್ಪತ್ತು + ಎರಡು...
ಅವಳ ಮಡಿಲಲ್ಲಿ ತಲೆಯಿಟ್ಟ ಕನಸಿಗೇ
ಹೃದಯ ಸಂಭ್ರಮಿಸಿತು...
ಇನ್ನು ಅವಳೇ ಸಿಕ್ಕರೆ...???
ಅವಳ ಮುಂಗುರುಳ ಸೋಕಿ ಬಂದ
ಮಂದ ಮಾರುತ ನನ್ನ ಮೈ ಸೋಕಿದಾಗ
ಜೀವ ಝಲ್ಲೆಂದಿತು...
ಇನ್ನು ಅವಳೇ ಸೋಕಿದರೆ...???
ಅವಳ ಚೆಲುವು ಕಣ್ತುಂಬಿ
ಅವಳ ಆತ್ಮಿಕ ನೋಟ ಹೃದಯ ತುಂಬಿ
ಅವಳ ನಗುವಿಗೆ ಇಹವೆ ಮರೆತು
ಅವಳ ಕೆನ್ನೆಯ ಗುಳಿಯಲ್ಲಿ
ನನ್ನ ಮಾತೆಲ್ಲ ಹೂತು ಹೋಗಿ
ಅವಳ ಗೆಳೆತನದಿಂದ ಬದುಕೇ ಸಂಭ್ರಮಿಸಿತು...
ನೆನಪುಗಳ ಮಾತಾಡುವಾಗ ಹೇಳಬೇಕೆಂದುಕೊಂಡೆ
ಒಲವೇ...
ನೆನಪಾಯ್ತು ಅಂದರೆ - ನೆನಪಾದ ಆ ಘಳಿಗೆಯವರೆಗೆ
ಮರೆತಿದ್ದೆ ಅಂತಲ್ಲವಾ ಅರ್ಥ...
ಮರೆವ ಮಾತೇ ಇಲ್ಲದಂತೆ
ನೀ ನನ್ನ ಮನವ ಆವರಿಸಿರುವಾಗ
ನೆನಪಿಸಿಕೊಳ್ಳೋ ಮಾತೆಲ್ಲಿಯದು...
ಉಸಿರಾಡುವುದನ್ನೂ ನೆನಪಿಸಿಕೊಳ್ಳಬೇಕಾ...!!! ಎಂದು.
ಆದರೆ
ವರ್ಷಗಳ ಕಾಲ ಗೆಳೆತನದ ಬಿಸುಪು ಹೀರಿದ ಮೇಲೂ
ಘಂಟೆಗಳ ಕಾಲ ಮಾತು - ಮೌನಗಳ ಸವಿದ ಮೇಲೂ
ನನ್ನ ಮನಸು ಬಯಸುತಿರುವ
ಅವಳೆದುರು ಆಡಬೇಕಾದ ಸಾವಿರ ಮಾತುಗಳು
ಹಂಚಿಕೊಳ್ಳಬೇಕಿದ್ದ ನೂರೆಂಟು ಕನಸುಗಳು
ಹೇಳಲಾಗದೇ ಹಾಗೆಯೇ ಉಳಿದು
ಎದೆಯಲ್ಲೇ ಹೆಪ್ಪುಗಟ್ಟಿ
ಏಕಾಂತದ ಮೌನದಲ್ಲಿ ಕಣ್ಣ ಹನಿಯಾಗಿ ಹೊರಬರುತ್ತದೆ...
ನಾನು...
ಅವಳು...
ನಡುವೆ ಚಂದನೆಯ ಮೌನ...
ಮೌನದಲೇ ಜೀವ ತಳೆವುದು ತಾನೆ...!!!
ಒಲವ ಚಲುವಿನ ಬದುಕು - ಮುದ್ದಾದ ಕನಸು - ಮುದ್ದಾಡೋ ಬಯಕೆ...
ಇನ್ನೂ ಏನೇನೋ...
Tuesday, September 27, 2011
ಗೊಂಚಲು - ಇಪ್ಪತ್ತು ಮೇಲೊಂದು...
"ಹೂವಂತಿದ್ದರೆ ಬದುಕು..."
ಒಂದೇ ದಿನದ ಬಾಳು...
ಮುಂಜಾನೆ ಅರಳಿ - ಮುಸ್ಸಂಜೆಗೆ ಬಾಡಿ - ಮರು ಮುಂಜಾನೆಗೆ ನೆಲ ಸೇರೋದು ಹೂವ ಜೀವನ ಚಕ್ರ...
ಆದರೂ
ಚೆಲ್ಲುವ ಚೆಲುವು - ಬೀರುವ ಸುಗಂಧ - ದುಂಬಿಗೆ ನೀಡಿದ ಒಲವಿನಲ್ಲಿ
ಹೂವ ಬದುಕು ಸಾರ್ಥಕ...
ನೂರು ವರ್ಷದ ಬಾಳು ನಮ್ಮದು...
ಹೇಳಿಕೊಳ್ಳಲು ಇರುವುದು ಬರೀ ಗೋಳು...
ಕೊಟ್ಟಿದ್ದು - ಪಡೆದಿದ್ದರ ಲೆಕ್ಕ ತೆಗೆದರೆ ನೆನಪುಳಿವುದು ಎಷ್ಟು..???
ನಾವೂ ಬದುಕಬಹುದಿದ್ದರೆ...
:::
::
:
ಹೂಗಳಂತೆ...
ಚಿತ್ರಗಳು: ನನ್ನ ಕ್ಯಾಮರಾ ಕಣ್ಣಲ್ಲಿ ಒಂದಷ್ಟು ಹೂಗಳು...
ಮುಂಜಾನೆ ಅರಳಿ - ಮುಸ್ಸಂಜೆಗೆ ಬಾಡಿ - ಮರು ಮುಂಜಾನೆಗೆ ನೆಲ ಸೇರೋದು ಹೂವ ಜೀವನ ಚಕ್ರ...
ಆದರೂ
ಚೆಲ್ಲುವ ಚೆಲುವು - ಬೀರುವ ಸುಗಂಧ - ದುಂಬಿಗೆ ನೀಡಿದ ಒಲವಿನಲ್ಲಿ
ಹೂವ ಬದುಕು ಸಾರ್ಥಕ...
ನೂರು ವರ್ಷದ ಬಾಳು ನಮ್ಮದು...
ಹೇಳಿಕೊಳ್ಳಲು ಇರುವುದು ಬರೀ ಗೋಳು...
ಕೊಟ್ಟಿದ್ದು - ಪಡೆದಿದ್ದರ ಲೆಕ್ಕ ತೆಗೆದರೆ ನೆನಪುಳಿವುದು ಎಷ್ಟು..???
ನಾವೂ ಬದುಕಬಹುದಿದ್ದರೆ...
:::
::
:
ಹೂಗಳಂತೆ...
Sunday, September 11, 2011
ಗೊಂಚಲು - ಇಪ್ಪತ್ತು...
"ನಿನ್ನ ಬೆಳಕು ನೀನಾಗು..."
ಕ್ಷಮಿಸಿ ಅಂಥ ಬದುಕುಗಳೆಡೆಗೆ ಸಣ್ಣದೊಂದು ಹೊಟ್ಟೆಕಿಚ್ಚಿದೆ ನನಗೆ...
ಹಾಗಂತ ನಾನೇ ಬರೆದೆ ಒಮ್ಮೆ...
ಹಿರಿಯರೊಬ್ಬರು ಅಂಥ ಬದುಕುಗಳೆಡೆಗೆ ಹೊಟ್ಟೆಕಿಚ್ಚಿನ ಬದಲು ಮೆಚ್ಚುಗೆ ಬೆಳೆಸಿಕೊಳ್ಳಬೇಕು,ಹಾಗಾದಾಗ ನಾವೂ ಹಾಗೆ ಬದುಕಬಲ್ಲ ಮನಸ್ಥಿತಿ ಹೊಂದಬಹುದೇನೋ ಅಂತ ಪ್ರತಿಕ್ರಿಯಿಸಿದರು...
ಯಾರದೋ ಸುಖಕ್ಕಾಗಿ ಜೀವಿಸುವಷ್ಟು ದೊಡ್ಡದಲ್ಲ ಬದುಕು, ನಮ್ಮ ಸುಖಕ್ಕಾಗಿ ಬದುಕೋಣ, ಅದು ಸುತ್ತಲಿನವರಿಗೂ ಸುಖ ನೀಡೀತು ಎಂದ ಕಿರಿಯ ಮಿತ್ರ...
ಎರಡೂ ಸತ್ಯವೇ...
ಘಟಿಸಿದ ಪ್ರತಿ ಸಣ್ಣ ಸಂಗತಿಯನ್ನೂ - ಎದುರಾಗುವ ಪುಟ್ಟ ಪುಟ್ಟ ಖುಷಿಗಳನ್ನೂ ಮನಸಾರೆ ಅನುಭಾವಿಸಿ ಜೀವಿಸುವುದರಲ್ಲಿ ಬದುಕಿನ ಸೌಂದರ್ಯದ ಮತ್ತು ಸಂಭ್ರಮದ ಶ್ರೀಮಂತಿಕೆ ಅಡಗಿದೆ. ನೆನಪಾಗಿ ಬದಲಾದಾಗ ಕಣ್ಣೀರು ಕೂಡ ನಗುವನ್ನೆ ಮೂಡಿಸುತ್ತದೆ. ಹುಡುಕಿಕೊಳ್ಳಬೇಕಿದೆ ನಾನು ಪುಟ್ಟ ಖುಷಿಯಲ್ಲಿ ಬೆಟ್ಟದಷ್ಟು ಸಂಭ್ರಮ...
"ಆಪೋದೀಪ್ ಆಪ್ ಭವ" = ನಿನ್ನ ಬೆಳಕು ನೀನಾಗು. ಇದು ಬುದ್ಧನಾಡಿದ ಮಾತು.
ಹಾಗಾಗಲು ಸಾಧ್ಯವಿದ್ದರೆ..!!
ಬದುಕೆಷ್ಟು ಚೆಂದವಿರುತ್ತಿತ್ತು...
ಎಲ್ಲವೂ ಖರೆ...
ಆದರೂ...
ಹಾಗೆ ಬದುಕುವುದು ಅಷ್ಟು ಸುಲಭವಾ..?
ಬದುಕು ಎಲ್ಲರಿಗೂ ಹಾಗೆ ಜೀವಿಸಬಲ್ಲ ಅವಕಾಶ ಕಲ್ಪಿಸುತ್ತಾ...???
ಒಂದಷ್ಟು ಬದುಕುಗಳು ಹೇಗಿರುತ್ತೆ ಗೊತ್ತಾ..!!
ಮನದ ಬೀದಿಯಲ್ಲಿ - ಕರಗದ ಮೋಹದ, ಫಲಿಸದ ಪ್ರೇಮದ, ಈಡೇರದ ಆಸೆಗಳ ಯಾತನೆಯ ಮೆರವಣಿಗೆ...
ಮತ್ತೆ ಮತ್ತೆ ನೆನಪಾಗಿ ಮನವ ಹಿಪ್ಪೆ ಮಾಡುವ ಮತ್ತೆ ಬರಲಾರದ ಆ ದಿನಗಳು...
ಬದುಕುವ ಆಸೆಯನ್ನೇ ಕೊಲ್ಲುವಂಥ ಖಟು ವಾಸ್ತವ - ಅದರ ಕುಲುಮೆಯಲ್ಲಿ ಬೆಂದು ಹೋಗುವ ಸ್ವಪ್ನಗಳ ಸೊಣಕಲು ವಾಸನೆ...
ಸತ್ತು ಹುಟ್ಟಿದ ಮಗುವಿನಂಥ ಬದುಕು...
ದುಡ್ಡು ಮಾತ್ರ ಒದಗಿಸಬಲ್ಲ ಸುಖಗಳೆಡೆಗೆ ತೀವ್ರ ಹಂಬಲ...
ಆದರೆ - ದುಡ್ಡನ್ನು ದುಡಿಯಲಾರದ ಅಸಹಾಯಕತೆ...
ದುಡ್ಡು ದುಡಿದವರೆಡೆಗೆ ಮತ್ಸರ...
ಅದರಿಂದ ಮೂಡುವ, ನನ್ನ ಸೋಲಿಗೆ ಇನ್ಯಾರನ್ನೋ ಹೊಣೆ ಮಾಡುವ ಮನಸ್ಥಿತಿ...
ಸದಾ ರೋಗಗ್ರಸ್ಥ ಮನಸು ಮತ್ತು ದೇಹ...
ರೋಗ ತರುವ ನೋವು, ಅಸಹಾಯಕತೆ ಮತ್ತು ಸಾವಿನ ಭಯ - ಆತಂಕ...
ಸಮಾಜ ತೋರುವ ಅನುಕಂಪ...
ಅನುಕಂಪದೆಡೆಗೆ ಆಸೆ ಮತ್ತು ಕೋಪ...
ಅಸ್ವಸ್ಥ ದೇಹದಲ್ಲೂ ಕೆರಳುವ, ಧಗಧಗಿಸುವ ಬೆಂಕಿಯಂಥ ಕಾಮ - ಹೊರ ತೋರಲಾರದೆ, ಒಳಗಿನ ಒತ್ತಡ ತಡೆಯಲೂ ಆಗದಂತೆ ಕಾಡಿ ಒಳಗೇ ಸುಡುತ್ತದೆ...
ರಾತ್ರಿ ರೆಪ್ಪೆ ಮುಚ್ಚಿದ ಕೂಡಲೆ - ಹಗಲು ಕಣ್ಣು ಕಂಡ ಹೆಣ್ಣು ದೇಹಗಳ ಬೆತ್ತಲೆ ಬೆಕ್ಕಿನ ನಡಿಗೆ...
ಹಾಸಿಗೆಯಲ್ಲಿ ಅತೃಪ್ತ ಒಂಟಿ ಹೊರಳಾಟ...
ತೋಳ ತೆವಲಿಗೆ ದಿಂಬಿನೊಂದಿಗೆ ಶುಷ್ಕ ಸರಸ...
ಹಸ್ತ ಮೈಥುನದುತ್ತುಂಗದಲ್ಲಿ ಬೆವರಿಳಿದ ದೇಹಕ್ಕೆ ಶೀಘ್ರ ಸ್ಖಲನದ ಭಯ...
ಮಾರನೆಯ ಹಗಲೆಲ್ಲ ಒಳ್ಳೆಯವನಾಗುವ ಶಪಥ...
ರಾತ್ರಿ ಮತ್ತದೇ ಪುನರಾವರ್ತನೆ...
ಇವೆಲ್ಲ ಬೆರೆತು ನನ್ನ ಬಗೆಗೇ ನನಗೆ ಮೂಡುವ ವಿನಾಕಾರಣದ ಅಪರಾಧೀ ಭಾವ ಮತ್ತು ಅಸಹಾಯಕತೆಯಿಂದ ಮೂಡುವ ನಿಷ್ಪ್ರಯೋಜಕನೆಂಬ ಭಾವ...
ಇದು ಪ್ರತಿನಿತ್ಯದ ಏಳು - ಬೀಳು...
ನನ್ನೊಳಗೇ ಅಶಾಂತಿ, ಸುಖದ ಭಾವದ ಕೊರತೆ...
ಇನ್ನು ಸುತ್ತಲಿನವರಿಗೆ ಸುಖ ಕೊಡುವುದೆಲ್ಲಿಂದ...
ಇಂಥ ಮನಸ್ಥಿತಿಯಿಂದ ಪ್ರಾರಂಭದಲ್ಲಿ ಹೇಳಿದ ಮನಸ್ಥಿತಿಯೆಡೆಗೆ ಪಯಣ ಅಷ್ಟು ಸುಲಭ ಸಾಧ್ಯವಾ...???
ಹಸ್ತ ಮೈಥುನಕ್ಕೂ ಪಾಪಪ್ರಜ್ಞೆಯಿಂದ ಬಳಲುವ ಮನಸ್ಥಿತಿಯಿಂದ ಮೇಲೇರಿ ಸುತ್ತಲಿನ ಸಕಲರ ಸುಖದಲ್ಲೂ ಭಾಗಿ ಎಂಬ ತೃಪ್ತ ಭಾವದ ಬದುಕನ್ನು ಜೀವಿಸಬಲ್ಲ ಬದುಕುಗಳೆಡೆಗೆ ನನಗೆ ನಿಜಕ್ಕೂ ಒಂದು ಸಣ್ಣ ಮಧುರ ಹೊಟ್ಟೆಕಿಚ್ಚಿದೆ...
ಅಂಥ ಬದುಕುಗಳ ಗೆಳೆತನ ದಕ್ಕಿದರೂ ನನ್ನ ಬದುಕು ಸಾರ್ಥಕ...
"ನನ್ನ ಬೆಳಕು ನಾನಾಗುವುದು" ಹೇಗೆ...???
ಅರ್ಥವಾಗುತ್ತಿಲ್ಲ...
Monday, August 22, 2011
ಗೊಂಚಲು - ಹತ್ತೊಂಬತ್ತು...
"ರಂಗ್ ದೇ ಬಸಂತಿ..."
ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸತ್ಯಾಗ್ರಹಿಗಳ ಜತೆಗೆ ಒಂದಿಡೀ ದಿನವನ್ನು ಜೀವಿಸಿದ್ದು ಮನಸಿಗೆ ಹೆಮ್ಮೆಯ ಭಾವವನ್ನು ಮೂಡಿಸಿದ್ದು ಸತ್ಯವೇ ಆದರೂ...
ನನಗೀಗಲೂ ಅನ್ನಿಸುತ್ತಿಲ್ಲ -
ನಾನು ದೇಶ ಸೇವೆ ಅಥವಾ ಸಮಾಜ ಸೇವೆಯಲ್ಲಿ ತೊಡಗಿಕೊಂಡೆನೆಂದು...
ಅನ್ನಿಸಿದ್ದಿಷ್ಟೇ -
ನಾನು - ನನ್ನ ನಾಳೆಗಳ ಒಳಿತಿಗಾಗಿ ನನ್ನ ಸುತ್ತಲಿನ ಪರಿಸರವನ್ನು ಶುದ್ಧವಾಗಿಸಿಕೊಳ್ಳಲೋಸುಗ ನನ್ನ ಇಂದಿನ ಒಂದಷ್ಟು ಘಂಟೆಗಳನ್ನು
ಸದ್ವಿನಿಯೋಗಪಡಿಸಿಕೊಂಡೆನೆಂದು.
ಅಲ್ಲಿ -
ಅಣ್ಣಾ ಹಜಾರೆಯವರಂಥ ಅಷ್ಟೆಲ್ಲ ಹಿರಿಯ ಜೀವಗಳು ನಮ್ಮ ನಾಳೆಗಳಿಗಾಗಿ ಊಟ, ನಿದ್ದೆ ಬಿಟ್ಟು ಕೂತಿದ್ದಾರೆ.
ಬದುಕಿನ ಕೊನೆಯ ಘಟ್ಟದಲ್ಲಿರುವ ಅವರುಗಳ ನಾಳೆಗಳೆಂದರೆ ನಾವುಗಳೇ ತಾನೆ...!!!
ಅವರನ್ನು ಬೆಂಬಲಿಸಿ ಅವರ ಪರಿಶ್ರಮ ವಿಫಲವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಅಲ್ಲವಾ...!!!
ನಂಗೊತ್ತು -
ನಮ್ಮ ನಿತ್ಯದ ಬದುಕಿನ ಜಂಜಡಗಳು ನಮಗೆ ನಿತ್ಯವೂ ಅವರೊಂದಿಗೆ ನೇರವಾಗಿ ಬೆರೆತಿರುವಷ್ಟು ಸಮಯ ಮತ್ತು ಅವಕಾಶ ಕೊಡಲಾರವು ಅಂತ.
ಆದರೂ,
ಎಲ್ಲ ಜಂಜಡಗಳ ನಡುವೆಯೇ ಒಂದಿಷ್ಟು ಸಮಯಾನ ಹೆಕ್ಕಿ ಸತ್ಯಾಗ್ರಹಿಗಳಿರುವಲ್ಲಿ ಹೋಗಿ
ಅವರ ಜಯಘೋಷದೊಂದಿಗೆ ನಮ್ಮದೂ ದನಿ ಸೇರಿಸಿ
ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಬಂದರೆ
ಉಪವಾಸದಿಂದ ಬಳಲಿದ ಆ ಜೀವಗಳಲ್ಲಿ ಒಂದಷ್ಟು ಚೈತನ್ಯ ಮೈಗೂಡೀತು...
ಗೆಲುವು ಸುಲಭಸಾಧ್ಯವಾದೀತು...ಅಲ್ಲವಾ...!!!
ಹೇಗಾದರಾಗಲಿ -
ನಮ್ಮ ನಮ್ಮ ಅವಕಾಶಗಳ ಪರಿಧಿಯಲ್ಲಿ
ನಮ್ಮ ನಮ್ಮ ಅರಿವಿನ ವ್ಯಾಪ್ತಿಯಲ್ಲಿ
ಯಾವುದೇ ರೀತಿಯಲ್ಲಾದರೂ
ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ
ಹೋರಾಟವನ್ನು ಬೆಂಬಲಿಸೋಣ...
ನಾಳೆಗಳನ್ನು ಚೆಂದವಾಗಿಸಿಕೊಳ್ಳವ ಕನಸಿಗೆ ಜೀವತುಂಬೋಣ...
ದಯವಿಟ್ಟು ಸತ್ಯಾಗ್ರಹವನ್ನು ಬೆಂಬಲಿಸಿ...
ವಿಶ್ವಾಸ ವೃದ್ಧಿಸಲಿ...
ಜೈ ಹೋ...
ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸತ್ಯಾಗ್ರಹಿಗಳ ಜತೆಗೆ ಒಂದಿಡೀ ದಿನವನ್ನು ಜೀವಿಸಿದ್ದು ಮನಸಿಗೆ ಹೆಮ್ಮೆಯ ಭಾವವನ್ನು ಮೂಡಿಸಿದ್ದು ಸತ್ಯವೇ ಆದರೂ...
ನನಗೀಗಲೂ ಅನ್ನಿಸುತ್ತಿಲ್ಲ -
ನಾನು ದೇಶ ಸೇವೆ ಅಥವಾ ಸಮಾಜ ಸೇವೆಯಲ್ಲಿ ತೊಡಗಿಕೊಂಡೆನೆಂದು...
ಅನ್ನಿಸಿದ್ದಿಷ್ಟೇ -
ನಾನು - ನನ್ನ ನಾಳೆಗಳ ಒಳಿತಿಗಾಗಿ ನನ್ನ ಸುತ್ತಲಿನ ಪರಿಸರವನ್ನು ಶುದ್ಧವಾಗಿಸಿಕೊಳ್ಳಲೋಸುಗ ನನ್ನ ಇಂದಿನ ಒಂದಷ್ಟು ಘಂಟೆಗಳನ್ನು
ಸದ್ವಿನಿಯೋಗಪಡಿಸಿಕೊಂಡೆನೆಂದು.
ಅಲ್ಲಿ -
ಅಣ್ಣಾ ಹಜಾರೆಯವರಂಥ ಅಷ್ಟೆಲ್ಲ ಹಿರಿಯ ಜೀವಗಳು ನಮ್ಮ ನಾಳೆಗಳಿಗಾಗಿ ಊಟ, ನಿದ್ದೆ ಬಿಟ್ಟು ಕೂತಿದ್ದಾರೆ.
ಬದುಕಿನ ಕೊನೆಯ ಘಟ್ಟದಲ್ಲಿರುವ ಅವರುಗಳ ನಾಳೆಗಳೆಂದರೆ ನಾವುಗಳೇ ತಾನೆ...!!!
ಅವರನ್ನು ಬೆಂಬಲಿಸಿ ಅವರ ಪರಿಶ್ರಮ ವಿಫಲವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಅಲ್ಲವಾ...!!!
ನಂಗೊತ್ತು -
ನಮ್ಮ ನಿತ್ಯದ ಬದುಕಿನ ಜಂಜಡಗಳು ನಮಗೆ ನಿತ್ಯವೂ ಅವರೊಂದಿಗೆ ನೇರವಾಗಿ ಬೆರೆತಿರುವಷ್ಟು ಸಮಯ ಮತ್ತು ಅವಕಾಶ ಕೊಡಲಾರವು ಅಂತ.
ಆದರೂ,
ಎಲ್ಲ ಜಂಜಡಗಳ ನಡುವೆಯೇ ಒಂದಿಷ್ಟು ಸಮಯಾನ ಹೆಕ್ಕಿ ಸತ್ಯಾಗ್ರಹಿಗಳಿರುವಲ್ಲಿ ಹೋಗಿ
ಅವರ ಜಯಘೋಷದೊಂದಿಗೆ ನಮ್ಮದೂ ದನಿ ಸೇರಿಸಿ
ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಬಂದರೆ
ಉಪವಾಸದಿಂದ ಬಳಲಿದ ಆ ಜೀವಗಳಲ್ಲಿ ಒಂದಷ್ಟು ಚೈತನ್ಯ ಮೈಗೂಡೀತು...
ಗೆಲುವು ಸುಲಭಸಾಧ್ಯವಾದೀತು...ಅಲ್ಲವಾ...!!!
ಹೇಗಾದರಾಗಲಿ -
ನಮ್ಮ ನಮ್ಮ ಅವಕಾಶಗಳ ಪರಿಧಿಯಲ್ಲಿ
ನಮ್ಮ ನಮ್ಮ ಅರಿವಿನ ವ್ಯಾಪ್ತಿಯಲ್ಲಿ
ಯಾವುದೇ ರೀತಿಯಲ್ಲಾದರೂ
ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ
ಹೋರಾಟವನ್ನು ಬೆಂಬಲಿಸೋಣ...
ನಾಳೆಗಳನ್ನು ಚೆಂದವಾಗಿಸಿಕೊಳ್ಳವ ಕನಸಿಗೆ ಜೀವತುಂಬೋಣ...
ದಯವಿಟ್ಟು ಸತ್ಯಾಗ್ರಹವನ್ನು ಬೆಂಬಲಿಸಿ...
ವಿಶ್ವಾಸ ವೃದ್ಧಿಸಲಿ...
ಜೈ ಹೋ...
Sunday, August 7, 2011
ಗೊಂಚಲು - ಹದಿನೆಂಟು...
ಗುಡಿಯ ತಲೆ ಮೇಲೆ ಹೊಳೆವ ಚಿನ್ನದ ಗೋಪುರ...
ಮೆಟ್ಟಿಲ ಮೇಲಿನ ಭಕ್ತನ ಕೈಯಲ್ಲಿ ವಿಧ ವಿಧ ಭಿಕ್ಷಾ ಪಾತ್ರೆ...
ಶಿಲೆಯ ಮೂರ್ತಿಗೆ ಕ್ಷೀರಾಭಿಷೇಕ
ಪಂಚ ಭಕ್ಷ - ಫಲ ತಾಂಬೂಲ ನೈವೇಧ್ಯ...
ಹೂವ ಮಾರುವ ಹುಡುಗಿ,
ಹಣ್ಣ ಮಾರುವ ಹುಡುಗರಿಗೆ ದಿನವೂ ಅರೆಹೊಟ್ಟೆ...
ಹಸಿವು ಕಾಡುವ ನಿದ್ದೆ...
ರಸ್ತೆ ನಡುವೆ ಭಕ್ತನಿಗೆ ಭಗವಂತನ ನೆನಪು...
ಉಕ್ಕಿದ ಭಕ್ತಿ, ಅಲ್ಲೇ ಭಗವಂತನಿಗೆ ಉದ್ದಂಡ...
ಗಾಡಿ ಚಕ್ರದಡಿ ಭಕ್ತನಿಗೆ ಮೋಕ್ಷ...
ಪಾಪ ಅಕಾಲ ಅವಸಾನ...
ಮನುಷ್ಯನ ಸೋಲು - ಸೋಲು ತರುವ ನೋವು,ಭಯ,ಅಸಹಾಯಕತೆ - ಅದರಿಂದ ಮೂಡುವ ಮೌಢ್ಯ - ದೇವರ ಶ್ರೀಮಂತಿಕೆ ಮತ್ತು ಜನಪ್ರಿಯತೆಯ ಗುಟ್ಟು...
ಇರುವನೋ - ಇಲ್ಲವೋ ...
ಇದ್ದೂ ಇರದಂತಿರುವನೋ ...
ಇಲ್ಲದೆಯೂ ಇದ್ದಂತೆ ಕಾಡುವನೋ ...
ಇಂಥ ಅನಿಶ್ಚಿತತೆಯೇ ದೇವರ ಅಸ್ತಿತ್ವದ ಬಂಡವಾಳ...
ಮನದ ಮಾತು :
ಏನೇ ಅಂದರೂ ಅವನ ಇರುವಿಕೆಯ ಮೇಲೆ ನಂಬಿಕೆ ಮೂಡುತಿಲ್ಲ...
ಒಂದಾನುವೇಳೆ ಆತನಿರುವುದೇ ಸತ್ಯವಾದರೆ ಅವನ ಕಾರ್ಯವೈಖರಿಯನ್ನು ಮನಸಾರೆ ಧಿಕ್ಕರಿಸುತ್ತೇನೆ...
Monday, August 1, 2011
ಗೊಂಚಲು - ಹದಿನೇಳು...
ಹುಟ್ಟುಹಬ್ಬ -
ನನಗೇ ಅರ್ಥವಾಗದ ನನ್ನ ಭಾವಗಳು :~
ನನಗೇ ಅರ್ಥವಾಗದ ನನ್ನ ಭಾವಗಳು :~
ಸದ್ದಿಲ್ಲದೆ ಮುಗಿದು ಹೋದ ಇಪ್ಪತ್ತು ಮೇಲೊಂಭತ್ತು ವಸಂತಗಳು...
ಆಯುಷ್ಯದ ಅಕೌಂಟಿನಿಂದ ಬರೀ ಸುಮ್ಮನೇ ಖಾಲಿಯಾದ
ಬದುಕಿನ ಅಮೂಲ್ಯವಾಗಬಹುದಿದ್ದ ಕಾಲು ಭಾಗ...
ಬಯಲಿನಲಿ ಬಿಡಿ ಬಿಡಿಯಾಗಿ ಬಿದ್ದಿರುವ
ಅನಾಥ ಶವಗಳಂತೆ ಗೋಚರಿಸುತ್ತೆ...
ಪ್ರತೀ ಹುಟ್ಟು ಹಬ್ಬವೂ
ಜವರಾಯನರಮನೆಯೆಡೆಗೆ
ಜೋರು ನಡಿಗೆಯಂತೆ ಭಾಸವಾಗುತ್ತೆ...
ಭಯ - ಸಣ್ಣ ಕುತೂಹಲ ಕೂಡ
ಬದುಕು ಹೀಗಿದೆ...
ಸಾವು ಹೇಗಿರತ್ತೆ..?
ಪ್ರಸವದ ಕೋಣೆ - ಮಸಣದ ಬಯಲು
ನಡುವೆ
ಬೆತ್ತಲೆ ಕುಳಿತ ಮುದಿ ಸೂಳೆಯಂಥ ಬದುಕು...
ವಿಟರಿಗಾಗಿ ಕಾಯುವುದರಲ್ಲೂ ಸುಖವಿಲ್ಲ
ವಿಟರೊಂದಿಗೆ ಸ್ಖಲಿಸುವುದರಲ್ಲೂ ಸುಖವಿಲ್ಲ...
ವಿಚಿತ್ರ ದೊಂಬರಾಟಗಳ ಭಂಡ ಬಾಳು...
ಜೋಗುಳದ ಹಾಡಿಗೂ - ಚರಮ ಗೀತೆಗೂ
ಉರಿವ ಒಂದೇ ಪ್ರಣತಿ
ಬದುಕ ಇಬ್ಬಂದಿ ಭಾವಗಳ ಪ್ರತಿರೂಪ...
ಹುಟ್ಟಿದ ಆ ದಿನ -
ನೋವು ನುಂಗಿ ಜನ್ಮ ನೀಡಿದ ಅಮ್ಮನ ಕಣ್ಣಲ್ಲಿ
ನಗೆಯ ನಿಟ್ಟುಸಿರು...
ಸುತ್ತ ಜತೆಗೆ ನಗುವ ಸಾವಿರ ಕಣ್ಣ ದೀಪಗಳು...
ಬಯಲಿಗೆ ಬಿದ್ದ ಭಯದಲ್ಲಿ
ನಾನು ಅಳುತಲಿದ್ದೆ...
ಬದುಕ ಬಡಿವಾರಗಳೆಲ್ಲ ತೀರಿ
ಚಿರ ಮೌನಕೆ ಜಾರುವ ಘಳಿಗೆಯಲ್ಲಿ
ನಗುತಲಿರುವ ಆಸೆ ನಂಗೆ...
ಸುತ್ತಲಿರುವ ನಾಲ್ಕು ಕಂಗಳಲ್ಲಿ
ಹನಿಗಳೆರಡು ಜಾರಿದರೆ
ಬದುಕಿದ್ದಕ್ಕೆ ಸಾರ್ಥಕವೆಂಬ ಭಾವ ಮನಕೆ...
ಕಾಡುವ ಸಾವಿರಾರು ಆಸೆಗಳು...
ಎಚ್ಚರದಲ್ಲೂ ಕಾಣುವ ಕನಸುಗಳು...
ಬದುಕುವುದು ಮೂಲ ಆಸೆ...
ಬದುಕಿರುವುದರಿಂದ ಸಾವಿರ ಸುಖಗಳೆಡೆಗಿನ ಆಸೆ...
ಬತ್ತಲಾರದ ಮನಸಿನ ಬಯಕೆ...
ಬೆತ್ತಲಾಗುವ ದೇಹದ ಬಯಕೆ...
ತೀರದ ಮೋಹದ ದಾಹ...
ಕೀರ್ತಿಯ ಮೋಹ
ಹಣದ ದಾಹ...
ಗೆಲುವು-ನಲಿವುಗಳ ತೀವ್ರ ಹಂಬಲ...
ಅಭ್ಯಾಸವಾಗಿ ಹೋದ ಆಲಸ್ಯ...
ಸದಾ ನೆರಳಂತೆ ಜೊತೆ ಬರುವ ಸೋಲುಗಳು...
ಅವು ಮೂಡಿಸುವ ನಿಸ್ಸಹಾಯಕತೆ...
ಸುಮ್ಮನೆ ಮುಗಿದು ಹೋದ ನಿನ್ನೆಗಳು...
ಭರವಸೆಯಿಲ್ಲದ ನಾಳೆಗಳಿಗಾಗಿ
ಕಳೆದು ಹೋಗುವ ಈ ಕ್ಷಣ...
ನಿತ್ಯ ನರಕ...
ಆ ಊರ ಬಿಟ್ಟು ಈ ಊರ ಸೇರಿ ಸಾಧಿಸಿದ್ದೇನು..?
ನೋವ ಗೆದ್ದೆನಾ..?
ಸಾವ ಗೆದ್ದೇನಾ..?
ಸಾವಿರ ಸಾವಿರ ಉತ್ತರವಿಲ್ಲದ ಪ್ರಶ್ನೆಗಳು...
ಸಿಗಲಾರದೆಂದು ಗೊತ್ತಿದ್ದೂ ಉತ್ತರಕ್ಕಾಗಿ
ವ್ಯರ್ಥ ಹುಡುಕಾಟ...
ಶಾಂತಿಯ ಹುಡುಕಾಟ...
ನೆಮ್ಮದಿಯ ಬದುಕಿನ ಹುಡುಕಾಟ...
ಹುಡುಕಿ ಹುಡುಕಿ ಬಂದು ನಿಲ್ಲುವುದು
ಮತ್ತದೇ ಪ್ರಶ್ನೆಗೆ -
ಹೊರಟ ಬಿಂದುವಿನೆಡೆಗೆ...
ಕೊನೆಗೆ
ಎಲ್ಲ ಹುಡುಕಾಟಗಳಿಗೂ ಪೂರ್ಣವಿರಾಮವಿಡುವುದು
ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಿ ನಿಲ್ಲುವುದು
ಸರ್ವಶಕ್ತ
ಸಾವು...???
ಅರ್ಥವಾದದ್ದು ಒಂದೆ...
ಎಲ್ಲೇ ಹೋದರೂ ಯಾತನೆ ಒಂದೇ...
ಅನುಭವಿಸುವ ವಾತಾವರಣ ಬದಲಾಗುವುದಷ್ಟೇ...
ಬದುಕು ಇಷ್ಟೇ...
ಬದುಕುವುದಕ್ಕಾಗಿ ರೂಢಿಸಿಕೊಂಡ ಧನಾತ್ಮಕ ಚಿಂತನೆ
ಇನ್ನೂ ಬದುಕಿದ್ದೇವೆ ಎನ್ನುವ ಖುಷಿಯಿಂದಾಗಿ ಮೂಡಿದ
ಬದುಕಿನೆಡೆಗಿನ ಪ್ರೀತಿ
ಇವಿಷ್ಟೇ ಬದುಕನ್ನು ಜೀವಿಸಲು ಪ್ರೇರಣೆ...
ಕೊನೆ ಮಾತು :
ಹುಟ್ಟು ಹಬ್ಬದಂದು ಶ್ರಾದ್ಧದ ಚಿಂತೆ...
ಬದುಕು -
ದ್ವಂದ್ವಗಳ ಬಿಕರಿಗಿಟ್ಟ ಮಾರುಕಟ್ಟೆ...
ನಗಬೇಕಾದಾಗ ಅಳುತಿದ್ದು
ಅಳಬೇಕಾದಾಗ ನಗಬೇಕೆಂಬ
ಬರಡು ಆಸೆಗಳ ಬೀಳು ಬದುಕು...
ಅವರವರ ಭಾವಕ್ಕೆ ದಕ್ಕಿದ್ದಷ್ಟೇ ಬದುಕು...
ಈ ಲೇಖನ ಬರೆದವನ ಭಾವ ಅಷ್ಟೇ...
Sunday, July 10, 2011
ಗೊಂಚಲು - ಹದಿನಾರು...
ಕಣ್ಣ ಸಲಿಗೆಯಲಿ
ಭಾವಗಳ ಸುಲಿಗೆ...
"ಮನಸು ತನ್ನ ಭಾವನೆಗಳ ತೀವ್ರತೆಯನ್ನು ಮಾತಿನಿಂದಲ್ಲದೇ ಮೌನದಲ್ಲೇ ಹೇಳಬೇಕೆಂದುಕೊಂಡಾಗ ಕಂಗಳ ಆಸರೆ ಬೇಡುತ್ತದೆ. ಹನಿದುಂಬಿದ ಕಂಗಳು ಮನದ ಭಾವ ತೀವ್ರತೆಯ ಸಂಕೇತ. ಹಾಗೆ ಹನಿದುಂಬಿದ ಕಂಗಳು ಆನಂದದ ಅತಿರೇಕಕ್ಕೆ ಸೂಚನೆ.ಅದು ದುಃಖದ ಅತಿರೇಕಕ್ಕೂ ಸೂಚನೆಯೇ...!"
"ಹೃದಯ ತೀವ್ರತರ ಭಾವಗಳ ಗಂಗೋತ್ರಿ.
ಕಣ್ಣು ಧುಮ್ಮಿಕ್ಕುವ ಗಂಗೆಯ ಜಲಪಾತ..."
ಹೃದಯದಲ್ಲಿ ಆವಿರ್ಭವಿಸುವ ಭಾವನೆಗಳನ್ನು ಕರಾರುವಾಕ್ಕಾಗಿ ವ್ಯಕ್ತಪಡಿಸುವ ಸಾಧನ ಕಣ್ಣು ಮಾತ್ರ. ಎದುರಿನ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಆತ್ಮವಿಶ್ವಾಸಕ್ಕೆ ಪ್ರತೀಕವಾದರೆ, ಆ ಕಂಗಳ ಮೂಲಕ ಮನದ ಭಾವಗಳ ಓದಬಲ್ಲವರಾಗುವುದು ಆಪ್ತ ಸಂವಹನ ಸಾಧಿಸಲು ಉತ್ತಮ ಮಾರ್ಗ.
ವ್ಯಕ್ತಿತ್ವದ ಸಾರವೆಲ್ಲ ಕಂಗಳಲ್ಲಿನ ಜೀವಂತಿಕೆಯಲ್ಲಿದೆ.ಅರ್ಥೈಸಿಕೊಳ್ಳುವ ತಾಕತ್ತಿದ್ದರೆ ಕಣ್ಣುಗಳೇ ಎದುರಿನ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಬಿಡಿಸಿಡುತ್ತವೆ. ಹಾಗಾಗೇ ನಂಗೆ ಕಂಗಳಡೆಗೆ ವ್ಯಾಮೋಹ ಮತ್ತು ಸಣ್ಣ ಭಯ ಕೂಡ.
ನಯನ - ಚೆಲುವನ್ನೂ ಮತ್ತು ಒಲವನ್ನೂ ಚೆಲ್ಲುವ ಕಾವ್ಯ ಸ್ಫೂರ್ತಿಯ ಅಂಗ.
ಚೆಲುವೆಯರ ಚೆಲುವ ಕಂಗಳು ಕವಿಯ ಕಾವ್ಯಕೆ ಸದಾ ಸ್ಫೂರ್ತಿ.
ಹಾಗಾಗೇ ಕಂಗಳನು ವರ್ಣಿಸದ ಕಾವ್ಯಗಳಿಲ್ಲ.
ಕಮಲಾಕ್ಷಿ - ಮೀನಾಕ್ಷಿ - ನಳಿನಾಕ್ಷಿಯರು ತಮ್ಮ ಕಣ್ಗಳಲ್ಲೇ ನಗುವ - ನಕ್ಕು ಸೆಳೆಯುವ, ಕಂಣ್ಣಂಚಲ್ಲೇ ಗದರುವ, ಕಡೆಗಣ್ಣ ಕುಡಿನೋಟಗಳಲ್ಲೇ ಕಾಡುವ ಆ ಪರಿಯನ್ನು ಮೆಚ್ಚದಿರಲಾದೀತೇ...!
ತನ್ನವಳ ಕಣ್ಣಲ್ಲಿ ತನ್ನ ಚಿತ್ರವ ಕಾಣ ಬಯಸದ ಪ್ರೇಮಿ ಇಲ್ಲವೇನೋ...
ಮನದಲ್ಲಿ ಪ್ರೇಮ ಪಡಿಮೂಡುವುದೇ ಕಣ್ಣ ರಾಯಭಾರಿಕೆಯಲ್ಲಿ...(ಹಾಗಾದ್ರೆ ಅಂಧರ ಪ್ರೀತಿಗೆ ಏನಂತೀಯಾ ಅಂತ ಕೇಳಬೇಡಿ. ಅವರ ಪ್ರೀತಿ ಸಂಪೂರ್ಣ ಅಲೌಕಿಕ.)
ಪ್ರೇಮ - ಕಣ್ಣಲ್ಲಿ ಹುಟ್ಟಿ, ಮನದಲ್ಲಿ ಹೆಪ್ಪುಗಟ್ಟಿ, ಕಣ್ಣ ಹನಿಯಾಗಿ ಹೊರಬರುವ ತೀವ್ರತರವಾದ ಅಲೌಕಿಕ ಭಾವ.
ಕಣ್ಣಿಗೂ ಪ್ರೇಮಕೂ ಸಂಬಂಧ ಅವಿನಾಭಾವ...
ಮಗುವ ಕಂಗಳ ಮುಗ್ಧತೆ
ತಾಯ ಕಣ್ಣಲ್ಲಿನ ಮಮತೆ
ಗೆಳತಿಯ ಪ್ರೀತಿಯ ನೋಟ
ಹಿರಿಯರ ಹಾರೈಕೆಗಳ ದೃಷ್ಟಿ
ಅಕ್ಕಂದಿರು,ಅಣ್ಣಂದಿರು ಕಣ್ಣಲ್ಲೇ ತುಂಬುವ ಭರವಸೆ
ತಂಗಿಯ ತುಂಟ ಕೀಟಲೆಯ ನೋಟ
ಗೆಳೆಯನೊಬ್ಬ ನೋಟದಲ್ಲೇ ತುಂಬುವ ಧೈರ್ಯ
ಇವೆಲ್ಲ ಕಣ್ಣ ರಾಯಭಾರಿಕೆಯಲ್ಲಿ ನಮ್ಮ ಬದುಕನ್ನು ಶ್ರೀಮಂತಗೊಳಿಸುವ,ನಮ್ಮನ್ನು ಮುನ್ನಡೆಸುವ ಮಧುರ ಭಾವಗಳು...
ಭಾವಗಳ ಬಡಿದೆಬ್ಬಿಸುವ ಕಂಗಳಿಗೊಂದು
ಪ್ರೀತಿಯ ಪಪ್ಪಿ...
Sunday, June 19, 2011
ಗೊಂಚಲು - ಹದಿನೈದು...
ನಗೆಯ ಸಂತೆಯ ನಡುವೆ ನಿಂತು
ಅಳುವ ಮಾರುವ ಬಯಕೆ
ಯಾಕೆ ಈ ಮನಕೆ...
ಉಸಿರ ವೇಗಕೆ ಸ್ಪಂದಿಸುವ
ಎದೆಗೂಡ ಸಣ್ಣ ನೋವ ಕದಲಿಕೆಯಲ್ಲೂ
ನನ್ನ ಕನಸುಗಳ ಗರ್ಭಪಾತ...
ಒಂದು ಘಳಿಗೆಯ ಹೃದಯ ಸ್ತಂಭನ
ಬದುಕಿನದೇ ಅಕಾಲ ಅವಸಾನ...
ಓ ಹೃದಯವೇ
ನೀ
ಮಿಡಿತವ ನಿಲ್ಲಿಸದಿರು.....
ಸೋಲುಗಳ ಸುಳಿಯಿಂದ ಎದ್ದು
ಗೆಲುವಿನ ತೆಪ್ಪವೇರಿ ತೇಲುವ ಆಸೆ
ಇನ್ನೂ ಉಸಿರಾಡುತಿದೆ...
ಅವಳ ಮಡಿಲಲ್ಲಿ ಮಲಗಿ
ಗೆಲುವಿನ ತೆಪ್ಪವೇರಿ ತೇಲುವ ಆಸೆ
ಇನ್ನೂ ಉಸಿರಾಡುತಿದೆ...
ಅವಳ ಮಡಿಲಲ್ಲಿ ಮಲಗಿ
ನನ್ನ ನಾ ಕಳೆದುಕೊಳ್ಳುವ ಬಯಕೆ
ಇನ್ನೂ ಹಾಗೇ ಉಳಿದುಕೊಂಡಿದೆ...
ಒಲವಿನೊರತೆಯ
ಹನಿಗಳ ಹೀರಿ
ಬಾಳ ಚಪ್ಪರದ
ತುಂಬೆಲ್ಲ ಹಬ್ಬಿ ನಿಂತ
ನಗೆ ಬಳ್ಳಿಯ
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
ಘಮಘಮಿಸುವ
ಹೂವಾಗಿ ಅರಳುವ ಆಸೆ
ಇನ್ನೂ ಬಾಕಿ ಇದೆ...
.....Pleas give me some time.....
Sunday, May 29, 2011
ಗೊಂಚಲು - ಹದಿನಾಕು...
ಬರೀ ಕನಸು...
ಮತ್ತು
ಮುಖವಾಡಗಳ ಬದುಕು...
ಮತ್ತು
ಮುಖವಾಡಗಳ ಬದುಕು...
"ಕನಸುಗಳಿಗೆ ಬಸಿರಾಗದ ಮನಸಿಲ್ಲವೇನೋ.! ಆದರೆ ಎಂದೂ ನನಸಾಗದ
ಕನಸುಗಳಿಗೆ ಬಸಿರಾಗಿ ಆ ಹುಸಿ ಬಸಿರನ್ನು ಬರಿದೇ ಹೊತ್ತು ಅಂಡಲೆಯುವ
ಮನಸಿನ ಬೋಳೇತನಕ್ಕೆ ಏನೆನ್ನಬೇಕು.? ಅರ್ಥವಿಲ್ಲದ ಕನಸುಗಳನ್ನೇ
ಅಲ್ಲವಾ ಹಗಲ್ಗನಸು ಅನ್ನೋದು.
ಓ ಮನಸೇ.....ಬರಿದೇ ಭ್ರಮೆಯ ಸೃಷ್ಠಿಸುವ ಹಗಲ್ಗನಸುಗಳಿಗೆ ಬಸಿರಾಗಿ
ಆ ಬಸಿರು ಹುಸಿಯಾದಾಗ ರೋಧಿಸದಿರು.
ಮನಸೇ...ಪ್ಲೀಸ್...ತಿಳಿಯಾಗು...
ತಿಳಿಯಾಗಿ ನಕ್ಕುಬಿಡು...
ಆ ಮುಗುಳ್ನಗು ನನಸಾಗಬಲ್ಲ ಕನಸುಗಳನ್ನು ಹೊತ್ತು ತರಲಿ...
*****
***
*
"ನಾಳೆಯ ಕನಸುಗಳಲ್ಲಿ ಇಂದಿನ ವರ್ತಮಾನವನ್ನು ನಗ್ತಾ ನೂಕೋದು
ಸುಲಭ."
ಆದ್ರೆ ನಾಳೆಗಳ ಬಗೆಗೆ ಸಿಹಿಗನಸು ಕಾಣುವ ಅವಕಾಶವೇ
ಇಲ್ಲದಾದಾಗ - ಭವಿಷ್ಯದೆಡೆಗಿನ ಭರವಸೆಗಳೇ ಸತ್ತು ಹೋದಾಗ, ನಿನ್ನೆಯ ಕಹಿ
ಘಟನೆಗಳನ್ನೇ ಸವಿ ನೆನಪೆಂದುಕೊಂಡು ಶುಷ್ಕ ನಗು ನಕ್ಕು ಇಂದನ್ನು
ತಳ್ಳಬೇಕಾಗಿ ಬರುವುದು ಬದುಕಿನ ಎಂಥ ಯಾತನಾದಾಯಕ ವಿಪರ್ಯಾಸ
ಅಲ್ವಾ? ಅಳಬೇಕೆನಿಸಿದಾಗಲೂ ನಗೆಯ ಮುಖವಾಡ ಧರಿಸ್ತಾ - ಹೇಗೋ
ಜೀವಿಸಬೇಕೆಂದ್ಕೊಂಡು ಇನ್ಹೇಗೋ ಜೀವಿಸ್ತಾ ಕಾಲ ಕಳೆಯೋದೇನಾ
ಬದುಕೆಂದರೆ.? ಸುತ್ತಲಿನ ಸಮಾಜದೆದುರು ನಾವು ಚೆನ್ನಾಗಿದೀವಿ
(ಸಂತೋಷವಾಗಿ) ಅಂತ ತೋರಿಸ್ಕೊಳ್ಳೋದು ಒಂದಷ್ಟು ಮಟ್ಟಿಗೆ ಅಗತ್ಯ
ಮತ್ತು ಅನಿವಾರ್ಯ ಕೂಡಾ. ಯಾಕಂದ್ರೆ, ಎಷ್ಟೇ ಸ್ವಾವಲಂಬಿ ಮನುಷ್ಯ
ಅಂತಂದ್ಕೊಂಡ್ರೂ ಆತ ಜೀವಿಸಬೇಕಾದದ್ದು - ಬದುಕು ಸವೆಸಬೇಕಾದ್ದು ಇದೇ
ಸಮಾಜದ ನಡುವೆ. ಇದೇ ಸಮಾಜದ ಒಂದು ಅಂಗವಾಗಿ.
ಮನುಷ್ಯಂಗೆ 'ಮುಖವಾಡಗಳು' ಎಷ್ಟೊಂದು ಅಗತ್ಯ ಅಲ್ವಾ...!
Subscribe to:
Posts (Atom)