Tuesday, December 24, 2013

ಗೊಂಚಲು - ಒಂದು ಸೊನ್ನೆ ಎರಡು.....

ಅವನಾಡಿದ ಹೀಗೊಂದಿಷ್ಟು ಮಾತುಗಳು.....
(ಕೇವಲ ಅವನ ಮಾತುಗಳು...)

ಮಾತಾಡು...
ಏನ ಮಾತಾಡಲಿ...

ಏನಾದ್ರೂ...
.....

ನಿನ್ನ ಮಾತಲ್ಲಿ ಎಷ್ಟೊಂದು ಸತ್ಯಗಳಿರುತ್ತವೆ...
ಹೌದು ಸತ್ಯವೇ, ಆದರೆ ಪ್ರಿಯವಾದುದಲ್ಲವಲ್ಲ... 
ಸತ್ಯ ಎಂದೂ ಖುಷಿಯ ಕೊಡುವುದಿಲ್ಲ... 
ನಗ್ನತೆಯಲ್ಲಿ ಕುತೂಹಲಗಳು ಕಡಿಮೆ... 
ಮುಖವ ಮುಚ್ಚಿಟ್ಟ ಮುಖವಾಡದ ಪ್ರೀತಿಗೆ ಬಣ್ಣಗಳ ಮೆರಗಿದೆ... 
ನಂಗೆ ಅಂಥ ಬಣ್ಣಗಳೆಡೆಗೆ ಮಹಾ ಅಲರ್ಜಿ...

ನೀನು ಬದಲಾಗಿದ್ದೀಯಾ...
ನಗು ನನ್ನ ಉತ್ತರ...

ಈ ನಗುವೇ ಅರ್ಥವಾಗಲ್ಲ...
ಅಪಾರ್ಥವಾಗುವುದಕಿಂತ ಅರ್ಥವಾಗದಿರುವುದೇ ಒಳಿತಲ್ಲವಾ...

ಇಷ್ಟಕ್ಕೂ ಈ ಬದಲಾವಣೆ ಯಾಕೆ..?
ಬದಲಾವಣೆ ಏನಿಲ್ಲ... 
ಇದ್ದರೆ ಅದು ನಿಮ್ಮಗಳೊಂದಿಗೆ ಚಿರಕಾಲ ನಗುತಿರಬೇಕೆಂಬ ನನ್ನೊಳಗಿನ ತೀವ್ರ ಬಯಕೆಗೆ ಅಷ್ಟೇ...

ನಮಗಾಗಿ ನೀ ಬದಲಾಗಬೇಕಿಲ್ಲ...
ಖಂಡಿತಾ ಇಲ್ಲ... 
ಅಷ್ಟೊಂದು ಉದಾರತೆ ನನ್ನಲ್ಲಿಲ್ಲ... 
ಇಷ್ಟಕ್ಕೂ ನನ್ನೊಳಗು ಏನಂದರೆ ಏನೂ ಬದಲಾಗಿಲ್ಲ... 
ಬಹುಶಃ ಎಂದಿಗೂ ಆಗಲಾರದು ಕೂಡ... 
ಅಲ್ಲಿ ನಾನು, ನನ್ನ ಶಾಶ್ವತ ಒಂಟಿತನ ಮತ್ತು ನಿಮ್ಮ ಸಾಂಗತ್ಯದ ನೆನಪು ಹಾಗೂ ಕನಸು ಹೇಗೆಂದರೆ ಹಾಗೇ ಇದೆ – ನಿನ್ನೆ ಇದ್ದ ಹಾಗೇ... 
ಅದು ನಾಳೆಗಳಲೂ ಹಾಗೇ ಇರುತ್ತೆ ಕೂಡ...

ಮತ್ಯಾಕೆ ಈ ಮೌನ..?
ಮೌನ..!!! 
ನನ್ನಲ್ಲಾ..!!! 
ಮಹಾ ವಾಚಾಳಿ ನಾನು – ಮೌನವೆಂದರೆ ಶೃದ್ಧಾಂಜಲಿಯಷ್ಟೇ ನಂಗೆ...
ಮೌನವಾಗಿಲ್ಲ ನಾನು – ಮಾತು ಕೂಡ ಬಿಟ್ಟಿಲ್ಲ... 
ನಿಮ್ಮೊಡನೆಯ ಒಂದಿಷ್ಟು ‘ಪ್ರತ್ಯಕ್ಷ’ ಮಾತುಗಳಿಗೆ ಜರಡಿ ಹಿಡಿದು ಸೋಸಿ ಹರಿಬಿಡುವುದ ’ಕಲಿಯುತ್ತಿದ್ದೇನೆ’ ಅಷ್ಟೇ... 
ನೇರ ಪ್ರಸಾರದ ಕಾರ್ಯಕ್ರಮಗಳ ಕಡಿಮೆ ಮಾಡಿ - ಶಬ್ದಗಳ, ಭಾವಗಳ ತೀವ್ರತೆಯ ಸಂಸ್ಕರಿಸಿದ ಸಿದ್ಧ ಮಾತುಗಳನಷ್ಟೇ ಹೇಳುವ ಪರಿಯ ಕಲಿವ ಪ್ರಯತ್ನ... 
ಆದರೂ ನನ್ನೊಳಗೆ ಆತ್ಮಗತವಾಗಿ ಕೂತಿರುವ ನಿಮ್ಮೊಂದಿಗೆ ನಾನಿಂದಿಗೂ ಅದೇ ವಾಚಾಳಿ...

ಮಾತಿಗೆ ಕಡಿವಾಣ – ಅದ್ಯಾಕೆ ಅಂತ...?
ಅದು ನೀವೇ ಕಲಿಸುತಿರುವ ವಿದ್ಯೆ... 

ನಾವು ಅತಿಹೆಚ್ಚು ಮಾತಾಡೋದು – ಎಲ್ಲವನ್ನೂ ಹಂಚಿಕೊಳ್ಳುವುದು ನಿನ್ನೊಂದಿಗೆ ಮಾತ್ರ ಎಂಬುದು ಗೊತ್ತಲ್ಲವಾ ನಿಂಗೆ...
ಗೊತ್ತು... 
ಆದರೆ ಮಾತಲ್ಲಿ ಮಾತ್ರ ನೋವಲ್ಲೂ – ನಗುವಲ್ಲೂ ನೀನೇ ಮೊದಲಾಗಿ ನೆನಪಾಗೋದು ಅನ್ನೋ ನೀವೇ ನಿಮ್ಮ ನಗುವನ್ನು ಮಾತ್ರ ತಕ್ಷಣಕ್ಕೆ ಹಂಚಿಕೊಂಡು - ನಿಮ್ಮ ನೋವನ್ನು ನಿಮ್ಮಲ್ಲೇ ನುಂಗಿಕೊಂಡು, ಆ ನೋವ ನೀವಾಗಿ ಗೆದ್ದು ಹಗುರಾದಮೇಲಲ್ಲವಾ ನನ್ನಲ್ಲಿ ಹಂಚಿಕೊಳ್ಳೋದು - ರದ್ದಿಯಾದ ವಿಷಯದ ಮಾಹಿತಿಯ ನೀಡಿದಂತೆ... 
ನನ್ನಲ್ಲಿನ ಸಣ್ಣ ಕದಲಿಕೆಯನ್ನೂ ಗುರುತಿಸಿ, ನನ್ನದ್ಯಾವುದೋ ಪುಟ್ಟ ನೋವಿಗೂ ದಿನವೆಲ್ಲ ಕಳವಳಿಸೋ ನೀವು; ನೀಮ್ಮಗಳ ನೋವನ್ನು ನನ್ನೊಂದಿಗೂ ಹಂಚಿಕೊಳ್ಳಲಿ ಎಂದು ನಾನಂದುಕೊಂಡರೆ ಅದು ತಪ್ಪಾಗಲಾರದೆಂದುಕೊಳ್ಳುತ್ತೇನೆ...
ನಮ್ಮ ನೋವುಗಳೆಲ್ಲಾ ಹೇಳುವಷ್ಟು ದೊಡ್ಡದಲ್ಲ ಅಂತೀರಲ್ವಾ - ಆದರೆ ನನ್ ಪ್ರಕಾರ ನೋವೆಂದರೆ ನೋವಷ್ಟೇ, ಅದರಲ್ಲಿ ಚಿಕ್ಕದು ದೊಡ್ಡದೆಂಬ ಹೆಚ್ಚಿನ ಭೇದಗಳಿಲ್ಲ... 
ನೋವ ನಿಮ್ಮಲ್ಲೇ ನುಂಗಿ ಗೆಲ್ಲುವ ನಿಮ್ಮ ಮನಸಿನ ಗಟ್ಟಿತನದೆಡೆಗೆ ನಂಗೆ ಭಯ ಮತ್ತು ನಾನೂ ರೂಢಿಸಿಕೊಳ್ಳಬೇಕೆಂಬ ಬಯಕೆ... 
ಇನ್ನೂ ಒಂದು ಸತ್ಯವಿದೆ – ತಕ್ಷಣವೇ ಹಂಚಿಕೊಳ್ಳಬಹುದಾದಂತಹ, ಸುಳ್ಳಿನ ಪರದೆ ಕಟ್ಟಬೇಕಿಲ್ಲದಂತಹ ನಿರಾಳ, ಭಯ ಮುಕ್ತ ವಾತಾವರಣವನ್ನು ನಾ ನಿಮಗೆ ಕಟ್ಟಿಕೊಟ್ಟಿಲ್ಲವೇನೋ... 
ಅಷ್ಟು ನಿರಾಳ ವಿಶ್ವಾಸ ತುಂಬಲಾಗದೇ ಹೋದದ್ದು ನನ್ನ ಮಿತಿಯೂ ಇರಬಹುದು...

ಎಷ್ಟೆಲ್ಲ ಯೋಚಿಸ್ತೀಯಾ..? 
ಎಲ್ಲರೂ ನಿನ್ನಂತೆಯೇ ಇರಬೇಕೆಂದು ಏಕಂದ್ಕೋತೀಯಾ..?? 
ಎಲ್ಲವನ್ನೂ ನಿನ್ನ ಮೂಗಿನ ನೇರಕ್ಕೇ ನೋಡೋದು ಸರಿಯಾ..???
ಅದನ್ನೇ ಬಿಡುವ ಪ್ರಯತ್ನದಲ್ಲಿರೋದು ನಾನು... 
ನೀವು ಬದಲಾವಣೆ ಅನ್ನುತಿರುವುದೂ ನಾನದನ್ನ ಕಳಕೊಳ್ಳುತಿರುವ ಹಂತವನ್ನು...
ನಿಮ್ಮ ನಡೆಗಳನ್ನು ನಿರ್ದೇಶಿಸುವಂಥ ಮಾತುಗಳಿಗೇ ನಾನಿಂದು ಜರಡಿ ಹಿಡಿಯುವ ಪ್ರಯತ್ನದಲ್ಲಿರೋದು...
ಎಲ್ಲರೂ ನಡೆದುಬರುತಿರುವ ದಾರಿಗೆ ವಿರುದ್ಧವಾಗಿ ನಡೆಯುವುದನ್ನು ರೂಢಿಸಿಕೊಂಡವನು ನಾನು... 
ನಾ ರೂಢಿಸಿಕೊಂಡ ನನ್ನ ಬದುಕ ರೀತಿಯನ್ನು ಅತಿಯಾಗಿ ಪ್ರೀತಿಸುವವನು...
ಯಾವುದೋ ತಿರುವಲ್ಲಿ ಸಿಕ್ಕ ನಿಮ್ಮನ್ನೂ ನನ್ನೊಟ್ಟಿಗೆ ಅದೇ ದಾರೀಲಿ ಒಯ್ಯುವ ಹುಕಿಗೆ ಬಿದ್ದೆ... 
ಸ್ವಲ್ಪ ದೂರ ನಡೆಯುವ ಹೊತ್ತಿಗೆ ಅರಿವಾಯಿತು – ನೀವು ಒಟ್ಟಿಗೆ ಬರುತ್ತಿಲ್ಲ, ನಾನು ನಿಮ್ಮನ್ನು ಬಲವಂತವಾಗಿ ಎಳೆದೊಯ್ಯಲು ಹವಣಿಸುತ್ತಿದ್ದೇನಂತ... 
ಅದು ಅರಿವಾದ ಮೇಲೆ ನಿಮ್ಮನ್ನು ನಿಮ್ಮ ಪಾಡಿಗೆ ನೀವು ಪ್ರೀತಿಸೋ ಸಮಾಜದ ಅದೇ ಹಳೆಯ ಹರಿವಿಗೆ ಹರಿಯಲು ಬಿಡಲು ಪ್ರಯತ್ನಿಸುತ್ತಿದ್ದೇನೆ... 
ನಾನಂತೂ ಹಾಗೆ ಹರಿಯಲಾರೆ – ಹಾಗಂತ ನಿಮ್ಮ ಹರಿಯುವ ಖುಷಿಯ ಕೊಲ್ಲಲಾರೆ... 
ಪ್ರತೀ ಬಂಧವನ್ನೂ ಕುಹಕದ ಕಣ್ಣಿಂದ ನೋಡೋ ಸಭ್ಯ (?!) ಸಮಾಜದೆಡಗೆ ನಂಗೆ ದಿವ್ಯ ನಿರ್ಲಕ್ಷ್ಯ – ಹಾಗಂತ ನಿಮ್ಮನ್ನೂ ನನ್ನಂತೆಯೇ ಇರಿ ಅನ್ನೋದು ಎಷ್ಟು ಸರಿ...
ಯಾಕೆಂದ್ರೆ ಕುಹಕದಾಚೆ ಅಲ್ಲಿ ನನ್ನೊಡನಿರುವುದಕಿಂತ ತುಂಬಾನೆ ಅಧಿಕ ಖುಷಿಗಳಿವೆ, ನಗುವಿದೆ, ಬಣ್ಣಗಳಿವೆ, ನಾ ನೀಡಲರಿಯದ ಮೃದು ನಿರಾಳತೆಯಿದೆ... 
ಅದಕೇ ನಿಮಗೆ ಸಮಾಜದ ಮಾತು ಮುಖ್ಯವಾಗುತ್ತೆ - ನಂಗೆ ಕೇವಲ ನಿಮ್ಮ ಮಾತು ಮುಖ್ಯವಾಗುತ್ತೆ... 
ನೀವು ನೀವಾಗಿಯೇ ಆತ್ಮೀಯ ಅಂತಂದ ಸ್ನೇಹವನ್ನೂ ಸಮಾಜದ ಕಣ್ಣಲ್ಲಿ ಮತ್ತೆ ಮತ್ತೆ ಪರೀಕ್ಷಿಸುತ್ತಿರುತ್ತೀರಿ – ನನಗೆ ನಿಮ್ಮ ಮತ್ತು ನನ್ನ ಮನಸಿನ ಮಾತು ಮಾತ್ರ ಪ್ರಮಾಣ... 
ಪ್ರೀತಿಗೆ ಕೂಡ ಪ್ರಾಮಾಣಿಕತೆಯ ಪ್ರಮಾಣ ಕೇಳುವವ ನಾನು – ಪ್ರೀತಿ ಅದು ಹೇಗೇ ಬಂದರೂ ಒಳಗೆಳೆದುಕೊಂಡು ನೀವು ನೊಂದಾದರೂ ಅದರ ಸಲಹುವವರು ನೀವು... 
ನನ್ನ ನಾನು ಕಳೆದುಕೊಳ್ಳಲಾರೆ – ನಿಮ್ಮನೂ ಬಿಟ್ಟುಕೊಡಲಾರೆ... 
ಅದು ನನ್ನ ಮನಸು... 
ಅದಕೇ ನಿಮ್ಮಂತೆ ನಿಮ್ಮನ್ನು ಇರಲು ಬಿಟ್ಟು ನನ್ನನೂ ನಾ ಉಳಿಸಿಕೊಳ್ಳಬೇಕೆಂದಾದಾಗ ನಿಮ್ಮೊಡನೆ ನಿಮ್ಮಂತಿದ್ದು ನನ್ನೊಡನೆ ನಾ ನನ್ನಂತೆಯೇ ಉಳಿಯಲು ಯತ್ನಿಸುತ್ತಿದ್ದೇನೆ... 
ನಿಮ್ಮ ಪ್ರೀತಿ ಮತ್ತು ನನ್ನೊಳಗಿನ ಒಂಟಿತನ ಎರಡನ್ನೂ ಸಮಾನವಾಗಿ ಆಸ್ವಾದಿಸಲು ಕಲಿಯುತ್ತಿದ್ದೇನೆ... 
ಇದರಲ್ಲಿ ನನ್ನದು ಇನ್ನೂ ಒಂದು ಸ್ವಾರ್ಥವಿದೆ – ಎಲ್ಲ ಪ್ರೀತಿಗಳೂ ಅವವುಗಳ ಬದುಕ ತಿರುವುಗಳಲ್ಲಿ ದಾರಿ, ದಿಕ್ಕು ಬದಲಾಗಿ ಅನಿವಾರ್ಯವಾಗಿ ಮಸುಕಾಗಿ ಬದುಕು ನಿಜಕ್ಕೂ ದೀರ್ಘ ಅಂತನಿಸುವಾಗ ನನ್ನೊಂಟಿತನದೆಡೆಗಿನ ನನ್ನ ಪ್ರೀತಿಯೇ ನನ್ನ ಕಾಯುತ್ತದೆ... 
ಅಲ್ಲೆಲ್ಲೋ ನೀವು ನಕ್ಕ ಸುದ್ದಿ ಆಗಾಗ ಸಿಕ್ಕರೆ – ನಂಗಿಲ್ಲಿ ಬೋನಸ್ಸು ಖುಷಿ ಖುಷಿ...

ಆದರೂ ಸಮಾಜ ಅಂತ ಒಂದಿದೆಯಲ್ಲ...
ಹೌದು ಸಮಾಜ ಇದೆ ಮತ್ತು ನಾವೂ ಅದರ ಒಂದು ಪ್ರಮುಖ ಭಾಗವೇ... 
ನಮ್ಮನ್ನು ನಮ್ಮಂತೆಯೇ ಗುರುತಿಸಿ ಅದರ ಒಳಿತು ಕೆಡುಕುಗಳ ವಿಮರ್ಶಿಸುವ ಪ್ರಜ್ಞಾಪೂರ್ಣ ಸಮಾಜದೆಡೆಗೆ ನಂಗೂ ತುಂಬಾ ಗೌರವವಿದೆ... 
ಆದರೆ ನಾವಲ್ಲದ್ದನ್ನು -  ನಮ್ಮದಲ್ಲದ್ದನ್ನು ನಾವೆಂದು - ನಮ್ಮದೆಂದು ತಮ್ಮ ಕ್ಷುದ್ರ ಕಲ್ಪನೆಯಿಂದ ನಮ್ಮ ಮೇಲೆ ಆರೋಪಿಸಿ – ಸ್ನೇಹವನ್ನು ಪ್ರೇಮವೆಂದು – ಪ್ರೇಮವನ್ನು ವ್ಯಭಿಚಾರವೆಂದು ಆಡಿಕೊಂಡು ನಕ್ಕು ತನ್ನ ಕುಹಕವಾಡುವ ಮನೋಸ್ಥಿತಿಯನ್ನು ತೃಪ್ತಪಡಿಸಿಕೊಳ್ಳುವ ಸಮಾಜದೆಡೆಗೆ ನಂಗೆ ಕಿಂಚಿತ್ತೂ ಗೌರವವಿಲ್ಲ... 
ನಾನು ಅಂತ ಸಮಾಜವನ್ನು ಲಕ್ಷ್ಯಕ್ಕೂ ತೆಗೆದುಕೊಳ್ಳಲ್ಲ... 
ಯಾರಿಂದಲೋ ಸುಮ್ಮನೆ ವಿನಾಕಾರಣವಾಗಿ ಹರಿದುಬರುವ ಸ್ನೇಹದ ಆತ್ಮೀಯತೆಯನ್ನೂ ಸಂಪೂರ್ಣ ಖುಷಿಯಿಂದ ಆಸ್ವಾದಿಸದೇ ಅಕ್ಕ ಪಕ್ಕದ ಸಮಾಜ ಏನೆಂದುಕೊಳ್ಳುತ್ತೋ ಅಂತಲೇ ಜಾಸ್ತಿ ಚಿಂತಿಸುತ್ತೀರಲ್ಲ; ಅಂತ ನಿಮ್ಮೆಡೆಗೆ ನನಗೆ ನಿಜಕ್ಕೂ ಮರುಕವಿದೆ... 
ಸಮಾಜ ಹೇಳುವ ಕಾಳಜಿಯ ಪ್ರಜ್ಞಾವಂತ ಮಾತ್ಯಾವುದೋ ಅದನ್ನು ಗೌರವಿಸುವುದನ್ನೂ, ಕುಹಕವ್ಯಾವುದೋ ಅದನ್ನು ಗುರುತಿಸಿ ನಿರ್ಲಕ್ಷಿಸಿ ನಕ್ಕು ನಮ್ಮಂತೆ ನಾವು ಮುನ್ನಡೆಯುವುದನ್ನೂ ರೂಢಿಸಿಕೊಳ್ಳುವುದು ನಮ್ಮೊಳಗಿನ ಬೆಳವಣಿಗೆಗೆ, ಪ್ರಚ್ಛನ್ನ ಖುಷಿಗೆ ತುಂಬಾ ಅಗತ್ಯ ಅನ್ನಿಸುತ್ತೆ ನಂಗೆ...

ನಾವು ನಮ್ಮ ವೃತ್ತಗಳ ಮೀರಿ ನಿನ್ನ ಜೊತೆ ಬರಲಾರೆವು ನಿಜ ಹಾಗಂತ ನಿನ್ನ ಬಿಟ್ಟಿರಲೂ ಆಗದು...
ಬಿಟ್ಟು ಬಿಡಿ ಅಥವಾ ಬಿಡುತ್ತೇನೆ ಅಂತ ನಾನಂದಿಲ್ಲ... 
ನಿಜ ಏನಂದ್ರೆ ನೀವು ಬಿಡ್ತೀವಂದ್ರೂ ನಾ ನಿಮ್ಮ ಬಿಡಲಾರೆ... 
ಆದರೆ ನನ್ನೊಂದಿಗಿನ ಒಡನಾಟ ನಿಮ್ಮ ಉಳಿದ ಖುಷಿಗಳಿಗೆ ಎರವಾಗುವುದನ್ನು ಸಹಿಸಲಾರೆ... 
ನಾ ನಿಮ್ಮ ನೇರ ಒಡನಾಟಕ್ಕೆ ದಕ್ಕಿದಾಗ ಮಾತ್ರವಲ್ಲವಾ ನಿಮ್ಮ ಹಾಗೂ ನೀವು ಪ್ರೀತಿಸೋ ಸಮಾಜದ ಕಟ್ಟುಪಾಡುಗಳಿಗೆ ಪೆಟ್ಟು ಬೀಳುವುದು – ನನ್ನ ಬೇಲಿಗಳಿಲ್ಲದ ವಿಚಾರಗಳಿಂದ ನಿಮ್ಮ ಬದುಕಿನ ಮೂಲ ಭಾವಗಳನೇ ಪ್ರಶ್ನಿಸಿದಾಗಲಷ್ಟೇ ಅಲ್ಲವಾ ನೀವು ಕಂಗೆಡುವುದು... 
ನಿಮಗೆ ಸಂಬಂಧಿಸಿದವರೆಗೂ ಅವೆರಡರಿಂದ ನಾ ದೂರ ಉಳಿದೆನಾದರೆ ಇನ್ನಷ್ಟು ಕಾಲ ನಿಮ್ಮೊಡಗೂಡಿ ಸಾಗಬಹುದಲ್ಲಾ... 
ಅದು ನನ್ನ ಆಸೆ... 
ನೇರ ಒಡನಾಟವಿಲ್ಲದಿದ್ದರೂ ಮನಸಿನ ಒಡನಾಟಕ್ಕೇನು ಎಲ್ಲೆ ಇಲ್ಲವಲ್ಲ – ಮೂರುಘಂಟೆ ನಾನೊಬ್ಬನೇ ಮಾತಾಡಿ ನಿಮ್ಮ ಕಂಗೆಡಿಸಿ, ನಿಮ್ಮದೇನನ್ನೂ ಕೇಳದೇ ನೀವಾಗಿ ಏನೂ ಹೇಳದೇ ಸಮಯ ಕೊಲ್ಲವುದಕಿಂತ ಮೂರು ನಿಮಿಷದ ‘ಪರಸ್ಪರ’ ಕುಶಲೋಪರಿಯೇ ಸೂಕ್ತವಲ್ಲವಾ... 

ನಿನ್ನೊಂದಿಗೆ ವಾದಕ್ಕೆ ಬಿದ್ದು ಗೆಲ್ಲಲಾರೆವು – ಆದರೂ ನೀ ಮೊದಲಿನಂತೆಯೇ ಇದ್ದಿದ್ದರೆ ಚೆಂದವಿತ್ತು...
ವಾದವಲ್ಲ ಇದು ಮನದ ಭಾವ... 
ಬದುಕ ಬೀದಿಯಲ್ಲಿ ಒಂಟಿಯಾಗಿ ನಿಂತಾಗಲೆಲ್ಲಾ ನನ್ನ ಕಂಗೆಡದಂತೆ ಸಲಹಿದ್ದು ಗೆಳೆತನಗಳೇ... 
ಅಂಥ ಗೆಳೆತನಗಳ ಅಷ್ಟು ಸುಲಭಕ್ಕೆ ಕಳೆದುಕೊಳ್ಳುವ ಮನಸಿಲ್ಲ... 
ನನ್ನ ಅಪ್ರಿಯ ಸತ್ಯವ ಹೇಳುವ ಮಾತಿಗಿಂತ; ಅರ್ಥೈಸಿಕೊಳ್ಳೋ - ಅರ್ಥವಾಗೋ ಗೊಂದಲಗಳಿಲ್ಲದ, ಸರಿ – ತಪ್ಪುಗಳ ಹಂಗಿಲ್ಲದ ನಿಮ್ಮ ಮುಗುಳ್ನಗೆಯ ನಿಶ್ಯಬ್ದವೇ ಶ್ರೇಷ್ಠ ಎಂಬ ಅರಿವಿನಲ್ಲಿ ನನ್ನ ಪ್ರಲಾಪಗಳನೊಂದಿಷ್ಟು ನನ್ನೊಳಗೇ ಬಚ್ಚಿಟ್ಟು ಬೀಗ ಹಾಕುವ ಪ್ರಯತ್ನದಲ್ಲಿದ್ದೇನೆ... 
ನಿರೀಕ್ಷೆಗಳಿಲ್ಲದ ಸ್ನೇಹದ ಮಾತಾಡುತ್ತಲೇ ಒಂದಷ್ಟು ನಿರೀಕ್ಷೆಗಳಿಗೆ ಬಿದ್ದುಬಿಟ್ಟೆ ನಿಮ್ಮಗಳ ಒಡನಾಟದಲ್ಲಿ... 
ಆ ನಿರೀಕ್ಷೆಗಳಿಂದಾಗಿ ತುಂಬಾನೇ ಸತಾಯಿಸಿದೆ ನಿಮ್ಮಗಳ... 
ಈಗ ಮತ್ತೆ ಅದರಿಂದಾಚೆ ಬರುವ ತಯಾರಿಯಲ್ಲಿದ್ದೇನೆ... 
ಅದು ಬದಲಾವಣೆ ಅಂತಾದರೆ ಹೌದು ನಾ ಬದಲಾಗಿದ್ದೇನೆ... 
ಈ ಬದಲಾವಣೆ ಒಳ್ಳೆಯದೇ ತಾನೆ... 

ನಿನ್ನ ಮಾತುಗಳು ನಮಗೊಂದಿಷ್ಟು ಮಾರ್ಗದರ್ಶಕವಾಗಿತ್ತು ಬದುಕ ಬೆಳವಣಿಗೆಗೆ ಕಣೋ...
ನನ್ನ ಮಾತು ನಿಮ್ಮನ್ನೊಂದಿಷ್ಟು ಗಟ್ಟಿಗೊಳಿಸಿ ಬದುಕಿಗೆ ಭರವಸೆ ಕೊಡುತ್ತಿತ್ತು ಅನ್ನುವುದಾದರೆ ನೀವು; ಬದುಕಿನ ಅನುಭವಗಳನ್ನು ಓದಿದರೆ ಸಾಕು ಬದುಕು ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ, ತನಗೆ ತಾನೇ ಭರವಸೆಯ ತುಂಬಿಕೊಳ್ಳುತ್ತದೆ ಮತ್ತು ಅದು ನನ್ನಂಥವರ ಸಾವಿರ ಮಾತುಗಳಿಗಿಂತ ಶ್ರೇಷ್ಠ ಅನ್ನುತ್ತೇನೆ ನಾನು...
ಬದುಕಿನ ಅನುಭವಗಳನ್ನು ಓದುವುದೆಂದರೆ ನಮ್ಮನ್ನು ನಾವು ಓದುವುದು ಜತೆಗೆ ಒಂಚೂರು ಪರಕಾಯ ಪ್ರವೇಶ... 
ನಮ್ಮನ್ನು ನಾವು ಓದುವುದು ಅಂದರೆ ಎಂದೋ ಒಂದೆಡೆ ಕೂತು ಹಿಂತಿರುಗಿ ನೋಡುವುದಷ್ಟೇ ಅಲ್ಲ – ಪ್ರತಿ ಕ್ಷಣ ನಮ್ಮ ನಡೆಗಳನ್ನು ನಾವೇ ಗಮನಿಸಿಕೊಳ್ಳುವುದು... 
ನಮ್ಮ ಆ ಕ್ಷಣದ ನಡೆಗಳಿಗೆ ನಮ್ಮಲ್ಲೇ ಕಾರಣಗಳ ಹುಡುಕಿಕೊಳ್ಳುವುದು – ಅದು ನಮಗಿಷ್ಟವಾಗುವಂತಲ್ಲ ಅದಿರುವಂತೆಯೇ ಕಾರಣಗಳ ನೋಡುವುದು... 
ಅಷ್ಟು ಸಾಕು ಎಷ್ಟೋ ಬದಲಾವಣೆಗಳಿಗೆ ಉತ್ತರ ಮಾತಿಲ್ಲದೆಯೇ ಸಿಕ್ಕಿಬಿಡುತ್ತೆ...

ಇನ್ನು ಕೊನೆಯದಾಗಿ ಇಷ್ಟು ಮಾತ್ರ ಪ್ರಾಮಾಣಿಕವಾಗಿ ಹೇಳಬಲ್ಲೆ – ಬದುಕಿನ ಎಂಥ ಬದಲಾವಣೆಗಳಲ್ಲೂ ನನ್ನ ಮನದಲ್ಲಿನ ನಿಮ್ಮೆಡೆಗಿನ ಸ್ನೇಹ ಭಾವ ಬದಲಾಗದು, ಅಲ್ಲಿ ಅದರ ಶ್ರೇಷ್ಠತೆ ಕುಂದಲಾರದು... 
ಈ ಬದಲಾವಣೆ ಬೇಡವೇ ಬೇಡ ಎನ್ನುವುದಾದರೆ ನೀವು; ನಿಮ್ಮೊಂದಿಗಿನ ನನ್ನ ಮಾತುಗಳ ಬೀಗದ ಕೀ ನಿಮ್ಮ ಕೈಯಲ್ಲೇ ಇದೆ... 
“ನೀವು ಬಯಲಾದರೆ ನಾನೂ ಬಯಲು – ನೀವು ಗುಹೆಯಾದರೆ ನಾ ಅದರೊಳಗಣ ಕತ್ತಲು...”

ಎಷ್ಟೆಲ್ಲ ವಿರೋದಾಭಾಸಗಳ, ಗೊಂದಲಗಳ ತುಂಬಿಕೊಂಡ ಪ್ರಾಣಿ ನಾನು...
ಅಷ್ಟೆಲ್ಲ ಒರಟುತನಗಳ ಮೂಟೆಯಾದ ನನ್ನೊಂದಿಗೂ ಒಂದು ಚಂದದ ಸ್ನೇಹ ಬಂಧವ ಈವರೆಗೆ ಸಲಹಿಕೊಂಡ ಹಿರಿಮೆ ನಿಮ್ಮದು... 
ಅದು ಮುಂದೆಯೂ ಬೇಕೆನ್ನುವ ನಿಮ್ಮಗಳ ಮನದ ಮೃದುತ್ವಕ್ಕೆ ಶರಣು...  
ಖುಷಿಯಾಗಿರಿ ಬದುಕ ತುಂಬಾ...

Saturday, December 21, 2013

ಗೊಂಚಲು - ನೂರೊಂದು.....

ಹೇಳಬಾರದ್ದು.....:)
(ಕೇಳಬೇಡಿ ಏನನ್ನೂ...)

ಬೆಳ್ಳಂಬೆಳಗ್ಗೆ ಸ್ನಾನದ ಮನೇಲಿ ನನ್ನವಳು ಮಿಂದ ಬಿಸಿನೀರ ಹಬೆಯಲ್ಲಿ ಮೀಯುತ್ತಾ ಅವಳು ಬಿಚ್ಚಿಟ್ಟ ಅವಳ ಕರಿಮಣಿ ಮತ್ತು ಕಾಲ್ಗೆಜ್ಜೆ ಪರಸ್ಪರ ಮಾತಿಗಿಳಿದಿದ್ದವು...

ಕರಿಮಣಿಯ ಮಾತು : –
ನಾನೆಂದರೆ ಇವಳಿಗೆ ಇವಳಷ್ಟೇ ಪ್ರೀತಿ... ಇವಳ ಕಣ್ಣಲ್ಲಿ ನಾನೆಂದರೆ ಅವನು ಮತ್ತು ಅವನ ಪ್ರೀತಿ... ನೂರಾರು ಹಿರಿಕಿರಿಯ ಹರಕೆ, ಹಾರೈಕೆಗಳ ಹೊತ್ತು ಅವಳ ಕೊರಳ ತಬ್ಬಿದ ಮಂಗಳ ಹಾರ ನಾನು... ಅವನ ಸೇರುವ ಇವಳ ಆಸೆಗೆ ಸಮಾಜ ತೋರಿದ ಸರ್ವರೊಪ್ಪಿತ ಮಾರ್ಗ ನಾನು... ಇವಳ ಉಸಿರಲ್ಲಿ ಬೆರೆತ ಅವನ ಉಸಿರ ಪ್ರೀತಿಗೆ ಜನ್ಮಾಂತರಗಳ ಸ್ವಂತಿಕೆಯ ಮುದ್ರೆ ಒತ್ತಿದ್ದು ನಾನೆಂಬುದು ಇವಳ ಭಾವ... ಅದಕೇ ನಾನವಳಿಗೆ ಅವಿನಾಭಾವ... ಇರುಳ ಮೊದಲಲ್ಲಿ ಹೊರಳು ಪ್ರೀತಿಯುತ್ತುಂಗದಲಿ ಹನಿವ ಕಣ್ಣ ಹನಿ ಹಾಗೂ ಕೊರಳ ಬೆವರ ಹನಿ ಸೇರಿ ನನ್ನ ತೋಯಿಸುತಿರುವಾಗ ಇವಳೆನ್ನನೊಮ್ಮೆ ಪ್ರೀತಿಯಿಂದ ಚುಂಬಿಸುತ್ತಾಳೆ – ಇದಕೆಲ್ಲ ನೀನೆ ಕಾರಣ ಎಂಬಂತೆ... ಆ ಕ್ಷಣ ನನ್ನಲ್ಲಿ ಜೀವ ಝಲ್ಲೆನ್ನುವ ರೋಮಾಂಚದ ಸಾರ್ಥಕ್ಯ... ಪ್ರತಿ ಹಗಲು ಅವನ ಸೇರೋ ವಿರಹದ ನೆನಪಲ್ಲೂ ಇವಳು ನನ್ನನೇ ಮುದ್ದಿಸುತಾಳೆ... ಇವಳ ಎದೆ ಗೊಂಚಲ ನಡುವ ಬಿಸಿಯಲ್ಲಿ ಹಗಲಿರುಳು ನಲಿವ ನನ್ನೆಡೆಗೆ ಅವನದು ಸದಾ ಹೊಟ್ಟೆಕಿಚ್ಚಿನ ನೋಟ... ಇವಳ ಕಪ್ಪು ಕೊರಳಿಗೆ ನಾನು ಕಪ್ಪು ಸೇರಿದ ಬಂಗಾರದ ದೃಷ್ಟಿಬೊಟ್ಟು... ಕೆಲವೊಮ್ಮೆ ರಕ್ಷಣಾ ಆಯುಧ ಕೂಡ... ಇವಳೊಂದಿಗಿನ ನನ್ನ ರೋಮಾಂಚಗಳು ಸಾವಿರಾರು... 

ಗೆಜ್ಜೆನಾದ : –
ಪ್ರತಿ ಮಿಲನದ ಮೊದಲಲ್ಲೂ ಅವನು ಇವಳ ಪಾದದೊಂದಿಗೆ ನನ್ನನೂ ತುಂಬು ಪ್ರೀತಿಯಿಂದ ಮುದ್ದಿಸುತ್ತಾನೆ... ಅವನಿಗೆ ನಾನೆಂದರೆ ಅವನೆದೆಯ ನಾದ... ನನ್ನ ದನಿಯ ವೇಗ ಅವನೆದೆಯ ಆವೇಗ... ನಾನೆಂದರೆ ಇವಳ ಇರುವಿಕೆಯ ಸಂಗೀತ... ಮೊನ್ನೆ ಇವಳೊಂದಿಗೆ ಅವನು ಅಂದಿದ್ದನ್ನು ನೀನೂ ಕೇಳಿದೆಯಲ್ಲ... “ಈ ಕಾಲಗೆಜ್ಜೆಗಳ ಮೇಲೆ ನಂಗೆ ನಿನ್ನೆಡೆಗಿನಷ್ಟೇ ಪ್ರೀತಿ ಕಣೇ... ಆ ಗುಡಿಯ ಕಲ್ಯಾಣಿಯ ಕಟ್ಟೆ ಬಳಿಯಲ್ಲಿ ಮೊದಲ ಸಲ ಈ ಗೆಜ್ಜೆ ದನಿಯಿಂದಲೇ ನಿನ್ನೆಡೆಗೆ ತಿರುಗಿ ನೋಡಿದ್ದು ಮತ್ತು ಆ ನೋಟವೇ ನಿನ್ನೆಡೆಗಿನ ಒಲವಿಗೆ ನಾಂದಿಯಾದದ್ದು... ಇಂದಿಗೂ ನಿನ್ನ ಗೆಜ್ಜೆ ದನಿ ನನ್ನಲ್ಲಿ ರೋಮಾಂಚವ ತುಂಬುತ್ತೆ... ಆ ದನಿ ಮನೆಯೊಳಿಲ್ಲದ ದಿನ ನಾ ಕಳೆದುಹೋಗಿರ್ತೀನಿ... ಮನೆತುಂಬ ಹಿತವಾಗಿ ಅನುರಣಿಸೋ ನಿನ್ನ ಸೀರೆಯ ಸರಬರ ಮತ್ತು ಈ ಗೆಜ್ಜೆಗಳ ಕಿಂಕಿಣಿ ನನ್ನಲೇನೋ ಹೊಸದಾದ ಮಧುರ ಚೈತನ್ಯ ತುಂಬುತ್ತಲಿರುತ್ತೆ ಪ್ರತಿ ಕ್ಷಣ... ನೀನು ನನ್ನವಳು ಅಲ್ಲಲ್ಲ ಕೇವಲ ನನ್ನವಳು ಎಂಬ ಭಾವ ಏನೋ ತೃಪ್ತ ಖುಷಿಯ ತುಂಬುತ್ತೆ... ಅಂಥ ಕೇವಲ ನನ್ನವಳಾದ ನಿನ್ನ ಇರುವಿಕೆಯ ಸಂದೇಶ ನೀ ಒಳಮನೆಯಲಿದ್ದರೂ ನನ್ನ ಸೇರುತ್ತೆ ಈ ಗೆಜ್ಜೆ ನಾದದೊಂದಿಗೆ... ನಿಂಗೊತ್ತಾ ನಿನ್ನ ಮನಸ್ಥಿತಿಯ ಅರಿವೂ ಒಮ್ಮೊಮ್ಮೆ ನಿನ್ನ ಗೆಜ್ಜೆ ನಾದದಿಂದಲೇ ನನ್ನರಿವಿಗೆ ಬರುತ್ತೆ... ಎರಡು ದಿನಗಳ ವಿರಹದ ನಂತರ ನನ್ನೆಡೆಗೆ ಬರುವಾಗಿನ ಘಲಘಲಕ್ಕೂ, ನಿನ್ನಲೇ ನೀ ನಗುತ ಓಡಾಡುವಾಗಿನ ಮಂದ್ರ ನಾದಕ್ಕೂ, ಸಿಟ್ಟು ಅಸಹನೆಗಳಲಿ ನೆಲ ತುಳಿದು ನಡೆವಾಗಿನ ಝೇಂಕಾರಕ್ಕೂ ಮತ್ತು ಹೀಗೆ ಮಿಲನಕೂ ಮುಂಚೆ ಪಾದದಡಿ ಬೆರಳಾಡಿಸಿ ನಾ ಕೆಣಕುವಾಗಿನ ಕಿಂಕಿಣಿಗೂ ಎಂಷ್ಟೊಂದು ವ್ಯತ್ಯಾಸವಿದೆ... ಸಣ್ಣ ಮಂದಹಾಸದೊಂದಿಗೆ ನೀ ಮಂಚದ ಮನೆಗೆ ನಡೆದು ಬರುತ್ತಿದ್ದರೆ ಮಾರು ದೂರದಿಂದಲೆ ನನ್ನ ತಲುಪುವ ಗೆಜ್ಜೆದನಿ ನನ್ನ ನಾಭಿಯಾಳದಲಿ ಆಸೆಯ ಝೇಂಕಾರವೆಬ್ಬಿಸಿ ಮುಂದಿನ ಕೆಲ ಕ್ಷಣಗಳು ನಾನು ಸುರಿವ ಮೇಘ ನೀನು ಎಲ್ಲ ಹೀರಿ ನಗುವ ವಸುಧೆ... ಎಷ್ಟೆಲ್ಲ ಮಧುರ ಭಾವಗಳೋ ಈ ಗೆಜ್ಜೆ ದನಿಯೊಂದಿಗೆ ನನ್ನಲಿ... ಗೆಜ್ಜೆಯಿಲ್ಲದ ನಿನ್ನ ಪಾದವ ನಾ ಕಲ್ಪನೆಯಲೂ ಕಾಣಲಾರೆ ಕಣೇ... ಅದಷ್ಟೇ ಅಲ್ಲ ನಂಗೆ ಮನೆ ತುಂಬ ನಿನ್ನ ಗೆಜ್ಜೆನಾದಕೆ ಪೈಪೋಟಿ ಕೊಡುವ ಪುಟ್ಟ ಕಿನ್ನರಿಯರು ಬೇಕು... ಕೊನೆಯ ಬಾರಿ ಮೈನೆರೆದು ದಿನವೆಷ್ಟಾಯಿತೆಂದು ಕಣ್ಣು ಮಿಟುಕಿಸಿದ್ದನಲ್ಲ...” ಎಷ್ಟು ಖುಷಿಯಾಯಿತು ಗೊತ್ತಾ... ನಾನಿವಳ ಕಪ್ಪು ಪಾದಗಳ ಬೆಳ್ಳಿ ಸಂಚಲನ... ಇವರೀರ್ವರ ಪ್ರೇಮ ಸಂಕಲನಕೆ ಓಂಕಾರ ಹಾಡಿದ ಅಂತಃಪುರ ಪುರೋಹಿತ... ಮಿಲನದಬ್ಬರದ ನಂತರ ಕಾಲ ಬೆರಳಲ್ಲೇ ನನ್ನೊಡನೆ ಆಡುತ್ತಾ ಇವಳಲ್ಲಿ ಪುಳಕದ ಅಲೆಗಳ ಹೊರಳಿಸುತ್ತಿರುತ್ತಾನಲ್ಲ ಆಗೆಲ್ಲ ನನಗೂ ಒಂಥರಾ ಸಾರ್ಥಕ ರೋಮಾಂಚನವಾಗುತ್ತೆ ಗೊತ್ತಾ...

ಕರಿಮಣಿ – ಕಾಲ್ಗೆಜ್ಜೆಗಳ ಲಜ್ಜೆ ಮರೆತ ಮಾತುಗಳ ಕೇಳುತಿದ್ದ ಕಾಲುಂಗುರ ತನ್ನೊಳಗೊಳಗೇ ನಗುತಿತ್ತು ಇವಳು ಸ್ನಾನದ ಮನೇಲಿ ಕೂಡ ತನ್ನ ಬಿಚ್ಚಿಟ್ಟಿಲ್ಲ ಎಂದು ಬೀಗುತ್ತಾ...

* ಗೆಜ್ಜೆ ಚಿತ್ರ ಅಂತರ್ಜಾಲದಿಂದ ಆಯ್ದದ್ದು...

Saturday, December 14, 2013

ಗೊಂಚಲು - ಒಂದು ಸೊನ್ನೆ ಸೊನ್ನೆ.....

ನೂರರ ಭಾವಗಳು.....
(ನಮನಗಳೊಂದಿಗೆ...)

ಎಮ್ಮೆ, ನಾಯಿ, ಬೆಕ್ಕುಗಳೇ ಅವಳ ನಿಜದ ಸಂಗಾತಿಗಳು - ತನ್ನವರೆಂಬುವ ಮನುಷ್ಯ ಜೀವಿಗಳು ಯಾರೂ ಇಲ್ಲದ ಮನೆಗೆ ತಾನೇ ಮಹಾರಾಣಿ ಎಂಬುದು ಅವಳ ವೇದನೆ... 
ಒಂದಷ್ಟು ಕಾಲ ನಾನಾಳಿದ್ದ, ನನ್ನದಾಗಿದ್ದ ಮನೆಗೆ ನಾನೇ ಇಂದು ಅಥಿತಿ ಎಂಬುವುದು ನನ್ನ ರೋದನೆ...
ಅವಳ ಕಣ್ಣಲ್ಲಿ ಕಣ್ಣಿಟ್ಟರೆ ಎಲ್ಲಿ ಅವಳ ಕಣ್ತುಂಬಿದ್ದು ಕಾಣಸುತ್ತೋ ಅನ್ನೋ ಧಾವಂತದಲ್ಲಿ ಕಣ್ತಪ್ಪಿಸುತ್ತೇನೆ...
ಅವಳ ತುಂಬಿದ ಕಂಗಳು ನನ್ನ ಕಂಗಳನೂ ತುಳುಕಿಸಿಬಿಟ್ಟರೆ ಎಂಬುದು ಭಯ...
ನನ್ನ ಕಂಗಳಲಿ ಹನಿಜಾರಿದ್ದು ಅವಳಿಗೆ ಕಂಡುಬಿಟ್ಟರೆ ಅವಳಿನ್ನೆಂದೂ ನಗಲಾರಳೆಂಬುದು ನಿಜವಾದ ಭಯ...
ಮನದ ಭಾರ ಹನಿಯಾದದ್ದು ಅವಳಿಗರಿವಾಗಬಾರದೆಂದು ನಾನೂ, ನನಗರಿವಾಗಬಾರದೆಂದು ಅವಳೂ ಒಬ್ಬರಿಗೊಬ್ಬರು ಗೊತ್ತಾಗದಂತೆ ಕಣ್ಣೊರೆಸಿಕೊಳ್ಳುತ್ತೇವೆ – ಪ್ರತಿ ವಿದಾಯದಲ್ಲೂ... ಅವಳು ಆಯಿ ನಾನವಳ ಕಂದ...

***

ಬದುಕೊಂದು ನಗೆ ಮಂಟಪ – ನಾನೊಬ್ಬ ವಿದೂಷಕ – ಆದರೆ ನನ್ನೊಳಗೆ ನಗು ಮರೀಚಿಕೆ – ನನ್ನಭಿನಯ ನೋಡಿ, ನನ್ನ ಮಾತ ಕೇಳಿ ಒಂದು ಕ್ಷಣ ನೀವಾದರೂ ನಕ್ಕರೆ ಅಷ್ಟೇ ಸಾರ್ಥಕ್ಯ ಬದುಕಿದ ಈವರೆಗಿನ ಬದುಕಿಗೆ...

***

“ನಗುವೇ ಬದುಕಾಗಲಿ” ಎಂಬುದು ಎಲ್ಲರಿಗೂ ನನ್ನ ಎಂದಿನ ಹಾರೈಕೆ...
ಆದರೆ ನಾ ರೂಢಿಸಿಕೊಂಡ ಬದುಕ ರೀತಿ, ಅತಿವಾಸ್ತವಿಕವಾದ ನನ್ನ ವರ್ತನೆ ಮತ್ತು ನನ್ನ ನೆನಪು ನನ್ನವರ ಕಣ್ಣಲ್ಲಿ ಹನಿ ಮೂಡಿಸುತ್ತೆ ಸದಾ...
ಅಕ್ಷಿಗಳ ಕಕ್ಷೆಯಲಿ ಹನಿದುಂಬಿ ಹರಿಯುವುದು ಅಭಿಮಾನದ ಆತ್ಮಸಂತೋಷದಿಂದಲೂ ಆಗಬಹುದಿತ್ತು; ಆದರದು ಎಲ್ಲ ಸಲವೂ ಅರ್ಥವಾಗದ ವೇದನೆಯಿಂದಲೇ ಆಗಿರುತ್ತೆ...
ಈ ವಿಪರ್ಯಾಸಕ್ಕೆ ನಿಮಗಿರಲಿ ನನಗೇ ನಾನು ಸಮಝಾಯಿಶಿ ಕೊಟ್ಟುಕೊಳ್ಳಲೂ ಆಗದೇ ಸೋತಿದ್ದೇನೆ...

***

ಆ ಕೋಣೆಯ ಎದುರಿನ ಜಗುಲಿಯಲ್ಲಿ ಸಾಲಾಗಿ ಅಷ್ಟೆಲ್ಲ ಜನರಿದ್ದಾರೆ... 
ಯಾರಿಗೂ ಕೆಲಸ ಇಲ್ಲ ಅಲ್ಲಿ... 
ಆದರೂ ಎಲ್ಲರಿಗೂ ಗಡಿಬಿಡಿ... 
ಎಲ್ಲರ ಮನಸಲ್ಲೂ ಬದುಕಿಗಿಂತ ಸಾವೇ ಸನಿಹವಾಗಿ ಬದುಕಿನ ದಿಕ್ಕೇ ಬದಲಾಗುವಂಥದ್ದೇನೋ ಆದೀತೆಂಬ ತೀವ್ರ ದುಗುಡ... 
ನಗು ಕೂಡ ಅಳುವಿನಂತೆ ಕೇಳುತ್ತೆ ಅಲ್ಲಿ... 
ಒಂದಾನುವೇಳೆ ನೀವು ಕೋಣೆಯಿಂದ ನಗುತ್ತ ಆಚೆ ಬಂದಿರಾದರೆ ಸಾವಿನ ನೆರಳ ಹೊತ್ತ ಕಣ್ಣುಗಳ ಸ್ವಾಗತ... 
ಹೌದು ಅದು ದೊಡ್ಡಾಸ್ಪತ್ರೆ... 
ಅಲ್ಲಿ ಹೋದಾಗಲೆಲ್ಲಾ ಬದುಕೂ ಒಂಥರಾ ದೊಡ್ಡಾಸ್ಪತ್ರೆಯೇ ಅಂತನ್ನಿಸುತ್ತೆ...

***

ಮನದ ಭಾವಗಳಿಗೆ ಪದಗಳ ಪೊಣಿಸುತ್ತ ಹೋದೆ... 
ಭಾವಗಳ ಗೊಂಚಲು ನೂರಾಯಿತು... 
ಸಾಧಿಸಿದ್ದೇನೆಂದರೆ :
ಮನಸು ಅಷ್ಟಿಷ್ಟು ಹಗುರಾಯಿತು...
ಅದಕೂ ದೊಡ್ಡ ಸಾಧನೆಯೆಂದರೆ ನಿಮ್ಮಗಳ ಸ್ನೇಹ ಬಂಧವ ದಕ್ಕಿಸಿಕೊಂಡ ಹೆಮ್ಮೆಯಿಂದು ಜೊತೆಯಾಗಿದೆ...
ಒಂದಷ್ಟು ಹೊಸ ಭಾವಗಳು - ಹೊಸ ಬಂಧಗಳು ಈ ಬದುಕ ದಾರಿಗೆ ಜೊತೆಯಾಲು ಈ "ಭಾವಗಳ ಗೊಂಚಲು" ಕಾರಣವಾಯಿತು...
ಏನು ಬರೆದೆ ಎನ್ನುವುದಕಿಂತ ಬರೆದುದರಿಂದ ಏನ ಪಡೆದೆ ಎಂಬುದು ಮುಖ್ಯವಾಗುವ ಹೊತ್ತಿಗೆ ಇದಕಿಂತ ಹೆಚ್ಚಿಗೆ ಇನ್ನೇನು ಬೇಕು ಬದುಕಿಗೆ ಅನ್ನುತ್ತೇನೆ...
ಈ ಬದುಕ ಮೇಲೆ ತುಂಬ ಅಂದರೆ ತುಂಬಾನೇ ಪ್ರೀತಿಯಾಗುತ್ತಿದೆ ಮತ್ತೆ ಮತ್ತೆ...
ನಿಮ್ಮಗಳ ಸ್ನೇಹಕ್ಕೆ - ನೀವು ನೀಡೋ ವಿನಾಕಾರಣದ ಪ್ರೀತಿಗೆ ಈ ಮೂಲಕ ನೂರು ನೂರು ನಮನ ನಿಮಗೆ...
ಪ್ರೀತಿಯಿರಲಿ - ವಿಶ್ವಾಸ ವೃದ್ಧಿಸಲಿ...