Monday, March 21, 2016

ಗೊಂಚಲು - ನೂರಾ ಎಂಬತ್ತೇಳು.....

ಪ್ರೇಮ ಕಾಮದ ಅಂಟು.....
(ಕೆಲವೆಲ್ಲ ಹುಚ್ಚಿಗೆ ಮದ್ದಿಲ್ಲವೇನೊ...)

ನಿಜಕ್ಕೂ ಹಾಸಿಗೆ ಹಂಚಿಕೊಂಡಷ್ಟು ಸುಲಭವಲ್ಲ ಬದುಕ ಹಂಚಿಕೊಳ್ಳುವುದು...

ಹಾಸಿಗೆಯಲಿನ ಅವಳ ನರಳಾಟ ಸುಖದ್ದಾ ಅಥವಾ ನೋವಿನದ್ದಾ ಎಂಬುದರೆಡೆಗೆ ಮನಸ ಹಾಯಿಸದ ನಿರ್ಲಜ್ಜ ಹಸಿವಿನ ಗಂಡು...

ಅವನ ಹಾಸಿಗೆ ಹಸಿವಿಗೆ ಭಿಕ್ಷೆ ನೀಡಿದರೆ ಬದುಕನೇ ಮಡಿಲಿಗಿಟ್ಟು ವಿಧೇಯನಾಗಿರುತಾನೆ ಎಂದು ಅಗಾಧವಾಗಿ ಭ್ರಮಿಸುವ ಐಚ್ಛಿಕ ಬಯಕೆಯ ಹೆಣ್ಣು...

ಬದಲಾಗದ ಮನೋಭೂಮಿಕೆ; ಕಾಮಕ್ಕೆ ಅಪವಿತ್ರತೆಯ ಆರೋಪ...

ಪ್ರೇಮದ ಸೆರಗಿನೊಳಗೆ ತೋಳ ಬಲ, ನಡುವಿನಾಳ ಅಳೆದರೆ ಸ್ವಚ್ಛವಂತೆ...!!!

ಆಸೆ ಆಸೆ ಬೆರೆತು ಬೆವರಿಳಿದರೆ ಸ್ವೇಚ್ಛೆಯಂತೆ...!!!

ಪ್ರಕೃತಿಗೊಂದು ಮುಸುಕನೆಳೆದು ಮಧುರ ಹೆಸರಿನಲ್ಲಿ ಕೂಗಿದರೆ ಸುರತಕೂ ದೈವತ್ವವಂತೆ...!!!

ಪ್ರಕೃತಿ ಸಹಜ ದೈತ್ಯ ಹಸಿವನು ಅದರದೇ ಹೆಸರಲ್ಲಿ ನೀಗಿಕೊಂಬವರು ದೈತ್ಯರಂತೆ...!!!

ಪ್ರೇಮದ ಉನ್ಮಾದ ಕಾಮನ ಬೆವರಲ್ಲಿ ಕರಗದೇ ಹೋದರೆ ಬದುಕಿಂಗೆ ಹರಿವಿರುವುದಿಲ್ಲ - ಹರಿವಿನ ಶೃಂಗಾರವಿಲ್ಲದೇ ಲೌಕಿಕಕೆ ಸೊಗಸಿಲ್ಲ...

ಪ್ರೇಮ ಬೂದಿ - ಕಾಮ ಕೆಂಡ - ಹೊಗೆ ನಿರಂತರ...

ಅಲ್ಲದೇ ಎಲ್ಲವಕ್ಕೂ ಅಪವಾದ ಎಂಬುದೊಂದಿದೆಯಂತೆ; ಬಿಡಿ ಜಗದ ಸೂತಕಗಳ್ಯಾವುದೂ ಈ ಜಂಗಮಂಗೆ ಅರ್ಥವೇ ಆಗುವುದಿಲ್ಲ...

<69>   <69>   <69>

ಸುಡುವ ತೊಡೆ ನಡುವ ಹಸಿಯಲ್ಲಿ ಗಂಡಾಗಿ ಜೀಕಿ ಬೆವರಲ್ಲಿ ಹಮ್ಮನಿಳಿಸಿ ಅವಳ ಕನಸುಗಳ ಆಳುವ ಖೂಳ ಬಯಕೆಯ ಕೆರಳುವಾಟದಿ ಮೊಲೆತೊಟ್ಟನು ತುಟಿಗಳಲಿ ತುಂಬಿಕೊಂಡೆ...
ಆತ್ಮದ ಹಸಿವಿಗೆ ಕಿಡಿ ಸೋಕಿದ ಅನುಭಾವದಾನಂದದಲಿ ಕಂದಾ ಎಂದುಸುರಿ ನೆತ್ತಿ ನೇವರಿಸಿದಳು...
ಪುರುಷಾಹಂಕಾರದ ಹಸಿವಿನಮಲೆಲ್ಲ ಅವಧಿಗೂ ಮುನ್ನ ಸ್ಖಲಿಸಿ ನಿತ್ರಾಣದಲಿ ನಿದ್ದೆಗೆ ಬಿದ್ದೆ ಅವಳದೇ ಮಡಿಲಲಿ...
ಅವಳೆಂದರೆ ಅಮ್ಮ ಕೂಡಾ - ಅವಳ ಕಾಮಕ್ಕೂ ಆತ್ಮದ ನಂಟು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, March 7, 2016

ಗೊಂಚಲು - ಒಂದು ನೂರಾ ಎಂಬತ್ತರ ಮೇಲೆ ಮತ್ತಾರು.....

ಇದು ಬರಹ - ಅವ ಬರಹಗಾರ.....

ಬರೆದವನು ಅವನ ಬರಹದಂತಿಲ್ಲ ಎಂಬುದು ಸಾಮಾನ್ಯ ಆರೋಪ ಮತ್ತು ಅವ ಹಾಗಿಲ್ಲದೇ ಹೋದದ್ದು ತೀರ ಸಾಮಾನ್ಯ ವಿಷಯ... (ಅಪವಾದಗಳ ಹೊರತುಪಡಿಸಿ...)

"ಅದಕೇ ಬರಹಗಳ ಪ್ರೀತಿಸಿ ಬರಹಗಾರನನ್ನಲ್ಲ..." 

ಎಂಥ ಭಾವವೂ ಬರಹ ಆಗುವಾಗ ಅಷ್ಟಿಷ್ಟು ಬಣ್ಣ ಬಳಿದುಕೊಳ್ಳುವುದು ಸಹಜ ಅಲ್ವಾ...
ಗೊತ್ತಿಲ್ಲ -
ನನ್ನ ತಿಳುವಳಿಕೆ ಪ್ರಕಾರ ಬರೆಯುವ ಹೊತ್ತಲ್ಲಿ ಒಂದಿಷ್ಟಾದರೂ ಭಾವದ ಸ್ರವಿಕೆ ಇದ್ದೇ ಬರೆದಿರ್ತಾರೆ ಅಂದ್ಕೋತೀನಿ... 
ಆದ್ರೆ ಎನ್ಗೊತ್ತಾ ಬರೆದ ಭಾವ ಬರೆದು ಆಚೆಯಿಟ್ಟ ಮೇಲೆ ಮತ್ತೆ ಬದಲಾಗಲ್ಲ... 
ಅದು ಬರಹಗಾರನ ಕೈಯಿಂದಲೂ ಕಳಚಿಕೊಂಡು ಮುಕ್ತವಾದ ಭಾವಮಾಲೆ...
ಓದುಗನೊಳಗೆ ಅರಳಿ ಬೆಳೆದೀತು ಇನ್ನಷ್ಟು ಅಷ್ಟೇ... 
ಆದ್ರೆ ಬರಹಗಾರ ಹಾಗಲ್ಲ... 
ಆತ ಮತ್ತು ಆತನ ಭಾವವಲಯ ಪ್ರತಿ ಕ್ಷಣ ಅದಲು ಬದಲಾಗುತ್ತಾ, ಹಳತು ಹೊಸತಾಗುತ್ತಾ, ಅಳಿಯುತ್ತಾ, ಬೆಳೆಯುತ್ತಾ ಇರುತ್ತೆ... 
ಅಲ್ಲದೇ, ಹಲ ಬಾರಿ ಆತ ತಾನಲ್ಲದ ಅಥವಾ ತನ್ನದಲ್ಲದ ವಿರುದ್ಧ ಭಾವಗಳೆಡೆಗಿನ ತನ್ನ ಗುದ್ದಾಟ ಮತ್ತು ಗುದ್ದಾಡುವ ಅದೇ ಭಾವಗಳೆಡೆಗಿನ ಅದ್ಯಾವುದೋ ಸೆಳೆತಗಳನು ಕೂಡ ಅಕ್ಷರೀಕರಿಸುತ್ತಿರುತ್ತಾನೆ ಅವೂ ತನ್ನವೇ ಎಂಬಂತೆ... 
ಬರೆವಾಗ ಇದ್ದ ಅವನದೇ ಮನಸ್ಥಿತಿ ಅವನಿಗೇ ಮತ್ತೆ ದಕ್ಕದೇ ಹೋದೀತು...
ಅದೂ ಅಲ್ಲದೇ ಪ್ರತಿ ವ್ಯಕ್ತಿಯಲ್ಲೂ ಅಂತರಂಗದ ಮತ್ತು ಬಹಿರಂಗದ ಬೇರೆ ಬೇರೆಯೇ ಮಜಲುಗಳಿರುತ್ತೆ ಮತ್ತದು ವೈಜ್ಞಾನಿಕವಗಿಯೂ ಸತ್ಯ ಅಲ್ವಾ... 
ಬರಹ ಅಂತರಂಗದ ಭಾವಗಳ ಸಣ್ಣ ಸಂವಾದೀ ರೂಪ ಅಷ್ಟೇ - ಆಂತರ್ಯದ ಭಾವಾವೇಶದ ವಿಸ್ತಾರ ಅಕ್ಷರಗಳ ಮೀರಿದ್ದಲ್ಲವಾ; ಬದುಕು ವಾಸ್ತವದ ಹೊಣೆಗಾರಿಕೆಗಳ ವ್ಯಕ್ತ ರೂಪ - ಭಾವಕ್ಕೂ ಬದುಕಿಗೂ ಕಲ್ಪನೆ ಮತ್ತು ವಾಸ್ತವಗಳ ನಡುವೆಯ ವ್ಯತ್ಯಾಸ ಇದೆ ಅಲ್ಲವಾ...
ಹಾಗಾಗಿ ಬರಹ ಮತ್ತು ಬರಹಗಾರ ಬೇರೆ ಬೇರೆಯಾಗಿಯೇ ನಿಲ್ಲುತ್ತಾರೆ ಹೆಚ್ಚಿನ ಸಲ... 
ಬದುಕು ಮತ್ತು ಬರಹ ಎರಡರಲ್ಲೂ ಸಮನ್ವಯ ಮತ್ತು ಸಾಮ್ಯತೆ ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಅನ್ಕೋತೀನಿ...
ಅದಕ್ಕೆ ವಿಶೇಷವಾದ ಮನೋ ಸಾಮರ್ಥ್ಯ ರೂಢಿಸಿಕೊಳ್ಳಬೇಕಿರುತ್ತೆ - ಅದು ಸಾಮಾನ್ಯರಿಗೆ ನಿಲುಕುವ ಎತ್ತರವಲ್ಲ... 
ಆದರೂ ಅಲ್ಲೊಬ್ಬ ಇಲ್ಲೊಬ್ಬರಾದರೂ ಎರಡರಲ್ಲೂ ಒಂದೇ ಆಗಿರುವವರು ಇದ್ದಾರೆ ಅನ್ನುವುದು ಖುಷಿಯ ಸಂಗತಿ... 

ವ್ಯಕ್ತಿಯನ್ನ ವ್ಯಕ್ತಿಯಾಗಿ ನೋಡಿ ತಿಳಿದು ಆತನ ಬಗ್ಗೆ ನಮ್ಮೆದೆಯಲ್ಲಿ ಚಿತ್ರ ಬರೆದುಕೊಳ್ಳುವುದು ಜಾಣತನ.... 
ಅದಲ್ಲದೇ ಆತನ ಕಲೆಯನ್ನೇ ಆತ ಎಂದು ನಮ್ಮಲ್ಲೇ ನಾವು ನಂಬಿ, ಆತನ ಕಲೆಯ ಪಾತ್ರಗಳನ್ನೇ ಅವನಿಗೂ ಆರೋಪಿಸಿ ನಮ್ಮೊಳಗೆ ಆತನೆಡೆಗೆ ವಿಶೇಷ ಭಾವ ಬೆಳೆಸಿಕೊಳ್ಳುವುದು ಎಷ್ಟು ಸರಿ...?
ರಾಕ್ಷಸನ ಪಾತ್ರ ಮಾಡುವವ ರಾಕ್ಷಸ ಗುಣಗಳ ಹೊಂದಿರಬೇಕಿಲ್ಲ ಅಲ್ಲವಾ...
ರಾಮನ ಆರಾಧಿಸುವಾತನ ಎದೆಯಲ್ಲೂ ಇದ್ದೇ ಇದ್ದೀತು ಒಂದಿನಿತು ದೌರ್ಬಲ್ಯ...
ಅಂತೆಯೇ ಬರಹವೂ ಒಂದು ಕಲೆ... 
ಪ್ರೇಮವನ್ನು ಸೃಷ್ಟಿಸಿದ ಬರಹಗಾರನೇ ಕಾಮವನ್ನೂ ರಂಜನೀಯವಾಗಿ ಸೃಷ್ಟಿಸಬಲ್ಲ... 
ಪ್ರೇಮದ ಸಾಲುಗಳಲ್ಲಿ ಮನಸು ಅರಳುವಂತೆ ಮಾಡಬಲ್ಲವನೇ ಕಾಮದ ಸಾಲುಗಳಲ್ಲಿ ಮೈಬಿಸಿಯ ಏರಿಸಬಲ್ಲ... 
ಯುದ್ಧದ ಕ್ರೌರ್ಯ - ಒಳಮನೆಯ ಶೃಂಗಾರ ಎರಡರ ವರ್ಣನೆಯೂ ಅದೇ ಲೇಖನಿಯ ಕೂಸುಗಳಲ್ಲವಾ...
ನಮಗ್ಯಾವುದು ಬೇಕೋ ಅದನ್ನ ನಾವೆತ್ತಿಕೊಳ್ಳಬೇಕಲ್ಲವಾ... 
ಆದ್ರೆ ನಾವು ಇದು ನನ್ನದೂ ಭಾವ ಅಂತ ಓದಿ ಆಸ್ವಾಧಿಸಿ ಅಷ್ಟಕ್ಕೇ ಸುಮ್ಮನಾಗಲ್ಲ... 
ಬರಹದ ಜೊತೆಗೇ ಬರಹಗಾರನನ್ನೂ ನಮ್ಮಿಷ್ಟದಂತೆ ಆರಾಧಿಸಿ ಅವರ ಇಗೋ ಬೆಳೆಸಿ ದೇವರೋ ಇಲ್ಲಾ ಬುದ್ಧಿಜೀವಿಯೋ ಮಾಡ್ತೀವಿ ಅನ್ನಿಸುತ್ತೆ ನಂಗೆ... 
ಆ ಬರಹಗಾರನ ಬರಹದ ನಮ್ಮಿಷ್ಟದ ಪಾತ್ರಗಳ ಗುಣಗಳನ್ನ ಬರಹಗಾರನಿಗೂ ಆರೋಪಿಸಿಕೊಂಡು ನಮ್ಮಲ್ಲಿ ನಾವೇ ಅವನನ್ನ ನಮಗೆ ಬೇಕಾದಂಗೆ ಚಿತ್ರಿಸಿಕೊಂಡು ಕೊನೆಗೆ ಅವನೆದುರು ನಿಂತ ಘಳಿಗೆಯಲ್ಲಿ ಅಯ್ಯೋ ಮೋಸ ಹೋದೆ ಎನ್ನುವುದು ಎಷ್ಟು ಸರಿ...? 
ಅಭಿಮಾನ ಮತ್ತು ಅಂದಾಭಿಮಾನದ ನಡುವಿನ ವ್ಯತ್ಯಾಸದ ಅರಿವು ನಮಗಿರಬೇಕಲ್ಲವಾ... 
ನಮ್ಮ ಅಭಿಮಾನವನ್ನ ನಿರ್ವಹಿಸುವ ರೀತಿಯನ್ನು ಕಲಿಯದೇ, ನಮ್ಮ ಅಭಿಮಾನದ ಮೇಲೆ ನಮಗೆ ಹಿಡಿತ ಇಲ್ಲದೇ ಹೋಗಿ ಅವರದನ್ನು ಬಳಸಿಕೊಳ್ಳೋಕೆ ನಾವೇ ಅವಕಾಶ ಮಾಡಿ ಕೊಟ್ಟು ನಮ್ಮ ಸ್ವಯಂಕೃತಾಪರಾಧಕ್ಕೆ ಆಮೇಲೆ ಬರೆದವನ ಬದುಕ ಬೈಯ್ಯೋದು ಎಂತು ಸರಿ...

ತನ್ನ ಬರಹದ ಬಗ್ಗೆ ಬರಹಗಾರನಲ್ಲಿ ಬದ್ಧತೆ ಇರಬೇಕು ಎನ್ನುವುದು ಸತ್ಯವೇ – ಆತನಿಗೆ ಸಾಮಾಜಿಕ ಬದ್ಧತೆ ಇರತಕ್ಕದ್ದು ಎಂಬುದನ್ನು ಕೂಡ ಅಗತ್ಯವಾಗಿ ಒಪ್ಪೋಣ... 
ಆದರೆ ಅದು ಯಾವುದೋ ಬಹಿರಂಗದ ಘಟನೆಯನ್ನೋ, ಕ್ರಿಯೆಯನ್ನೋ ಕುರಿತು ಹೇಳುವಾಗ ಅಥವಾ ಅವುಗಳ ಬಗ್ಗೆ ‘ಹೇಳಿಕೆಗಳನ್ನು’ ಕೊಡುವಾಗ ಸರಿಯೇ ಹೊರತೂ; ಒಂದು ಕಲೆ ಅಂದರೆ ತನ್ನ ಅಂತರಂಗದಲ್ಲಿ ಸಂಚಾರಿಯಾಗಿ ಚಲಿಸೋ ಒಂದು ಭಾವವನ್ನ ಹೇಳುವಾಗ ಅರ್ಥಾತ್  ‘ಭಾವ ಪ್ರಧಾನವಾದ’ ಕಥೆ, ಕವಿತೆ, ಕಾದಂಬರಿಗಳಲ್ಲಿ ಅನ್ವಯ ಆಗಲಾರದು ಎನ್ನಿಸುತ್ತೆ... 
ಅಲ್ಲಿ ಅವ ಆ ಕ್ಷಣದ ಆ ಭಾವಕ್ಕಷ್ಟೇ ಬದ್ಧ ಆದರೆ ಸಾಕು ಅನ್ನಿಸುತ್ತೆ ನಂಗೆ... 
ಇಲ್ಲದೆ ಹೋದಲ್ಲಿ ‘ಭಾವ ಪ್ರಧಾನ ಬರಹ ಹುಟ್ಟುವುದೇ ಕಷ್ಟ...
ಯಾಕೆಂದರೆ ಅಲ್ಲಿ ಬರಹಗಾರ ತನ್ನ ಸೃಷ್ಟಿಯ ಹತ್ತಾರು ಪಾತ್ರಗಳಲ್ಲಿ ಹಂಚಿ ಹೋಗಿರುತ್ತಾನೆ... 
ತನ್ನದಷ್ಟೇ ಅಲ್ಲದೇ ತನ್ನ ಸುತ್ತಲಿನ ಅಥವಾ ತನ್ನದಕ್ಕೆ ತನ್ನ ಕಲ್ಪನೆಯ ವ್ಯಕ್ತಿ, ಶಕ್ತಿಗಳ ಭಾವವಲಯವನ್ನು ತನ್ನೊಳಗೇ ಆರೋಪಿಸಿಕೊಂಡು ನಿರೂಪಿಸಿರುತ್ತಾನೆ... 
ಹಾಗಿದ್ದಾಗ ಯಾವುದನ್ನು ಅವನಿಗೆ ಆರೋಪಿಸುವುದು...? 
ಮತ್ತು ಯಾಕೆ ಹಾಗೆ ಆರೋಪಿಸಬೇಕು...??
ಭಾವಲೋಕದಂತೆ ಅಥವಾ ಭಾವಿಸಿಕೊಂಡಂತೆ ವಾಸ್ತವದ ಬದುಕು ಯಾರದ್ದೂ ಇರುವುದಿಲ್ಲ ಅಲ್ಲವಾ... 
ಭಾವಸ್ರಾವಕ್ಕೆ ಕಲ್ಪನೆಯ ವಿಸ್ತಾರ ದಕ್ಕಿ ಇನ್ನೊಂದು ಹೊಸ ಭಾವ ಲೋಕ ಸೃಷ್ಟಿ ಆಗುವಲ್ಲಿ ಯಾವ ಸಮಾಜ ನೆನಪಾಗುತ್ತೆ...
ಕಲ್ಪನೆಯ ಆಗಸದಲ್ಲಿ ಅದೆಷ್ಟು ಭಾವಗಳಿಗವನು ಬದ್ಧನಾದಾನು...

ಇಷ್ಟಕ್ಕೂ ಆತ ಕೂಡ ನಮ್ಮಂತೆಯೇ ಒಬ್ಬ ಮನುಷ್ಯ... 
ಎಲ್ಲ ರಾಗ ದ್ವೇಷ ತ್ವೇಷಗಳ ಒಳಗೊಂಡ ಸಾಮಾನ್ಯ ಮನುಷ್ಯ... 
ಒಂದ್ಯಾವುದೋ ಕಲೆ ಸಿದ್ಧಿಸಿದೆ ಅಷ್ಟೇ - ಭಾವಲೋಕವನ್ನು ಅಕ್ಷರಗಳಲ್ಲಿ ಕಟ್ಟಿಕೊಡಬಲ್ಲ ಕಲೆ... 
ಅದರಾಚೆ ಆತನೂ ನಮ್ಮಂತೆಯೇ – ಹೆಚ್ಚಿನ ಸಲ ನಮಗಿಂತ ಎಡಬಿಡಂಗಿ ಮನುಷ್ಯ... 
"ಅದಕೇ ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." ಅಂತೀನಿ... 
ವ್ಯಕ್ತಿ ಮುಖ್ಯ ಆಗಬಾರದು ನಮಗೆ ವಿಚಾರ ಮುಖ್ಯವಾಗಬೇಕು... 
ವಿಚಾರದ ಸತ್ಯಾಸತ್ಯತೆ ಮತ್ತು ಪ್ರಸ್ತುತತೆಯ ಮೇಲೆ ಬರಹದ ತೂಕ ನಿರ್ಧಾರವಾಗಬೇಕು ನಮ್ಮೊಳಗೆ ಅಲ್ಲವಾ...
ವಿಚಾರವ ಬಿಟ್ಟು ವ್ಯಕ್ತಿಯ ಹಿಂದೆ ಬೀಳುವ ಮನಸ್ಥಿತಿಯಿಂದಲೇ ಇದ್ದೀತು ಇಲ್ಲಿ ಇಷ್ಟೆಲ್ಲ ಬುದ್ಧಿಜೀವಿಗಳು, ದೇವಮಾನವರೆಲ್ಲ ಹುಟ್ಟಿಕೊಳ್ಳುವುದು ಅನ್ನಿಸಲ್ಲವಾ...
ಸೈದ್ಧಾಂತಿಕ ಭಿನ್ನತೆಗಾಗಿ ‘ವೈಯಕ್ತಿಕ ಪ್ರೀತಿಯ’ ಕೊಂದುಕೊಳ್ಳುವುದು ಮತ್ತು ವೈಯಕ್ತಿಕ ಆಪ್ತತೆಗಾಗಿ ತಪ್ಪನ್ನೂ ಹಾಡಿ ಹೊಗಳುವುದು ಎರಡೂ ಅಪದ್ಧವೇ ಅನ್ನಿಸಲ್ಲವಾ...
ಬರಹ ಮತ್ತು ಬರಹಗಾರ ಎರಡನ್ನೂ ಬೇರೆ ಬೇರೆ ನೋಡುವ ಪ್ರಜ್ಞಾವಂತಿಕೆಯನ್ನು ಬದುಕನ್ನು ಓದುವುದನರಿತ ಕೆಲವರಾದರೂ ರೂಢಿಸಿಕೊಂಡರೆ ಒಳ್ಳೆಯದು ಮತ್ತು ಆದಷ್ಟು ಅದನ್ನ ಮತ್ತೊಬ್ಬರಲ್ಲೂ ಮೂಡಿಸೋ ಪ್ರಯತ್ನ ಮಾಡಿದರೆ ಇನ್ನೂ ಒಳ್ಳೆಯದು ಅನ್ನಿಸುತ್ತೆ ನಂಗೆ - ಅದು ಅನಿವಾರ್ಯ ಅಂತಲೂ ಅನ್ನಿಸುತ್ತೆ...

"ಬರಹಗಾರನ ಪ್ರೀತಿಸುವುದಾದರೆ ಅದಕೆ ಅವನ ಬರಹಗಳ ಆಚೆಯ ಬೇರೆಯದೇ ಆಪ್ತತೆಯ ಕಾರಣಗಳಿರಲಿ - ಆಗ ಬರಹ ಮತ್ತು ಬಂಧಕ್ಕೆ ಬೇರೆಯೇ ಚೆಂದವಿದ್ದೀತು..."

ಏನೋ ಹೀಗೆಲ್ಲ ಅನ್ನಿಸುತ್ತೆ...
ಇವು ನನ್ನ ತಿಳುವಳಿಕೆ ಅಥವಾ ಭಾವ ಅಷ್ಟೇ... 
ಅಲ್ಪನ ಅತಿ ಮಾತು ಅನ್ನಿಸಿದರೆ ಕ್ಷಮಿಸಿ...

ಆದರೂ ಒಂದು ಕಿವಿಮಾತು ಏನೆಂದರೆ -
"ಬರಹಗಳ ಪ್ರೀತಿಸಿ ಬರಹಗಾರರನ್ನಲ್ಲ..." 

Wednesday, March 2, 2016

ಗೊಂಚಲು - ನೂರಾ ಎಂಬತ್ತೈದು.....

ಅಸಹಾಯ ಆಕ್ರೋಶದಲ್ಲಿ ಉಳಿವುದು ಕಣ್ಣ ಹನಿಯ ಕರೆಯೊಂದೆ.....

ಪ್ರೇಮ, ಪ್ರಣಯ ಅಷ್ಟೇ ಅಲ್ಲ ಕೊನೆಗೆ ಪ್ರೀತಿ, ಸ್ನೇಹ, ಕಾಳಜಿಗಳು ಕೂಡ ಕತ್ತಲಲ್ಲೇ ಪ್ರಕಟವಾಗಬೇಕು, ಬಾಗಿಲ ಮರೆಯಲ್ಲಿಯೇ ವ್ಯಕ್ತವಾಗಬೇಕು - ಕತ್ತಲೆಯ ತೊತ್ತಾಗಬೇಕು...

ಬೆಳಕಲ್ಲಿ ಬಿಚ್ಚಿಟ್ಟಿರೋ ಅಸ್ಪ್ರಶ್ಯರಾಗುತ್ತೀರಿ - ಬಾಗಿಲ ಮರೆಯ ಕ್ರೌರ್ಯವೂ ಸಮ್ಮತ ಪ್ರೇಮ ಅನ್ನಿಸಿಕೊಳ್ಳುತ್ತದೆ; ಬಾಗಿಲಾಚೆ ಹೆಗಲು ತಬ್ಬಿದ ಕಾಳಜಿಯೂ ಅನೈತಿಕ ಕಾಮ ಇಲ್ಲಿ...

ಬಾಗಿಲಾಚೆಯ ಸ್ವಚ್ಛ ಬೆಳಕಲ್ಲೂ ತೋರುವುದಾದರೆ ಅದಕೆ ಗಾಢ ಬಣ್ಣದ ಮುಖವಾಡ ತೊಡಿಸಿ ತೋರಬೇಕು – ಪ್ರತಿ ಬಂಧಕ್ಕೂ ಸಂಬಂಧದ ಹೆಸರು ಬೇಕು – ಪ್ರತಿ ಭಾವಕ್ಕೂ ನಕಲಿ ಮುಖವೊಂದು ಬೇಕು...

ತರಹೇವಾರಿ ಮುಖವಾಡಗಳು ಸಿಕ್ಕುತ್ತವೆ ಈ ಸಾಮಾಜವೆಂಬೋ ಜಾತ್ರೆಯ ಬಯಲಲ್ಲಿ...

ನೀ ನಿನ್ನಂತೆ ಬಾಳು ಎನ್ನುತ್ತಲೇ ನೀನೆಂದರೆ ಇದು ಎಂದು ನನದೊಂದು ಚಿತ್ರವನ್ನೂ ಅವರೇ ಕಟ್ಟಿಕೊಡುತ್ತಾರೆ - ಅದರಾಚೆ ನನ್ನ ದಾರಿಯ ನಾ ಕಂಡುಕೊಳ್ಳುವುದು ಅಪರಾಧ ಇಲ್ಲಿ... 

ಎಂಬಲ್ಲಿಗೆ ಅಪ್ರಾಮಾಣಿಕನಾಗುವುದನ್ನು ನಮ್ಮವರೇ ನಮಗೆ ಕಲಿಸುತ್ತಾರೆ...

ಉಹುಂ – ಅಪ್ರಾಮಾಣಿಕ ಆಗಲಾರೆ ಅಂತ ಹೊರಟೆನೋ, ಮುಖವಾಡಗಳ ತೊಡದೇ ಓಡಾಡುವ ಧೈರ್ಯ ತೋರಿದೆನೋ ಅಲ್ಲಿಗೆ ಮುಗಿಯಿತು; ಅಲ್ಲಿಂದಾಚೆ ನನ್ನ ನಗು, ನನ್ನ ಖುಷಿಗಳೆಲ್ಲ ಅನೈತಿಕತೆಯ ಬಣ್ಣದ ಕೂಸಾಗಿ ಬದುಕಬೇಕು ತಲೆ ತಗ್ಗಿಸಿ...

ಬದುಕ ಮಡಿಲಿಗೆ ಕಿಂಚಿತ್ತಾದರೂ ನಗೆಯ ಸುರಿಯದವರೂ, ನನ್ನೊಳಗಣ ಒಳಿತುಗಳನೆನಿತು ಗುರುತಿಸದವರೂ ನನ್ನದೊಂದು ಕೆಡುಕನ್ನ ಹುಡುಹುಡುಕಿ ನಡು ಬೀದಿಯಲ್ಲಿ ಪಾರಾಯಣ ಮಾಡುತ್ತಾರೆ...

ಇಡುವ ಪ್ರತಿ ಹೆಜ್ಜೆಗೂ ಸಾವಿರ ಕಣ್ಣುಗಳ ಅನುಮಾನದ ಕಾವಲು...

ಉಸಿರಾಟಕ್ಕೂ ಪ್ರಶ್ನೆಗಳಿವೆ ಇಲ್ಲಿ; ಉತ್ತರಕೂ ಇಂಥದ್ದೇ ಇರಬೇಕೆಂಬ ಆರೋಪಿತ ನಿರೀಕ್ಷೆಗಳಿರುತ್ತವೆ - ನೇರ ಉತ್ತರಕ್ಕೆ ಮತ್ತೆ ಅನುಮಾನದ ಹೊಗೆಯ ವಾದಗಳ ಬೇಗೆ...

ಯಾರವರು ಅಂತರಂಗ ಶುದ್ಧಿ ಶ್ರೇಷ್ಠ ಅಂದವರು – ಇಲ್ಲಿ ಬಹಿರಂಗಕ್ಕೆ ಮಾತ್ರ ಹಾರ ತುರಾಯಿ...

ಯಾವುದೇ ಹಂಗುಗಳ ಮೀರಿದ ಸ್ವತಂತ್ರ ಭಾವಗಳು ಬೆಳೆದು ನಿಲ್ಲುತ್ತವೆ ಅಂತರಂಗದಲ್ಲಿ; ಆ ಭಾವಗಳಿಗೂ ಹೊಸ ಬೇಲಿಗಳು ಸೃಷ್ಟಿಯಾಗುತ್ತವೆ ಬಹಿರಂಗದಲ್ಲಿ...

ಅಂತರಂಗ ಕೊಳೆತು ನಾರಿದರೂ ಯಾರಿಗೂ ಬೇಸರವಿಲ್ಲ – ಬಹಿರಂಗ ಘಮಘಮಿಸುತಿದ್ದರಾಯಿತು...

ಆತ್ಮಶುದ್ಧಿಯ ಪ್ರವರವೇನಿದ್ದರೂ ಪುರೋಹಿತನ ಬಾಯಿ ಚಪಲ ಮತ್ತು ಗರುಡ ಪುರಾಣದ ಅಧ್ಯಾಯವಷ್ಟೇ...

ನೇರವಂತಿಕೆಯ ಧೈರ್ಯ ಎನ್ನುವುದು ವಿಪರೀತದ ಸ್ವೇಚ್ಛೆಯಂತೆ ಕಾಣುತ್ತೆ ಮಡಿವಂತ (?) ಕಣ್ಣುಗಳಿಗೆ – ಅಂತೆಯೇ ನನ್ನಾತ್ಮದ ಪ್ರಾಮಾಣಿಕತೆ ಮೊಂಡುವಾದ...

ಹಂಚಿಕೊಂಡ ಯಾವುದೋ ನೋವು ಆಪ್ತತೆಯ ಬಾಗಿಲ ನಂಬಿಕೆಯ ಕೀಲಿಯಾಗಲ್ಲದೇ ಸಹಾನುಭೂತಿಯ (ಸಹಾನುಭೂತಿ: ಈ ಶಬ್ದವೇ ಹಿಂಸಾತ್ಮಕ ಸ್ವಸ್ಥ ಮನಸಿಗೆ) ನಿರೀಕ್ಷೆಯ ಹಂಬಲವಾಗಿ ಗೋಚರಿಸುವಲ್ಲಿ; ಬಂಧವೊಂದರ ಪ್ರೀತಿಯ ಮೂಲ ಪ್ರೀತಿ ಆಗಿರದೇ ಯಾವುದೋ ನೋವಿನೆಡೆಗಿನ ಸಹಾನುಭೂತಿ ಎಂದಾದಲ್ಲಿ ಕನಸಿನುಸಿರ ಕರುಳಿಗೆ ಕತ್ತರಿಯಾಡಿಸಿದಂತ ಭಾವ ಎದೆಯಲ್ಲಿ...

ಮಹಾ ಹುಂಬ ಧೈರ್ಯದ ಭಂಡ ಪ್ರಾಣಿ ನಾನು – ಆದರೂ ಕೊನೆಗೆ ಗೆಲ್ಲುವುದು ಸಮಾಜವೇ...

ಯಾಕೆಂದರೆ ನಾನಿರುವುದೂ ಅದೇ ಸಮಾಜದಲ್ಲಿ – ಅದರ ಒಂದು ಭಾಗವಾಗಿ; ಅಷ್ಟೇ ಅಲ್ಲ ಅದೇ ಸ್ವಸ್ಥ (?) ಸಮಾಜದ (ಈ ಶಬ್ದದ ಬಗೆಗೇ ಮಹಾ ಗೊಂದಲವಿದೆ ನಂಗೆ) ಮುಖ್ಯ ಭೂಮಿಕೆಯಲ್ಲಿ ನಾ ಎದೆಯಲಿಟ್ಟುಕೊಂಡ ನನ್ನದೂ ಎಂದುಕೊಂಡ ಜೀವಗಳೂ ಇವೆ...

ಅಲ್ಲಿಗೆ ತೊಟ್ಟು ನೆಮ್ಮದಿಯಿಲ್ಲ – ಬಿಟ್ಟು ಬದುಕಿಲ್ಲ...

ನನ್ನಂತೆ ನನ್ನ ಇರಗೊಡದ ಶ್ರೇಷ್ಠ ಸಮಾಜವೇ ನಿನ್ನೊಡನೆ ಏಗುವುದಕಿಂತ ಸಾವಿನೊಡನೆ ಸರಸ ಹಿತವೆನಿಸುತ್ತೆ – ಹಾಗಂತ ನಾ ಹೇಳಿದರೆ ಕಿಂಚಿತ್ತೂ ಅತಿಶಯೋಕ್ತಿ ಇಲ್ಲ...

ತುಂಬಾನೇ ಸುಸ್ತೆನಿಸುತ್ತೆ ಈ ನಡೆಗಳು; ಆಯ್ದುಕೊಂಡ ದಾರಿ ತಪ್ಪೋ ಸರಿಯೋ ಎಂಬಲ್ಲಿ ಗೊಂದಲಗಳಿಗಿಂತ ಇಲ್ಲೀಗ ಅದೆಷ್ಟೋ ಪ್ರಶ್ನೆಗಳಿಗೆ ಸಾವಿಗಿಂತ ಸಮರ್ಥ ಉತ್ತರ ಬೇರಿಲ್ಲ ಎಂಬುದು ಸತ್ಯ ಅನ್ನಿಸಿಬಿಡುತ್ತೆ – ಪಕ್ಕನೆ ನಿಂತುಬಿಡಬೇಕು ಉಸಿರು ಯಾರದೇ ಹಂಗಿಗೂ ಅರೆಕ್ಷಣವೂ ಸಿಗದೇ...

ಉರುಳಿಬಿದ್ದ ಮಾಂತ್ರಿಕನ ಶಕ್ತಿ ಕೇಂದ್ರವೀಗ ಭಾವಗಳ ರುದ್ರಭೂಮಿ; ಮುರಿದ ನಗೆಯ ಮಂತ್ರದಂಡವೇ ವ್ಯಾಸಪೀಠವಾಗಿ ಅದರ ಮೇಲೀಗ ಗರುಡ ಪುರಾಣ – ಅದನ್ನೂ ಮುಖ ಅರಳಿಸಿಕೊಂಡೇ ಕೇಳಬೇಕು; ಸ್ವಂತಿಕೆಗೆ ಎಳ್ಳು ನೀರು...

ಸ್ವಂತಿಕೆ ಸತ್ತ ಬದುಕಲ್ಲಿ ಮಾತಿಗೇನು ಕೆಲಸ - ನಗೆಯೂ ಕ್ರುದ್ಧ ಮೌನದ ಗುಲಾಮ ಅಲ್ಲಿ - ಬದುಕು ಅಗತ್ಯಕಿಂತ ಅಧಿಕ ದೀರ್ಘವಾಗುತಿರುವ ಭಾವ ಈಗಿಲ್ಲಿ...