Friday, November 20, 2020

ಗೊಂಚಲು - ಮುನ್ನೂರೈವತ್ಮೂರು.....

ಅವಸ್ಥೆ..... ಚೆಲುವಾಂಬುಧಿಯೇ -
ಈ ಬದುಕಿನ ಸಕಲ ಆಸೆಗಳು ಸತ್ತಮೇಲೂ ನಿನ್ನ ಕೂಡಿ ಆಡಿ ಉರಿದುಹೋಗುವ ಆಸೆಯೊಂದು ಸಾಯಲೇ ಇಲ್ಲ... ನಶೆ ವಿಷವೆಂದಾದರೆ ವಿಷವೂ ಬದುಕಿಸುತ್ತೆ ಕೆಲವರ... ಇವೆಲ್ಲ, ಈ ಸುಖದ ಬೇಟೆ, ಮೋಹ ಮೋದ ಪ್ರಮೋದಗಳೆಲ್ಲ ಕ್ಷಣಿಕ ಸುಖಾವೇಶಗಳು ಅನ್ನುತ್ತಾರೆ ಅನುಭವಿಗಳು (?), ಅನುಭಾವಿಗಳೆಲ್ಲ... ಆದರೋ, ಮೂರು ಘಳಿಗೆಗೆಲ್ಲ ಮುಗಿಯಿತು ಅಂತ ಹೇಳಿ ಮುಗಿವ ಮುನ್ನವೇ ಮತ್ತೆ ಹುಟ್ಟಿ ನಿಲ್ಲುವ ಬಯಕೆಗಳ ನಶ್ವರ ಅನ್ನುವುದು ಹೇಗೆ...!? ಮತ್ತೆ ಮತ್ತೆ ಆವರ್ತನದಲಿ ಇಂಥದೇ ದೇಹದಲ್ಲಿ ಆಶ್ರಯ ಪಡೆವ ಆತ್ಮ ಅವಿನಾಶಿಯಾದರೆ; ಅಂಥದೇ ಆವರ್ತನದಲಿ ಮತ್ತೆ ಮತ್ತೆ ಇದೇ ಜೀವಾಭಾವದಲ್ಲಿ ಉಕ್ಕುವ, ಸಾಗರ ಸೇರದೆಯೂ ಸಾರ್ಥಕ ನಗೆ ಬೀರೋ ಹಸಿರಿನುಸಿರಾದ ಕಾಡು ಸಲಿಲದಂಗೆ ಕಾಡುವ ನನ್ನ ನಿನ್ನ ಸವಿ ಸುಖ ಒಡನಾಟದ ಬಯಕೆಗಳು ಅದು ಹೇಗೆ ಅಚಿರ...!? ಅದೇನೋ ಮೊಟ್ಟೆಯ ಕಥೆ ಹೇಳ್ತಿದ್ರು ಅವ್ರೆಲ್ಲ: ಮೊಟ್ಟೆ ಹೊರಗಿನ ಶಕ್ತಿಯಿಂದ ಒಡೆದರೆ ಸಾವು, ಒಳಗಿನ ಒತ್ತಡದಿಂದ ಬಿರಿದರೆ ಹುಟ್ಟು, ಹಂಗಾಗಿ ಯಾವತ್ತೂ ಒಳಗಿನ ಒತ್ತಡ ಶ್ರೇಷ್ಠ ಅಥವಾ ಶ್ರೇಷ್ಠವಾದದ್ದೆಲ್ಲ ಒಳಗಿಂದ ಮಾತ್ರ ಬರ್ತಾವೆ ಅಂತ - ಅಂತರಂಗವನಷ್ಟೇ ಉದ್ಧರಿಸಿಕೋ, ಬಾಹ್ಯದ್ದೆಲ್ಲ ಅಲ್ಪ, ಅವನ್ನು ನಿಗ್ರಹಿಸು ಅಂತೆಲ್ಲ... ನಂಗೆ ಕೆಟ್ಟ ಗೊಂದಲ ನೋಡು... ಈ ಮೊಟ್ಟೆ ಹಾಗೂ ಮೊಟ್ಟೆಯೊಳಗೆ ಜೀವದ ಒತ್ತಡ ಹುಟ್ಟಿದ್ದು ಹೇಗೆ...? ಮೊಟ್ಟೆಯ ಸೃಷ್ಟಿಸಿದ್ದು ಪ್ರಾಕೃತಿಕ ಕ್ಷೇತ್ರ ಮತ್ತು ಬೀಜದ ಸಂಗಮವಲ್ವಾ - ಸರ್ವವಿದಿತ ಸುಖದ ವಿನಿಮಯ; ಅದಿಲ್ಲದೇ ಮೊಟ್ಟೆಯೇ ಇಲ್ಲ... ಮೊಟ್ಟೆಯಲ್ಲಿ ಜೀವೋತ್ಪತ್ತಿಯ ತುಡಿತ ಮೂಡಲು ಮತ್ತೆ ಹೊರಗಿನ ಕಾವಿನ ಆಸರೆ - ಮತ್ತದೇ ಬಹಿರಂಗ ಪ್ರೇಮದ, ಕಾಳಜಿಯ ಒತ್ತಡ; ಕಾವು ಕೊಡುವಲ್ಲಿ ಸಣ್ಣ ನಿರ್ಲಕ್ಷ್ಯವಾದರೂ ಮೊಟ್ಟೆ ಒಳಹೊರಗಿಂದೆಲ್ಲಾ ಕೊಳೆತು ನಾರತ್ತೆ... ಅರ್ಥವೇ ಆಗೋದಿಲ್ಲ ಇವೆಲ್ಲಾ ದೊಡ್ಡ ದೊಡ್ಡ ಜಿಜ್ಞಾಸೆಗಳು... ಆತ್ಮಕ್ಕೆ ದೇಹ ಬರೀ ಅಂಗಿಯಂತೆ - ಅಂಗಿ ಅಂದ್ರೆ ಅನಗತ್ಯ ಅಲಂಕಾರ... ಹಂಗಾದ್ರೆ ವಸ್ತ್ರವ ಬದಲಾಯಿಸುವುದೇತಕ್ಕೆ ಮತ್ತು ಬದಲಾಯಿಸಬೇಕು ಅಂದಾಗ್ಲೂ ಆ ಪ್ರಕ್ರಿಯೆಗೆ ಮತ್ತದೇ ಕ್ಷಣಿಕ, ಅಲ್ಪ, ಅಪವಿತ್ರ ಅಂತೆಲ್ಲ ಕರೆಸಿಕೊಳ್ಳುವ ಬಾಹ್ಯ ಸುಖದ ಆವರ್ತನವೇ ಜೊತೆಯಾಗಬೇಕಲ್ಲ... ಅಲ್ಲಿಗೆ ಒಂದನ್ನೊಂದು ಆತುಕೊಂಡ, ಆಶ್ರಯಿಸಿ ಜೀವಿಸೋ, ಅವುಚಿಕೊಂಡೇ ಎತ್ತರಕ್ಕೇರೋ ಆನಂದಗಳಲ್ಲಿ ಯಾವುದು ಕ್ಷಣಿಕ, ಯಾವುದು ಶಾಶ್ವತ...!? ಆತ್ಮನ ತೃಪ್ತಿಯೂ ಈ ದೇಹದ, ಭಾವದ ಕೈಹಿಡಿದು ಇದೇ ಹಾದಿಯಲ್ಲೇ ಸಾಗುವಾಗ ಒಂದು ಮಾತ್ರ ಕ್ಷಣಭಂಗುರ ಹೇಗಾದೀತು...!? ಅಲ್ಲಾss ಅಪ್ರಾಕೃತಿಕ ಲಾಲಸೆಗಳನ್ನು ಅಲ್ಪ, ಕ್ಷಣಿಕ ಅಂದರೆ ಒಪ್ಪುವಾ... ಆದ್ರೆ ಪ್ರಕೃತಿಯೇ ತನ್ನ ಉಳಿವಿಗಾಗಿ, ಚೆಲುವಿಗಾಗಿ ಜೀವ ಭಾವಗಳಲ್ಲಿ ಹರಿಬಿಟ್ಟ ಮಧುರ ಮೋಹಕ್ಕೂ ಹಕ್ಕಿನ ಬೇಲಿಗಳ ಹೆಣೆದು ಕೆಳದರ್ಜೆಗಿಳಿಸಿ ತನ್ನ ದೊಡ್ಡಸ್ತಿಕೆ ಮೆರೆಯಲು ಹವಣಿಸುವ ಮತ್ತು ಆ ಹಾದಿಯಲ್ಲಿ ಮತ್ತೆ ಮತ್ತೆ ಕದ್ದುಮುಚ್ಚಿ ಸೋಲುವ ಮನುಷ್ಯನ ಅತಿ ಬುದ್ಧಿವಂತಿಕೆಗೆ ಏನೆನ್ನುವುದು...!! ಇಹದಿಂದ ಪರಮಪದಕರ್ಹ ಆತ್ಮ ದೇವನ ಪಾದ ಸೇರುವುದೆನ್ನುತ್ತಾರೆ - ಮತ್ತು ಆ ದೇವಾನುದೇವತೆಗಳನೆಲ್ಲ ಸೌಂದರ್ಯ ಹಾಗೂ ವೀರ್ಯದಿಂದ ಬಣ್ಣಿಸುತ್ತಾರೆ... ಪಾಮರರು ನಮಗೇನು ಅರ್ಥವಾದೀತು ಹೇಳು ಇವುಗಳ ಹಿಕಮತ್ತುಗಳು... ಹೋಗಲಿ, ನರಕವಾಸಿಯ ಸ್ವರ್ಗದ ಕನಸು ನಶ್ವರವೇ ಅಂತಾದರೂ ಅದಿಷ್ಟು ಆಪ್ತವಾಗಿದೆಯಲ್ಲ - ಒರಟು ಕಾಲನ ರಾಜ್ಯಭಾರದಲಿ ಇರಲಿಬಿಡು ಇಷ್ಟು ಹಿತ ಈ ಬದುಕಿಗೆ... ಸಹವರ್ತಿಯೇ - ಕ್ಷಣಿಕವೇ ಅಂದರೂ ಕತ್ತಲ ಸುಖದ ಬೆಳಕಿನ ಕಿರು ಸೆಳಕೂ ಈ ಕ್ಷಣದ ಸತ್ಯವೇ ಎಂಬುದನ್ನು ಅಲ್ಲಗಳೆಯುವಂತಿಲ್ಲವಲ್ಲ - ಆಪ್ತತೆಯ ಮೈಮನಸಿನ ಒಪ್ಪಿತ ಮುಕ್ತತೆಯಲಿ ಅದನ್ನಿಷ್ಟೂ ತೀವ್ರ ತಾರಕದಲಿ ಜೀವಿಸಿಬಿಡೋಣ... ಚಿರಾನುರಾಗದ ಅಮಲೇ - "ಇದ್ದಾರೆ ಇರಲ್ಹೇಳು ಉಸಿರೇ ಕ್ಷಣಿಕ - ಸವಿಯೋಣು ಬಾ ತೋಳ ತಾಂಬೂಲವ ಕಸುವಿರೂ ತನಕ... ಇದ್ದಾರೆ ಸಿಕ್ಕೀತು, ಹುಡುಕಿದರೆ ಹೊಂದಲೂ ಆದೀತು - ಚರಮ ಸುಖದ ಕಣ್ಣ ಹನಿಯಲೇ ಆತ್ಮನಾ ಬೆಳಕ..." #ರಸಿಕ_ಲೋಭಿಯ_ಪ್ರಲಾಪಗಳು...  ➛➤➥➦➤➛

ಮರ್ಕಟ ಮನಸ್ಸು - ದೇಹಕ್ಕೆ ಸಂಯಮ, ನಿಷ್ಠೆಗಳ ಪಾಠ (ಶಿಕ್ಷೆ)... #ವ್ಯವಸ್ಥೆ... ದೇಹದ ಮೂಲಕ ಮನಸನ್ನು ನಿಗ್ರಹಿಸುವುದಾ...? ಅಥವಾ ಮನಸ್ಸನ್ನು ಬಂಧಿಸಲಾಗದ್ದಕ್ಕೆ ದೇಹವನ್ನು ಶಿಕ್ಷಿಸುವುದಾ...?? ಕಾಯಾ ವಾಚಾ ಮನಸಾ ನೀನು ಮಾತ್ರ ಅಂತ ಹೇಳಿಸಿದ್ದರಲ್ಲ ಪುರೋಹಿತರು ಎಲ್ಲಾ ಸನ್ಮಂಗಲಗಳ ಸಾಕ್ಷಿಯಾಗಿ - ಆದ್ರೆ, ಮಾತು ಮುನಿಸಾಗಿ ಇಲ್ಲಾ ಕಣ್ಹನಿಯಾಗಿ ಸೋಲುತ್ತಾ, ಮನಸು ಮುರಿದ ಕೊಳಲ ಅಪಸ್ವರವಾಗಿ ಕನಲುತ್ತಾ ಇಲ್ಲೀಗ ನಿಂದು ಮಾತ್ರ ಅಂತಾಗಿ ಉಳಿದದ್ದು ಅಧಿಕಾರದ ಊಳಿಗಕ್ಕೆ ಸಿಕ್ಕಿ ಸುಕ್ಕಾದ ಅರೆಬರೆ ದೇಹ ಮಾತ್ರವಲ್ಲವಾ... ದೇಹವನ್ನು ಅಂಕೆಯಲ್ಲಿಡುವ ವ್ಯವಸ್ಥೆಯ ಯಾವ ನಿಯಮವೂ, ಕಠೋರ ಕಟ್ಟುಪಾಡುಗಳ ಎಂಥ ಬಂದೋಬಸ್ತ್ ಬೇಲಿಯೂ ಮನಸಿನ ಎಲ್ಲೆಗಳನು ಬಿಗಿದು ಕಟ್ಟಿ ಕೆಡವಲಾಗದ್ದಕ್ಕೆ ನೋಡು ನಿನ್ನೊಡನೆ ನಿಂತು ಪೆಕರು ಪೆಕರು ನಕ್ಕಂತೆ, ನಿನ್ನ ಮಗ್ಗುಲಲಿ ಮೈಚಾಚಿ ಸುಖದ ಬೇಟೆಯಾಡಿದಂತೆ ಚೂರು ನಟಿಸಲಾದರೂ ತ್ರಾಣ ಇದ್ದದ್ದು... ಹಗಲಲ್ಲಿ ಪ್ರೇಮಿಸಿಕೊಳ್ಳಲು ಒಂದೋ ಬೇಹದ್ ಪ್ರೇಮವಿರಬೇಕು, ಇಲ್ಲಾ ತಣ್ಣನೆ ಕ್ರೌರ್ಯವಿರಬೇಕೆನಿಸುತ್ತೆ - ಸಭ್ಯರು (?) ನಾವು! ಇರುಳನ್ನು ಆಯ್ದುಕೊಂಡು ಮುಸುಕೆಳೆದುಕೊಂಡೆವು; ಕಣ್ಣು ತೆರೆದೇ ಇದ್ದರೂ ಕಣ್ಣ ಭಾವಕ್ಕೆ ಕತ್ತಲ ತೆರೆಯಿರುವಂತೆ - ಅವರಿವರಂತೆ, ಎಲ್ಲರೊಳಗೊಂದಾದಂತೆ... ಎಲ್ಲ ಹೊಯ್ದಾಟಗಳಾಚೆ ಕಲಿತದ್ದೇನೆಂದ್ರೆ: ಮೌನದ ಮನೆ ಹೊಕ್ಕು ನಿನ್ನಂತೇ ಮಾತು ಕಲಿತು ಕನಲುವುದು - ಎಲ್ಲರಂತಾಗುವುದು... #ಮಾತನುಂಗಿದ_ಪಾತ್ರಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, November 16, 2020

ಗೊಂಚಲು - ಮುನ್ನೂರೈವತ್ತೆರಡು.....

ಕಳ್ಳು ಕಾವ್ಯ.....

ಕಣ್ಣ ದೀಪದಿಂದೇ ಬೊಗಸೆ ತುಂಬಾ ಬೆಳಕ ಭಿಕ್ಷೆ ಸುರಿವ ಅಕ್ಷಯ ಜ್ಯೋತಿ ನೀನು...
ಮತ್ತು
ಮುಟಿಗೆ ಪ್ರೀತಿಗೆ ಬೇಲಿಯಾಚೆ ಕಾದು ನಿಂತ ಕತ್ತಲೂರ ಬಡ ಜೋಗಿ ನಾನು...
ಹಾಗೇ
ನನ್ನನೇ ನಾನು ದಾಟಿಕೊಳ್ಳುವ ಹಗ್ಣದಲ್ಲಿ ನಿನ್ನ ಕರುಳ ಕರುಣೆ ನೆತ್ತಿ ಸೋಕಿ ಬದುಕು ಚೂರು ಬೆಚ್ಚಗೆ ಮುಂದುವರಿಯುತ್ತದೆ - ಮತ್ತೆ ಬದುಕಿಕೊಳ್ಳುತ್ತೇನೆ...
ನೀನೆಂದರೆ -
ಬದುಕ ಕೊಳಲಿಗೆ ಜೀವ ತುಂಬಿದ ಭಾವದುಸಿರು; ಹೆಸರ ಬೇಡದ ಮಾಯೆ...
ನೀ
ಒಡಲುಕ್ಕಿ ನಕ್ಕ ದಿನ ನನ್ನ ದೀಪಾವಳಿ...
#ಉಸಿರ_ಛಾಯೆ...
♡♤♥♤♡

ದೇವಕಣಗಿಲೆ ಹೂವಿನಂಥವಳೇ -
ಸಣ್ಣ ಮಳೆಯ ನಾಕು ಚಣ ಮತ್ತು ಸುಮ್ಮನೇ ನನ್ನ ಬಳಸಿದ ನಿನ್ನ ಕೈ... 
ಸ್ವಯಂ ಬಂಧಿ ಕಂಗಳಲ್ಲಿ ತಟವಟ ತಿಳಿಗತ್ತಲು...
ಬೆಚ್ಚಗೆ ಹರಸಿದ ವಿದಾಯದ ಮಗ್ಗುಲಿನ ಗಟ್ಟಿ ತಬ್ಬುಗೆ...
ಉಸಿರ ಕಿಬ್ಬಿಗಳಲಿ ಶಾಶ್ವತ ಗೂಡು ಕಟ್ಟಿದ ನಿನ್ನ ಹೆರಳ ಗಂಧ...
ಬದುಕಿನ ಕರುಣೆ ಎಷ್ಟು ಚಂದ ಮಾರಾಯ್ತೀ... 
ಮಾತಿನ ಮಲ್ಲನ ಗೋನಾಳವನೂ ಪ್ರೇಮದಿ ಅಪ್ಪುವ ಮೌನ...
ಎಂದಿನದೋ ಒಂದು ಅಪ್ಯಾಯ ಭೇಟಿ ಮುಂದಿನ ಸಾವಿರ ಸಂಜೆಗಳ ಕಾಯ್ದುಕೊಡೋ ಸೊಬಗಿಗೇನೆನ್ನಲೀ...
#ಆಯಸ್ಸಿನ_ಖಾತೆ_ಪಟ್ಟಿಯ_ಸವಿನೆನಪುಗಳ_ಜಮಾಬಂದಿ...
#ನಿನ್ನ_ನೇಹ...
♡♤♥♤♡

ಬೆಳಕಿನ ಬಣ್ಣ ಕೇಳಿದರು
ನಿನ್ನ ಕಿರು ನಗೆಯ ತೋರಿದೆ...
ಪ್ರೀತಿಯೂರ ದಾರಿ ತೋರೆಂದರು
ನಿನ್ನ ಕಣ್ಣ ಬೆಳಕಿನೆಡೆ ಬೆರಳು ಮಾಡಿದೆ...
#ದೃಷ್ಟಿಯಾಗದಿರಲಿ...
♡♤♥♤♡

"ನನ್ನೇ ನಾ ಮರೆತು ತೋಳ್ದೆರೆದ ಹುಯಿಲಿನಲ್ಲೂ ನಿನ್ನ ಮರೆಯಲಾಗದ ಸಿಹಿ ಸೋಲಿನ ಸಂಗಾತವ ಏನೆಂದು ನಾ ಕೂಗಲಿ..."
ಖಾಲಿ ತೋಳಿಗೂ ಇಳಿದಾವು ನೂರು ಕನಸು ನಿನ್ನ ನೆನಪಿನ ಹಾದಿಗಂಟಿ - ಮೋಡ, ಮಳೆ ತೇಲಿದಂಗೆ ಗಾಳಿಗುಮ್ಮನ ಹರಿಗೋಲಿಗಂಟಿ...
ನೀನು ಬರೆಸಿದರಷ್ಟೇ ನಿನ್ನ ಬರೆದೇನು ಚೂರುಪಾರು ಮತ್ತು ನಾನೀಗ ಬರೆದಿದ್ದೆಲ್ಲಾ ನಿನ್ನದೇ ಒಕ್ಕಲ ಪೈರು...
ಬೆಳಕು, ಬದುಕು, ಪ್ರೇಮ, ಕಾಮ, ಕತ್ತಲು, ಸಾವು, ಇತ್ಯಾದಿ ಇತ್ಯಾದಿ ಎಲ್ಲಾ ಎಂದರೆ ನನ್ನೆಲ್ಲಾ ಮೋಹಾಮಾಯೆಗಳನೂ ಸ್ವಚ್ಛಂದವಾಗಿ ಆಳುವ ಅಖಂಡ ಪ್ರೀತಿ ಹಸಿವು ನೀನು...
#ಉಪಮೇಯ_ಉಪಮಾನಗಳಾಚೆಯ_ಉಸಿರ_ಉರುವಲು...
♡♤♥♤♡

ನೀ ಹೀಗೆ ಕಾಡುವುದು ಎಷ್ಟು ಚಂದ ಮತ್ತು ಕಾಡುತ್ತಲೇ ಇರು ಸದಾ ನನ್ನ ಅಂದವಳು ಸದ್ದಿಲ್ಲದೇ ಕಳೆದು ಹೋಗಿದ್ದಾಳೆ... 
ನಾನೀಗ ಕರುಳ ಒಣಗಲು ಹಾಕಿ ಮಳೆಗೆ ಕಾಯುವ ಸುಖಕ್ಕೆ ಒಗ್ಗುತ್ತಿದ್ದೇನೆ...
#ದಣಪೆಯಾಚೆಯ_ಕಣ್ಣಹಾದಿ...
♡♤♥♤♡

ಈ ಕ್ಷಣದ ಸತ್ಯವನ್ನಷ್ಟೇ ನಂಬಬೇಕು ಬದುಕಾಗಿ...
ಉಹೂಂ -
ನಂಬುವುದಷ್ಟೇ ಅಲ್ಲ, ಈ ಘಳಿಗೆಯ ಸತ್ಯವನ್ನಷ್ಟೇ ಅರುಹಬೇಕು ಕೂಡಾ ಒಪ್ಪವಾಗಿ...
#ಕೆಲವೆಲ್ಲ_ಖುಷಿಗಳಿಗಾಗಿ...
#ನೀನು_ಸುಳ್ಳೂ_ಅಲ್ಲ_ಸತ್ಯವೂ_ಅಲ್ಲ...
♡♤♥♤♡

ನಗುವ ತುಟಿಯ ಮೇಲಿಂದ ಉರುಳಿದ ಕಣ್ಣ ಹನಿ ಹೇಳುವ ಒದ್ದೊದ್ದೆ ಕಥೆ - ವಿರಹ...
ಮನೆಯ ಪ್ರತಿ ಗೋಡೆ ವಾಡೆಯ ಸೆರಗಿಗೂ ನಮ್ಮ ಪ್ರೇಮದ ಬೆವರಿನಂಟಿನ ನಂಟಿರುವ ಹಗೂರ ಕಾಲವೊಂದಿತ್ತು....
ಈಗಿಲ್ಲಿ ಒಡೆದ ಎದೆಯ ಕನ್ನಡಿ ಹರಳು ಅಣಕಿಸುವಾಗ ಹೊರಲಾಗದ ಭಾರಾಭಾರದ ನಿಟ್ಟುಸಿರ ಬೇನೆಯ ಅಡಗಿಸಲು ಗೋಡೆಗಳ ಕತ್ತಲ ಮೂಲೆಗಳ ಹುಡುಕುತ್ತೇನೆ...
#ವಿಯೋಗ...
♡♤♥♤♡

ಬೇಹದ್ ಮಾತಾಡಿದ್ದು ದೇಹ - ಬೇಶರತ್ ಅರಳಿ ಹರಿದದ್ದು ಮನಸು...
#ಪ್ರಣಯ_ವಿಲಾಸ...
♡♤♥♤♡

ಮಧುರವಾದುದೊಂದು ತಪ್ಪನೂ ಮಾಡದೆ ಬದುಕು ಇನ್ನಷ್ಟು ಅಪೂರ್ಣವಲ್ಲವೇ...
ಕಳ್ಳ ಮಧ್ಯಾಹ್ನದ ಬಾಗಿಲಲಿ ನಿನ್ನ ಕಾಯುತ್ತಾ...
#ಕಳ್ಳು_ಕಾವ್ಯ... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರೈವತ್ತೊಂದು.....

ನನ್ನ ವ್ಯಾಖ್ಯಾನ.....

ಹುಟ್ಟುವಾಗ ಮನಸ್ಸಿನ ಯಾವುದೋ ಹವಣಿಕೆಯ ಬೇಶರತ್ ಅನ್ನಿಸೋ ಎತ್ತರದ ಸ್ಥಾನದಲ್ಲಿ ಹಾರಾಡಿ ಹಡಾಹುಡಿ ನಡೆಸೋ ಅದೇ 'ಪ್ರೇಮ' ಮದುವೆಯ ಹಾದಿಗೆ ಹೊರಳಿ ಗೂಡು ಕಟ್ಟುವಾಗ ನೀಯಿಸಬೇಕಾದ ಜವಾಬ್ದಾರಿಗಳ ಗುಪ್ಪೆ ಹಾಕಿಡುವ ಚಂದ ಪಾತ್ರ ಅಷ್ಟೇ ಆಗುವ ಮಿತಿಯನ್ನು ಮೀರಿವುದು ಹೇಗೆ ಸಾಧ್ಯ...!?
ಪ್ರೇಮಿ ಸಿಕ್ಕರೆ ಪೂರಾ ಪ್ರೇಮ ಸಿಕ್ಕಂತೇನಾss...!?
ಓಘಕ್ಕೆ ಒಡ್ಡು ಕಟ್ಟಿ ಇಕ್ಕೆಲದಲಿ ಹಸಿರ ಬೆಳೆದರೆ ಹರಿವಿನ ಸಾಗರದೆಡೆಯ ಹಸಿವು ತೀರೀತಾss...!?
ಪ್ರೇಮದ ಪರಿಭಾಷೆ ಬಂಧನ ಅಲ್ಲವೇ ಅಲ್ಲ ಎಂಬುದೂ ಸತ್ಯವೇ ಅಲ್ವಾ...!?
ಎಲ್ಲಾ ಗೋಜಲು ಗೋಜಲು...
ಈ ಗೊಂದಲ ಹುಟ್ಟಿದರೆ ಪ್ರೇಮ ಅರಳಲಿಕ್ಕಿಲ್ಲ - ಪ್ರೇಮ ಬೆಸೆಯದೇ ಗೌಜಿ ಕರಗಲಿಕ್ಕಿಲ್ಲ...
ಪ್ರೇಮಂ ಅಯೋಮಯಂ...
#ಪ್ರೇಮಿ_ಪ್ರೇಮದ_ಪಾತ್ರ_ಮಾತ್ರ...
♦♣♣♣♦

ಪ್ರೇಮ, ಪ್ರಣಯಗಳೆಲ್ಲ "ಕೇಳದೇ ಕೊಟ್ಟೂ ಮತ್ತು ಕೇಳಿ ಪಡೆದೂ" ಒಂದೇ ಅಳತೆಯಲ್ಲಿ ತುಂಬಿಕೊಳ್ಳಬಹುದಾದ ಹಾಗೂ ತುಂಬಿಕೊಳ್ಳಬೇಕಾದ ಒಡನಾಡೀ ಆಪ್ತ ಸಂವೇದನೆಗಳೇ ತಾನೆ... ಮದುವೆ ಅಥವಾ ಸಂಸಾರದ ಸಮರಸದಲ್ಲಿ ಇದು ಇನ್ನಷ್ಟು ವೇದ್ಯವೇನೋ... ಅಂಥ ಹೇಳಿ ಕೇಳಿ ಕೂಡಿ ಹಂಚಿಕೊಳ್ಳಬೇಕಾದ ಮಧುರ ವಿಷಯಗಳಲ್ಲಿ ‘ನಾ ಹೇಳದೇ ನೀ ನನ್ನ ಅರಿಯಬೇಕು, ನಾ ಕೇಳದೇ ನೀ ಎಲ್ಲ ಕೊಡಬೇಕು’ ಎಂದು ಹಠ ಹೂಡಿದರೆ ಕೊನೆಗೆ ಉಳಿಯುವುದು ‘ನಾನೂ’ ಎಂಬ ಒಣ ಪ್ರತಿಷ್ಠೆ ಮಾತ್ರವಲ್ಲವಾ... ಇನ್ಯಾರದೋ ಮನಸನ್ನು ಹೂಬೇಹೂಬು ಓದಿ ಅವರಿಷ್ಟದಂಗೆ ನಡೀತೀನಿ ಅನ್ನೋದು ಕ್ಲೀಷೆ ಅನ್ಸಲ್ಲವಾ... ಜೊತೆ ಜೊತೆಗೆ ಒಡನಾಡುತ್ತಾ ಒಡನಾಡುತ್ತಾ ತಾನೇ ತಾನಾಗಿ ಅರಿವಾದರೆ ಸೈ, ಅರಿವಾಗದೇ ಹೋದರೆ ಮಡಿಲಿಗೆಳಕೊಂಡು ಕಿವಿ ಹಿಂಡಿ ಇದು ಹಿಂಗಿಂಗೆ ಅಂತ ಬಿಡಿಸಿ ತಿಳಿಸೋದೇನೂ ತಪ್ಪಲ್ಲವಲ್ಲ... ಪರಿಣಾಮ ಚಂದವಿದ್ದಲ್ಲಿ ಸುತ್ತುಬಳಸಿನ ಹಾದಿಯೂ ಚಂದವೇ ಇರತ್ತಲ್ವಾ... ಇಷ್ಟಕ್ಕೂ ಜೊತೆ ನಡೆವುದೆಂದರೂ, ಪರಸ್ಪರ ಹಂಚಿಕೊಳ್ಳುವುದೆಂದರೂ, ಅಂತರಂಗದ ಭಾವ ಬಹಿರಂಗದ ಅಭಿವ್ಯಕ್ತಿಯಾಗಿ ನಿರಂತರ ಕಲಿಕೆಯೇ ಅಲ್ಲವೇ...
ಅನುರಾಗದಲ್ಲಿ ಸಾಮರಸ್ಯ ಅಂದರೆ ಕೇಳೋದ್ರಲ್ಲೂ ಕೊಡೋದ್ರಲ್ಲೂ ಸಮಭಾವದ ಸವಿರಸವೇ ಅನ್ಸತ್ತಲ್ಲ...
ಇದೆಲ್ಲ ಹಾದಿ ಹಾಯ್ದೂ ರಸ ಒಸರದೇ ಸೋತ ಅಬ್ಬೆಪಾರಿಗಳ ತುಂಬಿದ ಕಂಗಳ ಪ್ರಶ್ನೆಗೆ ಮಾತ್ರ ನಿಟ್ಟುಸಿರ ಭಾರದ ಹೊರತಾದ ಉತ್ತರವಿಲ್ಲ... 
#ಪ್ರೇಮ_ಪ್ರಣಯ_ಇತ್ಯಾದಿ...
♦♣♣♣♦

"ನಾಟಕ ಜಾರಿಯಲ್ಲೇ ಇರುತ್ತೆ..."
ಅಂಕದ ಮೇಲೆ ನನ್ನ ಪಾತ್ರ ಮುಗಿಯಬಹುದು..‌.
ವೇಷ ಬಳಿದ ಬದಲೀ ಮುಖಗಳು ಬರಬಹುದು...
ನಾನು ಆಡಿಬಿಟ್ಟ, ಚೂರು ಆಡದೇ ಉಳಿಸಿಕೊಂಡ ಅದೇ ಹಪ್ಪು ಹಳೆಯ ನವಿರು, ಒಗರು ಸಂಭಾಷಣೆ ಈಗ ಹೊಸ ದನಿಯಲ್ಲಿ...
ನಸನಸೆಯೊಂದಿಗೇ ಒಪ್ಪಿಕೊಂಡು ಸ್ವಂತಿಕೆಯ ಪರಿಭಾವಿಸುವ ಅಪರಿಚಿತ ರೂಪದ ಹೊಸತನದ ಖುಷಿ - ತಿಳಿಗತ್ತಲಿಗೆ ಒಗ್ಗಿದ ಬಿರುಗಂಗಳಲ್ಲಿ...
#ಚಿತ್ರದ_ಪರದೆ...
#ಹಿಂದುಮುಂದಿನ_ಪಾತ್ರ...
#ಒಡನಾಟ...
♦♣♣♣♦

ಎಲ್ಲರಂತಾಗುವುದು ಎಷ್ಟು ಸಸ್ತಾ...
#ನನ್ನ_ಪಾಲಿನ_ಸಾವು...
♦♣♣♣♦

#ನನ್ನ_ವ್ಯಾಖ್ಯಾನ...
ಶ್ರೀ ಜೀವನ ಅಂದ್ರೆ ಏನೋ...?
ಮುಷ್ಟಿ ಹೃದಯ ಒಸರೋ ಪ್ರೀತಿಯನ್ನು ಬೊಗಸೆಯಲಿ ಮೊಗೆದು ಆದಷ್ಟೂ ಹಂಚಿ ಹಂಚಿ ತಿನ್ನೋದು ಮತ್ತು ನೋವು ನಲಿವುಗಳ ನಗ್ನತೆಯ ಆ ಹಾದಿಯಲ್ಲಿ ನಡೆಯುತ್ತಾ ನನ್ನೊಳಗೆ ನಾ ಅರಳೋದು - ಒಂದು ಸುಂದರ ತಪನೆ...

ಪ್ರೀತಿ ಅಂದ್ರೆ...??
ನನ್ನೊಡನೆ ನಾನು ಸರಸಕ್ಕೆ ಬಿದ್ದು ನನ್ನ ನಾ ಕಾಣುವಂತೆ ಆಂತರ್ಯವ ಬೆದಕುತ್ತಾ, ನುಣುಚಿಕೊಳ್ಳೋ ಸಾಬಕ್ಕಿ ಪಾಯಸವ ಬಟ್ಟಲೆತ್ತಿ ಸುರಿವಂಗೆ ಜೀವನವನ್ನ ಉಪಾಯದಲಿ ಸಂಭಾಳಿಸಿ ಆಮೋದಪೂರ್ಣವಾಗಿ ಸವಿದು ಸಾಯೋದು - ಅರ್ಥಾರ್ಥಗಳ ಮೀರಿದ ಮಧುರ ನಿರ್ವಾಣ...

ಮತ್ತೆ ಸಾಧನೆ ಅಂತಾರಲ್ಲ ಅದೇನು...???
ಜೀವನ ಹಾಗೂ ಪ್ರೀತಿ ಎರಡನ್ನೂ ಅವಿದ್ದಂಗೇ, ಅವು ದಕ್ಕಿದಂಗೇ, ದಕ್ಕಿದಷ್ಟನ್ನೇ, ಅಲ್ಲಿಗಲ್ಲಿಗೆ ಎಂಬಂತೆ ಬೇಶರತ್ ಸಮಾss ಜೀವಿಸೋದು - ಕತ್ತಲು ಮತ್ತು ಬೆಳಕಿನ ಬೆಚ್ಚಬೆರಗು...

ಈ ಅವಮಾನ ಅಂದ್ರೇನು...????
ಈ ಘಳಿಗೆಯನ್ನ ಅದು ಎದುರಿಗೆ ಬಂದಂಗೇ ಬಸಿದು ಬಡಿದುಂಡು ಜೀವಿಸಲಾಗದೇ, ನನ್ನ ನಾ ಗೆಲ್ಲಲಾಗದೇ ಯುದ್ಧವಿಲ್ಲದೇನೇ ಶರಣಾಗಿ ಅಳುವುದು - ಹೊರಗಿನ ಊನವನ್ನ ಶತಾಯಗತಾಯ ಗೆಲ್ಲಬೇಕಾದದ್ದು ನನ್ನೊಳಗೆ ನಾನು...
♦♣♣♣♦

ಕೂಡಿಕೊಂಡದ್ದು ತಾ ಕೂಡಿಯಾಡಿ ಬೇಸರಾಗಿ ಸುಸ್ತೆಂದು ಕಳಚಿಕೊಂಬುವ ಕಾಲವೂ ಒಂದಿರತ್ತೆ - ಆ ಕಾಲದ ತಪ್ತ ಮೌನದಲಿ ಮೆಲ್ಲ ಮೆಲುಕಾಡಲೆಂಬಂತೆ ಈ ಹೊತ್ತು ತೆರಪು ಕೊಡದೇ ಗುಪ್ಪೆ ಗುಪ್ಪೆ ನೆನಕೆಗಳ ಪೇರಿಸುತ್ತಾ ಸಾಗುತ್ತೇನೆ...
ಹೊಸ ಹೆಸರಿನವು, ಹೆಸರು ಭಾಗಶಃ ಅಳಿಸಿಹೋದವುಗಳು, ಹೆಸರು ಕೆತ್ತಲು ಮರೆತಂತಿರುವ ಅಥವಾ ಹೆಸರು ಬೇಕಿಲ್ಲದಂತೆ ಬೋಳಾಗಿ ನಿಂತವುಗಳು, ತಿದ್ದಲಾಗದ ಹತಾಶೆಯಲಿ ಓತಪ್ರೋತ ಗೀಚಿ ಗೀಚಿ ವಿರೂಪವಾದವುಗಳು - ಹಿಂಗೆ ಹೆಂಗೆಂಗೋ ಆತುಕೊಂಡ ಕ್ರಿಯೆ ಪ್ರಕ್ರಿಯೆಗಳೆಲ್ಲ ಹಾದಿಗುಂಟ ಮೂರಡಿಗೊಂದು, ಆರಡಿಗೊಂದು, ಮೂರು ಆರರ ಕೂಡು ಗಡಿಗಿನ್ನೊಂದು ಎಂಬಂತೆ ಕತ್ತಲು, ಬೆಳಕಿನ ಬಣ್ಣಗಳ ಮೈಲಿಗಲ್ಲುಗಳಾಗುತ್ತವೆ ಹಾಗೂ ಅವುಗಳ ನೆನಪುಗಳೆಲ್ಲ ಮಧ್ಯಾಹ್ನದ ನೆರಳಿನಂಗೆ ಜೊತೆ ನಡೆಯುತ್ತವೆ... 
ಅದಲ್ಲದೇ -
ಎದೆಯಂಗಳದ ಕಿಚಿಪಿಚಿಯ ಒದ್ದೆಯಲೂ, ರಣ ರಣ ಧೂಳಿನಲೂ ಹೆಜ್ಜೆ ತುಳಿದಾಡಿದ ಇಂತವೇ ಝುಂಗುಡುವ ನೆನಪುಗಳಿವೆ ಮತ್ತು ಅವಿರುವ, ಅವಿರುತ್ತವೆ ಅನ್ನುವ ಘನ ಕಾರಣಕ್ಕೆ ಈ ಬದುಕಿಷ್ಟು ಸಹನೀಯವಾಗಿದೆ...
ಹಾಗೇನೇ -
ತಮ್ಮೆಲ್ಲ ಧಾಂಗುಡಿಯ ಗುಡುಗುಡು ನಡಿಗೆಯಲಿ ಒಡನಾಡಿಗಳ ಬಗಲ ಚೀಲದಲೂ ನನ್ನೊಡನಾಡಿದ ನೆನಹುಗಳ ಹೊಳಹುಗಳಿಷ್ಟು  ಮಿಸುಗುತ್ತಿದ್ದರೆ ಸಾವು ಸಾರ್ಥಕ...
#ಸಾವಧಾನಕೊಂದು_ಮುರುಕು_ಆವಾಹನೆ...
♦♣♣♣♦

ಪ್ರೀತಿ ಅಂದ್ರೆ ಮತ್ತೇನಲ್ಲ ಶಾಲೀನತೆಯಲಿ ಬಾಗುವುದು...
ಬಾಗುವುದೆಂದರಿಲ್ಲಿ ಸೋತಂತಲ್ಲ ಅಥವಾ ತನ್ನತನವ ಬಿಟ್ಟುಕೊಡುವುದೂ ಅಲ್ಲ...
ಬದಲಾಗಿ,
ಎದುರಿನ ವ್ಯಕ್ತಿತ್ವ ನಮಗಿಂತ ಹಿರಿಯದಾದರೆ ಅದರ ಎತ್ತರಕ್ಕೆ ಅಭಿಮಾನ ತೋರುವುದು...
ಜೊತೆಯ ಚಹರೆ ನಮಗಿಂತ ಕಿರಿದಾದರೆ ಅದರ ಮಗುತನಕೆ ಇಳಿದು ಸಂಭಾಳಿಸುವುದು...
ಇಷ್ಟೇ -
ಹಿರಿಮೆಯ ಕೈಹಿಡಿದು, ಕಿರು ಮುಷ್ಟಿಗೆ ಕೈನೀಡಿ, ಎರಡೂ ಸನ್ನಿಧಿಯಲೂ ತಾನು ತಾನಾಗಿ ಉಳಿಯುತ್ತ, ಬೆಳೆಯುತ್ತ ಸಾಗುವುದು... 
ಪ್ರೀತಿ ಅಂದ್ರೆ ಮತ್ತೇನಲ್ಲ ಬಾನು ಭುವಿಯಂತೆ ಒಂದಕ್ಕೊಂದು ಶಾಲೀನತೆಯಲಿ ಬಾಗುವುದು...
#ಪ್ರೀತಿ_ದಾರಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Sunday, November 15, 2020

ಗೊಂಚಲು - ಮುನ್ನೂರೈವತ್ತು.....

ಮಳೆಮಿಡತೆ ನನ್ನ ಹಾಡು.....

ಚಿತ್ರ ಪಟ: ನನ್ನೂರ ಸಣ್ಣ ಝಲಕು...

ಹಗಲೂ, ಇರುಳೂ ಅವಳ ಉಡಿ ತುಂಬಿದ ಒಲವು...

ಚಂದಿರ ಅವಳ ಕಣ್ಣ ಬಿಂಬ -
ಇರುಳೆಂದರೆ ನಿದಿರೆ, ನಕ್ಷತ್ರ ಮಾಲೆ, ಬಾನ್ಬೆಳಕ ಕಡಲು, ಕನಸಿಳಿವ ಬೆರಗು, ಹೊಳೆಹೊಳೆವ ಬಾನ ನೀಲಿ ಕಣ್ಣು, ಇಳಿವ ತಾರೆಗಳ ಬೆಳಕಲ್ಲಿ ಭುವಿಯ ಸಾವಿರ ಬಣ್ಣಗಳ ಬಾಚಿ ತಬ್ಬಿದ ಕತ್ತಲ ಕಪ್ಪು ಕಾಡಿಗೆ ಮೆರಗು, ನಿದ್ದೆ ಮರುಳಿನ ಮಾತಿನಂತೆ ಎಲೆ ಎಲೆಗಳ ನಡುವಿಂದ ಕೋಕೋ ಆಡುವ ಗಾಳಿ ಗುಮ್ಮನ ಮೆಲುದನಿ, ನಿಶ್ಶಬ್ದದ ಎದೆಯ ತುಳಿದು ಬೆವರೋ ಮಾರ್ಜಾಲ ಮಿಥುನ ಕಾವ್ಯ, ಬೆಟ್ಟದಿಕ್ಕಟ್ಟಿನ ಬೆಲಗ ಹಾದಿಯಲಿ ಗಡಿಬಿಡಿಯಲಿ ಹರಿವ ನೀರ ದನಿಯಲಿ ವಿರಹ - ಶೃಂಗಾರದ ಮೇಘದೂತ...

ಸೂರ್ಯ ವಸುಧೆಯ ಹಣೆ ಬಿಂದಿ -
ಬೆಳಗಾಗುವುದೆಂದರೆ ಚಾಪೆ ಮಡಿಸುವ ಕತ್ತಲಿನ ಧಾವಂತ - ಕಣ್ಬಿಡುವ ಬೆಳಕ ಲಾಸ್ಯ - ಕಾಡು ಹೂವಿನ ಅಪರಂಜಿ ನಗು - ಹೆಸರ ಹಂಗಿಲ್ಲದ ಹಕ್ಕಿಗಳ ಕಿಲಿಕಿಲಿ ಸುಪ್ರಭಾತ - ಇಬ್ಬನಿ, ಮೋಡ ದಿಬ್ಬಣ ಸಾಲು - ಒಡಲುಕ್ಕಿ ಹರಿವ ಜೀವಜಲ ಜಂಝಾರವ - ದುಡಿವ ಜನಗಳ ರಟ್ಟೆಗಳಲಿ ರಚ್ಚೆ ಹಿಡಿದುಳಿದ ನಿನ್ನೆಯ ಚೂರು ಆಯಾಸ, ದುಪ್ಪಡಿ ಮುಸುಗಿನ ಸಣ್ಣ ಆಲಸ್ಯ - ಛಳಿಯ ಛವಿಯ ಕೊಡೆ ಅಡಿಯಲಿ ಹನಿ ಮೌನ ನಿಜ ಧ್ಯಾನ ಅಲ್ಲಿ - ಸದ್ದು ಸಡಗರದ ಸಲ್ಲಾಪದಲಿ ಅನಾಯಾಸದಲಿ ತನ್ನ ತಾನೇ ಆರೈಯ್ದುಕೊಳ್ಳುವ ಬೀಜ ಬಿಳಲು ಚಿಗುರು ಹಸಿರು ನಿತ್ಯ ವಸಂತದ ಘಮ್ಮನುಸಿರು...

ಮಾತಿಗೊಲಿಯದ ಅಲಂಕಾರ, ಆಡಿ ಮುಗಿಯದ ಅನುಭಾವದ ಭಾವ ಧ್ಯಾಸ ಅದು...
ಅವಳಾ ಕರುಳಾ ಬಿಳಲು ನಾನು - ಮಣ್ಣಾಗುವ ಮನ ಜೀವಂತ ಅವಳಾ ಮಡಿಲಲ್ಲಿ...
#ಮಲೆನಾಡು_ನನ್ನ_ಗೂಡು_ಮಳೆಮಿಡತೆ_ನನ್ನ_ಹಾಡು...
⇋↩↪⇌↱


ಚಿತ್ರ ಪಟ: ನನ್ನ ಕ್ಯಾಮೆರಾ ಕಣ್ಣಲ್ಲಿ ದೀಪಾವಳಿ...

ಉಸಿರ ಬತ್ತಿಗೆ ಪ್ರೀತಿ ಎಣ್ಣೆ ಸವರಿ

ಭರವಸೆಯ ಸಣ್ಣ ಕಿಡಿ ತಾಕಿಸಿ
ಗಾಳಿ ಮುಗುಳ ನೆಚ್ಚಿ ಮೆಚ್ಚಿ
ಜೀವ ಹಣತೆಯ ಹಿಡಿದು ನಿಂತೆ...
ಬೊಗಸೆಯೊಳಗೆ ನೆರಳನಿಟ್ಟು
ಬಯಲ ತುಳಿದ ಬೆಳಕ ಕಾಲು...
ಕತ್ತ(ಲ)ಲೂ ಕನಸಿಗೆ ಗಬ್ಬ ಕಟ್ಟಿ
ಎದೆಯ ಗರ್ಭದಿಂದೆದ್ದ ನಗೆಯ ಸೆಳಕೇ ಹಬ್ಬ...
ದೀಪ ಹಚ್ಚಬೇಕು ನಾನೂ - ಬೆಳಕ ಹಂಚುವ(ದೇ) ಹಬ್ಬ...
#ಶುಭವೊಂದೇ_ಆಶಯ...
                __ 14.11.2020 (ದೀಪಾವಳಿ)
⇋↩↪⇌↱

ಆತ್ಮದ ಬೆಳಕು ಸ್ವಾತಂತ್ರ್ಯ...
#ವಂದೇ_ಮಾತರಂ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)