Monday, August 1, 2011

ಗೊಂಚಲು - ಹದಿನೇಳು...

ಹುಟ್ಟುಹಬ್ಬ -
ನನಗೇ ಅರ್ಥವಾಗದ ನನ್ನ ಭಾವಗಳು :~


ಸದ್ದಿಲ್ಲದೆ ಮುಗಿದು ಹೋದ ಇಪ್ಪತ್ತು ಮೇಲೊಂಭತ್ತು ವಸಂತಗಳು...
ಆಯುಷ್ಯದ ಅಕೌಂಟಿನಿಂದ ಬರೀ ಸುಮ್ಮನೇ ಖಾಲಿಯಾದ
ಬದುಕಿನ ಅಮೂಲ್ಯವಾಗಬಹುದಿದ್ದ ಕಾಲು ಭಾಗ...
ಬಯಲಿನಲಿ ಬಿಡಿ ಬಿಡಿಯಾಗಿ ಬಿದ್ದಿರುವ 
ಅನಾಥ ಶವಗಳಂತೆ ಗೋಚರಿಸುತ್ತೆ...


ಪ್ರತೀ ಹುಟ್ಟು ಹಬ್ಬವೂ
ಜವರಾಯನರಮನೆಯೆಡೆಗೆ
ಜೋರು ನಡಿಗೆಯಂತೆ ಭಾಸವಾಗುತ್ತೆ...
ಭಯ - ಸಣ್ಣ ಕುತೂಹಲ ಕೂಡ
ಬದುಕು ಹೀಗಿದೆ...
ಸಾವು ಹೇಗಿರತ್ತೆ..?


ಪ್ರಸವದ ಕೋಣೆ - ಮಸಣದ ಬಯಲು
ನಡುವೆ 
ಬೆತ್ತಲೆ ಕುಳಿತ ಮುದಿ ಸೂಳೆಯಂಥ ಬದುಕು...
ವಿಟರಿಗಾಗಿ ಕಾಯುವುದರಲ್ಲೂ ಸುಖವಿಲ್ಲ
ವಿಟರೊಂದಿಗೆ ಸ್ಖಲಿಸುವುದರಲ್ಲೂ ಸುಖವಿಲ್ಲ...
ವಿಚಿತ್ರ ದೊಂಬರಾಟಗಳ ಭಂಡ ಬಾಳು...


ಜೋಗುಳದ ಹಾಡಿಗೂ - ಚರಮ ಗೀತೆಗೂ
ಉರಿವ ಒಂದೇ ಪ್ರಣತಿ
ಬದುಕ ಇಬ್ಬಂದಿ ಭಾವಗಳ ಪ್ರತಿರೂಪ...


ಹುಟ್ಟಿದ ಆ ದಿನ -
ನೋವು ನುಂಗಿ ಜನ್ಮ ನೀಡಿದ ಅಮ್ಮನ ಕಣ್ಣಲ್ಲಿ
ನಗೆಯ ನಿಟ್ಟುಸಿರು...
ಸುತ್ತ ಜತೆಗೆ ನಗುವ ಸಾವಿರ ಕಣ್ಣ ದೀಪಗಳು...
ಬಯಲಿಗೆ ಬಿದ್ದ ಭಯದಲ್ಲಿ 
ನಾನು ಅಳುತಲಿದ್ದೆ...
ಬದುಕ ಬಡಿವಾರಗಳೆಲ್ಲ ತೀರಿ
ಚಿರ ಮೌನಕೆ ಜಾರುವ ಘಳಿಗೆಯಲ್ಲಿ 
ನಗುತಲಿರುವ ಆಸೆ ನಂಗೆ...
ಸುತ್ತಲಿರುವ ನಾಲ್ಕು ಕಂಗಳಲ್ಲಿ
ಹನಿಗಳೆರಡು ಜಾರಿದರೆ
ಬದುಕಿದ್ದಕ್ಕೆ ಸಾರ್ಥಕವೆಂಬ ಭಾವ ಮನಕೆ...


ಕಾಡುವ ಸಾವಿರಾರು ಆಸೆಗಳು...
ಎಚ್ಚರದಲ್ಲೂ ಕಾಣುವ ಕನಸುಗಳು...
ಬದುಕುವುದು ಮೂಲ ಆಸೆ...
ಬದುಕಿರುವುದರಿಂದ ಸಾವಿರ ಸುಖಗಳೆಡೆಗಿನ ಆಸೆ...
ಬತ್ತಲಾರದ ಮನಸಿನ ಬಯಕೆ...
ಬೆತ್ತಲಾಗುವ ದೇಹದ ಬಯಕೆ...
ತೀರದ ಮೋಹದ ದಾಹ...
ಕೀರ್ತಿಯ ಮೋಹ
ಹಣದ ದಾಹ...
ಗೆಲುವು-ನಲಿವುಗಳ ತೀವ್ರ ಹಂಬಲ...
ಅಭ್ಯಾಸವಾಗಿ ಹೋದ ಆಲಸ್ಯ...
ಸದಾ ನೆರಳಂತೆ ಜೊತೆ ಬರುವ ಸೋಲುಗಳು...
ಅವು ಮೂಡಿಸುವ ನಿಸ್ಸಹಾಯಕತೆ...
ಸುಮ್ಮನೆ ಮುಗಿದು ಹೋದ ನಿನ್ನೆಗಳು...
ಭರವಸೆಯಿಲ್ಲದ ನಾಳೆಗಳಿಗಾಗಿ
ಕಳೆದು ಹೋಗುವ ಈ ಕ್ಷಣ...
ನಿತ್ಯ ನರಕ...


ಆ ಊರ ಬಿಟ್ಟು ಈ ಊರ ಸೇರಿ ಸಾಧಿಸಿದ್ದೇನು..?
ನೋವ ಗೆದ್ದೆನಾ..?
ಸಾವ ಗೆದ್ದೇನಾ..?
ಸಾವಿರ ಸಾವಿರ ಉತ್ತರವಿಲ್ಲದ ಪ್ರಶ್ನೆಗಳು...
ಸಿಗಲಾರದೆಂದು ಗೊತ್ತಿದ್ದೂ ಉತ್ತರಕ್ಕಾಗಿ 
ವ್ಯರ್ಥ ಹುಡುಕಾಟ...
ಶಾಂತಿಯ ಹುಡುಕಾಟ...
ನೆಮ್ಮದಿಯ ಬದುಕಿನ ಹುಡುಕಾಟ...
ಹುಡುಕಿ ಹುಡುಕಿ ಬಂದು ನಿಲ್ಲುವುದು
ಮತ್ತದೇ ಪ್ರಶ್ನೆಗೆ -
ಹೊರಟ ಬಿಂದುವಿನೆಡೆಗೆ...
ಕೊನೆಗೆ 
ಎಲ್ಲ ಹುಡುಕಾಟಗಳಿಗೂ ಪೂರ್ಣವಿರಾಮವಿಡುವುದು
ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಿ ನಿಲ್ಲುವುದು
ಸರ್ವಶಕ್ತ  
ಸಾವು...???


ಅರ್ಥವಾದದ್ದು ಒಂದೆ...
ಎಲ್ಲೇ ಹೋದರೂ ಯಾತನೆ ಒಂದೇ...
ಅನುಭವಿಸುವ ವಾತಾವರಣ ಬದಲಾಗುವುದಷ್ಟೇ...
ಬದುಕು ಇಷ್ಟೇ...
ಬದುಕುವುದಕ್ಕಾಗಿ ರೂಢಿಸಿಕೊಂಡ ಧನಾತ್ಮಕ ಚಿಂತನೆ
ಇನ್ನೂ ಬದುಕಿದ್ದೇವೆ ಎನ್ನುವ ಖುಷಿಯಿಂದಾಗಿ ಮೂಡಿದ
ಬದುಕಿನೆಡೆಗಿನ ಪ್ರೀತಿ
ಇವಿಷ್ಟೇ ಬದುಕನ್ನು ಜೀವಿಸಲು ಪ್ರೇರಣೆ...


ಕೊನೆ ಮಾತು :
ಹುಟ್ಟು ಹಬ್ಬದಂದು ಶ್ರಾದ್ಧದ ಚಿಂತೆ...
ಬದುಕು -
ದ್ವಂದ್ವಗಳ ಬಿಕರಿಗಿಟ್ಟ ಮಾರುಕಟ್ಟೆ...

ನಗಬೇಕಾದಾಗ ಅಳುತಿದ್ದು
ಅಳಬೇಕಾದಾಗ ನಗಬೇಕೆಂಬ
ಬರಡು ಆಸೆಗಳ ಬೀಳು ಬದುಕು...

ಅವರವರ ಭಾವಕ್ಕೆ ದಕ್ಕಿದ್ದಷ್ಟೇ ಬದುಕು...
ಈ ಲೇಖನ ಬರೆದವನ ಭಾವ ಅಷ್ಟೇ...







2 comments:

  1. HAPPY BIRTHDAY MAN.......

    ಹುಟ್ಟು ಹಬ್ಬದ ದಿನ ಶ್ರಾದ್ಧದ ಚಿಂತೆ...
    ಇಂತಹ ವಿಪರ್ಯಾಸಗಳು ಬೇಕೇ?.....
    ಅವಶ್ಯಕತೆ ಇಲ್ಲವೇನೋ....
    ಸಾವು ಎಂದರೆ ಭಯಾನಾ....? ಖಂಡಿತಾ ಅಲ್ಲಾ......
    ಸಾಯುತ್ತೀನೆಂಬ ಕಲ್ಪನೆ ಭಯವಷ್ಟೇ.......
    ಯಾವಾಗಲೂ ಕಲ್ಪನೆಗಳೇ ಭಯಾನಕ.....
    ಭೂತವೆಂಬ ಕಲ್ಪನೆ ಅದರ ಬಗ್ಗೆ ಭಯ ತರಿಸುತ್ತೆ.....
    ಪ್ರಳಯವೆಂಬ ಕಲ್ಪನೆ ಅದರ ಬಗ್ಗೆ ಭಯ ತರಿಸುತ್ತೆ....
    ಹಾಗೇ ಸಾವೂ ಕೂಡಾ.......
    ಅನವಶ್ಯಕ ಕಲ್ಪನೆಗಳು ಭಯ ಹುಟ್ಟಿಸುತ್ವೆ......
    ಮತ್ತೊಂದೆಂದ್ರೆ..... ನಮ್ ಮೇಲೆ depend ಆಗಿ ಇನ್ನೊಂದ್ ಜೀವಇದೆ...ಅಂತಾದ್ರೆ ಸಾವಿನ ಬಗ್ಗೆ ಭಯ ಹುಟ್ಟುತ್ತೆ....

    ಇದು ಬರೆದವನ ಭಾವ.... ನಿಜ....
    ಆದರೆ ಬರೆದದ್ದಷ್ಟೇ ಅವನ ಭಾವವಲ್ಲಾ....
    ಅಂದುಕೊಂಡಿದ್ದೆಲ್ಲಾ ಸತ್ಯವೂ ಅಲ್ಲಾ......
    ಬರವಣಿಗೆಗೆ ಕೈ ಮುಗಿದದ್ದಾಯ್ತು.....
    ತುಂಬಾ ಚನ್ನಾಗಿದೆ.
    once again happy birthday.....
    ಬೆಳಗುತಿರಲಿ ಜ್ಯೋತಿ......

    ( comment ಹಾಕೂದ್ ಕಷ್ಟ ನಿನ್ ಬರಹಕ್ಕೆ....)

    ReplyDelete
  2. ಶ್ರೀ... ಹುಟ್ಟು ಹಬ್ಬದಂದು ಸಂತಸದ ಹಾಡು ಹುಟ್ಟಿ ಬರಲಿ

    ReplyDelete