Sunday, June 7, 2020

ಗೊಂಚಲು - ಮುನ್ನೂರ್ಮೂವತ್ತೆಂಟು.....

ನೀನೊಂದು ನಗೆಯ ನಶೆ.....

ಬೇಸಿಗೆಯಂಚಿನ ಮಳೆಯಂಥ ಚಂಚಲೇ -
ನಾಭಿಯಿಂದ ಉಕ್ಕಿ ಬಂದ ಬಿಸಿಯುಸಿರು ಒಂಟೊಂಟಿ ಹೊರಳುವ ಪ್ರತಿ ಆವರ್ತಕೂ ನನ್ನ ಒರಟು ಬೆನ್ನ ಮೇಲೆ ನಿನ್ನ ಉಗುರಿನ ಉನ್ಮಾದದ ಒಂದಾದರೂ ಸ್ಪಷ್ಟ ಗುರುತು ಉಳಿಯದೇ ಬದುಕೇ ಮುಗಿದು ಹೋದರೆ ಅಂತ ದಿಗಿಲು ತುಂಬ್ತದೆ...
ಸಿಡಿಸಿಡಿ ಮುನಿಸಿನಂತ ಆಡ್ಮಳೆಯ ಹಾದಿಯಲ್ಲಾದರೂ ಸಿಗಬಾರದೇ - ಮಣ್ಣ ಘಮ, ಸುಖದ ಕಂಪು ಕೂಡಿಯಾಡಲಿ...
ಮುಂಗಾರಿನ ಕನಸಿನ ಹಾದಿಯ ಸಂಜೆಗಳಲಿ ಹಿಡಿಯಷ್ಟು ಕಳ್ಳ ಪ್ರೇಮ ಮುಡಿ ಬಿಚ್ಚಿ ವಿರಹವ ಸುಡುವ ಮಧುರ ಪಾಪಕೆ ಪ್ರಕೃತಿ ನ್ಯಾಯದಲಿ ಮಾಫಿ ಸಿಗಲೆಂದು ಮದನ ಹರಸಿದ್ದಾಗಿದೆ...
ಚೂರೇಚೂರು ಸಹಕರಿಸು - ಮೈಯ್ಯ ಕತ್ತಲ ರೋಮಗಳೆಲ್ಲ ಅಮೃತ ಕುಡಿಯಲಿ...
ಹಿಂಗಾರಿನ ಕಳವಳದ ಮೌನದಂತೆ ನಿನ್ನ ಮೈಕಣಿವೆಗಳಲಿ ಕಳೆದೇ ಹೋಗುವುದೊಂದು ಸಣ್ಣ ಬಯಕೆ...
#ಈ_ಮಳೆ_ಸಾಲಿನ_ಚೂರು_ಪೋಲಿ_ಕನಸು..
↘↙←↔→↘↙

ಸುರತದಿ ಮಿಂದ ಎರಡು ಮತ್ತ ದೇಹಗಳು ಇನ್ನೂ ಮುಗಿಯದ ನಶೆಯಲ್ಲಿ ಹಂಗಂಗೇ ಮೈಯ್ಯೊಣಗಿಸಿಕೊಳ್ಳುವಾಗ ಬೆಳಕಿಗೆ ನಾಚಿಕೆ, ಗಾಳಿಗೆ ಸಿಹಿ ಕಂಪನ...
ಕಾಲನೂ ಮನಸೋತು ನಿಂತಂತೆನಿಸುತಿದ್ದ ಆ ಹೊತ್ತು - ಎರಡು ದಿವ್ಯ ಪ್ರಣಯೋತ್ಸವಗಳ ನಡುವಿನ ಹಗೂರತೆಯ "ಆ ಅಸ್ತವ್ಯಸ್ತ ವಿರಾಮ" ಬಿಡದೇ ನೆನಪಾಗುತಿದೆ...
ಮದವೆತ್ತ ಮೋಹ ಮೈದಣಿದು ಮೈಮರೆಯುವ ಪ್ರತಿ ಬಾರಿಯೂ ಹೊಸತೇ ಆಗಿ ಪರಿಚಯಿಸಿಕೊಳ್ಳೋ ಆ ಬೆತ್ತಲೆ ತಿರುವುಗಳ ಮತ್ತೊಂದು ಭೇಟಿಯ ಕನಸಾಗುತಿದೆ...
#ರತಿರಾಗ_ರಜನಿ...
↘↙←↔→↘↙

ಎಲ್ಲೋ ನೋಡುತ್ತಾ ಅಂಥದ್ದೇನೂ ಇಲ್ಲ ಅನ್ನುವಲ್ಲೇ ಏನನ್ನೋ ಕೆಣಕಿ, ಗೊತ್ತೇ ಆಗದಂಗೆ ಏನೋ ಒಂದಾಗಿ ಹುಟ್ಟಿ ಬಿಡುವ ವಿಚಿತ್ರ ಸಾಧ್ಯತೆ ನೀನು...
#ಮೋಹ...
↘↙←↔→↘↙

ಮಳೆ ಪರಿಚಯಿಸಿದ ಕವಿತೆ ನೀನು - ಹಾಯ್ದಲ್ಲೆಲ್ಲ ನಗೆಯ ಹಸಿರು ಕಾನು...
#ಪ್ರೀತಿ...
↘↙←↔→↘↙

"ಕಾಯುವ ಸುಖ" - ನಿನಗಾಗಿ ಮತ್ತು ನಿನ್ನಿಂದ...
#ಬೇರೆಬೇರೆ_ದಿವ್ಯ_ಮಜಲುಗಳು...
↘↙←↔→↘↙

ಬದುಕಿನ ಚಂದ ಇನಾಮಾಗಿ ಸಾವಿಗಾದರೂ ನಿನ್ನ ತೋಳ ಸುಖಸಖ್ಯ ಸಿಕ್ಕುವಂತಿದ್ದಿದ್ದರೆ......
#ಇರುಳ_ದಹಿಸುವ_ಕನಸು_ನೀನು...
↘↙←↔→↘↙

ನಾ ನಿತ್ಯ ಅಲೆಯುವ ಅಪರಿಚಿತ ದಾರಿ...
#ನಿನ್ನ_ಪ್ರೇಮ...

ನಿನ್ನ ಅಬೋಧ ಬಿಡುಗಣ್ಣು ನನ್ನ ಎದೆ ನೆಲವ ಹೂಡಿ ಬೊಗಸೆ ಬೊಗಸೆ ಕನಸ ಬೀಜವ ಬಿತ್ತುವ ಬೆಡಗನ್ನು ಬೆಳಕಿಗೆ ಯಾವ ಮಾತಲ್ಲಿ ಹೇಗೆ ಹೇಳಲಿ ಸಖೀ...
#ನೀನೊಂದು_ನಗೆಯ_ನಶೆ...

ಕಳೆದೋಗಬೇಕು ನಿನ್ನೊಂದಿಗೆ - ಕಳೆದೇ ಹೋಗಬೇಕು ನಿನ್ನಲ್ಲಿ - ಘಮ್ಮೆಂದು ಝುಮ್ಮೆನಿಸೋ ನಿನ್ನಂದದ ಬಳಸು ತಿರುವುಗಳ ತಿಳಿಗತ್ತಲ ಅಪರಿಚಿತ ದಾರಿಯಲಿ...
#ಪರವಶ...

ಸ್ವಪ್ನದಲ್ಲೂ ಸಭ್ಯನಾಗೋ ಪಾಪ ಏತಕೆ - ಹರೆಯವನ್ನೂ ಒಂಟಿ ಕೊಲ್ಲಲೇಕೇ ಗೋಪಿಕೆ...
#ಬೃಂಗದ_ಬೃಂದಾವನದ_ಹಸಿವು...

ಸಾವಿನಷ್ಟೆ ಸನಿಹ ನೀನು, ಅಷ್ಟೇ ದೂರವೂ...
#ಕನಸು...

ಆ ಹಾದಿಯ ಪ್ರತಿ ಸೋಲೂ ಉತ್ಕಟ ಜೀವೋದ್ರೇಕದಲ್ಲಿನ ಭಾವಸಮಾಧಿಗೆ ಸಾಕ್ಷಿ ಹೇಳುತ್ತದೆ - ನಿನ್ನ ತೋಳಲ್ಲಿ ಕರಗಿ ಕಳೆದೋದಷ್ಟೂ ಸುಖದ ಕಣಜ ತುಂಬಿ ಬರುತ್ತದೆ...
#ಪ್ರೇಮ_ಕಾಮ...

ನಿನ್ನ ಚಂದವೆಂದರೆ ನನ್ನ ಕಣ್ಣು ತೋರುವ ನಿನ್ನ ಚಿತ್ರವಷ್ಟೇ ಅಲ್ಲ - ಅದು ಎನ್ನೆದೆಯು ತುಂಬಿಕೊಂಡು ನಿನ್ನ  ಮುಟ್ಟುವ ಭಾವಗೀತೆ...
#ಕರಿಮೋಡ...
↘↙←↔→↘↙

ತನ್ನದೆಂದು ತಾ ಆಯ್ದುಕೊಂಡ ಜೀವ ತನ್ನಂದಕೆ ಕಣ್ಣರಳಿಸಲಿ ಎಂಬ ಒಳ ಆಸೆಯಲಿ ತನ್ನ ತಾ ಅಲಂಕರಿಸಿಕೊಂಡು ಸುತ್ತ ಸುಳಿಯುವ ಹೆಣ್ತನಕೆ - ಕಣ್ಣರಳಿದರೆ ಸುಳ್ಳು ಬಿಂಕದಲಿ ಸೊಂಟ ತಿರುವಿ, ಮೂಗು ಮುರಿದು, ಎದೆ ಬಿರಿಯೆ ಗೆಲುವ ಸಂಭ್ರಮಿಸೋ ಮರಳುತನಕೆ - ತನಗಾಗಿ ಕಣ್ಣರಳುವ ಹಂಬಲು ಇವನಲಿನ್ನೂ ಜೀವಂತವಿದೆಯಾ ಎಂದು ಮತ್ತೆ ಮತ್ತೆ ಪರೀಕ್ಷೆಗೊಳಪಡಿಸುತ್ತಲೇ ಇರುವ ಮಗುತನಕೆ - ತನ್ನನು ತಾನು ಹಚ್ಚಿಕೊಂಡಷ್ಟೇ ಅವನೂ ತನ್ನ ನೆಚ್ಚಿಕೊಳಲೆಂದು ಬಯಸೋ ಅಖಂಡ ಭೋಳೆತನಕೆ ಅವಳೆಂದು ಹೆಸರು...
ಗಂಡು ಬೇಕೂಫ ನಾನು ಅವಳ ಇಂತೆಲ್ಲಾ ಸಣ್ಣ ಸಣ್ಣ ಹಿಗ್ಗಿನ ಖಯಾಲಿಗಳ ತುಂಟು ನೇಹದಲಿ ಪಾಸಾಗುತಿದ್ದಷ್ಟೂ ಕಾಲ ಬದುಕು ಚಂದ ಚಂದ ಅವಳಿಂದ...
#ಅವಳೆಂದರೇ_ಮಾಧುರ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ತೇಳು.....

ಸನ್ನಿಧಾನ.....

ಅನ್ನ ಕಲೆಸಿ ತುತ್ತನಿಟ್ಟು - ಊಟ ಚೆಲ್ಲಿದಾಗ ಪೆಟ್ಟು ಕೊಟ್ಟು - ಹೆಳವನ ಕಣ್ಣಲ್ಲೂ ರಾಜಕುಮಾರನ ಕನಸ ನೆಟ್ಟು - ಕಡಗೋಲಲಿ ಬದುಕ ಕಡೆಯುತಾಳೆ...
ನಾ ಸೋತು ಮಂಡಿಯೂರಿದಾಗಲೆಲ್ಲ ಭರವಸೆಯ ಹೊಸ ಲಾಲಿ ಕಟ್ಟುವವಳು - ಕರುಳ ಬಳ್ಳಿಯ ಹಿಳ್ಳು ನಾ ಹಸಿವೂ ಅಂದ್ರೆ ತಾ ಸೋತಂತೆ ಕಣ್ತುಂಬಿ ಕನಲುವಳು; "ಉದರದಲ್ಲಿ ರುದಯ ಸಾಕಿಕೊಂಡವಳು..."
ಬೆವರು ಅನ್ನವಾಗುವ ಕಥೆಯಲ್ಲಿ ಬದುಕಿನ ಗೆಲುವಿನ ನಂಬಿಕೆ ಮಡಗಿದವಳು - ಸೆರಗಿನಲ್ಲಿ ಕಣ್ಹನಿಯ ಸಾಗರವ ಬಂಧಿಸಿಟ್ಟವಳು - ಈ ಬದುಕಿಗಿರುವ ಮೊದಲ ಹಾಗೂ ಕೊನೇಯ ಏಕಮಾತ್ರ ಉದ್ದೇಶ ಅವಳು...
#ಆಯಿ...

"ಕಂದನ ಹಸಿವನು ನೆನೆದು ಗೊಲ್ಲತಿ ಕೋಟೆಯ ಹಾರಿದ ಸಾಹಸಗಾಥೆ - ಹಡೆದಬ್ಬೆಯ ಕರುಳ ಕಥೆ..."
#ಎದೆಹಾಲಿನ_ಪದ...

ಬದುಕು ಕೈಸೋತು ಕಣ್ಣ ಮಳೆ ಮಣ್ಣ ಸೇರುವಂತಾದಾಗಲೆಲ್ಲ ಬೊಗಸೆ ಕಾರುಣ್ಯದ ಮಡಿಲ ಹರವಿ ರಟ್ಟೆಗೆ ಮತ್ತೆ ಮತ್ತೆ ನಗುವ ಬಲ ತುಂಬೋ ವಿನಾಕಾರಣದ ಮಮತೆಯ ಸಾಟಿ ಮನಸುಗಳೂ ಅಮ್ಮನದೇ ಪಡಿಯಚ್ಚು...
#ಪ್ರೀತಿ_ಜಗದಬ್ಬೆ...

"ಯಶೋಧೆ ಊಡಿದ ಅಮೃತ ಲೋಕದ ವಿಷವ ತೊಳೆದ ಕಥೆ - ಕೃಷ್ಣ..."
#ಬೆಣ್ಣೆ_ತೇಲಿದ_ಹದ...

ಜಗದೆಲ್ಲ ದೇವಕಿ, ಯಶೋಧೆಯರಿಗೆ ಕೆನ್ನೆಗೆ ಕೆನ್ನೆ ತಾಕಿಸಿ ಮನವ ತಟ್ಟಿ ತಟ್ಟಿ ಮಾಡಿ ಹೇಳಬೇಕಿದೆ ನಾನು - ಪ್ರತಿ ದಿನವೂ ನಿಮ್ಮದೇ, ನಿಮಗೆ ನನ್ನದೂ ಚೂರು ಪ್ರೀತಿ ಪ್ರೀತಿ ಮತ್ತು ಪ್ರೀತಿ ಅಷ್ಟೇ...
↺⇋⇈⇌↻

ನೀನಲ್ಲಿ ಅಳು ನುಂಗಿ ನಕ್ಕಾಗಲೆಲ್ಲ ನಾನಿಲ್ಲಿ ಇಷ್ಟಿಷ್ಟೇ ಕೊಳೆಯುತ್ತೇನೆ - ಆದರೂ, ತಲೆಗೇರಿದ ಬದುಕಿನ ನಶೆಯಲ್ಲಿ ನಿನ್ನಿಂದ ಇನ್ನಷ್ಟು ದೂರ ನಿಲ್ಲುತ್ತೇನೆ - ಮತ್ತು ಒಳಗಿನ ಸ್ವಾರ್ಥಕ್ಕೆ ಕಾಲನ ಹೆಸರಿಟ್ಟು ಕೈತೊಳೆದುಕೊಳ್ತೇನೆ - ಸಾವಿನ ಛತ್ರದಡಿಯಲಿ ಎಲ್ಲವೂ ಒಂದಿನ ಮುಗಿಯುತ್ತದೆ, ಮುಗಿಯಲೇಬೇಕು ಎಂಬ ರಣ ವೇದಾಂತ ಇಬ್ಬರನೂ ಕಾಯುತ್ತದೆ - ಹಾಗೇ ಇದೆಲ್ಲ ನಾಳೆಗೂ ಮುಂದುವರಿಯುತ್ತದೆ ಇಂದಿನಂತೆ...
ಒಣ ಒಣ ನಗೆಯೊಂದನು ಸಾಕಲು ಅಪರಂಪಾರ ಗುದ್ದಾಟ - ನೀನಲ್ಲಿ, ನಾನಿಲ್ಲಿ...
ಸಜೀವ ಶ್ರದ್ಧಾಂಜಲಿ...
ಗೊತ್ತು, ನಾಳೆಯೆಂಬೋದು ಕನಸು - ಆದರೂ ನಿನ್ನೆಯು ಇಂದನ್ನು ಕಂಡ ಧೈರ್ಯದಲಿ ನಿದ್ದೆಗೆ ಕರೆಯುತ್ತೆ ಮನಸು - ಅಪರಾತ್ರೀಲಿ ಆ ನಾಳಿನ ಸ್ವಪ್ನಕೆ ಬೆಚ್ಚಿ ಎಚ್ಚರಾದರೆ ಮತ್ತೆ ನಿನ್ನನೇ ನೆನೆಯುತ್ತೇನೆ - ಕಾರಣ, ನಿನ್ನ ಅಳು ನುಂಗಿದ ನಗುವಿದೆಯಲ್ಲ ಅದರಲ್ಲಿ ರಕ್ಕಸ ಬಲವಿದೆ ಉಳಿದ ಬದುಕಿನದು...
ಉಸಿರ ಭಾರದ ಭರವಸೆ...
#ವಿಪರೀತಗಳು...
⇋⇈⇌↻

ಮನವು ಹದಗೆಟ್ಟು ಹರತಾಳಕೆ ಕುಂತಾಗಲೂ, ಖುಷಿಯು ಕುಪ್ಪಳಿಸಿ ಕುಣಿದಾಡುವಾಗಲೂ ನನ್ನ ನಾ ಸಂಭಾಳಿಸಿಕೊಳ್ಳಲು ಏಕಾಂತವೆಂಬೋದು ದಿವ್ಯ ಸನ್ನಿಧಿ...
ಮತ್ತು
ನನ್ನ ಏಕಾಂತವೆಂದರೆ ನೀ ಕುಚ್ಚು ತಟ್ಟುವ ಲಾಲಿಯ ಗುಂಜಾರವದ ಅನುಭಾವ ಸಿದ್ಧಿ...
#ಸನ್ನಿಧಾನ...

ನಿನ್ನೆಗಳ ಹಳಿಯಬೇಡಿ - ಅದು ಅವಳಿದ್ದ ಹಾದಿ...
ಆ ನೆನಪ ಜೀವಂತ ಚಿತ್ರಗಳನೆಲ್ಲ ಎದೆ ಗೋಡೆಗೆ ಅಂಟಿಸಿಕೊಂಡು ಅಲ್ಲೇ ಎದುರು ಕೂತು ಕಳೆದೋಗಿದ್ದೇನೆ...
ದಯವಿಟ್ಟು ಹುಡುಕಬೇಡಿ ನಾ ಅವಳ ಮಡಿಲಲ್ಲಿದ್ದೇನೆ...
#ನೆನಪು_ಬೆಚ್ಚಾನೆ_ಬೆಳಕು...
#ಅವಳೆಂದರೆ_ಹಾಯ್ದುಬಂದ_ತಂಪುಹಾದಿ...
⇋⇈⇌↻

ದ್ಯಾವ್ ಭಟ್ರ ಪಂಚಾಂಗದಲ್ಲಿ ಮುಹೂರ್ತವೇ ಇಲ್ಲ...
ಇನ್ನು ಒಕ್ಕಣ್ಣ ಶುಕ್ರಾಚಾರಿ ಶುಭ ನುಡಿದರೆ ರಕ್ಕಸ ಗಣಗಳು ಮೆರೀತಾವೆ...
ಒಟ್ನಲ್ಲಿ ನಿನ್ನ ಸೇರುವ ಹಂಬಲಿನ ಹಾದಿಯಲಿ ಅಂಬಲಿಗೂ ತತ್ವಾರ ಎಂಬ ಸ್ಥಿತಿ...
ಸಾಗರನ ಕನಸುವ ಕಾನನದ ಒರತೆಯ ಹಿಳ್ಳುಗಳಿಗೆ ಗ್ರೀಷ್ಮದಲೂ ಉಕ್ಕುವ ಬಲ ಬೇಕು...
ಹೆಳವ ನಾನು, ಕೂತಲ್ಲೇ ನಿನ್ನ ಕನವರಿಸುತ್ತೇನೆ; ಮತ್ತದನು ಕನಸೂ ಅಂತ ಕರೀತೇನೆ...
ಅನಾಥ ಪ್ರೇತವೊಂದು ಇರುಳ ಉದ್ದ ಅಳೆಯುವಂತೆ ನಿನ್ನ ಕನವರಿಸೋ ನನ್ನ ಕನಸು...
#ಬರಗೆಟ್ಟ_ಬದುಕಿಗೆ_ಮೌನ_ಸದ್ಗತಿ...
⇋⇈⇌↻

ಸಂಜೆ ಮಳೆ ಸಣ್ಣಗೆ ನೆಲದ ಬಾಗಿಲು ಬಡೀತಿದೆ - ಮನಮನೆಯ ಕಿಡಕಿಗೆ ನೆನಪುಗಳ ಶಿಗ್ರಣಿ ಹೊಡೀತಿದೆ...
ಇಂದು ನಾಳೆಗಳಲ್ಲಿ ನೀನಿಲ್ಲದ ಭಾರಕ್ಕೆ ಭಾವದ ಹೆಗಲು ಕುಸಿಯುವಾಗ ಎದೆ ವಾಡೆಯ ಕಿಬ್ಬಿಯಲಿ ಕಣ್ಣ ಹನಿ ಕಾಲ್ಚಾಚಿ ಕೂರುತ್ತದೆ...
ಶರಧಿಯ ಬಯಲಲ್ಲಿ ಕಳೆದೋದ ಹಾಯಿಲ್ಲದ ದೋಣಿಯ ದಡದಾಸೆಗೆ ನಕ್ಷತ್ರವೇ ತುಸು ಭರವಸೆ...
ಇಲ್ಲಿಂದ ಎದ್ದು ಹೋದ ಎದೆಯ ಪ್ರೀತಿ ಕಿಡಿಗಳೆಲ್ಲ ನಕ್ಷತ್ರವೇ ಆಗುವುದಂತೆ - ಅಮ್ಮ ಹೇಳಿದ್ದು...
ಮಳೆ ನಿಂತ ಆಗಸವ ತಲೆ ಎತ್ತಿ ನೋಡಿದ್ರೆ ಎಷ್ಟೆಲ್ಲಾ ಜನ...!!!
ಕವಳಾ ಜಗಿಯವ್ವು, ಕಂಬ್ಳಿ ಕರೆ ಕಟ್ಟವ್ವು, ತುಂಬು ಮುಡಿ ಕಟ್ಟತಾ ರಾಮಾ ಶಿವಾ ಹೇಳವ್ವು...
ಗಗನದ ಅಸೀಮ ನೀಲಿಯ ಫಳಫಳ ಅಲಂಕಾರ ದೀಪಗಳು - ಇಲ್ಲಿನಂತೆಯೇ ಅಲ್ಲೂ ಹೊಳೆವ, ಕಣ್ಣು ಹಾಯದ ದೂರ ಸಾಗಿಯೂ ಎದೆಯ ಬೆಸಗೊಂಡು ಬಲ ತುಂಬೋ ಮಾಯಕಾರರು...
ಕನಸೇ -
ನೀನು ನಕ್ಷತ್ರವಾಗಿ ದಿನವೆಷ್ಟಾಯಿತೋ - ಲೆಕ್ಕ ತಪ್ಪಿದ್ದೇನೆ ಮತ್ತು ಬೇಕಂತಲೇ ಲೆಕ್ಕ ಮರೆಯುತ್ತೇನೆ...
ಸಾವೇ -
ನೀ ಆಡಿ ಕಳೆಗಟ್ಟಿಸಿ ಕಳಚಿಕೊಂಡು ಹೋದ ಪಾತ್ರಗಳೆಲ್ಲ ಈಗಿಲ್ಲಿ ಈ ಎದೆಯ ಹೊಳೆಯಲ್ಲಿ ಭಾವದ ಮೀನುಗಳಾಗಿ ಈಜಿ ಈಜಿ...
ಉಫ್,
"ನೆನಪು ಒಂದೇ ಪೆಟ್ಟಿಗೆ ಹಿತ ಹಾಗೂ ಸಂಕಟ..."
#ಪ್ರೀತಿ...
⇋⇈⇌↻

ಅಪರಂಪಾರ ಮಳೆಯಲ್ಲಿ ನೆಂದು ಬಂದಾಗಲೆಲ್ಲಾ ತಲೆ ಒರೆಸಲು ನೀನಿಲ್ಲ ಅಂಬುದು ಮಳೆಯ ಖುಷಿಯೆಲ್ಲ ಮಳೆಯಲೇ ತೇಲಿಹೋದಂತೆ ಎದೆಯಲೊಂದು ಪ್ರೇತಕಳೆ ತುಂಬುತ್ತೆ...
#ಮಳೆಯಲ್ಲಿ_ಕಣ್ಣು_ತೊಳೆದುಕೊಂಬುವವನ_ಅನಾಥ_ಕಥೆ...
⇋⇈⇌↻

ಸಣ್ಣವರನು ದೊಡ್ಡವರಾಗಿ ಪರಿಚಯಿಸಿ ಹರಡುವ ನಗೆ - ದೊಡ್ಡವರು ದೊಡ್ಡವರಾಗಿ ಬೆಳೆದು ನಿಲ್ಲುವ ಬಗೆಯೇ ಹಾಗೆ...
#ಪ್ರೀತಿಯಲ್ಲಿ_ಹಿರೀಕರು...

ಹಂಚಿಕೊಂಡದ್ದಷ್ಟೇ ನನ್ನ ಆಸ್ತಿ...
#ಪ್ರೀತಿ...

ನಗೆಯು ಆತ್ಮವ ತಾಕುವ ಬಲು ಚಂದಾನೆ ಬೆರಗು...
#ಬೆಸುಗೆ...

"ಕನ್ನಡವೆಂದರೆ ಎನಗೆ ಎನ್ನೆದೆಯ ನಗುವಿನ ಭಾಷೆ - ಆಯಿಯ ಸೆರಗಿನ ಘಮದ ನೆನಪು ಲಾಲಿಯಾಗುವ ಭಾಷೆ - ಅವಳೆಂಬ ಅವಳ ಕನಸೂ ಮಾತಾಗುವ ಭಾಷೆ..."

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮುನ್ನೂರ್ಮೂವತ್ತಾರು.....

ಮೋಡಗಟ್ಟುವ ಮದ.....

ಮಿಶ್ರೀ ಜೇನಿನ ಅಚ್ಚಿನಂಥವಳೇ -
"ಎದೆಗಂಟಿಸಿಕೊಂಡ ಅಮಲು ನೀನು..."
ನೀನೆಂಬ ಪುಟ್ಟ ಆಕಾರ - ಆ ಬೆಟ್ಟ ಕಣಿವೆಯ ವಯ್ಯಾರ...
ನೀ ಕಣ್ಣ ಮಂಚಕೆ ಕಟ್ಟಿ ಹಾಕಿದ ಕನಸ ಕೂಸಿನ ಸಿಂಗಾರ...
ಹರಿವ ತೊರೆಯಾಗಿ ತೋಳ ಬಳಸಿ ನಿನ್ನೊಳಿಂಗುವ ಹಂಬಲಕೆ - 
ನಿದಿರಮ್ಮನ ತೊಟ್ಟಿಲಲಿ ಜೋಡಿ ಮಲಗಿದ ಸ್ವಪ್ನ ತೂಗುತಿದೆ ಮತ್ತೆ ಮತ್ತೆ...
ಬಿಡು, ಈ ಇರುಳ ಬಿಸಿ ಕನಸಾದರೂ ನಿನ್ನಲ್ಲಿ ನನ್ನ ಸೇರಿಸಲಿ ಸುಖ ನಿಷೇಕಕೆ...
#ಬಲು_ಪೋಲಿ_ಮೋಹಿ_ನಾನು...
↯↭↯↻

ಕಳ್ಳ (ಪರೋಕ್ಷ) ಮುದ್ದಿನಲಿ ಮುಸ್ಸಂಜೆಯ ಬೇಲಿ ಮುರಿದು ನನ್ನೆಲ್ಲಾ ಇರುಳ ಕುಲವ ಕಾಡುತೀಯೆ...
"ತೀರದ ಹಸಿವು ನೀನು - ಆರದ ಎದೆ ಬೆಂಕಿ..."
ನೀ ನನ್ನ ಊರು ಪೀಠವನೇರಿ, ಪ್ರೇಮ ಬಂಧದಿ ಬಳಸಿ ಸ್ವರ್ಗ ಸೀಮೆಯ ದಾರಿ ತೋರುವ ಕನಸೀಗೆ ಇರುಳ ಚಾದರದೊಳಗೆ ಉಸಿರು ಬಿಸಿಯೇರಿ ಬುಸುಗುಡುತಿದೆ - ಮೈಯ್ಯ ಕಾಮನ ತಿರುವುಗಳಲ್ಲಿ ಬೆವರು ಹಬೆಯಾಡುತಿದೆ...
#ಮೋಡಗಟ್ಟುವ_ಮದ...

ತೊಡೆಯ ಇಳಿಜಾರಿಗೆ ಮೀಸೆ ಚುಚ್ಚಿದರೆ ಕುಚಾಗ್ರದಲಿ ಉನ್ಮಾದದ ರಣ ಬೆಂಕಿ ಹೊರಳು...
ಎದೆ ಭಾರದ ಮೇಲಣ ಹಸ್ತ ಮುದ್ರೆಗೆ ನಡು ಕಣಿವೆಯಲಿ ರಸರಾಗ ಅಬ್ಬರ...
ಪೌರುಷದ ಸೊಕ್ಕಿನ ಭಣಿತಕ್ಕೆ ಕಾದು ಕೈನೀಡಿ ಪುರ ಪ್ರವೇಶದ ಹಾದಿ ತೋರಿ ಕರೆದರೆ ಒಡಲ ತುಂಬಾ ಸುಖದ ಜೀವರಸ ಹೊಳೆ...
ಪಡೆದುಕೊಳ್ಳುವ ಅವಕಾಶ ಮತ್ತು ಕಳಕೊಳ್ಳುವ ಸುಖ..‌.
#ನೆಲ_ಮೀಯುವ_ಮೋದ...
↯↭↯↻

ಆಟ ಮುಗಿಸಿದ ಗಂಡು ಕುದುರೆಗೆ ಉಸಿರ ತಹತಹ ಇಳಿವ ಮುಂಚೆಯೇ ನಿದ್ದೆ ಮರುಳಂತೆ...
ಆದರೆ ನೀನೆಂಬೋ ನೀನು ಕರಡಿ ಪ್ರೀತಿಯ ಹುಡುಗ - ನಿನ್ನ ಸುಖದ ಸುಸ್ತಿನ ಗಡದ್ದು ನಿದ್ದೆಯನೂ ಚುಪ್ ಅಂದು ಎವೆ ಮುಚ್ಚಿದ ಕಣ್ಣಲ್ಲೇ ಗದರಿ ಮಂಚದ ಅಂಚಿಗೇ ನಿಲ್ಲಿಸಿ, ನಂಗೆ ತಟ್ಟಿ ತಟ್ಟಿ ಮಾಡಿ ಆತ್ಮಸ್ಪರ್ಶದ ಲಾಲಿ ಹಾಡಿ ನಿದಿರಮ್ಮನ ಜೋಲಿಯಲಿ ಕೂರಿಸಿ ವಿಲಾಸದಲಿ ಮತ್ತೆ ಸುಖದ ಕನಸಿನೂರ ಬಾಗಿಲಿಗೊಯ್ಯುತ್ತೀಯಾ...
ಈಗ -
ಮತ್ತೆ ಮತ್ತೆ ಹಣ್ಣಾಗುತ್ತೇನೆ; ನಿನ್ನ ಪೋಲಿಪೋಲಿ ಕೈಂಕರ್ಯಗಳ ತೋಳಲ್ಲಿ - ಮತ್ತೆ ಮತ್ತೆ ಹೆಣ್ಣಾಗುತ್ತೇನೆ; ನೀ ನನ್ನ ಕಾಳಜಿ ಮಾಡುವ ಸಹಜ ಸೌಂದರ್ಯದಲ್ಲಿ...
#ತೋಳತೊಟ್ಟಿಲ_ಪ್ರೇಮ...
↯↭↯↻

ಮಹಾನಗರಗಳ ಬೀದಿಗಳ ಅಪರಿಚಿತತೆ ಕೊಡುವ ಧೈರ್ಯದಲಿ ಪ್ರೇಮವು ಜೋಡಿ ಜೋಡಿ ತೋಳು ತುಟಿಗಳ ಬಿಗಿದು ಸವಿದು ಸ್ವಚ್ಛಂದವಾಗಿ ಅರಳುತ್ತದೆ - ಪ್ರತೀ ತಿರುವಿಗೂ ಅಂಟುವ ಹರೆಯದ ಸುಖ ಸ್ಪರ್ಶ...
#ಬಾಲ್ಕನಿ_ನೋಟ...

ಈ ಇರುಳು ಹುಚ್ಚೆದ್ದರೆ ನೀನೇ ಕಾರಣ...
ಅಂದೆಂದೋ ಆ ಸಂಜೆ ಮಬ್ಬನು ಹಬ್ಬಿ, ಕಾಡು ಹಿಂದಾಗಿ ಊರು ಮುಂದಾಗೋ ಮೂರೂವರೆ ಗಜ ಮುಂಚೆ ನಿರ್ಜನ ಕಾಲುಹಾದಿ ಕವಲಾಗುವಲ್ಲಿ ಪಾದಪೀಠವನೇರಿ ನಿಂದು, ಬೆರಳ ಕಲೆಸಿ ಮುಂದಲೆಯ ಎಳೆದು, ತೋಳ ಬಳ್ಳಿಯಲಿ ಕೊರಳ ಬಳಸಿ ಕಾಡು ಲವಂಗದ ಚಿಗುರೆಲೆಯಂಥ ನಿನ್ನ ತುಟಿಯಿಂದ ಚೂರೂ ನಾಜೂಕಿಲ್ಲದ ಈ ಒರಟು ತುಟಿಗೆ ದಾಟಿಸಿದ ಚುಂಬನ ಸಿಹಿಯ ಮತ್ತ ಕಡಲು ಈಗಿಲ್ಲಿ ಮೈಯ್ಯೆಲ್ಲ ಅಲೆಯಾಗಿ ಅಬ್ಬರಿಸಿ ಮೆರೆಯುತಿದೆ...
ಮನಸೀಗ ನಿನ್ನ ಬೆತ್ತಾಲೆ ಬೆಳಕ ಅನಾಯಾಸ ತುಂಬಿಕೊಂಡ ನಿನ್ನಂತಃಪುರದ ಕನ್ನಡಿಯನು ಅಸೂಯೆಯಲಿ ಕಳ್ಳ ಬೆಕ್ಕಾಗಿ ಪರಚುತ್ತಿದೆ...
ನಿನ್ನ ನೆನಪಿನೊಲೆಯ ಮೇಲೆ ಮಾತಿಗೊಗ್ಗದ ಹಿತವಾದ ಮುನಿಸೊಂದು ಬೇಯುತಿದೆ - ನರಕಸುಖ ಹಬೆಯಾಡುತಿದೆ...
#ಮೈಗಂಟಿದ_ಹೆಣ್ಗಮದ_ನಶೆ...
*** ಬಾಲ್ಕನಿಯಿಂದ ಕಂಡದ್ದು ಕೋಣೆ ಕತ್ತಲ ಕೆಣಕಿದಾಗ...
↯↭↯↻

ಏನ್ಗೊತ್ತಾ -
ಬೆರಳ ಪದವಿನ್ಯಾಸಕ್ಕೆ ವಸ್ತ್ರಗಳು ಶರಣಾಗಿ ಮೈಯ್ಯ ಕಕ್ಷೆಯಿಂದ ಸಲೀಸು ಕಳಚಿಕೊಳ್ಳಬೇಕು...
ನಾಲಿಗೆಯ ಮೊನೆಯಿಂದ ನಿನ್ನ ಬೆತ್ತಲನು ಉದ್ದಕ್ಕೆ ಎರಡಾಗಿ ಸೀಳಬೇಕು...
ಉಸಿರ ಸುಳಿಯಲ್ಲಿ ಮೈಯ್ಯ ಎಲ್ಲ ಎಲ್ಲಾ ತಿರುವುಗಳ ಬೆಚ್ಚಗೆ ಬಳಸಬೇಕು...
ಬೆವರ ಸಣ್ಣ ಹನಿಗಳ ಕೂಡಿಸಿ ಹೊಕ್ಕುಳ ದಂಡೆಯ ಸುತ್ತ ಜೋಡಿ ಹೆಸರು ಬರೆಯಬೇಕು...
ತೀಡಿಯಾಡುವ ಮತ್ತ ಪಾದಗಳಲಿ ಸ್ವರ್ಗವ ಅಳೆಯುವ ಆಟಕ್ಕೆ ಕೋಣೆಯ ಕುರುಡುದೀಪವೇ ನಾಚಬೇಕು...
ಆ ಮಧುರ ಪಾಪಕ್ಕೆ ನಮ್ಮೆಲ್ಲಾ ರಾತ್ರಿಗಳ ಬರೆದು ಕೊಡಬೇಕು...
ಹೊಳೆವ ಕಾಯದ ತಿಳಿಗತ್ತಲ ಸೆರಗುಗಳಲಿ ಒತ್ತಾಗಿ ಉಳಿದ ಕೆಂಪು, ಕಂದು ಕಲೆಗಳು ಹಗಲಾಗೆ ಮಜ್ಜನ ಮನೆಯ ಕನ್ನಡಿಗೆ ಕಳೆದಿರುಳ ಪ್ರಣಯೋನ್ಮಾದದ ಆಳ ಅಗಲಗಳ ಸಾಕ್ಷಿ ಹೇಳಬೇಕು...
ಕನ್ನಡಿಯ ಕಣ್ಮುಚ್ಚಿ ರೋಮಾಂಚ ಸವಿಯುವ ಮಿಡಿತದಲೇ ಹಸಿ ಬಿಸಿ ಮೈಮನಸು ಹೊಸ ಆಟಕೆ ವೇದಿಕೆ ಹಾಗೂ ವೇಷ ಕಟ್ಟಬೇಕು...
ಇಷ್ಟೇ ಇಷ್ಟಿಷ್ಟೇ ಮೋದಪ್ರಮೋದಕೆ ನಿನ್ನ ಚೂರೇಚೂರು ಸಹಕಾರ ಬೇಕು...
#ಸಣ್ಣ_ಹಸಿವು...
↯↭↯↻

ಹಿತ್ತಲ ಬಾಗಿಲ ನೀರವ ಸಂಜೆಗಳಿಗೆ ನಿನ್ನಂಥವನೊಬ್ಬನ ಅಕ್ಕರೆಯ ಭುಜ ಬೇಕಿತ್ತು - ನಿನ್ನ ಒರಟು ಬೆರಳುಗಳ ನೆಟಿಗೆ ಮುರಿಯಲು ಹೆಣಗುತ್ತಾ ವಟವಟ ಮಾತಾಗಿ ನನ್ನ ನಾ ಬರಿದು ಮಾಡಿಕೊಳ್ಳಬೇಕಿತ್ತು...
ಮೋಡ ಮಳೆಯಾಗಲು ತಂಗಾಳಿ ಸ್ಪರ್ಶ ಬೇಕಂತೆ, ಎದೆ ಕಸರೆಲ್ಲ ಶೇಷವುಳಿಯದಂಗೆ ಕರಗಿ ಹನಿಯಾಗಲು ನಂದೆನಿಸಿ ತಂಪೀಯೋ ಜೋಗಿ ಹೆಗಲು ಬೇಕು ಕಾಣಾ...
ಮಲ್ಲಿಗೆ ಬಳ್ಳಿಯ ಹೊಸ ಹಿಳ್ಳಿನ ವಸಂತನ ಕನಸಿಗೆ ಆಸರೆಯಾಗಿ ಅಪ್ಪ ಅಣಿ ಮಾಡಿ ಕೊಡುತಿದ್ದ ಚಪ್ಪರದ ನೆನಪಿಗೆ ಸಂಜೆಗಳ ಕಂಗಳು ತುಂಬುತ್ತವೆ - ಅವನ ಪೆರೆಗೊನ್ ಹವಾಯಿ ಚಪ್ಪಲಿಯ ಪಟಪಟ ಸದ್ದು ಕಿವಿಯಲ್ಲಿ ಅವನ ಕೂಸೇ ಎಂಬ ಕೂಗಿನಷ್ಟೇ ಆಪ್ತವಾಗಿ ದಾಖಲಾಗಿಬಿಟ್ಟಿದೆ...
ಕೆಂಡ ಸಂಪಿಗೆ ಪಕಳೆ ಹೆಕ್ಕುವಾಗ ಮೊದಮೊದಲಾಗಿ ನನ್ನ ಹೆಣ್ತನವ ಗುರುತಿಸಿ ಶಿಳ್ಳೆ ಹೊಡೆದ ಅಚ್ಚೆಮನೆ ಕರಿ ನಾಣಿ ಸುಖಾಸುಮ್ಮನೆ ನೆನಪಾಗಿ ಈಗಲೂ ಮನಸು ನಾಚಿದಂತೆ ಭಾಸ...
ಕಪ್ಪೆ ಉಚ್ಚೆ ಕಾಲನು ಸೋಕಿ ಬಾವಿ ಕಟ್ಟೆಯ ಏಕಾಂತ ಚದುರಿದಲ್ಲಿ ಕುಪ್ಪಸ ಬಿಗಿಯಾಗಿ ಮಳೆಯ ಹಗಲಿಗೆ ಸೀತಾದಂಡೆ ಮುಡಿಸಿದ ಮೊದಲ ಪ್ರೇಮದ ನೆನಹಿನ ಹಾಗೂ ಬಿಸಿಲ ಮುಸ್ಸಂಜೆಗೆ ಜೋಕಾಲಿ ಜೀಕಿದ ನಿನ್ನಯ ಆಸೆ ಕಣ್ಣ ಕನಸಿನ ಕೆನೆಯಿರುತ್ತದೆ...
ಆಳುವವನು ರಾತ್ರಿಯ ಆಳಿಯಾನು, ಆದರೆ ಅರಳಿಸಬಲ್ಲವನು ಅನುಕ್ಷಣದ ಕನಸಾಗಿ ಹೊರಳುತ್ತಾನೆ; ಹೆಣ್ಣು ಪೂರಾ ಪೂರಾ ಹೆಣ್ಣಾಗುವುದು ಹೆಣ್ಣಾಗಿ ಅರಳಿಸಬಲ್ಲ ನಿಜ ರಸಿಕ ಆಳಿನ ತೋಳಲ್ಲಿ ಅಂತೇನೋ ಅಂತಿದ್ಲು ಅನುಭಾವಿ ಸೂಲಗಿತ್ತಿ ಅಜ್ಜಿ - ಅಂದೇ ಅದು ಅರ್ಥವಾಗಿದ್ದರೆ ಚೆಂದಿತ್ತು ಅಥವಾ ಅರ್ಥವಾಗುವ ಈ ಹೊತ್ತು ಇಲ್ಲಿ ನೀನಿರಬೇಕಿತ್ತು...
ಮೈಮನದ ಸಣ್ಣ ಕಂಪನಕೂ ಸಾಗರದ ಸಾವಿರ ಅಲೆಗಳ ನೆಂಟಸ್ತಿಕೆಯಿತ್ತವನೇ ಜಗದ ಕಣ್ಣಿನ ಕಳ್ಳ ಪ್ರೇಮವಾಗಿಯಾದರೂ ನಿನ್ನ ಜೊತೆಯಿರಲಾಗಿತ್ತು...
#ಕಥೆಯಾಗದ_ಪಾತ್ರಗಳ_ಅರ್ಧಂಬರ್ಧ_ಓತಪ್ರೋತ_ಸ್ವಗತ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, June 1, 2020

ಗೊಂಚಲು - ಮುನ್ನೂರ್ಮೂವತ್ತೈದು.....

ಸೀರೆಗಣ್ಣು - ಸೀರೆ ಮತ್ತು ಕಣ್ಣು.....  
(ಅವಳು ಹೇಳಿದ ಸೀರೆ ವೃತ್ತಾಂತ...)

ಸುಮ್ನೇ ಕೇಳ್ತೀನಿ - ಸೀರೆ ಅಂದ್ರೆ ಯಾಕೆ ಅಷ್ಟೊಂದಿಷ್ಟ...?
ಮಂಗ್ಯಾss - ಸೀರೆ ಅಂದ್ರೆ ಬರೀ ಬಟ್ಟೆ ಅನ್ಸಲ್ಲ; ಅದು ಹುಡುಗಿಯನು ಹೆಣ್ಣಾಗಿಸಿದ ಭಾವಗುಚ್ಛ...
ಕುಚ್ಚು ಕಟ್ಟಿದ್ದು ಸೀರೆಗಾ ಇಲ್ಲಾ ಕನಸಿಗಾ ಅನಿಸುವ ಬೆಚ್ಚಾನೆ ಮೋದ ಅಂತಂದ್ಲು ಒಂದೇ ಉಸಿರಿಗೆ...
ಕೊಂಡು ತಂದಲ್ಲಿಂದ ಹಳತಾಯ್ತೆಂದು ಬದಿಗಿಟ್ಟ ಕಾಲದ ನಂತರವೂ ಸೀರೆಯದ್ದು ಹೆಣ್ಣೆದೆಯಲಿ ಶ್ರೀಮಂತ ಹಾದಿ ಗೊತ್ತಾ ಅಂದು ಸೆರಗನು ನಡುವಿಗೆ ಸಿಕ್ಕಿಸಿಕೊಂಡು ಕೂತಳು...
ಮಡಿಲು ಅಂದಾಗಲೆಲ್ಲ ಬಿಸುಪಾಗಿ ಸೀರೆಯೇ ಕಣ್ಣ ಮುಂದೆ ಅಂದಿದ್ದನ್ನು ಬೇಶರತ್ ಒಪ್ಪಿಕೊಂಡೆ...
ಸೆರಗು ಅಂದ್ರೆ ಆ ತುಂಟ ನೆನ್ಪಾಗ್ತಾನೆ ಅನ್ನುತ್ತಾ ತೆಳ್ಳಗೆ ಬೆವರಿದ ನೊಸಲ ತೀಡಿಕೊಂಡಳು; 'ಗೋಪಿಯ ಸೆರಗಿನಂಚಲಿ ಕೊಳಲ ಕಣ್ಣೊರೆಸಿ ಉಸಿರೂಡಿದವನ ಮೋಹರಾಗದಲಿ ಕಣ್ಣು ತೂಗುತ್ತಾ ಗೋಕುಲವು ಅಮೃತವ ಕಡೆದು ಬೆಣ್ಣೆ ತೇಲಿಸಿದ ಕಥೆ ಎಷ್ಟು ಚಂದ' ಎನ್ನುವಾಗಿನ ಮಳ್ಳ ನಾಚಿಕೆಯಲಿ ಹೊಳೆವ ಕಂಗಳಲಿ ಅಡಗಿರುವ ಹಳೇ ಬೀದಿಯ ಕಳ್ಳ ಕರಿಯನ ಕುರುಹಿಗೆ ಹೆಸರು ಹುಡುಕಿ ಸೋತೆ...

ಯಾವುದೋ ಹಾದಿಯಲಿ ಎನ್ನ ಕಣ್ಣು ಕಟ್ಟಿದ ಸೆರಗಿನಂಚಿನ ಜಾಡು ಹಿಡಿದು ಎದೆಯ ಅಂತಃಪುರದ ಬಾಗಿಲು ಕಾಯ್ದ ಹಳೆಯ ಕಥೆ ನೆನಪಾಗಿ ತಡವರಿಸುವ ಕಣ್ಮಿಟುಕಿಸಿ ಅಂದೆ: ಸೀರೆ, ಹೂಂ - ಪಟ್ಟಿ ಮಾಡಿ ಎಲ್ಲಾ ಮುಚ್ಚಿಟ್ಟೂ ನೋಡುಗನೆದೆಯಲಿ ಬಹುವಾಗಿ ಬೆವರಿಳಿಸುವುದಂತೂ ದಿಟ...
ಗಲಗಲಿಸಿ ನಕ್ಕಳು, ಸೀರೆಯ ಎದೆ ಬೀಗಿದಂತೆನಿಸಿತು; ಸೀರೆಗಂಟಿ ಅರಳಿದ ಕಂಗಳದ್ದೇ ಮಜವಾದ ಕಥೆ ಅಂತಂದು ಮಾತಾದಳು - ತೆರೆದ ಕಿವಿಯಾದೆ...

ಓತಪ್ರೋತ ಜೋಡಿಸಿಟ್ಟ ಅವಳ ಸೀರೆ, ಹಂಗೇ ಸೀರೆಗಾತುಕೊಂಡ ಕಂಗಳ ಮಾತು:
ಗೊಂಬೆಗೆ ಸೀರೆಯುಡಿಸಿದ ಬೆರಳ ಕೌಶಲ್ಯಕೆ ಮೆಚ್ಚುಗೆ ಪತ್ರ - ಸೀರೆಯಂಗಡಿಯ ಕಣ್ಣಿಲ್ಲದ ಬೊಂಬೆಯುಟ್ಟ ಸೀರೆ ಮಡತೆಗಳ ಮೇಲೆ ಇವಳ ಕಣ್ಣು...
ಮನಕೊಪ್ಪಿದ ಸೀರೆಯ ಸೊಬಗಿನ ಬಗ್ಗೆ ಮನಮೆಚ್ಚುವಂತೆ ತಿರುವಿ, ಹರವಿ ಮಾತಾಡೋ ಮಾರುವಾತನ ಲಾಭದಾಸೆಯ ಕಣ್ಣು...
ಬಣ್ಣಕೆ, ಅದಕೊಪ್ಪುವ ಬಣ್ಣದ ರವಿಕೆ ಖಣಕೆ, ಅಂಚಿನ ಹಾಗೂ ಸೆರಗಿನ ಚಿತ್ತಾರಕೆ, ಬೆರಳಿಗಂಟಿದ ಹಿತ ಸ್ಪರ್ಶಕೆ ಮಾರುಹೋಗುವ ಹೆಂಗಣ್ಣು...
ಸೀರೆ ಕುಪ್ಪಸಗಳ ನಡುವಿನ ನುಂಪು ಇಳಿಜಾರು ಹೊಳೆಯ ಈಸುವಾಸೆಯ ಬೆನ್ನಿಗಂಟಿದ ಗಂಡು ಕಣ್ಣು...
ಹೊಕ್ಕುಳ ಸುಳಿ ದಾಟಿ ಉದ್ದುದ್ದ ಬಿಳಲು ಬಿದ್ದ ಅಲೆಅಲೆ ನೆರಿಗೆಗಳ ಸೀಳುವ ಬಾವಲಿ ಕಣ್ಣು...
ತುಂಬು ಎದೆ ಗುಂಭಗಳ ಬಳಸಿ ಛಾವಣಿಯಾದ ಸೆರಗ ತುದಿಗೆ ಜೀಕೋ ಅವನ ಮತ್ಸರದ ಬಿಸಿಯ ಉರಿಗಣ್ಣು...
ಯಾವ ಎಳೆಯ ಸೆಳೆದರೆ ಯಾವ ಸುಳಿ ಬಯಲ ಸಂಗಕೆ ಬಿದ್ದೀತೆಂದು ಒಳಗೇ ಮಂಡಿಗೆ ಬೇಯಿಸೋ ಮನದನ್ನನ ಆಶೆಬುರುಕ ಮತ್ತ ಕಣ್ಣು...
ಸೀರೆಯ ನವಿಲು, ಚಿಟ್ಟೆ, ಚುಕ್ಕಿಗಳೆಲ್ಲ ಗೆಜ್ಜೆ ಕಟ್ಟಿ ಕುಣಿದಂಗೆ ಅವನ ಉನ್ಮತ್ತ ಬೆರಗುಗಣ್ಣು...
ಅಂದವ ಮೆಚ್ಚಲು ಅಸೂಯೆ ಕಾಡುವಾಗ ಸೀರೆಯನು 'ಸುಮಾssರು' ಅನ್ನುವ ಸಾಟಿಯವಳ ಹೊಟ್ಟೆಕಿಚ್ಚಿನ ಸಣ್ಣ ಕಣ್ಣು...
ಹಳೆ ಸೀರೆ ಜೋಲಿಯಲಿ ಕೇಕೆಯಾಗುವ, ಅಲ್ಲೇ ದೇವನಿದ್ದೆಯಾಳುವ ಬಾಲ ಗೋಪಗೋಪಿಯರ ಮುಗ್ಧ ಕಣ್ಣು...
ಅವಳುಡುವ ಸೊಬಗನು ಆದಿಯಿಂದ ತುಂಬಿಕೊಂಡು ಅವಳ ಅವಳಿಗೇ ತೋರಿ ಬಿಂಕದ ನಾಚಿಕೆಯ ನೆಟಿಗೆ ಮುರಿಯೋ ಅವಳಂತಃಪುರದ ಕನ್ನಡಿಯ ಬಿಂಬಗಣ್ಣು...
ಮುಚ್ಚಿಡುವ ನೆಪದಲಿ ಸೆರಗ ಸರಿಮಾಡಿಕೊಂಬವಳ ಪರಚುಗಣ್ಣು - ಎಡೆಯಿಂದ ಇಣುಕೋ ಯೌವನ ಫಲ ಸಮೃದ್ಧಿಗೆ ರುದಯ ಬಡಿತ ಏರಿ ಚಡಪಡಿಸೋ ಅವನ ಹದ್ದುಗಣ್ಣು...
ತುಂಟ ಗಾಳಿ, ಮರುಳು ಸೆರಗು, ಹೊಕ್ಕುಳ ತೀರ, ಭುಜದ ತಿರುವಿನ ಭವ್ಯ ಮಾಟ, ಸೆರಗ ಪಟ್ಟಿ ಆಳ ಸುಳಿಯಲಿ ಉಸಿರು ಸಿಕ್ಕಿಕೊಂಡ ಹಪಾಪೋಲಿ ಕಣ್ಣು...
ಸೀರೆ ಸೀಮೆಯ ಈ ಅಂದ, ಬೆಡಗು, ಬಿನ್ನಾಣ ಎಲ್ಲ ಎಲ್ಲಾ ತಂದೆಂದು ಬೀಗಿ ಗತ್ತಿನಲಿ ನಡೆವ ಅವಳವನ ಸೊಕ್ಕಿನ ಬೆಕ್ಕುಗಣ್ಣು...
ಹೆಣ್ಗಮವ ತಬ್ಬಿ, ಸಂತೆಯಲೂ ಅವಳ ಹಬ್ಬಿದ ತನ್ನ ಸಮನಾರೆಂದು ಅವಳ ಹೆಜ್ಜೆಯೊಂದಿಗೆ ಚಿಮ್ಮಿ ನಲಿಯುವ ಸೀರೆ ನೆರಿಗೆಗಳ ಮೈತುಂಬಾ ನವಿಲ ಬಣ್ಣದ ಕಣ್ಣು...
ಅವಳಂದವ ಗುಣಿಸಿ, ಅವನ ಮತ್ಸರವ ದಣಿಸಿ, ಅವರ ಏಕಾಂತ ಪ್ರೇಮ ಪಾರಾಯಣದಲಿ ತಾನೇ ನುರಿ ನುರಿ ದಣಿದು ಚದುರಿ ಸಜ್ಜೆಮನೆಯ ಅನಾಮಿಕ ಅಂಚಲ್ಲಿ ಮುದುರಿ ಕೂತು ಅರೆಬರೆ ಎವೆ ಮುಚ್ಚಿದ ಜರಿಯಂಚ ಸೀರೆಯ ಕಳ್ಳ ಕಣ್ಣು...
ಸೀರೆಯ ಅವಸ್ಥೆಗೆ ಗುಂಬನದ ನಗೆ ಬೀರಿ, ಮುಂದಿನ ಕಥೆಯ ಅವರೀರ್ವರ ಉನ್ಮಾದಕೆ ಸಿಕ್ಕಿ ಗಾಯಗೊಂಡ ಕುಪ್ಪಸವ ಕೇಳಿ ಅಂತಂದು ಮೆಲ್ಲನೆ ಆರಿದ ಕೋಣೆ ದೀಪದ ಬತ್ತಿದ ಕಣ್ಣು...
ಅವಳ ಬೆತ್ತಾಲೆ ಚೆಲುವಿನ ಬೆಳಕೇ ಕಣ್ಕುಕ್ಕುವಾಗ ಹೊರಗಣ ಬೆಳಕಿನ್ಯಾಕೆ ಅನ್ನುತ್ತಾ ಸೀರೆ ಮುಚ್ಚಿಟ್ಟ ಅವಳಂಗಾಂದಕೆ ತೋಳ್ದೆರೆದವನ ಅಮಲುಗಣ್ಣು...
ರವಿಕೆ ಗಾಯವ, ಮೈಯ್ಯ ಹೂಳಿದ ಸುಖದ ಗಾಯಗಳೊಡನೆ ತುಲನೆ ಮಾಡಿ ಅವನ ಒರಟು ಬೆರಳುಗಳ ಹಿತಾಘಾತವ ನೆನೆಯುತ್ತಾ ಬೆಚ್ಚಗೆ ನಕ್ಕು ಸುಕ್ಕಾದ ಸೀರೆಯ ಮೃದುವಾಗಿ ಸವರಿ ಮಡಚಿಟ್ಟವಳ ಹಿಂಗದ ಹಸಿವು, ಉಂಡಷ್ಟೂ ರುಚಿಯೆನುವ ಮರು ಹಗಲಿನ ಉಲ್ಲಾಸದ ನಾಭಿ ಕಣ್ಣು...
ಅವನು ಉಸಿರೂಡಿ ಹೋದ ಅವಳೀಗ ಕೊಳಲು - ಅವಳ ಬೆವರು ಸವರಿದ ಅವನೀಗ ನವಿಲ್ಗರಿಯ ಚವರಿ; ಅಂತೆಲ್ಲಾ ಮೋಹಾ ಮಾಯದ ಆಟಕೆ ನೆರವಾದ ಸೀರೆ ಈಗ ತನಗಂಟಿದ ಅವಳ ಬೆವರ ಘಮವ ಆಘ್ರಾಣಿಸುತ್ತಾ ಅವಳ ಸಂದೂಕದಲಿ ಒಪ್ಪವಾಗಿ ಕುಂತು ಸುಖದ ಬೇಗೆಯ ಕಥೆ ಹೇಳುತಿದೆ...

ಅವಳೋ ಪೆಟಾರಿ ತೆರೆದಾಗಲೆಲ್ಲ ಒಂದೊಂದನೇ ಮುಟ್ಟಿ ನೋಡಿ ನೆನಹುಗಳ ನೆಳಲ ಕೆನ್ನೆ ಸವರುತ್ತಾಳೆ:
ಮೊದಲಾಗಿ ಅಮ್ಮ ಉಡಿಸಿದ ಕಂಬಿ ಸೀರೆ - ಆಯಿ ಉಡುತಿದ್ದ ಅಮ್ಮನ ಘಮದ ಸೀರೆ ಬೇರೆಯೇ ಇದೆ...
ಮನೆ ಅಂಗಳದಲ್ಲೇ ಅಪ್ಪ ಕೊಡಿಸಿದ ಪತ್ತಲ ಸೀರೆ...
ಗೆಳತಿಯೊಂದಿಗೆ ತಾನೇ ಕೊಂಡ ಕಪ್ಪಂಚಿನ ಬಿಳಿ ಸೀರೆ...
ಮೊದಲ ದಿನ ಅವನು ನೆರಿಗೆ ಕೆಡಿಸಿದ ಧಾರೆ ಮಂಗಲ ಸೀರೆ...
ಬಸಿರ ಬಯಕೆಯಲ್ಲಿ ಪ್ರೇಮದ ಫಲವಂತಿಕೆಗೆ ಉಡಿ ತುಂಬಿ ಹಾರೈಸಿದ ಗಿಣಿ ಹಸಿರು ಸೀರೆ...
ಹಸುಗೂಸಿಗೆ ಹಾಸಿಗೆಯಾಗಿಸಲು ಅಜ್ಜಿ ಹರಿದು ಪೆಂಡೆಯಾಗಿಸಿಟ್ಟ ಬಾಣಂತಿ ಸೀರೆ...
ಗಳಿಗೆ ಮುರಿಯದ ಹೊಸ ಸೀರೆಯ ಹೊಸ ಘಮ - ಹಳತಾಗುವ ಹೊತ್ತಿಗೆ ಅದಕಂಟಿ ಅವನ ಮೀಂಟುವ ತನ್ನದೇ ಕಂಪು...
ಕನಸಿನಂತ ನೆನಪುಗಳು ಹನಿ ತುಳುಕಿಸುವ ಅವಳ ಕಡುಗಪ್ಪು ಕಣ್ಣೀಗ ಬದುಕ ಚೆಲುವನು ಹರವಿಕೊಂಡ ಅವ್ಯಕ್ತ ಖುಷಿಯು ಮೈನೆರೆದ ಚಿತ್ರಶಾಲೆ...
#ಸೀರೆಯೆಂಬ_ಅವಳ_ಶಾಯರಿ...