Thursday, January 25, 2018

ಗೊಂಚಲು - ಎರಡ್ನೂರಾ ನಲ್ವತ್ತೆಂಟು.....

ಒಂದು ಪ್ರೀತಿಯ ನಮನ.....
(ಏಳು ತುಂಬಿದ ಸಂಭ್ರಮ...)

ಒಳಮನೆಯಲಿ ಸೆರೆಯುಬ್ಬಿ ಅಳುವಾಗ ಕನಸು - ಮುಂಬಾಗಿಲಲಿ ನಗೆ ಹಸೆಯ ಬಿಡಿಸುವುದ ಕಲಿತು; ಹೇ ಬದುಕೇ, ಉಸಿರ ಬಳ್ಳಿಯ ಬೇರು ಕರಿ ಕಾನ ಮಣ್ಣಾಗುವ ಮುನ್ನ ತುಸು ಕಾಡಬೇಕು ನಿನ್ನ - ಕಾದು, ಕಾಡಿ ಕದಿಯಬೇಕು ನಿನ್ನಿಂದ ಚೂರೇ ಚೂರು ಕಾಡು ಹೂವಿನ ತುಂಟ ನಗೆಯನ್ನ...

ಅದಕೆಂದೇ,
ಏಳು ವರುಷ - ಸತತ ಎಂಬತ್ನಾಕು ಮಾಸಗಳು - ನಡೆದ ಹಾದಿಯಲ್ಲಿ ಮನಸು ಹಡೆದ ನನ್ನ ಪಾಲಿನ ವಿಶೇಷ ಹಾಗೂ ವಿಚಿತ್ರ ಭಾವಗಳನೆಲ್ಲ, ಗೊಂಚಲಿನ ಲೆಕ್ಕ ಹಚ್ಚಿ, ಪ್ರಜ್ಞೆಗೆ ದಕ್ಕಿದ ಒಂದ್ನಾಕು ಅಕ್ಷರಗಳನೇ ತಿರುವು ಮುರುವಾಗಿ ಬಳಸುತ್ತಾ ಬಿಚ್ಚಿಡುತ್ತಾ ಬಂದೆ - "ಭಾವಗಳ ಗೊಂಚಲು" ಎಂದು ಬೀಗುವ ಈ ತಾಣದಲ್ಲೀಗ ಒಟ್ಟು ಎರಡು ನೂರಾ ನಲವತ್ತೆಂಟು ಚಿತ್ರ ವಿಚಿತ್ರ ಬಿಡಿ ಬಿಡಿ ಗೊಂಚಲುಗಳು...!!!
ಮಲೆನಾಡ ಕಾಡ ಬೀಡಾಡಿ ಹುಡುಗ ನಾನು; ಅಲ್ಲಿಯ ಧೋ ಮಳೆಗೆ ಬೆಚ್ಚನೆ ಆಸರೆಯಾಗೋ ಕಂಬಳಿ ಕೊಪ್ಪೆಯಂತೆ ಈ ಊರಲ್ಲಿ ಎನ್ನೆದೆಯ ರಾಡಿ ರಾಡಿ ಭಾವಗಳ ಸಂಭಾಳಿಸಲು ಎನಗೆ ದಕ್ಕಿದ್ದು ತಲೆಯಲಿರುವ ಆ ಅದೇ ನಾಲ್ಕಕ್ಷರ...


ಅರ್ಥವೇ ಆಗದ ಪ್ರೇಮ - ಹುಟ್ಟು, 
ಸದಾ ಗುಮಿಗುಡುವ ಕಾಮ - ಸಾವು, 
ಹೊಂದಿಕೆಯಾಗದ ಜಗದ ರೀತಿ ರಿವಾಜುಗಳು,
ಇವಳಿಗೆ ಗೆಜ್ಜೆ ಕೊಡಿಸುವಾಗ ಆಯಿಯ ಬೋಳು ಕಾಲು ನೆನಪಾಗುವುದೇಕೆ - ಕೈತುಂಬ ಡಜನ್ಗಟ್ಟಲೆ ಬಳೆ ಇದ್ದರೂ ಒಂದ್ಯಾವುದೋ ಬಳೆ ಒಡೆದಾಗ ಆಯಿ ಆ ಪರಿ ಕಳವಳಿಸುವುದೇಕೆ - ಗದ್ದೇಲಿ ದುಡಿಯುವ ಆಯಿಯ ಆ ಪರಿ ಬೆವರಿಗೂ ಹಣೆಯ ಕೆಂಪು ಬಂಡಿ ಚಂದಿರನಂತ ಕುಂಕುಮ ಕದಡದೇ ಇರುವುದು ಯಾವ ಮಾಯೆ; ಸುಖಾ ಸುಮ್ಮನೆ ಹುಟ್ಟಿ ಸುಮ್ಮನಿರಲು ಬಿಡದೆ ಉರಿವ ಬಸುರಿ ಕುನ್ನಿಯ ಚಡಪಡಿಕೆಯಂಥ ಪ್ರಶ್ನೆಗಳು, 
ಎಲ್ಲೆಲ್ಲೋ ಹೇಗ್ಹೇಗೋ ದಕ್ಕಿದಂತೆನಿಸುವ - ದಕ್ಕಿಯೂ ದಕ್ಕದಂತೆ ನುಣುಚಿಕೊಳ್ಳುವ ಏನೇನೋ ಅಡ್ನಾಡಿ ಉತ್ತರಗಳು, 
ಬದುಕ ಬಿಡದೆ ಕಾಡುವ ಸಾವು - ‘ಪುನರಪಿ ಜನನಂ ಪುನರಪಿ ಮರಣಂ’ ಎಂಬ ಕಾಣದ ಕಣ್ಣಿನ ಸಮಾಧಾನ, 
‘ವಿನಾ ದೈನ್ಯೇನ ಜೀವನಂ - ಅನಾಯಾಸೇನ ಮರಣಂ’ ಎಂಬ ಪ್ರಾರ್ಥನೆ, 
ಬೆಕ್ಕಿನ ಮೀಸೆಯಂಥ ನನ್ನ ಅಹಮ್ಮಿನ ಕೋಟೆ - ಅವರಿವರ ಪ್ರೀತಿಯ ಹಾರೆ,
ಕಾಣದ್ದನ್ನು ನಂಬಲಾಗದ - ಕಂಡದ್ದನ್ನು ಒಪ್ಪಲಾಗದ ನಿರ್ಭಾವದ ಸೊಕ್ಕು, 
‘ನೀನು’ ‘ನಾನು’ಗಳ ಅಮಲಲ್ಲಿ ನೀನು ನಾನು ನೀನು ನಾನಾಗಿಯೇ ಉಳಿದು ನೀನು ನಾನು ಬೆಸೆದು ನಾವಾಗುವ ಚಂದ ಅಳಿದು, 
ನಿನ್ನೆಯ ಹುಣ್ಣಿನ ನೆನಪು - ನಾಳೆಯ ಹಣ್ಣಿನ ಕನಸು - ನೋವಿಗೂ ನಲಿವಿಗೂ ಹರಿವಾಗಿ ನಗುವನೇ ಆಯ್ದುಕೊಂಡ ಇಂದೆಂಬ ಕಲಸುಮೇಲೋಗರದ ಇಕ್ಕಟ್ಟಿನ ಹಾದಿ, 
ಗುರುತುಳಿಯಲಿಲ್ಲ ಏನೂ - ಗುರುತುಳಿಸಬಾರದು ಏನೇನೂ ಎಂಬಂತ ಗೊಂದಲಗಳ ವಿಕ್ಷಿಪ್ತ ಎದೆಯ ಗೂಡಲ್ಲಿ ಹುಚ್ಚುಚ್ಚಾಗಿ ಹರಡಿ ಹಾಡೋ, ಕಾಡೋ ಭಾವಗಳು ಅಷ್ಟೇ ಹುಚ್ಚುಚ್ಚಾಗಿ, ಮತ್ತೆ ಮತ್ತದೇ ರಾಗವಾಗಿ ಅಕ್ಷರಕೆ ಅಕ್ಕರೆಯಲಿ ನೇಯಲ್ಪಡುವಾಗ ಏನೋ ಹಗುಹಗುರ ಸಂವೇದ... 
ಬರೆದ ಸಾಲುಗಳ ನೈಜ ಸಾರ್ಥಕತೆ ಅದಷ್ಟೇ... 
ಅದರಾಚೆ ಅದಕ್ಕೆ ನಿಮ್ಮ ಮೆಚ್ಚುಗೆಯೂ ದಕ್ಕಿ ಅದೊಂತರ ಹೆಮ್ಮೆಯಾಗಿ ಬೆಳೆದು ನನ್ನ ಅಹಂ ಅನ್ನು ತಣಿಸಿದ್ದೂ ಅಷ್ಟೇ ಸತ್ಯ...
ಬರೆದದ್ದರಲ್ಲೇನೂ ತಿರುಳಿಲ್ಲದಿದ್ದರೂ ಓದುವ ಖುಶಿಗಾಗಿ, ಓದಿನ ಮೇಲಿನ ಪ್ರೀತಿಗಾಗಿ ಓದಿ, ಮೆಚ್ಚಿಗೆಯ ಮಾತಾಡಿದವರು ನೀವುಗಳು...
ಮನದ ಗೂಡಲ್ಲೇ ಮುದುಡಿ ಕೂರಬಹುದಿದ್ದ ಎಷ್ಟೋ ಎಷ್ಟೆಷ್ಟೋ ಭಾವಗಳು ಅಕ್ಷರದ ಝರಿಯಾಗಿ ಹರಿದು ವಿಸ್ತಾರವಾಗುವಲ್ಲಿ ನಿಮ್ಮಗಳ ಅಕ್ಕರೆಯ ಪಾತ್ರ ಬಲು ದೊಡ್ಡದು...
ಐವತ್ತು ಸಾವಿರ ಬಾರಿ ಈ ತಾಣದ (ಬ್ಲಾಗಿನ) ಬಾಗಿಲು ತೆರೆದುಕೊಂಡಿದೆ, ಅದರಲ್ಲಿ ನನ್ನ ಪಾಲನ್ನು ಕಳೆದರೂ ನಿಮ್ಮ ಪಾಲೂ ದೊಡ್ಡದೇ ಇದೆ...
ಈ ನಿಮ್ಮ ವಿನಾಕಾರಣದ ಪ್ರೀತಿಗೆ ಆಭಾರಿಯಾಗಿದ್ದೇನೆ... 
ಅರ್ಥಕ್ಕಿಂತ ಅನರ್ಥ, ವಿಪರೀತಾರ್ಥಗಳನ್ನೇ ವಿಪರೀತವಾಗಿ ಸೃಜಿಸುವ ಖಾಲಿ ಜೋಳಿಗೆಯ ಜಂಗಮನೊಬ್ಬನ ವಿಭ್ರಾಂತ ಖಯಾಲಿಯ ಹಾಡಿಗೂ ಈ ಪರಿಯ ಪ್ರೀತಿ ಭಿಕ್ಷೆಯೇ ಅಂತ ಬೆರಗಾಗುತ್ತೆ ಒಮ್ಮೊಮ್ಮೆ - ಬದುಕ ಬಹು ಚಂದದ ಕರುಣೆ...

ಮುಂದೆಯೂ -
ಜಾತ್ರೆ ನೆರೆದ ಊರ ರಥಬೀದಿಯ ತುದಿಯ ಜನಜಂಗುಳಿಯಲ್ಲಿ ಮಿಂಚಿ ಮರೆಯಾದ ಕಪ್ಪು ಕಂಗಳ ಬೆಳಕ ಕುಡಿ ಎದೆಯ ಹಾಳೆಯ ಮೇಲೆ ಗೀಚಿಟ್ಟು ಹೋದ ಚಿತ್ರಕ್ಕೆ ಹೆಸರಿಡದೆ ಮುದದ ಮುಚ್ಚಟೆಯಿಂದ ಕಾದಿಟ್ಟುಕೊಂಡು ಸಾಗುತ್ತೇವಲ್ಲ ಹಾಗೆ ಈ ಭಾವ ಗೊಂಚಲಿನ ಹಾದಿಯನೂ ಸಿಂಗರಿಸಿ ಸಾಗುತಲೇ ಇರುವ ಹಂಬಲ ನನ್ನದು... 
ಎಷ್ಟು ಕಾಲ, ಹೇಗೆ, ನೋವೋ, ನಗುವೋ, ಏನು, ಎತ್ತ ಒಂದೂ ಗೊತ್ತಿಲ್ಲ... 
ಆಗೀಗ ಹಾಗೀಗೆ ಹುಟ್ಟಿದ ಎದೆರಾಗವ ತೋಚಿದಂತೆ ಗೀಚಿಡುತ್ತ ಸಾಗುವುದು...
ಮನದ ವಾಂಚಲ್ಯದ, ಚಾಂಚಲ್ಯದ ಕಡು ಮೋಹಿ ಭಾವಗಳು ಕಾಡುವುದು, ಹಾಡುವುದು, ಕಾದಾಡುವುದು ನಿಲ್ಲುವವರೆಗೆ - ಎದೆಯ ಬತ್ತಳಿಕೆ ಖಾಲಿಯಾಗುವವರೆಗೆ...
ನೀವಿದ್ದೀರಲ್ಲ ಓದಿ ನನ್ನದೇ ಭಾವದಂತಿದೆ ಕಣೋ ಅಂತಂದು ನನ್ನ ನನ್ನೊಳಗೆ ಬೀಗುವಂತೆ ಮಾಡಲು...
ಇದಿಲ್ಲದೆಯೂ ನೀವೆಲ್ಲ ಸಿಕ್ಕಬಹುದಿತ್ತೇನೋ ಗೊತ್ತಿಲ್ಲ - ಆದರೆ, ಇದರ ಕಾರಣಕ್ಕೆ ನನ್ನ ದೌರ್ಬಲ್ಯಗಳನೂ ಕಡೆಗಣಿಸಿ ನನ್ನೊಡನೆ ಗಾಢ ಬೆಸೆದುಕೊಂಡ ಪ್ರತ್ಯಕ್ಷ, ಪರೋಕ್ಷ ಬಂಧಗಳಿರುವುದು ಒಳಗುಡಿಯ ಸತ್ಯ... 

ಈ ಪ್ರೀತಿ ಇಂತೆಯೇ ಜಾರಿಯಲ್ಲಿರಲಿ... 
ಅಕ್ಷರ ಬೆಸೆಯಲಿ ಬಂಧಗಳ...💕💕

ವಿಶ್ವಾಸ ವೃದ್ಧಿಸಲಿ - ಶ್ರೀವತ್ಸ ಕಂಚೀಮನೆ 

Tuesday, January 9, 2018

ಗೊಂಚಲು - ಎರಡ್ನೂರಾ ನಲ್ವತ್ತೇಳು.....

ವಿವರಗಳಾಚೆಯ ಸಾಲುಗಳು.....

ಗಡಿಯಾರಕ್ಕೆ ಶೆಲ್ಲಿನ ಹಂಗು - ಕಾಲಕ್ಕಲ್ಲ...
↖↑↗↘↓↙

ಹುಟ್ಟಿಗೂ ಸಾವಿಗೂ ಅಂಟದ ಕುಲ - ಗೋತ್ರ, ಮತ - ಧರ್ಮ, ತುಂಡು ಬದುಕಿನ ಹುಚ್ಚು ಖಯಾಲಿ ಅಷ್ಟೇ...
ತನ್ನದನ್ನು ಪ್ರೀತಿಸಿ, ಅನುಸರಿಸಿ, ಪ್ರೀತಿಯಿಂದಲೇ ಉಳಿಸಿ, ಬೆಳೆಸಿಕೊಳ್ಳಲಾಗದವನಷ್ಟೇ ಪರರದನ್ನು ಹಳಿದು, ತುಳಿಯಬಲ್ಲ...
#ನಾನು...
↖↑↗↘↓↙

ಅಲ್ಲ ಮಾರಾಯಾ -
ನನ್ನ ಭಾವಕೋಶದಲ್ಲಿ ನೀ ಹಸಿಯಾಗಿರುವುದು ವ್ಯಭಿಚಾರವಾದರೆ, ಕೊಳಲ ತೊರೆದ ಕೃಷ್ಣ ಜಗದ ದೇವರಾದದ್ದು ಹೇಗೆ...!!??
ರಾಧೆಯ ಎದೆ ಮಾಳವ ಇಣುಕಿ ಪ್ರೇಮದ ಹಸಿತನವ ಜೀವಿಸಿದಲ್ಲದೆ ಕೃಷ್ಣ ಕರಗಿ ಅರಿವಾದಾನು ಹೇಗೆ...!!??
#ಅವಳು...
        __ವಿವರ ಗೊತ್ತಿಲ್ಲದ ಸಾಲುಗಳು...
↖↑↗↘↓↙

...........ನಾನು ಪ್ರವಚನಗಳ ಹೆಣೆಯುತ್ತೇನೆ.......
............ಮತ್ತು ಜಗತ್ತು ತನ್ನಿಷ್ಟದಂತೆ ಚಲಿಸುತ್ತದೆ........
#ಹಸಿವು...
↖↑↗↘↓↙

ನಿಲ್ಲು ನಿಲ್ಲೇ ಹಂಸೆ........ ಕರುಳ ಕೂಳಿಗೆ ಅಂಟಿಕೊಂಡ ಬಿಕ್ಕಳಿಕೆಗಳ ಕೋಳಿಗಳೆಲ್ಲ ನಿದ್ದೆ ಹೋಗಿವೆ........ ಸಾಕಿಕೊಂಡ ಹುಚ್ಚಾಟದ ಬೆಂಕಿ ಬಸಿರಿಗೆ ಒಡಲಾಳದಿಂದ ಉಕ್ಕುಕ್ಕಿ ಒಡೆದ ನಗುವನಿಷ್ಟು ಅಂಗಳಕೆ ಚೆಲ್ಲಿ ಬರುವೆ........ ತುಸು ನಿಲ್ಲು ನಿಲ್ಲೇ ಹಂಸೆ - ಎದೆಯ ಹೊಸಿಲು ದಾಟದೆ...........
↖↑↗↘↓↙

ಹಾದಿ ಕವಲಾದದ್ದಷ್ಟೇ - ನಡಿಗೆ ನಿಂತದ್ದಲ್ಲ...

ಕಾಲನ ತೋಟದ ಹುಳಿ ಹೆಂಡ - ಬದುಕು...

ಅಲೆ ಉಕ್ಕಿ ಹೆಜ್ಜೆ ಗುರುತನಳಿಸಬಹುದು - ನೆನಪು? ನೆನಪು ಅದೇ ಒಂದು ಸ್ವಯಂ ಅಲೆ...

ಕಾಗೆ ನೇಯ್ದ ಗೂಡಲ್ಲಿ ಕೋಗಿಲೆ ಮರಿಗೂ ತುತ್ತಿದೆ - ಅಂತಃಕರಣದ ಬಣ್ಣ ಯಾವುದು...!?

ಯಾರೂ ನಡೆಯದ ಹೊಸ ದಾರಿ ಎಂಬುದಿಲ್ಲಿಲ್ಲ - ಮುಚ್ಚಿದ್ದ ಧೂಳ ಹಣೆ ಮೇಲೆ ಹೊಸ ಹೆಜ್ಜೆ ಗುರುತು ನನ್ನದು... ಅವರಿವರ ಕಾಲ್ದೂಳಿ ಅಷ್ಟೇ...

ದೇವರ ರಕ್ಷಣೆಗೆ (!?) ನಿಂತು, ಮಸಣಕೂ ಹೆಸರಿಟ್ಟ ಮನುಷ್ಯ - ಪ್ರಕೃತಿಯ ಬಾಲಿಶ ಸಂರಚನೆಯಂತೆ ತೋರುತ್ತಾನೆ...

ಸಾವಿನ ಹಾದಿಗೆ ಬೇಲಿಗಳಿಲ್ಲ...
            __ವಿವರ ಗೊತ್ತಿಲ್ಲದ ಸಾಲುಗಳು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, January 8, 2018

ಗೊಂಚಲು - ಎರಡ್ನೂರಾ ನಲ್ವತ್ತಾರು.....

ಮಾಗಿ ಮನಸು - ಮೆದು ಮೆದು ಕನಸು.....

ಈ ಅರೆ ಬರೆ ಛಳಿಗೆ, ತಿಳಿ ಬೆಳಕ ಹೊಳೆಯಲ್ಲಿ ಸುಡು ಸುಡು ಆಸೆ ಬೆಂಕಿಯ ಮಡಿ ಮರೆತ ನಾನು ನೀನು ಅಡಿಮುಡಿಯ ನಡುವೆ ಗಾಳಿಯೂ ಸುಳಿಯದಂತೆ ತಳಕಂಬಳಕ ಮೀಸು ಬೀಳಬೇಕು...
ನನ್ನ ಬೆರಳ ಮೊನೆಯ ಹುಟ್ಟು ಮಚ್ಛೆ ನಿನ್ನ ಬರಿಮೈ ಬೆಳಕ ಬಯಲಿನೆಲ್ಲ ಮಚ್ಛೆಗಳೊಡನೆ ಮುತ್ತಿನ ಅನುಸಂಧಾನ ನಡೆಸಬೇಕು...
ಪಿಸುನುಡಿದು ಕಿವಿಹಾಲೆಯ ಕೆಣಕಿ ಕೆಂಪೇರಿಸಿ, ಕೊರಳ ಶಂಖದ ತಿರುವುಗಳಲಿ ಹಾಯ್ದು ಬಂದು, ಕಂಕುಳ ಘಮ ಹೀರಿ ದಿಕ್ಕೆಟ್ಟ ಬಿಸಿ ಉಸಿರು ಎದೆ ಕಣಿವೆ ಮಡುವಲ್ಲಿ ತುಸು ಕಾಲ ತೊನೆದು ತೇಕಲಿ...
ಛಳಿ ಕರಗಿ ಸುರಿದ ಬೆವರಲ್ಲಿ ಹಾಸಿಗೆಗೂ ಸುಖ ಮಜ್ಜನ....
ಹಸಿವೆದ್ದ ನಡು ಸಿಡಿಸಿಡಿದು ಜೀಕೋ ಬಿರುಸಿಗೆ ಆಹಾಕಾರದಲಿ ಸೃಷ್ಟಿ ಸಂಪ್ರೀತಿ...
#ಈ ಇರುಳಿಗಿಷ್ಟು ಸಾಕು - ಅಲ್ಲಲ್ಲ ಮಾಗಿಯ ಬಾಗಿಲಲಿ ಪೋಲಿ ಪಲ್ಲಂಗಕೆ ಇಷ್ಟಾದರೂ ಬೇಕು...😉😚
🔀🔁🔃🔄🔀

ಹೋಗುವ ಊರಿನೆಡೆಗೆ ಆಪ್ತತೆಯ ತುಡಿತವಿದ್ದರೆ ಹತ್ತಿದ್ದು ಬಸ್ ಆದರೂ ಮನಸಿಗೆ ಉಕ್ಕಿನ ಹಕ್ಕಿಯ ಆಗಸ ಯಾನದ ಖುಷಿಯಿರತ್ತೇನೋ ಅಲ್ಲವಾ...💞
#ಮನಸೆಂಬೋ_ಮರಿ_ಹಕ್ಕಿಯ_ಪಕ್ಕೆಗಳಲ್ಲಿ_ಹೊಸ_ರೆಕ್ಕೆ_ಮೂಡಿದಂತ_ಭಾವಕ್ಕೆ_ಭಾಷ್ಯ_ಬರೆಯಲಾದೀತೇ...
🔀🔁🔃🔄🔀

ಇರುಳೊಂದು ತನ್ನ ಬೆವರ ಕಮಟಿನ ದುಪ್ಪಡಿಯನ್ನು ಸುರುಳಿ ಸುತ್ತಿ ಕಂಕುಳಿಗೇರಿಸಿಕೊಂಡು, ಜುಗಳಿ ಗುತ್ತಿದ ಕಟಬಾಯಿ ಒರೆಸಿಕೊಳ್ಳುತ್ತ, ಅಲಸ್ಯದಿ ಆಕಳಿಸುತ್ತಲೇ ತನ್ನ ಪಾಳಿ ಮುಗಿಸಿ ಎದ್ದು ಹೊರಟಿತು...
ಯಾವ್ಯಾವುದೋ ಕಾತರ, ಗೊಂದಲ, ಗದ್ದಲಗಳಲ್ಲಿ ನಿದ್ದೆಯಿಲ್ಲದೇ ಬಾಡಿದ ರೆಪ್ಪೆಗಳ ಇಷ್ಟಿಷ್ಟೇ ತೆರೆಯುತ್ತ, ಅದೇನೋ ಗೊಣಗುತ್ತ, ಕೋಣೆ ಬಾಗಿಲ ವಾಡೆಯ ನಡು ಮಧ್ಯ ನಿಂತು ಬಿಲ್ಲಂತೆ ಬಾಗಿ ಮೈಮುರಿದು ತನ್ನಲ್ಲಿ ತಾನೇ ಚುರುಕುಗೊಂಡು ಅಂತೆಯೇ ಸುತ್ತೆಲ್ಲ ಒಂದು ಗಡಿಬಿಡಿಯ ಹಡೆದ ವಧುವಿನಂತೆ ಹಗಲೊಂದು ಬಿಚ್ಚಿಕೊಂಡಿತು...
#ಶುಭದಿನ...
🔀🔁🔃🔄🔀

ಶೇಮ್ ಶೇಮ್ ಪಪ್ಪಿ ಶೇಮ್........ ತುಂಟ ಮರಿ ನಕ್ಷತ್ರ ನಕ್ಕಾಗ ಚಂದಿರನ ಕೌಪೀನ ತುಂಡು ಮೋಡ........😉
ಶುಭರಾತ್ರಿ.... 😍
🔀🔁🔃🔄🔀

ಇರುಳ ಬಾಗಿಲಿಗೆ ಬಯಕೆ ತೋರಣ ಕಟ್ಟಿ, ತಾರೆಗಳ ಹೂ ಚೆಲ್ಲಿ, ಬೆಳದಿಂಗಳ ಕಂದೀಲು ಹಚ್ಚಿಟ್ಟು, ಕನಸ ಡೋಲಿಯಲಿ ನಿನ್ನ ಹೊತ್ತು ತಿರುಗುವಾಗ.......... ರಾತ್ರಿ ರಾಣಿ ಸಂಭ್ರಮದಿ ಘಮ್ಮೆಂದು, ಸೂಜಿ ಮೊಲ್ಲೆ ಹಿತವಾಗಿ ನಾಚಿತೆಂದು ತಂಗಾಳಿ ಛಳಿಯ ಸುಳಿ ಊರಿಗೆಲ್ಲ ಸಾರುತಿದೆ.......
ಪಾರಿಜಾತದ ವಿರಹದಮಲು ಪಕ್ಕೆಗಳಲಿ ಮಧುರ ಪಾಪದ ಹಸಿವಾಗಿ ಹೊರಳಲು....... ಸಂಜೆ ಕಿವಿಯ ಕೆಂಪಾಗಿಸಿದ ನಿನ್ನ ಬಿಸಿಯುಸಿರ ಅಲೆಅಲೆಯ ನೆನಹೇ ಇರುಳ ನಡುವ ಬಳಸಿ......... ಕಂಬಳಿ ಸೋಲುವ ಛಳಿ ಕೂಡ ಮುದುರಿ ಮಂಚದ ಮೂಲೆ ಸೇರಿ......... ಉಲಿದದ್ದು..... ಉಳಿದದ್ದು......... ಆಹಾ.......
ನಗೆಯ ಬಣ್ಣ ಬಾನಗಲ - ಒಲವ ಬಣ್ಣವೇ ಕನಸ ಬಲ... 😍❣️

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Monday, January 1, 2018

ಗೊಂಚಲು - ಎರಡ್ನೂರಾ ನಲ್ವತ್ತೈದು.....

___ವಿವರ ಹುಡುಕಬಾರದ ಸಾಲುಗಳು.....


ಜಗತ್ತೇ ಮುಳ್ಗೋದ್ರೂ ಇವಂಗೆ ಒಂಚೂರು ಚಿಂತ್ಯೇ ಇಲ್ಲೆ, ಅವನ್ ಪಾಡಿಂಗೆ ‌ಅಂವ ಹಲ್ ಕಿರ್ಕಂಡು ಕನ್ಸ್ ಕಾಣ್ತಾ ಕಳ್ದ್ ಬಿಡ್ತಾ...
ಅಂಗಳದ್ ತುಂಬಾ ಹೂಗ್ನ ಗಿಡ ಇದ್ರೂ ದೇವ್ರ ತಲ್ಗೆ ತುಳಸಿ ಕುಡಿ ಒಂದೇಯಾ - ಅರಳಿದ್ ಹೂಗಷ್ಟೂ ಮಾತಾಡ್ಶಿಕ್ಕಿ ಕೊಯ್ಯದ್ದೆ ಹಂಗೆ ಬಿಟ್ಟಿಕ್ ಬತ್ತಾ...
ಕುನ್ನಿ, ಬೆಕ್ಕು, ಎಮ್ಮೆಕಲ್ಲಂತೂ ಆತು - ಅಡ್ಕೆ ಮರದ್ಕಲ್ಲೂ ಮಾತಾಡ್ತಾ, ಹೊಸ ಶಿಂಗಾರ ಬಿಟ್ ಮರಕ್ಕೆ ಮುತ್ಕೊಡುದ್ ನೋಡೊ - ಮಳ್ಳು ಹೇಳುದಾ ಎಂತಾ ಹೇಳೂದು ಇಂತವ್ಕೆ...
ಮನೆ ಗುಡ್ಸಕಾರೂ ನೆಗಿ ಹೊಡೀತೆ ಇರ್ತಾ ಅವನಷ್ಟಕ್ಕೆ ಅಂವ - ಸುಖ ಪುರುಷ ಮಾರಾಯ್ತಿ...
ತಲೆ ಮೇಲ್ ತಲೆ ಹೋದ್ರೂ ಚಿಂತಿಲ್ಲೆ, ಅವಂಗ್ ಅವಂದೇ ಪ್ರಪಂಚ - ಪುಸ್ತಕ ಶಿಕ್ಬಿಟ್ರಂತೂ ಮುಗತ್ತು ಆಯಿ ಇದ್ದದ್ದೂ ಮರ್ತ್ ಹೊವ್ತು - ಮನೇಲಿ ಜಗ್ಳಾ ಹೊಡೀಲೂ ಜನ ಇಲ್ಲೆ ಹೇಳ್ವಂಗ್ ಅವ್ತು ಎನ್ ಕಥೆ...
ಮಾಡೂ ಕೆಲ್ಸ ಮಾಡ್ಕ್ಯಂಡೂ ಬೈಶ್ಕ್ಯಂಬುದು ಅಂದ್ರೆ ಅದೆಲ್ಲಿಂದ್ ಪ್ರೀತ್ಯನಾ ನೋಡು...
ಅಂಗ್ಳದ್ ತುದೀಗ್ ಚಂದ್ರನ್ ನೋಡ್ತಾ ನಿಂಬುದ್ ನೋಡ ನೀನು - ಉಂಬುದು ನೆನ್ಪಿರ್ತ್ಲೆ - ಸಾಕು ಸುಸ್ತು ಒಂದೂ ಗೊತ್ತಾವ್ತ್ಲೆ...
ಆಯಿಯ ಪ್ರೀತಿಯ ಆರೋಪಗಳು ಸಾಗುತ್ತಲೇ ಇರ್ತೀದ್ವು ಕೇಳೋರ ನಗೆಯ ದನಿಯೊಂದಿಗೆ - ಅಂತೆಯೇ ಮಗರಾಯನ ಹಗಲ್ಗನಸ ಓಲಾಟವೂ - ಎಂದಿನಂತೆ...
#ಹಿಂಗಿಷ್ಟು_ಮೆಲುಕು...#ಈಗಿವು_ಬರೀ_ಮೆಲುಕು...
÷÷×÷÷

ಸಾವಿನ ಚಾದರ ಹೊದ್ದು ಅಡ್ಡಡ್ಡ ಮಲಗಿದ ಉಬ್ಬಸ ಪೀಡಿತ ಬದುಕಿಗೂ ಪ್ರೀತಿ ಒಂದೇ ಧ್ಯಾನವು....
ಸಹನೆ, ಮೌನ, ಪ್ರಜ್ಞೆ, ಯಾನ, ಯಜ್ಞ, ಕಾಮ್ಯ ಎಲ್ಲಕೂ - ಅಲ್ಲಿಯೂ, ಇಲ್ಲಿಯೂ, ಎಲ್ಲಿಯೂ ಪ್ರೀತಿಯೊಂದೇ ಮಾನವು...
     ___ವಿವರ ಗೊತ್ತಿಲ್ಲದ ಸಾಲುಗಳು...
÷÷×÷÷

ಕಾಡು ಕಣಿವೆಯ ಹಾಯ್ದು ಹರಿಯುವ ನಿನ್ನ ಹಾದಿಯ ಕಿರು ಧೂಳು - ನನ್ನ ಕಣ್ಣೊಳ ಕೆಂಪು ಕವಿತೆ...
ನದಿ ನಡೆವ ಬೀದಿಯ ನನ್ನುಡಿಯ ಮೌನಕ್ಕೆ ಭಾಷ್ಯ ಬರೆದರೆ ಉಸಿರುಸಿರ ಸಂಗಾತವಾಗಿ ನಿನ್ಹೆಸರು ಸಿಕ್ಕೀತು...
'ನಾನು' ನನ್ನಾಳದೆಲ್ಲ ತಮಸ್ಸಿನ ಸರಗೋಲು ದಾಟಿ ಬಯಲ ಬೆಳಕಿಗೆ ಬೀಳಬಹುದಿದ್ದರೆ ಅದು ನಿನ್ನೊಲವ ತಪಸ್ಸಿನ ಉರಿಯಿಂದಲೇ ಇದ್ದೀತು...
ಆತ್ಮಸ್ತ ರಾಗವೇ,
ಏಕಾಂತವೇ ಹಿತ - ನಿನ್ನೊಂದಿಗೂ, ನಿನ್ನಾಚೆಗೂ...😍
÷÷×÷÷

ನೇಸರನ ಪಾಳಿ ಮುಗಿಯೋ ಹೊತ್ತು - ಹಕ್ಕಿ ರೆಕ್ಕೆಯ ಬೀಸು ಗೂಡಿನೆಡೆಗೆ - ಇನ್ನೇನು ಬೆಳಕ ಬಯಲಲ್ಲಿ ಚಂದಿರನ ಪಾರುಪತ್ಯ - ಕೋಶದ ಬಾಗಿಲ ದೀಪ ಮರಿಗಳ ಕಂಗಳು - ಸಂಧ್ಯಾಜ್ಯೋತಿ ನಮೋಸ್ತುತೆ...
ಬಾನ ಬೀದಿಯಲಿ ಚುಕ್ಕಿ ಹೂ ಅರಳೋ ಕಾಲಕ್ಕೆ ಗಾಳಿ ಸೆರಗಿನ ಅಂಚ ಹಿಡಿದು ಛಳಿಯು ಉಸಿರ ಸುಡುವಾಗ ಬೆಳದಿಂಗಳ ಕೊಯ್ಲಿಗೆ ನೀ ಇರಬೇಕಿತ್ತು - ಹೆಗಲಿಗೆ ಹೆಗಲು ತಾಕಿಸಿ ಎದೆ ಜೋಪಡಿಯಲಿ ಕನಸ ತುಂಬುವವಳು...
ಕಾಯುತ್ತ ಕುಂತ ಹಿನ್ನೀರ ತೀರ ಒದ್ದೊದ್ದು ಕೇಳುತ್ತೆ ನಿನ್ನ ಬದಲಾದ ಹಾದಿ ಕವಲಿನ ಹೆಸರ...
ಶೇಷ ಪ್ರಶ್ನೆ ಎನ್ನದು - ಹೇಗೆ ತುಂಬಲೇ ಯಮುನೆ ಒಡೆದ ಕೊಳಲಿಗೆ ಉಸಿರ...
ಪ್ರೀತಿ ಕರ್ತವ್ಯದ ಶಿಸ್ತಿನ ಒಡನಾಟವಾಗಿ ಬದಲಾಗಿ ಭಾವ ಒಣಕಲಾದಲ್ಲಿ ಮಾಂಸಕ್ಕೂ ಕಣ್ಣೀರಿಗೂ ಒಂದೇ ತಕ್ಕಡಿ...
ಗಾಳಿ ಅಲೆಯು ನೀರ ಮೈಸೋಕಿ ಹುಟ್ಟಿದ ಮರ್ಮರವು ಇರುಳ ಕಾಡಲೋಸುಗ ಸಂಜೆ ಹಾಯುವಾಗ ಕಿವಿಯ ಶಂಖದ ಸುತ್ತ ನೀ ಸುರಿದು ಹೋಗುತ್ತಿದ್ದ ಬಿಸಿ ಉಸಿರಿನಂತೆ ಸುಡುತ್ತದೆ...
ಆಳದಲ್ಲೆಲ್ಲೋ ಮೀನೊಂದು ನಿಟ್ಟುಸಿರಿಟ್ಟ ಸದ್ದು ಕೇಳಿಸಿತಾsss...
#ನೋವಿಗೆ_ನಗುವಿನ_ಸಾಕ್ಷಿ...
÷÷×÷÷

ಕಿರುಚಿ ಕಿರುಚಿಯೇ ಹೊಟ್ಟೆ ಬಿರಿದು ಸಾಯುವ ಜೀರುಂಡೆಯಲ್ಲೂ ಮಲೆನಾಡ ಕಾಡಿನ ಹುಚ್ಚು ಮೌನವ ಕೆದಕಿದ ತುಂಟ ಖುಷಿಯೊಂದು ಇದ್ದೀತು.....
ಸಗಣಿ ಹುಳುವಿನ ಗೂಡಲ್ಲಿ ಆಲದ ಬೀಜವೊಂದಕ್ಕೆ ಆಹಾರವಾದ ತೃಪ್ತ ನಗೆಯೊಂದು ಸಿಕ್ಕೀತು......
ಬಸವನ ಹುಳುವಿನ ನಡಿಗೆಯ ಗುರಿಯಲ್ಲಿ, ಚೊರೋಟೆಯ (ಸಹಸ್ರಪದಿ) ಕಾಲುಗಳ ಸಂಖ್ಯೆ ಹಾಗೂ ಜಗಳ ಕಾಯದೆ ಸರಿಯುವ ಆ ಕಾಲ್ಗಳ ಚಂದದಲ್ಲಿ, ಮೀಸೆಗೆ ಮೀಸೆ ತಾಕಿಸೋ ಕೆಂಜಿರುವೆಗಳ ಮಾತುಕತೆಯಲ್ಲಿ ಪ್ರಕೃತಿಗೆ ಕಿಲ ಕಿಲದ ಬೆಡಗು ತುಂಬಿದ ಒನಪು ಕಂಡೀತು...
ಕಾಡು ಕೊರಕಲಿನ ಹಾದಿಯಲಿ ಪ್ರತಿ ಹುಳದ್ದೂ ಒಂದಿಲ್ಲೊಂದು ಸಾರ್ಥಕ ಹಾಡೇ...
ಅಂತಿಪ್ಪಲ್ಲಿ ನನ್ನದಾದರೋ -
ಇದು....ಇಷ್ಟೇ....
ಅದು.......ಅಷ್ಟೇ..... ಅನ್ನುತ್ತಾ,
ಕಾಯುವುದು - ಕಾಯುವುದು ಮತ್ತು ಕಾಯುವುದು......
ಹುಟ್ಟದ ಕನಸಿಗೆ ಹಪಹಪಿಸುತ್ತಾ - ಕಾಣದ ಸಾವಿಗೆ ತಳಮಳಿಸುತ್ತಾ - ಇಷ್ಟೇ ಮತ್ತು ಅಷ್ಟೇಗಳ ನಡುವೆ ಉಸಿರನ್ನು ಇಂಚಿಂಚಾಗಿ ಕೊಳೆ ಹಾಕಿ - ಅಹಮ್ಮಿನ ಕುಣಿಕೆಗೆ ನೇತಾಕಿಕೊಂಡ ತಾಳ ತಪ್ಪಿದ ದೈನೇಸಿ ಬದುಕನ್ನು ಕಾಯುವುದು - ಕಾಯುವುದು ಮತ್ತು ಕಾಯುವುದು......
#ಶವ_ಸಂಸರ್ಗ...
         ___ವಿವರ ಗೊತ್ತಿಲ್ಲದ ಸಾಲುಗಳು...
÷÷×÷÷

ಎದೆಯ ಬಿರಿದ ಗಾಯವೇ -
ಮರೆಯಲಾಗಲೇ ಇಲ್ಲ ನಿನ್ನ....
ನೆನಪು ಮಾಯದ ರೋಗ....
ತೆರೆದಿಟ್ಟರೂ ಬಾಗಿಲು - ಉಸಿರ ಗಂಟು ಹಗುರಾಗದಿರಲು - ಇನ್ನೂ ಸಹಿಸುವುದಾಗದು ಅಂದಾಗ ಕೊನೆಯ ಅಂಕದಲಿ ಸುಮ್ಮನೆ ''ನಿರ್ಲಕ್ಷಿಸಿ ಮುನ್ನಡೆದೆ''...
ಇದೀಗ ನಿನ್ನ ಮರೆವ ಹುಚ್ಚು ಇಳಿದು, ನಿನ್ನ ನೆರಳನೇ ಸಾಗುವಳಿ ಮಾಡಿ ನಗೆಯ ಹೂ ಕಾಳು ಬಿತ್ತಿಕೊಂಡೆ...
ಇಂತಾಗಿ ಈಗ ನನ್ನೊಡನೆ ನಾನಿದ್ದೇನೆ ಮತ್ತು ಇರುತ್ತೇನೆ...
#ನಿರ್ಲಕ್ಷ್ಯವೆಂಬೋ_ಮನೆ_ಮದ್ದು...
ಇನ್ನೀಗ -
ಖುಷಿಯಾಗಿದೀನಿ........
ಖುಷಿಯಾಗಿರ್ತೀನಿ........
ಖುಷಿಯಾಗೇ ಹೋಗ್ತೀನಿ.......
ಅಷ್ಟೇ.....
ಎನ್ನೆದೆಯ ಗೂಡಿಗೆ ಕನ್ನ ಕೊರೆದರೆ ನಿಮಗೂ ಖುಷಿಯೇ ಸಿಗಲಿ.......☺
÷÷×÷÷

................ಆವರಿಸಲಿ ನಿದ್ದೆ ಸಾವಿನಂತೆ ಅಥವಾ ಅದಲಿ ಬದಲಿ........... ನೆನಪುಗಳು ಕಾಡಬಾರದು, ಕನಸುಗಳು ತೀಡಬಾರದು........ ನನಗೆ ನನ್ನದೇ ಲಾಲಿ.........

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)