Monday, January 1, 2018

ಗೊಂಚಲು - ಎರಡ್ನೂರಾ ನಲ್ವತ್ತೈದು.....

___ವಿವರ ಹುಡುಕಬಾರದ ಸಾಲುಗಳು.....


ಜಗತ್ತೇ ಮುಳ್ಗೋದ್ರೂ ಇವಂಗೆ ಒಂಚೂರು ಚಿಂತ್ಯೇ ಇಲ್ಲೆ, ಅವನ್ ಪಾಡಿಂಗೆ ‌ಅಂವ ಹಲ್ ಕಿರ್ಕಂಡು ಕನ್ಸ್ ಕಾಣ್ತಾ ಕಳ್ದ್ ಬಿಡ್ತಾ...
ಅಂಗಳದ್ ತುಂಬಾ ಹೂಗ್ನ ಗಿಡ ಇದ್ರೂ ದೇವ್ರ ತಲ್ಗೆ ತುಳಸಿ ಕುಡಿ ಒಂದೇಯಾ - ಅರಳಿದ್ ಹೂಗಷ್ಟೂ ಮಾತಾಡ್ಶಿಕ್ಕಿ ಕೊಯ್ಯದ್ದೆ ಹಂಗೆ ಬಿಟ್ಟಿಕ್ ಬತ್ತಾ...
ಕುನ್ನಿ, ಬೆಕ್ಕು, ಎಮ್ಮೆಕಲ್ಲಂತೂ ಆತು - ಅಡ್ಕೆ ಮರದ್ಕಲ್ಲೂ ಮಾತಾಡ್ತಾ, ಹೊಸ ಶಿಂಗಾರ ಬಿಟ್ ಮರಕ್ಕೆ ಮುತ್ಕೊಡುದ್ ನೋಡೊ - ಮಳ್ಳು ಹೇಳುದಾ ಎಂತಾ ಹೇಳೂದು ಇಂತವ್ಕೆ...
ಮನೆ ಗುಡ್ಸಕಾರೂ ನೆಗಿ ಹೊಡೀತೆ ಇರ್ತಾ ಅವನಷ್ಟಕ್ಕೆ ಅಂವ - ಸುಖ ಪುರುಷ ಮಾರಾಯ್ತಿ...
ತಲೆ ಮೇಲ್ ತಲೆ ಹೋದ್ರೂ ಚಿಂತಿಲ್ಲೆ, ಅವಂಗ್ ಅವಂದೇ ಪ್ರಪಂಚ - ಪುಸ್ತಕ ಶಿಕ್ಬಿಟ್ರಂತೂ ಮುಗತ್ತು ಆಯಿ ಇದ್ದದ್ದೂ ಮರ್ತ್ ಹೊವ್ತು - ಮನೇಲಿ ಜಗ್ಳಾ ಹೊಡೀಲೂ ಜನ ಇಲ್ಲೆ ಹೇಳ್ವಂಗ್ ಅವ್ತು ಎನ್ ಕಥೆ...
ಮಾಡೂ ಕೆಲ್ಸ ಮಾಡ್ಕ್ಯಂಡೂ ಬೈಶ್ಕ್ಯಂಬುದು ಅಂದ್ರೆ ಅದೆಲ್ಲಿಂದ್ ಪ್ರೀತ್ಯನಾ ನೋಡು...
ಅಂಗ್ಳದ್ ತುದೀಗ್ ಚಂದ್ರನ್ ನೋಡ್ತಾ ನಿಂಬುದ್ ನೋಡ ನೀನು - ಉಂಬುದು ನೆನ್ಪಿರ್ತ್ಲೆ - ಸಾಕು ಸುಸ್ತು ಒಂದೂ ಗೊತ್ತಾವ್ತ್ಲೆ...
ಆಯಿಯ ಪ್ರೀತಿಯ ಆರೋಪಗಳು ಸಾಗುತ್ತಲೇ ಇರ್ತೀದ್ವು ಕೇಳೋರ ನಗೆಯ ದನಿಯೊಂದಿಗೆ - ಅಂತೆಯೇ ಮಗರಾಯನ ಹಗಲ್ಗನಸ ಓಲಾಟವೂ - ಎಂದಿನಂತೆ...
#ಹಿಂಗಿಷ್ಟು_ಮೆಲುಕು...#ಈಗಿವು_ಬರೀ_ಮೆಲುಕು...
÷÷×÷÷

ಸಾವಿನ ಚಾದರ ಹೊದ್ದು ಅಡ್ಡಡ್ಡ ಮಲಗಿದ ಉಬ್ಬಸ ಪೀಡಿತ ಬದುಕಿಗೂ ಪ್ರೀತಿ ಒಂದೇ ಧ್ಯಾನವು....
ಸಹನೆ, ಮೌನ, ಪ್ರಜ್ಞೆ, ಯಾನ, ಯಜ್ಞ, ಕಾಮ್ಯ ಎಲ್ಲಕೂ - ಅಲ್ಲಿಯೂ, ಇಲ್ಲಿಯೂ, ಎಲ್ಲಿಯೂ ಪ್ರೀತಿಯೊಂದೇ ಮಾನವು...
     ___ವಿವರ ಗೊತ್ತಿಲ್ಲದ ಸಾಲುಗಳು...
÷÷×÷÷

ಕಾಡು ಕಣಿವೆಯ ಹಾಯ್ದು ಹರಿಯುವ ನಿನ್ನ ಹಾದಿಯ ಕಿರು ಧೂಳು - ನನ್ನ ಕಣ್ಣೊಳ ಕೆಂಪು ಕವಿತೆ...
ನದಿ ನಡೆವ ಬೀದಿಯ ನನ್ನುಡಿಯ ಮೌನಕ್ಕೆ ಭಾಷ್ಯ ಬರೆದರೆ ಉಸಿರುಸಿರ ಸಂಗಾತವಾಗಿ ನಿನ್ಹೆಸರು ಸಿಕ್ಕೀತು...
'ನಾನು' ನನ್ನಾಳದೆಲ್ಲ ತಮಸ್ಸಿನ ಸರಗೋಲು ದಾಟಿ ಬಯಲ ಬೆಳಕಿಗೆ ಬೀಳಬಹುದಿದ್ದರೆ ಅದು ನಿನ್ನೊಲವ ತಪಸ್ಸಿನ ಉರಿಯಿಂದಲೇ ಇದ್ದೀತು...
ಆತ್ಮಸ್ತ ರಾಗವೇ,
ಏಕಾಂತವೇ ಹಿತ - ನಿನ್ನೊಂದಿಗೂ, ನಿನ್ನಾಚೆಗೂ...😍
÷÷×÷÷

ನೇಸರನ ಪಾಳಿ ಮುಗಿಯೋ ಹೊತ್ತು - ಹಕ್ಕಿ ರೆಕ್ಕೆಯ ಬೀಸು ಗೂಡಿನೆಡೆಗೆ - ಇನ್ನೇನು ಬೆಳಕ ಬಯಲಲ್ಲಿ ಚಂದಿರನ ಪಾರುಪತ್ಯ - ಕೋಶದ ಬಾಗಿಲ ದೀಪ ಮರಿಗಳ ಕಂಗಳು - ಸಂಧ್ಯಾಜ್ಯೋತಿ ನಮೋಸ್ತುತೆ...
ಬಾನ ಬೀದಿಯಲಿ ಚುಕ್ಕಿ ಹೂ ಅರಳೋ ಕಾಲಕ್ಕೆ ಗಾಳಿ ಸೆರಗಿನ ಅಂಚ ಹಿಡಿದು ಛಳಿಯು ಉಸಿರ ಸುಡುವಾಗ ಬೆಳದಿಂಗಳ ಕೊಯ್ಲಿಗೆ ನೀ ಇರಬೇಕಿತ್ತು - ಹೆಗಲಿಗೆ ಹೆಗಲು ತಾಕಿಸಿ ಎದೆ ಜೋಪಡಿಯಲಿ ಕನಸ ತುಂಬುವವಳು...
ಕಾಯುತ್ತ ಕುಂತ ಹಿನ್ನೀರ ತೀರ ಒದ್ದೊದ್ದು ಕೇಳುತ್ತೆ ನಿನ್ನ ಬದಲಾದ ಹಾದಿ ಕವಲಿನ ಹೆಸರ...
ಶೇಷ ಪ್ರಶ್ನೆ ಎನ್ನದು - ಹೇಗೆ ತುಂಬಲೇ ಯಮುನೆ ಒಡೆದ ಕೊಳಲಿಗೆ ಉಸಿರ...
ಪ್ರೀತಿ ಕರ್ತವ್ಯದ ಶಿಸ್ತಿನ ಒಡನಾಟವಾಗಿ ಬದಲಾಗಿ ಭಾವ ಒಣಕಲಾದಲ್ಲಿ ಮಾಂಸಕ್ಕೂ ಕಣ್ಣೀರಿಗೂ ಒಂದೇ ತಕ್ಕಡಿ...
ಗಾಳಿ ಅಲೆಯು ನೀರ ಮೈಸೋಕಿ ಹುಟ್ಟಿದ ಮರ್ಮರವು ಇರುಳ ಕಾಡಲೋಸುಗ ಸಂಜೆ ಹಾಯುವಾಗ ಕಿವಿಯ ಶಂಖದ ಸುತ್ತ ನೀ ಸುರಿದು ಹೋಗುತ್ತಿದ್ದ ಬಿಸಿ ಉಸಿರಿನಂತೆ ಸುಡುತ್ತದೆ...
ಆಳದಲ್ಲೆಲ್ಲೋ ಮೀನೊಂದು ನಿಟ್ಟುಸಿರಿಟ್ಟ ಸದ್ದು ಕೇಳಿಸಿತಾsss...
#ನೋವಿಗೆ_ನಗುವಿನ_ಸಾಕ್ಷಿ...
÷÷×÷÷

ಕಿರುಚಿ ಕಿರುಚಿಯೇ ಹೊಟ್ಟೆ ಬಿರಿದು ಸಾಯುವ ಜೀರುಂಡೆಯಲ್ಲೂ ಮಲೆನಾಡ ಕಾಡಿನ ಹುಚ್ಚು ಮೌನವ ಕೆದಕಿದ ತುಂಟ ಖುಷಿಯೊಂದು ಇದ್ದೀತು.....
ಸಗಣಿ ಹುಳುವಿನ ಗೂಡಲ್ಲಿ ಆಲದ ಬೀಜವೊಂದಕ್ಕೆ ಆಹಾರವಾದ ತೃಪ್ತ ನಗೆಯೊಂದು ಸಿಕ್ಕೀತು......
ಬಸವನ ಹುಳುವಿನ ನಡಿಗೆಯ ಗುರಿಯಲ್ಲಿ, ಚೊರೋಟೆಯ (ಸಹಸ್ರಪದಿ) ಕಾಲುಗಳ ಸಂಖ್ಯೆ ಹಾಗೂ ಜಗಳ ಕಾಯದೆ ಸರಿಯುವ ಆ ಕಾಲ್ಗಳ ಚಂದದಲ್ಲಿ, ಮೀಸೆಗೆ ಮೀಸೆ ತಾಕಿಸೋ ಕೆಂಜಿರುವೆಗಳ ಮಾತುಕತೆಯಲ್ಲಿ ಪ್ರಕೃತಿಗೆ ಕಿಲ ಕಿಲದ ಬೆಡಗು ತುಂಬಿದ ಒನಪು ಕಂಡೀತು...
ಕಾಡು ಕೊರಕಲಿನ ಹಾದಿಯಲಿ ಪ್ರತಿ ಹುಳದ್ದೂ ಒಂದಿಲ್ಲೊಂದು ಸಾರ್ಥಕ ಹಾಡೇ...
ಅಂತಿಪ್ಪಲ್ಲಿ ನನ್ನದಾದರೋ -
ಇದು....ಇಷ್ಟೇ....
ಅದು.......ಅಷ್ಟೇ..... ಅನ್ನುತ್ತಾ,
ಕಾಯುವುದು - ಕಾಯುವುದು ಮತ್ತು ಕಾಯುವುದು......
ಹುಟ್ಟದ ಕನಸಿಗೆ ಹಪಹಪಿಸುತ್ತಾ - ಕಾಣದ ಸಾವಿಗೆ ತಳಮಳಿಸುತ್ತಾ - ಇಷ್ಟೇ ಮತ್ತು ಅಷ್ಟೇಗಳ ನಡುವೆ ಉಸಿರನ್ನು ಇಂಚಿಂಚಾಗಿ ಕೊಳೆ ಹಾಕಿ - ಅಹಮ್ಮಿನ ಕುಣಿಕೆಗೆ ನೇತಾಕಿಕೊಂಡ ತಾಳ ತಪ್ಪಿದ ದೈನೇಸಿ ಬದುಕನ್ನು ಕಾಯುವುದು - ಕಾಯುವುದು ಮತ್ತು ಕಾಯುವುದು......
#ಶವ_ಸಂಸರ್ಗ...
         ___ವಿವರ ಗೊತ್ತಿಲ್ಲದ ಸಾಲುಗಳು...
÷÷×÷÷

ಎದೆಯ ಬಿರಿದ ಗಾಯವೇ -
ಮರೆಯಲಾಗಲೇ ಇಲ್ಲ ನಿನ್ನ....
ನೆನಪು ಮಾಯದ ರೋಗ....
ತೆರೆದಿಟ್ಟರೂ ಬಾಗಿಲು - ಉಸಿರ ಗಂಟು ಹಗುರಾಗದಿರಲು - ಇನ್ನೂ ಸಹಿಸುವುದಾಗದು ಅಂದಾಗ ಕೊನೆಯ ಅಂಕದಲಿ ಸುಮ್ಮನೆ ''ನಿರ್ಲಕ್ಷಿಸಿ ಮುನ್ನಡೆದೆ''...
ಇದೀಗ ನಿನ್ನ ಮರೆವ ಹುಚ್ಚು ಇಳಿದು, ನಿನ್ನ ನೆರಳನೇ ಸಾಗುವಳಿ ಮಾಡಿ ನಗೆಯ ಹೂ ಕಾಳು ಬಿತ್ತಿಕೊಂಡೆ...
ಇಂತಾಗಿ ಈಗ ನನ್ನೊಡನೆ ನಾನಿದ್ದೇನೆ ಮತ್ತು ಇರುತ್ತೇನೆ...
#ನಿರ್ಲಕ್ಷ್ಯವೆಂಬೋ_ಮನೆ_ಮದ್ದು...
ಇನ್ನೀಗ -
ಖುಷಿಯಾಗಿದೀನಿ........
ಖುಷಿಯಾಗಿರ್ತೀನಿ........
ಖುಷಿಯಾಗೇ ಹೋಗ್ತೀನಿ.......
ಅಷ್ಟೇ.....
ಎನ್ನೆದೆಯ ಗೂಡಿಗೆ ಕನ್ನ ಕೊರೆದರೆ ನಿಮಗೂ ಖುಷಿಯೇ ಸಿಗಲಿ.......☺
÷÷×÷÷

................ಆವರಿಸಲಿ ನಿದ್ದೆ ಸಾವಿನಂತೆ ಅಥವಾ ಅದಲಿ ಬದಲಿ........... ನೆನಪುಗಳು ಕಾಡಬಾರದು, ಕನಸುಗಳು ತೀಡಬಾರದು........ ನನಗೆ ನನ್ನದೇ ಲಾಲಿ.........

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ಸುಂದರವಾದ ಸಾಲುಗಳು... ಹೊಸ ವರ್ಷದ ಬರಹ ಬಂತು ಅಂತ ಆತು.. ನಲವತ್ತರೆಡಕ್ಕಿಂತ ಹೆಚ್ಚು ಫೋಸ್ಟ್ ಬರಲಿ ಈ ವರ್ಷ.. ಹೊಸ ವರ್ಷದ ಶುಭಾಶಯಗಳು.

    ReplyDelete