Monday, August 22, 2011

ಗೊಂಚಲು - ಹತ್ತೊಂಬತ್ತು...

"ರಂಗ್ ದೇ ಬಸಂತಿ..."
ಸ್ವಾತಂತ್ರ್ಯ ಉದ್ಯಾನವನದಲ್ಲಿ ಎರಡನೇ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಸತ್ಯಾಗ್ರಹಿಗಳ ಜತೆಗೆ ಒಂದಿಡೀ ದಿನವನ್ನು ಜೀವಿಸಿದ್ದು ಮನಸಿಗೆ ಹೆಮ್ಮೆಯ ಭಾವವನ್ನು ಮೂಡಿಸಿದ್ದು ಸತ್ಯವೇ ಆದರೂ...
ನನಗೀಗಲೂ ಅನ್ನಿಸುತ್ತಿಲ್ಲ -
ನಾನು ದೇಶ ಸೇವೆ ಅಥವಾ ಸಮಾಜ ಸೇವೆಯಲ್ಲಿ ತೊಡಗಿಕೊಂಡೆನೆಂದು...


ಅನ್ನಿಸಿದ್ದಿಷ್ಟೇ -
ನಾನು - ನನ್ನ ನಾಳೆಗಳ ಒಳಿತಿಗಾಗಿ ನನ್ನ ಸುತ್ತಲಿನ ಪರಿಸರವನ್ನು ಶುದ್ಧವಾಗಿಸಿಕೊಳ್ಳಲೋಸುಗ ನನ್ನ ಇಂದಿನ ಒಂದಷ್ಟು ಘಂಟೆಗಳನ್ನು
ಸದ್ವಿನಿಯೋಗಪಡಿಸಿಕೊಂಡೆನೆಂದು.
ಅಲ್ಲಿ - 
ಅಣ್ಣಾ ಹಜಾರೆಯವರಂಥ ಅಷ್ಟೆಲ್ಲ ಹಿರಿಯ ಜೀವಗಳು ನಮ್ಮ ನಾಳೆಗಳಿಗಾಗಿ ಊಟ, ನಿದ್ದೆ ಬಿಟ್ಟು ಕೂತಿದ್ದಾರೆ.
ಬದುಕಿನ ಕೊನೆಯ ಘಟ್ಟದಲ್ಲಿರುವ ಅವರುಗಳ ನಾಳೆಗಳೆಂದರೆ ನಾವುಗಳೇ ತಾನೆ...!!!
ಅವರನ್ನು ಬೆಂಬಲಿಸಿ ಅವರ ಪರಿಶ್ರಮ ವಿಫಲವಾಗದಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಹೊಣೆ ಅಲ್ಲವಾ...!!!


ನಂಗೊತ್ತು - 
ನಮ್ಮ ನಿತ್ಯದ ಬದುಕಿನ ಜಂಜಡಗಳು ನಮಗೆ ನಿತ್ಯವೂ ಅವರೊಂದಿಗೆ ನೇರವಾಗಿ ಬೆರೆತಿರುವಷ್ಟು ಸಮಯ ಮತ್ತು ಅವಕಾಶ ಕೊಡಲಾರವು ಅಂತ.
ಆದರೂ,
ಎಲ್ಲ ಜಂಜಡಗಳ ನಡುವೆಯೇ ಒಂದಿಷ್ಟು ಸಮಯಾನ ಹೆಕ್ಕಿ ಸತ್ಯಾಗ್ರಹಿಗಳಿರುವಲ್ಲಿ ಹೋಗಿ 
ಅವರ ಜಯಘೋಷದೊಂದಿಗೆ ನಮ್ಮದೂ ದನಿ ಸೇರಿಸಿ 
ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಬಂದರೆ
ಉಪವಾಸದಿಂದ ಬಳಲಿದ ಆ ಜೀವಗಳಲ್ಲಿ ಒಂದಷ್ಟು ಚೈತನ್ಯ ಮೈಗೂಡೀತು...
ಗೆಲುವು ಸುಲಭಸಾಧ್ಯವಾದೀತು...ಅಲ್ಲವಾ...!!!


ಹೇಗಾದರಾಗಲಿ -
ನಮ್ಮ ನಮ್ಮ ಅವಕಾಶಗಳ ಪರಿಧಿಯಲ್ಲಿ
ನಮ್ಮ ನಮ್ಮ ಅರಿವಿನ ವ್ಯಾಪ್ತಿಯಲ್ಲಿ
ಯಾವುದೇ ರೀತಿಯಲ್ಲಾದರೂ
ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿಯಾದರೂ
ಹೋರಾಟವನ್ನು ಬೆಂಬಲಿಸೋಣ...
ನಾಳೆಗಳನ್ನು ಚೆಂದವಾಗಿಸಿಕೊಳ್ಳವ ಕನಸಿಗೆ ಜೀವತುಂಬೋಣ...


ದಯವಿಟ್ಟು ಸತ್ಯಾಗ್ರಹವನ್ನು ಬೆಂಬಲಿಸಿ...
ವಿಶ್ವಾಸ ವೃದ್ಧಿಸಲಿ...

 ಜೈ ಹೋ...

Sunday, August 7, 2011

ಗೊಂಚಲು - ಹದಿನೆಂಟು...ಗುಡಿಯ ತಲೆ ಮೇಲೆ ಹೊಳೆವ ಚಿನ್ನದ ಗೋಪುರ...


ಮೆಟ್ಟಿಲ ಮೇಲಿನ ಭಕ್ತನ ಕೈಯಲ್ಲಿ ವಿಧ ವಿಧ ಭಿಕ್ಷಾ ಪಾತ್ರೆ...
ಶಿಲೆಯ ಮೂರ್ತಿಗೆ ಕ್ಷೀರಾಭಿಷೇಕ


ಪಂಚ ಭಕ್ಷ - ಫಲ ತಾಂಬೂಲ ನೈವೇಧ್ಯ...


ಹೂವ ಮಾರುವ ಹುಡುಗಿ,


ಹಣ್ಣ ಮಾರುವ ಹುಡುಗರಿಗೆ ದಿನವೂ ಅರೆಹೊಟ್ಟೆ...


ಹಸಿವು ಕಾಡುವ ನಿದ್ದೆ...
ರಸ್ತೆ ನಡುವೆ ಭಕ್ತನಿಗೆ ಭಗವಂತನ ನೆನಪು...


ಉಕ್ಕಿದ ಭಕ್ತಿ, ಅಲ್ಲೇ ಭಗವಂತನಿಗೆ ಉದ್ದಂಡ...


ಗಾಡಿ ಚಕ್ರದಡಿ ಭಕ್ತನಿಗೆ ಮೋಕ್ಷ...


ಪಾಪ ಅಕಾಲ ಅವಸಾನ...
ಮನುಷ್ಯನ ಸೋಲು - ಸೋಲು ತರುವ ನೋವು,ಭಯ,ಅಸಹಾಯಕತೆ - ಅದರಿಂದ ಮೂಡುವ ಮೌಢ್ಯ - ದೇವರ ಶ್ರೀಮಂತಿಕೆ ಮತ್ತು ಜನಪ್ರಿಯತೆಯ ಗುಟ್ಟು...
ಇರುವನೋ - ಇಲ್ಲವೋ ...
ಇದ್ದೂ ಇರದಂತಿರುವನೋ ...
ಇಲ್ಲದೆಯೂ ಇದ್ದಂತೆ ಕಾಡುವನೋ ...
ಇಂಥ ಅನಿಶ್ಚಿತತೆಯೇ ದೇವರ ಅಸ್ತಿತ್ವದ ಬಂಡವಾಳ...
ಮನದ ಮಾತು :
ಏನೇ ಅಂದರೂ ಅವನ ಇರುವಿಕೆಯ ಮೇಲೆ ನಂಬಿಕೆ ಮೂಡುತಿಲ್ಲ...
ಒಂದಾನುವೇಳೆ ಆತನಿರುವುದೇ ಸತ್ಯವಾದರೆ ಅವನ ಕಾರ್ಯವೈಖರಿಯನ್ನು ಮನಸಾರೆ ಧಿಕ್ಕರಿಸುತ್ತೇನೆ... 

Monday, August 1, 2011

ಗೊಂಚಲು - ಹದಿನೇಳು...

ಹುಟ್ಟುಹಬ್ಬ -
ನನಗೇ ಅರ್ಥವಾಗದ ನನ್ನ ಭಾವಗಳು :~


ಸದ್ದಿಲ್ಲದೆ ಮುಗಿದು ಹೋದ ಇಪ್ಪತ್ತು ಮೇಲೊಂಭತ್ತು ವಸಂತಗಳು...
ಆಯುಷ್ಯದ ಅಕೌಂಟಿನಿಂದ ಬರೀ ಸುಮ್ಮನೇ ಖಾಲಿಯಾದ
ಬದುಕಿನ ಅಮೂಲ್ಯವಾಗಬಹುದಿದ್ದ ಕಾಲು ಭಾಗ...
ಬಯಲಿನಲಿ ಬಿಡಿ ಬಿಡಿಯಾಗಿ ಬಿದ್ದಿರುವ 
ಅನಾಥ ಶವಗಳಂತೆ ಗೋಚರಿಸುತ್ತೆ...


ಪ್ರತೀ ಹುಟ್ಟು ಹಬ್ಬವೂ
ಜವರಾಯನರಮನೆಯೆಡೆಗೆ
ಜೋರು ನಡಿಗೆಯಂತೆ ಭಾಸವಾಗುತ್ತೆ...
ಭಯ - ಸಣ್ಣ ಕುತೂಹಲ ಕೂಡ
ಬದುಕು ಹೀಗಿದೆ...
ಸಾವು ಹೇಗಿರತ್ತೆ..?


ಪ್ರಸವದ ಕೋಣೆ - ಮಸಣದ ಬಯಲು
ನಡುವೆ 
ಬೆತ್ತಲೆ ಕುಳಿತ ಮುದಿ ಸೂಳೆಯಂಥ ಬದುಕು...
ವಿಟರಿಗಾಗಿ ಕಾಯುವುದರಲ್ಲೂ ಸುಖವಿಲ್ಲ
ವಿಟರೊಂದಿಗೆ ಸ್ಖಲಿಸುವುದರಲ್ಲೂ ಸುಖವಿಲ್ಲ...
ವಿಚಿತ್ರ ದೊಂಬರಾಟಗಳ ಭಂಡ ಬಾಳು...


ಜೋಗುಳದ ಹಾಡಿಗೂ - ಚರಮ ಗೀತೆಗೂ
ಉರಿವ ಒಂದೇ ಪ್ರಣತಿ
ಬದುಕ ಇಬ್ಬಂದಿ ಭಾವಗಳ ಪ್ರತಿರೂಪ...


ಹುಟ್ಟಿದ ಆ ದಿನ -
ನೋವು ನುಂಗಿ ಜನ್ಮ ನೀಡಿದ ಅಮ್ಮನ ಕಣ್ಣಲ್ಲಿ
ನಗೆಯ ನಿಟ್ಟುಸಿರು...
ಸುತ್ತ ಜತೆಗೆ ನಗುವ ಸಾವಿರ ಕಣ್ಣ ದೀಪಗಳು...
ಬಯಲಿಗೆ ಬಿದ್ದ ಭಯದಲ್ಲಿ 
ನಾನು ಅಳುತಲಿದ್ದೆ...
ಬದುಕ ಬಡಿವಾರಗಳೆಲ್ಲ ತೀರಿ
ಚಿರ ಮೌನಕೆ ಜಾರುವ ಘಳಿಗೆಯಲ್ಲಿ 
ನಗುತಲಿರುವ ಆಸೆ ನಂಗೆ...
ಸುತ್ತಲಿರುವ ನಾಲ್ಕು ಕಂಗಳಲ್ಲಿ
ಹನಿಗಳೆರಡು ಜಾರಿದರೆ
ಬದುಕಿದ್ದಕ್ಕೆ ಸಾರ್ಥಕವೆಂಬ ಭಾವ ಮನಕೆ...


ಕಾಡುವ ಸಾವಿರಾರು ಆಸೆಗಳು...
ಎಚ್ಚರದಲ್ಲೂ ಕಾಣುವ ಕನಸುಗಳು...
ಬದುಕುವುದು ಮೂಲ ಆಸೆ...
ಬದುಕಿರುವುದರಿಂದ ಸಾವಿರ ಸುಖಗಳೆಡೆಗಿನ ಆಸೆ...
ಬತ್ತಲಾರದ ಮನಸಿನ ಬಯಕೆ...
ಬೆತ್ತಲಾಗುವ ದೇಹದ ಬಯಕೆ...
ತೀರದ ಮೋಹದ ದಾಹ...
ಕೀರ್ತಿಯ ಮೋಹ
ಹಣದ ದಾಹ...
ಗೆಲುವು-ನಲಿವುಗಳ ತೀವ್ರ ಹಂಬಲ...
ಅಭ್ಯಾಸವಾಗಿ ಹೋದ ಆಲಸ್ಯ...
ಸದಾ ನೆರಳಂತೆ ಜೊತೆ ಬರುವ ಸೋಲುಗಳು...
ಅವು ಮೂಡಿಸುವ ನಿಸ್ಸಹಾಯಕತೆ...
ಸುಮ್ಮನೆ ಮುಗಿದು ಹೋದ ನಿನ್ನೆಗಳು...
ಭರವಸೆಯಿಲ್ಲದ ನಾಳೆಗಳಿಗಾಗಿ
ಕಳೆದು ಹೋಗುವ ಈ ಕ್ಷಣ...
ನಿತ್ಯ ನರಕ...


ಆ ಊರ ಬಿಟ್ಟು ಈ ಊರ ಸೇರಿ ಸಾಧಿಸಿದ್ದೇನು..?
ನೋವ ಗೆದ್ದೆನಾ..?
ಸಾವ ಗೆದ್ದೇನಾ..?
ಸಾವಿರ ಸಾವಿರ ಉತ್ತರವಿಲ್ಲದ ಪ್ರಶ್ನೆಗಳು...
ಸಿಗಲಾರದೆಂದು ಗೊತ್ತಿದ್ದೂ ಉತ್ತರಕ್ಕಾಗಿ 
ವ್ಯರ್ಥ ಹುಡುಕಾಟ...
ಶಾಂತಿಯ ಹುಡುಕಾಟ...
ನೆಮ್ಮದಿಯ ಬದುಕಿನ ಹುಡುಕಾಟ...
ಹುಡುಕಿ ಹುಡುಕಿ ಬಂದು ನಿಲ್ಲುವುದು
ಮತ್ತದೇ ಪ್ರಶ್ನೆಗೆ -
ಹೊರಟ ಬಿಂದುವಿನೆಡೆಗೆ...
ಕೊನೆಗೆ 
ಎಲ್ಲ ಹುಡುಕಾಟಗಳಿಗೂ ಪೂರ್ಣವಿರಾಮವಿಡುವುದು
ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಿ ನಿಲ್ಲುವುದು
ಸರ್ವಶಕ್ತ  
ಸಾವು...???


ಅರ್ಥವಾದದ್ದು ಒಂದೆ...
ಎಲ್ಲೇ ಹೋದರೂ ಯಾತನೆ ಒಂದೇ...
ಅನುಭವಿಸುವ ವಾತಾವರಣ ಬದಲಾಗುವುದಷ್ಟೇ...
ಬದುಕು ಇಷ್ಟೇ...
ಬದುಕುವುದಕ್ಕಾಗಿ ರೂಢಿಸಿಕೊಂಡ ಧನಾತ್ಮಕ ಚಿಂತನೆ
ಇನ್ನೂ ಬದುಕಿದ್ದೇವೆ ಎನ್ನುವ ಖುಷಿಯಿಂದಾಗಿ ಮೂಡಿದ
ಬದುಕಿನೆಡೆಗಿನ ಪ್ರೀತಿ
ಇವಿಷ್ಟೇ ಬದುಕನ್ನು ಜೀವಿಸಲು ಪ್ರೇರಣೆ...


ಕೊನೆ ಮಾತು :
ಹುಟ್ಟು ಹಬ್ಬದಂದು ಶ್ರಾದ್ಧದ ಚಿಂತೆ...
ಬದುಕು -
ದ್ವಂದ್ವಗಳ ಬಿಕರಿಗಿಟ್ಟ ಮಾರುಕಟ್ಟೆ...

ನಗಬೇಕಾದಾಗ ಅಳುತಿದ್ದು
ಅಳಬೇಕಾದಾಗ ನಗಬೇಕೆಂಬ
ಬರಡು ಆಸೆಗಳ ಬೀಳು ಬದುಕು...

ಅವರವರ ಭಾವಕ್ಕೆ ದಕ್ಕಿದ್ದಷ್ಟೇ ಬದುಕು...
ಈ ಲೇಖನ ಬರೆದವನ ಭಾವ ಅಷ್ಟೇ...