ಅವಸ್ಥೆ.....
ಚೆಲುವಾಂಬುಧಿಯೇ -
ಈ ಬದುಕಿನ ಸಕಲ ಆಸೆಗಳು ಸತ್ತಮೇಲೂ ನಿನ್ನ ಕೂಡಿ ಆಡಿ ಉರಿದುಹೋಗುವ ಆಸೆಯೊಂದು ಸಾಯಲೇ ಇಲ್ಲ...
ನಶೆ ವಿಷವೆಂದಾದರೆ ವಿಷವೂ ಬದುಕಿಸುತ್ತೆ ಕೆಲವರ...
ಇವೆಲ್ಲ,
ಈ ಸುಖದ ಬೇಟೆ, ಮೋಹ ಮೋದ ಪ್ರಮೋದಗಳೆಲ್ಲ ಕ್ಷಣಿಕ ಸುಖಾವೇಶಗಳು ಅನ್ನುತ್ತಾರೆ ಅನುಭವಿಗಳು (?), ಅನುಭಾವಿಗಳೆಲ್ಲ...
ಆದರೋ,
ಮೂರು ಘಳಿಗೆಗೆಲ್ಲ ಮುಗಿಯಿತು ಅಂತ ಹೇಳಿ ಮುಗಿವ ಮುನ್ನವೇ ಮತ್ತೆ ಹುಟ್ಟಿ ನಿಲ್ಲುವ ಬಯಕೆಗಳ ನಶ್ವರ ಅನ್ನುವುದು ಹೇಗೆ...!?
ಮತ್ತೆ ಮತ್ತೆ ಆವರ್ತನದಲಿ ಇಂಥದೇ ದೇಹದಲ್ಲಿ ಆಶ್ರಯ ಪಡೆವ ಆತ್ಮ ಅವಿನಾಶಿಯಾದರೆ; ಅಂಥದೇ ಆವರ್ತನದಲಿ ಮತ್ತೆ ಮತ್ತೆ ಇದೇ ಜೀವಾಭಾವದಲ್ಲಿ ಉಕ್ಕುವ, ಸಾಗರ ಸೇರದೆಯೂ ಸಾರ್ಥಕ ನಗೆ ಬೀರೋ ಹಸಿರಿನುಸಿರಾದ ಕಾಡು ಸಲಿಲದಂಗೆ ಕಾಡುವ ನನ್ನ ನಿನ್ನ ಸವಿ ಸುಖ ಒಡನಾಟದ ಬಯಕೆಗಳು ಅದು ಹೇಗೆ ಅಚಿರ...!?
ಅದೇನೋ ಮೊಟ್ಟೆಯ ಕಥೆ ಹೇಳ್ತಿದ್ರು ಅವ್ರೆಲ್ಲ:
ಮೊಟ್ಟೆ ಹೊರಗಿನ ಶಕ್ತಿಯಿಂದ ಒಡೆದರೆ ಸಾವು, ಒಳಗಿನ ಒತ್ತಡದಿಂದ ಬಿರಿದರೆ ಹುಟ್ಟು, ಹಂಗಾಗಿ ಯಾವತ್ತೂ ಒಳಗಿನ ಒತ್ತಡ ಶ್ರೇಷ್ಠ ಅಥವಾ ಶ್ರೇಷ್ಠವಾದದ್ದೆಲ್ಲ ಒಳಗಿಂದ ಮಾತ್ರ ಬರ್ತಾವೆ ಅಂತ - ಅಂತರಂಗವನಷ್ಟೇ ಉದ್ಧರಿಸಿಕೋ, ಬಾಹ್ಯದ್ದೆಲ್ಲ ಅಲ್ಪ, ಅವನ್ನು ನಿಗ್ರಹಿಸು ಅಂತೆಲ್ಲ...
ನಂಗೆ ಕೆಟ್ಟ ಗೊಂದಲ ನೋಡು...
ಈ ಮೊಟ್ಟೆ ಹಾಗೂ ಮೊಟ್ಟೆಯೊಳಗೆ ಜೀವದ ಒತ್ತಡ ಹುಟ್ಟಿದ್ದು ಹೇಗೆ...?
ಮೊಟ್ಟೆಯ ಸೃಷ್ಟಿಸಿದ್ದು ಪ್ರಾಕೃತಿಕ ಕ್ಷೇತ್ರ ಮತ್ತು ಬೀಜದ ಸಂಗಮವಲ್ವಾ - ಸರ್ವವಿದಿತ ಸುಖದ ವಿನಿಮಯ; ಅದಿಲ್ಲದೇ ಮೊಟ್ಟೆಯೇ ಇಲ್ಲ...
ಮೊಟ್ಟೆಯಲ್ಲಿ ಜೀವೋತ್ಪತ್ತಿಯ ತುಡಿತ ಮೂಡಲು ಮತ್ತೆ ಹೊರಗಿನ ಕಾವಿನ ಆಸರೆ - ಮತ್ತದೇ ಬಹಿರಂಗ ಪ್ರೇಮದ, ಕಾಳಜಿಯ ಒತ್ತಡ; ಕಾವು ಕೊಡುವಲ್ಲಿ ಸಣ್ಣ ನಿರ್ಲಕ್ಷ್ಯವಾದರೂ ಮೊಟ್ಟೆ ಒಳಹೊರಗಿಂದೆಲ್ಲಾ ಕೊಳೆತು ನಾರತ್ತೆ...
ಅರ್ಥವೇ ಆಗೋದಿಲ್ಲ ಇವೆಲ್ಲಾ ದೊಡ್ಡ ದೊಡ್ಡ ಜಿಜ್ಞಾಸೆಗಳು...
ಆತ್ಮಕ್ಕೆ ದೇಹ ಬರೀ ಅಂಗಿಯಂತೆ - ಅಂಗಿ ಅಂದ್ರೆ ಅನಗತ್ಯ ಅಲಂಕಾರ...
ಹಂಗಾದ್ರೆ ವಸ್ತ್ರವ ಬದಲಾಯಿಸುವುದೇತಕ್ಕೆ ಮತ್ತು ಬದಲಾಯಿಸಬೇಕು ಅಂದಾಗ್ಲೂ ಆ ಪ್ರಕ್ರಿಯೆಗೆ ಮತ್ತದೇ ಕ್ಷಣಿಕ, ಅಲ್ಪ, ಅಪವಿತ್ರ ಅಂತೆಲ್ಲ ಕರೆಸಿಕೊಳ್ಳುವ ಬಾಹ್ಯ ಸುಖದ ಆವರ್ತನವೇ ಜೊತೆಯಾಗಬೇಕಲ್ಲ...
ಅಲ್ಲಿಗೆ
ಒಂದನ್ನೊಂದು ಆತುಕೊಂಡ, ಆಶ್ರಯಿಸಿ ಜೀವಿಸೋ, ಅವುಚಿಕೊಂಡೇ ಎತ್ತರಕ್ಕೇರೋ ಆನಂದಗಳಲ್ಲಿ ಯಾವುದು ಕ್ಷಣಿಕ, ಯಾವುದು ಶಾಶ್ವತ...!?
ಆತ್ಮನ ತೃಪ್ತಿಯೂ ಈ ದೇಹದ, ಭಾವದ ಕೈಹಿಡಿದು ಇದೇ ಹಾದಿಯಲ್ಲೇ ಸಾಗುವಾಗ ಒಂದು ಮಾತ್ರ ಕ್ಷಣಭಂಗುರ ಹೇಗಾದೀತು...!?
ಅಲ್ಲಾss
ಅಪ್ರಾಕೃತಿಕ ಲಾಲಸೆಗಳನ್ನು ಅಲ್ಪ, ಕ್ಷಣಿಕ ಅಂದರೆ ಒಪ್ಪುವಾ...
ಆದ್ರೆ ಪ್ರಕೃತಿಯೇ ತನ್ನ ಉಳಿವಿಗಾಗಿ, ಚೆಲುವಿಗಾಗಿ ಜೀವ ಭಾವಗಳಲ್ಲಿ ಹರಿಬಿಟ್ಟ ಮಧುರ ಮೋಹಕ್ಕೂ ಹಕ್ಕಿನ ಬೇಲಿಗಳ ಹೆಣೆದು ಕೆಳದರ್ಜೆಗಿಳಿಸಿ ತನ್ನ ದೊಡ್ಡಸ್ತಿಕೆ ಮೆರೆಯಲು ಹವಣಿಸುವ ಮತ್ತು ಆ ಹಾದಿಯಲ್ಲಿ ಮತ್ತೆ ಮತ್ತೆ ಕದ್ದುಮುಚ್ಚಿ ಸೋಲುವ ಮನುಷ್ಯನ ಅತಿ ಬುದ್ಧಿವಂತಿಕೆಗೆ ಏನೆನ್ನುವುದು...!!
ಇಹದಿಂದ ಪರಮಪದಕರ್ಹ ಆತ್ಮ ದೇವನ ಪಾದ ಸೇರುವುದೆನ್ನುತ್ತಾರೆ - ಮತ್ತು ಆ ದೇವಾನುದೇವತೆಗಳನೆಲ್ಲ ಸೌಂದರ್ಯ ಹಾಗೂ ವೀರ್ಯದಿಂದ ಬಣ್ಣಿಸುತ್ತಾರೆ...
ಪಾಮರರು ನಮಗೇನು ಅರ್ಥವಾದೀತು ಹೇಳು ಇವುಗಳ ಹಿಕಮತ್ತುಗಳು...
ಹೋಗಲಿ,
ನರಕವಾಸಿಯ ಸ್ವರ್ಗದ ಕನಸು ನಶ್ವರವೇ ಅಂತಾದರೂ ಅದಿಷ್ಟು ಆಪ್ತವಾಗಿದೆಯಲ್ಲ - ಒರಟು ಕಾಲನ ರಾಜ್ಯಭಾರದಲಿ ಇರಲಿಬಿಡು ಇಷ್ಟು ಹಿತ ಈ ಬದುಕಿಗೆ...
ಸಹವರ್ತಿಯೇ -
ಕ್ಷಣಿಕವೇ ಅಂದರೂ ಕತ್ತಲ ಸುಖದ ಬೆಳಕಿನ ಕಿರು ಸೆಳಕೂ ಈ ಕ್ಷಣದ ಸತ್ಯವೇ ಎಂಬುದನ್ನು ಅಲ್ಲಗಳೆಯುವಂತಿಲ್ಲವಲ್ಲ - ಆಪ್ತತೆಯ ಮೈಮನಸಿನ ಒಪ್ಪಿತ ಮುಕ್ತತೆಯಲಿ ಅದನ್ನಿಷ್ಟೂ ತೀವ್ರ ತಾರಕದಲಿ ಜೀವಿಸಿಬಿಡೋಣ...
ಚಿರಾನುರಾಗದ ಅಮಲೇ -
"ಇದ್ದಾರೆ ಇರಲ್ಹೇಳು ಉಸಿರೇ ಕ್ಷಣಿಕ - ಸವಿಯೋಣು ಬಾ ತೋಳ ತಾಂಬೂಲವ ಕಸುವಿರೂ ತನಕ...
ಇದ್ದಾರೆ ಸಿಕ್ಕೀತು, ಹುಡುಕಿದರೆ ಹೊಂದಲೂ ಆದೀತು - ಚರಮ ಸುಖದ ಕಣ್ಣ ಹನಿಯಲೇ ಆತ್ಮನಾ ಬೆಳಕ..."
#ರಸಿಕ_ಲೋಭಿಯ_ಪ್ರಲಾಪಗಳು...
➛➤➥➦➤➛
ಮರ್ಕಟ ಮನಸ್ಸು - ದೇಹಕ್ಕೆ ಸಂಯಮ, ನಿಷ್ಠೆಗಳ ಪಾಠ (ಶಿಕ್ಷೆ)...
#ವ್ಯವಸ್ಥೆ...
ದೇಹದ ಮೂಲಕ ಮನಸನ್ನು ನಿಗ್ರಹಿಸುವುದಾ...?
ಅಥವಾ ಮನಸ್ಸನ್ನು ಬಂಧಿಸಲಾಗದ್ದಕ್ಕೆ ದೇಹವನ್ನು ಶಿಕ್ಷಿಸುವುದಾ...??
ಕಾಯಾ ವಾಚಾ ಮನಸಾ ನೀನು ಮಾತ್ರ ಅಂತ ಹೇಳಿಸಿದ್ದರಲ್ಲ ಪುರೋಹಿತರು ಎಲ್ಲಾ ಸನ್ಮಂಗಲಗಳ ಸಾಕ್ಷಿಯಾಗಿ - ಆದ್ರೆ, ಮಾತು ಮುನಿಸಾಗಿ ಇಲ್ಲಾ ಕಣ್ಹನಿಯಾಗಿ ಸೋಲುತ್ತಾ, ಮನಸು ಮುರಿದ ಕೊಳಲ ಅಪಸ್ವರವಾಗಿ ಕನಲುತ್ತಾ ಇಲ್ಲೀಗ ನಿಂದು ಮಾತ್ರ ಅಂತಾಗಿ ಉಳಿದದ್ದು ಅಧಿಕಾರದ ಊಳಿಗಕ್ಕೆ ಸಿಕ್ಕಿ ಸುಕ್ಕಾದ ಅರೆಬರೆ ದೇಹ ಮಾತ್ರವಲ್ಲವಾ...
ದೇಹವನ್ನು ಅಂಕೆಯಲ್ಲಿಡುವ ವ್ಯವಸ್ಥೆಯ ಯಾವ ನಿಯಮವೂ, ಕಠೋರ ಕಟ್ಟುಪಾಡುಗಳ ಎಂಥ ಬಂದೋಬಸ್ತ್ ಬೇಲಿಯೂ ಮನಸಿನ ಎಲ್ಲೆಗಳನು ಬಿಗಿದು ಕಟ್ಟಿ ಕೆಡವಲಾಗದ್ದಕ್ಕೆ ನೋಡು ನಿನ್ನೊಡನೆ ನಿಂತು ಪೆಕರು ಪೆಕರು ನಕ್ಕಂತೆ, ನಿನ್ನ ಮಗ್ಗುಲಲಿ ಮೈಚಾಚಿ ಸುಖದ ಬೇಟೆಯಾಡಿದಂತೆ ಚೂರು ನಟಿಸಲಾದರೂ ತ್ರಾಣ ಇದ್ದದ್ದು...
ಹಗಲಲ್ಲಿ ಪ್ರೇಮಿಸಿಕೊಳ್ಳಲು ಒಂದೋ ಬೇಹದ್ ಪ್ರೇಮವಿರಬೇಕು, ಇಲ್ಲಾ ತಣ್ಣನೆ ಕ್ರೌರ್ಯವಿರಬೇಕೆನಿಸುತ್ತೆ - ಸಭ್ಯರು (?) ನಾವು! ಇರುಳನ್ನು ಆಯ್ದುಕೊಂಡು ಮುಸುಕೆಳೆದುಕೊಂಡೆವು; ಕಣ್ಣು ತೆರೆದೇ ಇದ್ದರೂ ಕಣ್ಣ ಭಾವಕ್ಕೆ ಕತ್ತಲ ತೆರೆಯಿರುವಂತೆ - ಅವರಿವರಂತೆ, ಎಲ್ಲರೊಳಗೊಂದಾದಂತೆ...
ಎಲ್ಲ ಹೊಯ್ದಾಟಗಳಾಚೆ ಕಲಿತದ್ದೇನೆಂದ್ರೆ: ಮೌನದ ಮನೆ ಹೊಕ್ಕು ನಿನ್ನಂತೇ ಮಾತು ಕಲಿತು ಕನಲುವುದು - ಎಲ್ಲರಂತಾಗುವುದು...
#ಮಾತನುಂಗಿದ_ಪಾತ್ರಗಳು...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment