Friday, November 28, 2014

ಗೊಂಚಲು - ಒಂದು ನೂರಾ ಮೂವತ್ತು ಮತ್ತು ಆರು.....

ಹಗಲಿಗೊಂದಷ್ಟು - ಇರುಳಿಗಿನ್ನೊಂದಿಷ್ಟು ನಲ್ನುಡಿಗಳು.....

ಕಣ್ಣ ಮಡಿಲಲ್ಲಿ ಕನಸುಗಳು ಮಾತಾಗೋ ಸವಿ ಹೊತ್ತಲ್ಲವಾ ಇರುಳೆಂದರೆ...
ರೆಪ್ಪೆ ಮುಚ್ಚಿ ನಕ್ಕುಬಿಡಿ...
ಇರುಳಿಗೂ ಬಣ್ಣದ ಮೆರಗು...

ವಸುಧೆಯ ಮಡಿಲ ತುಂಬಾ ದಿನಮಣಿಯ ಮುತ್ತಿನ ಮಾಲೆ - ಅದು ಬೆಳಗು....

ಇರುಳೆಂದರೆ ಈಗ ಸ್ನೇಹವು ಹಾಡುವ ಜೋಗುಳ...

ಹೊಸ ಊರಿನ ಹಾದಿ ಬೀದಿಗಳಲೂ ಅದೇ ಬೆಳಗು - ನನಗಾದರೋ ಇನ್ನಿಲ್ಲದ ಬೆರಗು...

ಬಯಲ ನಡುವಿನ ಹಣತೆ - ಗಾಳಿಯ ಕುಹಕ...
ಇರುಳಿಗೆ ಬೆಳಕಿನ ತವಕ...
ಭರವಸೆಯ ಶುಭರಾತ್ರಿ...

ನಾ ಹೋದಲ್ಲೆಲ್ಲಾ ಬಂದು ಬೆಳಗುತ್ತಾನೆ ಅವನು - ಅದ್ಯಾವ ಪರಿ ಪ್ರೀತಿ ಉರಿಯುತ್ತೋ ಅವನ ಒಡಲಲ್ಲಿ...
ಶುಭದಿನವಲ್ಲದೇ ಇನ್ನೇನು...

ಇರುಳೆಂದರೆ ಈಗ -
ಕಣ್ಣ ರೆಪ್ಪೆಗಳಡಿಯಲ್ಲಿ ಕದ್ದು ಕೂಡಿಟ್ಟುಕೊಂಡ ಕನಸುಗಳೆಲ್ಲಾ ಸೇರಿ ಕಲರ್ ಕಲರ್ ವಾಟ್ ಕಲರ್ ಎಂದು ಆಡುವ ಸಮಯ...

ಬೆಳಗೆಂದರೆ ಭರವಸೆಯ ಹಬ್ಬ...
ಪ್ರತಿ ಕ್ಷಣವೂ ಹಬ್ಬವಾಗಲಿ...
ನಗೆಯ ಸುಗ್ಗಿಯಾಗಲಿ...

ಇರುಳೆಂದರೆ ಈಗ -
ನೆನಪು ಹಾಗೂ ಕನಸುಗಳ ಕರುಳ ಸುವ್ವಾಲಿ...
ಕಣ್ಣ ರೆಪ್ಪೆಗಳಡಿಯಲ್ಲಿ ಜೀಕಲಿ ಒಲವ ಜೋಕಾಲಿ...

ನಗುವಿರಲಿ ನಯನದಲಿ...
ಮುಂಬೆಳಗಿಗದೇ ರಂಗೋಲಿ...

ನೆತ್ತಿ ಸುಡೋ ಸೂರ್ಯನಿಗಿಂತ ಎದೆಯ ಬೆಂಕಿಗೆ ತುಪ್ಪ ಸುರಿಯುವ ಚಂದಿರನೆಡೆಗೆ ಮಹಾ ಕೋಪ – ಜತೆಗೆ ಅಷ್ಟೇ ಪ್ರೀತಿ ಕೂಡ...
ತಾರೆಗಳೊಡನೆ ಸರಸವಾಡ್ತಾನೋ ಇಲ್ಲವೋ ಗೊತ್ತಿಲ್ಲವಾಗಲೀ ಅವುಗಳ ಮಿನುಗಿನ ಗೋಚರೆತೆಯ ಕೊಲ್ಲುವುದಂತೂ ಸತ್ಯ...
ಚಂದಿರ ಸಿಹಿ ನಗೆಯ ಸುರಿಯಲಿ ಇರುಳಿಗೆ...

ಬೆಳಗೆಂದರೆ ಸ್ನೇಹದ ತೊಟ್ಟಿಲ ದಾರಕೆ ಕಟ್ಟಿದ ಗಿಲಕಿಯ ಕಿಣಿ ಕಿಣಿ...
ಬೆಳಗೆಂದರೆ ಅಮ್ಮನೆಡೆಗೆ ಕೈಚಾಚೋ ನಿದ್ದೆಗಣ್ಣಿನ ಕಂದನ ಕಿಲ ಕಿಲ...
ಬೆಳಗೆಂದರೆ ಕಂದನ ತಬ್ಬುವ ಅಮ್ಮನೆದೆಯ ಒಲವಾಮೃತ...
ಬೆಳಗೆಂದರೆ ಪಾರಿಜಾತದ ರಂಗೋಲಿ...

ಚಂದಮಾಮನನ್ನೊಮ್ಮೆ ಮಾತಾಡಿಸಿ, ಬೆಳದಿಂಗಳಲ್ಲೊಂದಿಷ್ಟು ಮೈತೋಯಿಸಿಕೊಂಡು, ಹೊಸತೊಂದು ಕನಸ ಸುರತಕ್ಕೆ ಕರೆದುಕೊಂಡು, ಹಿತವಾದ ಭಾವದಲಿ, ಹೊಸ ಗೆಲುವಿನ ಭರವಸೆಯ ಹೊದ್ದು ಮಲಗು... 
ನಲಿವಿನ ನಾಳೆಯ ಬೆಳಕಿನುತ್ಸವಕೆ ನಾಂದಿಯಾಗುವ ಪ್ರಚ್ಛನ್ನ, ಪ್ರಶಾಂತ ಇರುಳು ನಿನ್ನ ತಬ್ಬಲಿ... 
ಶುಭರಾತ್ರಿ...

ಇರುಳ ಕಣ್ಣಿಂದ ಜಾರಿದ ಹನಿಗಳನು ಶೇಷವೂ ಉಳಿಯದಂತೆ ಹೀರಿ ನಗು ಚೆಲ್ಲುತಾನೆ ದಿನಕರ... 
ಬೆಳಗಾಯಿತು... 
ಬೆಳಗೆಂದರೆ ಕಣ್ಣಹನಿಗಳ ಅವಸಾನ... 
ಶುಭದಿನ...

Friday, November 21, 2014

ಗೊಂಚಲು - ಒಂದು ನೂರಾ ಮೂವತ್ತು ಮತ್ತು ಐದು.....

ಆಗೀಗ ಅಲ್ಲಲ್ಲಿ ಅರ್ಧಂಬರ್ಧ ಗೀಚಿಟ್ಟ ಸಾಲುಗಳು.....
(ಬದುಕಿದು ಎಂದಿಗೂ ಪೂರ್ಣವಾಗದು ಬಿಡಿ...)

ಗೆಳತೀ -
ಮನಸಿದು ಕಳೆದು ಹೋದರೆ ಇಂದಲ್ಲ ನಾಳೆ ಸೆರೆಸಿಕ್ಕೀತು - ನಿನ್ನಂತ ಒಳಗಣ್ಣು ತೆರಕೊಂಡು ಹುಡುಕೋ ಜೀವಗಳಿಗೆ...
ಕಲ್ಲಾಗಿ ಹೋದರೆ...?
ಶಿಲ್ಪವಾಗಿಸಿಕೊಳ್ತೀಯಾ...?
***
ನೀ ಇರುವಾಗ ಮನದಲ್ಲಿ - ಕನಸೆಲ್ಲವೂ ಸಿಹಿಯೇ ಕಣ್ಣಲ್ಲಿ...
ಮನದ ಕದವ ತೆರೆದಿಟ್ಟು ಮಲಗು ನನ್ನ ನೆನಪ ಗುಂಗಲ್ಲಿ - ಕನಸಾಗಿ ಹೋಗೋ ಮುನ್ನ ಬಂದೇನೊಮ್ಮೆ ನಿನ್ನ ಕನಸಲ್ಲಿ...
***
ನನ್ನದು ಅನುಶಾಸನದ ಹಾದಿ - ಶಿಸ್ತು, ಶಿಕ್ಷೆ ಎರಡೂ ಗೊತ್ತಿಲ್ಲ...
ಬದುಕಿದು ಮಹಾಗುರು - ಜತೆಯಾದವರು ಸಹಪಾಠಿಗಳು...
ಸಹಪಾಠಿಗಳೂ ಗುರುಗಳಾಗಿ ದಾರಿಗೆ ಕೈದೀಪವಾಗಿದ್ದಾರೆ...
ಮಹಾಗುರುವಿಗೂ - ಜತೆ ನಡೆಯುತ್ತಾ ಪಾಠ ಕಲಿಸಿದ ಜೀವಗಳಿಗೂ ಋಣದ ಸಾಸ್ಟಾಂಗ...
***
ಬಾಗಿಲು ಮುಚ್ಚಿಟ್ಟು ಕೂತರೆ ಒಳಮನೆಯ ಮಬ್ಬು ಬೆಳಕಷ್ಟೇ ನಿನ್ನದು...
ತೆರದೊಮ್ಮೆ ನೋಡು ಬಯಲ ಬೆಳಕೆಲ್ಲ ನಿನ್ನ ಕಣ್ಣಲ್ಲೇ...
ಕಣ್ಮುಚ್ಚಿ ಕೂತವಗೆ ನಿಗಿ ನಿಗಿ ಬೆಳಕಲ್ಲೂ ದಾರಿ ಅಗೋಚರ...
ಮನದ ಕಣ್ಣ ತೆರೆದು ಹೊರಟವಗೆ ಕಾರಿರುಳ ಬಾನ ಬೆಳಕಲ್ಲೇ ಗಮ್ಯವದು ಸ್ಪಷ್ಟ ಗೋಚರ...
***
ಅಂತರಂಗವಿದು ಹರೆಯ ಉಕ್ಕುವ ಆಸೆಗಳೆಂಬ ತಾರೆಗಳಾಡುವ ವಿಶಾಲ ಬಯಲು...
ಅಂತರಾತ್ಮನ ಅರೆ ಘಳಿಗೆಯ ನಗುವಿಗಾಗಿ ಉಸಿರನೇ ಅಡವಿಟ್ಟು ನಡೆದೇನು ಆ ತೀರದೆಡೆಗೆ.....
***
ನೆನಪುಗಳು ಕೂಡಾ ನಮ್ಮದೇ ಆಯ್ಕೆ ಅಲ್ಲವಾ..?
ಮರೆತು ಮುನ್ನಡೆಯಬೇಕಾದದ್ದನ್ನು ಮತ್ತೆ ಮತ್ತೆ ನೆನೆಸಿಕೊಂಡು ಕೊರಗುತ್ತೇವೆ, ಅಲ್ಲಲ್ಲೇ ಹೊರಳಾಡುತ್ತಾ ಕೊಳೆಯುತ್ತೇವೆ...
ಮರೆಯಬಾರದ್ದನ್ನು ಎಲ್ಲಿ ಕಳೆದುಕೊಂಡೆವೆಂಬುದೂ ನೆನಪಾಗುವುದಿಲ್ಲ...
***
ಎಲ್ಲೆಂಲ್ಲಿಂದಲೋ ನನ್ನೆಡೆಗೆ ನಲಿದು ಬರುವ ವಿನಾಕಾರಣದ ಪ್ರೀತಿಯ ಸನ್ನಿಧಿಯಲ್ಲಿ ಈ ಮನಸೆಂಬುದು ಸದ್ದಿಲ್ಲದೇ ಖುಷಿಯ ಚೈತನ್ಯ ತುಂಬಿಕೊಂಡು ಅರಳುತ್ತದೆ - ಅಂಥ ಸ್ನೇಹಾನುಬಂಧಗಳ ಹೆಜ್ಜೆ ಗುರುತೇ ನನ್ನೀ ಮನದ ಮನೆಯ ಶ್ರೀಮಂತ ಶೃಂಗಾರ...
ಋಣದ ನಮನಗಳು ನಿನಗೆ ಓ ಸ್ನೇಹವೇ...
***
ಹಸಿದ ಎದೆಯ ಬೀದಿಯಲಿ ತೆವಳುವ ಕಾಲಿಲ್ಲದ ಕನಸುಗಳ ಹೆಗಲ ಮೇಲೆ  ಕೂತು ಘರ್ಜಿಸುವ ಹೆಣಭಾರದ ನೆನಪುಗಳು... 
ಇಳಿಸುವ ಪರಿಯೆಂತೋ ಅರಿವಿಲ್ಲ ... 
ಕಾರಣ - ಕನಸೆಂದರೆ ನಾಳೆ; ಈಗಿನ್ನೂ ನೆಲೆ ಕಂಡುಕೊಂಡಿರದ ಮತ್ತು ನೆಲೆಯೂರೀತೆಂಬ ಸ್ಪಸ್ಟತೆಯಿಲ್ಲದ ಜಂಗಮ ಭಾವ...
ನೆನಪಾದರೋ ನಿನ್ನೆಯ ಅನುಭವಗಳ ಸಾಕ್ಷಿಯ ಹರವಿಟ್ಟುಕೊಂಡು ವಾದಕ್ಕೆ ಕೂರೋ ಜಿದ್ದಿನ ವಕೀಲ...
***
ಕಾಡು ಕರೆಯುತಿದೆ...
ನೆನಪುಗಳ ಹೊರೆಯ ಭಾರ ಹೊತ್ತ ಭುಜದ ಹುಣ್ಣಿಗೆ ಕನಸುಗಳ ಉಪ್ಪು ಖಾರ - ಕಣ್ಣಲ್ಲಿ ಯಾತನೆಯ ಗಡ್ಡೆ...
ಕಳೆದು ಹೋಗಬೇಕು ಯಾರ ಕೈಗೂ ಸಿಗದ ಹಾಗೆ, ಕೊನೆಗೆ ನನ್ನ ಕೈಗೂ ನಾ ಸಿಗದಂತೆ, 
ಆ ಕತ್ತಲಲ್ಲಿ ಹೊರೆಯಿಳಿಸಿ, ಗಡ್ಡೆ ಕರಗಿಸಿ ಹೊಸದಾಗಿ ಹುಟ್ಟಬೇಕೆಂಬ ಆಸೆಗೆ - ಕಾಡು ಸೆಳೆಯುತಿದೆ...
***
ಮಾತಿನ ಆಂತರ್ಯದ ಶಕ್ತಿಯಾಗಿ, ಮಾತೆಂಬೋ ಮಾತಿನ ಚಿತ್ರಕೆ ಬಣ್ಣ ತುಂಬಲಾರದ ಮೌನದೆದೆಯಲಿ  ಸದಾ ನಿಜ ನಗುವಿನ ಸೂತಕದ ನಿಟ್ಟುಸಿರು...
***
ಅಂಗಳದಲಿ ನೆನಪುಗಳ ಜಾತ್ರೆ - ಒಳ ಮನೇಲಿ ಕನಸುಗಳ ಸ್ಮಶಾನ ಮೌನ...
ಹೆಬ್ಬಾಗಿಲಲಿ ಎಣ್ಣೆ ಬತ್ತಿದಮೇಲೂ ನಂದದಿರಲು ಹೆಣಗುತಿರೋ ಭರವಸೆಯ ಪುಟ್ಟ ಪ್ರಣತಿ - ಅದು ಆರಿದ ಕ್ಷಣ ಮನದ ಮುಸ್ಸಂಜೆಯ ಸಾವು...
***
ಮನಸು ಮತ್ತು ಪ್ರಜ್ಞೆಯ ನಡುವಿನ ನಿತ್ಯ ಗುದ್ದಾಟದಲ್ಲಿ ನೆನಪುಗಳು ಹಾಗೂ ವಾಸ್ತವದ ಬೆಂಬಲ ದಕ್ಕಿದ ಪ್ರಜ್ಞೆಯೇ ಸದಾ ಗೆಲ್ಲುವುದು ಈ ಬದುಕಿನ ದುರಂತ ಅನ್ನಿಸುತ್ತೆ...
ಸೋತು ಬರಡಾದ ಮನದ ನೆಲದಲ್ಲಿ ಕನಸುಗಳ ಬೆಳೆ ಬೆಳೆದೀತು ಹೇಗೆ...
ಆಗೀಗ ಅಷ್ಟಿಷ್ಟು ಭಾವಗಳ ಮಳೆಯಾದರೂ ಅಲ್ಲಿ ಬಿತ್ತಿದ ಕನಸ ಬೀಜದಿಂದ ಫಲದ ನಿರೀಕ್ಷೆ ಹುಸಿಯೇ...
ಕನಸುಗಳ ಬೆಂಬಲ ಅಥವಾ ಕನಸಿಗಾಗಿನ ಬಡಿದಾಟ ಇಲ್ಲದ ಸಾವೂ ಹೀನಾಯವೇ ಅನ್ನಿಸುತ್ತೆ ಈಗೀಗ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

Wednesday, November 19, 2014

ಗೊಂಚಲು - ಒಂದು ನೂರಾ ಮೂವತ್ನಾಕು.....

ನೀನೆಂದರೆ.....

ನೀನೆಂದರೆ ಮಾತು ಮಾತಿನ ನಡುವೆಯ ನಿರ್ವಾತದಲಿ ಗುಣುಗುಣಿಸೋ ಎದೆಯ ಹಾಡು...

ನೀನೆಂದರೆ ನಿತ್ಯ ಉರಿದೂ ಖಾಲಿಯಾಗದ ದಿನಮಣಿಯ ಭೂರಮೆಯೆಡೆಗಿನ ಮತ್ತು ಕ್ಷಣ ಕ್ಷಣವೂ ಬೆಂದೂ ಬಾಡದ ಭೂತಾಯಮ್ಮನ ರವಿಯೆಡೆಗಿನ ಒಡಲಾಳದ ಪ್ರೀತಿ...

ನೀನೆಂದರೆ ಋಣ ತೀರಿದ ಮೇಲೂ ಶಂಖದ ಎದೆಗೂಡಲಿ ಸುಪ್ತವಾಗಿ ಮೊಳಗುತಲೇ ಉಳಿದ ಸಾಗರದ ಮೊರೆತದನುರಣನ...

ನೀನೆಂದರೆ ಹೂವ ಅಂದ, ಗಂಧದಲಿ ಮತ್ತು ಹಣ್ಣ ರುಚಿಯಲ್ಲಿ ನಗುವ ಅಲ್ಲೆಲ್ಲೋ ಭೂಗರ್ಭದಲಿ ಅವಿತು ಕೂತ ನಿಸ್ವಾರ್ಥಿ ಬೇರು...

ನೀನೆಂದರೆ ಅಮ್ಮನ ಭಯ ತುಂಬಿದ ಮುನಿಸು, ಅಜ್ಜಿಯ ಕಥೆಗಳಲ್ಲಿನ ಸುಳ್ಳು ಮತ್ತು ಅಜ್ಜನ ಊರುಗೋಲಿನ ಪೆಟ್ಟು ಇವೆಲ್ಲವುಗಳಲೂ ಹಾಸುಹೊಕ್ಕಾಗಿರೋ ನನ್ನ ಹಿತ...

ನೀನೆಂದರೆ ಇರುಳ ಏಕಾಂತ ಸಾಂಗತ್ಯದಲಿ ತಪ್ಪದೇ ಕೆರಳುವ ನನ್ನ ವ್ಯಭಿಚಾರೀ ಮನಸಿನ ತೊಡೆ ನಡುವಿನ ಮೃಗೋನ್ಮಾದದಲೂ ಒಳ್ಳೆಯತನವನೇ ಹುಡುಕಲೆಳಸುವ ಹುಚ್ಚು ಪ್ರೇಮ...

ನೀನೆಂದರೆ ಅರಿವಿಗೆ ದಕ್ಕಿದರೆ ತಪ್ಪು ಒಪ್ಪುಗಳ ಹಂಗನೆಲ್ಲ ಮೀರಿ ಬದುಕಿಗೆ ಅರ್ಥ ತುಂಬುವ ಎದೆಗೂಡನೆ ತಬ್ಬಿ ಕೂತ ಸಾವು...

ಮತ್ತು

ನೀನೆಂದರೆ ನನ್ನಂಥ ನನ್ನಲೂ ಅಷ್ಟಿಷ್ಟು ಮನುಷ್ಯ ಭಾವಗಳ ಉಗಮಕ್ಕೆ ಕಾರಣವಾದ ಆತ್ಮ ಸಾಂಗತ್ಯದ ಸವಿ ಸ್ನೇಹ...